ಸಂಕಲನ : ಪರಾತ್ಪರ ಗುರು ಡಾ. ಜಯಂತ ಆಠವಲೆ
ಆಪತ್ಕಾಲದ ಬಗ್ಗೆ ಈ ಲೇಖನದಿಂದ ಇಷ್ಟರ ವರೆಗೆ ಆಹಾರ ಸಿಗದೇ ಉಪವಾಸ ಬೀಳದಿರಲು ಏನು ಮಾಡಬೇಕು, ಹಾಗೆಯೇ ಆಹಾರಧಾನ್ಯಗಳ ತೋಟಗಾರಿಕೆ, ಗೋಪಾಲನೆ, ನೀರಿನ ಸಂಗ್ರಹ, ಶುದ್ಧೀಕರಣ, ವಿದ್ಯುತ್ ಪೂರೈಕೆಯ ಪರ್ಯಾಯಗಳು ಮುಂತಾದ ವಿಷಯಗಳನ್ನು ನೋಡಿದೆವು. ಈ ಲೇಖನದಲ್ಲಿ ಇಂಧನದ ಕೊರತೆ ಅಥವಾ ಅಲಭ್ಯತೆಯಿಂದ ಸಮಸ್ಯೆ ನಿರ್ಮಾಣವಾಗದೆ ಪ್ರವಾಸ ಕೈಗೊಳ್ಳಲು ಸುಲಭವಾಗುವಂತೆ ಮಾಡಬೇಕಾದ ಪೂರ್ವತಯಾರಿಯನ್ನು ತಿಳಿದುಕೊಳ್ಳೋಣ.
೭. ಪೆಟ್ರೋಲ್‌ನಂತಹ ಇಂಧನಗಳು ಅಥವಾ ವಿದ್ಯುತ್ ಇಲ್ಲದಿರುವಾಗ ಪ್ರವಾಸದ ಅನುಕೂಲಕ್ಕಾಗಿ ಮಾಡಬೇಕಾದ ಪೂರ್ವಸಿದ್ಧತೆಗಳು
೧. ಪ್ರವಾಸ ಅಥವಾ ಸಾಹಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ಉಪಯುಕ್ತ ಸಾಧನಗಳನ್ನು ಖರೀದಿಸುವುದು
ಆಪತ್ಕಾಲದಲ್ಲಿ ಪೆಟ್ರೋಲ್, ಡಿಸೇಲ್, ಇತ್ಯಾದಿ ಇಂಧನಗಳ ಕೊರತೆಯಾಗಬಹುದು. ಇನ್ನೂ ಮುಂದುವರಿದು ಇಂಧನವೂ ದೊರೆಯಲಾರದು. ಆಗ ಇಂತಹ ಇಂಧನಗಳಿಂದ ನಡೆಯುವ ದ್ವಿಚಕ್ರವಾಹನ ಮತ್ತು ಚತುಷ್ಚಕ್ರ ವಾಹನಗಳು ನಿರುಪಯುಕ್ತವಾಗಲಿವೆ. ಇಂತಹ ಸಮಯದಲ್ಲಿ ಪ್ರವಾಸ ಮಾಡುವುದು, ರೋಗಿಗಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದು, ಧಾನ್ಯ ಅಥವಾ ಭಾರವಾದ ಸಾಮಾನು ತರುವುದು ಇತ್ಯಾದಿ ಕಾರಣಗಳಿಗಾಗಿ ಉಪಯುಕ್ತವಾದ ಸಾಧನಗಳ ವಿವೇಚನೆಯನ್ನು ಇಲ್ಲಿ ನೀಡಲಾಗಿದೆ.
೧ ಅ. ಸೈಕಲ್ : ಮುಂದೆ ಸೈಕಲ್‌ನ ವಿವಿಧ ವಿಧಗಳನ್ನು ನೀಡಲಾಗಿದೆ. ನಮ್ಮ ಆವಶ್ಯಕತೆ ಮತ್ತು ಆರ್ಥಿಕ ಕ್ಷಮತೆಗನುಸಾರ ಹಾಗೂ ಸೈಕಲ್‌ನಿಂದ ಆಗುವ ಪ್ರಯೋಜನಗಳನ್ನು ಗಮನದಲ್ಲಿರಿಸಿ ನಮಗೆ ಅನುಕೂಲಕರವಾದ ಪರ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
೧ ಅ ೧. ಸಾದಾ ಸೈಕಲ್ : ಇದರಲ್ಲಿ ‘ಟಯರ್ ಟ್ಯೂಬ್’ ಇರುವ ಸೈಕಲ್ ಅಥವಾ ‘ಟ್ಯೂಬ್‌ಲೆಸ್ (ಟ್ಯೂಬ್ ಇಲ್ಲದಿರುವ) ಟಯರ್’ ಇರುವ ಸೈಕಲ್ ಹೀಗೆ ೨ ವಿಧಗಳಿವೆ.
