ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಯಾವ ಪೂರ್ವ ಸಿದ್ಧತೆಗಳನ್ನು ಮಾಡಬೇಕು ?
ಮಳೆಗಾಲದಲ್ಲಿ ಅತಿವೃಷ್ಟಿಯಾದರೆ ನೆರೆ ಬರುತ್ತದೆ. ಇತರ ಋತುಗಳಲ್ಲಿಯೂ ಮೇಘಸ್ಫೋಟವಾದರೆ ನೆರೆ (ಪ್ರವಾಹ) ಬರಬಹುದು. ೨೦೧೯ ರಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಅನೇಕ ನಗರಗಳು ಅತಿವೃಷ್ಟಿಯಿಂದ ಜಲಾವೃತಗೊಂಡಿದ್ದವು. ಅನೇಕ ಗ್ರಾಮಗಳನ್ನು ಜೋಡಿಸುವ ರಸ್ತೆಗಳು ಕುಸಿದು ಅಥವಾ ರಸ್ತೆಗಳು ನೀರಿನಲ್ಲಿ ಮುಳುಗಿರುವುದರಿಂದ ಸಂಚಾರಸಾರಿಗೆ ಸ್ಥಗಿತವಾಗಿತ್ತು. ಸಾವಿರಾರು ಜನರ ಮನೆಗಳು ನೀರಿನಲ್ಲಿ ಮುಳುಗಿದ್ದವು. ಕೆಲವು ಸ್ಥಳಗಳಲ್ಲಿ ನೀರಿನ ರಭಸದಿಂದ ಜನರು, ದನಕರುಗಳು, ವಾಹನಗಳು ಕೊಚ್ಚಿ ಹೋದವು. ಪೆಟ್ರೋಲ್, ಡಿಸೇಲ್, ಹಾಲು ಮುಂತಾದ ಜೀವನಾವಶ್ಯಕ ವಸ್ತುಗಳು ಸಿಗುವುದು ಕಠಿಣವಾಯಿತು. ಅಕಸ್ಮಾತ್ತಾಗಿ ಉದ್ಭವಿಸಿದ ಈ ನೈಸರ್ಗಿಕ ಆಪತ್ತಿನಿಂದ ಜನಜೀವನವೇ ಅಸ್ತವ್ಯಸ್ತಗೊಂಡಿತ್ತು.
‘ಭವಿಷ್ಯದಲ್ಲಿ ಇಂತಹ ಸ್ಥಿತಿ ಪುನಃ ಯಾವಾಗ ನಿರ್ಮಾಣವಾಗಬಹುದು ?’, ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದುದರಿಂದ ನೆರೆಗೆ ತುತ್ತಾಗುವ ಕ್ಷೇತ್ರಗಳ ಜನರು ಯಾವ ಪೂರ್ವತಯಾರಿಯನ್ನು ಮಾಡಿಕೊಳ್ಳಬೇಕು ?, ಇದರ ಬಗೆಗಿನ ಮಾರ್ಗದರ್ಶಕ ಅಂಶಗಳನ್ನು ಕೆಳಗೆ ಕೊಡುತ್ತಿದ್ದೇವೆ.
೧. ನೆರೆಪೀಡಿತ ಪ್ರದೇಶಗಳಲ್ಲಿ ಹೊಸ ಮನೆಯನ್ನು ಕಟ್ಟುವುದಿದ್ದರೆ ಏನು ಮಾಡಬೇಕು ?
೧ ಅ. ಆದಷ್ಟು ನೆರೆಪೀಡಿತ ಕ್ಷೇತ್ರದಲ್ಲಿ ಮನೆ ಕಟ್ಟುವ ವಿಚಾರವನ್ನು ಮಾಡಬಾರದು.
