ಭಾದ್ರಪದ ಕೃಷ್ಣ ಪಕ್ಷ ಪ್ರತಿಪದಾದಿಂದ ಭಾದ್ರಪದ ಅಮಾವಾಸ್ಯೆ (2 ರಿಂದ 17 ಸಪ್ಟೆಂಬರ್ 2020) ಈ ಅವಧಿಯಲ್ಲಿ ಪಿತೃಪಕ್ಷವಿದೆ. ಎಲ್ಲ ಪಿತೃಗಳು ತೃಪ್ತರಾಗಬೇಕು ಹಾಗೂ ಸಾಧನೆಗಾಗಿ ಅವರ ಆಶೀರ್ವಾದ ಸಿಗಬೇಕೆಂದು, ಪಿತೃಪಕ್ಷದಲ್ಲಿ ಎಲ್ಲರೂ ಮಹಾಲಯ ಶ್ರಾದ್ಧವನ್ನು ಮಾಡಬೇಕು.
೧. ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿ ಮಾಡುವುದರ ಮಹತ್ವ !
ಪಿತೃಪಕ್ಷ ಸಮಯದಲ್ಲಿ ಅನ್ನ ಮತ್ತು ಉದಕ(ನೀರು)ದ ಅಪೇಕ್ಷೆಯಿಂದ ಕುಲದಲ್ಲಿನ ಎಲ್ಲ ಪಿತೃಗಳು ತಮ್ಮ ವಂಶದವರ ಸಮೀಪಕ್ಕೆ ಬರುತ್ತಾರೆ. ಪಿತೃಪಕ್ಷದಲ್ಲಿ ಪಿತೃಲೋಕವು ಪೃಥ್ವಿಲೋಕಕ್ಕೆ ಅತಿ ಸಮೀಪಕ್ಕೆ ಬರುವುದರಿಂದ ಪಿತೃಗಳಿಗೆ ನೀಡುವ ಅನ್ನ, ಉದಕ (ನೀರು) ಮತ್ತು ಪಿಂಡದಾನವು ಅವರಿಗೆ ಬೇಗನೆ ತಲುಪುತ್ತದೆ. ಆದ್ದರಿಂದ ಅವರು ಸಂತುಷ್ಟರಾಗಿ ಕುಟುಂಬದವರಿಗೆ ಆಶೀರ್ವಾದವನ್ನು ನೀಡುತ್ತಾರೆ. ಶ್ರಾದ್ಧವಿಧಿ ಮಾಡುವುದರಿಂದ ಪಿತೃದೋಷದಿಂದ ಸಾಧನೆಯಲ್ಲಿ ಬರುವ ಅಡಚಣೆಗಳು ದೂರವಾಗಿ ಸಾಧನೆಗೆ ಸಹಾಯವಾಗುತ್ತದೆ.
೨. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಪಿತೃಪಕ್ಷದಲ್ಲಿ ಶಾಸ್ತ್ರಕ್ಕನುಸಾರ ಮಹಾಲಯ ಶ್ರಾದ್ಧವಿಧಿಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?
