ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 2)

ಸಾಧನೆಯ ಪ್ರಾಥಮಿಕ ಅಂಗಗಳು

ಇಂದಿನ ಪ್ರವಚನದಲ್ಲಿ ನಾವು ಸುಖ ದುಃಖದ ಪರಿಕಲ್ಪನೆ, ಕರ್ಮಫಲ ಸಿದ್ದಾಂತ, ಸಾಧನೆಯಿಂದ ಪ್ರಾರಬ್ಧ ಸಹ್ಯ ಹೇಗೆ ಆಗುತ್ತದೆ, ಮತ್ತು ಕುಲದೇವರ ನಾಮಜಪದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.

ಸುಖ ದುಃಖ

ಅ. ಸುಖ ದುಃಖದ ಸ್ವರೂಪ

ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಸುಖ ಮತ್ತು ದುಃಖದ ಕ್ಷಣಗಳ ಅನುಭವ ಪಡೆದಿದ್ದೇವೆ. ಪ್ರತಿಯೊಬ್ಬರ ಒದ್ದಾಟ ಸುಖಪ್ರಾಪ್ತಿಗಾಗಿಯೇ ಇರುತ್ತದೆ, ಆದರೆ ಬಹಳಷ್ಟು ಸನ್ನಿವೇಶಗಳಲ್ಲಿ ದುಃಖವೇ ನಮ್ಮ ಪಾಲಿಗೆ ಬಂದಿರುತ್ತದೆ ಎಂದು ನಾವು ನೋಡುತ್ತೇವೆ. ಸಾಮಾನ್ಯವಾಗಿ ಈಗಿನ ಕಾಲದ ಮಾನವನ ಜೀವನದಲ್ಲಿ ಸುಖ ಸರಾಸರಿ ಶೇಕಡ ೨೫ ಮತ್ತು ದುಃಖ ೭೫ ರಷ್ಟು ಇರುತ್ತದೆ. ಬಹಳಷ್ಟು ಜನರಿಗೆ ಆನಂದವನ್ನು ಹೇಗೆ ಪಡೆಯಬೇಕು ಎಂದು ತಿಳಿದಿರುವುದಿಲ್ಲ; ಆದ್ದರಿಂದ ಪ್ರತಿಯೊಬ್ಬರೂ ಪಂಚಜ್ಞಾನೇಂದ್ರಿಯ, ಮನಸ್ಸು ಮತ್ತು ಬುದ್ಧಿಯ ಮೂಲಕ ಸ್ವಲ್ಪ ಸಮಯವಾದರೂ ಸುಖ ಪಡೆಯಲು ಮತ್ತು ದುಃಖದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಅಂದರೆ ಇಷ್ಟವಾದ ಪದಾರ್ಥ ತಿನ್ನುವುದು, ಇಷ್ಟವಾದ ಸ್ಥಳಗಳಿಗೆ ಸುತ್ತಾಡಲು ಹೋಗುವುದು, ಇಷ್ಟವಾದ ಹವ್ಯಾಸ ಕಾಪಾಡಿಕೊಳ್ಳುವುದು, ಈ ರೀತಿ ಮಾಡಿ ಸುಖ ಪಡೆಯಲು ಪ್ರತಿಯೊಬ್ಬರೂ ಪ್ರಯತ್ನಪಡುತ್ತಾರೆ.

ಹೇಗೆ ಸುಖ ಪಡೆಯಲು ಪ್ರತಿಯೊಬ್ಬರೂ ಪ್ರಯತ್ನ ಮಾಡುತ್ತಾರೆಯೋ ಹಾಗೆ ದುಃಖದಿಂದ ತಪ್ಪಿಸಿಕೊಳ್ಳಲು ಕೂಡ ಪ್ರಯತ್ನ ಮಾಡುತ್ತಾರೆ. ಇದರಲ್ಲಿ ಶಾರೀರಿಕ ರೋಗ ಉದ್ಭವಿಸಿದರೆ ಆಗ ಔಷಧ ಕೊಳ್ಳುವುದು, ಟಿವಿ ಹಾಳಾದರೆ ದುರುಸ್ತಿ ಮಾಡಿಸುವುದು ಈ ರೀತಿಯ ಪ್ರಯತ್ನಗಳು ಮಾಡುತ್ತಾರೆ. ಆದರೆ ಇದರಿಂದ ಕೂಡ ಶಾಶ್ವತ ಸುಖ ದೊರೆಯುವುದಿಲ್ಲ. ಇದರ ಒಂದು ಮಾರ್ಮಿಕ ವರ್ಣನೆಯನ್ನು ಸಂತ ತುಕಾರಾಮ ಮಹಾರಾಜರು ಮಾಡಿದ್ದಾರೆ. ಸುಖ ನೋಡಿದರೆ ಎಳ್ಳಿನಷ್ಟು ದುಃಖ ನೋಡಿದರೆ ಪರ್ವತದಷ್ಟು ಎಂದು. ಸ್ವಾಮಿ ವಿವೇಕಾನಂದ ಕೂಡ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ್ದಾರೆ. ಎಲ್ಲರಿಗೂ ಕೇವಲ ಸುಖ ಬೇಕಿರುತ್ತದೆ; ಆದರೆ ಸುಖ ಬರುವಾಗ ಅದು ದುಃಖದ ಮುಳ್ಳಿನ ಕಿರೀಟ ತೊಟ್ಟುಕೊಂಡು ಬರುತ್ತದೆ ಎಂದು ತಿಳಿಯಬೇಕು.

ಆ. ಸುಖ ದುಃಖದ ಕಾರಣಗಳು

ನಾವು ಯಾವ ಆನಂದಸ್ವರೂಪ ಬ್ರಹ್ಮನಿಂದ ನಿರ್ಮಾಣಗೊಂಡಿದ್ದೇವೆಯೋ, ಅವನೆಡೆ ಹೋಗುವ ಆಸಕ್ತಿ ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಅಲ್ಪಸಲ್ಪ ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಅದಕ್ಕಾಗಿ ನಾವು ಈಗ ಸುಖ ದುಃಖಕ್ಕೆ ನಿಜವಾದ ಕಾರಣಗಳೇನು ಮತ್ತು ದುಃಖ ನಿವಾರಣೆಯ ನಿಜವಾದ ಉಪಾಯವೇನು ಎಂದು ತಿಳಿದುಕೊಳ್ಳೋಣ.

ಸುಖ ದುಃಖದ ಕಾರಣಗಳು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿರುತ್ತವೆ. ಶಾರೀರಿಕ ಮಟ್ಟದಲ್ಲಿ ದುಃಖ ಎಂದರೆ ದೇಹಕ್ಕೆ ಯಾವುದಾದರೂ ರೋಗ ಬರುವುದು. ಯಾರಾದರೂ ನಮಗೆ ಮೋಸ ಮಾಡಿದರೆ ಅಥವಾ ಅಯೋಗ್ಯ ರೀತಿಯಲ್ಲಿ ಮಾತನಾಡಿದರೆ, ಆಗ ನಮ್ಮ ಮನಸ್ಸಿಗೆ ಬೇಸರವಾಗುತ್ತದೆ. ಇದು ಮನಸಿನ ಸ್ತರದ ದುಃಖವಾಯಿತು. ಬಹಳಷ್ಟು ಪ್ರಯತ್ನ ಪಟ್ಟರೂ ಕೂಡ ಸತತವಾಗಿ, ವಿಫಲವಾಗುವುದು, ವಿವಾಹ ಹೊಂದಿ ಬರದಿರುವುದು, ಮನೆಯಲ್ಲಿ ಅನಾರೋಗ್ಯ, ಕುಟುಂಬದಲ್ಲಿ ಸತತ ವಾದ ವಿವಾದಗಳಾಗುವುದು, ಈ ರೀತಿಯ ಪ್ರಸಂಗಗಳಿಂದ ಆಗುವ ದುಃಖಗಳ ಕಾರಣ ಆಧ್ಯಾತ್ಮಿಕವಾಗಿರುತ್ತದೆ.