೧ ಆ. ನೆರೆಪೀಡಿತ ಪ್ರದೇಶದಲ್ಲಿ ಮನೆಯನ್ನು ಕಟ್ಟಲೇ ಬೇಕಾಗಿದ್ದರೆ, ಮನೆಯನ್ನು ‘ಎಷ್ಟು ಎತ್ತರದಲ್ಲಿ ಕಟ್ಟಬೇಕು ?’, ಎಂಬ ಬಗ್ಗೆ ಕಟ್ಟಡಕಾಮಗಾರಿ ತಜ್ಞರಿಂದ ಮಾರ್ಗದರ್ಶನವನ್ನು ಪಡೆಯಬೇಕು : ಯಾವುದಾದರೊಂದು ಕಾರಣದಿಂದ ನೆರೆಪೀಡಿತ ಪ್ರದೇಶದಲ್ಲಿ ಹೊಸ ಮನೆಯನ್ನು ಕಟ್ಟಲಿಕ್ಕಿದ್ದರೆ ‘ಅಲ್ಲಿ ಎಷ್ಟು ಮೀಟರ್ ಎತ್ತರದವರೆಗೆ ನೀರು ಬರುತ್ತದೆ ?’, ಎಂಬುದನ್ನು ಸ್ಥಳೀಯ ಕಟ್ಟಡ ಕಾಮಗಾರಿ ವಿಭಾಗದವರಲ್ಲಿ (PWD) ಕೇಳಿಕೊಳ್ಳಬೇಕು, ಹಾಗೆಯೇ ‘ಎಷ್ಟು ಮೀಟರ್ ಎತ್ತರದಲ್ಲಿ ಮನೆಯನ್ನು ಕಟ್ಟಬೇಕು ?’, ಎಂಬುದರ ಬಗ್ಗೆ ಅನುಭವಿ ಕಟ್ಟಡಕಾಮಗಾರಿ ತಜ್ಞರ (ಸಿವಿಲ್ ಇಂಜಿನಿಯರ್) ಮಾರ್ಗದರ್ಶನವನ್ನು ಪಡೆಯಬೇಕು.
೧ ಇ. ಮಣ್ಣಿನ ಅಥವಾ ಕಚ್ಚಾ ಇಟ್ಟಿಗೆಗಳ ಮನೆಗಳು ನೆರೆಪೀಡಿತ ಕ್ಷೇತ್ರಗಳಲ್ಲಿ ಸುರಕ್ಷಿತವಾಗಿರುವುದಿಲ್ಲ, ಆದುದರಿಂದ, ‘ಸ್ಲ್ಯಾಬ್’ ಮತ್ತು ಸಿಮೆಂಟಿನ ‘ಕಾಲಮ್, ಬೀಮ್’ಗಳ ಮನೆಯನ್ನು ಕಟ್ಟುವ ವಿಚಾರ ಮಾಡಬೇಕು ! : ನೆರೆಪೀಡಿತ ಪ್ರದೇಶದಲ್ಲಿ ಮಣ್ಣಿನ, ಹಾಗೆಯೇ ಕಚ್ಚಾ ಇಟ್ಟಿಗೆಗಳ ಮನೆಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ರಭಸದಿಂದ ಹರಿಯುವ ನೀರಿನ ಪ್ರವಾಹಕ್ಕೆ ಮಣ್ಣಿನ ಮನೆಗಳು ಸಹಜವಾಗಿ ಕುಸಿಯುತ್ತವೆ ಮತ್ತು ಕಚ್ಚಾ ಇಟ್ಟಿಗೆಗಳು ನೀರಿನಲ್ಲಿ ಕರಗಿ ಹೋಗುವ ಸಾಧ್ಯತೆಯಿರುತ್ತದೆ. ಧಾರಾಕಾರ ಗಾಳಿಮಳೆಯಿಂದ ಮನೆಯ ಮೇಲಿನ ತಗಡು, ಹಂಚು ಇತ್ಯಾದಿಗಳು ಹಾರಿ ಹೋಗುತ್ತವೆ. ಆದುದರಿಂದ ನೆರೆಪೀಡಿತ ಕ್ಷೇತ್ರದಲ್ಲಿ ಕಲ್ಲು, ಹಾಗೆಯೇ ‘ಸ್ಲ್ಯಾಬ್’ ಮತ್ತು ಸಿಮೆಂಟಿನ ‘ಕಾಲಮ್’ (ಸಿಮೆಂಟಿನ ಕಂಬಗಳು) – ‘ಬೀಮ್’ಗಳಿರುವ ಗಟ್ಟಿಮುಟ್ಟಾದ ಮನೆಯನ್ನು ಕಟ್ಟಬೇಕು. ಈ ಮನೆಗಳ ಗೋಡೆಗಳು ಮಣ್ಣಿನ ಬದಲು ಸಿಮೆಂಟ್-ಮರಳಿನದ್ದಾಗಿರಬೇಕು.
