ನಮ್ಮ ಪ್ರತಿಯೊಬ್ಬರ ಧಾವಂತವು ಆನಂದ ಪ್ರಾಪ್ತಿಗಾಗಿ ಇದ್ದರೂ, ಈಗ ಎಲ್ಲರ ಜೀವನ ಸಂಘರ್ಷಮಯ ಮತ್ತು ಒತ್ತಡದಿಂದ ಕೂಡಿದೆ.
ಒತ್ತಡರಹಿತ ಮತ್ತು ಆನಂದಿ ಜೀವನ ನಡೆಸಲು ಅಧ್ಯಾತ್ಮವನ್ನು ಕೃತಿಯಲ್ಲಿ ತರುವುದು ಅಂದರೆ ಸಾಧನೆ ಮಾಡುವುದು ಆವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಲು ಸನಾತನ ಸಂಸ್ಥೆಯ ವತಿಯಿಂದ ಆನ್‌ಲೈನ್ ಪ್ರವಚನ ಮಾಲಿಕೆಯನ್ನು ಆಯೋಜಿಸಲಾಗಿದೆ. ಈ ಮಾಲಿಕೆಯಲ್ಲಿ ಮೂರನೆಯ ಪ್ರವಚನದಲ್ಲಿ ಇಂದು ನಾವು ನಾಮಜಪದಿಂದ ಆಗುವ ಲಾಭ ಮತ್ತು ಸತ್ಸಂಗದ ಮಹತ್ವ ಈ ವಿಷಯ ನೋಡುವವರಿದ್ದೇವೆ.
ಅಧ್ಯಾತ್ಮದ ಪ್ರಮಾಣ ಅಂದರೆ spiritual quotient (S.Q.) ಮಹತ್ವದ್ದಾಗಿದೆ
ನಾಮಜಪ ಮತ್ತು ಸಾಧನೆಯನ್ನು ಆಧ್ಯಾತ್ಮಿಕ ಪ್ರಗತಿ ಮತ್ತು ಮನಃಶಾಂತಿ ಇವುಗಳಿಗಾಗಿ ಮಾಡಬೇಕು ಎಂದೇನಿಲ್ಲ. ಸಾಧನೆಯಿಂದ ನಮ್ಮ ವ್ಯಾವಹಾರಿಕ ಜೀವನದಲ್ಲಿಯೂ ಉತ್ತಮ ಪರಿಣಾಮವಾಗುತ್ತದೆ. ಸಾಧನೆಯಿಂದ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ, ಹಾಗಾಗಿ ಇಂದು ಹಲವಾರು ಬಹುರಾಷ್ಟ್ರೀಯ ಉದ್ಯಮಗಳ ಕಂಪನಿಗಳೂ ಬುದ್ಧಿಮತ್ತೆಯ ಪ್ರಮಾಣ (I.Q.) ಮತ್ತೆ ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ (E.Q.) ಇವುಗಳ ಜೊತೆ ಅಧ್ಯಾತ್ಮದ ಪ್ರಮಾಣ ಎಂದರೆ spiritual quotient (S. Q.) ಗು ಕೂಡ ಮಹತ್ವ ನೀಡುತ್ತಿವೆ. ಅಂದರೆ ಇಂದು ಜಗತ್ತಿನಾದ್ಯಂತ ಅಧ್ಯಾತ್ಮಕ್ಕೆ ಮಹತ್ವವನ್ನು ಕೊಡಲಾಗುತ್ತಿದೆ; ನಾವೂ ಸಹ ಅದರತ್ತ ಗಮನ ಕೊಡಬೇಕು.
ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ !
ಅಧ್ಯಾತ್ಮದಲ್ಲಿ ತಾತ್ತ್ವಿಕ ಮಾಹಿತಿಗೆ ಶೇ. 2 ರಷ್ಟು ಮಾತ್ರ ಮಹತ್ವವಿದ್ದು ಕಲಿತದ್ದನ್ನು ಪ್ರತ್ಯಕ್ಷ ಕೃತಿಗಿಳಿಸುವುದಕ್ಕೆ ಶೇ. 98 ರಷ್ಟು ಮಹತ್ವವಿದೆ. ಈ ಸಂದರ್ಭದಲ್ಲಿ ಮನಮುಟ್ಟುವಂತಹ ಒಂದು ಕಥೆಯಿದೆ.
ಒಂದು ಬಾರಿ ಪಂಡಿತರೊಬ್ಬರು ಒಂದು ದೋಣಿಯಲ್ಲಿ ನದಿಯನ್ನು ದಾಟುತ್ತಿದ್ದರು. ಆ ದೋಣಿಯಲ್ಲಿ ಪಂಡಿತ ಮತ್ತೆ ನಾವಿಕ ಇವರಿಬ್ಬರೇ ಇದ್ದರು. ಪಂಡಿತನು ನಾವಿಕನಿಗೆ ಬಹಳಷ್ಟು ಗ್ರಂಥಗಳ ಸಂದರ್ಭಗಳನ್ನು ಹೇಳಿ ಆ ಗ್ರಂಥಗಳನ್ನು ಓದಿರುವಿಯಾ ಎಂದು ಕೇಳಿದರು. ನಾವಿಕನು ‘ಇಲ್ಲ’ ಎಂದು ಉತ್ತರಿಸಿದನು. ಆಗ ಪಂಡಿತರು ಅವನಿಗೆ ಹೇಳಿದರು, “ಗ್ರಂಥಗಳ ಅಧ್ಯಯನ ಮಾಡದೇ ನಿನ್ನ ಜೀವನವೇ ವ್ಯರ್ಥವಾಗಿ ಹೋಯಿತಲ್ಲ!” ಹೀಗೆಯೇ ಚರ್ಚೆ ನಡೆಯುತ್ತಿದ್ದಾಗ ರಂಧ್ರವೊಂದರಿಂದ ನೀರು ದೋಣಿಯೊಳಗೆ ಬರತೊಡಗಿತು. ಇದನ್ನು ಗಮನಿಸಿದ ನಾವಿಕನು ಪಂಡಿತರಲ್ಲಿ “ಪಂಡಿತರೇ, ನಿಮಗೆ ಈಜಲು ಬರುತ್ತದೆಯೇ? ನಮ್ಮ ದೋಣಿಯು ಈಗ ಮುಳುಗಲಿದೆ” ಎಂದು ಹೇಳಿದನು. ಅದಕ್ಕೆ ಪಂಡಿತರು “ನಾನು ಈಜುವ ಬಗ್ಗೆ ಬಹಳಷ್ಟು ಪುಸ್ತಕಗಳನ್ನು ಓದಿ ಅದರ ಜ್ಞಾನವನ್ನು ಪಡೆದಿದ್ದೇನೆ; ಆದರೆ ನನಗೆ ಈಜು ಬರುವುದಿಲ್ಲ” ಎಂದುತ್ತರಿಸಿದರು.