ದುಃಖದ ಬಗೆ ಉದಾಹರಣೆ
ಶಾರೀರಿಕ ರೋಗ ಬರುವುದು
ಮಾನಸಿಕ ಯಾರಿಂದಾದರೂ ಮೋಸ ಹೋಗುವುದು
ಆಧ್ಯಾತ್ಮಿಕ ಸತತ ವೈಫಲ್ಯವೇ ಎದುರಾಗುವುದು

ಇ. ದುಃಖ ನಿವಾರಣೆಗೆ ನಿಜವಾದ ಉಪಾಯ

ದುಃಖದ ಕಾರಣ ಆಧ್ಯಾತ್ಮಿಕವಾಗಿದ್ದರೆ ಆಗ ಅದರ ನಿವಾರಣೆಗಾಗಿ ಆಧ್ಯಾತ್ಮಿಕ ಮಟ್ಟದಲ್ಲಿ ಉಪಾಯ ಮಾಡಬೇಕಾಗುತ್ತದೆ. ಹಾಗಾದರೆ ದುಃಖದ ಕಾರಣ ಆಧ್ಯಾತ್ಮಿಕವಾಗಿದೆಯೆಂದು ಬುದ್ಧಿಯಿಂದ ಹೇಗೆ ಗುರುತಿಸುವುದು? ಕೆಲವು ಲಕ್ಷಣಗಳಿಂದ ನಾವು ಅದರ ಅಂದಾಜು ಮಾಡಬಹುದು. ಯಾವುದಾದರೊಂದು ಕುಟುಂಬದಲ್ಲಿ ಬಹಳಷ್ಟು ಜನರಿಗೆ ತೊಂದರೆ ಆಗುತ್ತಿದ್ದರೆ, ಉದಾಹರಣೆ ಒಂದೇ ಕುಟುಂಬದ ಒಬ್ಬ ಮಗ ಮನೋರೋಗಿ, ಇನ್ನೊಬ್ಬರ ಮದುವೆಯ ನಂತರ ೧೦ ನೇ ದಿನವೇ ಪತಿ-ಪತ್ನಿ ಬೇರೆ ಬೇರೆ ಆದರೆ, ಮೂರನೆಯವನು ಶಿಕ್ಷಣ ಅರ್ಧದಲ್ಲಿಯೇ ಬಿಟ್ಟರೆ, ಹಾಗೂ ನೋಡಲು ಸುಂದರ, ಪದವಿ ಶಿಕ್ಷಣ ಪಡೆದಿರುವ ಮತ್ತು ಒಳ್ಳೆಯ ಸಂಬಳ ಇರುವ ಹುಡುಗಿಯ ವಿವಾಹ ಕೂಡಿ ಬರದಿದ್ದರೆ, ಇವೆಲ್ಲವುಗಳ ಒತ್ತಡ ತಂದೆ ತಾಯಿಯ ಮನಸ್ಸಿನ ಮೇಲೆ ಆಗುತ್ತದೆ. ಸಂಕ್ಷಿಪ್ತವಾಗಿ ಮನೆಯಲ್ಲಿರುವ ಪ್ರತಿಯೊಬ್ಬರೂ ದುಃಖ ಪಡುತ್ತಾರೆ. ಈ ರೀತಿ ಏನಾದರೂ ಆಗುತ್ತಿದ್ದರೆ ಅಥವಾ ಬಹಳಷ್ಟು ಪ್ರಯತ್ನ ಮಾಡಿಯೂ ಕೂಡ ಅಪೇಕ್ಷೆಯ ರೀತಿಯಲ್ಲಿ ಯಶಸ್ಸು ದೊರೆಯದಿದ್ದರೆ ಆಗ ಆ ದುಃಖದ ಹಿಂದಿನ ಕಾರಣ ಬಹಳಷ್ಟು ಸಲ ಆಧ್ಯಾತ್ಮಿಕವಾಗಿರುತ್ತದೆ ಎಂದು ಅರ್ಥೈಸಿಕೊಳ್ಳಬಹುದು.

ಅಂದರೆ ಯಾವಾಗ ದುಃಖದ ಕಾರಣವನ್ನು ಬುದ್ಧಿಯಿಂದ ವಿಶ್ಲೇಷಿಸಲು ಸಾಧ್ಯವಿಲ್ಲವೋ ಅಂತಹ ದುಃಖಗಳು ಆಧ್ಯಾತ್ಮಿಕ ಸ್ವರೂಪದ್ದಾಗಿರುತ್ತವೆ. ಹಾಗಾಗಿ ಈ ಆಧ್ಯಾತ್ಮಿಕ ದುಃಖದ ನಿವಾರಣೆಗಾಗಿ ಸಾಧನೆ ಮಾಡುವುದು ಆವಶ್ಯಕವಾಗಿರುತ್ತದೆ.

ಈ. ಸಕಾಮ ಮತ್ತು ನಿಷ್ಕಾಮ ಸಾಧನೆ

ಧರ್ಮ ಏನು ಹೇಳುತ್ತದೆ ಎಂದು ನೋಡೋಣ. ಮನುಷ್ಯ ಜನ್ಮದ ಸಾರ್ಥಕತೆ ಮೋಕ್ಷ ಪ್ರಾಪ್ತಿಯಲ್ಲಿಯೇ ಇದೆ ಎಂದು ಧರ್ಮ ಹೇಳುತ್ತದೆ. ಮೋಕ್ಷ ಪ್ರಾಪ್ತಿಗಾಗಿ ಪ್ರತಿದಿನ ಕನಿಷ್ಠ ೨ ರಿಂದ ೩ ಗಂಟೆ ಶರೀರ, ಮನಸ್ಸು ಮತ್ತು ಬುದ್ಧಿಯಿಂದ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆಯೋ ಅದಕ್ಕೆ ಸಾಧನೆ ಎನ್ನುತ್ತಾರೆ. ಸಾಧನೆಯಲ್ಲಿ ಎರಡು ಪ್ರಕಾರಗಳಿವೆ. ಒಂದು ಎಂದರೆ ಸಕಾಮ ಸಾಧನೆ ಮತ್ತು ಇನ್ನೊಂದು ನಿಷ್ಕಾಮಸಾಧನೆ.

ಸಕಾಮ ಸಾಧನೆ ಎಂದರೇನು? ವೈಯಕ್ತಿಕ ಅಪೇಕ್ಷೆಗಳ ಪೂರ್ತಿಗಾಗಿ, ಉದಾಹರಣೆ ಕುಟುಂಬದ ಕಲ್ಯಾಣ ಆಗಬೇಕು, ವಿವಾಹ ಕೂಡಿ ಬರುವುದರಲ್ಲಿ ಬರುವ ಅಡಚಣೆಗಳು ದೂರವಾಗಬೇಕು, ವ್ಯವಸಾಯದಲ್ಲಿ ಸ್ಥಿರತೆ ಬರಬೇಕು, ಈ ರೀತಿಯ ಉದ್ದೇಶಪೂರ್ತಿಗಾಗಿ ಮಾಡುವ ಸಾಧನೆ ಎಂದರೆ ಸಕಾಮ ಸಾಧನೆ. ನಿಷ್ಕಾಮ ಸಾಧನೆ ಅಂದರೆ, ಯಾವುದೇ ಅಪೇಕ್ಷೆ ಇಲ್ಲದೆ ಕೇವಲ ಭಗವಂತನ ಭಕ್ತಿಗಾಗಿ ಮಾಡುವ ಸಾಧನೆ!

ಸಕಾಮ ಸಾಧನೆಯಿಂದ ಇಚ್ಛಾಪೂರ್ತಿ ಆದರೆ ನಿಷ್ಕಾಮ ಸಾಧನೆಯಿಂದ ಆಧ್ಯಾತ್ಮಿಕ ಉನ್ನತಿ !

