ಸತ್ಸಂಗ 1 : ಸಾಧನೆಯ ಸಿದ್ಧಾಂತ ಮತ್ತು ಸಾಧನೆಯ ತತ್ತ್ವಗಳು

ಇಷ್ಟರ ವರೆಗೆ ಆಗಿರುವ 3 ಪ್ರವಚನಗಳಲ್ಲಿ ನಾವು ಅಧ್ಯಾತ್ಮದ ಮಹತ್ವ, ಕುಲದೇವತೆ ಮತ್ತು ದತ್ತಗುರುಗಳ ನಾಮಜಪದ ಮಹತ್ವ, ಕರ್ಮಫಲಸಿದ್ಧಾಂತ, ನಾಮಜಪದಿಂದಾಗುವ ವಿವಿಧ ಲಾಭ ಹಾಗೂ ನಾಮಜಪ ಹೇಗೆ ಕಾರ್ಯ ಮಾಡುತ್ತದೆ ಎಂಬ ವಿಷಯಗಳನ್ನು ತಿಳಿದುಕೊಂಡೆವು. ಇಂದಿನ ಸತ್ಸಂಗದಲ್ಲಿ ನಾವು ಸಾಧನೆಯ ಸಿದ್ಧಾಂತ ಹಾಗೂ ಮಟ್ಟಾನುಸಾರ ಸಾಧನೆಯನ್ನು ತಿಳಿದುಕೊಳ್ಳೋಣ.

ಅ. ಸಾಧನೆಯ ಸಿದ್ಧಾಂತ

ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನಾ ಮಾರ್ಗಗಳು

ಸಾಧನೆಯ ಮಹತ್ವದ ಸಿದ್ಧಾಂತವೆಂದರೆ, ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನೆಯ ಮಾರ್ಗಗಳು! ಜ್ಞಾನಯೋಗ, ಕರ್ಮಯೋಗ, ಧ್ಯಾನಯೋಗ, ಭಕ್ತಿಯೋಗ ಹೀಗೆ ಸಾಧನೆಗಾಗಿ ಅನೇಕ ಯೋಗಮಾರ್ಗಗಳಿವೆ. ಪ್ರತಿಯೊಬ್ಬರ ಪ್ರಕೃತಿಗನುಸಾರ (ಸ್ವಭಾವ) ಅವನ ಮೋಕ್ಷಪ್ರಾಪ್ತಿಯ ಮಾರ್ಗ ಸಹ ಬೇರೆಯಾಗಿರುತ್ತದೆ. ಇಂತಹ ಸಮಯದಲ್ಲಿ ಎಲ್ಲರೂ ಒಂದೇ ರೀತಿಯ ಅಥವಾ ಒಂದೇ ಮಾರ್ಗದಿಂದ ಉಪಾಸನೆ ಮಾಡುವ ಆಗ್ರಹವು ಅಯೋಗ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿದರೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

ಒಂದೇ ಕುಟುಂಬದಲ್ಲಿ ಸಹ ಎಲ್ಲರೂ ಬೇರೆಬೇರೆ ಪ್ರಕೃತಿಯವರು ಅಂದರೆ ಬೇರೆ ಬೇರೆ ಮಾರ್ಗಗಳಿಂದ ಸಾಧನೆಯನ್ನು ಮಾಡುವವರಿರಬಹುದು. ಉದಾಹರಣೆಗಾಗಿ ನನಗೆ ದೇವರ ಮೇಲೆ ಬಹಳ ಶ್ರದ್ಧೆಯಿದೆ ಮತ್ತು ನನಗೆ ಭಗವಂತನ ಬಗ್ಗೆ ಅಪಾರ ಸೆಳೆತವಿದೆ ಎಂದಾದರೆ ನಾನು ಭಕ್ತಿಮಾರ್ಗಿಯಾಗಿದ್ದೇನೆ. ನನ್ನ ತಂದೆಯವರು ಭಗವದ್ಗೀತೆಯ ಅಧ್ಯಯನ ಮಾಡಿದ್ದಾರೆ. ಅವರಿಗೆ ಧಾರ್ಮಿಕ ಗ್ರಂಥಗಳ ವಾಚನದ ಮತ್ತು ಚಿಂತನ-ಮನನ ಮಾಡುವ ಆಸಕ್ತಿಯಿದೆ ಅಂದರೆ ಅವರು ಜ್ಞಾನಮಾರ್ಗಿಯಾಗಿದ್ದಾರೆ. ನನ್ನ ಪತಿ / ಪತ್ನಿಗೆ ಸಹಜವಾಗಿ ಧ್ಯಾನ ತಗಲುತ್ತದೆ ಅಂದರೆ ಅವರು ಧ್ಯಾನಮಾರ್ಗಿಗಳಾದರು. ಅಂದರೆ ಪ್ರತಿಯೊಬ್ಬನ ಪ್ರಕೃತಿ ಮತ್ತು ಸಾಧನಾಮಾರ್ಗವು ಬೇರೆಯಾಗಿದೆ. ಇಂತಹ ಸಂದರ್ಭದಲ್ಲಿ ನಾನು ‘ಜ್ಞಾನಮಾರ್ಗವನ್ನು ಅನುಸರಿಸುವ ತಂದೆಯವರನ್ನು ನೀವು ‘ಫೀಲ್ಡ್’ (ಕ್ಷೇತ್ರಕ್ಕಿಳಿದು) ಅಂದರೆ ಪ್ರತ್ಯಕ್ಷ ರಸ್ತೆಗಿಳಿದು ಹಿಂದುತ್ವದ ಕಾರ್ಯವನ್ನು ಮಾಡಿರಿ’ ಎಂದು ಹೇಳಿದರೆ ಅವರಿಗೆ ಅದನ್ನು ಮಾಡಲು ಸಾಧ್ಯವಿದೆಯೇ? ಅಥವಾ ಕರ್ಮಮಾರ್ಗದ ಮಗನಿಗೆ ನೀನು ಪ್ರತಿದಿನ ಧ್ಯಾನ ಮಾಡು ಎಂದು ಹೇಳಿದರೆ ಅದು ಅವನಿಂದ ಸಾಧ್ಯವಾದೀತೇ ? ಆದರೆ ಪ್ರತಿಯೊಬ್ಬರೂ ತನ್ನ ಪ್ರಕೃತಿಯಂತೆ ಸಾಧನೆಯನ್ನು ಮಾಡಿದರೆ ಅವರ ಸಾಧನೆಯು ಮನಃಪೂರ್ವಕವಾಗಿ ಆಗುವುದು; ಆದ್ದರಿಂದ ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟು ಸಾಧನಾಮರ್ಗಗಳು ಎಂದು ಹೇಳಲಾಗಿದೆ.

