ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಪೂರ್ವಜರ ಮುಕ್ತಿಗಾಗಿ ಶಾಸ್ತ್ರೋಕ್ತ ಸಂಕಲ್ಪನೆ ಇಲ್ಲದಿದ್ದರೂ, ಕನಿಷ್ಟ ಪೂರ್ವಜರ ಬಗ್ಗೆ ಕೃತಜ್ಞತೆಯಿರಬೇಕು, ಎನ್ನುವ ಭಾವನೆಯಂತೂ ಖಂಡಿತವಾಗಿ ಇದೆ. ಹಾಗೆಯೇ ವಿದೇಶಗಳಲ್ಲಿ ಇತರ ಪಂಥಗಳಲ್ಲಿ ಜನಿಸಿರುವ ಅನೇಕ ಪಾಶ್ಚಿಮಾತ್ಯರು ತಮ್ಮ ಪೂರ್ವಜರಿಗೆ ಮುಕ್ತಿ ದೊರಕಬೇಕೆಂದು ಭಾರತಕ್ಕೆ ಬಂದು ಪಿಂಡದಾನ ಮತ್ತು ತರ್ಪಣ ವಿಧಿಗಳನ್ನು ಮಾಡುತ್ತಾರೆ.
ಸಂಕಲನಕಾರರು : ಶ್ರೀ ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
೧. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಇತರ ಧರ್ಮಗಳಲ್ಲಿ ಮಾಡಲಾಗುವ ಪಾರಂಪರಿಕ ಕೃತಿಗಳು !
೧ ಅ. ಪಾರ್ಸಿಗಳು : ಪಾರ್ಸಿ ಬಾಂಧವರು ಪತೇತಿ ಎಂಬ ಮುಖ್ಯ ಹಬ್ಬದ ನಿಮಿತ್ತ ವರ್ಷದ ಕೊನೆಯ ೯ ದಿನಗಳನ್ನು ಪಿತೃಗಳ ಶಾಂತಿಯ ದಿನಗಳೆಂದು ಆಚರಿಸುತ್ತಾರೆ. ಹತ್ತನೇಯ ದಿನ ‘ಪತೇತಿ’ ಹಬ್ಬವನ್ನು ಆಚರಿಸುತ್ತಾರೆ. ಈ ದಿನದಿಂದಲೇ ಪಾರ್ಸಿಗಳ ಹೊಸ ವರ್ಷ ಪ್ರಾರಂಭವಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಆತ್ಮವು ಅಮರವಾಗಿದೆ ಎಂದು ನಂಬಲಾಗಿದೆ. ಅದೇ ವಿಚಾರಧಾರೆ ಪಾರ್ಸಿ ಸಮಾಜದಲ್ಲಿ ಕಂಡು ಬರುತ್ತದೆ. ಅವೆಸ್ತಾದಲ್ಲಿ (ಪಾರ್ಸಿ ಧರ್ಮಗ್ರಂಥದಲ್ಲಿ) ಪಿತೃಗಳಿಗೆ ಫ್ರಾವಶೀ ಎಂದು ಹೇಳಲಾಗಿದ್ದು, ಬರಗಾಲದ ಸಮಯದಲ್ಲಿ ಅವರು ಸ್ವರ್ಗದಲ್ಲಿನ ಸರೋವರಗಳಿಂದ ತಮ್ಮ ವಂಶಜರಿಗಾಗಿ ನೀರು ತರುತ್ತಾರೆ, ಎಂದು ನಂಬಲಾಗಿದೆ. ಆದುದರಿಂದ ಅವರ ಪೂರ್ವಜರ ಆತ್ಮಕ್ಕೆ ಶಾಂತಿ ದೊರೆಯಬೇಕೆಂದು ೯ ದಿನಗಳ ಕಾಲ ವಿವಿಧ ವಿಧಿಗಳನ್ನು ಮಾಡಿದ ಬಳಿಕ ಕೊನೆಯ ದಿನ ಪತೇತಿಯನ್ನು ಆಚರಿಸುತ್ತಾರೆ. ಪಾರ್ಸಿ ಜನರ ಮೂಲ ದೇವತೆ ಅಗ್ನಿಯಾಗಿರುವುದರಿಂದ ಅವರು ಅಗ್ನಿಯ ಪೂಜೆಯನ್ನು ಮಾಡುತ್ತಾರೆ. ಇದರಲ್ಲಿ ಉರಿಯುವ ಅಗ್ನಿಯಲ್ಲಿ ಚಂದನದ ಕಟ್ಟಿಗೆಗಳನ್ನು ಹಾಕಲಾಗುತ್ತದೆ. ಪತೇತಿ ಎಂದರೆ ಪಾಪದಿಂದ ಮುಕ್ತವಾಗುವ ದಿನ ! ‘ಪಾಪೇತಿ’ ಎಂದರೆ ಪಾಪವನ್ನು ನಾಶಗೊಳಿಸುವ ದಿನ. ಇದೇ ಶಬ್ದವು ಮುಂದೆ ಅಪಭ್ರಂಶವಾಗಿ ಪತೇತಿ ಎಂದು ಆಗಿದೆ ಎಂದು ಹಿರಿಯರು ಹೇಳುತ್ತಾರೆ. ಈ ಅವಧಿಯು ಸಾಧಾರಣ ಆಗಸ್ಟ ತಿಂಗಳಲ್ಲಿ ಬರುತ್ತದೆ.
೧ ಆ. ಕ್ಯಾಥೋಲಿಕರು : ಅಮೇರಿಕಾ, ಲ್ಯಾಟಿನ್ ಅಮೇರಿಕಾ ಮತ್ತು ಯುರೋಪಿನ ಅನೇಕ ದೇಶಗಳಲ್ಲಿ ನವೆಂಬರ್ ತಿಂಗಳಲ್ಲಿ ಪಿತೃಗಳನ್ನು ತೃಪ್ತಿಪಡಿಸುವ ಪದ್ಧತಿಯಿದೆ. ಇದು ಪೂರ್ವಜರ ಆತ್ಮಕ್ಕೆ ಸಂಬಂಧಿಸಿದ ದಿನವಾಗಿದ್ದರೂ, ಅಲ್ಲಿ ಇದನ್ನು ಉತ್ಸವದಂತೆ ಆಚರಿಸುವ ಪದ್ಧತಿಯಿದೆ. ಅಕ್ಟೋಬರ್ ೩೧ ರ ಸಾಯಂಕಾಲದಿಂದ ನವೆಂಬರ್ ೨ ರ ರಾತ್ರಿಯವರೆಗೆ ಈ ಉತ್ಸವವನ್ನು ಆಚರಿಸಲಾಗುತ್ತದೆ. ಇದರಲ್ಲಿ ೩೧ ಅಕ್ಟೋಬರ್ ಸಾಯಂಕಾಲ ಹೆಲೊವೀನ ಯಾತ್ರೆಯ (ಇದರಲ್ಲಿನ ಹೆಲೋ ಇದು ಹೋಲಿ ಎಂದರೆ ಪವಿತ್ರ ಎಂಬ ಶಬ್ದದ ಸಮಾನಾರ್ಥಕವಾಗಿದೆ) ಮೆರವಣಿಗೆಯನ್ನು ತೆಗೆಯಲಾಗುತ್ತದೆ. ನವೆಂಬರ್ ೧ ರಂದು ಆಲ್ ಸೇಂಟ್ಸ ಡೆ (ಸಂತರ ದಿನ), ನವೆಂಬರ್ ೨ ರಂದು ಆಲ್ ಸೋಲ್ಸ್ ಡೆ (ಆತ್ಮಗಳ ದಿನ) ಯನ್ನು ಆಚರಿಸಲಾಗುತ್ತದೆ. ಈ ಕಾಲವನ್ನು ‘ಹೆಲೋ ಮಂಥ್’ ಅಂದರೆ ‘ಪವಿತ್ರ ಕಾಲ’ ಎಂದೂ ತಿಳಿಯಲಾಗುತ್ತದೆ.