ಸಕಾಮ ಸಾಧನೆ ಮಾಡಿದರೆ ಆಗ ಕಾಮನೆಗಳು ಅಂದರೆ ಇಚ್ಛೆಗಳು ಪೂರ್ಣವಾಗುತ್ತವೆ ಮತ್ತು ನಿಷ್ಕಾಮ ಸಾಧನೆ ಮಾಡಿದರೆ ಆಗ ಆಧ್ಯಾತ್ಮಿಕ ಉನ್ನತಿ ಆಗಿ ಇಚ್ಛಾ ಪೂರ್ತಿ ಕೂಡ ಆಗಬಹುದು; ಇದರ ಕಾರಣ ಏನಂದರೆ ‘ನನ್ನ ನಿಷ್ಕಾಮ ಭಕ್ತನ ಇಚ್ಛೆಗಳನ್ನು ನಾನು ಪೂರ್ಣಗೊಳಿಸುತ್ತೇನೆ’ ಎಂದು ಭಗವಂತನು ವಚನ ನೀಡಿದ್ದಾನೆ. ಸಕಾಮ ಸಾಧನೆ ಮಾಡುವವರು ಸಕಾಮದಲ್ಲಿ ಎಂದರೆ ವ್ಯವಹಾರದಲ್ಲಿ ಫಲ ಪಡೆಯಬಹುದು; ಆದರೆ ಅವರಿಗೆ ಈಶ್ವರಪ್ರಾಪ್ತಿ ಆಗುವುದಿಲ್ಲ. ಈಶ್ವರಪ್ರಾಪ್ತಿಯೇ ಮನುಷ್ಯ ಜನ್ಮದ ಧ್ಯೇಯ ಆಗಿದೆ. ಮತ್ತು ಸಾಧನೆ ನಿಷ್ಕಾಮವಾದರೆ, ಆಗ ಮೋಕ್ಷಪ್ರಾಪ್ತಿ ಸಾಧ್ಯವಾಗುತ್ತದೆ.

ಜೀವನದಲ್ಲಿ ಬರುವ ದುಃಖದ ನಿವಾರಣೆಗಾಗಿ ಸಾಧನೆ ಮಾಡುವುದು ಆವಶ್ಯಕವಾಗಿದೆ ಎಂದು ನಾವು ಈಗ ತಿಳಿದುಕೊಂಡಿದ್ದೇವೆ. ಈ ಸಾಧನೆ ನಿಷ್ಕಾಮ ಭಾವದಿಂದ ಮಾಡಿದರೆ ಆಗ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಅಂದರೆ ಜನನ ಮರಣದ ಚಕ್ರದಿಂದ ಮುಕ್ತಿ ಪಡೆದು ಮೋಕ್ಷಪ್ರಾಪ್ತಿ ಆಗುತ್ತದೆ.

ಕರ್ಮಫಲ ಸಿದ್ಧಾಂತ

ಪ್ರತಿಯೊಬ್ಬರೂ ಕರ್ಮದ ಫಲವನ್ನು ಭೋಗಿಸಲೇಬೇಕು!

ಶುಭಕರ್ಮದಿಂದ ಪುಣ್ಯ ಮತ್ತು ಅಶುಭಕರ್ಮದಿಂದ ಪಾಪ ಪಾಲಿಗೆ ಬರುತ್ತದೆ.

ಹಿಂದೂ ಧರ್ಮದಲ್ಲಿ ಎರಡು ಸಿದ್ದಾಂತಗಳನ್ನು ಹೇಳಿದ್ದಾರೆ, ಮೊದಲನೆಯದು ಕರ್ಮಫಲ ಸಿದ್ಧಾಂತ ಮತ್ತು ಎರಡನೆಯದು ಪುನರ್ಜನ್ಮ ಸಿದ್ಧಾಂತ. ಕರ್ಮಫಲ ಸಿದ್ದಾಂತ ಏನು ಹೇಳುತ್ತದೆ ಅಂದರೆ ಮಾಡುವ ಪ್ರತಿಯೊಂದು ಕರ್ಮದ ಫಲವನ್ನು ವ್ಯಕ್ತಿಗಳು ಭೋಗಿಸಲೇಬೇಕಾಗುತ್ತದೆ. ಶುಭ ಕರ್ಮ ಮಾಡಿದರೆ ಪುಣ್ಯ ದೊರೆಯುತ್ತದೆ, ಮತ್ತು ಅಶುಭಕರ್ಮ ಮಾಡಿದರೆ ಪಾಪ ಭೋಗಿಸಬೇಕಾಗುತ್ತದೆ, ಉದಾಹರಣೆ ತಂದೆ ತಾಯಿಯ ಕಾಳಜಿ ವಹಿಸುವುದು, ದೇವಸ್ಥಾನಗಳಿಗೆ ದಾನ ನೀಡುವುದು, ಮುಂತಾದ ಕರ್ಮಗಳಿಂದ ಪುಣ್ಯ ದೊರೆಯುತ್ತದೆ ಮತ್ತು ಇತರರಿಗೆ ಸುಳ್ಳು ಹೇಳುವುದು, ಚುಚ್ಚಿ ಮಾತನಾಡುವುದು, ಕಳ್ಳತನ ಮಾಡುವುದು, ಮುಂತಾದ ಕರ್ಮಗಳಿಂದ ಪಾಪ ತಗಲುತ್ತದೆ. ಪುಣ್ಯಪ್ರಾಪ್ತಿಯ ಫಲಸ್ವರೂಪದಲ್ಲಿ ಸುಖ ದೊರೆಯುತ್ತದೆ, ಹಾಗೂ ಪಾಪದಿಂದ ದುಃಖ ಭೋಗಿಸಬೇಕಾಗುತ್ತದೆ .

ಒಬ್ಬ ಕಳ್ಳತನ ಮಾಡಿದ್ದಾನೆ ಆದರೆ ಅವನು ಸಿಕ್ಕಿಬೀಳಲಿಲ್ಲ ಎಂದಿಟ್ಟುಕೊಳ್ಳಿ, ಅಂದರೆ ಆ ಕಳ್ಳನಿಗೆ ವ್ಯಾವಹಾರಿಕ ಜಗತ್ತಿನಲ್ಲಿ ಶಿಕ್ಷೆ ದೊರೆಯದೆ ಇರಬಹುದು. ಆ ಕಳ್ಳ ಲೌಕಿಕ ಜಗತ್ತಿನಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಆದರೆ ಭಗವಂತನ ದರಬಾರಿನಲ್ಲಿ ಅಲ್ಲ. ಭಗವಂತನ ಹತ್ತಿರ ಮಾನವನ ಪ್ರತಿಯೊಂದು ಒಳ್ಳೆಯ ಮತ್ತು ಕೆಟ್ಟ ಕರ್ಮದ ನೋಂದಣಿ ಇರುತ್ತದೆ. ಪ್ರತಿಯೊಂದು ವ್ಯಕ್ತಿಯ ಕಾಯಾ ವಾಚಾ ಮನಸಾ (ಶರೀರ, ಮನಸ್ಸು ಮತ್ತು ವಾಣಿಯಿಂದ) ಆಗುವ ಪ್ರತಿಯೊಂದು ಒಳ್ಳೆಯ – ಕೆಟ್ಟ ಕೃತಿಯ ಲೆಕ್ಕಾಚಾರವನ್ನು ಭಗವಂತ ಇಡುತ್ತಾನೆ.

ಅ. ಕರ್ಮದ ಫಲ ಉದ್ದೇಶದ ಮೇಲೆಯೂ ಅವಲಂಬಿಸಿರುತ್ತದೆ !

