ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಏನೆಲ್ಲ ಪೂರ್ವಸಿದ್ಧತೆಗಳನ್ನು ಮಾಡಬೇಕು ?
ಹಿಂದಿನ ಲೇಖನದಲ್ಲಿ ನೀರು, ಆಹಾರಧಾನ್ಯ ಇತ್ಯಾದಿಗಳ ಕೊರತೆಯಾಗಬಾರದು, ಇದಕ್ಕಾಗಿ ಏನು ಮಾಡಬೇಕು ?, ನಿಯಮಿತವಾಗಿ ತೆಗೆದುಕೊಳ್ಳುವ ಔಷಧಿಗಳನ್ನು ಸ್ವಲ್ಪ ಸಂಗ್ರಹಿಸಿ ಇಟ್ಟುಕೊಳ್ಳುವ ಬಗ್ಗೆ ನೋಡಿದೆವು. ‘ನೆರೆ ಬಂದೆರಗಿದಾಗ ಏನು ಮಾಡಬೇಕು ಎಂಬುವುದರ ಪುರ್ವತಯಾರಿಯ’ ಬಗ್ಗೆ ಮಾರ್ಗದರ್ಶಕ ಅಂಶಗಳನ್ನು ಮುಂದೆ ನೀಡಲಾಗಿದೆ.
೬. ಪ್ರವಾಹದ ನೀರಿನಿಂದ ಹೊರಗೆ ಬರಲು ಮಾಡಬೇಕಾದ ಪೂರ್ವಸಿದ್ಧತೆ
ಅ. ಕೆಲವೊಮ್ಮೆ ಪ್ರವಾಹದ ನೀರಿನ ಮಟ್ಟ 7-8 ಅಡಿ ಅಥವಾ ಅದಕ್ಕಿಂತಲೂ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ಈಜಲು ಬರದಿದ್ದರೆ ಜೀವ ಅಪಾಯದಲ್ಲಿ ಸಿಲುಕಬಹುದು. ಆದುದರಿಂದ ಸಾಧ್ಯವಾದಷ್ಟು ಹೆಚ್ಚೆಚ್ಚು ಜನರು ಈಜಲು ಕಲಿಯಬೇಕು.
ಆ. ಪ್ರವಾಹದ ನೀರಿನಿಂದ ಸುರಕ್ಷಿತ ಸ್ಥಳಗಳಿಗೆ ಹೋಗಲು ‘ಲೈಫ್ ಜಾಕೆಟು’ಗಳನ್ನು (ಜೀವರಕ್ಷಕ ಜಾಕೀಟು) ಉಪಯೋಗಿಸಬಹುದು. ಇದರಿಂದ ನೀರು ಎಷ್ಟು ಆಳವಿದ್ದರೂ, ವ್ಯಕ್ತಿ ನೀರಿನಲ್ಲಿ ಮುಳುಗುವುದಿಲ್ಲ. ‘ಲೈಫ್ ಜಾಕೆಟ್ಗಳನ್ನು ಖರೀದಿಸಿಟ್ಟುಕೊಂಡರೆ ಆಪತ್ಕಾಲದ ಸ್ಥಿತಿಯಲ್ಲಿ ಅವುಗಳನ್ನು ಉಪಯೋಗಿಸಬಹುದು.
ಇ. ವಾಹನಗಳ ಟಯರ್‌ಗಳ ಟ್ಯೂಬ್ಗಳಲ್ಲಿ ಗಾಳಿತುಂಬಿಸಿ, ಅವುಗಳನ್ನು ಉಪಯೋಗಿಸಿದರೆ ನೀರಿನಲ್ಲಿ ಮುಳುಗುವುದರಿಂದ ರಕ್ಷಿಸಿಕೊಳ್ಳಬಹುದು. ಆದುದರಿಂದ ಮನೆಯಲ್ಲಿ ಎಷ್ಟು ವ್ಯಕ್ತಿಗಳಿದ್ದಾರೆಯೋ, ಅಷ್ಟು ಸಂಖ್ಯೆಯಲ್ಲಿ ಟಯರ್ ಟ್ಯೂಬ್ಗಳನ್ನು ತಂದು ಇಟ್ಟುಕೊಳ್ಳಬೇಕು.