ಕ್ರೈಸ್ತ ಪಂಥದಲ್ಲಿ ಇದೊಂದು ಉತ್ಸವವಾಗಿದ್ದರೂ, ಅದು ಅದರ ಮೂಲ ಕ್ರಿಸ್ತಪೂರ್ವ ಕಾಲದ ಮೂರ್ತಿಪೂಜಕ ರೋಮನ್‌ರ ಸಂಸ್ಕೃತಿಗೆ ಸಂಬಂಧಿಸಿದೆ. ರೋಮನ್ ಜನರು ಮರಣ ಹೊಂದಿದವರ ಆತ್ಮವನ್ನು ಸಂತುಷ್ಟಗೊಳಿಸಲು ಸಾರ್ವಜನಿಕ ಬಲಿದಾನದೊಂದಿಗೆ ‘ಲೆಮುರಿಯಾ’ ಹೆಸರಿನ ಹಬ್ಬವನ್ನು ಆಚರಿಸುತ್ತಾರೆ. ಅವರು ಸ್ಮಶಾನಕ್ಕೆ ಹೋಗಿ ಮರಣ ಹೊಂದಿರುವವರಿಗೆ ಕೇಕ್ ಮತ್ತು ವೈನ್ ಅರ್ಪಿಸುತ್ತಿದ್ದರು. ಕಾಲಾಂತರದಲ್ಲಿ ಚರ್ಚ್ ಈ ದಿನವನ್ನು ‘ಆಲ್ ಸೋಲ್ಸ್ ಡೇ’ ಎಂದು ಅಂಗೀಕರಿಸಿ ಆಚರಿಸಲು ಪ್ರಾರಂಭಿಸಿತು. ಈ ಉತ್ಸವವನ್ನು ನವೆಂಬರ್ ೨ ರಂದು ಆಚರಿಸಲಾಗುತ್ತದೆ.
೧ ಆ ೧. ‘ಆಲ್ ಸೇಂಟ್ಸ್ ಡೇ’ : ಈ ದಿನದಂದು ಸ್ವರ್ಗವಾಸಿಗಳಾದ ಪರಿಚಿತ-ಅಪರಿಚಿತ ಎಲ್ಲ ಪೂರ್ವಜರನ್ನು ಮತ್ತು ಸಂತರ ಸ್ಮರಣೆಯನ್ನು ಮಾಡುತ್ತಾರೆ ಹಾಗೂ ಈ ದಿನ ಸರಕಾರೀ ರಜೆಯನ್ನು ಘೋಷಿಸಲಾಗುತ್ತದೆ.
೧ ಆ ೨. ‘ಆಲ್ ಸೋಲ್ಸ್ ಡೇ : ಮರಣ ಹೊಂದಿರುವ; ಆದರೆ ಸ್ವರ್ಗಪ್ರಾಪ್ತವಾಗದ ಪರಿಚಿತ-ಅಪರಿಚಿತ ಎಲ್ಲ ಪೂರ್ವಜರ ಪಾಪಕ್ಷಾಲನವಾಗಬೇಕೆಂದು ಈ ದಿನದಂದು ಪ್ರಾರ್ಥನೆಯನ್ನು ಮಾಡುತ್ತಾರೆ.
ಕೆಲವು ದೇಶಗಳಲ್ಲಿ ಪಿತೃಗಳ ಆಗಮನದ ಆನಂದದಲ್ಲಿ ಅಲ್ಲಿ ಸೋಲ್ ಕೇಕ್ ಹೆಸರಿನ ಸಿಹಿ ಪದಾರ್ಥವನ್ನು ತಯಾರಿಸುವ ಪದ್ಧತಿಯಿದೆ. ಈ ಪದಾರ್ಥವನ್ನು ತಿನ್ನುವುದರಿಂದ ಪರಲೋಕದಲ್ಲಿರುವ ಮೃತಾತ್ಮಗಳಿಗೆ ಸುಖ ಮತ್ತು ಶಾಂತಿ ಲಭಿಸುತ್ತದೆ ಎಂದು ಅಲ್ಲಿಯ ಜನರ ನಂಬಿಕೆಯಾಗಿದೆ.
೧ ಇ. ಬೌದ್ಧರು : ಚೀನಾದ ಬೌದ್ಧ ಮತ್ತು ತಾವೋ ಪರಂಪರೆಗನುಸಾರ ಚೀನಿ ಪಂಚಾಂಗದ ೭ ನೇ ತಿಂಗಳ ೧೫ ನೇ ದಿನದಂದು ಪೂರ್ವಜರ ವಿಷಯದಲ್ಲಿ ‘ಘೋಸ್ಟ್’ ಫೆಸ್ಟಿವಲ್ (ಭೂತಗಳ/ ಮೃತರ ಉತ್ಸವ) ಅಥವಾ ಯುಲಾನ ಫೆಸ್ಟಿವಲ್ವನ್ನು ಆಚರಿಸಲಾಗುತ್ತದೆ. ಆಗಸ್ಟ್‌ದಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಈ ದಿನ ಬರುತ್ತದೆ. ಈ ೭ ನೇ ತಿಂಗಳನ್ನು ಘೋಸ್ಟ್ ತಿಂಗಳು (ಭೂತಗಳ/ಮೃತರ ತಿಂಗಳು) ಎಂದು ಗುರುತಿಸಲಾಗುತ್ತದೆ. ಈ ಕಾಲದಲ್ಲಿ ಸ್ವರ್ಗದಲ್ಲಿರುವ, ಹಾಗೆಯೇ ನರಕದಲ್ಲಿರುವ ಪೂರ್ವಜರ ಆತ್ಮಗಳು ಭೂಮಿಗೆ ಬರುತ್ತವೆ, ಎನ್ನುವುದು ಅಲ್ಲಿಯ ಜನರ ನಂಬಿಕೆಯಾಗಿದೆ. ಈ ಕಾಲಾವಧಿಯಲ್ಲಿ ಪೂರ್ವಜರನ್ನು ದುಃಖದಿಂದ ಮುಕ್ತಗೊಳಿಸಲು ಪ್ರಯತ್ನಿಸಲಾಗುತ್ತದೆ. ಅದರಲ್ಲಿ ಪರಂಪರಾಗತ ಭೋಜನವನ್ನು ತಯಾರಿಸುವುದು (ಬಹುತೇಕ ಶಾಕಾಹಾರಿ), ಧೂಪ ಉರಿಸುವುದು, ಜಾಸ್ ಪೇಪರ (ಸ್ಪಿರಿಟ್ ಮನಿ – ಬಿದುರಿನ ಹಾಳೆಯಿಂದ ತಯಾರಿಸಲ್ಪಟ್ಟ ಆತ್ಮಗಳ ಧನ) ಸುಡುವುದು ಇತ್ಯಾದಿಗಳನ್ನು ಮಾಡಲಾಗುತ್ತದೆ. ಈ ಹಾಳೆಗಳಿಂದ ವಸ್ತ್ರ, ಬಂಗಾರದ ಆಭರಣಗಳ ಪ್ರತೀಕವಾಗಿರುವ ಆಭರಣಗಳನ್ನು ತಯಾರಿಸಿ ಸುಡುತ್ತಾರೆ. ಈ ಸಮಯದಲ್ಲಿ ಭೋಜನದ ಸಮಯದಲ್ಲಿ ಪೂರ್ವಜರು ಅವರೆದುರಿಗೆ ಅಲ್ಲಿ ಪ್ರತ್ಯಕ್ಷ ಉಪಸ್ಥಿತರಿದ್ದಾರೆ, ಎನ್ನುವ ರೀತಿಯಲ್ಲಿ ಅವರಿಗಾಗಿ ಆಸನವನ್ನಿಟ್ಟು ಅವರಿಗೆ ಭೋಜನವನ್ನು ಬಡಿಸಲಾಗುತ್ತದೆ. ರಾತ್ರಿ ಕಾಗದದ ದೋಣಿ ಹಾಗೂ ದೀಪಗಳನ್ನು ನೀರಿನಲ್ಲಿ ಬಿಟ್ಟು ಪೂರ್ವಜರಿಗೆ ಮಾರ್ಗವನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತದೆ. ಬೌದ್ಧ ಪರಂಪರೆಯನ್ನು ಅನುಸರಿಸುವ ಬಹುತೇಕ ದೇಶಗಳಲ್ಲಿ ಈ ಉತ್ಸವವನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಆಚರಿಸಲಾಗುತ್ತದೆ.