ಈಗ ನೀವೇ ಹೇಳಿ, ದೋಣಿ ಮುಳುಗುವ ಸ್ಥಿತಿಯಲ್ಲಿ ಇರುವಾಗ ಪಂಡಿತರ ಸೈದ್ಧಾಂತಿಕ ಜ್ಞಾನದ ಉಪಯೋಗವೇನು? ಅಂತೆಯೇ ಈ ಭವಸಾಗರದಿಂದ ನಮ್ಮ ಸಂಸಾರದ ನೌಕೆಯು ಪಾರಾಗಬೇಕಾದರೆ ನಾವು ನಮ್ಮನ್ನು ಶಬ್ದಜ್ಞಾನಕ್ಕೆ ಮಾತ್ರ ಸೀಮಿತವಾಗಿರಿಸದೇ ಪ್ರತ್ಯಕ್ಷ ಸಾಧನೆಯನ್ನು ಮಾಡಬೇಕು. ಕಳೆದ ಎರಡು ಪ್ರವಚನಗಳಲ್ಲಿ ನಾವು ಕುಲದೇವತೆ ಮತ್ತು ದತ್ತಗುರುಗಳ ನಾಮಜಪದ ಮಹತ್ವವನ್ನು ತಿಳಿದುಕೊಂಡಿದ್ದೇವೆ. ತಮ್ಮಲ್ಲಿ ಹಲವರು ಈಗಾಗಲೇ ನಾಮಜಪವನ್ನು ಪ್ರಾರಂಭಿಸಿರಬಹುದು. ಹಲವರಿಗೆ ನಾಮಜಪವನ್ನು ಪ್ರಾರಂಭಿಸಿದ ನಂತರ ಕೆಲವು ಅನುಭವಗಳು ಕೂಡ ಬಂದಿರಬಹುದು.
ಅನುಭೂತಿಗಳ ವಿಶ್ಲೇಷಣೆ
ಕೆಲವರಿಗೆ ಒಳ್ಳೆಯ ಅನುಭವಗಳು ಬಂದಿವೆ ಹಾಗೂ ಇನ್ನೂ ಕೆಲವರಿಗೆ ತೊಂದರೆದಾಯಕ ಅನುಭವಗಳು ಬಂದಿರಬಹುದು. ಇದಕ್ಕೆ ಕಾರಣವೇನೆಂದರೆ ಭಗವಂತನು ಪ್ರತಿಯೊಬ್ಬನಿಗೆ ದೇವರಲ್ಲಿರುವ ಶ್ರದ್ಧೆ, ಪ್ರಾರಬ್ಧ ಮತ್ತು ಅನುಭೂತಿಗಳ ಆವಶ್ಯಕತೆ ಇವುಗಳಿಗನುಸಾರ ಅನುಭೂತಿಗಳನ್ನು ಕೊಡುತ್ತಾನೆ. ನಾವು ನಮ್ಮ ನಾಮಸಾಧನೆಯನ್ನು ಅವಿಚಲ ಮನಸ್ಸಿನಿಂದ ದೃಢ ನಿರ್ಧಾರ ಮಾಡಿ ಮುಂದುವರಿಸುವುದು ಆವಶ್ಯವಾಗಿದೆ. ಕೆಲವರಿಗೆ ಅನುಭೂತಿಗಳು ಬೇಗನೆ ಬರುತ್ತವೆಯಾದರೆ ಇನ್ನೂ ಕೆಲವರಿಗೆ ತಡವಾಗಿ ಬರುತ್ತದೆ!
ನಾಮಜಪದಲ್ಲಿ ಕೇವಲ ಶಬ್ದ ಮಾತ್ರವಲ್ಲ, ಆ ಶಬ್ದದ ಜೊತೆ ಸ್ಪರ್ಶ, ರೂಪ, ರಸ, ಗಂಧ ಇವುಗಳೂ ಇರುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಉದಾಹರಣೆಗೆ ನಾವು ವ್ಯಕ್ತಿಯೊಬ್ಬನ ಹೆಸರನ್ನು ಹೇಳಿದಾಗ ಆ ವ್ಯಕ್ತಿಯ ರೂಪವು ನಮ್ಮ ಕಣ್ಣೆದುರು ಕಾಣುತ್ತದೆ. ಯಾವುದಾದರೊಂದು ತಿಂಡಿಯ ಹೆಸರು ಹೇಳಿದರೆ ಅದರ ರುಚಿ ಹಾಗೂ ಅದಕ್ಕೆ ಸಂಬಂಧಪಟ್ಟ ನೆನಪುಗಳು ಮನಸ್ಸಿಗೆ ಬರುತ್ತವೆ. ‘ಅಗ್ನಿ’ ಎಂದು ಹೇಳಿದರೆ ಕೂಡಲೇ ನಮ್ಮ ಕಣ್ಣೆದುರು ಪ್ರಜ್ವಲಿತವಾಗಿರುವ ಅಗ್ನಿಯು ಕಾಣಿಸುತ್ತದೆ ಮಾತ್ರವಲ್ಲ, ಅದರೊಂದಿಗೆ ಅಗ್ನಿಯ ಪ್ರಕಾಶ, ಉಷ್ಣತೆ ಮುಂತಾದವುಗಳ ನೆನಪು ಕೂಡ ಆಗುತ್ತದೆ. ಅಂತೆಯೇ ನಾವು ಭಗವಂತನ ಹೆಸರನ್ನು ಶ್ರದ್ಧಾಪೂರ್ವಕವಾಗಿ ಜಪಿಸಿದರೆ ಆ ಭಗವಂತನ ಗುಣಗಳು ನಮ್ಮಲ್ಲಿ ಬಂದು ಭಗವಂತನ ಮೇಲೆ ಪ್ರೀತಿಯುಂಟಾಗುತ್ತದೆ. ಇಂದಿನ ಪ್ರವಚನದಲ್ಲಿ ನಾವು ಪ್ರಮುಖವಾಗಿ ‘ನಾಮಜಪದ ಲಾಭಗಳು ಮತ್ತು ಸತ್ಸಂಗದ ಮಹತ್ವ’ ಈ ವಿಷಯವನ್ನು ನೋಡುವವರಿದ್ದೇವೆ.
ನಾಮಜಪದ ಲಾಭಗಳು
ಅ. ಬಂಧನರಹಿತ ನಾಮಸಾಧನೆ
ನಾಮಜಪಕ್ಕೆ ಸಂಬಂಧಪಟ್ಟ ಅತ್ಯಂತ ಮಹತ್ವದ ಲಾಭವೆಂದರೆ ನಾಮಸಾಧನೆಗೆ ಸ್ಥಳ-ಕಾಲ-ಸಮಯ, ಶೌಚಾಶೌಚ, ಮಡಿ-ಮೈಲಿಗೆ ಇಂತಹ ಯಾವುದೇ ಬಂಧನಗಳಿಲ್ಲ. ಕರ್ಮಕಾಂಡದ ನಿಯಮಗಳು ಇದಕ್ಕೆ ಅನ್ವಯಿಸುವುದಿಲ್ಲ, ಇದು ಪೂರ್ಣತಃ ಈಶ್ವರನ ಸ್ಮರಣೆಯಾಗಿದೆ; ಅಂದರೆ ಇದು ಭಕ್ತಿಯೋಗದಲ್ಲಿ ಬರುವ ಉಪಾಸನಾಕಾಂಡದ ಸಾಧನೆಯಾಗಿದೆ.
ಆ. ನಾಮಜಪದಿಂದ ಪ್ರಾರಬ್ಧವು ಸಹ್ಯವಾಗುವುದು
ನಾಮಜಪ ಸಾಧನೆಯಿಂದ ಪ್ರಾರಬ್ಧವು (ಅಂದರೆ ಹಣೆಬರಹವು) ಸುಸಹ್ಯವಾಗುತ್ತದೆ ಅಥವಾ ಅದರ ತೀವ್ರತೆಯು ಕಡಿಮೆಯಾಗುತ್ತದೆ.