ಕರ್ಮದ ಫಲವು ಕರ್ಮ ಮಾಡುವವರ ಉದ್ದೇಶದ ಮೇಲೆಯೂ ಅವಲಂಬಿಸಿರುತ್ತದೆ. ಒಬ್ಬ ರೌಡಿ (ಗೂಂಡಾ) ಒಬ್ಬ ವ್ಯಕ್ತಿಯ ಕಾಲು ಕತ್ತರಿಸುವುದು ಮತ್ತು ಒಬ್ಬ ಡಾಕ್ಟರ್‌ರು ಶಸ್ತ್ರಕ್ರಿಯೆ ಮಾಡಿ ಕಾಲು ಕತ್ತರಿಸುವುದು ಈ ಎರಡು ಪ್ರಸಂಗಗಳಲ್ಲಿ ಕೃತಿ ಸಮಾನ ರೀತಿಯದ್ದಾಗಿದ್ದರೂ ಅದರ ಉದ್ದೇಶ ಬೇರೆ ಬೇರೆ ಆಗಿದೆ. ರೌಡಿಯ ಉದ್ದೇಶ ವ್ಯಕ್ತಿಗೆ ತೊಂದರೆ ಕೊಡುವುದಾಗಿರುತ್ತದೆ ಡಾಕ್ಟರರ ಉದ್ದೇಶ ವ್ಯಕ್ತಿಯ ಪ್ರಾಣ ಉಳಿಸುವುದಾಗಿರುತ್ತದೆ. ಅದೇ ರೀತಿ ಕರ್ಮದ ಫಲವು ಅದರ ಉದ್ದೇಶದ ಮೇಲೆ ಕೂಡ ಅವಲಂಬಿಸಿರುತ್ತದೆ.

ಆ. ಕಲಿಯುಗದಲ್ಲಿ ಪ್ರಾರಬ್ಧದ ಹಾಗೂ ಕ್ರಿಯಮಾಣ ಕರ್ಮದ ಪ್ರಮಾಣ

ಹಿಂದೂ ಧರ್ಮದಲ್ಲಿ ಪುನರ್ಜನ್ಮ ಸಿದ್ದಾಂತ ಕೂಡ ಹೇಳಲಾಗಿದೆ. ಕರ್ಮ ಫಲಸಿದ್ಧಾಂತ ಮತ್ತು ಪುನರ್ಜನ್ಮ ಸಿದ್ಧಾಂತ ಇವು ಪರಸ್ಪರ ಪೂರಕವಾಗಿವೆ. ವ್ಯಕ್ತಿಯಿಂದ ಆಗಿರುವ ಪುಣ್ಯಕರ್ಮ ಮತ್ತು ಪಾಪ ಕರ್ಮಗಳ ಫಲವನ್ನು ವ್ಯಕ್ತಿಗೆ ಇದೇ ಜನ್ಮದಲ್ಲಿ ಭೋಗಿಸಬೇಕಾಗುತ್ತದೆ ಎಂದೇನಿಲ್ಲ, ಕೆಲವು ಬಾರಿ ಅದು ಮುಂದಿನ ಜನ್ಮದಲ್ಲಿ ಕೂಡ ಭೋಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಳೆದ ಜನ್ಮದಲ್ಲಿ ಮಾಡಿದ ಕರ್ಮದ ಫಲ ನಾವು ಈ ಜನ್ಮದಲ್ಲಿ ಭೋಗಿಸುತ್ತೇವೆ. ಅದನ್ನು ಪ್ರಾರಬ್ಧ ಎನ್ನುತ್ತಾರೆ. ಇದನ್ನೇ ನಾವು ಸಾಮಾನ್ಯ ಭಾಷೆಯಲ್ಲಿ ಹಣೆಬರಹ (ನಸೀಬು) ಎನ್ನುತ್ತೇವೆ. ಅಧ್ಯಾತ್ಮವು ಇದರ ಬಗ್ಗೆ ಮುಂದಿನಂತೆ ಹೇಳಿದೆ – ಕಲಿಯುಗದಲ್ಲಿ ಮನುಷ್ಯನ ಜೀವನದಲ್ಲಿ ಘಟಿಸುವ ಶೇಕಡ ೬೫ ಘಟನೆಗಳು ಇವು ಪ್ರಾರಬ್ಧದ ಆಧೀನವಾಗಿರುತ್ತವೆ ಮತ್ತು ಶೇಕಡ ೩೫ ಕ್ರಿಯಮಾಣ ಕರ್ಮ ಅಂದರೆ ಪ್ರಯತ್ನ ವ್ಯಕ್ತಿಯ ಕೈಯಲ್ಲಿ ಇರುತ್ತದೆ. ಇದರ ಅರ್ಥ ಆಯುಷ್ಯದಲ್ಲಿ ಶೇಕಡ ೬೫ ರಷ್ಟು ಘಟನೆಗಳು ಕಳೆದ ಜನ್ಮದ ಕರ್ಮಗಳ ಫಲಗಳೆಂದು ನಮ್ಮ ಪಾಲಿಗೆ ಬಂದಿರುತ್ತವೆ.

ಉದಾಹರಣೆಗೆ, ೨ ವಿದ್ಯಾರ್ಥಿಗಳು ಒಂದೇ ವರ್ಷ ಸಮಾನ ಅಂಕಗಳು ಪಡೆದು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಒಬ್ಬನಿಗೆ ತಕ್ಷಣ ನೌಕರಿ ಸಿಗುತ್ತದೆ ಹಾಗೂ ಇನ್ನೊಬ್ಬನಿಗೆ ಬಹಳ ಸಂಘರ್ಷ ಮಾಡಬೇಕಾಗುತ್ತದೆ. ಅವಳಿ ಮಕ್ಕಳಲ್ಲಿ ಒಂದು ಸದೃಢವಾಗಿರುತ್ತದೆ, ಇನ್ನೊಂದಕ್ಕೆ ಶಾರೀರಿಕ ತೊಂದರೆ ಇರುತ್ತದೆ. ಈ ರೀತಿಯ ಅನೇಕ ಉದಾಹರಣೆಗಳನ್ನು ನಾವು ನಮ್ಮ ಸುತ್ತಮುತ್ತಲೂ ನೋಡುತ್ತೇವೆ ಅಥವಾ ಅನುಭವಿಸಿರುತ್ತೇವೆ. ಆದರೆ ಹೀಗೆ ಏಕೆ ಆಗುತ್ತದೆ ಎಂಬುದನ್ನು ಆಧುನಿಕ ವಿಜ್ಞಾನ ಉತ್ತರಿಸದು. ವಿಜ್ಞಾನಕ್ಕೆ ‘ವ್ಯಕ್ತಿಯು ಸುಖ ಪ್ರಾಪ್ತಿಗಾಗಿ ಪ್ರಯತ್ನ ಮಾಡುತ್ತಿದ್ದರೂ ಕೂಡ ವ್ಯಕ್ತಿಯ ಪಾಲಿಗೆ ದುಃಖ ಏಕೆ ಬರುತ್ತದೆ’ ಎಂದು ಬಿಡಿಸಿ ಹೇಳಲು ಸಾಧ್ಯವಿಲ್ಲ. ಆದರೆ ಇದರ ಉತ್ತರ ಅಧ್ಯಾತ್ಮದಲ್ಲಿ ಸಿಗುತ್ತದೆ. ಬಹಳಷ್ಟು ಸಲ ವ್ಯಕ್ತಿಯ ಪಾಲಿಗೆ ಬರುವ ದುಃಖದ ಕಾರಣ ಪೂರ್ವಜನ್ಮದ ಪಾಪಕರ್ಮ ಇರಬಹುದು.