೨. ಜಗತ್ತಿನ ವಿವಿಧ ದೇಶಗಳಲ್ಲಿ ಪೂರ್ವಜರ ಆತ್ಮಕ್ಕಾಗಿ ಮಾಡಲಾಗುವ ಪಾರಂಪರಿಕ ಕೃತಿಗಳು
ಅ. ಯುರೋಪಿಯನ್ ದೇಶಗಳಲ್ಲಿ ಪೂರ್ವಜರ ಶಾಂತಿಗಾಗಿ ಮಾಡಲಾಗುವ ವಿವಿಧ ಕೃತಿಗಳು
ಅ ೧. ಬೆಲ್ಜಿಯಮ್: ನವೆಂಬರ್ ೨ ರಂದು ಆಲ್ ಸೋಲ್ಸ್ ಡೆ ಯ ದಿನದಂದು ರಜೆ ಇಲ್ಲದಿರುವುದರಿಂದ ಹಿಂದಿನ ದಿನ ಅಂದರೆ ಆಲ್ ಸೇಂಟ್ಸ ಡೆಯ ದಿನ ಸ್ಮಶಾನಕ್ಕೆ (ದಫನಭೂಮಿಗೆ) ಹೋಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಹಾಗೆಯೇ ಮೃತರ ಗೋರಿಗಳ ಮೇಲೆ ದೀಪಗಳನ್ನು ಹಚ್ಚುತ್ತಾರೆ.
ಅ ೨. ಪೋರ್ಚುಗಲ್ : ನವೆಂಬರ್ ೨ ರಂದು ಸಂಪೂರ್ಣ ಪರಿವಾರದೊಂದಿಗೆ ಸ್ಮಶಾನಭೂಮಿಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಸಾಯಂಕಾಲ ಚಿಕ್ಕ ಮಕ್ಕಳು ಗುಂಪುಗುಂಪಾಗಿ ಪ್ರತಿಯೊಬ್ಬರ ಮನೆಯ ಪ್ರವೇಶದ್ವಾರದ ಬಳಿಗೆ ಹೋಗಿ ನಿಲ್ಲುತ್ತಾರೆ. ಅಲ್ಲಿ ಅವರಿಗೆ ಕೇಕ್ ಇತ್ಯಾದಿ ಸಿಹಿ ಪದಾರ್ಥಗಳನ್ನು ಕೊಡಲಾಗುತ್ತದೆ.
ಅ ೩. ಜರ್ಮನಿ : ಜರ್ಮನಿಯಲ್ಲಿ ಸ್ಮಶಾನದ ಗೋರಿಗಳಿಗೆ ಸುಣ್ಣ-ಬಣ್ಣ ಹಚ್ಚಲಾಗುತ್ತದೆ. ಭೂಮಿಯ ಮೇಲೆ ಇದ್ದಿಲು ಹರಡಿ ಅದರ ಮೇಲೆ ಕೆಂಪು ಬಣ್ಣದ ಚಿತ್ರಗಳನ್ನು ರಚಿಸಲಾಗುತ್ತದೆ ಮತ್ತು ಗೋರಿಗಳನ್ನು ಹೂವು ಮತ್ತು ಮೊಗ್ಗುಗಳ ಮಾಲೆಗಳಿಂದ ಅಲಂಕರಿಸಲಾಗುತ್ತದೆ. ಕೊನೆಯಲ್ಲಿ ಎಲ್ಲರೂ ಸೇರಿ ಪ್ರಾರ್ಥನೆಯನ್ನು ಮಾಡುತ್ತಾರೆ.
ಅ ೪. ಫ್ರಾನ್ಸ್ : ಫ್ರಾನ್ಸ್‌ನಲ್ಲಿ ಚರ್ಚ್‌ನ ರಾತ್ರಿ ಸಮಯದ ಪ್ರಾರ್ಥನೆಯ ಕೊನೆಯಲ್ಲಿ ಜನರು ತಮ್ಮ ಪಿತೃಗಳ ವಿಷಯದಲ್ಲಿ ಚರ್ಚೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ತಿಳಿಯುತ್ತಾರೆ. ತದನಂತರ ಅವರು ತಮ್ಮ ಮನೆಯ ಅಡುಗೆಮನೆಯಲ್ಲಿ ಒಂದು ಹೊಸ ಬಿಳಿಯ ವಸ್ತ್ರವನ್ನು ಹರಡುತ್ತಾರೆ ಮತ್ತು ಅದರ ಮೇಲೆ ಶರಬತ್ತು, ಮೊಸರು, ವಿವಿಧ ಭಕ್ಷ್ಯಗಳು ಇತ್ಯಾದಿಗಳನ್ನಿಟ್ಟು ಅಲಂಕರಿಸುತ್ತಾರೆ. ಹಾಗೆಯೇ ಹತ್ತಿರದ ಅಗ್ನಿಪಾತ್ರೆಯಲ್ಲಿ ಕಟ್ಟಿಗೆಯ ಒಂದು ದೊಡ್ಡ ತುಂಡನ್ನು ಸುಡುವುದಕ್ಕಾಗಿ ಇಡುತ್ತಾರೆ. ತದನಂತರ ಜನರು ಮಲಗಲು ಹೋಗುತ್ತಾರೆ. ಸ್ವಲ್ಪ ಸಮಯದ ಬಳಿಕ ಪಾರಂಪರಿಕ ವಾದಕರು ವಾದ್ಯಗಳನ್ನು ಬಾರಿಸುತ್ತ ಅವರನ್ನು ನಿದ್ದೆಯಿಂದ ಎಬ್ಬಿಸುತ್ತಾರೆ ಮತ್ತು ಮರಣ ಹೊಂದಿದವರ ಪರವಾಗಿ ಅವರಿಗೆ ಆಶೀರ್ವಾದ ನೀಡುತ್ತಾರೆ. ಆ ಸಮಯದಲ್ಲಿ ಅಲಂಕರಿಸಲ್ಪಟ್ಟ ಎಲ್ಲ ತಿಂಡಿ-ತಿನಿಸುಗಳನ್ನು ಆ ವಾದ್ಯ ಪ್ರಮುಖನಿಗೆ ಅರ್ಪಿಸಲಾಗುತ್ತದೆ.
೩. ಲ್ಯಾಟಿನ್ ಅಮೇರಿಕಾ ದೇಶಗಳಲ್ಲಿ ಆಚರಿಸುವ ಪದ್ಧತಿ
ಅ. ಲ್ಯಾಟಿನ್ ಅಮೇರಿಕಾ : ಬ್ರಾಝಿಲ್, ಅರ್ಜೆಂಟಿನಾ, ಬೊಲಿವಿಯಾ, ಚಿಲಿ, ಇಕ್ವೆಡೋರ್, ಪೇರು, ಉರುಗ್ವೆ ಮುಂತಾದ ದೇಶಗಳಲ್ಲಿ ನವೆಂಬರ್ ೨ ರಂದು ಜನರು ಸ್ಮಶಾನಕ್ಕೆ (ದಫನ ಭೂಮಿಗೆ) ಹೋಗಿ ತಮ್ಮ ಪೂರ್ವಜರಿಗೆ ಮತ್ತು ಸಂಬಂಧಿಕರಿಗೆ ಪುಷ್ಪಗಳನ್ನು ಅರ್ಪಿಸುತ್ತಾರೆ.
ಆ. ಮೆಕ್ಸಿಕೊ : ಈ ದೇಶದಲ್ಲಿ ಇದನ್ನು ‘ಮೃತರ ದಿನ’ ಎಂದು ಗುರುತಿಸಲಾಗುತ್ತದೆ. ಇದಕ್ಕೆ ಸ್ಥಳೀಯ ಭಾಷೆಯಲ್ಲಿ ‘ಅಲ್ ದೇವೋ ದೆ ಲಾಸ್ ಮರ್ತೋಸ್’ ಎಂಬ ಹೆಸರಿದೆ. ಈ ಮೂಲ ಉತ್ಸವವು ಕ್ರಿಸ್ತಪೂರ್ವ ೩೦೦೦ ವರ್ಷಗಳ ಹಿಂದಿನ ಕಾಲದಲ್ಲಿನ ಅಝಟೆಕ್ ಮೂರ್ತಿ ಪೂಜಕರದ್ದಾಗಿದೆ ಎಂದು ನಂಬಲಾಗಿದೆ. ಸ್ಪೇನ್ ಆಕ್ರಮಣ ಮಾಡಿ ಈ ಸಂಸ್ಕೃತಿಯನ್ನು ನಾಶ ಮಾಡಿತು. ಸದ್ಯದ ಕಾಲದಲ್ಲಿ ಅದನ್ನು ಮೂಲ ಮೆಕ್ಸಿಕನ್, ಯುರೋಪಿಯನ್ ಮತ್ತು ಸ್ಪ್ಯಾನಿಶ್ ಸಂಸ್ಕೃತಿಯ ಸಮ್ಮಿಶ್ರ ಪರಂಪರೆಯಂತೆ ಆಚರಿಸಲಾಗುತ್ತದೆ. ಇದರಲ್ಲಿ ನವೆಂಬರ್ ೧ ರಂದು ಬಾಲ್ಯದಲ್ಲಿ ಮರಣ ಹೊಂದಿದವರಿಗಾಗಿ, ನವೆಂಬರ್ ೨ ರಂದು ವಯಸ್ಕ ಮೃತರಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ.