ಪ್ರತಿಯೊಬ್ಬರ ಮಾರ್ಗವು ಬೇರೆಯಾಗಿದ್ದರೂ ಪ್ರಕೃತಿಗನುಗುಣವಾಗಿರುವ ಸಾಧನಾ ಮಾರ್ಗದ ಜೊತೆಯಲ್ಲಿಯೇ ಎಲ್ಲಾ ಸಾಧನಾ ಮಾರ್ಗಗಳಲ್ಲಿರುವ ಸರ್ವಸಮಾವೇಶಕ (ಎಲ್ಲವನ್ನೂ ಒಳಗೊಂಡಿರುವ) ಯೋಗ್ಯ ಸಾಧನೆಯನ್ನು ಮಾಡಿದರೆ ಶೀಘ್ರಗತಿಯಲ್ಲಿ ಆಧ್ಯಾತ್ಮಿಕ ಉನ್ನತಿ ಆಗುವುದು. ಅಂತೆಯೇ ಯಾವ ಮಾರ್ಗದಿಂದ ಸಾಧನೆ ಮಾಡಿದರೂ ಗುರುಕೃಪೆಯಿದ್ದರೆ ಮಾತ್ರ ಉನ್ನತಿಯಾಗುತ್ತದೆ. ಅದಕ್ಕಾಗಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ಕೊಡುವ ಸರ್ವಸಮಾವೇಶಕ ಗುರುಕೃಪಾಯೋಗವನ್ನು ಹೇಳಿದ್ದಾರೆ. ಗುರುಕೃಪಾಯೋಗ ಎಂಬುದು ಸಾಂಪ್ರದಾಯಿಕ ಪದವಲ್ಲ. ಅಧ್ಯಾತ್ಮದಲ್ಲಿ ಪ್ರಗತಿ ಹೊಂದಬೇಕಾದರೆ ಗುರುಕೃಪೆಯೇ ಆಗಬೇಕು. ‘ಗುರುಕೃಪಾ’ ಎಂಬ ಪದವು ಈ ದೃಷ್ಟಿಯಿಂದ ಅನ್ವಯಿಸುತ್ತದೆ. ಗುರುಕೃಪಾಯೋಗದಲ್ಲಿ ಜ್ಞಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಇವುಗಳ ಸೊಗಸಾದ ಸಂಗಮವಿದೆ.

‘ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟು ಸಾಧನಾ ಮಾರ್ಗಗಳು’ ಎಂಬ ಸಿದ್ಧಾಂತವನ್ನು ತಿಳಿದುಕೊಂಡ ನಂತರ ಈಗ ನಾವು ಗುರುಕೃಪಾಯೋಗದ ಪ್ರಮುಖ ತತ್ತ್ವಗಳು ಯಾವುವು, ಪ್ರತ್ಯಕ್ಷ ಸಾಧನೆಯನ್ನು ಪ್ರಾರಂಭಿಸುವಾಗ ಯಾವ ಸಂಗತಿಗಳನ್ನು ಗಮನಿಸಬೇಕು ಎಂದು ತಿಳಿದುಕೊಳ್ಳೋಣ. ಹೆಚ್ಚಿನ ಜನರಿಗೆ ಸಾಧನೆಯ ತತ್ತ್ವಗಳು ತಿಳಿದಿಲ್ಲ. ಹಾಗಾಗಿ ಅಯೋಗ್ಯ ಸಾಧನೆಯನ್ನು ಮಾಡುವುದರಲ್ಲಿ ಜೀವನದ ಸಮಯವು ವ್ಯರ್ಥವಾಗುವ ಸಾಧ್ಯತೆಯಿರುತ್ತದೆ. ಸಾಧನೆಯನ್ನು ಮಾಡಿ ಅವರಿಗೆ ತಮ್ಮಲ್ಲಿ ನಿರೀಕ್ಷಿತ ಪರಿವರ್ತನೆ ಕಂಡುಬರದ ಕಾರಣ ಅವರು ಸಾಧನೆಯನ್ನು ಮಧ್ಯದಲ್ಲಿಯೇ ಬಿಟ್ಟು ಬಿಡುವ ಸಾಧ್ಯತೆಯೂ ಇರುತ್ತದೆ. ‘ನಾನು ದೇವರದ್ದು ಇಷ್ಟೊಂದು ಮಾಡಿದೆ, ಆದರೂ ಇಂತಹ ಒಂದು ಪ್ರಸಂಗ ನನ್ನ ಜೀವನದಲ್ಲಿ ಏಕೆ ಘಟಿಸಿತು?’ ಎಂಬಂತಹ ಅಯೋಗ್ಯ ವಿಚಾರಪ್ರಕಿಯೆ ನಡೆಯುವ ಅಪಾಯವೂ ಇರುತ್ತದೆ. ಹೀಗಾಗಬಾರದೆಂದು ನಾವು ಸಾಧನೆಯ ಕೆಲವು ಮೂಲಭೂತ ಮಾರ್ಗದರ್ಶಕ ತತ್ತ್ವಗಳನ್ನು ತಿಳಿದುಕೊಳ್ಳುವುದು ಆವಶ್ಯಕವಿದೆ.