ಸಾಧನೆಯ ಮಹತ್ವ

ಅ. ಸಾಧನೆಯಿಂದ ಪ್ರಾರಬ್ಧ ಸಹ್ಯವಾಗುತ್ತದೆ

ಸಾಧನೆಯ ಲಾಭ

ಜೀವನದಲ್ಲಾಗುವ ಘಟನೆಗಳ ಮೇಲೆ ಪ್ರಾರಬ್ಧದ್ದೇ ಪ್ರಭಾವ ಇರಲಿಕ್ಕಿದೆ ಎಂದಾದರೆ ಸಾಧನೆ ಮಾಡುವುದರಿಂದ ಏನು ಲಾಭವಾಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ  ಮೂಡಿರಬಹುದು. ಇದರ ಉತ್ತರ ಏನೆಂದರೆ ವ್ಯಕ್ತಿಯು ಪ್ರಾರಬ್ಧ ಭೋಗ ಭೋಗಿಸಿ ತೀರಿಸಬೇಕಾಗಿದ್ದರೂ ಸಾಧನೆ ಮಾಡುವುದರಿಂದ ಆ ಭೋಗವನ್ನು ಭೋಗಿಸಲು ಸುಲಭವಾಗುತ್ತದೆ. ಹೇಗೆ ಶಸ್ತ್ರಕ್ರಿಯೆ ಮಾಡುವ ಮೊದಲು ಅರಿವಳಿಕೆಯ ಮದ್ದು ನೀಡುವುದರಿಂದ ಶರೀರಕ್ಕೆ ಶಸ್ತ್ರಕ್ರಿಯೆಯ ಅರಿವು ಆಗುವುದಿಲ್ಲವೋ ಅಥವಾ ವೇದನೆಯಾಗುವುದಿಲ್ಲವೋ ಅದೇ ರೀತಿ ಸಾಧನೆಯಿಂದ ಪ್ರಾರಬ್ಧ ಭೋಗಿಸಲು ಶಕ್ತಿ ದೊರೆಯುತ್ತದೆ. ಸಾಧನೆಯ ಶಕ್ತಿಯಿಂದ ದುಃಖವು ದುಃಖ ಎಂದೆನಿಸುವುದಿಲ್ಲ ತದ್ವಿರುದ್ಧ ದುಃಖದ ಬೆಟ್ಟ ಇದ್ದರೂ ಕೂಡ ಭಗವಂತ ಭಕ್ತನ ರಕ್ಷಣೆ ಮಾಡುತ್ತಾನೆ ಎಂಬುವುದರ ಅನುಭೂತಿ ಬರಬಹುದು.

ಇದರ ಒಂದು ಉತ್ತಮ ಉದಾಹರಣೆ ಎಂದರೆ ಸಂತ ಮೀರಾಬಾಯಿ! ಮೀರಾಬಾಯಿ ರಾಜಮನೆತನದವರಾಗಿದ್ದರು. ಬಾಲ್ಯದಿಂದಲೇ ಶ್ರೀಕೃಷ್ಣನ ಭಕ್ತೆ. ಆ ಶ್ರೀಕೃಷ್ಣನ ಭಕ್ತಿ ಅವರ ಅತ್ತೆಯ ಮನೆಯ ಜನರಿಗೆ ಹಿಡಿಸುತ್ತಿರಲಿಲ್ಲ; ಆದ್ದರಿಂದ ಅವರು ಮೀರಾಬಾಯಿ ಇವರನ್ನು ಸಾಯಿಸಲು ಅನೇಕ ರೀತಿಯ ಪ್ರಯತ್ನ ಮಾಡಿದರು. ಮೀರಾಬಾಯಿಗೆ ವಿಷ ನೀಡಿದರು; ಆದರೆ ಮೀರಾಬಾಯಿಯ ಅತ್ಯುನ್ನತ ಭಕ್ತಿಯಿಂದ ಈ ವಿಷದಿಂದ ಯಾವುದೇ ರೀತಿಯ ಪರಿಣಾಮವಾಗಲಿಲ್ಲ.

ಸಾಧನೆಯ ಶಕ್ತಿ ಮತ್ತು ಭಕ್ತಿ ಇದ್ದರೆ, ಆಗ ಭಗವಂತ ಪ್ರಾರಬ್ಧವನ್ನು ಹೇಗೆ ಸುಲಭ ಮಾಡುತ್ತಾನೆ ಅಥವಾ ಪ್ರಾರಬ್ಧದ ತೀವ್ರತೆಯನ್ನು ನಾಶ ಮಾಡುತ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಈ ಉದಾಹರಣೆಯ ಜೊತೆಗೆ ಮನುಷ್ಯನ ಕೈಯಲ್ಲಿರುವ ಶೇಕಡ 35 ಕ್ರಿಯಮಾಣದಿಂದ ಪ್ರಾರಬ್ಧವನ್ನು ಸುಲಭವಾಗಿ ಜಯಿಸಬಹುದು, ಇದನ್ನು ಯಾವಾಗಲೂ ಗಮನದಲ್ಲಿಡಬೇಕು. ಈ ಕ್ರಿಯಮಾಣಕರ್ಮ ಎಂದರೆ ಬೇರೇನೂ ಅಲ್ಲ; ಪ್ರತ್ಯಕ್ಷ ಸಾಧನೆ ಮಾಡುವುದಾಗಿದೆ.

ಆ. ಜನನ ಮರಣದ ಚಕ್ರದಿಂದ ಮುಕ್ತಿ ಪಡೆಯುವುದಕ್ಕಾಗಿ ಸಾಧನೆ ಆವಶ್ಯಕ

ಆಧ್ಯಾತ್ಮಿಕ ಉನ್ನತಿಯಾಗಿ ಮುಕ್ತಿ ದೊರೆಯುವವರೆಗೆ ಆತ್ಮವು ಮತ್ತೆಮತ್ತೆ ಜನಿಸುತ್ತದೆ

ಹೇಗೆ ಶೈಕ್ಷಣಿಕ ಪ್ರಗತಿ ಆಗಲು ಶಿಕ್ಷಣವನ್ನು ಪಡೆಯಬೇಕಾಗುತ್ತದೆಯೋ ಹಾಗೆಯೇ ಆಧ್ಯಾತ್ಮಿಕ ಪ್ರಗತಿಗಾಗಿ ಸಾಧನೆಯನ್ನು ಮಾಡಬೇಕಾಗುತ್ತದೆ

ಓರ್ವ ವ್ಯಕ್ತಿ ಜೀವನಪರ್ಯಂತ ಪುಣ್ಯಕರ್ಮ ಮಾಡುತ್ತಿದ್ದು ಅವನು ಸಾಧನೆ ಮಾಡದಿದ್ದರೆ ಆಗ ಅವನಿಗೆ ಜನನ ಮರಣದ ಚಕ್ರದಿಂದ ಮುಕ್ತಿ ದೊರೆಯುವುದೇ? ಇಲ್ಲ. ಇದಕ್ಕೆ ಕಾರಣವೆಂದರೆ ಆ ವ್ಯಕ್ತಿಗೆ ಮೃತ್ಯುವಿನ ನಂತರ ಒಳ್ಳೆಯ ಕರ್ಮದಿಂದ ಸ್ವರ್ಗಪ್ರಾಪ್ತಿ ಆಗುತ್ತದೆ. ಪುಣ್ಯ ಬಲದ ಸಂಗ್ರಹ ಇರುವವರೆಗೂ ಆ ವ್ಯಕ್ತಿ ಅಲ್ಲಿ ಇರುತ್ತಾನೆ ಮತ್ತು ಪುಣ್ಯದ ಬಲ ಮುಗಿದ ನಂತರ ಅವನು ಪೃಥ್ವಿಯಲ್ಲಿ ಕಳೆದ ಜನ್ಮದ ಪ್ರಾರಬ್ಧ ಭೋಗಿಸಲು ಪುನರ್ಜನ್ಮ ಪಡೆಯಬೇಕಾಗುತ್ತದೆ.