ಇ. ಗ್ವಾಟೆಮಾಲಾ : ಈ ದಿನ ಮಾಂಸ ಮತ್ತು ತರಕಾರಿಗಳಿಂದ ತಯಾರಿಸಿದ ‘ಫಿಯಾಂಬ್ರೆ’ ಹೆಸರಿನ ಪದಾರ್ಥವನ್ನು ಮೃತರ ಗೋರಿಯ ಮೇಲೆ ಇಡಲಾಗುತ್ತದೆ. ಹಾಗೆಯೇ ಈ ದಿನದಂದು ಗಾಳಿಪಟವನ್ನು ಹಾರಿಸುವ ವಿಶೇಷ ಉತ್ಸವವಿರುತ್ತದೆ. ಮೃತರ ಆತ್ಮದೊಂದಿಗೆ ಸಂಬಂಧ ಜೋಡಿಸುವ ಪ್ರತೀಕವೆಂದು ಈ ಗಾಳಿಪಟಗಳನ್ನು ಹಾರಿಸಲಾಗುತ್ತದೆ.
೪. ಏಶಿಯಾ ಖಂಡದ ದೇಶಗಳ ಪಿತೃಪೂಜೆಯ ಪದ್ಧತಿ !
ಏಶಿಯಾ ಖಂಡದಲ್ಲಿ ಭಾರತ ಸಹಿತ ಇತರ ದೇಶಗಳಲ್ಲಿಯೂ ಪಿತೃಪೂಜೆಯ ಪದ್ಧತಿ ವಿವಿಧ ಸ್ವರೂಪಗಳಲ್ಲಿ ಪ್ರಚಲಿತವಾಗಿದೆ. ಹಾಗೆಯೇ ಬಹುತೇಕ ಎಲ್ಲ ಸ್ಥಳಗಳಲ್ಲಿ ಪಿತೃಗಳನ್ನು ಆಹ್ವಾನಿಸುವಾಗ ವಿಶೇಷ ಕೃತಿಗಳನ್ನು ಮಾಡಲಾಗುತ್ತದೆ.
ಅ. ಚೀನಾ : ಚೀನಾದ ಹಾನ್ ಪರಂಪರೆಗನುಸಾರ ಕಳೆದ ೨ ಸಾವಿರ ೫೦೦ ವರ್ಷಗಳಿಂದ ಕ್ವಿಂಗಮಿಂಗ್ ಅಥವಾ ಚಿಂಗ್ ಮಿಂಗ್ ಎಂಬ ಉತ್ಸವವನ್ನು ಪೂರ್ವಜರ ಸ್ಮರಣೆಗಾಗಿ ಆಚರಿಸುತ್ತಾರೆ. ಚೀನಾದ ಸೂರ್ಯಪಂಚಾಂಗಕ್ಕನುಸಾರ ಈ ಕಾಲವನ್ನು ನಿರ್ಧರಿಸಲಾಗುತ್ತದೆ. ಈ ಉತ್ಸವವನ್ನು ಸಾಧಾರಣ ೪ ರಿಂದ ೬ ಎಪ್ರಿಲ್ ಈ ಕಾಲಾವಧಿಯಲ್ಲಿ ಆಚರಿಸಲಾಗುತ್ತದೆ. ಈ ಉತ್ಸವದ ನಿಮಿತ್ತದಿಂದ ಪೂರ್ವಜರ ಗೋರಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಅಲ್ಲಿ ಪೂರ್ವಜರಿಗಾಗಿ ಪಾರಂಪರಿಕ ತಿಂಡಿ-ತಿನಿಸುಗಳನ್ನು ಇಡುವುದು, ಸುಗಂಧಿತ ಊದುಬತ್ತಿಗಳನ್ನು ಹಚ್ಚುವುದು, ಹಾಗೆಯೇ ಜಾಸ್ ಪೇಪರ್ ಸುಡುವುದು, ಇಂತಹ ಕೃತಿಗಳನ್ನು ಮಾಡಲಾಗುತ್ತದೆ. ಈ ಉತ್ಸವವನ್ನು ಚೀನಾ, ತೈವಾನ್, ಮಲೇಶಿಯಾ, ಹಾಂಗ್‌ಕಾಂಗ್, ಸಿಂಗಾಪೂರ, ಇಂಡೋನೇಶಿಯಾ ಈ ದೇಶಗಳಲ್ಲಿಯೂ ಆಚರಿಸಲಾಗುತ್ತದೆ.
ಆ. ಜಪಾನ : ಜಪಾನ್‌ನಲ್ಲಿ ಇದಕ್ಕೆ ‘ಬಾನ್ ಫೆಸ್ಟಿವಲ್’ ಎಂದು ಹೇಳಲಾಗುತ್ತದೆ. ಬುದ್ಧಿಸ್ಟ್-ಕನ್ಯ್ಫೂಶಿಯಸ್ ಪರಂಪರೆಯಲ್ಲಿ ಇದನ್ನು ಪೂರ್ವಜರ ಗೌರವಾರ್ಥ ಉತ್ಸವವೆಂದು ಆಚರಿಸಲಾಗುತ್ತದೆ. ಇದರ ಬಗ್ಗೆ ಈ ಕಾಲಾವಧಿಯಲ್ಲಿ ಪೂರ್ವಜರ ಆತ್ಮಗಳು ಮೂಲ ಮನೆಯಲ್ಲಿನ ಪೂಜಾಸ್ಥಾನಕ್ಕೆ ಬರುತ್ತವೆ ಎಂಬ ನಂಬಿಕೆಯಿದೆ. ಇದರಿಂದಾಗಿ ಇಡೀ ಕುಟುಂಬವು ಮೂಲ ಮನೆಯಲ್ಲಿ ಸೇರಿ, ಪೂರ್ವಜರ ಗೋರಿಗಳನ್ನು ಸ್ವಚ್ಛಗೊಳಿಸಿ, ಅಲ್ಲಿ ಧೂಪಬತ್ತಿಗಳನ್ನು ಹಚ್ಚುತ್ತಾರೆ. ಪ್ರತಿವರ್ಷ ಆಗಸ್ಟ್ ೮ ರಿಂದ ೭ ಸಪ್ಟೆಂಬರ್ ಈ ಕಾಲಾವಧಿಯಲ್ಲಿ ಈ ಉತ್ಸವವನ್ನು ೩ ದಿನಗಳ ಕಾಲ ಆಚರಿಸಲಾಗುತ್ತದೆ. ಈ ಮಹೋತ್ಸವವನ್ನು ಜಪಾನ್‌ನಲ್ಲಿ ದೀಪೋತ್ಸವದಂತೆ ಆಚರಿಸಲಾಗುತ್ತದೆ. ಎಲ್ಲಿಯವರೆಗೆ ಅವರು ಪೂರ್ವಜರಿಗೆ ಈ ಪ್ರಕಾಶವನ್ನು ತೋರಿಸುವುದಿಲ್ಲವೋ, ಅಲ್ಲಿಯವರೆಗೆ ಪೂರ್ವಜರಿಗೆ ತಮ್ಮ ವಂಶಜರ ಮನೆಯ ಮಾರ್ಗವನ್ನು ಕಂಡುಹಿಡಿಯಲು ಆಗುವುದಿಲ್ಲ ಅಥವಾ ಅಡಚಣೆಗಳು ಬರುತ್ತವೆ ಎನ್ನುವ ನಂಬಿಕೆ ಜಪಾನಿನ ಜನರಲ್ಲಿದೆ. ಆದುದರಿಂದ ಈ ಕಾಲಾವಧಿಯಲ್ಲಿ ಗೋರಿಯ ನಾಲ್ಕೂ ಬದಿಗಳಲ್ಲಿ ಎತ್ತರವಾದ ಕೋಲುಗಳನ್ನು ಭೂಮಿಯಲ್ಲಿ ಹುಗಿದು ಅವುಗಳ ಮೇಲೆ ವಿವಿಧ ಬಣ್ಣಗಳ ಕಂದೀಲುಗಳನ್ನು ತೂಗು ಬಿಡುತ್ತಾರೆ ಮತ್ತು ಅವುಗಳ ಕೆಳಗೆ ಮೇಣದಬತ್ತಿಯ ಪ್ರಕಾಶದಲ್ಲಿ ಕುಳಿತು ಜನರು ತಮ್ಮ ಪೂರ್ವಜರನ್ನು ಆಹ್ವಾನಿಸುತ್ತಾರೆ.