ಇ. ನಾಮಜಪದಿಂದ ದೇವತೆಗಳು ಪ್ರಸನ್ನರಾಗುತ್ತಾರೆ
ಮನಸ್ಸಿನ ಏಕಾಗ್ರತೆಯು ಹೆಚ್ಚಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ಆಧ್ಯಯನ ಪ್ರಾರಂಭಿಸುವ ಮೊದಲು ಸ್ವಲ್ಪ ಸಮಯ ನಾಮಜಪವನ್ನು ಮಾಡುವುದು ಸೂಕ್ತ.
ಈ. ನಾಮಜಪದಿಂದ ಸದ್ಗುರುಗಳ ಪ್ರಾಪ್ತಿಯಾಗುವುದು
ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿ ಆಗಬೇಕಾದರೆ ಗುರುಕೃಪೆಯ ಆವಶ್ಯಕತೆಯಿರುತ್ತದೆ. ಸಮಾಜದಲ್ಲಿ ನಮಗೆ ಕೆಲವೆಡೆ, ‘ಕೆಲವರು ತಮಗೆ ಬೇಕಾದ ಗುರುಗಳನ್ನು ಸ್ವೀಕರಿಸುತ್ತಾರೆ’ ಎಂಬುದು ಕಂಡುಬರುತ್ತದೆ; ಅಂದರೆ ಯಾರಾದರೊಬ್ಬ ವ್ಯಕ್ತಿ ಅಥವಾ ಸಂತರು ನನ್ನ ಗುರುಗಳಾಗಿದ್ದಾರೆ ಎಂದು ತಾವೇ ಹೇಳಿಕೊಳ್ಳುತ್ತಾರೆ ಅಥವಾ ಹಾಗೆ ಭಾವಿಸಿ ನಡೆದುಕೊಳ್ಳುತ್ತಾರೆ. ಆದರೆ ಹೀಗೆ ಹೇಳುವುದು ಅಥವಾ ಭಾವಿಸುವುದು ನಿರರ್ಥಕವಾಗಿದೆ, ಏಕೆಂದರೆ ಅಧ್ಯಾತ್ಮದಲ್ಲಿ ನಾವು ಗುರು ಮಾಡಿಕೊಳ್ಳುವುದಲ್ಲ, ಗುರುಗಳು ನಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕಾಗುತ್ತದೆ. ನಾಮಸ್ಮರಣೆಯ ಮಹತ್ವದ ಲಾಭವೆಂದರೆ ನಾಮದಿಂದ ಸದ್ಗುರುಗಳ ಪ್ರಾಪ್ತಿಯಾಗುತ್ತದೆ. ನಾಮದೀಕ್ಷೆಯನ್ನು / ನಾಮವನ್ನು ಸದ್ಗುರುಗಳಿಂದ ಪಡೆದುಕೊಳ್ಳುವುದು ಉತ್ತಮ; ಆದರೆ ಸದ್ಗುರು ಸಿಗದಿದ್ದರೆ ನಾಮಸ್ಮರಣೆಯನ್ನು ಮಾಡುತ್ತಲೇ ಇರಬೇಕು; ಏಕೆಂದರೆ ನಾಮಸ್ಮರಣೆಯೇ ಸದ್ಗುರುಗಳ ಭೇಟಿ ಮಾಡಿಸಿಕೊಡುತ್ತದೆ.
ಉ. ನಾಮಜಪದಿಂದ ಆಧ್ಯಾತ್ಮಿಕ ಉನ್ನತಿ ಬೇಗನೆಯಾಗುವುದು
ಮೋಕ್ಷಪ್ರಾಪ್ತಿಗೆ ಹಲವು ಮಾರ್ಗಗಳಿವೆ. ‘ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂದು ಅಧ್ಯಾತ್ಮದಲ್ಲಿ ಹೇಳಲಾಗಿದೆ. ನಾಮಜಪದಿಂದ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಸಾಧನೆ ಮಾಡುವಾಗ ಕೆಲವು ಜನರಿಗೆ ಬಣ್ಣ ಕಾಣುತ್ತದೆ, ಬೆಳಕು ಕಾಣಿಸುತ್ತದೆ, ನಾದ ಕೇಳಿಸುತ್ತದೆ ಈ ರೀತಿ ಅನುಭೂತಿಗಳು ಬರುತ್ತವೆ. ಅವು ಬಂದ ನಂತರ ಅನೇಕ ಜನರು ಆ ಅನುಭೂತಿಯಲ್ಲೇ ಸಿಲುಕಿ ಸಾಧನೆಯ ಅದೇ ಹಂತದಲ್ಲಿ ನಿಂತುಬಿಡುತ್ತಾರೆ. ಆದ್ದರಿಂದ ಅವರ ಮುಂದಿನ ಸಾಧನಾಪ್ರವಾಸ ಕುಂಠಿತವಾಗುತ್ತದೆ. ಆದರೆ ನಾಮಜಪಿಸುವುದರಿಂದ ನಾವು ಇಂತಹ ಅನುಭೂತಿಯಲ್ಲಿ ಸಿಲುಕದೆ ನಾವು ನೇರ ಭಗವಂತನವರೆಗೆ ತಲುಪಬಹುದು.
ಊ. ಅಂತ್ಯಕಾಲದಲ್ಲಿ ನಾಲಗೆಯಲ್ಲಿ ಭಗವಂತನ ನಾಮವಿದ್ದರೆ ಸದ್ಗತಿಯು ಸಿಗುವುದು
ಅಂತ್ಯಕಾಲದಲ್ಲಿ ಭಗವಂತನ ನಾಮವನ್ನು ಜಪಿಸುತ್ತ ಮೃತ್ಯು ಬಂದರೆ ಆ ವ್ಯಕ್ತಿಗೆ ಮುಕ್ತಿ ಸಿಗುತ್ತದೆ ಎಂದು ಹೇಳುತ್ತಾರೆ; ಆದರೆ ಜೀವನವಿಡೀ ನಾಮವನ್ನು ಜಪಿಸಿಲ್ಲ ಎಂದಾಗಿದ್ದರೆ ಅಥವಾ ಸಾಧನೆಯನ್ನು ಮಾಡದಿದ್ದರೆ ಮರಣ ಶಯ್ಯೆಯಲ್ಲಿ ಭಗವಂತನ ನೆನಪಾದರೂ ಆಗಬಹುದೇ? ಜೀವನದ ಕೊನೆಯ ಘಳಿಗೆಯಲ್ಲಿ ಭಗವಂತನ ನಾಮ ನೆನಪಿಗೆ ಬರಬೇಕಾಗಿದ್ದರೆ ಜೀವನವಿಡೀ ನಾಮಸ್ಮರಣೆಯನ್ನು ಮಾಡುತ್ತಾ ಇರಬೇಕಾಗುತ್ತದೆ.