ಪಾಪಕರ್ಮ ಮಾಡುವ ವ್ಯಕ್ತಿಯ ಆಧ್ಯಾತ್ಮಿಕ ಪತನವಾಗುತ್ತದೆ ಮತ್ತು ಮೃತ್ಯುವಿನ ನಂತರ ತಕ್ಷಣ ಮತ್ತೆ ಮನುಷ್ಯ ಯೋನಿಯಲ್ಲಿ ಜನ್ಮ ಸಿಗುವುದಿಲ್ಲ, ಆಗ ಕ್ರಿಮಿಕೀಟ, ಪಶು-ಪಕ್ಷಿ, ವೃಕ್ಷ ಹೀಗೆ 84 ಲಕ್ಷ ಕನಿಷ್ಠ ಯೋನಿಗಳಲ್ಲಿ ಜನ್ಮ ಪಡೆಯಬೇಕಾಗುತ್ತದೆ. ಈ ರೀತಿ ಸಾಧನೆ ಮಾಡದಿದ್ದರೆ ‘ಪುನರಪಿ ಜನನಂ ಪುನರಪಿ ಮರಣಂ’ ಇದು ಮುಂದುವರೆಯುತ್ತಿರುತ್ತದೆ.

ಆದ್ದರಿಂದ ಮನುಷ್ಯ ಯೋನಿಗೆ ಅಥವಾ ಮನುಷ್ಯ ಜನ್ಮಕ್ಕೆ ಬಹಳ ಮಹತ್ವ ಇದೆ. ಶಂಕರಾಚಾರ್ಯರು ಮನುಷ್ಯ ಜನ್ಮ ಲಭಿಸುವುದು ದುರ್ಲಭ ಎಂದು ಹೇಳಿದ್ದಾರೆ; ಏಕೆಂದರೆ ಮನುಷ್ಯ ಜನ್ಮ ದೊರೆತನಂತರ ಮಾತ್ರ ಸಾಧನೆ ಮಾಡಬಹುದು ಮತ್ತು ಜನನ ಮರಣದ ಚಕ್ರದಿಂದ ಪಾರಾಗಬಹುದು.

ಇ. ಮನುಷ್ಯ ಜನ್ಮ ಮತ್ತೆ ಮತ್ತೆ ಪಡೆಯುವ ಕಾರಣಗಳು

೧. ಪ್ರಾರಬ್ಧ ಭೋಗಿಸಿ ಮುಗಿಸುವುದು .

೨. ಮೋಕ್ಷ ಪ್ರಾಪ್ತಿಗಾಗಿ ಸಾಧನೆ ಮಾಡಿ ಜನನ ಮರಣದ ಚಕ್ರದಿಂದ ಮುಕ್ತಿ ಪಡೆಯುವುದು.

ಮನುಷ್ಯ ಜನ್ಮ ದೊರೆತಿದೆ ಆದರೂ ಸಾಧನೆ ಮಾಡದಿದ್ದರೆ ಎರಡು ಕಾರಣಕ್ಕಾಗಿ ಮತ್ತೆ ಮತ್ತೆ ಅವರ ಜನನ ಆಗುತ್ತದೆ; ಮೊದಲ ಕಾರಣ ಎಂದರೆ ಪ್ರಾರಬ್ಧ ಭೋಗ ಭೋಗಿಸಿ ಮುಗಿಸುವುದು ಮತ್ತು ಇನ್ನೊಂದು ಕಾರಣ ಎಂದರೆ ಮೋಕ್ಷ ಪ್ರಾಪ್ತಿಗಾಗಿ ಸಾಧನೆ ಮಾಡಿ ಜನನ ಮರಣದ ಚಕ್ರದಿಂದ ಪಾರಾಗುವುದು. ಆದರೆ ಇದರ ಕಡೆಗೆ ನಮ್ಮ ಗಮನ ಇರುವುದಿಲ್ಲ, ಅಥವಾ ಈ ವಿಷಯ ನಮಗೆ ತಿಳಿದಿರುವುದೇ ಇಲ್ಲ. ಆದ್ದರಿಂದ ಮನೆ, ಬಂಗಲೆ, ನೌಕರಿ, ವಾಹನ, ಹಣ ಇದರಲ್ಲಿಯೇ ಅನೇಕರು ಸಿಲುಕಿರುತ್ತಾರೆ.

ಒಳ್ಳೆಯ ಸಾಧನೆ ಮಾಡಿದರೆ, ಆಗ ಸಾಧನೆಯ ತಪೋಬಲದಿಂದ ಹಾಗೂ ಸಂತರ ಕೃಪೆಯಿಂದ ಪ್ರಾರಬ್ಧ ನಾಶವಾಗಿ ಜನನ ಮರಣದ ಚಕ್ರದಿಂದ ಮುಕ್ತಿ ದೊರೆಯುತ್ತದೆ, ಅಂದರೆ ಮೃತ್ಯುವಿನ ನಂತರ ಮತ್ತೆ ಪೃಥ್ವಿಯಲ್ಲಿ ಜನ್ಮ ಪಡೆಯಬೇಕಾಗಿಲ್ಲ. ಸಾಧನೆ ಮಾಡುವ ವ್ಯಕ್ತಿಗೆ ಮೃತ್ಯುವಿನ ನಂತರ ಸದ್ಗತಿ ದೊರೆಯುತ್ತದೆ. ಅಂದರೆ ಮೃತ್ಯುವಿನ ನಂತರ ಸ್ವರ್ಗ ಲೋಕದಕಿಂತಲೂ ಮುಂದಿನ ಲೋಕಕ್ಕೆ ಎಂದರೆ ಮಹಾ, ಜನ, ಜಪ ಮತ್ತು ಸತ್ಯ ಈ ಉನ್ನತ ಲೋಕಗಳಲ್ಲಿ ಮುಂದಿನ ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬಹುದು. ಇದು ಸಾಧನೆಯ ಮಹತ್ವವಾಗಿದೆ.

ಕರ್ಮಫಲಸಿದ್ದಾಂತ ಅಥವಾ ಪುನರ್ಜನ್ಮ ಸಿದ್ದಾಂತ ಇದರ ಮೇಲೆ ಶ್ರದ್ಧೆ ಇರಲಿ ಅಥವಾ ಇಲ್ಲದಿರಲಿ, ಕರ್ಮದ ಫಲ ಬೇಕಿರಲಿ ಅಥವಾ ಬೇಡವಾಗಿರಲಿ ಅದು ಪ್ರತಿಯೊಬ್ಬರಿಗೂ ದೊರೆಯುತ್ತದೆ.

ಇಲ್ಲಿಯವರೆಗಿನ ವಿವೇಚನೆಯಿಂದ ನಮ್ಮ ಪಾಲಿಗೆ ಬರುವ ಸುಖ-ದುಃಖ ಇವು ಹೆಚ್ಚಾಗಿ ನಮ್ಮ ಪೂರ್ವಜನ್ಮದ ಕರ್ಮದ ಫಲವಾಗಿರುತ್ತವೆ ಎಂದು ಗಮನಕ್ಕೆ ಬಂದಿರಬಹುದು. ಪಾಪ ಪುಣ್ಯದ ಆಚೆಗೆ ಹೋಗಿ ಮೋಕ್ಷಪ್ರಾಪ್ತಿ ಸಾಧ್ಯಗೊಳಿಸಬೇಕೆಂದಾದರೆ ಸಾಧನೆಗೆ ಪರ್ಯಾಯವಿಲ್ಲ. ಹಾಗಾಗಿ ಕಾಲಕ್ಕನುಸಾರ ಸಾಧನೆಯ ಒಂದು ಮಹತ್ವದ ಮತ್ತು ಅವಶ್ಯಕ ಭಾಗವನ್ನು ಈಗ ನಾವು ತಿಳಿದುಕೊಳ್ಳೋಣ.