ಈ ಉತ್ಸವವು ಮೂಲ ಸಂಸ್ಕೃತ ಭಾಷೆಯ ‘ಉಲ್ಲಂಬನ’ (ತಲೆಕೆಳಗೆ ಮಾಡಿ ತೂಗು ಹಾಕುವುದು) ಶಬ್ದದ ಅಪಭ್ರಂಶವಾಗಿ ಓಬಾನ್ ಅಥವಾ ಬಾನ್ ಈ ಹೆಸರಿನಿಂದ ಗುರುತಿಸಲ್ಪಡುತ್ತದೆ. ಈ ಕಾಲದಲ್ಲಿ ಬಾನ್ ಓದೋರಿ ಎಂಬ ನೃತ್ಯವನ್ನು ಮಾಡುತ್ತಾರೆ. ಈ ನೃತ್ಯ ಪರಂಪರೆಯ ಸಂದರ್ಭದಲ್ಲಿ ಒಂದು ಕಥೆಯಿದೆ. ಗೌತಮ ಬುದ್ಧನ ಒಬ್ಬ ಶಿಷ್ಯ ಮಹಾಮುದ್ಗಲಾಯನ (ಮೊಕುರೆನ) ತನ್ನ ದಿವ್ಯ ದೃಷ್ಟಿಯಿಂದ, ತನ್ನ ಮರಣ ಹೊಂದಿದ ತಾಯಿ ಮುಕ್ತಳಾಗದೇ ಭೂತಗಳ ಹಿಡಿತದಲ್ಲಿ ಸಿಲುಕಿ ದುಃಖಿತಳಾಗಿದ್ದಾಳೆ ಎಂಬುದನ್ನು ನೋಡಿದನು. ಅವನು ಬಹಳ ಚಿಂತಿತನಾಗಿ ಬುದ್ಧನ ಬಳಿ ಹೋಗುತ್ತಾನೆ ಮತ್ತು ತಾಯಿಯನ್ನು ಇದರಿಂದ ಹೇಗೆ ಮುಕ್ತಗೊಳಿಸಲಿ ಎಂದು ಕೇಳುತ್ತಾನೆ. ಆಗ ಬುದ್ಧನು ಅವನಿಗೆ ಅನೇಕ ಬೌದ್ಧ ಭಿಕ್ಷುಗಳಿಗೆ ದಾನ ನೀಡುವಂತೆ ಹೇಳುತ್ತಾನೆ. ಮೊಕುರೆನ ಅದರಂತೆ ಕೃತಿಯನ್ನು ಮಾಡುತ್ತಾನೆ ಮತ್ತು ಅವನಿಗೆ ಅವನ ತಾಯಿ ಆ ಭೂತಗಳ ಹಿಡಿತದಿಂದ ಮುಕ್ತಳಾಗುತ್ತಿರುವುದು ಕಾಣಿಸುತ್ತದೆ. ಆಗ ಅತ್ಯಂತ ಆನಂದಿತನಾಗಿ ಅವನು ನೃತ್ಯ ಮಾಡುತ್ತಾನೆ. ಆಗಿನಿಂದ ಈ ಕಾಲದಲ್ಲಿ ಬಾನ್ ಒದೋರಿ ಅಥವಾ ಬಾನ್ ಡಾನ್ಸ್ ಮಾಡುವ ಪದ್ಧತಿ ಪ್ರಾರಂಭವಾಯಿತು.
ಕಾಂಬೋಡಿಯಾದ ಒಂದು ಪ್ರಾರ್ಥನಾಸ್ಥಳದಲ್ಲಿ ಪಿತೃಗಳಿಗಾಗಿ ಕುಟುಂಬದವರು ತಂದಿರುವ ಭೋಜನ
ಫ್ರಾನ್ಸ್‌ನಲ್ಲಿ ಪಿತೃಗಳಿಗಾಗಿ ಆಹಾರ ಪದಾರ್ಥಗಳನ್ನು ಬಡಿಸಿ ಅಲಂಕರಿಸಿದ ಮೇಜು
ಇ. ಕಂಬೋಡಿಯಾ : ಬೌದ್ಧ ಪರಂಪರೆಯ ಪಚೂಮ ಬೆನ್ (ಇಂಪ್ಲ್ಯೂಸಹ) ವನ್ನು ಪೂರ್ವಜರ ದಿನ (ಎನಸೆಸ್ಟರ್ಸ್ ಡೆ) ಎಂದು ಕೂಡ ಗುರುತಿಸಲಾಗುತ್ತದೆ. ಖಮೇರ್ ಪರಂಪರೆಯ ದಿನದರ್ಶಿಕೆಯ ೧೦ ನೇ ತಿಂಗಳ ೧೫ನೇ ದಿನದಂದು ಈ ವಿಧಿಯನ್ನು ಮಾಡಲಾಗುತ್ತದೆ. (೨೩ ಸಪ್ಟೆಂಬರ್‌ದಿಂದ ೧೨ ಅಕ್ಟೋಬರ್ ಈ ಅವಧಿಯಲ್ಲಿ ಈ ವಿಧಿ ಮಾಡುತ್ತಾರೆ) ಈ ದಿನ ಸಾರ್ವಜನಿಕ ರಜೆ ಘೋಷಿಸಲಾಗುತ್ತದೆ.
ಇದರಲ್ಲಿ ಸಾಧಾರಣ ೭ ಪೀಳಿಗೆಗಳ ವರೆಗಿನ ಮೃತ ಸಂಬಂಧಿಕರನ್ನು ಮತ್ತು ಪೂರ್ವಜರನ್ನು ಗೌರವಿಸುತ್ತಾರೆ. ಪ್ರತಿವರ್ಷ ೧೫ ದಿನಗಳ ಕಾಲ ಕುಟುಂಬದವರು ಅನ್ನವನ್ನು ಬೇಯಿಸಿ ಅದನ್ನು ತಮ್ಮ ಸ್ಥಳೀಯ ಪ್ರಾರ್ಥನಾಸ್ಥಳಕ್ಕೆ ತರುತ್ತಾರೆ. ತದನಂತರ ಅನ್ನದ ಮುದ್ದೆಗಳನ್ನು (ಪಿಂಡಗಳನ್ನು) ಮಾಡಿ ಅವುಗಳನ್ನು ಹೊಲದ ಬಯಲು ಪ್ರದೇಶದಲ್ಲಿ ಮತ್ತು ಗಾಳಿಯಲ್ಲಿ ಎಸೆಯುತ್ತಾರೆ.
ಪ್ರತಿಯೊಂದು ಕುಟುಂಬವು ಬೌದ್ಧ ಭಿಕ್ಷುಗಳಿಗೆ ತಮ್ಮಲ್ಲಿರುವ ಅನ್ನವನ್ನು (ಸಾಮಾನ್ಯವಾಗಿ ಬೇಯಿಸಿದ ಅನ್ನ) ದಾನ ಮಾಡುತ್ತದೆ. ಭಿಕ್ಷುಗಳಿಗೆ ಅನ್ನದಾನ ಮಾಡಿ ಸಂಪಾದಿಸಿದ ಪುಣ್ಯವು ಸೂಕ್ಷ್ಮ ಜಗತ್ತಿನಲ್ಲಿನ ದಿವಂಗತ ಪೂರ್ವಜರಿಗೆ ಹಸ್ತಾಂತರಿತವಾಗುತ್ತದೆ ಎಂದು ತಿಳಿಯಲಾಗುತ್ತದೆ. ಈ ಭಿಕ್ಷುಗಳು ಕೂಡ ಸಂಪೂರ್ಣ ರಾತ್ರಿ ಜಪವನ್ನು ಮಾಡಿ, ಪಿತೃಪೂಜೆಯ ಒಂದು ಕಠಿಣ ವಿಧಿಯನ್ನು ಮಾಡುತ್ತಾರೆ ಮತ್ತು ಅದರಲ್ಲಿ ತಾವು ಸ್ವತಃ ಭಾಗವಹಿಸುತ್ತಾರೆ.