ಋ. ನಾಮಜಪದಿಂದ ಕರ್ಮವು – ಅಕರ್ಮವಾಗುವುದು
ಹಿಂದಿನ ಸತ್ಸಂಗದಲ್ಲಿ ನಾವು ಕರ್ಮಫಲಸಿದ್ಧಾಂತದ ವಿಷಯವನ್ನು ತಿಳಿದುಕೊಂಡಿದ್ದೆವು. ಒಳ್ಳೆಯ ಕರ್ಮಗಳಿಂದ ಪುಣ್ಯವು ಸಿಗುತ್ತದೆ ಮತ್ತು ಕೆಟ್ಟ ಕರ್ಮಗಳಿಂದ ಪಾಪವನ್ನು ಭೋಗಿಸಬೇಕಾಗುತ್ತದೆ. ಆಧ್ಯಾತ್ಮಿಕ ಉನ್ನತಿ ಹೊಂದಬೇಕಾಗಿದ್ದರೆ ವ್ಯಕ್ತಿಯು ಪಾಪ-ಪುಣ್ಯಗಳ ಆಚೆಗೆ ಹೋಗಬೇಕಾಗಿರುತ್ತದೆ. ಪಾಪ-ಪುಣ್ಯಗಳನ್ನು ಮೀರಿ ಹೋಗುವುದಿದ್ದರೆ ಕರ್ಮವು ಅಕರ್ಮ ಕರ್ಮವಾಗಬೇಕು. ಅಕರ್ಮ ಕರ್ಮವಾಗಬೇಕಾದರೆ ಪ್ರತಿಯೊಂದು ಕೃತಿಯನ್ನು ಮಾಡುವಾಗ ನಾಮಜಪವನ್ನು ಮಾಡುವುದು ಆವಶ್ಯಕವಾಗಿರುತ್ತದೆ. ನಾಮಜಪದಿಂದ ತಿಳಿಯದೇ ಆದ ಪಾಪಕರ್ಮಗಳ ಪರಿಮಾರ್ಜನೆ ಆಗುತ್ತದೆ.
‘ಪರಮೇಶ್ವರನ ನಾಮದಲ್ಲಿ ಅನಂತ ಕೋಟಿ ಪಾಪಗಳನ್ನು ಸುಟ್ಟು ಹಾಕುವ ಸಾಮರ್ಥ್ಯವಿದೆ’, ‘ನಾಮದಿಂದ ಸುಡಲಾಗದಂತಹ ಪಾಪವನ್ನು ಮನುಷ್ಯನು ಮಾಡಲು ಸಾಧ್ಯವೇ ಇಲ್ಲ’ ಮುಂತಾದ ಗಾದೆ ಮಾತುಗಳನ್ನು ಕೇಳಿರಬಹುದು. ನಾವು ಈ ಶ್ರಧ್ಧೆಯಿಂದ ನಾಮಸ್ಮರಣೆಯನ್ನು ಮಾಡಿದರೆ ಭಗವಂತನು ನಮ್ಮ ಉದ್ಧಾರವನ್ನು ಮಾಡಿಯೇ ಮಾಡುವನು.
ಎ. ನಾಮ ಜಪಿಸುವುದು ಕರ್ತವ್ಯವಾಗಿದೆ
ನಾಮಜಪದ ಸಂದರ್ಭದಲ್ಲಿ ಶ್ರೇಷ್ಠ ಸಂತರು ಮತ್ತು ಸನಾತನದ ಪ್ರೇರಣಾಸ್ಥಾನ ಪರಮ ಪೂಜ್ಯ ಭಕ್ತರಾಜ ಮಹಾರಾಜರು ಏನು ಹೇಳಿದ್ದಾರೆಂದರೆ, ‘ನಾಮ ಜಪಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮನ್ನು ಯಾವ ಈಶ್ವರನು ತಯಾರಿಸಿದ್ದಾನೆಯೋ, ಆತನ ಋಣ ತೀರಿಸಲು ಪ್ರತಿಯೊಂದು ಶ್ವಾಸದೊಂದಿಗೆ ನಾಮ ಜಪಿಸಬೇಕು’ ಎಂದು.
ನಾಮಜಪವು ಹೇಗೆ ಕಾರ್ಯ ಮಾಡುತ್ತದೆ ?
ನಾಮಸ್ಮರಣೆಯಿಂದ ವಿವಿಧ ಸ್ತರಗಳಲ್ಲಾಗುವ ಲಾಭಗಳನ್ನು ತಿಳಿದುಕೊಂಡೆವು. ಈಗ ನಾಮಜಪವು ನಿರ್ದಿಷ್ಟವಾಗಿ ಹೇಗೆ ಕಾರ್ಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಅ. ಲಿಂಗದೇಹ
ಅಧ್ಯಾತ್ಮಶಾಸ್ತ್ರಕ್ಕನುಸಾರ ಮನುಷ್ಯ ಜೀವವು ಸ್ಥೂಲದೇಹ ಮತ್ತು ಲಿಂಗದೇಹ ಇವುಗಳಿಂದ ತಯಾರಾಗಿದೆ. ಸ್ಥೂಲದೇಹ ಅಂದರೆ ನಾವು ಸಾಮಾನ್ಯವಾಗಿ ಶರೀರ ಎಂದು ಏನನ್ನು ಕರೆಯುತ್ತೇವೆಯೋ ಅದು. ಲಿಂಗದೇಹವು ಆತ್ಮ ಮತ್ತು ಆತ್ಮದ ಸುತ್ತಲಿರುವ ಮಾಯೆಯ ಆವರಣ ಇವುಗಳಿಂದ ರೂಪುಗೊಂಡಿರುತ್ತದೆ. ಇಡೀ ಸೃಷ್ಟಿ, ಸಜೀವ-ನಿರ್ಜೀವ ವಸ್ತುಗಳು ಇವೆಲ್ಲವೂ ಈಶ್ವರನ ಸೃಷ್ಟಿಯಾಗಿವೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ; ಇದು ನಮಗೆ ತಾತ್ತ್ವಿಕವಾಗಿ ತಿಳಿದಿದ್ದರೂ ನಮಗೆ ಅದರ ಅರಿವು ಸತತವಾಗಿ ಇರುವುದಿಲ್ಲ
ಆ. ಅಂತಃಕರಣ ಚತುಷ್ಟಯ
ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ಇವುಗಳನ್ನು ‘ಅಂತಃಕರಣ ಚತುಷ್ಟಯ’ ಎನ್ನುತ್ತಾರೆ. ಮನಸ್ಸು, ಬುದ್ಧಿ, ಚಿತ್ತ ಇವುಗಳ ಕಾರ್ಯವು ಬೇರೆಬೇರೆಯಾಗಿದೆ. ನಾವು ಅದನ್ನು ತಿಳಿದುಕೊಳ್ಳೋಣ.
ಆ 1. ಮನಸ್ಸು : ಮನಸ್ಸು ಏನು ಮಾಡುತ್ತದೆ ? ‘ಸಂಕಲ್ಪ ವಿಕಲ್ಪಕಾತ್ಮಕಂ ಮನಃ|’ ಎಂದು ಹೇಳುತ್ತಾರೆ. ಅಂದರೆ ವಿಚಾರ ಮಾಡುವುದು ಮನಸ್ಸಿನ ಸ್ವರೂಪವಾಗಿದೆ. ಅದರಲ್ಲಿ ಒಳ್ಳೆಯ ವಿಚಾರಗಳು, ಕೆಟ್ಟ ವಿಚಾರಗಳು, ಇಚ್ಛೆಗಳು, ವಾಸನೆಗಳು ಮತ್ತು ಭಾವನೆಗಳು ಎಲ್ಲವೂ ಇರುತ್ತವೆ. ಮನಸ್ಸು ಚಂಚಲವಾಗಿರುತ್ತದೆ. ‘ಇದನ್ನು ಮಾಡಲೋ ಅದನ್ನು ಮಾಡಲೋ’ ಎಂಬ ವಿಚಾರಗಳು ಸತತವಾಗಿ ನಡೆಯುತ್ತಲೇ ಇರುತ್ತವೆ; ಆದರೆ ಅದಕ್ಕೆ ನಿರ್ಣಯವನ್ನು ತೆಗೆದುಕೊಳ್ಳಲು ಆಗುವುದಿಲ್ಲ.