೭. ಇತರ ಮಹತ್ವದ ಅಂಶಗಳು
೭ ಅ. ಜೀವನಾವಶ್ಯಕ ಸಾಹಿತ್ಯಗಳನ್ನು ಒಟ್ಟಿಗೆ ಇಡುವುದು : ಪ್ರವಾಹ, ಭೂಕಂಪ ಅಥವಾ ಇನ್ನಿತರ ಆಪತ್ಕಾಲದ ಪ್ರಸಂಗಗಳು ಉದ್ಭವಿಸಿದರೆ, ತಕ್ಷಣವೇ ಮನೆಯನ್ನು ಬಿಟ್ಟು ಸುರಕ್ಷಿತ ಜಾಗಗಳಿಗೆ ಸ್ಥಳಾಂತರವಾಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿರವ ಮಹತ್ವದ ವಸ್ತುಗಳನ್ನು ಒಟ್ಟುಗೂಡಿಸಲು ಸಮಯಾವಕಾಶ ಸಿಗುವುದಿಲ್ಲ. ಈ ಕಾರಣದಿಂದ ನೀರಿನಿಂದ ಒದ್ದೆಯಾಗದಂತಹ ಒಂದು ಚೀಲದಲ್ಲಿ ಎಲ್ಲ ಜೀವನಾವಶ್ಯಕ ವಸ್ತುಗಳನ್ನು (ಬಟ್ಟೆ, ಔಷಧಿ ಇತ್ಯಾದಿ) ಒಟ್ಟು ಮಾಡಿ ಇಟ್ಟುಕೊಳ್ಳಬೇಕು.
೭ ಆ. ಒಳ್ಳೆಯ ಗುಣಮಟ್ಟದ ಪ್ಲಾಸ್ಟಿಕ್ ಶೀಟ್, ಹಾಗೆಯೇ ಗಟ್ಟಿಯಾದ ಹಗ್ಗ ಮನೆಯಲ್ಲಿರಬೇಕು ಮತ್ತು ಸುಲಭವಾಗಿ ಕೈಗೆ ಸಿಗುವಂತಹ ಸ್ಥಳದಲ್ಲಿ ಅವುಗಳನ್ನು ಇಡಬೇಕು. ಪ್ರವಾಹಸ್ಥಿತಿಯಲ್ಲಿ ಸಾಮಗ್ರಿಗಳನ್ನು ಕಟ್ಟಲು ಅವುಗಳ ಉಪಯೋಗವಾಗುತ್ತವೆ
೭ ಇ. ಮಹತ್ವದ ಸಂಪರ್ಕ ಸಂಖ್ಯೆಗಳನ್ನು ಮತ್ತು ವಿಳಾಸಗಳನ್ನು ಒಂದು ಪುಸ್ಕದಲ್ಲಿ ಬರೆದಿಡುವುದು : ವಿದ್ಯುತ್ ಸ್ಥಗಿತಗೊಂಡರೆ ಸಂಚಾರವಾಣಿಯನ್ನು (ಮೊಬೈಲ್) ಚಾರ್ಜ ಮಾಡಲು ಆಗುವುದಿಲ್ಲ. ಈ ಕಾರಣದಿಂದ ಪರಸ್ಪರರನ್ನು ಸಂಪರ್ಕಿಸಲು ತೊಂದರೆಯಾಗಬಾರದೆಂದು, ತಮ್ಮ ಸಂಬಂಧಿಕರ, ಪೊಲೀಸ್ ಠಾಣೆ, ಅಗ್ನಿಶಾಮಕ ದಳ, ತಮ್ಮ ಹತ್ತಿರದ ಆಸ್ಪತ್ರೆ ಇತ್ಯಾದಿ ಸ್ಥಳಗಳ ದೂರವಾಣಿ ಸಂಖ್ಯೆಗಳನ್ನು ಮತ್ತು ವಿಳಾಸಗಳನ್ನು ಒಂದು ನೋಂದಣಿ ಪುಸ್ತಕಲ್ಲಿ ಬರೆದಿಟ್ಟುಕೊಂಡು ತಮ್ಮ ಬಳಿ ಇಟ್ಟುಕೊಳ್ಳಬೇಕು, ಇದರಿಂದ ಇತರರ ಸಂಚಾರವಾಣಿ ಅಥವಾ ದೂರವಾಣಿಯ ಮೂಲಕ ಅವರನ್ನು ಸಂಪರ್ಕಿಸಬಹುದು.