ಈ. ಶ್ರೀಲಂಕಾ : ಇಲ್ಲಿನ ಬೌದ್ಧ ಪರಂಪರೆಗನುಸಾರ ವ್ಯಕ್ತಿ ಮರಣ ಹೊಂದಿದ ೭ ನೇ ದಿನ, ೩ ತಿಂಗಳ ಬಳಿಕ ಮತ್ತು ವರ್ಷಪೂರ್ತಿಯಾದ ದಿನದಂದು ಮೃತಾತ್ಮಗಳಿಗೆ ಅನ್ನವನ್ನು ದಾನ ಮಾಡುತ್ತಾರೆ. ಇದಕ್ಕೆ ‘ಮತಕದಾನಯ’ ಎಂದು ಹೇಳುತ್ತಾರೆ. ‘ಅನ್ನದಾನ ಮಾಡಿ ಸಂಪಾದಿಸಿದ ಪುಣ್ಯದಿಂದ ಆ ಮೃತಾತ್ಮಗಳಿಗೆ ಅವರ ಲೋಕದಲ್ಲಿ ಯೋಗ್ಯ ವಸ್ತುಗಳು ದೊರೆಯುತ್ತವೆ’ ಎಂದು ತಿಳಿಯುತ್ತಾರೆ. ಯಾವ ಮೃತಾತ್ಮಗಳಿಗೆ ತಮ್ಮ ಲೋಕವನ್ನು ತಲುಪಲು ಸಾಧ್ಯವಾಗುವುದಿಲ್ಲವೋ, ಅವು ಗಾಳಿಯಲ್ಲಿ ತೇಲಾಡುತ್ತಿರುತ್ತವೆ ಮತ್ತು ಜೀವಂತವಿರುವ ವ್ಯಕ್ತಿಗಳಿಗೆ ವಿವಿಧ ರೀತಿಯ ರೋಗಗಳನ್ನು, ಹಾಗೆಯೇ ವಿಪತ್ತುಗಳನ್ನು ತಂದು ತೊಂದರೆಗಳನ್ನು ಕೊಡುತ್ತವೆ ಎಂದು ಆ ಪರಿವಾರದ ನಂಬಿಕೆಯಾಗಿರುತ್ತದೆ. ಆದ್ದರಿಂದ ಬೌದ್ಧ ಭಿಕ್ಷುಗಳನ್ನು ಆಮಂತ್ರಿಸಿ ಆ ಆತ್ಮಗಳಿಂದ ಸುರಕ್ಷಿತವಾಗಿರಲು ವಿಧಿ ಮಾಡುತ್ತಾರೆ.
ಉ. ಮ್ಯಾನ್ಮಾರ್ (ಬ್ರಹ್ಮದೇಶ) : ಮ್ಯಾನ್ಮಾರನಲ್ಲಿ ಈ ಹಬ್ಬವನ್ನು ಜಪಾನಿನ ವಿರುದ್ಧದ ಪದ್ಧತಿಯಲ್ಲಿ, ಅಂದರೆ ಆನಂದದ ಬದಲು ದುಃಖದ ಸಮಾರಂಭವನ್ನು ಆಚರಿಸುತ್ತಾರೆ. ಈ ದಿನದಂದು ಬೆಳಗ್ಗೆಯಿಂದ ರಾತ್ರಿಯವರೆಗೆ ಜನರ ಮನೆಗಳಲ್ಲಿ ಅಳುವುದು-ಕೂಗಾಡುವುದು ನಿರಂತರವಾಗಿ ನಡೆದಿರುತ್ತದೆ. ಪರಂಪರೆಗನುಸಾರ ಕುಟುಂಬದಲ್ಲಿ ಹಿಂದಿನ ೩ ವರ್ಷಗಳಲ್ಲಿ ಕನಿಷ್ಟ ಒಬ್ಬ ವ್ಯಕ್ತಿಯಾದರೂ ಮರಣ ಹೊಂದಿದ್ದರೆ ಅಂತಹ ಜನರಿಗೆ ಈ ದುಃಖದ ಸಮಾರಂಭದಲ್ಲಿ ಭಾಗವಹಿಸುವ ಅಧಿಕಾರವಿರುತ್ತದೆ. ಮ್ಯಾನ್ಮಾರದಲ್ಲಿ ಈ ಹಬ್ಬವನ್ನು ಆಗಸ್ಟ್ ಕೊನೆಯಲ್ಲಿ ಅಥವಾ ಸಪ್ಟೆಂಬರ್‌ನ ಪ್ರಾರಂಭದಲ್ಲಿ ಆಚರಿಸಲಾಗುತ್ತದೆ ಹಾಗೂ ಅಲ್ಲಿಯೂ ಈ ನಿಮಿತ್ತದಿಂದ ವಿವಿಧ ಆಹಾರ ಪದಾರ್ಥಗಳನ್ನು ಮತ್ತು ವಸ್ತ್ರಗಳನ್ನು ದಾನ ಮಾಡಲಾಗುತ್ತದೆ.
ಊ. ಫಿಲಿಫೀನ್ಸ : ಈ ದೇಶದಲ್ಲಿ ಸ್ಪ್ಯಾನಿಶ್ ಜನರ ಆಕ್ರಮಣದ ಮೊದಲು ಪ್ರಾಚೀನ ಫಿಲಿಪಿನೊ ಆನಿಮಿಜಮ್ ಪ್ರಚಲಿತವಾಗಿತ್ತು. ಅದರ ಪ್ರಕಾರ ನಮ್ಮ ಕಣ್ಣಿಗೆ ಕಾಣಿಸುವ ಸ್ಥೂಲ ಜಗತ್ತಿನಂತೆ ಒಂದು ಸೂಕ್ಷ್ಮ ಜಗತ್ತು ಕೂಡ ಕಾರ್ಯನಿರತವಾಗಿದೆ. ಅದರಲ್ಲಿ ಜಗತ್ತಿನ ಪ್ರತಿಯೊಂದು ಭಾಗದಲ್ಲಿ ಆತ್ಮಗಳು (ಆನಿಟೊ) ಇರುತ್ತವೆ. ಆನಿಟೋಗಳು ಪೂರ್ವಜರ ಆತ್ಮಗಳಾಗಿವೆ ಮತ್ತು ಅವು ಜೀವಂತ ವ್ಯಕ್ತಿಯ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರುತ್ತವೆ. ಅಲ್ಲಿಯ ಪೆಗನಿಟೋ ಸಮಾರಂಭವು ಒಂದು ರೀತಿಯ ಆಧ್ಯಾತ್ಮಿಕ ಸಮಾರಂಭವಾಗಿದೆ. ಇದರಲ್ಲಿ ಪಾರಂಪರಿಕ ‘ಶಮನ’ (ಮೃತರ ಆತ್ಮದೊಂದಿಗೆ ಸಂವಾದ ಸಾಧಿಸುವ ಕ್ಷಮತೆಯಿರುವ ವ್ಯಕ್ತಿ) ಆತ್ಮದೊಂದಿಗೆ ಸಂಭಾಷಣೆ ಮಾಡುತ್ತಾನೆ. ಫೆಬ್ರುವರಿ ೧೯ ರಂದು ಈ ಉತ್ಸವವನ್ನು ಆಚರಿಸಲಾಗುತ್ತದೆ.
ಸ್ಪ್ಯಾನಿಶ್ ಆಕ್ರಮಣದ ನಂತರ ಕ್ರೈಸ್ತಮತವನ್ನು ಸ್ವೀಕರಿಸಿರುವ ಕುಟುಂಬಗಳು ನವೆಂಬರ್ ೨ ರಂದು ಸ್ಮಶಾನಕ್ಕೆ ಹೋಗಿ ಗೋರಿಗಳ ದುರಸ್ತಿ ಮಾಡಿ ಅವುಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅವುಗಳ ಮೇಲೆ ಹೂವುಗಳನ್ನು ಅರ್ಪಿಸುತ್ತಾರೆ, ಹಾಗೆಯೇ ಮೇಣದಬತ್ತಿಗಳನ್ನು ಹಚ್ಚುತ್ತಾರೆ. ಈ ದಿನದಂದು ಚಿಕ್ಕ ಮಕ್ಕಳಿಗೆ ಮೇಣದಬತ್ತಿಗಳಿಂದ ಕರಗಿ ಬಿದ್ದ ಮೇಣವನ್ನು ಸಂಗ್ರಹಿಸಿ ಅದನ್ನು ಗೋಲಾಕಾರ ಮಾಡಲು ಹೇಳಲಾಗುತ್ತದೆ. ಇದರಿಂದ ಎಲ್ಲಿ ಕೊನೆಯಾಗುತ್ತದೆಯೋ, ಆ ಕೊನೆಯಿಂದಲೇ ಪುನಃ ಪುನಃ ನಿರ್ಮಿತಿಯಾಗುತ್ತದೆ, ಎಂಬ ಸಂದೇಶ ನೀಡಲಾಗುತ್ತದೆ.