ಆ 2. ಬುದ್ಧಿ : ನಿರ್ಣಯವನ್ನು ತೆಗೆದುಕೊಳ್ಳುವುದು ಬುದ್ಧಿಯ ಕಾರ್ಯವಾಗಿದೆ. ‘ನಿಶ್ಚಯಾತ್ಮಿಕಾ ಬುದ್ಧಿಃ |’ ಎಂದರೆ ನಿಶ್ಚಯ ಮಾಡುವುದು, ಯೋಗ್ಯ-ಅಯೋಗ್ಯದ ಬಗ್ಗೆ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳುವುದು ಬುದ್ಧಿಯ ಕಾರ್ಯವಾಗಿದೆ. ಮನಸ್ಸಿನ ವಿಚಾರಗಳಿಗನುಗುಣವಾಗಿ ಕೃತಿ ಆಗುವುದೋ ಇಲ್ಲವೋ ಎಂಬುದು ಬುದ್ಧಿಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ ದ್ವಂದ್ವವಿರುತ್ತದೆ. ಯಾವುದಾದರೊಂದು ಕೆಲಸವನ್ನು ಮಾಡಲೋ ಬೇಡವೋ ಎಂಬ ವಿಚಾರಗಳು ಬರುತ್ತವೆ. ಆಗ ತೆಗೆದುಕೊಳ್ಳಲಾಗುವ ನಿರ್ಣಯವು ಬುದ್ಧಿಯಿಂದ ತೆಗೆದುಕೊಂಡಂತಹದ್ದಾಗಿರುತ್ತದೆ.
ಆ 3. ಚಿತ್ತ : ಚಿತ್ತ ಎಂದರೇನು? ಚಿತ್ತ ನೆನಪುಗಳ ಸಂಗ್ರಹವಾಗಿದೆ. ನಮ್ಮ ಶರೀರ, ಇಂದ್ರಿಯಗಳು, ಮನಸ್ಸು, ಬುದ್ಧಿ ಹಾಗೂ ಅಹಂ ಇವೆಲ್ಲವುಗಳ ವೃತ್ತಿ ಹಾಗೂ ಕೃತಿಯ ಸಂಗ್ರಹ ಎಂದರೆ ‘ಸ್ಮೃತಿ’ (ನೆನಪು) ಚಿತ್ತದಲ್ಲಿ ಸಂಗ್ರಹಿಸಲ್ಪಟ್ಟಿರುತ್ತದೆ.
ಆ 4. ಅಹಂ : ಅಹಂ ಅಂದರೆ ಅಹಂಕಾರ! ‘ತನ್ನತನ’ವನ್ನು ನಿರ್ಮಿಸುವ ಅಂತಃಕರಣದ ವೃತ್ತಿ ಅಂದರೆ ಅಹಂ. ‘ಯಾವುದಾದರೊಂದು ಕೃತಿ ನನ್ನಿಂದಾಯಿತು’, ‘ನಾನು ಒಳ್ಳೆಯ ಕೃತಿಯನ್ನು ಮಾಡಿದೆ’, ‘ನಾನು ಮಾಡಿದಂತೆ ಬೇರೆಯವರಿಗೆ ಮಾಡಲು ಸಾಧ್ಯವಾಗುವುದಿಲ್ಲ’, ಈ ರೀತಿಯ ವಿಚಾರ ಹಾಗೂ ವೃತ್ತಿ ಅಂದರೆ ಅಹಂಕಾರ.
ಇ. ಆಧುನಿಕ ಮಾನಸಶಾಸ್ತ್ರದಂತೆ ಮನಸ್ಸಿನ ಭಾಗಗಳು
ಆಧುನಿಕ ಮಾನಸಶಾಸ್ತ್ರದ ಪ್ರಕಾರ ಮನಸ್ಸಿನ ಎರಡು ಭಾಗಗಳಿವೆ. ನಾವು ಮನಸ್ಸು ಎಂದು ಯಾವುದನ್ನು ಉಲ್ಲೇಖ ಮಾಡುತ್ತೇವೆಯೋ, ಅದು ಬಾಹ್ಯಮನಸ್ಸು ಹಾಗೂ ಎರಡನೇ ಭಾಗ ಅಪ್ರಕಟವಾಗಿರುತ್ತದೆ, ಅದೆಂದರೆ ಅಂತರ್ಮನ, ಅಂದರೆ ಚಿತ್ತ! ನಮ್ಮ ಮನಸ್ಸು ಯಾವಾಗಲೂ ಕಾರ್ಯನಿರತವಾಗಿರುತ್ತದೆ. ನಾವು ಒಂದು ಸ್ಥಳದಲ್ಲಿ ಸುಮ್ಮನೆ ಕುಳಿತುಕೊಂಡಿದ್ದರೂ, ಯಾವುದೇ ಕೃತಿ ಮಾಡದೇ ಇದ್ದರೂ, ಮನಸ್ಸಿನಲ್ಲಿ ವಿಚಾರಗಳು ಬರುತ್ತಲೇ ಇರುತ್ತವೆ. ಮನಸ್ಸಿನ ರಚನೆಯಲ್ಲಿ ಮತ್ತು ಕಾರ್ಯದಲ್ಲಿ ಬಾಹ್ಯಮನಸ್ಸಿನ ಪಾಲು ಶೇ. 10 ರಷ್ಟು ಹಾಗೂ ಅಂತರ್ಮನಸ್ಸಿನ (ಚಿತ್ತದ) ಪಾಲು ಶೇ. 90 ರಷ್ಟಿರುತ್ತದೆ.
ಬಾಹ್ಯಮನಸ್ಸು(conscious mind) ಅಂದರೆ ಜಾಗೃತ ಮನಸ್ಸು. ಸಾಮಾನ್ಯ ವಿಚಾರಗಳು ಹಾಗೂ ಭಾವನೆಗಳ ಸಂಬಂಧ ಬಾಹ್ಯಮನಸ್ಸಿನೊಂದಿಗಿರುತ್ತದೆ. ಅಂತರ್ಮನಸ್ಸನ್ನು (suconscious mind) ಆಧ್ಯಾತ್ಮಿಕ ಪರಿಭಾಷೆಯಲ್ಲಿ ‘ಚಿತ್ತ’ ಎಂದು ಹೇಳುತ್ತಾರೆ.
