ಸಂಕಲನ : ಪರಾತ್ಪರ ಗುರು ಡಾ. ಜಯಂತ ಆಠವಲೆ
ಆಪತ್ಕಾಲದ ಲೇಖನಮಾಲೆಯ ಹಿಂದಿನ ಲೇಖನದಲ್ಲಿ ನಾವು ಕೌಟುಂಬಿಕ ಸ್ತರದಲ್ಲಿ ಬೇಕಾಗುವ ನಿತ್ಯೋಪಯೋಗಿ ವಸ್ತುಗಳ ಪರ್ಯಾಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ. ಈ ಲೇಖನದಲ್ಲಿ ಆಹಾರ ಸಂಗ್ರಹದ ಮಾಹಿತಿಯನ್ನು ನೀಡಲಾಗಿದೆ.
೧೦. ಆಪತ್ಕಾಲದಲ್ಲಿ ಆಹಾರವಿಲ್ಲದಿದ್ದಾಗ ಉಪವಾಸ ಬೀಳದಿರಲು ಇದನ್ನು ಮಾಡಿರಿ !
ಅ. ಮುಂದಿನ ಕೆಲವು ತಿಂಗಳು ಅಥವಾ ಕೆಲವು ವರ್ಷ ಸಾಕಾಗುವಷ್ಟು ಆಹಾರಧಾನ್ಯಗಳನ್ನು ಶೇಖರಿಸಿಡುವುದು
ಆಪತ್ಕಾಲದಲ್ಲಿ ಮಾರುಕಟ್ಟೆ ಅಥವಾ ಅಂಗಡಿಗಳಲ್ಲಿ ಆಹಾರಧಾನ್ಯಗಳು ಸಿಗುತ್ತಿದ್ದರೂ, ಅವುಗಳನ್ನು ಖರೀದಿಸಲು ಬಹಳ ಜನದಟ್ಟಣೆಯಾಗುವುದರಿಂದ ಎಲ್ಲ ಆಹಾರಧಾನ್ಯಗಳು ಸ್ವಲ್ಪ ಸಮಯದಲ್ಲಿಯೇ ಖಾಲಿಯಾಗಬಹುದು. ಸರಕಾರದಿಂದ ಆಹಾರಧಾನ್ಯಗಳ ಪೂರೈಕೆಯಾದರೂ, ಅದು ಸೀಮಿತವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಉಪವಾಸ ಬೀಳುವ ಅಥವಾ ಆಹಾರಧಾನ್ಯಗಳಿಗಾಗಿ ಅಲೆದಾಡುವ ಪರಿಸ್ಥಿತಿ ಬರಬಾರದೆಂದು ಮೊದಲೇ ಆಹಾರಧಾನ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಶೇಖರಿಸಿಡುವುದು ಆವಶ್ಯಕವಾಗಿದೆ.
ಅ ೧. ಯಾವ ಪದಾರ್ಥಗಳನ್ನು ಶೇಖರಿಸಿಡಬೇಕು ಮತ್ತು ಯಾವ ಪದಾರ್ಥಗಳನ್ನು ಶೇಖರಿಸಿಡಬಾರದು ?
ಧಾನ್ಯಗಳು, ದ್ವಿದಳಧಾನ್ಯಗಳು, ಎಣ್ಣೆ, ತುಪ್ಪ, ಮಸಾಲೆ ಇವುಗಳನ್ನು ಶೇಖರಿಸಿಡಬೇಕು. ನಿರ್ದಿಷ್ಟ ಋತುಗಳಲ್ಲಿ ಬೆಳೆಯುವ ತರಕಾರಿ ಅಥವಾ ಹಣ್ಣುಗಳನ್ನು ಆದಷ್ಟು ಶೇಖರಿಸಿಡಬಾರದು; ಏಕೆಂದರೆ ಆಯುರ್ವೇದಕ್ಕನುಸಾರ ಆಯಾ ಋತುಗಳಲ್ಲಿ ಬೆಳೆಯುವ ತರಕಾರಿ ಮತ್ತು ಹಣ್ಣುಗಳನ್ನು ಆಯಾ ಋತುಗಳಲ್ಲಿಯೇ ತಿನ್ನಬೇಕು ಎಂಬ ಶಾಸ್ತ್ರವಿದೆ. ಇತರ ಋತುಗಳಲ್ಲಿ ಬೆಳೆಯುವ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಮುಖ್ಯ ಆಹಾರವೆಂದು ಅಥವಾ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಪ್ರತಿದಿನ ಸೇವಿಸುವುದು ರೋಗಕ್ಕೆ ಕಾರಣವಾಗಬಲ್ಲದು. ಋತುಗಳಿಗನುಸಾರ ತರಕಾರಿ ಮತ್ತು ಹಣ್ಣುಗನ್ನು ನಾವೇ ಬೆಳೆಸಿದರೆ ನಮಗೆ ಬೇಕಾದಾಗ ಲಭ್ಯವಾಗುವುವು.
ಅ ೨. ಆಹಾರಧಾನ್ಯಗಳನ್ನು ಶೇಖರಿಸಿಡುವುದರ ಹಿಂದಿನ ತತ್ತ್ವಗಳು
ಅ ೨ ಅ. ಸಾವಯವ ಪದ್ಧತಿಯಿಂದ (ಆರ್ಗ್ಯಾನಿಕ್ ಪದ್ಧತಿಯಿಂದ – ರಾಸಾಯನಿಕ ಗೊಬ್ಬರ ಅಥವಾ ದ್ರವ್ಯಗಳನ್ನು ಉಪಯೋಗಿಸದೆ) ಬೆಳೆಸಿದ ಧಾನ್ಯಗಳು ಆರೋಗ್ಯಕ್ಕೆ ಲಾಭದಾಯಕವಾಗಿರುತ್ತವೆ. ಇಂತಹ ಧಾನ್ಯಗಳು ರಾಸಾಯನಿಕಗಳನ್ನು ಸಿಂಪಡಿಸಿ ಬೆಳೆಸಿದ ಧಾನ್ಯಗಳ ತುಲನೆಯಲ್ಲಿ ಹೆಚ್ಚು ದಿನ ಉಳಿಯುತ್ತವೆ.
ಅ ೨ ಆ. ಆಹಾರಧಾನ್ಯಗಳನ್ನು ಮುಗ್ಗಲು, ಕೀಟ, ಹಾಗೆಯೇ ಇಲಿ, ಹೆಗ್ಗಣ ಇತ್ಯಾದಿ ಉಪದ್ರವಿ ಪ್ರಾಣಿಗಳಿಂದ ರಕ್ಷಿಸುವುದು ಆವಶ್ಯಕವಾಗಿದೆ.