ವಿವಿಧ ಪಂಥಗಳ, ಹಾಗೆಯೇ ಅಮೇರಿಕಾ, ಯುರೋಪ್ ಮತ್ತು ಏಶಿಯಾ ಖಂಡದ ಅನೇಕ ದೇಶಗಳ ಉದಾಹರಣೆಗಳಿಂದ ಪ್ರತಿಯೊಂದು ಸ್ಥಳದಲ್ಲಿಯೂ ಪೂರ್ವಜರ ಮಹತ್ವವು ಸುಸ್ಪಷ್ಟವಾಗಿದೆ. ಹಾಗೆಯೇ ಎಲ್ಲ ಸ್ಥಳಗಳಲ್ಲಿಯೂ ಈ ಕಾಲಾವಧಿಯು ಆಗಸ್ಟ್‌ನಿಂದ ನವೆಂಬರ್ ಈ ಕಾಲಾವಧಿಯಲ್ಲಿರುತ್ತದೆ ಎಂಬುದೂ ಸ್ಪಷ್ಟವಾಗುತ್ತದೆ. ವಿಶೇಷವೆಂದರೆ ಭಾರತದಲ್ಲಿಯೂ ಪಿತೃಪಕ್ಷದ ಆಶ್ವಯುಜ ಮಾಸ ಸರಿಸುಮಾರು (ಆಗಸ್ಟ್ ಅಥವಾ ಸಪ್ಟೆಂಬರ್) ಇದೇ ಕಾಲದಲ್ಲಿ ಬರುತ್ತದೆ. ಇದರಿಂದ ಪೂರ್ವಜರಿಗಾಗಿ ಶಾಸ್ತ್ರೋಕ್ತ ಪದ್ಧತಿಯಿಂದ ಶ್ರಾದ್ಧವನ್ನು ಮಾಡುವವರ ಬಗ್ಗೆ ಹಿಂದೂ ಧರ್ಮವನ್ನು ಟೀಕಿಸುವವರ ಹಿಂದೂದ್ವೇಷ ಸ್ಪಷ್ಟವಾಗುತ್ತದೆ.
೭. ರಶ್ಯಾದ ನೇತಾರ ದಿವಂಗತ ಬೊರಿಸ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ರಶ್ಯಾದ ಸಾಮ್ಯವಾದಿ ಮುಖಂಡರಾದ ಸಾಝೀ ಉಮಾಲಾತೊವಾ ಇವರು ಭಾರತಕ್ಕೆ ಬಂದು ತರ್ಪಣ ಮತ್ತು ಪಿಂಡದಾನ ವಿಧಿ ಮಾಡುವುದು
ಅ. ಉಮಾಲಾತೊವಾ ಇವರ ಕಟ್ಟಾ ವಿರೋಧಿಯಾಗಿದ್ದ ಬೊರಿಸ ಯೆಲ್ತಸಿನ್ ಇವರು ಉಮಾಲಾತೊವಾ ಇವರ ಕನಸಿನಲ್ಲಿ ಬರುವುದು ಮತ್ತು ಅವರು ಅಸಂತುಷ್ಟರಾಗಿದ್ದಾರೆಂದು ಉಮಾಲಾತೊವಾ ಇವರಿಗೆ ಅರಿವಾಗುವುದು : ಮಾರ್ಚ್ ೨೦೧೦ರಲ್ಲಿ ರಶಿಯನ್ ಸಾಮ್ಯವಾದಿ ನೇತಾರರಾದ ಸಾಝೀ ಉಮಾಲಾತೊವಾ ಇವರು ರಶಿಯಾದ ಮಾಜಿ ರಾಷ್ಟ್ರಪತಿ ಬೊರಿಸ್ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಭಾರತಕ್ಕೆ ಬಂದು ತರ್ಪಣ ಮತ್ತು ಪಿಂಡದಾನ ವಿಧಿಯನ್ನು ಮಾಡಿದ್ದರು. ಉಮಾಲಾತೊವಾ ರಶಿಯಾದ ಮಾಜಿ ಸಂಸದರಾಗಿದ್ದು, ಅವರು ‘ಪಾರ್ಟಿ ಆಫ್ ಪೀಸ ಎಂಡ್ ಯುನಿಟಿ’ಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಅವರು ಸಾಮ್ಯವಾದಿ (ಕಮ್ಯುನಿಸ್ಟ್) ವಿಚಾರಗಳಿಗೆ ಸಂಬಂಧಿಸಿದ ಮುಖಂಡರಾಗಿದ್ದರು. ಉಮಾಲಾತೊವಾ ಇವರು ಗೊರ್ಬಾಚೇವ್ ಮತ್ತು ಯೆಲ್ತಸಿನ್ ಇವರ ಕಟ್ಟಾ ವಿರೋಧಿಗಳಾಗಿದ್ದರು. ಸೋವಿಯತ್ ಸಂಘದ ವಿಘಟನೆಗೆ ಅವರಿಂದ ತೀವ್ರ ವಿರೋಧವಿತ್ತು. ಸೋವಿಯತ್ ಸಂಘದ ವಿಘಟನೆಯ ಕಾರಣದಿಂದ ಅವರಲ್ಲಿ ತೀವ್ರ ಮತಭೇದವೂ ಆಗಿತ್ತು. ಉಮಾಲಾತೊವಾ ಇವರು ಹೇಳಿದಂತೆ ಯೆಲ್ತಸಿನ್‌ರವರು ಮೇಲಿಂದ ಮೇಲೆ ಅವರ ಕನಸಿನಲ್ಲಿ ಬರುತ್ತಾರೆ ಮತ್ತು ಅವರೊಂದಿಗೆ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕೆಲವೊಮ್ಮೆ ಅವರು ಅಪರಾಧಿ ಭಾವನೆಯಿಂದ ದುಃಖಿತರಾಗುತ್ತಾರೆ ಎಂದು ಹೇಳಿದ್ದಾರೆ. ಇದರಿಂದ ಯೆಲ್ತಸಿನ್ ಇವರ ಆತ್ಮ ಅಸಂತುಷ್ಟವಾಗಿದೆ ಮತ್ತು ಅಶಾಂತವಾಗಿದೆ ಎಂದು ಅನಿಸುತ್ತದೆ ಎಂದು ಉಮಾಲಾತೊವಾ ಇವರ ಅನಿಸಿಕೆಯಾಗಿತ್ತು.
೭ ಆ. ಉಮಾಲಾತೊವಾ ಇವರು ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಯಜ್ಞ ಮತ್ತು ತರ್ಪಣೆ ನೀಡುವ ಇಚ್ಛೆಯನ್ನು ವ್ಯಕ್ತಪಡಿಸುವುದು : ಉಮಾಲಾತೊವಾರವರು ತಮ್ಮ ಈ ಕನಸಿನ ಬಗ್ಗೆ ಹರಿದ್ವಾರದಲ್ಲಿರುವ ದೇವ ಸಂಸ್ಕೃತಿ ವಿಶ್ವವಿದ್ಯಾಲಯದ ವಿದೇಶ ವಿಭಾಗದ ಅಧ್ಯಕ್ಷರಾದ ಡಾ. ಜ್ಞಾನೇಶ್ವರ ಮಿಶ್ರ ಇವರೊಂದಿಗೆ ಚರ್ಚೆಯನ್ನು ಮಾಡಿದರು ಮತ್ತು ಅವರಲ್ಲಿ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಯಜ್ಞ ಮತ್ತು ತರ್ಪಣೆ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.