ಅಂತರ್ಮನಸ್ಸು ಅಂದರೆ ಎಲ್ಲ ಭಾವ ಭಾವನೆಗಳ, ವಿಚಾರ ವಿಕಾರಗಳ ಗೋದಾಮು! ಈ ಗೋದಾಮಿನಲ್ಲಿ ಎಲ್ಲ ಪ್ರಕಾರದ ಅನುಭವ, ಭಾವನೆ, ವಿಚಾರ, ಆಸೆ-ಆಕಾಂಕ್ಷೆ ಇತ್ಯಾದಿಗಳೆಲ್ಲವೂ ಸಂಗ್ರಹವಾಗಿರುತ್ತವೆ. ಅಂತರ್ಮನಸ್ಸಿನಲ್ಲಿಯೂ 2 ಭಾಗಗಳಿರುತ್ತದೆ. ಒಂದು ಅಂದರೆ ಮೇಲಿನ ಪದರು ಮತ್ತೊಂದು ಕೆಳಗಿನ ಪದರು. ಅಂತರ್ಮನಸ್ಸಿನ ಮೇಲಿನ ಪದರು ಅಂದರೆ sub-conscious mind ಇದರಲ್ಲಿ ನಮ್ಮ ಶರೀರ, ಇಂದ್ರಿಯಗಳು, ಮನಸ್ಸು, ಬುದ್ಧಿ ಹಾಗೂ ಅಹಂನಿಂದಾಗಿ ಆಗುವಂತಹ ಕೃತಿ, ಅದೇ ರೀತಿ ಅದರ ವೃತ್ತಿಗಳ ವಿವಿಧ ನೆನಪುಗಳು ವಿವಿಧ ಸಂಸ್ಕಾರಕೇಂದ್ರಗಳಲ್ಲಿ ಶೇಖರಣೆಯಾಗಿರುತ್ತದೆ ಹಾಗೂ ಅವು ವಿಚಾರದ ರೂಪದಲ್ಲಿ ಪ್ರಕಟವಾಗುತ್ತಿರುತ್ತದೆ. ನಮ್ಮ ಇಚ್ಛೆಯಂತೆ ಅವುಗಳನ್ನು ಬಾಹ್ಯ ಮನಸ್ಸಿಗೆ ತರಲು ಸಾಧ್ಯವಿದೆ.
ಅಂತರ್ಮನಸ್ಸಿನ ಕೆಳಗಿನ ಪದರು ಎಂದರೆ unconscious mind – ಇದರಲ್ಲಿ ಎಲ್ಲ ನೆನಪುಗಳ ಸಂಗ್ರಹವಿರುತ್ತದೆ; ಆದರೆ ಅದು ಆಳದಲ್ಲಿ ಇರುವುದರಿಂದ ನಮಗೆ ಅದರ ನೆನಪು ಆಗುವುದಿಲ್ಲ ಹಾಗೂ ನಮ್ಮ ಇಚ್ಛೆಗನುಸಾರ ಅವುಗಳನ್ನು ಬಾಹ್ಯ ಮನಸ್ಸನಲ್ಲಿ ತರಲೂ ಸಾಧ್ಯವಿಲ್ಲ; ಆದರೆ ವಿಶಿಷ್ಟ ಪ್ರಸಂಗದಿಂದ ಅಥವಾ ಘಟನೆಯಿಂದಾಗಿ ಅಂತರ್ಮನಸ್ಸಿನ ಆಳದಲ್ಲಿ ಬೇರೂರಿರುವ ನೆನಪುಗಳು ಪುನಃ ಬಾಹ್ಯಮನಸ್ಸಿನಲ್ಲಿ ಬರಬಹುದು.
ಈ. ಅಂತರ್ಮನಸ್ಸಿನ ಸಂಸ್ಕಾರಗಳ ಕೇಂದ್ರಗಳು
ಅಂತರ್ಮನಸ್ಸಿನಲ್ಲಿ ವಿವಿಧ ಪ್ರಕಾರದ ಸಂಸ್ಕಾರ ಕೇಂದ್ರಗಳು ಇರುತ್ತದೆ.
ಅಂತರ್ಮನಸ್ಸಿನ ವಾಸನ ಕೇಂದ್ರದಲ್ಲಿ ವ್ಯಕ್ತಿಯ ವಾಸನೆ, ಆಸೆ-ಆಕಾಂಕ್ಷೆ, ಅಪೇಕ್ಷೆಗಳು ಸಂಗ್ರಹವಾಗಿರುತ್ತವೆ. ಆಸಕ್ತಿ ನಿರಾಸಕ್ತಿ ಕೇಂದ್ರದಲ್ಲಿ ವ್ಯಕ್ತಿಯ ಆಸಕ್ತಿ ನಿರಾಸಕ್ತಿಯ ಸಂದರ್ಭದ ಸಂಸ್ಕಾರಗಳು ಇರುತ್ತವೆ. ಸ್ವಭಾವ ಕೇಂದ್ರದಲ್ಲಿ ವ್ಯಕ್ತಿಯ ಸ್ವಭಾವದಲ್ಲಿರುವ ಗುಣ (ಉದಾ. ಪ್ರಾಮಾಣಿಕತೆ, ತತ್ಪರತೆ) ಹಾಗೂ ದೋಷ (ಉದಾ. ಕೋಪ, ಆಲಸ್ಯ) ಇವುಗಳ ಸಂಸ್ಕಾರಗಳ ಸಂಗ್ರಹವಿರುತ್ತವೆ. ವೈಶಿಷ್ಟ್ಯ ಕೇಂದ್ರದಲ್ಲಿ ಕಲೆ, ಕ್ರೀಡೆ ಈ ರೀತಿಯ ಕೌಶಲ್ಯಗಳ ಬಗೆಗಿನ ಸಂಸ್ಕಾರ ಸಂಗ್ರಹವಾಗಿರುತ್ತವೆ.
ವ್ಯವಹಾರದಲ್ಲಿ ‘ಸಂಸ್ಕಾರ’ ಈ ಶಬ್ದದ ಅರ್ಥ, ಒಳ್ಳೆಯ ಆಚರಣೆ, ವಿಚಾರ ಹಾಗೂ ಕೃತಿ ಎಂದಾಗಿದೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ‘ಸಂಸ್ಕಾರ’ವೆಂದರೆ ನಮ್ಮ ವೃತ್ತಿಯ ಹಾಗೂ ನಮ್ಮಿಂದಾಗುವಂತಹ ಕೃತಿಗಳಿಂದ ಅಂತರ್ಮನಸ್ಸಿನಲ್ಲಿ ಮೂಡಿರುವ ಅಚ್ಚುಗಳು ಎಂಬ ಅರ್ಥವಿದೆ. ಹೇಗೆ ಒಳ್ಳೆಯ ವಿಷಯಗಳ ಸಂಸ್ಕಾರ ಆಗುತ್ತದೆ, ಅದೇರೀತಿ ಕೆಟ್ಟ ವಿಷಯಗಳ ಸಂಸ್ಕಾರವೂ ಆಗುತ್ತದೆ, ಉದಾ. ದೇವತೆಗಳ ನಾಮಜಪದ ಸಂಸ್ಕಾರವೂ ಆಗುತ್ತದೆ, ಅದೇರೀತಿ ನಿಂದಿಸುವ (ಅವಾಚ್ಯ ಶಬ್ದಗಳಿಂದ ಬೈಯ್ಯುವ) ಸಂಸ್ಕಾರವೂ ಆಗುತ್ತದೆ.