೧ ಅ ೨. ವಿದ್ಯುತ್ ಘಟಕ ಸಹಾಯದಿಂದ (ಬ್ಯಾಟರಿಯಿಂದ) ನಡೆಯುವ ಸೈಕಲ್.
೧ ಅ ೩. ಸೈಕಲ್-ರಿಕ್ಷಾ : ಆಪತ್ಕಾಲದಲ್ಲಿ ರೋಗಿಗಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಲು, ಸಾಮಾನುಗಳ ಸಾಗಾಣಿಕೆಗೆ ಸೈಕಲ್ ರಿಕ್ಷಾ ಉಪಯುಕ್ತವಾಗಲಿದೆ.
೧ ಆ. ವಿದ್ಯುತ್ ಘಟಕಗಳ ಸಹಾಯದಿಂದ (ಬ್ಯಾಟರಿಯಿಂದ) ಚಲಿಸುವ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನ
ಆಪತ್ಕಾಲದಲ್ಲಿ ಪೆಟ್ರೊಲ್, ಡೀಸೆಲ್ ಇತ್ಯಾದಿಗಳ ಕೊರತೆ ಎದುರಾದಾಗ ಈ ರೀತಿಯ ವಾಹನಗಳು ಉಪಯುಕ್ತವಾಗುತ್ತಿದ್ದರೂ, ಪೆಟ್ರೋಲ್, ಡೀಸೆಲ್ ಇತ್ಯಾದಿಗಳಿಂದ ನಡೆಯುವ ವಾಹನಗಳ ತುಲನೆಯಲ್ಲಿ ಈ ವಾಹನಗಳಲ್ಲಿ ಕೆಲವು ನ್ಯೂನ್ಯತೆಗಳು ಸಹ ಇವೆ. ಈ ವಿಷಯದಲ್ಲಿ ಓದುಗರು ಹೆಚ್ಚಿನ ಮಾಹಿತಿಯನ್ನು ಸಂಬಂಧಿಸಿದ ಮಾರಾಟಗಾರರಿಂದ ಪಡೆದುಕೊಳ್ಳಬಹುದು.
೧ ಇ. ಕೈಗಾಡಿ (ತಳ್ಳುವ ಗಾಡಿ) :
ರಸ್ತೆಯಲ್ಲಿ ತರಕಾರಿ ಇತ್ಯಾದಿಗಳ ಮಾರಾಟಗಾರರು ಉಪಯೋಗಿಸುವ ಕೈಗಾಡಿ (ತಳ್ಳುವ ಗಾಡಿ)ಯನ್ನು ಆಪತ್ಕಾಲದಲ್ಲಿ ಸಾಮಾನುಗಳ ಸಾಗಾಣಿಕೆಗೆ ಉಪಯೋಗಿಸಬಹುದಾಗಿದೆ.
೧ ಈ. ಎತ್ತಿನಗಾಡಿ ಅಥವಾ ಕುದುರೆಗಾಡಿ (ಕುದುರೆಬಂಡಿ) :
ಎತ್ತಿನಗಾಡಿಗಾಗಿ ಎತ್ತನ್ನು ಸಾಕಬೇಕು. ಹಸು ಮತ್ತು ಎತ್ತು ಎರಡನ್ನೂ ಸಾಕಿದರೆ, ಹಸುವಿನಿಂದ ಹಾಲು ಸಿಗುವುದು, ಅಲ್ಲದೇ ಹಸು ಮತ್ತು ಎತ್ತುಗಳಿಂದ ಅವುಗಳ (ಕರು) ಉತ್ಪತ್ತಿಯೂ ಆಗುತ್ತಿರುತ್ತದೆ. ಸಾಧಾರಣವಾಗಿ ೩ ವರ್ಷಗಳಾದ ನಂತರ ಎತ್ತನ್ನು ಗಾಡಿಗೆ ಹೂಡಬಹುದು. ಎತ್ತಿನಗಾಡಿಯಂತೆಯೇ ಕುದುರೆ ಗಾಡಿಯನ್ನು ಖರೀದಿಸಬಹುದು. ಕೇವಲ ಕುದುರೆಯನ್ನು ಖರೀದಿಸಿದರೆ, ಅದು ಪ್ರವಾಸಕ್ಕಾಗಿ ಉಪಯುಕ್ತವಾಗಿರುತ್ತದೆ.