೭ ಇ. ಉಮಾಲಾತೊವಾ ಇವರಿಗೆ ಶ್ರಾದ್ಧ-ತರ್ಪಣೆ ವಿಧಿಯನ್ನು ಮಾಡಿದಾಗಿನಿಂದ ಬಹಳ ಸಹಜತೆಯೆನಿವುದು ಮತ್ತು ಅವರು ವೈದಿಕ ಧರ್ಮದ ದೀಕ್ಷೆಯನ್ನು ಸ್ವೀಕರಿಸಲು ನಿರ್ಣಯಿಸುವುದು : ಉಮಾಲಾತೊವಾ ಇವರ ಇಚ್ಛೆಯಂತೆ ಹರಿದ್ವಾರದಲ್ಲಿ ಪಂಡಿತ ಉದಯ ಮಿಶ್ರ ಮತ್ತು ಪಂಡಿತ ಶಿವಪ್ರಸಾದ ಮಿಶ್ರ ಇವರ ಮಾರ್ಗದರ್ಶನದಲ್ಲಿ ಈ ವಿಧಿಯನ್ನು ಪೂರ್ಣಗೊಳಿಸಲಾಯಿತು. ಅಲ್ಲಿ ಅವರು ಯೆಲ್ತಸಿನ್ ಇವರಿಗಾಗಿ ತರ್ಪಣೆಯನ್ನು ನೀಡಿದರು. ಹಾಗೆಯೇ ಅವರು ತಮ್ಮ ತಂದೆ-ತಾಯಿ ಮತ್ತು ಅಫಘಾನಿಸ್ತಾನದಲ್ಲಿ ಹತ್ಯೆಗೀಡಾದ ತಮ್ಮ ಇಬ್ಬರು ಸಹೋದರರಿಗಾಗಿಯೂ ಯಜ್ಞ ಮತ್ತು ಪಿಂಡದಾನವನ್ನು ಮಾಡಿದರು, ಹಾಗೆಯೇ ಶಾಂತಿಗಾಗಿ ಪ್ರಾರ್ಥನೆಯನ್ನು ಮಾಡಿದರು. ತದನಂತರ ಉಮಾಲಾತೋವಾ ಇವರು ‘ಶ್ರಾದ್ಧ-ತರ್ಪಣೆ ಮಾಡಿದಾಗಿನಿಂದ ನನಗೆ ಬಹಳ ಸಹಜತೆಯೆನಿಸುತ್ತಿದೆ. ನನ್ನ ಮೇಲಿದ್ದ ಋಣಗಳು ತೀರಿದವು ಎಂದು ನನಗನ್ನಿಸುತ್ತಿದೆ’, ಎಂದು ಹೇಳಿದರು. ಉಮಾಲಾತೊವಾ ಭಾರತೀಯ ಸಂಸ್ಕೃತಿ ಮತ್ತು ತತ್ತ್ವಜ್ಞಾನಗಳಿಂದ ಎಷ್ಟು ಪ್ರಭಾವಿತರಾದರೆಂದರೆ, ಅವರು ವೈದಿಕ ಧರ್ಮದ ದೀಕ್ಷೆಯನ್ನು ಪಡೆದುಕೊಳ್ಳಲು ನಿರ್ಣಯಿಸಿದರು.
೮. ಹಾಲಿವುಡ್‌ನ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟೆಲೋನ್ ಇವರ ಮೃತ ಪುತ್ರನ ಆತ್ಮಶಾಂತಿಗಾಗಿ ಹರಿದ್ವಾರದಲ್ಲಿ ಪಿಂಡದಾನ ಮತ್ತು ಶ್ರಾದ್ಧ ಮಾಡುವುದು
ಹಾಲಿವುಡ್‌ನ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟೆಲೋನ್ ಇವರಿಗೆ ಅವರ ಮರಣ ಹೊಂದಿದ ಮಗನ ಆತ್ಮದ ನಿರಂತರ ಅರಿವಾಗುತ್ತಿತ್ತು. ಇದರಿಂದ ಅವರು ಮಗನ ಆತ್ಮಕ್ಕೆ ಶಾಂತಿ ದೊರಕಬೇಕು ಎಂದು ಸಂಪೂರ್ಣ ಕುಟುಂಬವನ್ನು ಭಾರತಕ್ಕೆ ಕಳುಹಿಸಿ ಹರಿದ್ವಾರದಲ್ಲಿ ಪಿಂಡದಾನ ಮತ್ತು ಶ್ರಾದ್ಧ ವಿಧಿಯನ್ನು ಮಾಡಿಸಿಕೊಂಡರು. ಈ ವಿಧಿಯ ಬಳಿಕ ಒಬ್ಬನೇ ಒಬ್ಬ ಹಿಂದೂವು ಅವರಿಗೆ ನೀವು ಕ್ರೈಸ್ತರು ಹಾಗಾಗಿ ಪಿಂಡದಾನ ಆಗಲು ಸಾಧ್ಯವಿಲ್ಲ ವೆಂದು ಹೇಳಿದ್ದಾರೆಯೇ ? ಅಂದರೆ ಹಿಂದೂ ಧರ್ಮದಲ್ಲಿನ ಶ್ರಾದ್ಧವಿಧಿಗಳಿಗೆ ಮತ್ತು ಪಂಥಗಳಿಗೆ ಯಾವುದೇ ಸಂಬಂಧವಿಲ್ಲ.
ಹಿಂದೂ ಧರ್ಮದಲ್ಲಿನ ಸಿದ್ಧಾಂತಗಳು ವೈಶ್ವಿಕ ಆಗಿರುವುದರಿಂದ ಅವುಗಳಿಗೆ ಯಾವುದೇ ಧರ್ಮದ (ಪಂಥದ) ಬಂಧನವಿಲ್ಲದಿರುವುದು ಮತ್ತು ಇತರ ಧರ್ಮದವರಿಗೂ ಅದರ ಲಾಭವಾಗುವುದು
ಹಿಂದೂ ಧರ್ಮದಲ್ಲಿನ ಸಿದ್ಧಾಂತಗಳನ್ನು ಚಿರಂತನ ಮತ್ತು ವೈಶ್ವಿಕ ಸಿದ್ಧಾಂತಗಳೆಂದು ತಿಳಿಯಲಾಗುತ್ತದೆ. ಹಿಂದೂವಿರಲಿ ಅಥವಾ ಇತರ ಯಾವುದೇ ಪಂಥದ ವ್ಯಕ್ತಿಯಾಗಿರಲಿ, ಯಾರು ಧರ್ಮಶಾಸ್ತ್ರವನ್ನು ಪಾಲಿಸುತ್ತಾರೆಯೋ, ಅವರಿಗೆ ಖಂಡಿತವಾಗಿಯೂ ಅದರ ಲಾಭ ಸಿಗುತ್ತದೆ. ಯಾವ ರೀತಿ ಯಾವುದಾದರೂಂದು ಔಷಧಿಯನ್ನು ತೆಗೆದುಕೊಳ್ಳುವ ವ್ಯಕ್ತಿಗೆ, ಆ ವ್ಯಕ್ತಿ ಯಾವುದೇ ಪಂಥ, ಜಾತಿ, ಧರ್ಮದವನಾಗಿರಲಿ, ಅವನಿಗೆ ಅದರ ಲಾಭವಾಗುತ್ತದೆಯೋ, ಅದೇ ರೀತಿ ಹಿಂದೂ ಧರ್ಮಶಾಸ್ತ್ರಾನುಸಾರ ಕೃತಿಯನ್ನು ಮಾಡುವುದರಿಂದ ಎಲ್ಲರಿಗೂ ಲಾಭವಾಗುತ್ತದೆ.
ಸದ್ಯ ಪ್ರಗತಿಶೀಲ ದೇಶಗಳಲ್ಲಿ ಬಹುತೇಕ (ಶೇ. ೬೦ ರಿಂದ ೮೦ ರಷ್ಟು) ಜನರು ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಅಮೇರಿಕಾದಲ್ಲಿಯೂ ೫ ವ್ಯಕ್ತಿಗಳಲ್ಲಿ ಒಬ್ಬನಿಗೆ ಮಾನಸಿಕ ರೋಗವಿದೆ, ಅದರ ತುಲನೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ; ಆದರೆ ಆಧ್ಯಾತ್ಮಿಕ ದೇಶವಾಗಿರುವ ಭಾರತದಲ್ಲಿ ಅಂತಹವರ ಪ್ರಮಾಣ ಅಲ್ಪವೇಕೆ ಎಂಬುವುದರ ಅಧ್ಯಯನವನ್ನು ಏಕೆ ಮಾಡಬೇಕು. ಕೇವಲ ಆಧುನಿಕ ವಿಜ್ಞಾನ ಮತ್ತು ಭೌತಿಕತೆಯ ಆಧಾರದಲ್ಲಿ ಎಲ್ಲ ಸಮಸ್ಯೆಗಳ ಮೇಲೆ ಉಪಾಯ ಸಿಗುವುದಿಲ್ಲ. ಇದೇ ಕಾರಣದಿಂದ ಗಯಾ(ಬಿಹಾರ)ದಂತಹ ತೀರ್ಥಕ್ಷೇತ್ರಗಳಲ್ಲಿ ಅನೇಕ ವಿದೇಶಿ ನಾಗರಿಕರು ಶ್ರಾದ್ಧ-ಪಿಂಡದಾನ, ತರ್ಪಣೆ ಇತ್ಯಾದಿ ಮಾಡಲು ಬರುತ್ತಾರೆ.
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
very interesting and useful.