ಅ ೨ ಇ. ಮಳೆಗಾಲದಲ್ಲಿ ಹವೆಯಲ್ಲಿ ತೇವಾಂಶವು ಹೆಚ್ಚಿರುವುದರಿಂದ ಈ ಕಾಲದಲ್ಲಿ ಆಹಾರಧಾನ್ಯಗಳ ಆರೈಕೆಯನ್ನು ಮುತುವರ್ಜಿಯಿಂದ ಮಾಡಬೇಕಾಗುತ್ತದೆ.
ಅ ೩. ಆಹಾರಧಾನ್ಯಗಳನ್ನು ಹೀಗೆ ಶೇಖರಿಸಿ !
ಮಹಾರಾಷ್ಟ್ರದ ಅಕೋಲಾದಲ್ಲಿನ ಹಿರಿಯ ಆಯುರ್ವೇದ ತಜ್ಞ ವೈದ್ಯರಾದ ಅರುಣ ರಾಠಿಯವರು ಅನೇಕ ವರ್ಷಗಳಿಂದ ಪಾರಂಪರಿಕ ಪದ್ಧತಿಯಿಂದ ಆಹಾರಧಾನ್ಯಗಳ ಶೇಖರಣೆಯನ್ನು ಮಾಡುತ್ತಿದ್ದಾರೆ. ಈ ಪದ್ಧತಿಯು ಮುಂದಿನಂತಿದೆ.
ಅ ೩ ಅ. ಧಾನ್ಯಗಳನ್ನು ಖರೀದಿಸುವುದು ಮತ್ತು ಅವುಗಳನ್ನು ಬಿಸಿಲಿನಲ್ಲಿ ಒಣಗಿಸುವುದು
ಅ ೩ ಅ ೧. ಸಂಗ್ರಹಿಸಿಡುವ ಧಾನ್ಯಗಳನ್ನು ಏಪ್ರಿಲ್-ಮೇ ತಿಂಗಳುಗಳಲ್ಲಿ ಖರೀದಿಸಬೇಕು. ಸಾಧ್ಯವಿದ್ದಲ್ಲಿ ಧಾನ್ಯಗಳನ್ನು ನೇರವಾಗಿ ರೈತರಿಂದ ಖರೀದಿಸಬೇಕು.
ಅ ೩ ಅ ೨. ಧಾನ್ಯಗಳನ್ನು ಮನೆಗೆ ತಂದ ನಂತರ ಅವುಗಳನ್ನು ಕಡು ಬಿಸಿಲಿನಲ್ಲಿ ಸಾಧ್ಯವಿದ್ದಷ್ಟು ಪೂರ್ತಿಯಾಗಿ ಒಣಗಿಸಬೇಕು. ಅಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ಅವು ಟೊಳ್ಳಾಗುತ್ತವೆ. ಆದ್ದರಿಂದ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬಾರದು.
ಅ ೩ ಅ ೩. ಯಾವ ಪಾತ್ರೆಗಳಲ್ಲಿ ಧಾನ್ಯವನ್ನು ಶೇಖರಿಸಿಡಬೇಕಾಗಿದೆಯೋ, ಆ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆದು ಕಡುಬಿಸಿಲಿನಲ್ಲಿ ಇಡಬೇಕು. ಪಾತ್ರೆಗಳನ್ನು ಬಿಸಿಲಿನಲ್ಲಿಡುವುದು ಸಾಧ್ಯವಿಲ್ಲದಿದ್ದಲ್ಲಿ, ಅವುಗಳನ್ನು ಸ್ವಲ್ಪ ಬಿಸಿ ಮಾಡಬೇಕು. ಅವುಗಳಲ್ಲಿನ ನೀರು ಪೂರ್ಣವಾಗಿ ಹೋಗಬೇಕು.
ಅ ೩ ಅ ೪. ಡಬ್ಬಗಳ ಬದಲು ಚೀಲ ಅಥವಾ ಗೋಣಿಚೀಲಗಳನ್ನು ಬಳಸುವುದಿದ್ದಲ್ಲಿ, ಅವು ಆದಷ್ಟು ಹೊಸದಾಗಿರಬೇಕು. ಹೊಸದು ಸಿಗದಿದ್ದರೆ ಅವುಗಳನ್ನು ಸ್ವಚ್ಛವಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಅವುಗಳಲ್ಲಿನ ನೀರಿನ ಅಂಶ ಸಂಪೂರ್ಣವಾಗಿ ಹೋಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಅ ೩ ಆ. ಕ್ರಿಮಿಕೀಟಗಳನ್ನು ತಡೆಗಟ್ಟಲು ಅತ್ಯಂತ ಮಹತ್ವದ ಉಪಾಯ – ಧೂಪ ಹಾಕುವುದು (ಧೂಪವಿಧಿ)
ಅ ೩ ಆ ೧. ಬೆರಣಿ, ಬೇವಿನ ಎಲೆ, ಸಾಸಿವೆ, ಸೈಂಧವ ಲವಣ, ಅರಶಿಣ ಮತ್ತು ವಿಶೇಷವಾಗಿ ಒಣ (ಕೆಂಪು) ಮೆಣಸಿನಕಾಯಿ ಇವುಗಳನ್ನು ಒಟ್ಟುಗೊಳಿಸಿ ಕರ್ಪೂರದ ತುಂಡಿನ ಸಹಾಯದಿಂದ ಹೊತ್ತಿಸಿ ಹೊಗೆ ಮಾಡಬೇಕು. ಅದರ ಮೇಲೆ ಧಾನ್ಯವನ್ನು ಸಂಗ್ರಹಿಸುವ ಪಾತ್ರೆಗಳನ್ನು ಮಗುಚಿ ಹಿಡಿಯಬೇಕು ಮತ್ತು ಪಾತ್ರೆಗಳಲ್ಲಿ ಹೊಗೆ ತುಂಬಿಸಬೇಕು.
ಅ ೩ ಆ ೨. ಪಾತ್ರೆಗಳಲ್ಲಿ ಹೊಗೆ ತುಂಬಿದ ನಂತರ ಪಾತ್ರೆಗಳ ಮುಚ್ಚಳವನ್ನು ಹಾಕಿ ೧೫ ರಿಂದ ೨೦ ನಿಮಿಷ ಮುಚ್ಚಿಡಬೇಕು. ಈ ಪ್ರಕ್ರಿಯೆಗೆ ‘ಧೂಪವಿಧಿ’ ಎನ್ನುತ್ತಾರೆ. ಯಾವುದೇ ಆಹಾರಧಾನ್ಯಗಳ ಸಂಗ್ರಹಕ್ಕಾಗಿ ಧೂಪವಿಧಿ ತುಂಬಾ ಮಹತ್ವದ್ದಾಗಿದೆ. ಧೂಪವಿಧಿಯಲ್ಲಿ ಬಳಸಲಾಗುವ ಪದಾರ್ಥಗಳಿಂದ, ವಿಶೇಷವಾಗಿ ಕೆಂಪು ಮೆಣಸಿನಕಾಯಿಗಳಿಂದ ಧಾನ್ಯಕ್ಕೆ ಹುಳ ಹಿಡಿಯುವುದಿಲ್ಲ.