೧ ಈ. ಮನೆ ಕಟ್ಟುವಾಗ, ಮನೆಗೆ ನೆರೆ ನೀರು ಬಂದರೆ ‘ನೀರು ಹೊರಗೆ ಹೋಗಲು’, ಇಳಿಜಾರಿನ (‘ಸ್ಲೋಪ್’ನ) ಮಾದರಿಯಲ್ಲಿ ಮನೆಯನ್ನು ಕಟ್ಟಬೇಕು. ಇದಕ್ಕಾಗಿ ಕಟ್ಟಡ ಕಾಮಗಾರಿ ತಜ್ಞರ ಮಾರ್ಗದರ್ಶನವನ್ನು ಪಡೆಯಬೇಕು.
೨. ವಾಸ್ತುವಿನ ಬಗೆಗಿನ ಇತರ ಅಂಶಗಳು
೨ ಅ. ವಿಮೆಯನ್ನು ಮಾಡಿಸಿಕೊಳ್ಳುವುದು : ತಮ್ಮ ವಾಸ್ತುಗಳು (ಮನೆ, ಅಂಗಡಿ ಇತ್ಯಾದಿ) ನೆರೆಪೀಡಿತ ಕ್ಷೇತ್ರದಲ್ಲಿದ್ದರೆ, ಭವಿಷ್ಯದಲ್ಲಿ ನೆರೆ ಬರಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ವಾಸ್ತು, ವಾಹನ, ಬೆಳೆ, ಹಾಗೆಯೇ ಇತರ ಸಾಹಿತ್ಯಗಳ ವಿಮೆ ಮಾಡಿಸಿಕೊಳ್ಳಬೇಕು.
೨ ಆ. ಗೋಡೆಗಳು ತೇವವಾಗುತ್ತಿದ್ದರೆ ‘ವಾಟರ್ ಪ್ರುಫಿಂಗ್’ ಮಾಡಿಸಿಕೊಳ್ಳಬೇಕು : ಮನೆಯಲ್ಲಿನ ಗೋಡೆಗಳು ತೇವ ಆಗುತ್ತಿದ್ದರೆ ಮಳೆಗಾಲದ ಮೊದಲು ‘ವಾಟರ್ ಪ್ರೂಫಿಂಗ್’ ಮಾಡಿಸಿಕೊಳ್ಳಬೇಕು. ಗೋಡೆಗಳಿಗೆ ದೊಡ್ಡ ಬಿರುಕುಗಳು ಬಿದ್ದಿದ್ದರೆ ಅವು ಅಪಾಯಕಾರಿಯಾಗಬಹುದು. ಆದ್ದರಿಂದ ಆದಷ್ಟು ಬೇಗನೇ ಕಟ್ಟಡ ಕಾಮಗಾರಿ ತಜ್ಞರಿಗೆ ತೋರಿಸಿ ಅದಕ್ಕೆ ಪರಿಹಾರ ಹುಡುಕಬೇಕು.
೨ ಇ. ಮರದ ಪೀಠೋಪಕರಣಗಳಿಗೆ ‘ವಾಟರ್ ಪ್ರೂಫ್ ಕೋಟಿಂಗ್’ ಮಾಡಿಸಿಕೊಳ್ಳಬೇಕು : ‘ಪ್ಲೈವುಡ್’ ಅಥವಾ ‘ಕಟ್ಟಿಗೆಯ ಪುಡಿಗಳ ಪ್ಲೈವುಡ್’ಗಳಿಂದ ತಯಾರಿಸಿದ ಪೀಠೋಪಕರಣಗಳು (ಫರ್ನಿಚರ್) ನೀರು ತಾಗಿದರೆ ಹಾಳಾಗುತ್ತವೆ. ಆದುದರಿಂದ ಅದರ ಬದಲು ಮರದ ಅಥವಾ ಕಬ್ಬಿಣದ ಪೀಠೋಪಕರಣಗಳನ್ನು (ಮೇಜು, ಸುಖಾಸನ, ಕುರ್ಚಿ, ಮಂಚ ಇತ್ಯಾದಿ) ಮಾಡಿಸಿಕೊಳ್ಳಬೇಕು. ಮರದ ಪೀಠೋಪಕರಣಗಳಿಗೆ ‘ವಾಟರ್‌ಪ್ರೂಫ್ ಕೋಟಿಂಗ್’ ಮಾಡಿದರೆ ಅವು ಹೆಚ್ಚು ಕಾಲ ನೀರಿನಲ್ಲಿದ್ದರೂ ಹಾಳಾಗುವುದಿಲ್ಲ.
೨ ಈ. ಮನೆಯಲ್ಲಿನ ವಿದ್ಯುತ್ ಬಟನ್ (ಇಲೆಕ್ಟ್ರಿಕ್ ಪ್ಯಾನಲ್) ಇತ್ಯಾದಿಗಳನ್ನು ಅದಷ್ಟು ಎತ್ತರದಲ್ಲಿ ಇಡಬೇಕು.