ಯಾವುದಾದರೊಂದು ವಿಚಾರ ಅಥವಾ ಕೃತಿ ಪದೇ ಪದೇ ಆಗುತ್ತಿದ್ದಲ್ಲಿ ಆ ಸಂಸ್ಕಾರ ಹೆಚ್ಚೆಚ್ಚು ದೃಢವಾಗುತ್ತದೆ ಹಾಗೂ ಚಿತ್ತದಲ್ಲಿ ಸ್ಥಿರವಾಗುತ್ತದೆ. ಈ ಜನ್ಮದಲ್ಲಿ ಮಾತ್ರವಲ್ಲ, ಹಿಂದಿನ ಎಲ್ಲ ಜನ್ಮಗಳ ಸಂಸ್ಕಾರಗಳು ಅಂತರ್ಮನಸ್ಸಿನ ಆಳವಾದ ಪದರಿನಲ್ಲಿ ಹೋಗಿ ಶಾಶ್ವತವಾಗಿ ದೃಢವಾಗಿ ಅಚ್ಚೊತ್ತಿರುತ್ತವೆ. ಪ್ರತಿಯೊಂದು ಸಂಸ್ಕಾರವು ವ್ಯಕ್ತಿಯನ್ನು ಜನ್ಮ-ಮರಣಗಳ ಬಂಧನದಲ್ಲಿ ಸಿಲುಕಿಸುತ್ತದೆ.
ಊ. ನಾಮಜಪದ ಸಂಸ್ಕಾರ ದೃಢವಾಗುವುದರಿಂದಾಗುವ ಲಾಭಗಳು
ನಾಮಜಪವನ್ನು ಸತತವಾಗಿ ಮಾಡುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿನ ನಾಮಜಪದ ಸಂಸ್ಕಾರ ಕೇಂದ್ರ ದೃಢವಾಗುತ್ತದೆ ಹಾಗೂ ಇತರ ಸಂಸ್ಕಾರಗಳು ದುರ್ಬಲವಾಗುತ್ತವೆ. ನಾಮಜಪದ ಸಂಸ್ಕಾರ ಪ್ರಬಲವಾಗುತ್ತಿದ್ದಂತೆ ಮೊದಲು ಮನಸ್ಸಿನಲ್ಲಿನ ನಿರರ್ಥಕ ಅಥವಾ ಅನಾವಶ್ಯಕ ವಿಚಾರಗಳು ನಾಶವಾಗುತ್ತದೆ. ಇಂತಹ ವಿಚಾರಗಳನ್ನು ಮಾಡುವುದಕ್ಕಿಂತ ನಾಮಜಪ ಮಾಡೋಣ ಎಂದು ಮನಸ್ಸಿಗೆ ಅನಿಸಲು ಪ್ರಾರಂಭವಾಗುತ್ತದೆ. ಇದರಿಂದಾಗುವ ಲಾಭವೇನೆಂದರೆ ನಿರರ್ಥಕ ವಿಚಾರದಿಂದಾಗಿ ಖರ್ಚಾಗುವ ಮನಸ್ಸಿನ ಶಕ್ತಿ ಉಳಿಯುತ್ತದೆ ಹಾಗೂ ಮನಸ್ಸು ಏಕಾಗ್ರವಾಗುತ್ತದೆ.
ನಾಮಜಪದಲ್ಲಿ ಅಂದರೆ ಈಶ್ವರನ ಅನುಸಂಧಾನದಲ್ಲಿ ಮನಸ್ಸು ರಮಿಸುವುದರಿಂದ ಮಾಯೆಯಲ್ಲಿರುವ ಆಸಕ್ತಿಯ ಅಥವಾ ವ್ಯಾವಹಾರಿಕ ಆವಶ್ಯಕತೆಗಳ ವಿಚಾರಗಳು ಕಡಿಮೆಯಾಗುತ್ತವೆ. ಅಂದರೆ ಮನಸ್ಸಿನ ಲೋಭದ ಸಂಸ್ಕಾರ ಕಡಿಮೆಯಾಗುತ್ತದೆ. ನಾಮಜಪದ ಆಸಕ್ತಿ ಉಂಟಾಗುವುದರಿಂದ ಮಾಯೆಯಲ್ಲಿನ ಇಷ್ಟಾ-ನಿಷ್ಟಗಳ ಸಂಸ್ಕಾರ ಕ್ಷೀಣಿಸುತ್ತದೆ. ಅದರ ಬಗೆಗಿನ ವಿಚಾರ ಕಡಿಮೆಯಾಗುತ್ತದೆ.
ಮುಂದೆ ನಾಮಜಪವನ್ನು ಶ್ವಾಸಕ್ಕೆ ಜೋಡಿಸಿ ಮಾಡಲು ಪ್ರಾರಂಭವಾದ ನಂತರ ಮನುಷ್ಯನು ವರ್ತಮಾನಕಾಲದಲ್ಲಿರುತ್ತಾನೆ. ಇದರಿಂದ ಭೂತಕಾಲದ ಪ್ರಸಂಗ, ಪೂರ್ವಗ್ರಹ, ಭವಿಷ್ಯದ ಚಿಂತೆ ಇವುಗಳ ಬಗೆಗಿನ ಸಂಸ್ಕಾರ ಕ್ಷೀಣವಾಗಿ ಮನಸ್ಸು ವರ್ತಮಾನ ಕಾಲದ ಕರ್ತವ್ಯಗಳ ಬಗ್ಗೆ ತತ್ಪರವಾಗುತ್ತದೆ.
ಹೀಗೆ ನಾಮಜಪದ ಸಂಸ್ಕಾರಗಳು ಹೇಗೆ ದೃಢವಗುತ್ತಾ ಹೋಗುತ್ತವೆಯೋ, ಹಾಗೆ ವ್ಯಕ್ತಿಯಲ್ಲಿ ಒಳ್ಳೆಯ ಬದಲಾವಣೆಯಾಗುತ್ತದೆ. ಜೀವನದ ಪ್ರತಿಯೊಂದು ಕೃತಿ ಏಕಾಗ್ರತೆಯಿಂದ ಆಗಲು ಶುರುವಾದರೆ ತನ್ನಿಂದ ತಾನೇ ವ್ಯಕ್ತಿಯ ದೈನಂದಿನ ಫಲನಿಷ್ಪತ್ತಿ ಹೆಚ್ಚುತ್ತದೆ. ಈ ರೀತಿಯಲ್ಲಿ ನಾಮಜಪವು ಮನಸ್ಸಿನ ಸ್ತರದಲ್ಲಿ ಕಾರ್ಯ ಮಾಡುತ್ತದೆ.
ಸತ್ಸಂಗದ ಮಾಹಿತಿ ಹಾಗೂ ಮಹತ್ವ
ನಾಮಸ್ಮರಣೆ ಇದು ಸಾಧನಾಮಾರ್ಗದ ಪ್ರಾರ್ಥಮಿಕ ಹಾಗೂ ಮಹತ್ವದ ಹಂತವಾಗಿದೆ; ಆದರೆ ಕೇವಲ ಶೀಘ್ರಗತಿಯಲ್ಲಿ ಆಧ್ಯಾತ್ಮಿಕ ಪ್ರಗತಿಗಾಗಿ ಅಷ್ಟು ಮಾಡಿದರೆ ಸಾಲದು, ಬದಲಾಗಿ ಸಾಧನೆಯ ಮುಂದು ಮುಂದಿನ ಹಂತವನ್ನು ಅಂಗೀಕರಿಸುವುದೂ ಅಗತ್ಯವಿದೆ. ಆ ದೃಷ್ಟಿಯಿಂದ ಈ ಪ್ರವಚನ ಮಾಲಿಕೆಯ ನಂತರ ಮುಂದಿನ ವಾರದಿಂದ ಆನ್‌ಲೈನ್ ಸತ್ಸಂಗಗಳ ಮಾಲಿಕೆ ಆರಂಭವಾಗಲಿದೆ.