ಅ ೩ ಆ ೩. ಸಾಧ್ಯವಿರುವವರು ಧೂಪವಿಧಿಗಾಗಿ ಮೇಲಿನ ವಸ್ತುಗಳಲ್ಲಿ ಸ್ವಲ್ಪ ಗಂಧಕ, ರಾಳ, ಲೋಬಾನ (ಒಂದು ವಿಧದ ಧೂಪ) ಮತ್ತು ಬಜೆ ಇವುಗಳನ್ನೂ ಹಾಕಬೇಕು, ಇದರಿಂದ ಧೂಪವು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಈ ವಸ್ತುಗಳು ಆಯುರ್ವೇದೀಯ ಔಷಧಿಗಳನ್ನು ತಯಾರಿಸಲು ತಗಲುವ ಸಾಮಾನು ದೊರೆಯುವ ಅಂಗಡಿಗಳಲ್ಲಿ ದೊರಕುತ್ತವೆ.
ಅ ೩ ಆ ೪. ಚೀಲಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸುವುದಿದ್ದಲ್ಲಿ ಚೀಲಗಳಿಗೂ ಮೇಲಿನಂತೆ ಧೂಪ ಹಾಕಬೇಕು.
ಅ ೩ ಇ. ಧಾನ್ಯಗಳನ್ನು ತುಂಬಿಸುವುದು
ಧಾನ್ಯವು ಡಬ್ಬದ ಆಕಾರಕ್ಕಿಂತ ಕಡಿಮೆಯಿದ್ದರೆ, ಅದನ್ನು ಪ್ಲಾಸ್ಟಿಕಿನ ಚೀಲದಲ್ಲಿ ತುಂಬಿ ಡಬ್ಬದಲ್ಲಿಡಬೇಕು. ಡಬ್ಬದಲ್ಲಿ ಅಥವಾ ಚೀಲದಲ್ಲಿ ಧಾನ್ಯಗಳನ್ನು ಮುಂದಿನಂತೆ ತುಂಬಿಸಬೇಕು.
ಅ ೩ ಇ ೧. ಬೇವಿನ ಎಲೆಗಳನ್ನು ಕಡು ಬಿಸಿಲಿನಲ್ಲಿ ಒಣಗಿಸಿ ಅವುಗಳಲ್ಲಿನ ನೀರಿನ ಅಂಶವು ಸಂಪೂರ್ಣ ಹೋಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಎಲೆಗಳು ಬಾಡಬಾರದು. ಬೇವಿನ ಎಲೆಗಳು ಲಭ್ಯವಿಲ್ಲದಿದ್ದರೆ, ನೆಕ್ಕಿ ಗಿಡದ ಎಲೆಗಳನ್ನು ಬಳಸಬೇಕು.
ಅ ೩ ಇ ೨. ಡಬ್ಬದಲ್ಲಿ ಅಥವಾ ಚೀಲದಲ್ಲಿ ಧಾನ್ಯಗಳನ್ನು ತುಂಬುವಾಗ, ಕೆಲವು ಒಣಗಿದ ಬೇವಿನ ಎಲೆಗಳನ್ನು ಕೆಳಭಾಗದಲ್ಲಿ ಇಟ್ಟು ಅದರ ಮೇಲೆ ಕಾಗದ ಅಥವಾ ಸ್ವಚ್ಛವಾಗಿ ತೊಳೆದ ಹತ್ತಿ (ನೂಲಿನ) ಬಟ್ಟೆಯನ್ನು ಹರಡಬೇಕು. ಡಬ್ಬದಲ್ಲಿ ಧಾನ್ಯಗಳನ್ನು ತುಂಬಿಸಿದ ನಂತರ ಆಕಸ್ಮಿಕವಾಗಿ ಡಬ್ಬದಲ್ಲಿ ಆವಿಯಿದ್ದರೆ, ಅದನ್ನು ಕಾಗದ ಅಥವಾ ಹತ್ತಿ ಬಟ್ಟೆಯು ಹೀರಿಕೊಳ್ಳುತ್ತದೆ.
ಅ ೩ ಇ ೩. ಧಾನ್ಯಗಳನ್ನು ತುಂಬುವಾಗ, ಪ್ರತಿ ಕೆಜಿಗೆ ೪-೫ ರ ಪ್ರಮಾಣದಲ್ಲಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಎಳೆ ಗೊಡಂಬಿಗಳನ್ನು ಹಾಕಬೇಕು. ಎಳೆ ಗೊಡಂಬಿ ಆಯುರ್ವೇದೀಯ ಔಷಧಿಗಳನ್ನು ತಯಾರಿಸಲು ತಗಲುವ ಸಾಮಾನು ದೊರೆಯುವ ಅಂಗಡಿಗಳಲ್ಲಿ ದೊರಕುತ್ತವೆ. ಗೇರು ಬೀಜಗಳು ಲಭ್ಯವಿಲ್ಲದಿದ್ದರೆ, ಆಯುರ್ವೇದೀಯ ‘ಭೀಮಸೇನಿ’ ಕರ್ಪೂರದ ತುಂಡುಗಳನ್ನು ಬೇರೆ ಬೇರೆ ಕಾಗದಗಳಲ್ಲಿ ಸುತ್ತಿ ಒಂದು ಕೆಜಿ ಧಾನ್ಯಕ್ಕೆ ಒಂದು ತುಂಡಿನ ಪ್ರಕಾರ ಧಾನ್ಯದ ನಡುನಡುವೆ ಇಡಬೇಕು. (ಸನಾತನದ ಆಯುರ್ವೇದೀಯ ಭೀಮಸೇನಿ ಕರ್ಪೂರವು ಸನಾತನದ ಉತ್ಪನ್ನಗಳ ವಿತರಕರಲ್ಲಿ ಲಭ್ಯವಿದೆ. – ಸಂಕಲನಕಾರರು)
ಅ ೩ ಇ ೪. ಧಾನ್ಯಗಳನ್ನು ತುಂಬಿಸಿದ ನಂತರ, ಅದರ ಮೇಲೆ ಪುನಃ ಕಾಗದ ಅಥವಾ ಹತ್ತಿ ಬಟ್ಟೆಯನ್ನು ಹರಡಿ, ಅದರ ಮೇಲೆ ಪುನಃ ಒಣಗಿದ ಬೇವಿನ ಎಲೆಗಳನ್ನು ಹಾಕಿಡಬೇಕು.