ಕಲಿಯುಗದಲ್ಲಿ ನಾಮಸ್ಮರಣೆ ಇದೇ ಸಾಧನೆ ಆಗಿದೆ. ಬಹಳಷ್ಟು ಕಡೆ ಏನು ಕಂಡುಬರುತ್ತದೆ ಅಂದರೆ, ಅನೇಕ ಜನರು ತಮ್ಮ ಇಷ್ಟದೇವತೆ ಅಥವಾ ಅವರಿಗೆ ಹಿಡಿಸುವ ರೀತಿಯಲ್ಲಿ ನಾಮಸ್ಮರಣೆ ಮಾಡುತ್ತಾರೆ. ಸ್ಮರಿಸುವ ಒಂದು ನಾಮ ಕೂಡ ವ್ಯರ್ಥವಾಗುವುದಿಲ್ಲ, ಆದ್ದರಿಂದ ಇಷ್ಟ ದೇವತೆಯ ನಾಮಸ್ಮರಣೆ ಮಾಡುವುದು ಒಳ್ಳೆಯದೇ; ಆದರೆ ಅದರ ಜೊತೆಗೆ ಕಾಲಾನುಸಾರ ಕುಲದೇವತೆಯ ನಾಮಸ್ಮರಣೆ ಮಾಡುವುದು ಕೂಡ ಆವಶ್ಯಕವಾಗಿದೆ.

ಕುಲದೇವತೆಯ ನಾಮಜಪದ ಮಹತ್ವ

ಅ. ಕುಲದೇವತೆಯ ನಾಮಜಪದಿಂದ ಆಧ್ಯಾತ್ಮಿಕ ಉನ್ನತಿಗೆ ಆರಂಭ

ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಯಾವ ದೇವತೆಯ ಉಪಾಸನೆ ಮಾಡುವುದು ಅವಶ್ಯಕವಾಗಿರುತ್ತದೆಯೋ ಅಂತಹ ಕುಲದಲ್ಲಿ ಭಗವಂತನು ನಮಗೆ ಜನ್ಮ ನೀಡಿರುತ್ತಾನೆ. ಆ ದೇವತೆಗೆ ಕುಲದ ಕುಲದೇವತೆ ಎನ್ನುತ್ತಾರೆ. ಕುಲದೇವತೆ ಈ ಶಬ್ದ ಕುಲ ಮತ್ತು ದೇವತಾ ಈ ಎರಡು ಪದಗಳು ಸೇರಿ ತಯಾರಾಗಿದೆ. ಕುಲದ ದೇವತೆಯೇ ಕುಲದೇವತೆ. ಕುಲದೇವತೆಯ ಉಪಾಸನೆ ಮಾಡುವುದರಿಂದ ಮೂಲಾಧಾರ ಚಕ್ರದಲ್ಲಿರುವ ಕುಂಡಲಿನಿ ಶಕ್ತಿ ಜಾಗೃತವಾಗುತ್ತದೆ, ಅಂದರೆ ಆಧ್ಯಾತ್ಮಿಕ ಉನ್ನತಿ ಆರಂಭವಾಗುತ್ತದೆ. ಪಂಚಮಹಾಭೂತಗಳಲ್ಲಿ ಶ್ರೀ ಕುಲದೇವತೆಯು ಪೃಥ್ವಿತತ್ತ್ವದ ದೇವತೆ ಆಗಿರುವುದರಿಂದ ಕುಲದೇವತೆಯ ಉಪಾಸನೆಯಿಂದ ಸಾಧನೆಯನ್ನು ಆರಂಭಿಸಿದರೆ ನಾಮಸ್ಮರಣೆ ಮಾಡುವವರಿಗೆ ಯಾವುದೇ ತೊಂದರೆ ಆಗುವುದಿಲ್ಲ.

ಆ. ಬ್ರಹ್ಮಾಂಡದಲ್ಲಿರುವ ಎಲ್ಲ ದೇವತೆಗಳ ತತ್ತ್ವಗಳ ಲಾಭ

ಬ್ರಹ್ಮಾಂಡದಲ್ಲಿ ಇರುವ ಎಲ್ಲಾ ತತ್ತ್ವಗಳು ಪಿಂಡದಲ್ಲಿ ಬಂದರೆ ಆಗ ಸಾಧನೆಯು ಪೂರ್ಣವಾಗುತ್ತದೆ. ಶ್ರೀ ವಿಷ್ಣು, ಶಿವ ಮತ್ತು ಶ್ರೀ ಗಣಪತಿಯಂತಹ ದೇವತೆಗಳ ಉಪಾಸನೆಯಿಂದ ಆಯಾ ದೇವತೆಗಳ ವಿಶಿಷ್ಟ ತತ್ತ್ವ ಹೆಚ್ಚುತ್ತದೆ, ಆದರೆ ಬ್ರಹ್ಮಾಂಡದಲ್ಲಿ ಇರುವ ಎಲ್ಲಾ ತತ್ತ್ವಗಳನ್ನು ಆಕರ್ಷಿತಗೊಳಿಸುವ ಮತ್ತು ಆ ಎಲ್ಲಾ ಶೇಕಡ ೩೦ ಬರುವ ವರೆಗೆ ತತ್ತ್ವ ಹೆಚ್ಚಿಸುವ ಸಾಮರ್ಥ್ಯ ಕೇವಲ ಕುಲದೇವತೆಯ ಜಪದಲ್ಲಿದೆ. ಹೇಗೆ ವಿಟಮಿನ್ ಎ, ಬಿ, ಡಿ ಇದರಲ್ಲಿನ ಯಾವುದೇ ವಿಟಮಿನ್ ಕಡಿಮೆ ಇದ್ದರೆ ಆಗ ಆ ವಿಟಮಿನಿನ ಮಾತ್ರೆ ತೆಗೆದುಕೊಂಡರೆ ಆಯಾ ನಿರ್ದಿಷ್ಟ ವಿಟಮಿನ್ ಮಾತ್ರ ಹೆಚ್ಚುತ್ತದೆಯೋ, ಅದೇ ಡಾಕ್ಟರರು ಮಲ್ಟಿವಿಟಮಿನ್ ನ ಮಾತ್ರ ನೀಡಿದರೆ ಅದರಲ್ಲಿನ ಎಲ್ಲಾ ರೀತಿಯ ವಿಟಮಿನ್ಗಳು ಇರುವುದರಿಂದ ಶರೀರದಲ್ಲಿ ಯಾವ ಯಾವ ವಿಟಮಿನ್ ಕಡಿಮೆ ಇದೆಯೋ ಅದು ಹೆಚ್ಚಾಗುತ್ತದೆ. ಕುಲದೇವತೆಯ ನಾಮಸ್ಮರಣೆ ಇದು ಮಲ್ಟಿವಿಟಮಿನ್ ನಂತೆ ನಮ್ಮ ಶರೀರದಲ್ಲಿ ಯಾವ ದೇವತೆಯ ತತ್ತ್ವ ಕಡಿಮೆ ಇದೆಯೋ ಅದನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದಲ್ಲದೆ ಕುಲದೇವತೆ ಪೃಥ್ವಿ ತತ್ತ್ವದ ದೇವತೆ ಆಗಿರುವುದರಿಂದ ಕುಲದೇವತೆಯ ಉಪಾಸನೆಯಿಂದ ಸಾಧನೆಯನ್ನು ಆರಂಭಿಸಿದರೆ ನಾಮಸ್ಮರಣೆ ಮಾಡುವವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಯಾರಲ್ಲಿ ಕುಲದೇವರು ಮತ್ತು ಕುಲದೇವಿ ಇಬ್ಬರೂ ಇದ್ದಾರೆ ಅವರು ಕುಲದೇವಿಯ ನಾಮಜಪ ಮಾಡಲು ಪ್ರಾಧಾನ್ಯತೆ ನೀಡಬೇಕು. ತಾಯಿ ಮತ್ತು ತಂದೆ ಇಬ್ಬರೂ ಹತ್ತಿರ ಇದ್ದರೂ ಕೂಡ ಮಗು ಸಹಾಯಕ್ಕಾಗಿ ಮೊದಲು ತಾಯಿಗೆ ಕೂಗುತ್ತದೆ ಅಲ್ಲವೇ, ಇಲ್ಲಿಯೂ ಅದೇ ಅನ್ವಯಿಸುತ್ತದೆ.