ಹಸು, ಎತ್ತು ಮತ್ತು ಕುದುರೆಗಳಿಗೆ ಹುಲ್ಲು-ನೀರು ನೀಡುವುದು, ಅವುಗಳಿಗೆ ಕೊಟ್ಟಿಗೆಯ ವ್ಯವಸ್ಥೆ ಮಾಡುವುದು, ಅವುಗಳ ಆರೈಕೆ ಮಾಡುವುದು. ಅವುಗಳ ರೋಗ-ರುಜಿನ ಮತ್ತು ಅದರ ಔಷಧೋಪಚಾರ ಇತ್ಯಾದಿಯನ್ನು ಬಲ್ಲವರಿಂದ ಕಲಿತುಕೊಳ್ಳಬೇಕು. ಕುದುರೆಯ ಮೇಲೆ ಪ್ರವಾಸ ಮಾಡುವುದು ಮತ್ತು ಕುದುರೆಗಾಡಿ ಹಾಗೂ ಎತ್ತಿನಗಾಡಿಯನ್ನು ಚಲಾಯಿಸುವುದನ್ನು ಕಲಿತುಕೊಳ್ಳಬೇಕು.
೨. ರಾತ್ರಿಯ ಪ್ರವಾಸದ ಸಮಯದಲ್ಲಿ ವಿದ್ಯುತ್ ಅಭಾವದಿಂದ ರಸ್ತೆ ದೀಪಗಳು ನಿಷ್ಕ್ರಿಯಗೊಂಡಿದ್ದರೆ, ಬೆಳಕು ನೀಡುವ ಸಾಧನಗಳನ್ನು ಉಪಯೋಗಿಸುವುದು
೨ ಅ. ವಿದ್ಯುತ್ ಅಥವಾ ಸೌರಶಕ್ತಿಗಳ ಮೇಲೆ ಚಾರ್ಜ್ ಮಾಡಬಹುದಾದಂತಹ ಟಾರ್ಚ್ : ಆಪತ್ಕಾಲದ ದೃಷ್ಟಿಯಿಂದ ಒಂದು ಅಥವಾ ಒಂದಕ್ಕಿಂತ ಅಧಿಕ ಟಾರ್ಚ್ ಗಳನ್ನು ಖರೀದಿಸಿ ಇಟ್ಟುಕೊಳ್ಳಬೇಕು. ಇಂತಹ ಬ್ಯಾಟರಿಯನ್ನು ಬಳಸುತ್ತಿರಬೇಕು.
೨ ಆ. ಲಾಟೀನು
ಲಾಟೀನು ಉರಿಸಲು ಚಿಮಣಿ ಎಣ್ಣೆ (ಸೀಮೆ ಎಣ್ಣೆ) ಉಪಯೋಗಿಸಲಾಗುತ್ತದೆ. ಸೀಮೆ ಎಣ್ಣೆ ದೊರಕದಿದ್ದರೆ ಲಾಟೀನಿನಲ್ಲಿ ಇತರ ಎಣ್ಣೆ (ಉದಾ. ಅಡುಗೆ ಎಣ್ಣೆ, ಎಳ್ಳೆಣ್ಣೆ) ಉಪಯೋಗಿಸಬಹುದು. ಲಾಟೀನನ್ನು ಹೊರತುಪಡಿಸಿ ಸೀಮೆಎಣ್ಣೆಯಿಂದ ಉರಿಯುವ ವಿವಿಧ ಪ್ರಕಾರದ ದೀಪಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ.
೨ ಇ. ಮಶಾಲ(ಪಂಜು)
ಮಶಾಲ(ಪಂಜು) ಎಲ್ಲೆಡೆ ಮಾರಾಟಕ್ಕೆ ಸಿಗುವುದಿಲ್ಲ; ಆದರೆ ಅದನ್ನು ಬಡಗಿ ಅಥವಾ ಫ್ಯಾಬ್ರಿಕೇಶನ ಕೆಲಸ ಮಾಡುವವರಿಂದ ತಯಾರಿಸಿಕೊಳ್ಳಬಹುದು. ಮಶಾಲ(ಪಂಜು)ದ ಮೇಲಿನ ಭಾಗದಲ್ಲಿ ದೊಡ್ಡ ಬಟ್ಟಲಿನಂತೆ ಒಂದು ಲೋಹದ (ಉದಾ. ಸ್ಟೀಲ್, ಹಿತ್ತಾಳೆ) ಪಾತ್ರೆಯಿರುತ್ತದೆ. ಈ ಪಾತ್ರೆ ಸಾಧಾರಣವಾಗಿ ಅರ್ಧ ಮೀಟರ ಎತ್ತರದ ಕಟ್ಟಿಗೆಯ ಹಿಡಿಕೆಗೆ ಜೋಡಿಸಲಾಗಿರುತ್ತದೆ.