ಅ ೩ ಇ ೫. ಡಬ್ಬದ ಮುಚ್ಚಳದ ಒಳಭಾಗಕ್ಕೆ ಕರ್ಪೂರದ ಒಂದು ತುಂಡನ್ನು ಸೆಲ್ಲೋಟೇಪಿನಿಂದ ಅಂಟಿಸಬೇಕು. ಕರ್ಪೂರದ ವಾಸನೆಯಿಂದ ಇರುವೆ ಮತ್ತು ಇತರ ಸಣ್ಣ ಕೀಟಗಳು ಸುಳಿದಾಡುವುದಿಲ್ಲ. ಚೀಲದಲ್ಲಿ ಕರ್ಪೂರದ ತುಂಡನ್ನು ಇಡಲಿಕ್ಕಿದ್ದರೆ ಅದನ್ನು ಕಾಗದದಲ್ಲಿ ಸುತ್ತಿ ಎಲ್ಲಕ್ಕಿಂತ ಮೇಲಿಡಬೇಕು ಮತ್ತು ಚೀಲದ ಬಾಯಿಯನ್ನು ಬಿಗಿಯಾಗಿ ಕಟ್ಟಬೇಕು.
ಅ ೩ ಇ ೬. ಡಬ್ಬದಲ್ಲಿ ಗಾಳಿ ಪ್ರವೇಶಿಸದಂತೆ ಡಬ್ಬದ ಮುಚ್ಚಳವನ್ನು ಬಿಗಿಯಾಗಿ ಹಾಕಬೇಕು. ಮುಚ್ಚಳವನ್ನು ಬಿಗಿಗೊಳಿಸಲು ಆವಶ್ಯಕತೆಗನುಸಾರ ಕಾಗದ ಅಥವಾ ಪ್ಲಾಸ್ಟಿಕಿನ ಕಾಗದವನ್ನು ಉಪಯೋಗಿಸಬೇಕು.
ಅ ೩ ಈ. ಧಾನ್ಯಗಳನ್ನು ತುಂಬಿದ ಡಬ್ಬಗಳನ್ನು ಅಥವಾ ಚೀಲಗಳನ್ನು ಯೋಗ್ಯ ಸ್ಥಳದಲ್ಲಿಡುವುದು
ಅ ೩ ಈ ೧. ಧಾನ್ಯಗಳನ್ನು ಸಂಗ್ರಹಿಸಿಡುವ ಕೋಣೆಯಲ್ಲಿಯೂ ತೇವಾಂಶ ಇರಬಾರದು. ಧಾನ್ಯಗಳನ್ನು ಸಂಗ್ರಹಿಸಿಡುವ ಮೊದಲು ಕೋಣೆಯನ್ನು ಸ್ವಚ್ಛವಾಗಿ ಗುಡಿಸಿ ಒರೆಸಿಕೊಳ್ಳಬೇಕು. ಈ ಕೋಣೆಯಲ್ಲಿ ಮೇಲೆ ಹೇಳಿದಂತೆ ಧೂಪವನ್ನು ಹಾಕಬೇಕು ಮತ್ತು ೧೫ ರಿಂದ ೨೦ ನಿಮಿಷಗಳ ಕಾಲ ಕೋಣೆಯನ್ನು ಮುಚ್ಚಿಡಬೇಕು. ಈ ಕೋಣೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ವಾರಕ್ಕೊಂದು ಸಲ ಧೂಪವನ್ನು ಹಾಕಬೇಕು.
ಅ ೩ ಈ ೨. ಧಾನ್ಯದ ಡಬ್ಬಗಳನ್ನು ನೆಲದ ಮೇಲಿಡದೇ ರ‍್ಯಾಕ್‌ನ ಮೇಲೆ ಅಥವಾ ಮರದ ಹಲಗೆಯ ಮೇಲಿಡಬೇಕು. ರ‍್ಯಾಕ್ ಅಥವಾ ಮರದ ಹಲಗೆಯನ್ನು ಗೋಡೆಗೆ ತಾಗಿಸಿಡದೇ ಸ್ವಲ್ಪ ಜಾಗ ಬಿಟ್ಟು ಇಟ್ಟರೆ ಸ್ವಚ್ಛತೆ ಮಾಡಲು ಸುಲಭವಾಗುತ್ತದೆ. ಧಾನ್ಯ ಸಂಗ್ರಹದ ಬಳಿ ಇಲಿ ಅಥವಾ ಹೆಗ್ಗಣಗಳು ಬರಬಾರದೆಂದು ಕೋಣೆಯ ಬಾಗಿಲುಗಳು ಸಂಪೂರ್ಣ ಮುಚ್ಚುವಂತಹವುಗಳು ಆಗಿರಬೇಕು, ಅವುಗಳಲ್ಲಿ ಅಂತರ (ಸ್ಪೇಸ್) ಇರಬಾರದು ಮತ್ತು ಗೋಡೆಗಳಲ್ಲಿ ಯಾವುದೇ ರೀತಿಯ ಬಿರುಕುಗಳು ಇರಬಾರದು.
ಅ ೩ ಈ ೩. ಸಾಧ್ಯವಿದ್ದಲ್ಲಿ ಧಾನ್ಯ ಸಂಗ್ರಹದ ಕೋಣೆಗೆ ಗಾಳಿ ಹೊರಹಾಕುವ (ಎಕ್ಸಾಸ್ಟ್ ಫ್ಯಾನ್) ವ್ಯವಸ್ಥೆಯನ್ನು ಮಾಡಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೭.೨೦೨೦)
ಅ ೩ ಉ. ಜಿರಳೆಗಳನ್ನು ತಡೆಗಟ್ಟಲು ಮಾಡಬೇಕಾದ ಉಪಾಯ
ಮುಂದಿನವುಗಳಲ್ಲಿ ಯಾವುದಾದರೊಂದು ಉಪಾಯ ಮಾಡಬೇಕು.