೨ ಉ. ‘ಪ್ರಕಾಶದ (ಬೆಳಕಿನ) ಕೊರತೆಯಾಗಬಾರದೆಂದು’, ಏನು ಮಾಡಬೇಕು ? : ಮಳೆಗಾಲದಲ್ಲಿ ಅನಿಶ್ಚಿತ ಕಾಲಾವಧಿಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಬಹುದು. ಆದುದರಿಂದ ಮನೆಯಲ್ಲಿ ಬೆಂಕಿಪೊಟ್ಟಣ, ಹಣತೆ, ಮೇಣದಬತ್ತಿ, ಬ್ಯಾಟರಿಯಿಂದ ಕೆಲಸ ಮಾಡುವ ಟಾರ್ಚ್, ಕಂದೀಲು, ಚಿಮಣಿ, ಸೀಮೆಎಣ್ಣೆ, ಅಡಿಗೆಯ ಎಣ್ಣೆ ಮುಂತಾದವುಗಳ ವ್ಯವಸ್ಥೆಯನ್ನು ಮಾಡಬೇಕು. ‘ಟಾರ್ಚ್’ಗೆ ಹಾಕಲು ಹೆಚ್ಚಿನ ‘ಬ್ಯಾಟರಿ’ಗಳನ್ನು ಖರೀದಿಸಿಟ್ಟುಕೊಳ್ಳಬೇಕು. ಬೆಂಕಿಪೊಟ್ಟಣ, ಹಣತೆ, ಮೇಣಬತ್ತಿ, ಬ್ಯಾಟರಿಗಳನ್ನು ‘ವಾಟರ್ ಪ್ರೂಫ್’ ಪೌಚ್ ಅಥವಾ ಬ್ಯಾಗ್‌ನಲ್ಲಿಟ್ಟರೆ ನೀರಿನಲ್ಲಿ ಒದ್ದೆಯಾಗುವುದಿಲ್ಲ.
೨ ಊ. ನೆರೆಸ್ಥಿತಿಯಲ್ಲಿ ಕಳ್ಳತನದ ಘಟನೆಗಳು ತುಂಬಾ ಆಗುವುದರಿಂದ ಮನೆಯ ಕಿಟಕಿ ಮತ್ತು ಬಾಗಿಲುಗಳು ಗಟ್ಟಿಯಾಗಿ ಮುಚ್ಚುತ್ತೇವೆಯಲ್ಲ ?, ಹಾಗೆಯೇ ಅವುಗಳಿಗೆ ಸುರಕ್ಷಿತ ಜಾಲಿಗಳು ಇವೆಯಲ್ಲ ?, ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಿಟಕಿ ಮತ್ತು ಬಾಗಿಲುಗಳು ವ್ಯವಸ್ಥಿತವಾಗಿ ಮುಚ್ಚದಿದ್ದರೆ ದುರಸ್ತಿ ಪಡಿಸಿಕೊಳ್ಳಿ.
೩. ಮಹತ್ವದ ಕಾಗದಪತ್ರಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಲು ಏನು ಮಾಡಬೇಕು ?
೩ ಅ. ‘ಡಿಜಿಲಾಕರ್’ ಆಪ್‌ನ ಉಪಯೋಗಿಸಬೇಕು : ಭಾರತ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಸಚಿವಾಲಯವು (MeitY) ಹೊರತಂದಿರುವ ‘ಡಿಜಿಲಾಕರ್’ ಎಂಬ ಅಪ್ಲಿಕೇಶನ್ ಉಪಯೋಗಿಸಬೇಕು. (https://digilocker.gov.in/ ಈ ಜಾಲತಾಣದಲ್ಲಿ ಇದರ ಮಾಹಿತಿ ಲಭ್ಯವಿದೆ.)