ಸತ್ಸಂಗವೆಂದರೆ ಸತ್‌ನ ಸಂಗ. ಸತ್ ಅಂದರೆ ಈಶ್ವರ, ಸಂಗ ಅಂದರೆ ಸಹವಾಸ. ಕೀರ್ತನೆ ಅಥವಾ ಪ್ರವಚನಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗುವುದು, ತೀರ್ಥಕ್ಷೇತ್ರಕ್ಕೆ ಹೋಗುವುದು, ಸಂತರು ಬರೆದಿರುವ ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು, ಇತರ ಸಾಧಕರ ಸಹವಾಸದಲ್ಲಿರುವುದು, ಸಂತರು ಅಥವಾ ಗುರುಗಳ ಬಳಿ ಹೋಗುವುದು ಇತ್ಯಾದಿಗಳಿಂದಾಗಿ ಹೆಚ್ಚೆಚ್ಚು ಸತ್ಸಂಗವು ಲಭಿಸುತ್ತದೆ.
ಸಾಧನೆಯಲ್ಲಿ ಪ್ರಯತ್ನಪೂರ್ವಕ ಮಾಡುವ ನಾಮಜಪಕ್ಕೆ ಶೇ. 5 ರಷ್ಟು ಮಹತ್ವವಿದೆ. ಸತ್ಸಂಗ ಹಾಗೂ ಸಂತರ ಸಹವಾಸಕ್ಕೆ ಶೇ. 30 ರಷ್ಟು ಮಹತ್ವವಿದೆ. ಸತ್ಸಂಗದ ಒಂದು ಮಹತ್ವದ ಲಾಭವೆಂದರೆ ಮನಸ್ಸಿನಲ್ಲಿನ ಸಂದೇಹ-ಪ್ರಶ್ನೆಗಳಿಗೆ ಸತ್ಸಂಗದಲ್ಲಿ ಉತ್ತರಗಳು ಸಿಗುವುದರಿಂದ ಸಾಧನೆಗೆ ವೇಗ ಬರುತ್ತದೆ. ಮನಸ್ಸಿನಲ್ಲಿ ಸಾಧನೆಯ ಬಗ್ಗೆ ವಿಕಲ್ಪ ಉಂಟಾಗಿದ್ದಲ್ಲಿ, ಅದು ಕಡಿಮೆಯಾಗಲು ಸಹಾಯವಾಗುತ್ತದೆ. ಸತ್ಸಂಗದಿಂದ ಅನುಭೂತಿ ಬರುತ್ತದೆ. ಅನುಭೂತಿಯಿಂದ ಸಾಧನೆಯಲ್ಲಿ ಶ್ರದ್ಧೆ ಹೆಚ್ಚಾಗಲು ಸಾಧ್ಯವಾಗುತ್ತದೆ. ಯಾವುದನ್ನು ಇತರ ಸಮಯದಲ್ಲಿ ಪ್ರಯತ್ನಪೂರ್ವಕ ಮಾಡಬೇಕಾಗುತ್ತದೆಯೋ, ಅದು ಸತ್ಸಂಗದಲ್ಲಿ ತನ್ನಿಂದತಾನೆ ಆಗುತ್ತದೆ. ಸತ್ಸಂಗದಿಂದ ವ್ಯಕ್ತಿಯಲ್ಲಿ ಸತ್ತ್ವಗುಣವು ಹೆಚ್ಚಾಗುತ್ತದೆ. ಸತ್ಸಂಗವು ನಾಮಜಪದ ಮುಂದಿನ ಹಂತವಾಗಿದೆ. ಈ ದೃಷ್ಟಿಯಿಂದಲೇ ‘ಆನ್‌ಲೈನ್ ಸಾಧನಾ ಸತ್ಸಂಗ’ ಆರಂಭವಾಗುತ್ತಿದೆ.
ಈ ಸತ್ಸಂಗದಲ್ಲಿ ಸಾಧನೆಯ ಬಗ್ಗೆ ಪ್ರಯೋಗಿಕ ಭಾಗವನ್ನು ಕಲಿಸಲಾಗುವುದು. ಸ್ವಲ್ಪದರಲ್ಲಿ ಹೇಳುವುದಾದರೆ, ಸಾಧನೆಯಲ್ಲಿ ಬರುವಂತಹ ಅಡಚಣೆಗಳನ್ನು ಹೇಗೆ ಪಾರು ಮಾಡಬೇಕು, ಮನಸ್ಸಿನ ಮೇಲೆ ನಿಯಂತ್ರಣ ಹೇಗೆ ಸಾಧಿಸಬೇಕು, ಮನಸ್ಸಿನ ಏಕಾಗ್ರತೆ ಹೇಗೆ ಸಾಧಿಸಬಹುದು, ಅಧ್ಯಾತ್ಮವನ್ನು ಕೃತಿಯಲ್ಲಿ ಹೇಗೆ ತರಬೇಕು ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಪ್ರತಿದಿನ ಸಾಧನೆಯನ್ನು ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಮಾರ್ಗದರ್ಶನ ಮಾಡಲಾಗುವುದು. 84 ಲಕ್ಷ ಜೀವಯೋನಿಗಳಲ್ಲಿ ಮನುಷ್ಯಯೋನಿ ದುರ್ಲಭವಾಗಿದೆ ಎಂದು ಧರ್ಮದಲ್ಲಿ ಹೇಳಲಾಗಿದೆ. ಆದ್ದರಿಂದ ಮನುಷ್ಯ ಜನ್ಮದ ಸಾರ್ಥಕತೆಯು ಈಶ್ವರಪ್ರಾಪ್ತಿಯಲ್ಲಿ ಅಂದರೆ ಮೋಕ್ಷಪ್ರಾಪ್ತಿಯಲ್ಲಿದೆ. ಸಾಧನೆಯಿಂದ ಸಂಸಾರದ ಚಕ್ರದಿಂದ ಮುಕ್ತಿ ದೊರೆತು ಮೋಕ್ಷಪ್ರಾಪ್ತಿಯಾಗುತ್ತದೆ.
ಈ ಸತ್ಸಂಗದ ಲಾಭ ಪಡೆದು ಭಗವಂತನ ಭಕ್ತರಾಗುವ ಮಾರ್ಗದಲ್ಲಿ ಮಾರ್ಗಕ್ರಮಿಸುವ ಪ್ರತಿಯೊಬ್ಬರಿಗೆ ಪ್ರೇರಣೆ ಸಿಗಬೇಕು, ಸಾಧನಾ ಮಾರ್ಗದಲ್ಲಿರುವ ಎಲ್ಲಾ ಅಡಚಣೆಗಳು ದೂರವಾಗಬೇಕು ಎಂದು ಭಗವಂತನ ಚರಣಗಳಲ್ಲಿ ಪ್ರಾರ್ಥಿಸುತ್ತೇವೆ. ಅಲ್ಲಿಯವರೆಗೆ ಸಾಧನೆಯ ಪ್ರಯತ್ನವೆಂದು ಕುಲದೇವಿ ಮತ್ತು ದತ್ತ ಗುರುಗಳ ನಾಮಜಪ ಹೆಚ್ಚೆಚ್ಚು ಶ್ರದ್ದೆಯಿಂದ ಮಾಡಲು ಪ್ರಯತ್ನ ಮಾಡೋಣ.