ಸಾಧನೆಯ ತತ್ತ್ವಗಳು

ಮಟ್ಟಾನುಸಾರ ಸಾಧನೆ

ಸಾಧನೆಯ ಒಂದು ಮಹತ್ವದ ತತ್ತ್ವವೆಂದರೆ ಮಟ್ಟಾನುಸಾರ ಸಾಧನೆ. ಮಟ್ಟವೆಂದರೇನು, ಅದು ಅಧಿಕಾರ! ಅಧಿಕಾರ ಎಂಬ ಶಬ್ದ ಇಲ್ಲಿ ವ್ಯಾವಹಾರಿಕವಲ್ಲ, ಅದನ್ನು ಆಧ್ಯಾತ್ಮಿಕ ಅರ್ಥದಲ್ಲಿ ಗಮನಿಸಬೇಕು. ಸಂತ ತುಕಾರಾಮ ಮಹಾರಾಜರು ಹೇಳಿದ್ದಾರೆ, ‘ಅಧಿಕಾರಕ್ಕನುಸಾರವೇ ಉಪದೇಶ ನೀಡೋಣ’. ಸಾಧನೆ ಮಾಡುವಾಗ ಇದರ ಅರ್ಥವೆಂದರೆ, ನಮ್ಮ ಕ್ಷಮತೆ ಇರುವಷ್ಟೆ ಸಾಧನೆ ಮಾಡಲು ಪ್ರಯತ್ನಿಸಿದರೆ ಮಾತ್ರ ನಮ್ಮ ಪ್ರಗತಿಯಾಗುತ್ತದೆ. ಕ್ಷಮತೆ ಮೀರಿ ಯಾವುದನ್ನೂ ಮಾಡಬಾರದು. ಉದಾಹರಣೆಗೆ ಬ್ರಾಹ್ಮಮುಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ ಸಾಧನೆ ಮಾಡಿದರೆ ಹೆಚ್ಚು ಫಲ ಸಿಗುತ್ತದೆ, ಎಂದು ಹೇಳಲಾಗಿದೆ; ಆದರೆ ಇಂದಿನ ಜೀವನಶೈಲಿಯಲ್ಲಿ ಹಾಗೆ ಮಾಡಲು ನಮಗೆ ಸಾಧ್ಯವಾಗಲಿಕ್ಕಿಲ್ಲ, ಆದರೆ ಪ್ರಯತ್ನ ಮಾಡಬಹುದು. ಈಶ್ವರಪ್ರಾಪ್ತಿಗಾಗಿ ಸರ್ವಸ್ವವನ್ನೂ ತನು, ಮನ, ಹಾಗೂ ಧನವನ್ನು ಸಂಪೂರ್ಣ ತ್ಯಾಗ ಮಾಡಬೇಕಾಗುತ್ತದೆ; ಆದರೆ ಈಗ ಇರುವ ಹಂತದಲ್ಲಿ ಅದು ನಮಗೆ ಕಠಿಣವೆನಿಸಬಹುದು; ಆದ್ದರಿಂದ ನಾವು ನಮ್ಮ ಕ್ಷಮತೆಗನುಸಾರ ತ್ಯಾಗ ಮಾಡಲು ಪ್ರಯತ್ನಿಸಬೇಕು. ಸಂತರ ಆಶ್ರಮದಲ್ಲಿ ಹೋಗಿ ಶಾರೀರಿಕ ಸೇವೆ ಮಾಡುವುದು, ಇತರರಿಗಾಗಿ ದೇಹವನ್ನು ಸವೆಸುವುದು, ಇದಾಯಿತು ತನುವಿನ ತ್ಯಾಗ, ರಾಷ್ಟ್ರ ಹಾಗೂ ಧರ್ಮಕ್ಕಾಗಿ ಕಾರ್ಯ ಮಾಡುವ ಸಂಘಟನೆಗಳಿಗೆ ನಿಯಮಿತ ಧನ ಅರ್ಪಣೆ ಮಾಡುವುದು, ಇದು ಧನದ ತ್ಯಾಗವಾಯಿತು. ಪದಾರ್ಥಗಳ ಬೇಕು-ಬೇಡ, ಸಣ್ಣ ಪುಟ್ಟ ಆಸೆ-ಆಸಕ್ತಿಗಳ ತ್ಯಾಗ ಮಾಡುವುದು, ನಮ್ಮ ಆವಶ್ಯಕತೆಗಳನ್ನು ಕಡಿಮೆ ಮಾಡುವುದು, ನಮ್ಮ ಆಗ್ರಹವನ್ನು ಬದಿಗಿಟ್ಟು ಇತರರ ಅಭಿಪ್ರಾಯಕ್ಕನುಸಾರ ವರ್ತಿಸಲು ಪ್ರಯತ್ನ ಮಾಡುವುದು, ಹೆಚ್ಚೆಚ್ಚು ನಾಮಸ್ಮರಣೆ ಮಾಡುವುದೆಂದರೆ ಇದು ಮನಸ್ಸಿನ ತ್ಯಾಗವಾಯಿತು. ಈ ರೀತಿ ನಿಯಮಿತ ಪ್ರಯತ್ನವನ್ನು ಹೆಚ್ಚಿಸುತ್ತಾ ಹೋಗುವುದೆಂದರೆ ಮಟ್ಟಾನುಸಾರ ಸಾಧನೆ ಮಾಡಿದಂತಾಗುವುದು. ಸಾಧನೆ ಮಾಡಿ ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾದಂತೆ ನಮಗೆ ಭಗವಂತನ ಅಪೇಕ್ಷೆಯಂತೆ ವರ್ತಿಸಲು ಸಾಧ್ಯವಾಗ ಬಹುದು.