ಅಂತರಜಾಲದ ಸೌಲಭ್ಯವಿರುವ ಸಂಚಾರವಾಣಿಯಲ್ಲಿ ಈ ಅಪ್ಲಿಕೇಶನ್ ಅಳವಡಿಸಿ (ಇನ್‌ಸ್ಟಾಲ್ ಮಾಡಿ) ಅದರಲ್ಲಿ ತಮ್ಮ ಆಧಾರಕಾರ್ಡ ಸಂಖ್ಯೆಯನ್ನು ಹಾಕಬೇಕು. ಆಪ್ನಲ್ಲಿ ನಮ್ಮ ಆಧಾರಕಾರ್ಡ್‌ನ ಸಂಖ್ಯೆಯನ್ನು ಹಾಕಿದಾಗ ನಮ್ಮ ಆಧಾರಕಾರ್ಡ್ ನೊಂದಿಗೆ ಲಿಂಕ್ ಇರುವ ಎಲ್ಲ ಸರಕಾರಿ ಕಾಗದಪತ್ರಗಳನ್ನು (ಉದಾ.ವಾಹನ-ಪರವಾನಿಗೆ, ಇನ್ಶುರೆನ್ಸ್ ಪಾಲಿಸಿ, ಟಿ.ಡಿ.ಎಸ್. ಸರ್ಟಿಫಿಕೇಟ್, ಬಾಡಿಗೆ ಕರಾರುಪತ್ರಗಳು, ಮನೆ ಖರೀದಿ ವ್ಯವಹಾರ) ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು. ಡೌನ್‌ಲೋಡ್ ಮಾಡಿದ ಈ ಕಾಗದಪತ್ರಗಳು ಆಪ್ನಲ್ಲಿ ಸುರಕ್ಷಿತವಾಗಿರುತ್ತವೆ. ಆಪ್ನ್ನು ನಮ್ಮ ಸಂಚಾರವಾಣಿಯಲ್ಲಿ ಮೊದಲೇ ಡೌನಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಂಡು ಅದರಲ್ಲಿ ಕಾಗದಪತ್ರಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಂಡರೆ ಆಪತ್ಕಾಲದ ಸಮಯದಲ್ಲಿ ಕಾಗದಪತ್ರಗಳು ಸಹಜವಾಗಿ ಲಭ್ಯವಾಗುತ್ತವೆ.
೩ ಆ. ನಗದು ಹಣ, ಬೆಲೆಬಾಳುವ ವಸ್ತುಗಳು, ಅಭರಣಗಳು, ಮಹತ್ವದ ಕಾಗದಪತ್ರಗಳು ಮುಂತಾದವುಗಳನ್ನಿಡಲು ಸಾಧ್ಯವಿದ್ದಷ್ಟು ನೆರೆ ಹಾವಳಿಗೆ ತುತ್ತಾಗುವ ಪ್ರದೇಶದ ಹಣಹಾಸು ಸಂಸ್ಥೆ (ಬ್ಯಾಂಕ್)ಯನ್ನು ಆಯ್ಕೆ ಮಾಡಬಾರದು.
೩ ಇ. ಮಹತ್ವದ ಕಾಗದಪತ್ರಗಳ ದೃಢೀಕರಿಸಿದ (ಅಟೆಸ್ಟೆಡ್) ಮತ್ತು ನಕಲು (ಝೆರಾಕ್ಸ್) ಪ್ರತಿಗಳನ್ನು ಸುರಕ್ಷಿತವಾಗಿಡುವುದು
೧. ಮಹತ್ವದ ಕಾಗದಪತ್ರಗಳ ಮೂಲ (ಓರಿಜಿನಲ್) ಪ್ರತಿಗಳು (ಉದಾ. ಪಡಿತರ ಚೀಟಿ, ಆಧಾರಕಾರ್ಡ್, ಬ್ಯಾಂಕಿನ ಪಾಸ್‌ಬುಕ್, ಮನೆಗೆ ಸಂಬಂಧಿಸಿದ ಕಾಗದಪತ್ರಗಳು) ಮತ್ತು ಅವುಗಳ ೫ ದೃಢೀಕರಿಸಿದ (ಅಟೆಸ್ಟೆಡ್) ಪ್ರತಿಗಳನ್ನು ಬ್ಯಾಂಕಿನ ‘ಲಾಕರ್’ ಇದ್ದರೆ ಅದರಲ್ಲಿಡಬೇಕು.
೨. ಮಹತ್ವದ ಕಾಗದಪತ್ರಗಳ ೫ ದೃಢೀಕರಿಸಿದ (ಅಟೆಸ್ಟೆಡ್) ಪ್ರತಿಗಳನ್ನು ಇತರ ಸಂಬಂಧಿಕರ ಅಥವಾ ಪರಿಚಿತರ ಮನೆಯಲ್ಲಿಯೂ ಇಡಬಹುದು.