೮. ಮಳೆಗಾಲದ ಮೊದಲು ಮಾಡಬೇಕಾದ ಪೂರ್ವಸಿದ್ಧತೆಗಳು
ಅ. ಮಾನವರಿಗಿಂತ ಪ್ರಾಣಿಗಳಲ್ಲಿ ಅಪಾಯದ ಸಂವೇದನೆಗಳನ್ನು ಅರಿಯುವ ಕ್ಷಮತೆ ಅಧಿಕವಿರುತ್ತದೆ. ಈ ಕಾರಣದಿಂದ ಮನೆಯಲ್ಲಿ ಸಾಕಿದ ಪ್ರಾಣಿಗಳ ನಡುವಳಿಕೆಯಲ್ಲಿ ಬದಲಾವಣೆ ಕಂಡುಬಂದರೆ ಜಾಗೃತರಾಗಬೇಕು.
ಆ. ಸಾಕು ಪ್ರಾಣಿಗಳನ್ನು (ಹಸು, ನಾಯಿ ಇತ್ಯಾದಿಗಳನ್ನು) ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ‘ಅಲ್ಲಿ ಅವುಗಳಿಗೆ ಅಹಾರ ಮತ್ತು ನೀರು ದೊರಕುವ ವ್ಯವಸ್ಥೆಯನ್ನು ಮಾಡಬೇಕು. ಆಪತ್ತಿನ ಪ್ರಸಂಗಗಳಲ್ಲಿ ಸರಕಾರ ಹಾಗೂ ಸ್ವಯಂಸೇವಿ ಸಂಘಟನೆಗಳಿಂದ ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿದ್ದರೆ, ಅದರ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. (೨೦೧೯ನೇ ಇಸವಿಯಲ್ಲಿ ಪಶ್ಚಿಮ ಮಹಾರಾಷ್ಟ್ರದಲ್ಲಿ ಬಂದ ಪ್ರವಾಹದಲ್ಲಿ ಒಟ್ಟು ೮ ಸಾವಿರ ಪ್ರಾಣಿಗಳು ಮರಣ ಹೊಂದಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿತ್ತು; ಆದರೆ ಅದು ಅದಕ್ಕಿಂತಲೂ ಹೆಚ್ಚಿರಬಹುದು)
ಇ. ಪ್ರವಾಹ ಬಂದರೆ ನಾವು ಸಂಬಂಧಿಕರು, ಪರಿಚಿತರು, ಸ್ನೇಹಿತರು ಇವರಲ್ಲಿ ಯಾರ ಬಳಿ ಹೋಗಿ ಇರಬಹುದು ?, ಎನ್ನುವ ವಿಚಾರವನ್ನು ಮಾಡಿಟ್ಟುಕೊಳ್ಳಬೇಕು. ಇದರಿಂದ ಪ್ರಸಂಗ ಎದುರಾದಾಗ ವಿಚಾರಿಸಲು, ಹುಡುಕಾಟ ಮಾಡಲು ಸಮಯ ವ್ಯರ್ಥವಾಗಲಾರದು.