ಅ ೩ ಉ ೧. ೩ ಭಾಗ ಬೋರಿಕ್ ಪೌಡರ್ ಮತ್ತು ೧ ಭಾಗ ಗೋಧಿಹಿಟ್ಟಿನ ಮಿಶ್ರಣದಲ್ಲಿ ಸ್ವಲ್ಪ ನೀರನ್ನು ಸೇರಿಸಿ ಅಡಿಕೆಯಷ್ಟು ದೊಡ್ಡ ಉಂಡೆಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸಬೇಕು. ಎರಡು ಗೋಡೆಗಳು ಸೇರುವ ಮೂಲೆಯಲ್ಲಿ ಒಂದು ಉಂಡೆಯನ್ನು ಇಡಬೇಕು; ಏಕೆಂದರೆ ಜಿರಳೆಗಳು ಹೆಚ್ಚಾಗಿ ಎರಡು ಗೋಡೆಗಳ ಮೂಲೆಯಲ್ಲಿ ಬರುತ್ತವೆ ಮತ್ತು ಅಲ್ಲಿ ಏನಾದರೂ ಖಾದ್ಯಪದಾರ್ಥಗಳನ್ನು ಇಟ್ಟಿದ್ದರೆ ಅವುಗಳನ್ನು ತಿನ್ನುತ್ತವೆ. ಗೋಧಿಹಿಟ್ಟಿನ ವಾಸನೆಯಿಂದ ಜಿರಳೆಗಳು ಗೋಧಿಹಿಟ್ಟು ಮಿಶ್ರಿತ ಬೋರಿಕ್ ಪೌಡರ್ ಕೂಡ ತಿನ್ನುತ್ತವೆ ಮತ್ತು ಅವುಗಳ ಸಂತಾನೋತ್ಪತ್ತಿ ವ್ಯವಸ್ಥೆಯು ಹಾಳಾಗುತ್ತದೆ. ಇದರಿಂದಾಗಿ ಅವುಗಳಿಂದ ಹೊಸ ಜಿರಳೆಗಳು ಉತ್ಪತ್ತಿಯಾಗುವುದಿಲ್ಲ. ಬೋರಿಕ್ ಪೌಡರ್ ಇರುವ ಈ ಉಂಡೆಗಳು ಎಷ್ಟು ದಿನ ಬೇಕಾದರೂ ಉಳಿಯುತ್ತವೆ, ಆದರೂ ಆವಶ್ಯಕತೆಯೆನಿಸಿದರೆ ವರ್ಷಕ್ಕೊಂದು ಸಲ ಈ ಉಂಡೆಗಳನ್ನು ಬದಲಾಯಿಸಬೇಕು.
– ಡಾ. ಅಜಯ ಜೋಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೭.೨೦೨೦)
ಅ ೩ ಉ ೨. ಎರಡು ಗೋಡೆಗಳು ಸೇರುವ ಮೂಲೆಗಳಲ್ಲಿ ಪ್ರತಿಯೊಂದು ಕಡೆ ಒಂದೊಂದು ಡಾಂಬರಗುಳಿಗೆಯನ್ನಿಡಬೇಕು (naphthalene ball). ಡಾಂಬರ ಗುಳಿಗೆಗಳ ವಾಸನೆಯಿಂದ ಜಿರಲೆಗಳು ಬರುವುದಿಲ್ಲ. ಡಾಂಬರ ಗುಳಿಗೆಗಳನ್ನು ತೆರೆದಿಟ್ಟರೆ ಕೆಲವು ದಿವಸಗಳಲ್ಲಿ ಅವು ಗಾಳಿಯಲ್ಲಿ ಕರಗುತ್ತವೆ. ಆದ್ದರಿಂದ ಅವುಗಳನ್ನು ತೆರೆದಿಡದೇ ಕಾಗದದಲ್ಲಿ ಸುತ್ತಿ ಇಡಬೇಕು.
ಅ ೩ ಊ. ಸಂಗ್ರಹಿಸಿಟ್ಟ ಧಾನ್ಯಗಳಿಗೆ ತೆಗೆದುಕೊಳ್ಳಬೇಕಾದ ಕಾಳಜಿ
ಅ ೩ ಊ ೧. ತಿಂಗಳಿಗೊಮ್ಮೆ ಸಂಗ್ರಹಿಸಿದ ಧಾನ್ಯಗಳನ್ನು ಪರಿಶೀಲಿಸಬೇಕು.
ಅ ೩ ಊ ೨. ಧಾನ್ಯಗಳಿಗೆ ಒದ್ದೆ ಕೈ ತಾಗದಂತೆ ಕಾಳಜಿ ವಹಿಸಬೇಕು.
ಅ ೩ ಊ ೩. ದೀಪಾವಳಿಯ ನಂತರ ಮಳೆ ಹೋಗಿ ಬಿಸಿಲು ಬೀಳತೊಡಗುತ್ತದೆ. ಆಗ ಧಾನ್ಯಗಳನ್ನು ಪುನಃ ಬಿಸಿಲಿಗೆ ಇಟ್ಟು ಹಿಂದಿನಂತೆಯೇ ಧೂಪವನ್ನು ಹಾಕಿ ತುಂಬಿಸಿಡಬೇಕು.
ಅ ೪. ಧಾನ್ಯಗಳಿಗೆ ಹುಳಗಳು ತಾಗಬಾರದೆಂದು ಮಾಡಬೇಕಾದ ಕೆಲವು ಇತರ ಉಪಾಯಗಳು
ಮೇಲೆ ನೀಡಿದ ಧಾನ್ಯ ಸಂಗ್ರಹಿಸುವ ಪದ್ಧತಿಯನ್ನು ಎಲ್ಲ ಪದಾರ್ಥಗಳಿಗೆ, ಉದಾ. ಎಲ್ಲ ರೀತಿಯ ಧಾನ್ಯಗಳು, ದ್ವಿದಳಧಾನ್ಯಗಳು, ಮಸಾಲೆಯ ಪದಾರ್ಥಗಳು, ಬೆಲ್ಲ, ಸಕ್ಕರೆ ಇತ್ಯಾದಿಗಳಿಗೆ ಉಪಯೋಗಿಸಬಹುದು. ಯೋಗ್ಯ ಕಾಳಜಿಯನ್ನು ವಹಿಸಿ ಧಾನ್ಯಗಳನ್ನು ತುಂಬಿಸಿದರೆ ಸಾಮಾನ್ಯವಾಗಿ ಹುಳಗಳು ತಗಲುವುದಿಲ್ಲ; ಆದರೆ ಹವೆಯಲ್ಲಿ ತೇವಾಂಶ ಜಾಸ್ತಿಯಿರುವ ಕರಾವಳಿ ಪ್ರದೇಶದಲ್ಲಿ ಆವಶ್ಯಕವೆನಿಸಿದರೆ ಮೇಲಿನ ಪದ್ಧತಿಯೊಂದಿಗೆ ಮುಂದಿನ ಉಪಾಯಗಳನ್ನೂ ಮಾಡಬಹುದು. ಮುಂದಿನ ಯಾವುದೇ ಉಪಾಯವನ್ನು ಮಾಡುವ ಮೊದಲು ಮೇಲೆ ಹೇಳಿದಂತೆ ಧೂಪವಿಧಿ ಮಾಡುವುದು ಅತ್ಯಾವಶ್ಯಕವಾಗಿದೆ.