ಚಿಂದಿಯನ್ನು ಒಂದು ಮೊಳೆಗೆ ಗಟ್ಟಿಯಾಗಿ ಸುತ್ತಿ ತಯಾರಿಸಲಾಗಿರುವ ಬತ್ತಿ
ನಿಲಾಂಜನದಲ್ಲಿ ಯಾವ ರೀತಿ ಹತ್ತಿಯ ಬತ್ತಿಯಿರುತ್ತದೆಯೋ, ಅದೇ ರೀತಿ ಮಶಾಲಿ(ಪಂಜು)ನಲ್ಲಿ ಬಟ್ಟೆಯ ಚಿಂದಿಗಳನ್ನು ಸುತ್ತಿ ಬತ್ತಿಯೆಂದು ಉಪಯೋಗಿಸಲಾಗುತ್ತದೆ. ಮಶಾಲ(ಪಂಜು)ನ್ನು ನೇರವಾಗಿ ಹಿಡಿದುಕೊಂಡು ಅದರ ಮೇಲಿನ ಭಾಗದ ಪಾತ್ರೆಯಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳುವಷ್ಟು ಆಕಾರದ ಚಿಂದಿಯಿಂದ ತಯಾರಿಸಲಾಗಿರುವ ಬತ್ತಿಯನ್ನು ಇಡಬೇಕು. ಮತ್ತು ಅದರ ಒಂದು ತುದಿಯನ್ನು ಉರಿಸಲು ಹೊರಗೆ ತೆಗೆಯಬೇಕು. ಸುತ್ತಿರುವ ಬತ್ತಿಯು ಎಣ್ಣೆಯಿಂದ ಸಂಪೂರ್ಣವಾಗಿ ನೆನೆಯುವ ತನಕ ಪಾತ್ರೆಯಲ್ಲಿ ಎಣ್ಣೆ (ಉದಾ. ಹೊಂಗೆ ಎಣ್ಣೆ, ಹತ್ತಿಕಾಳಿನ ಎಣ್ಣೆ) ಸುರಿಯಬೇಕು. ಸುತ್ತಿರುವ ಬತ್ತಿಯ ಹೊರ ತೆಗೆದಿರುವ ತುದಿ ಹೊತ್ತಿದಾಗ ಅದರಲ್ಲಿರುವ ಎಣ್ಣೆ ಮುಗಿಯುವವರೆಗೆ ಮಶಾಲ(ಪಂಜು) ಉರಿಯುತ್ತಿರುತ್ತದೆ. ಮಶಾಲಿ (ಪಂಜು)ನ ಎಣ್ಣೆ ಪೂರ್ಣಮುಗಿದರೆ ಸುತ್ತಿರುವ ಬತ್ತಿ ಸುಟ್ಟು ಹೋಗುತ್ತದೆ. ಈ ಕಾರಣದಿಂದ ಎಣ್ಣೆ ಪೂರ್ಣವಾಗಿ ಮುಗಿಯದಂತೆ ಮಶಾಲಿನಲ್ಲಿ ಆವಶ್ಯಕತೆಗನುಸಾರ ಆಗಾಗ ಎಣ್ಣೆಯನ್ನು ಹಾಕಬೇಕು. ಮಶಾಲ ಸಿದ್ಧಗೊಳಿಸುವ ಕೃತಿಯ ವಿಷಯದಲ್ಲಿ ತಿಳಿದವರಿಂದಲೂ ಕಲಿತುಕೊಳ್ಳಬೇಕು.
– ಶ್ರೀ. ಅವಿನಾಶ ಜಾಧವ, ಸನಾತನ ಆಶ್ರಮ, ರಾಮನಾಥಿ, ಗೋವಾ.