ಈ. ಆಪತ್ಕಾಲೀನ ಸ್ಥಿತಿಯಲ್ಲಿ ಮನೆಯಲ್ಲಿನ ವೃದ್ಧರು ಮತ್ತು ಚಿಕ್ಕ ಮಕ್ಕಳಿಗೆ ಏನೇನು ಬೇಕಾಗುತ್ತದೆ?, ಎಂಬುದರ ವಿಚಾರವನ್ನು ಮಾಡಿ ಅವುಗಳ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು.
ಉ. ಮನೆಯಲ್ಲಿ ನೆಲಮಾಳಿಗೆಯಿದ್ದರೆ ಅಲ್ಲಿನ ವಸ್ತುಗಳನ್ನು ಮೇಲಿನ ಮಾಳಿಗೆಯಲ್ಲಿ ತಂದಿಡಬೇಕು. ಮನೆಯಲ್ಲಿ ನೀರು ಬಂದರೆ ಹಾಳಾಗುವ ವಸ್ತುಗಳು (ಉದಾ: ಹಾಸಿಗೆ, ತಲೆದಿಂಬು ಇತ್ಯಾದಿ) ಇದ್ದರೆ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು.
ಊ. ಮನೆಯಲ್ಲಿರುವ ಕಟ್ಟಿಗೆಯ ಪೀಠೋಪಕರಣಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಅವುಗಳನ್ನು ಮನೆಯ ಕಾಲಂ (ಸಿಮೆಂಟ ಕಂಬ), ಕಿಟಕಿಗಳಿಗೆ ಸರಪಳಿಯಿಂದ ಕಟ್ಟಿಡಬೇಕು. ಇದರಿಂದ ಅವು ನೀರಿನ ಪ್ರವಾಹದಿಂದ ಬೇರೆಡೆಗೆ ತೇಲಿ ಹೋಗುವುದಿಲ್ಲ.
ಎ. ಪ್ರವಾಹದ ಸಮಯದಲ್ಲಿ ನೀವು ಬೇರೆ ಕಡೆಗೆ ಸ್ಥಳಾಂತರವಾಗುವವರಿದ್ದರೆ, ಆ ಸಮಯದಲ್ಲಿ ನಿಮ್ಮ ದೇವರಕೋಣೆಯಲ್ಲಿನ ಚಿಕ್ಕ ಆಕಾರದ ಮೂರ್ತಿಗಳನ್ನು, ಹಾಗೆಯೇ ದೇವತೆಗಳ ಚಿತ್ರಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಎಲ್ಲ ಮೂರ್ತಿಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದಿದ್ದರೆ, ದೇವರ ಕೋಣೆಯಲ್ಲಿರುವ ಚಿಕ್ಕ ಆಕಾರದ ಮೂರ್ತಿಗಳು, ದೇವತೆಗಳ ಅಚ್ಚು, ಸಾಲಿಗ್ರಾಮ ಇತ್ಯಾದಿಗಳನ್ನು ಒಳ್ಳೆಯ ಬಟ್ಟೆಯಲ್ಲಿ ಸುತ್ತಿ ಸ್ಟೀಲ್ ಅಥವಾ ಅಲ್ಯುಮಿನಿಯಮ್ ಡಬ್ಬಿಗಳಲ್ಲಿ ಹಾಕಿಇಡಬಹುದು. ಒಂದೇ ಡಬ್ಬಿಯಲ್ಲಿ ಒಂದಕ್ಕಿಂತ ಅಧಿಕ ಮೂರ್ತಿಗಳನ್ನು ಇಟ್ಟರೂ ಆಗಬಹುದು, ಆದರೆ ಮೂರ್ತಿಗಳು ಒಂದಕ್ಕೊಂದು ತಗುಲಿ ಮೂರ್ತಿಗಳಿಗೆ ಪೆಟ್ಟಾಗದಂತೆ, ಎರಡು ಮೂರ್ತಿಗಳ ಮಧ್ಯೆ ಮೆತ್ತಗಿನ ಬಟ್ಟೆ ಅಥವಾ ಹತ್ತಿಯನ್ನು ಇಡಬೇಕು. ಈ ಡಬ್ಬಿಗಳನ್ನು ಸಾಧ್ಯವಾದಷ್ಟು ನಿಮ್ಮ ಮನೆಯಲ್ಲಿ (ಪ್ರವಾಹ ಕ್ಷೇತ್ರದಲ್ಲಿ) ಇಟ್ಟುಕೊಳ್ಳದೇ ಸಂಬಂಧಿಕರ ಅಥವಾ ಸ್ನೇಹಿತರ ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಇಡಬೇಕು.