ಅ ೪ ಅ. ತೊಳೆದು ಬಳಸುವಂತಹ ಧಾನ್ಯಗಳಿಗೆ ಉಪಾಯ : ತೊಳೆದು ಬಳಸುವಂತಹ ಅಕ್ಕಿ ಮತ್ತು ಬೇಳೆಗಳಂತಹ ಧಾನ್ಯಗಳಿಗೆ ಮುಂದಿನವುಗಳಲ್ಲಿ ಯಾವುದಾದರೊಂದು ಪರ್ಯಾಯವನ್ನು ಉಪಯೋಗಿಸಬಹುದು. ಧಾನ್ಯಗಳನ್ನು ತೊಳೆಯುವುದರಿಂದ ಧಾನ್ಯಕ್ಕೆ ಹಾಕಿದ ಕ್ರಿಮಿಕೀಟ ತಡೆಗಟ್ಟುವ ಘಟಕವು ದೂರವಾಗುತ್ತದೆ.
ಅ ೪ ಅ ೧. ಬೋರಿಕ್ ಪೌಡರ್ : ಇದನ್ನು ಧಾನ್ಯದಲ್ಲಿ ಸರಿಯಾಗಿ ಮಿಶ್ರಣ ಮಾಡಬೇಕು. ೧೦ ಕೆಜಿಗೆ ೧೦ ಗ್ರಾಮ್ ‘ಬೋರಿಕ್ ಪೌಡರ್ ಸಾಕಾಗುತ್ತದೆ. ಧಾನ್ಯಗಳನ್ನು ಕಾಗದದ ಮೇಲೆ ಹರಡಿ ಸ್ವಲ್ಪ ಸ್ವಲ್ಪ ‘ಬೋರಿಕ್ ಪೌಡರ್ ಧಾನ್ಯಗಳ ಮೇಲೆ ಹಾಕಿ ಧಾನ್ಯಗಳನ್ನು ಕೈಯಿಂದ ಮೇಲೆ-ಕೆಳಗೆ ಮಾಡಬೇಕು, ಇದರಿಂದ ಪೌಡರ್ ಎಲ್ಲ ಧಾನ್ಯಗಳಿಗೆ ತಾಗುತ್ತದೆ.
ಅ ೪ ಅ ೨. ಬಳಪದ ಕಲ್ಲಿನ ಪುಡಿ ಅಥವಾ ಸುಣ್ಣ ಇವುಗಳ ಮಿಶ್ರಣ : ೩ ಭಾಗ ಬಳಪದ ಕಲ್ಲಿನ ಪುಡಿ (ಸೋಪ್‌ಸ್ಟೋನ್) ಮತ್ತು ೧ ಭಾಗ ಸುಣ್ಣದ ಮಿಶ್ರಣವನ್ನು ಬೋರಿಕ್ ಪೌಡರ್‌ನಂತೆ ಧಾನ್ಯಗಳಿಗೆ ಹಚ್ಚಬೇಕು. ಈ ವಸ್ತುಗಳು ಆಯುರ್ವೇದೀಯ ಔಷಧಗಳನ್ನು ತಯಾರಿಸುವ ಸಾಮಾನುಗಳು ದೊರಕುವ ಅಂಗಡಿಗಳಲ್ಲಿ ದೊರಕುತ್ತವೆ. ಬಳಪದ ಕಲ್ಲು ಒಂದು ಖನಿಜವಾಗಿದೆ.
ಅ ೪ ಅ ೩. ಬೂದಿ : ವಿಶೇಷವಾಗಿ ಬೇಳೆಗಳಿಗೆ, ಹಾಗೆಯೇ ಹೆಸರು, ಕಡಲೆ ಇತ್ಯಾದಿ ದ್ವಿದಳ ಧಾನ್ಯಗಳಿಗೆ ಬೂದಿಯನ್ನು ಹಚ್ಚಲಾಗುತ್ತದೆ. ಸಾಧಾರಣ ೧೦ ಕೆಜಿ ಧಾನ್ಯಗಳಿಗೆ ೧ ರಿಂದ ೨ ಕೆಜಿ ಒಣ ಬೂದಿಯನ್ನು ಬಳಸಬೇಕು. ಡಬ್ಬದಲ್ಲಿ ಧಾನ್ಯವನ್ನು ತುಂಬಿಸುವಾಗ ಮೊದಲು ಬೂದಿಯ ಒಂದು ಪದರು ಮಾಡಿ ಅದರ ಮೇಲೆ ಧಾನ್ಯದ ಒಂದು ಪದರು ಮತ್ತು ಪುನಃ ಬೂದಿಯ ಒಂದು ಪದರು ಆಮೇಲೆ ಧಾನ್ಯದ ಒಂದು ಪದರು ಹೀಗೆ ಅದಲು ಬದಲು ಮಾಡಿ ಡಬ್ಬವನ್ನು ತುಂಬಿಸಬೇಕು. ಎಲ್ಲಕ್ಕಿಂತ ಕೊನೆಯಲ್ಲಿ ಬೂದಿಯ ಒಂದು ಪದರನ್ನು ಮಾಡಬೇಕು.
ಅ ೪ ಆ. ಹೆಚ್ಚಾಗಿ ತೊಳೆದು ಉಪಯೋಗಿಸಲಾಗದ ಧಾನ್ಯಗಳಿಗೆ ಉಪಾಯ : ಜೋಳ, ಸಜ್ಜೆ ಮತ್ತು ಗೋಧಿಗಳಿಗೆ ಹರಳೆಣ್ಣೆ ಹಚ್ಚಬೇಕು. ಸಾಧಾರಣ ೨೦ ಕೆಜಿ ಧಾನ್ಯಕ್ಕೆ ಅರ್ಧ ಬಟ್ಟಲು (೭೫ ಮಿ.ಲೀ.) ಹರಳೆಣ್ಣೆಯನ್ನು ತಿಕ್ಕಿ ಹಚ್ಚಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೭.೨೦೨೦)
ಅ ೫. ರವೆ, ಎಣ್ಣೆ, ಮಸಾಲೆ ಸಾಮಾನು, ತರಕಾರಿ ಇತ್ಯಾದಿ ಪದಾರ್ಥಗಳನ್ನು ಶೇಖರಿಸುವ ಕೆಲವು ಪದ್ಧತಿಗಳು
ಮುಂದಿನ ಎಲ್ಲ ಪದಾರ್ಥಗಳನ್ನು ಡಬ್ಬಗಳಲ್ಲಿ ತುಂಬಿಸಿಡುವ ಮೊದಲು ಡಬ್ಬಗಳಿಗೆ ಧೂಪ ಹಾಕುವುದು ಆವಶ್ಯಕವಾಗಿದೆ.