೨ ಈ. ಸೂಡಿ
ತೆಂಗಿನ ಗರಿಗಳಿಂದ ಸೂಡಿ ತಯಾರಿಸುತ್ತಾರೆ. ಸೂಡಿ ತಯಾರಿಸಲು ಒಂದು ಮುಷ್ಟಿಯಲ್ಲಿ ಹಿಡಿಯುವಷ್ಟು ತೆಂಗಿನ ಗರಿಗಳನ್ನು ಒಟ್ಟುಗೂಡಿಸಿ ಅದನ್ನು ಬೇರೆ ಎಲೆಗಳಿಂದ ಅಥವಾ ಸೆಣಬಿನ ಸಹಾಯದಿಂದ ಮಧ್ಯೆ ಮಧ್ಯೆ ಗಟ್ಟಿಯಾಗಿ ಕಟ್ಟಬೇಕು. ಸೂಡಿ ಸರಸರನೆ ಹೊತ್ತಿ ಉರಿಯದೇ ನಿಧಾನವಾಗಿ ಉರಿಯಬೇಕು, ಇದಕ್ಕಾಗಿ ಅದನ್ನು ಉರಿಸುವ (ಹೊತ್ತಿಸುವ) ಮೊದಲು ಅದರ ಮೇಲೆ ನೀರನ್ನು ಸಿಂಪಡಿಸಬೇಕು. ಎಲೆಗಳಲ್ಲಿ ನೈಸರ್ಗಿಕ ಎಣ್ಣೆಯ ಅಂಶವಿರುವುದರಿಂದ ಸೂಡಿ ಉರಿಯಲು ಪ್ರತ್ಯೇಕ ಇಂಧನ ಬೇಕಾಗುವುದಿಲ್ಲ. ನಾವು ಬೆಂಕಿಕಡ್ಡಿಯ ಕಡ್ಡಿಯನ್ನು ಉರಿಸುವಾಗ ಯಾವ ರೀತಿ ಅಡ್ಡವಾಗಿ ಹಿಡಿದು ಕೊಳ್ಳುತ್ತೇವೆಯೋ ಅದರಂತೆ ಸೂಡಿ ಸರಿಯಾಗಿ ಉರಿಯಬೇಕು ಎಂದು ಅದನ್ನು ಉರಿಸುವಾಗ ಅಡ್ಡವಾಗಿ ಹಿಡಿಯಬೇಕು. ಸಾಧಾರಣವಾಗಿ ೩ ಅಡಿ ಉದ್ದದ ಸೂಡಿ ೨೦ ನಿಮಿಷಗಳ ವರೆಗೆ ಬೆಳಕು ನೀಡುತ್ತದೆ.
– ಶ್ರೀ. ವಿವೇಕ ಪ್ರಭಾಕರ ನಾಫಡೆ, ಸನಾತನ ಆಶ್ರಮ, ದೇವದ, ಪನವೇಲ.
೩. ಹೊಸ ಜಾಗಕ್ಕೆ ಪ್ರವಾಸ ಬೆಳೆಸುವಾಗ ದಿಕ್ಸೂಚಿಯನ್ನು (compass) ಬಳಸುವುದು
ಆಪತ್ಕಾಲದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರವಾಗುವ ಪ್ರಸಂಗ ಬರಬಹುದು. ಇಂತಹ ಸಮಯದಲ್ಲಿ ಮಾರ್ಗದರ್ಶಕ ಫಲಕಗಳು ಸಿಗುತ್ತವೆ ಎಂದೇನಿಲ್ಲ, ಅಥವಾ ಸರಿದಾರಿಯನ್ನು ತೋರಿಸುವವರು ಸಿಗುತ್ತಾರೆ ಎಂಬುದೇನಿಲ್ಲ. ಇಂತಹ ಸಮಯದಲ್ಲಿ ದಿಕ್ಕು ತೋಚದೆ ದಾರಿ ತಪ್ಪದಂತೆ ಆಗಬಾರದು ಎಂದು ದಿಕ್ಸೂಚಿಯ ಉಪಯೋಗವನ್ನು ಮಾಡಬೇಕು. ಮೊಬೈಲ್.ನಲ್ಲಿ ದಿಕ್ಸೂಚಿಯ ಆಪ್ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬಹುದು.
ಆದರೆ ಮೊಬೈಲ್ ಹೆಚ್ಚು ಹೊತ್ತು ಉಪಯೋಗಿಸುವುದರಿಂದ ಅದು ಡಿಸ್ಚಾರ್ಜ್ ಆಗಿ ಸ್ವಿಚ್ ಆಫ್ ಆಗಬಹುದು. ಆದುದರಿಂದ ತಮ್ಮ ಹತ್ತಿರ ಒಂದು ದಿಕ್ಸೂಚಿಯನ್ನು ಇಟ್ಟುಕೊಳ್ಳಬೇಕು. ಅದಕ್ಕೆ ಯಾವುದೇ ರೀತಿಯ ಬ್ಯಾಟರಿಯ ಆವಶ್ಯಕತೆಯಿರುವುದಿಲ್ಲ. ಅದು ಯಾವಾಗಲೂ ಉತ್ತರ-ದಕ್ಷಿಣ ದಿಕ್ಕನ್ನು ತೋರಿಸುತ್ತದೆ.
© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.