ಏ. ಮನೆಯಲ್ಲಿರುವ ಭಾರವಾದ ಮೂರ್ತಿಗಳನ್ನು ಬೇರೆ ಕಡೆಗೆ ಒಯ್ಯಲು ಸಾಧ್ಯವಿದ್ದರೆ ಅವುಗಳನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಿ ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಹಾಗೆ ಮಾಡುವುದು ಸಾಧ್ಯವಿಲ್ಲದಿದ್ದರೆ ಮೂರ್ತಿಗಳನ್ನು ಮನೆಯಲ್ಲಿನ ಎತ್ತರದ ಮತ್ತು ಸುರಕ್ಷಿತ ಸ್ಥಳದಲ್ಲಿ ಅಥವಾ ಮಾಳಿಗೆಯಿದ್ದರೆ ಅಲ್ಲಿಡಬೇಕು. ಮೂರ್ತಿಗಳನ್ನು ಇಡಲು ಮುಂದಿನಂತೆ ಪೆಟ್ಟಿಗೆಯನ್ನು ತಯಾರಿಸಿಕೊಳ್ಳಬಹುದು. ನೀರಿನಿಂದ ಹಾಳಾಗದ ಒಳ್ಳೆಯ ಜಾತಿಯ ಮರದ ಹಲಗೆಗಳ ಚೌಕಾಕಾರದ ಪೆಟ್ಟಿಗೆಯನ್ನು ತಯಾರಿಸಬೇಕು. ಸ್ವಲ್ಪ ಕಾಲದವರೆಗಾದರೂ ಅದರಲ್ಲಿ ಮೂರ್ತಿಗಳು ವ್ಯವಸ್ಥಿತವಾಗಿ ಇರಬಹುದು. ಮರದ ಪೆಟ್ಟಿಗೆಗೆ ಬಣ್ಣ ಹಚ್ಚಿದರೆ ಅಥವಾ ಅದಕ್ಕೆ ವಾಟರಪ್ರೂಫ ಕೋಟಿಂಗ್ ಮಾಡಿದರೆ ಪೆಟ್ಟಿಗೆಯು ದೀರ್ಘಕಾಲದವರೆಗೆ ಹಾಳಾಗದೇ ಉಳಿಯಬಹುದು. ಒಳ್ಳೆಯ ಜಾತಿಯ ಮರವು ಉಪಲಬ್ಧವಿಲ್ಲದಿದ್ದರೆ ಫೈಬರ್ ಅಥವಾ ಅದರಂತಹ ಇತರೆ ಸಾಮಗ್ರಿಗಳನ್ನು ಉಪಯೋಗಿಸಿ ಪೆಟ್ಟಿಗೆಯನ್ನು ತಯಾರಿಸಿಕೊಳ್ಳಬೇಕು.