ಅಧ್ಯಾತ್ಮದ ಪರಿಭಾಷೆಯಲ್ಲಿ ಹೇಳುವುದಾದರೆ, ಮೋಕ್ಷವೆಂದರೆ ಶೇ. ೧೦೦ ಆಧ್ಯಾತ್ಮಿಕ ಮಟ್ಟ, ಕಲ್ಲು, ಮಣ್ಣು ಇತ್ಯಾದಿ ನಿರ್ಜೀವ ವಸ್ತುಗಳ ಮಟ್ಟ ೦ ಆಗಿರುತ್ತದೆ. ಕಲಿಯುಗದಲ್ಲಿ ಸಾಮಾನ್ಯ ವ್ಯಕ್ತಿಯ ಮಟ್ಟ ಶೇ. ೨೦ ಇರುತ್ತದೆ. ಸಾಧನಾ ಮಾರ್ಗಕ್ಕನುಸಾರ ಆಧ್ಯಾತ್ಮಿಕ ಮಟ್ಟ ಎಷ್ಟಿರುತ್ತದೆ, ಎಂಬುದರ ಕೆಲವು ಹೋಲಿಕೆ ಇರುತ್ತದೆ.

ಶೇ. 20 ಆಧ್ಯಾತ್ಮಿಕ ಮಟ್ಟದ ವ್ಯಕ್ತಿ ಏನೂ ಸಾಧನೆ ಮಾಡುವುದಿಲ್ಲ. ಇಂತಹ ವ್ಯಕ್ತಿಗೆ ಆಧ್ಯಾತ್ಮದೊಂದಿಗೆ ಏನೂ ಸಂಬಂಧವಿರುವುದಿಲ್ಲ. ಇಂತಹ ವ್ಯಕ್ತಿಗಳಲ್ಲಿ ಈಶ್ವರಪ್ರಾಪ್ತಿಯ ವಿಚಾರವೂ ಬರುವುದಿಲ್ಲ. ಜಗಳ, ಭ್ರಷ್ಟಾಚಾರ ಅಥವಾ ಮನೋರಂಜನೆ ಮಾಡುವುದರಲ್ಲಿ ಇಂತಹವರ ಜೀವನ ಕಳೆದುಹೋಗುತ್ತದೆ.

ಸಾಮಾನ್ಯವಾಗಿ ಶೇ. 25 ರ ಮಟ್ಟದ ವ್ಯಕ್ತಿ ಅಲ್ಪಸ್ವಲ್ಪ ಆಸ್ತಿಕನಾಗಿರುತ್ತಾನೆ.

ಶೇ. 30 ಆಧ್ಯಾತ್ಮಿಕ ಮಟ್ಟದ ವ್ಯಕ್ತಿ ಪೂಜೆ ಮಾಡುವುದು, ದೇವಸ್ಥಾನಕ್ಕೆ ಹೋಗುವುದು, ಗ್ರಂಥಗಳ ವಾಚನ, ಉಪವಾಸ ಮಾಡುವುದು, ಇತ್ಯಾದಿ ಸಾಧನೆ ಮಾಡುತ್ತಾನೆ. ಅವನಿಗೆ ಕರ್ಮಕಾಂಡದ ಆಸಕ್ತಿ ಇರುತ್ತದೆ. ಇದಕ್ಕಿಂತ ಮುಂದಿನ ಮಟ್ಟವೆಂದರೆ ಉಪಾಸನಾಕಾಂಡದ ಸಾಧನೆ, ಅಂದರೆ ನಾಮಸ್ಮರಣೆಯ ಸಾಧನೆಯಾಗಿದೆ.

ನಾಮಜಪ ಮಾಡುವ ವ್ಯಕ್ತಿಯ ಮಟ್ಟ ಸುಮಾರು ಶೇ. 40 ಇರುತ್ತದೆ. ಇಂತಹ ವ್ಯಕ್ತಿಗೆ ಗ್ರಂಥಗಳ ಅಧ್ಯಯನ, ಉಪವಾಸ ಮಾಡುವುದಕ್ಕಿಂತ ನಾಮಸ್ಮರಣೆ ಮಾಡುವುದರಲ್ಲಿ ಹೆಚ್ಚು ಆನಂದ ಸಿಗುತ್ತದೆ. ಪ್ರತಿಯೊಂದು ಕೃತಿ ಮಾಡುವಾಗ ನಾಮಸ್ಮರಣೆಗಾಗಿ ಸತತ ಕೆಲವು ತಿಂಗಳು ಪ್ರಯತ್ನಿಸಿದರೆ ನಾಮಸ್ಮರಣೆ ತನ್ನಿಂತಾನೇ ಆಗಲು ಪ್ರಾರಂಭವಾಗುತ್ತದೆ. ಮುಂದೆ ನಿದ್ರೆಯಲ್ಲಿಯೂ ನಾಮಸ್ಮರಣೆ ಆಗುತ್ತಿರುವುದರ ಅರಿವಾಗುತ್ತದೆ.