ಇ. ಕುಲದೇವತೆಯ ನಾಮಜಪ ಹೇಗೆ ಮಾಡಬೇಕು ?

ದೇವತೆಯ ಹೆಸರಿನ ಮೊದಲು ಶ್ರೀ ಸೇರಿಸಬೇಕು, ನಾಮಕ್ಕೆ ಚತುರ್ಥಿ ಪ್ರತ್ಯಯ ಜೋಡಿಸಬೇಕು ಮತ್ತು ಕೊನೆಗೆ ನಮಃ ಹೇಳಬೇಕು. ಉದಾಹರಣೆ ಕುಲದೇವಿ ಭವಾನಿ ಆಗಿದ್ದರೆ ಆಗ ಶ್ರೀ ಭವಾನಿ ದೇವ್ಯೈ ನಮಃ, ಎಂದು ಹೇಳುವುದು, ಕುಲದೇವಿ ರೇಣುಕಾದೇವಿ ಆಗಿದ್ದರೆ ಆಗ, ಶ್ರೀ ರೇಣುಕಾದೇವ್ಯೈ ನಮಃ ಎಂಬ ನಾಮಜಪ ಮಾಡಬೇಕು.

ನಮ್ಮ ಕುಲದಲ್ಲಿ ಕುಲದೇವರು ಮಾತ್ರ ಇದ್ದಲ್ಲಿ ದೇವರ ನಾಮದ ಮೊದಲು ಶ್ರೀ ಸೇರಿಸಬೇಕು. ನಾಮಕ್ಕೆ ಚತುರ್ಥಿ ಪ್ರತ್ಯಯ ಜೋಡಿಸಬೇಕು ಮತ್ತು ಕೊನೆಗೆ ನಮಃ ಎನ್ನಬೇಕು. ಉದಾಹರಣೆ ಕುಲದೇವರು ಶ್ರೀ ವೆಂಕಟೇಶ ಆಗಿದ್ದರೆ, ಆಗ ಶ್ರೀ ವೆಂಕಟೇಶಾಯ ನಮಃ ಎಂದು ನಾಮಜಪ ಮಾಡಬೇಕು. ಅದೇ ರೀತಿ ಕುಲದೇವರು ಶ್ರೀ ಗಣೇಶ ಆಗಿದ್ದರೆ ಆಗ ಶ್ರೀ ಗಣೇಶಾಯ ನಮಃ ಎಂದು ನಾಮಜಪ ಮಾಡಬೇಕು.

ಈಗ ಅನೇಕರಿಗೆ ತಮ್ಮ ಕುಲದೇವರು ಯಾರೆಂದು ಗೊತ್ತಿರುವುದಿಲ್ಲ. ಇಂತಹ ಸಮಯದಲ್ಲಿ ಅವರು ಶ್ರೀ ಕುಲದೇವತಾಯೈ ನಮಃ ಎಂದು ನಾಮಜಪಿಸಬೇಕು. ಈ ನಾಮಜಪವನನ್ನು ಶ್ರದ್ಧೆಯಿಂದ ಜಪಿಸಿದರೆ ಕುಲದೇವತೆಯ ಹೆಸರು ಹೇಳುವ ಯಾರಾದರೂ ಅವಶ್ಯವಾಗಿ ಭೇಟಿ ಆಗುವರು. ಇಂತಹ ಅನುಭೂತಿಯನ್ನು ಅನೇಕ ಜನರು ಪಡೆದಿದ್ದಾರೆ.

ವಿವಾಹ ಎಂದರೆ ಒಂದು ರೀತಿಯ ಪುನರ್ಜನ್ಮ ಇರುವುದರಿಂದ ವಿವಾಹಿತ ಸ್ತ್ರೀ ಅತ್ತೆ ಮನೆಯ ಕುಲದೇವರ ನಾಮಜಪ ಮಾಡಬೇಕು.

ನಮ್ಮ ಕುಲದೇವರ ಜಪವನ್ನು ಪ್ರತಿದಿನ ಕನಿಷ್ಠ ಒಂದರಿಂದ ಎರಡು ಗಂಟೆ ಮತ್ತು ಗರಿಷ್ಟ ಸತತವಾಗಿ ಮಾಡಬೇಕು. ನಾಮಜಪಕ್ಕೆ ಯಾವುದೇ ಶೌಚ ಅಶೌಚ, ಸೂತಕ ಮತ್ತು ಸ್ಥಳಕಾಲದ ಬಂಧನ ಇಲ್ಲ. ಈ ನಾಮಜಪವನ್ನು ನಾವು ಯಾವುದೇ ಸಮಯದಲ್ಲಿ ಕೂಡ ಮಾಡಬಹುದು. ನಮಗೆ ಲಭ್ಯವಿರುವ ಸಮಯದ ಪ್ರಕಾರ ಈ ನಾಮಜಪ ಕುಳಿತು ಮಾಡಬೇಕು. ಅದರ ಜೊತೆಗೆ ವೈಯಕ್ತಿಕ ಕಾರ್ಯಗಳು ಮಾಡುವಾಗ, ಅಡುಗೆ ಮಾಡುವಾಗ, ಟಿವಿ ಅಥವಾ ಮೊಬೈಲ್ ನೋಡುವಾಗ, ಪ್ರಯಾಣ ಮಾಡುವಾಗ ಈ ರೀತಿಯಾಗಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ನಾಮಸ್ಮರಣೆ ಮಾಡಲು ಪ್ರಯತ್ನಿಸಬೇಕು.

ಈ. ಸಾಧನೆಯ ಅಖಂಡತ್ವವನ್ನು ಕೇವಲ ನಾಮಸ್ಮರಣೆಯಿಂದ ಸಾಧಿಸಬಹುದು

ಅನಂತನಾದ ಭಗವಂತನ ಜೊತೆಗೆ ಏಕರೂಪವಾಗಲು ಸತತ ನಾಮಸ್ಮರಣೆ ಅಂದರೆ 24 ಗಂಟೆ ಸಾಧನೆ ಆಗಬೇಕು. ಜ್ಞಾನಯೋಗದ ಪ್ರಕಾರ ವೇದ, ಉಪನಿಷತ್ ಗಳ ಅಭ್ಯಾಸ, ಕರ್ಮಯೋಗದ ಪ್ರಕಾರ ಧ್ಯಾನ ಧಾರಣೆ, ತ್ರಾಟಕ, ಪ್ರಾಣಾಯಾಮ, ಭಕ್ತಿಯೋಗದ ಪ್ರಕಾರ ದೇವರ ಪೂಜೆ, ಭಜನೆ, ಕೀರ್ತನೆ ಇದನ್ನೆಲ್ಲ 24 ಗಂಟೆ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ನಾಮಸ್ಮರಣೆ ಮಾತ್ರ 24 ಗಂಟೆ ಮಾಡಬಹುದು. ಸಾಧನೆಯಲ್ಲಿನ ಸಾತತ್ಯವನ್ನು ನಾಮಸ್ಮರಣೆಯಿಂದಲೇ ಸಾಧಿಸಬಹುದು. ಆದ್ದರಿಂದ ಅದನ್ನು ಸರ್ವೋತ್ತಮ ಸಾಧನೆ ಎಂದು ಪರಿಗಣಿಸಲಾಗಿದೆ. ನಾವು ಈ ವಾರದಲ್ಲಿ ಕುಲದೇವರ ನಾಮಸ್ಮರಣೆ ಮನಸ್ಸಿನಿಂದ ಮತ್ತು ಏಕಾಗ್ರತೆಯಿಂದ ಮಾಡಲು ಪ್ರಯತ್ನ ಮಾಡೋಣ.

Leave a Comment