ಐ. ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಉಪಕರಣಗಳಲ್ಲಿ (ಶೀತಕ ಅಂದರೆ ಫ್ರಿಜ್, ಬಟ್ಟೆ ಒಗೆಯುವ ಯಂತ್ರ ಅಂದರೆ ವಾಶಿಂಗ್ ಮಶೀನ್, ದೂರದರ್ಶನ ಸಂಚು ಅಂದರೆ ಟಿವಿ, ಓವನ್ ಇತ್ಯಾದಿಗಳಲ್ಲಿ) ನೀರು ಹೋದರೆ ಅವು ಹಾಳಾಗುತ್ತವೆ. ಆದುದರಿಂದ ಅವುಗಳನ್ನು ಪ್ಲಾಸ್ಟಿಕ್ನಿಂದ ವ್ಯವಸ್ಥಿತವಾಗಿ ಕಟ್ಟಿ ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಭಾರವಾದ ವಸ್ತುಗಳನ್ನು ಮತ್ತು ಉಪಕರಣಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲದಿದ್ದರೆ ಅವುಗಳನ್ನು ಮೇಲಿನಂತೆ ಪ್ಯಾಕ್ ಮಾಡಿ ಸರಪಳಿಯಿಂದ ಗೋಡೆಗೆ ಕಟ್ಟಿಡಬೇಕು. ಒಟ್ಟಾರೆ ನೀರಿನ ಮಟ್ಟ ಹೆಚ್ಚಾದರೂ ಅವು ತೇಲಿ ಹೋಗಲಾರವು.
ಓ. ಪ್ರವಾಹದ ಸಮಯದಲ್ಲಿ ಅನೇಕ ಗಂಟೆಗಳಿಗಾಗಿ ಮತ್ತು ಕೆಲವೊಂದು ಸ್ಥಳಗಳಲ್ಲಿ ಅನೇಕ ದಿನಗಳಿಗಾಗಿ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ಇಂತಹ ಸಮಯದಲ್ಲಿ ಸಂಚಾರವಾಣಿ ಡಿಸ್ಚಾರ್ಜ್ ಆದರೆ ಸಂಪರ್ಕವನ್ನು ಮಾಡಲು ಅನೇಕ ಅಡಚಣೆಗಳು ಬರುತ್ತವೆ. ಇದಕ್ಕಾಗಿ ಪವರ್ ಬ್ಯಾಂಕನ್ನು ಉಪಯೋಗಿಸಬಹುದು. ಮನೆಯಲ್ಲಿ ಹಳೆಯ ಸಂಚಾರವಾಣಿಗಳಿದ್ದರೆ, ಅವು ಸರಿಯಾಗಿ ನಡೆಯುತ್ತವೆಯೇ ಎಂದು ಪರಿಶೀಲಿಸಬೇಕು. ಆಪತ್ತುಗಳಲ್ಲಿ ಅವುಗಳನ್ನು ಉಪಯೋಗಿಸಬಹುದು.
ಔ. ಕೊಡೆ, ರೇನಕೋಟ್ ಹಾಗೆಯೇ ಮಳೆಗಾಲದಲ್ಲಿ ಉಪಯೋಗಿಸುವ ಬೂಟುಗಳಿದ್ದರೆ ಅವುಗಳನ್ನು ಸ್ವಚ್ಛಗೊಳಿಸಿಡಬೇಕು.
ಅಂ. ಮನೆಯ ಸಮೀಪದಲ್ಲಿ ತಗ್ಗುಗಳಿದ್ದರೆ ಮಳೆಗಾಲದಲ್ಲಿ ಅವುಗಳಲ್ಲಿ ನೀರು ನಿಂತು ಸೊಳ್ಳೆ ಕಾಟ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಅವುಗಳನ್ನು ಸಾಧ್ಯವಿದ್ದಷ್ಟು ಮುಚ್ಚಬೇಕು. ಒಟ್ಟಿನಲ್ಲಿ ಮನೆಯ ಪರಿಸರದಲ್ಲಿ ನೀರು ನಿಲ್ಲದ ಹಾಗೆ ಕಾಳಜಿ ವಹಿಸಬೇಕು.
ಕ. ಆಡಳಿತ ಮತ್ತು ಹವಾಮಾನ ಇಲಾಖೆಯಿಂದ ಆಗಾಗ ಪ್ರಸಾರವಾಗುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅವುಗಳನ್ನು ನಿರ್ಲಕ್ಷಿಸಬಾರದು.
ಭಾಗ 2 | ಭಾಗ 4
© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.