ಹೀಗೆ ನಿರಂತರ ಪ್ರಯತ್ನ ಮಾಡಿದರೆ ಶೇ. 50 ರ ಮಟ್ಟ ಅಂದರೆ ಸತ್ಸಂಗದ ಮಟ್ಟವನ್ನು ತಲಪಲು ಸಾಧ್ಯವಾಗುತ್ತದೆ. ಸತ್ಸಂಗವೆಂದರೇನು, ಸತ್‌ನ ಸಂಗ! ಸತ್ ಅಂದರೆ ಈಶ್ವರ ಮತ್ತು ಸಂಗವೆಂದರೆ ಸಹವಾಸ. ಎಲ್ಲಿ ಧರ್ಮ, ಈಶ್ವರಪ್ರಾಪ್ತಿಗಾಗಿ ಮಾಡುವ ಪ್ರಯತ್ನ, ಅಧ್ಯಾತ್ಮ, ಮುಂತಾದ ವಿಷಯಗಳ  ಚರ್ಚೆ ನಡೆಯುತ್ತದೊ, ಅದು ಸತ್ಸಂಗ. ಯಾವುದೇ ವ್ಯಕ್ತಿ ನಿಯಮಿತವಾಗಿ ಸತ್ಸಂಗಕ್ಕೆ ಹೋಗುತ್ತಿದ್ದರೆ, ಆಧ್ಯಾತ್ಮಿಕ ಗ್ರಂಥಗಳ ಅಭ್ಯಾಸ ಮಾಡಿ ಹೆಚ್ಚಿನ ಸಮಯವನ್ನು ಈಶ್ವರನ ಅನುಸಂಧಾನದಲ್ಲಿರುತ್ತಿದ್ದರೆ, ಆ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. 50 ಇರುತ್ತದೆ. ಇಂತಹ ವ್ಯಕ್ತಿಗೆ ಸತ್ಸಂಗದ ಆಸಕ್ತಿ ಇರುತ್ತದೆ, ಸತ್ಸಂಗದಿಂದ ಹೆಚ್ಚು ಆನಂದ ಸಿಗುತ್ತದೆ.

ಮುಂದೆ ಶೇ. 55 ರ ಮಟ್ಟದಲ್ಲಿ ವ್ಯಕ್ತಿ ಸತ್ಸೇವೆ ಮಾಡಲು ಪ್ರಾರಂಭಿಸುತ್ತಾನೆ ಹಾಗೂ ಅವನಿಗೆ ಗುರುಪ್ರಾಪ್ತಿಯಾಗುತ್ತದೆ; ಅಂದರೆ ಗುರು, ಶಿಷ್ಯನ ಜೀವನದಲ್ಲಿ ಬಂದು ಅವನಿಗೆ ಮಾರ್ಗದರ್ಶನ ಮಾಡುತ್ತಾರೆ.

ಗುರುಗಳಿಗೆ ಅಪೇಕ್ಷಿತವಿರುವ ಸಾಧನೆ ಮಾಡಿದರೆ ಮುಂದೆ ಆಧ್ಯಾತ್ಮಿಕ ಉನ್ನತಿಯಾಗಿ ಮಟ್ಟ ಶೇ. 60 ಆಗುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. 60 ಆದಾಗ ಆ ವ್ಯಕ್ತಿ ಜನನ-ಮರಣದ ಚಕ್ರದಿಂದ ಮುಕ್ತನಾಗುತ್ತಾನೆ.

ಮುಂದೆ ಶೇ. 70 ಆಧ್ಯಾತ್ಮಿಕ ಮಟ್ಟವಾದಾಗ ಸಂತಪದವಿ ಪ್ರಾಪ್ತಿಯಾಗುತ್ತದೆ.

ಸಾಧನೆ ಮಾಡಿ ಈಶ್ವರಪ್ರಾಪ್ತಿ ಮಾಡುವುದೇ ಮನುಷ್ಯಜನ್ಮದ ಧ್ಯೇಯ ಆಗಿದೆ. ನಾವು ಮಾಡುತ್ತಿರುವ ಸಾಧನೆಯಿಂದ ಆಧ್ಯಾತ್ಮಿಕ ಮಟ್ಟ ಹೆಚ್ಚಾಗುವುದೆಂದರೆ ಇದು ಸಾಧನೆಯ ಪರಿಣಾಮವಾಗಿದೆ; ಆದರೆ ಆಧ್ಯಾತ್ಮಿಕ ಮಟ್ಟಕ್ಕಿಂತಲೂ ನಮ್ಮ ಗಮನ ಸಾಧನೆಯ ಮೇಲೆಯೆ ಇರಬೇಕಾಗುತ್ತದೆ. ಇದರ ಅರ್ಥ ಮಟ್ಟದಲ್ಲಿ ಸಿಲುಕುವುದಕ್ಕಿಂತ ಗುರುಗಳ ಅಪೇಕ್ಷೆಗನುಸಾರ ಸಾಧನೆ ಮಾಡುತ್ತಿರುವುದೇ ಮಹತ್ವದ್ದಾಗಿದೆ. ಕೆಲವೊಮ್ಮೆ ಇಬ್ಬರು ಸಾಧಕರ ಸಾಧನೆ ಸಮಾನವಾಗಿದ್ದರೂ ಒಬ್ಬನ ಪ್ರಗತಿ ಬೇಗನೆ ಆಗುತ್ತದೆ, ಇನ್ನೊಬ್ಬನ ಪ್ರಗತಿ ಆಗಲು ತಡವಾಗುತ್ತದೆ. ಇದರ ಕಾರಣವೆಂದರೆ ಆಧ್ಯಾತ್ಮಿಕ ಮಟ್ಟ ಸಾಧನೆಯ ಜೊತೆಗೆ ಆ ವ್ಯಕ್ತಿಯ ಪ್ರಾರಬ್ಧವನ್ನೂ ಅವಲಂಬಿಸಿರುತ್ತದೆ. ಒಬ್ಬನ ಪ್ರಾರಬ್ಧ, ಕೊಡು-ಕೊಳ್ಳುವ ಲೆಕ್ಕಾಚಾರ ಕಡಿಮೆ ಇದ್ದರೆ, ಅವನ ಪ್ರಗತಿ ಬೇಗನೆ ಆಗಬಹುದು ಹಾಗೂ ಇನ್ನೊಬ್ಬನ ಪ್ರಾರಬ್ಧ-ಕೊಡುಕೊಳ್ಳುವ ಲೆಕ್ಕಾಚಾರ ತೀವ್ರ ಇದ್ದರೆ ಅವನ ಆಧ್ಯಾತ್ಮಿಕ ಪ್ರಗತಿಗೆ ತಡವಾಗಬಹುದು. ಹೇಗೆ ನೌಕರಿ ಮಾಡುವ ವ್ಯಕ್ತಿಗಳಿಬ್ಬರಿಗೆ ಸಮಾನ ಸಂಬಳವಿರಬಹುದು ಆದರೆ ಒಬ್ಬನಿಗೆ ಸಾಲವಿರಬಹುದು, ಅವನ ಸಂಬಳ ಸಾಲದ ಕಂತು ಕಟ್ಟಲು ಹೋಗುತ್ತಿರುವುದರಿಂದ ಅವನಲ್ಲಿ ಉಳಿತಾಯ ಕಡಿಮೆಯಾಗುತ್ತದೆ ಹಾಗೂ ಇನ್ನೊಬ್ಬನಿಗೆ ಸಾಲ ಇಲ್ಲದಿರಬಹುದು, ಆದ್ದರಿಂದ ಅವನ ಉಳಿತಾಯ ಸಹಜವಾಗಿಯೇ ಹೆಚ್ಚು ಇರುತ್ತದೆ. ಅದೇ ರೀತಿ ಸಾಧನೆ ಹಾಗೂ ಆಧ್ಯಾತ್ಮಿಕ ಮಟ್ಟದ ವಿಷಯದಲ್ಲಿರುತ್ತದೆ.