ಅ ೫ ಅ. ರವೆ : ರವೆಯನ್ನು ತಂಪು ಪೆಟ್ಟಿಗೆಯಲ್ಲಿ (ಫ್ರಿಜ್ನಲ್ಲಿ) ಇಡಬೇಕು. ತಂಪು ಪೆಟ್ಟಿಗೆಯಲ್ಲಿ ಇಟ್ಟಿರುವ ರವೆಯು ೧ ವರ್ಷ ಉಳಿಯುತ್ತದೆ. ರವೆಯನ್ನು ತಂಪು ಪೆಟ್ಟಿಗೆಯ ಹೊರಗೆ ಇಡುವುದಿದ್ದಲ್ಲಿ ಅದನ್ನು ಹುರಿದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಬೇಕು. ಇಂತಹ ರವೆಯು ಸಾಮಾನ್ಯವಾಗಿ ೬ ರಿಂದ ೭ ತಿಂಗಳು ಉಳಿಯುತ್ತದೆ.
ಅ ೫ ಆ. ಅವಲಕ್ಕಿ : ಅವಲಕ್ಕಿಯನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಬೇಕು.
ಅ ೫ ಇ. ಶೇಂಗಾಬೀಜ : ನೆಲಗಡಲೆಯನ್ನು (ಸಿಪ್ಪೆ ಸಹಿತ / ಶೇಂಗಾಗಳನ್ನು) ಸಂಗ್ರಹಿಸಿಡಬೇಕು ಮತ್ತು ಆವಶ್ಯಕತೆಗನುಸಾರ ಅವುಗಳನ್ನು ಒಡೆದು ಅವುಗಳಲ್ಲಿನ ಬೀಜಗಳನ್ನು ಬಳಸಬೇಕು. ನೆಲಗಡಲೆ ವರ್ಷವಿಡೀ ಚೆನ್ನಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಶೇಂಗಾಬೀಜಗಳು ಸಾಮಾನ್ಯವಾಗಿ ೨ ರಿಂದ ೩ ತಿಂಗಳುಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ.
ಅ ೫ ಈ. ಸಕ್ಕರೆ, ಬೆಲ್ಲ ಮತ್ತು ಎಣ್ಣೆ : ಇವುಗಳನ್ನು ಗಾಳಿಯಾಡದ ಡಬ್ಬಗಳಲ್ಲಿ ತುಂಬಿಸಿಡಬೇಕು. ಇರುವೆಗಳು ಬರಬಾರದೆಂದು ಡಬ್ಬದ ಮುಚ್ಚಳಕ್ಕೆ ಒಳಗಿನ ಬದಿಯಿಂದ ಸೆಲ್ಲೋಟೇಪ್‌ನಿಂದ ಕರ್ಪೂರದ ತುಂಡನ್ನು ಅಂಟಿಸಬೇಕು. ಸಂಗ್ರಹಿಸಿದ ಎಣ್ಣೆಯನ್ನು ೬ ತಿಂಗಳುಗಳ ಒಳಗೆ ಉಪಯೋಗಿಸಬೇಕು, ಇಲ್ಲದಿದ್ದರೆ ಎಣ್ಣೆಗೆ ವಾಸನೆ ಬರುತ್ತದೆ. ಪ್ಲಾಸ್ಟಿಕ್ ಚೀಲ ಅಥವಾ ಗೋಣಿಚೀಲದಿಂದ ಸರಿಯಾಗಿ ಹೊದಿಸಿದ ಬೆಲ್ಲದ ಅಚ್ಚು ೪ ರಿಂದ ೫ ವರ್ಷಗಳ ಕಾಲ ಉಳಿಯಬಲ್ಲದು. ಒಡೆದ ಬೆಲ್ಲ ಬೇಗನೇ ಹಾಳಾಗಬಹುದು. ಆದ್ದರಿಂದ ಬೆಲ್ಲದ ಸಣ್ಣ ಅಚ್ಚುಗಳನ್ನು ಖರೀದಿಸಿಡಬೇಕು ಮತ್ತು ಆವಶ್ಯಕತೆಗನುಸಾರ ಅವುಗಳನ್ನು ಒಡೆಯಬೇಕು.
ಅ ೫ ಉ. ಉಪ್ಪು : ಉಪ್ಪನ್ನು ಪಿಂಗಾಣಿಯ (ಚೀನಿ ಮಣ್ಣಿನ) ಭರಣಿಯಲ್ಲಿ ಅಥವಾ ಗಾಜಿನ ಭರಣಿಯಲ್ಲಿ ತುಂಬಿಸಿಡಬೇಕು. ಭರಣಿಗೆ ಮುಚ್ಚಳ ಹಾಕಿ ಮುಚ್ಚಳದ ಮೇಲೆ ಹತ್ತಿಯ (ನೂಲಿನ) ಬಟ್ಟೆಯನ್ನು ಸುತ್ತಿ ಭರಣಿಯ ಕುತ್ತಿಗೆಯನ್ನು ಕಟ್ಟಬೇಕು. ಹೀಗಿಟ್ಟಿರುವ ಉಪ್ಪು ೪ ರಿಂದ ೫ ವರ್ಷಗಳ ಕಾಲ ಉಳಿಯುತ್ತದೆ. ವಾತಾವರಣದಲ್ಲಿನ ತೇವಾಂಶದಿಂದ ಉಪ್ಪು ತೇವವಾಗುತ್ತದೆ (ಹಸಿಯಾಗುತ್ತದೆ), ಆದ್ದರಿಂದ ಅದನ್ನು ಎಂದಿಗೂ ತೆರೆದಿಡಬಾರದು. ಉಪ್ಪು ತೇವವಾದರೆ ಅದನ್ನು ಬಿಸಿಲಿನಲ್ಲಿ ಒಣಗಿಸಿ ಒಣಗಿರುವ ಭರಣಿಯಲ್ಲಿ ತುಂಬಿಸಬೇಕು.
ಅ ೫ ಊ. ಹುಣಸೆ : ಬೀಜಗಳನ್ನು ತೆಗೆದು ಒಣಗಿಸಬೇಕು ಮತ್ತು ಉಪ್ಪು ಹಚ್ಚಿ ಶೇಖರಿಸಬೇಕು.
ಅ ೫ ಋ. ಮಸಾಲೆ ಪದಾರ್ಥಗಳು : ಬಿಸಿಲಿನಲ್ಲಿ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಬೇಕು.