೩. ಇದರೊಂದಿಗೆ ಮಹತ್ವದ ಕಾಗದಪತ್ರಗಳ ೫ ನಕಲುಪ್ರತಿ (ಝೆರಾಕ್ಸ್)ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಒಂದು ಚಿಕ್ಕ ಬ್ಯಾಗ್‌ನಲ್ಲಿ ಅಥವಾ ‘ಬ್ರೀಫಕೇಸ್’ನಲ್ಲಿ ತಮ್ಮೊಂದಿಗೆ ಇಟ್ಟುಕೊಳ್ಳಬೇಕು. ಮನೆಯಿಂದ ಅಕಸ್ಮಾತ್ ಹೊರ ಬರುವ ಪ್ರಸಂಗ ಬಂದರೆ ಈ ಬ್ಯಾಗ್‌ನ್ನು ಜೊತೆಗೆ ಇಟ್ಟುಕೊಳ್ಳಬಹುದು. ಈ ರೀತಿ ಕಾಗದಪತ್ರಗಳ ಪ್ರತಿಗಳನ್ನು ೩ ವಿವಿಧ ಸ್ಥಳಗಳಲ್ಲಿಟ್ಟರೆ, ಒಂದು ಸ್ಥಳದಲ್ಲಿಟ್ಟ ಕಾಗದಪತ್ರಗಳು ಆಪತ್ಕಾಲದಲ್ಲಿ ಒಂದು ವೇಳೆ ಸಿಗದಿದ್ದರೆ ಇತರ ಸ್ಥಳದಲ್ಲಿಟ್ಟಿರುವ ಕಾಗದಪತ್ರಗಳು ನಮಗೆ ಸಿಗಬಹುದು.
೩ ಈ. ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿಡಬೇಕು ! : ಆಪತ್ಕಾಲದಲ್ಲಿ ಕಳ್ಳತನದ ಪ್ರಮಾಣ ಹೆಚ್ಚಾಗುತ್ತದೆ. ಆದುದರಿಂದ ಬೆಲೆಬಾಳುವ ವಸ್ತುಗಳನ್ನು, ಆಭರಣಗಳನ್ನು ಬ್ಯಾಂಕಿಲ್ಲಿ ಅಥವಾ ಸುರಕ್ಷಿತ ಸ್ಥಳದಲ್ಲಿಡಬೇಕು. ಬೆಲೆಬಾಳುವ ವಸ್ತುಗಳನ್ನು ಮೊದಲೇ ಸುರಕ್ಷಿತ ಸ್ಥಳದಲ್ಲಿಟ್ಟಿದ್ದರಿಂದ ಮನೆಗೆ ಯಾವುದೇ ಸಂಕಟ ಒದಗಿದರೂ, ವಸ್ತುಗಳು ಹಾಳಾಗುವುದಿಲ್ಲ.
೩ ಉ. ಬ್ಯಾಂಕ್ ಅಥವಾ ‘ಎಟಿಎಮ್’ನ ಸೌಲಭ್ಯದ ಕೊರತೆಯಿಂದ ತೊಂದರೆಯಾಗದಿರಲು, ತಮ್ಮ ಬಳಿ ನಗದು ಹಣವನ್ನು ಇಟ್ಟುಕೊಳ್ಳಬೇಕು ! : ಆಪತ್ಕಾಲದಲ್ಲಿ ದೈನಂದಿನ ಆವಶ್ಯಕತೆಗಳನ್ನು ಪೂರ್ಣಗೊಳಿಸಲು ನಗದು ಹಣ ತಕ್ಷಣ ಲಭ್ಯವಾಗುವುದಿಲ್ಲ, ಹಾಗೆಯೇ ಆಪತ್ಕಾಲದಲ್ಲಿ ಜೀವನಾವಶ್ಯಕ ಮತ್ತು ಇತರ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಕನಿಷ್ಟ ೧೫ ದಿನಗಳಿಂದ ೧ ತಿಂಗಳಿಗಾಗುವಷ್ಟು ನಗದು ಹಣವನ್ನು ತಮ್ಮ ಹತ್ತಿರವಿಟ್ಟುಕೊಳ್ಳಬೇಕು. ಈ ಹಣ ನೀರಿನಿಂದ ಒದ್ದೆಯಾಗದಿರಲು ಅದನ್ನು ಪ್ಲಾಸ್ಟಿಕಿನ ಚಿಕ್ಕ ಚೀಲಗಳಲ್ಲಿ ಕಟ್ಟಿ ಸುರಕ್ಷಿತ ಜಾಗದಲ್ಲಿಡಬೇಕು.
© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.