ಆಧ್ಯಾತ್ಮಿಕ ಮಟ್ಟ ಸಾಧನೆ
20 ಇಲ್ಲ
25 ಅಲ್ಪಸ್ವಲ್ಪ ಆಸ್ತಿಕ
30 ಪೂಜೆ, ದೇವಸ್ಥಾನಕ್ಕೆ ಹೋಗುವುದು, ಗ್ರಂಥಗಳ ವಾಚನ, ಉಪವಾಸ ಮಾಡುವುದು
40 ನಾಮಸ್ಮರಣೆ
50 ಸತ್ಸಂಗ
55 ಸತ್ಸೇವೆ ಮತ್ತು ಗುರುಪ್ರಾಪ್ತಿ
60 ಜನನ-ಮರಣದ ಚಕ್ರದಿಂದ ಮುಕ್ತಿ
70 ಸಂತಪದವಿ

ಆಧ್ಯಾತ್ಮಿಕ ಮಟ್ಟದ ಇನ್ನೂ ಒಂದು ವೈಶಿಷ್ಟ್ಯವೆಂದರೆ ಈ ಜನ್ಮದಲ್ಲಿ ಮರಣದ ಸಮಯದಲ್ಲಿ ನಮ್ಮ ಆಧ್ಯಾತ್ಮಿಕ ಮಟ್ಟ ಎಷ್ಟಿರುತ್ತದೆಯೋ, ಆ ಮಟ್ಟದಿಂದಲೇ ಮುಂದಿನ ಜನ್ಮದಲ್ಲಿ ನಮ್ಮ ಆಧ್ಯಾತ್ಮಿಕ ಪ್ರವಾಸ ಆರಂಭವಾಗುತ್ತದೆ. ಶಾಲಾ ಶಿಕ್ಷಣ ಪಡೆಯುವಾಗ ನಾವು ಈ ಜನ್ಮದಲ್ಲಿ ಅಕ್ಷರ ಮಾಲೆ, ಸಂಖ್ಯೆ ಇತ್ಯಾದಿ ಕಲಿತರೂ ಮುಂದಿನ ಮನುಷ್ಯಜನ್ಮದಲ್ಲಿ ಪುನಃ ಅ, ಆ. ಇ. ಈ…ಯಿಂದ ಕಲಿಯಬೇಕಾಗುತ್ತದೆ, ಅಧ್ಯಾತ್ಮದಲ್ಲಿ ಹಾಗಿರುವುದಿಲ್ಲ. ನಮ್ಮ ಆಧ್ಯಾತ್ಮಿಕ ಬಲ ಮರಣದ ನಂತರವೂ ನಮ್ಮ ಜೊತೆಗಿರುತ್ತದೆ. ಸಾಧನೆ ಯೋಗ್ಯ ರೀತಿಯಲ್ಲಿ ನಡೆಯುತ್ತಾ ಇದ್ದರೆ ಆಧ್ಯಾತ್ಮಿಕ ಮಟ್ಟವೂ ಹೆಚ್ಚಾಗುತ್ತದೆ. ಓರ್ವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಎಷ್ಟಿದೆ, ಎಂಬುದನ್ನು ನಿಜವಾದ ಸಂತರು ಅಥವಾ ಸದ್ಗುರುಗಳು ಮಾತ್ರ ಹೇಳಲು ಸಾಧ್ಯ. ಹಾಗಾದರೆ ಏನು ಮಾಡಬೇಕು? ಸದ್ಯ ನಾವು ಮಾಡುತ್ತಿರುವ ಸಾಧನೆಯ ಮುಂದಿನ ಹಂತದ ಸಾಧನೆ ಮಾಡಲು ಪ್ರಯತ್ನಿಸಬೇಕು. ಉದಾ. ಕೆವಲ ಕರ್ಮಕಾಂಡ ಮಾಡುವ ಜಿಜ್ಞಾಸು ನಾಮಜಪ ಮಾಡಬೇಕು, ನಾಮಜಪ ಮಾಡುವ ವ್ಯಕ್ತಿ ನಿಯಮಿತ ಸತ್ಸಂಗದಲ್ಲಿರಲು ಪ್ರಯತ್ನಿಸಬೇಕು. ಹೀಗೆ ಮಾಡಿದರೆ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಸಾಧನೆ ಮಾಡಿ ನಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚುತ್ತಾ ಹೋದಂತೆ ನಾವು ಭಗವಂತನ ಅಪೇಕ್ಷೆಯಂತೆ ವರ್ತಿಸಲು ಸುಲಭವಾಗುತ್ತದೆ. ಇದರಿಂದ ‘ಮಟ್ಟಾನುಸಾರ ಸಾಧನೆ’ ಎಂದರೇನು, ಎಂಬುದು ಎಲ್ಲರಿಗೂ ಅರಿವಾಗಿರಬಹುದು.