ಅ ೫ ಎ. ಈರುಳ್ಳಿ, ಆಲೂಗಡ್ಡೆ ಮತ್ತು ಬೆಳ್ಳುಳ್ಳಿ : ಈರುಳ್ಳಿ, ಆಲೂಗಡ್ಡೆ ಮತ್ತು ಬೆಳ್ಳುಳ್ಳಿಗಳನ್ನು ಸರಿಯಾಗಿ ಸಂಗ್ರಹಿಸಿದರೆ ಸಾಮಾನ್ಯವಾಗಿ ಒಂದರಿಂದ ಒಂದೂವರೆ ವರ್ಷ ಉಳಿಯುತ್ತವೆ. ಈರುಳ್ಳಿ, ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ಪಕ್ವವಾಗಿರಬೇಕು. ಬೆಳ್ಳುಳ್ಳಿ ಒಣಗಿರಬೇಕು. ಈರುಳ್ಳಿ ಮತ್ತು ಆಲೂಗಡ್ಡೆ ಗಳನ್ನು ಗಾಳಿ ತಾಗುವಂತಹ ಶುಷ್ಕ ಜಾಗದಲ್ಲಿ ಹರಡಿಡಬೇಕು. ಈರುಳ್ಳಿ ಮತ್ತು ಬೆಳ್ಳುಳ್ಳಿಯ ಮಾಲೆಗಳನ್ನು ಖರೀದಿಸಿದ್ದಲ್ಲಿ ಅವುಗಳನ್ನು ನೇತು ಹಾಕಬೇಕು.
ಅ ೫ ಏ. ಕೆಲವು ತರಕಾರಿ ಮತ್ತು ಸೊಪ್ಪುಗಳು
ಅ ೫ ಏ ೧. ಸುವರ್ಣಗೆಡ್ಡೆ : ಸುವರ್ಣಗೆಡ್ಡೆಯು ವರ್ಷವಿಡೀ ಚೆನ್ನಾಗಿರುತ್ತದೆ. ಸುವರ್ಣಗೆಡ್ಡೆಯನ್ನು ಪಲ್ಯಕ್ಕಾಗಿ ಆವಶ್ಯಕವಾಗಿರುವಷ್ಟು ಕತ್ತರಿಸಿ ಉಳಿದ ಭಾಗವನ್ನು ಹಾಗೆಯೇ ಬುಟ್ಟಿಯಲ್ಲಿ ಇಟ್ಟರೂ, ಅದು ವರ್ಷವಿಡೀ ಚೆನ್ನಾಗಿ ಉಳಿಯುತ್ತದೆ.
ಅ ೫ ಏ ೨. ಕುಂಬಳಕಾಯಿ : ಕುಂಬಳಕಾಯಿಯನ್ನು ಎತ್ತರದಲ್ಲಿ ನೇತುಹಾಕಿ ಅಥವಾ ಜಾಳಿಗೆಯಿರುವ ರ‍್ಯಾಕ್‌ನಲ್ಲಿಡಬೇಕು. ಇಂತಹ ಕುಂಬಳಕಾಯಿ ೧ ವರ್ಷ ಉಳಿಯುತ್ತದೆ. ಕುಂಬಳಕಾಯಿಯನ್ನು ನೆಲದ ಮೇಲಿಟ್ಟರೆ ಅದು ಬೇಗನೇ ಹಾಳಾಗುವ ಸಾಧ್ಯತೆಯಿರುತ್ತದೆ.
ಅ ೫ ಏ ೩. ಗಜ್ಜರಿ (ಕ್ಯಾರೇಟ್) ಮತ್ತು ಸೌತೇಕಾಯಿ : ಇವುಗಳನ್ನು ಕತ್ತರಿಸಿ ಉಪ್ಪು ಹಚ್ಚಿ ಬಿಸಿಲಿನಲ್ಲಿ ಒಣಗಿಸಿಡಬಹುದು.
ಅ ೫ ಏ ೪. ಸೊಪ್ಪುಗಳು : ಕೊತ್ತಂಬರಿ, ಪುದೀನಾ, ಮೆಂತ್ಯ ಮತ್ತು ಪಾಲಕ ಸೊಪ್ಪುಗಳನ್ನು ಆರಿಸಿ (ಸ್ವಚ್ಚಗೊಳಿಸಿ), ಹಾಗೆಯೇ ಕಡಲೆಯ ಗಿಡಗಳ ಚಿಗುರೆಲೆಗಳನ್ನು ಕಿತ್ತು ಬಿಸಿಲಿನಲ್ಲಿ ಒಣಗಿಸಬೇಕು. ಈ ಸೊಪ್ಪುಗಳನ್ನು ಗಾಳಿಯಾಡದ ಡಬ್ಬಗಳಲ್ಲಿ ತುಂಬಿಸಿಟ್ಟರೆ ೬ ತಿಂಗಳುಗಳಿಂದ ೧ ವರ್ಷದವರೆಗೆ ಉಳಿಯುತ್ತವೆ. ಇಂತಹ ಸೊಪ್ಪುಗಳು ಎಳೆತು ಅಥವಾ ಹಸಿಯಾಗಿರಬಾರದು.
ಅ ೫ ಏ ೫. ಟೊಮ್ಯಾಟೋ ಮತ್ತು ಮಾವಿನ ಮಿಡಿ : ಟೊಮ್ಯಾಟೋ ಮತ್ತು ಮಾವಿನ ಮಿಡಿಗಳ ಹೋಳುಗಳನ್ನು ಮಾಡಿ ಒಣಗಿಸಿ ಅವುಗಳ ಪುಡಿ ಮಾಡಿಟ್ಟುಕೊಳ್ಳಬೇಕು. ಇಂತಹ ಪುಡಿ ೧ ವರ್ಷ ಉಳಿಯುತ್ತದೆ. ಈ ಪುಡಿಯು ಆಹಾರ ಪದಾರ್ಥಗಳಿಗೆ ಹುಳಿರುಚಿ ತರಲು ಉಪಯುಕ್ತವಾಗುತ್ತದೆ.
– ಶ್ರೀ. ಅವಿನಾಶ ಜಾಧವ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೬.೨೦೨೦)
ಅ ೫ ಏ ೬. ಹಲಸಿನ ಬೀಜಗಳು : ಇವುಗಳನ್ನು ತೊಳೆದು ಒಣಗಿಸಿ ಅವುಗಳಿಗೆ ಸ್ವಲ್ಪ ಮಣ್ಣನ್ನು ಸವರಿ, ತೇವ ಬರದಂತಹ ಜಾಗದಲ್ಲಿ ನೆಲದಲ್ಲಿ ಒಂದು ಸಣ್ಣ ಗುಂಡಿ ತೆಗೆದು ಅದರಲ್ಲಿ (ಆದಷ್ಟು ಒಲೆಯ ಬಳಿ) ಇಡುವ ಪದ್ಧತಿಯಿದೆ. ಇಂತಹ ಬೀಜಗಳು ೪ ರಿಂದ ೬ ತಿಂಗಳುಗಳ ಕಾಲ ಉಳಿಯುತ್ತವೆ. ಈ ಕಾಲಾವಧಿಯಲ್ಲಿ ಈ ಬೀಜಗಳನ್ನು ಗುಂಡಿಯಿಂದ ತೆಗೆದು ತೊಳೆದು ಬೇಯಿಸಿ ಅಥವಾ ಹುರಿದು ತಿನ್ನಬಹುದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೭.೨೦೨೦)
© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.