ಕಾಲಾನುಸಾರ ಸಾಧನೆ

ಸಾಧನೆಯ ಮುಂದಿನ ಹಾಗೂ ಮಹತ್ವದ ತತ್ತ್ವವೆಂದರೆ ಕಾಲಾನುಸಾರ ಸಾಧನೆ! ನಾವು ಆರಂಭದ ಪ್ರವಚನದಲ್ಲಿ ನೋಡಿರುವಂತೆ ಇಂದಿನ ಕಲಿಯುಗದಲ್ಲಿ ನಾಮಸ್ಮರಣೆಯೇ ಶ್ರೇಷ್ಠ ಸಾಧನೆಯಾಗಿದೆ. ಕಾಲಕ್ಕನುಸಾರ ಯೋಗ್ಯ ಸಾಧನೆ ಮಾಡಿದರೆ, ಅದರಿಂದ ಹೆಚ್ಚೆಚ್ಚು ಫಲ ಸಿಗುತ್ತದೆ. ಸತ್ಯಯುಗದಲ್ಲಿ ಎಲ್ಲರೂ ಸಾತ್ತ್ವಿಕರು ಹಾಗೂ ಸೋಹಂ ಭಾವದಲ್ಲಿ ಇರುತ್ತಿದ್ದ ಕಾರಣ ಆ ಕಾಲದಲ್ಲಿ ಜ್ಞಾನಯೋಗದ ಸಾಧನೆ ಇತ್ತು. ನಂತರದ ತ್ರೇತಾಯುಗದಲ್ಲಿ ಧ್ಯಾನಯೋಗದ ಸಾಧನೆ ಮಾಡಲಾಗುತ್ತಿತ್ತು. ಋಷಿಮುನಿಗಳು ಅನೇಕ ವರ್ಷಗಳು ಧ್ಯಾನಾವಸ್ಥೆಯಲ್ಲಿದ್ದು ತಪಶ್ಚರ್ಯೆ ಮಾಡುತ್ತಿದ್ದ ಉದಾಹರಣೆಯನ್ನು ನಾವೆಲ್ಲರೂ ಕೇಳಿರಬಹುದು. ದ್ವಾಪರಯುಗದಲ್ಲಿ ಯಜ್ಞಯಾಗಗಳ ಮೂಲಕ ಕರ್ಮಕಾಂಡದ ಸಾಧನೆಗೆ ಪ್ರಾಧಾನ್ಯತೆ ನೀಡಲಾಯಿತು.

ಇಂದಿನ ಕಲಿಯುಗದಲ್ಲಿ ಭಕ್ತಿಯೋಗವೇ ಸಾಧನೆಯಾಗಿದೆ. ಕಲಿಯುಗದಲ್ಲಿ ಬಹಳಷ್ಟು ಸಂತರು ಭಕ್ತಿಮಾರ್ಗಿಗಳಾಗಿದ್ದಾರೆ. ಕನಕದಾಸರು, ಸಂತ ಮೀರಾಬಾಯಿ, ಸಂತ ಜ್ಞಾನೇಶ್ವರ ಮಹಾರಾಜ, ಚೈತನ್ಯ ಮಹಾಪ್ರಭು, ರಾಘವೇಂದ್ರ ಸ್ವಾಮಿ, ಚಿದಂಬರ ಸ್ವಾಮಿ ಹೀಗೆ ಎಷ್ಟೋ ಉದಾಹರಣೆಗಳನ್ನು ನೀಡಬಹುದು. ಭಕ್ತಿಯೋಗದಲ್ಲಿ ಈಶ್ವರನ 9 ಪ್ರಕಾರದ ಭಕ್ತಿಗಳನ್ನು ಹೇಳಲಾಗಿದೆ. ಅವುಗಳಲ್ಲಿ ಸ್ಮರಣಭಕ್ತಿಯು ಸಹಜ-ಸುಲಭ ಹಾಗೂ ಅಖಂಡವಾಗಿ ಮಾಡಬಹುದಾಗಿದೆ. ಭಗವಾನ ಶ್ರೀಕೃಷ್ಣ ಕೂಡ ಗೀತೆಯಲ್ಲಿ ‘ಯಜ್ಞಾನಾಂ ಜಪಯಜ್ಞೋಸ್ಮಿ’ ಅಂದರೆ ಯಜ್ಞಗಳಲ್ಲಿ ನಾನು ಜಪಯಜ್ಞವಾಗಿದ್ದೇನೆ (ಅಧ್ಯಾಯ ೧೦, ಶ್ಲೋಕ ೨೫) ಎಂದು ಹೇಳಿದ್ದಾನೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಸದ್ಯದ ಕಾಲಕ್ಕಾಗಿ ನಾಮಜಪವೇ ಪ್ರಮುಖ ಸಾಧನೆಯೆಂದು ಹೇಳಲಾಗಿದೆ; ಆದರೆ ಇಂದು ಕೇವಲ ನಾಮಜಪ ಮಾತ್ರ ಸಾಕಾಗುವುದಿಲ್ಲ.

ಸದ್ಯದ ಕಾಲವು ಒಂದು ರೀತಿಯಲ್ಲಿ ಧರ್ಮಸಂಸ್ಥಾಪನೆಯ ಕಾಲವಾಗಿದೆ. ಇಂದು ಜಗತ್ತಿನಾದ್ಯಂತ ಜನರು ಹಿಂದೂ ಧರ್ಮದತ್ತ ಆಕರ್ಷಿಸಲ್ಪಡುತ್ತಿದ್ದಾರೆ. ಧರ್ಮಸಂಸ್ಥಾಪನೆಯ ಈ ಸಮಷ್ಟಿ ಕಾರ್ಯದಲ್ಲಿ ನಾವು ಯಥಾಶಕ್ತಿ ಭಾಗವಹಿಸುವುದು ಕೂಡ ನಮ್ಮ ಸಾಧನೆಯೆ ಆಗಿದೆ. ಹಿಂದೂ ಧರ್ಮದಲ್ಲಿ ಗುರು-ಶಿಷ್ಯ ಪರಂಪರೆಯಿದೆ; ಅದರ ಒಂದು ವೈಶಿಷ್ಟ್ಯವೆಂದರೆ, ಗುರು-ಶಿಷ್ಯ ಪರಂಪರೆ ಕೇವಲ ಆಧ್ಯಾತ್ಮಿಕ ಬೋಧನೆಯನ್ನಷ್ಟೆ ನೀಡಿಲ್ಲ, ಅದು ಧರ್ಮಸಂಸ್ಥಾಪನೆಗಾಗಿ ಕೂಡ ಯೋಗದಾನ ನೀಡಿದೆ. ಮಹಾಭಾರತದ ಯುದ್ಧದಲ್ಲಿ ಗುರುರೂಪದಲ್ಲಿದ್ದ ಶ್ರೀಕೃಷ್ಣನು ಶಿಷ್ಯನಾದ ಅರ್ಜುನನಿಗೆ ಹೇಳಿದ್ದಾನೆ – ‘ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||’, ಅಂದರೆ ‘ಸಜ್ಜನರ ರಕ್ಷಣೆಗಾಗಿ, ದುರ್ಜನರ ನಾಶಕ್ಕಾಗಿ ಹಾಗೂ ಧರ್ಮಸಂಸ್ಥಾಪನೆಗಾಗಿ ನಾನು ಪ್ರತಿಯೊಂದು ಯುಗದಲ್ಲಿ ಪುನಃ ಪುನಃ ಅವತಾರ ತಾಳುತ್ತೇನೆ’ ಎಂದು.

ಧರ್ಮಸಂಸ್ಥಾಪನೆಯ ಈ ಆದರ್ಶವನ್ನು ಮುಂದಿಟ್ಟುಕೊಂಡು ಆರ್ಯ ಚಾಣಕ್ಯ-ಚಂದ್ರಗುಪ್ತ, ವಿದ್ಯಾರಣ್ಯಸ್ವಾಮಿ-ಹರಿಹರ ಮತ್ತು ಬುಕ್ಕರಾಯ, ಸಮರ್ಥ ರಾಮದಾಸಸ್ವಾಮಿ – ಛತ್ರಪತಿ ಶಿವಾಜಿ ಮಹಾರಾಜ ಮುಂತಾದ ಗುರು-ಶಿಷ್ಯರು ಧರ್ಮಸಂಸ್ಥಾಪನೆಯ ಐತಿಹಾಸಿಕ ಕಾರ್ಯ ಮಾಡಿದರು. ಈಗ ಹಿಂದೂ- ರಾಷ್ಟ್ರಸ್ಥಾಪನೆಗಾಗಿ ಅದೇ ರೀತಿಯ ಕಾರ್ಯವನ್ನು ಮಾಡಬೇಕಾಗಿದೆ. ನಾಮಸ್ಮರಣೆಯ ಜೊತೆಗೆ ಧರ್ಮಸಂಸ್ಥಾಪನೆಯ ದೃಷ್ಟಿಯಲ್ಲಿ ಯೋಗದಾನ ನೀಡುವುದು ಕೂಡ ಇಂದಿನ ಕಾಲಕ್ಕನುಸಾರ ಆವಶ್ಯಕ ಸಾಧನೆಯೇ ಆಗಿದೆ.

ಹಾಗಾದರೆ ಕಾಲಾನುಸಾರ ಸಾಧನೆ ಏನೆಂದು ಎಲ್ಲರಿಗೂ ಅರಿವಾಯಿತು ತಾನೇ? ಮಟ್ಟಾನುಸಾರ ಸಾಧನೆ ಹಾಗೂ ಕಾಲಾನುಸಾರ ಸಾಧನೆ ಈ ಸಾಧನೆಯ ತತ್ತ್ವಗಳನ್ನು ತಿಳಿದುಕೊಂಡೆವು. ಅದಕ್ಕನುಸಾರ ನಾವು ಸಾಧನೆ ಮಾಡಿದರೆ, ನಮ್ಮ ಸಾಧನೆಯ ವೇಗ ಹೆಚ್ಚಾಗುವುದು.

Leave a Comment