ಸದ್ಯ ಕೊರೋನಾ ಮಹಾಮಾರಿಯಿಂದ ಕೆಲವೆಡೆ ಶಾಸ್ತ್ರೋಕ್ತ ಶ್ರಾದ್ಧವಿಧಿ ಮಾಡಲು ಮಿತಿ ಇದೆ. ಅಂತಹ ಸ್ಥಿತಿಯಲ್ಲಿ ‘ಶ್ರಾದ್ಧ ಮಾಡುವ ಬಗ್ಗೆ ಶಾಸ್ತ್ರವಿಧಾನ ಏನಿದೆ ? ಎಂಬುದನ್ನು ಮುಂದೆ ನೀಡಲಾಗಿದೆ
೨ ಅ. ಆಮಶ್ರಾದ್ಧವನ್ನು ಮಾಡುವುದು : ಆಪತ್ಕಾಲದಲ್ಲಿ, ಪತ್ನಿಯ ಅನುಪಸ್ಥಿತಿಯಲ್ಲಿ, ತೀರ್ಥಕ್ಷೇತ್ರದಲ್ಲಿ ಮತ್ತು ಸಂಕ್ರಾಂತಿಯ ದಿನ ಆಮಶ್ರಾದ್ಧ ಮಾಡಬಹುದು, ಎಂದು ಕಾತ್ಯಾಯನ ವಚನವಿದೆ. ಕಾರಣಾಂತರದಿಂದ ವಿಧಿಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಸಂಕಲ್ಪಪೂರ್ವಕ ಆಮಶ್ರಾದ್ಧ ಮಾಡಬೇಕು. ತಮ್ಮ ಕ್ಷಮತೆಗನುಸಾರ ಧಾನ್ಯ, ಅಕ್ಕಿ, ಎಣ್ಣೆ, ತುಪ್ಪ, ಸಕ್ಕರೆ, ಬಟಾಟೆ, ತೆಂಗಿನಕಾಯಿ, ೧ ಅಡಿಕೆ, ೨ ವೀಳ್ಯದೆಲೆ, ೧ ನಾಣ್ಯ ಇತ್ಯಾದಿ ಸಾಹಿತ್ಯಗಳನ್ನು ಹರಿವಾಣದಲ್ಲಿಡಬೇಕು. ಆಮಾನ್ನಸ್ಥಿತ ಶ್ರೀ ಮಹಾವಿಷ್ಣವೇ ನಮಃ | ಈ ನಾಮಮಂತ್ರವನ್ನು ಹೇಳುತ್ತಾ ಅದರ ಮೇಲೆ ಗಂಧ, ಅಕ್ಷತೆ, ಹೂವು ಮತ್ತು ತುಳಸಿ ಎಲೆಯನ್ನು ಅರ್ಪಿಸಬೇಕು. ಆ ಸಾಹಿತ್ಯವನ್ನು ಪುರೋಹಿತರಿಗೆ ದಾನವಾಗಿ ಕೊಡಬೇಕು. ಪುರೋಹಿತರು ಸಿಗದಿದ್ದರೆ, ವೇದಪಾಠಶಾಲೆ, ಗೋಶಾಲೆ ಅಥವಾ ದೇವಸ್ಥಾನಕ್ಕೆ ದಾನ ಮಾಡಬೇಕು.
೨ ಆ. ಹಿರಣ್ಯಶ್ರಾದ್ಧ ಮಾಡುವುದು : ‘ಆಮಶ್ರಾದ್ಧ ಮಾಡಲು ಸಾಧ್ಯವಾಗದಿದ್ದರೆ, ಸಂಕಲ್ಪಪೂರ್ವಕ ಹಿರಣ್ಯಶ್ರಾದ್ಧ ಮಾಡಬೇಕು, ಅಂದರೆ ನಮ್ಮ ಕ್ಷಮತೆಗನುಸಾರ ವ್ಯಾವಹಾರಿಕ ದ್ರವ್ಯವನ್ನು (ಹಣವನ್ನು) ಒಂದು ಹರಿವಾಣದಲ್ಲಿಡಬೇಕು. ಹಿರಣ್ಯಸ್ಥಿತ ಶ್ರೀ ಮಹಾವಿಷ್ಣವೇ ನಮಃ | ಅಥವಾ ದ್ರವ್ಯಸ್ಥಿತ ಶ್ರೀ ಮಹಾವಿಷ್ಣವೇ ನಮಃ | ಎಂದು ಹೇಳಿ ಅದಕ್ಕೆ ಗಂಧ, ಅಕ್ಷತೆ, ಹೂವು ಮತ್ತು ತುಳಸಿಎಲೆಗಳನ್ನು ಒಟ್ಟಿಗೆ ಅರ್ಪಿಸಬೇಕು. ಅನಂತರ ಆ ಹಣವನ್ನು ಪುರೋಹಿತರಿಗೆ ಅರ್ಪಿಸಬೇಕು. ಪುರೋಹಿತರು ಸಿಗದಿದ್ದರೆ, ವೇದಪಾಠಶಾಲೆ, ಗೋಶಾಲೆ ಅಥವಾ ದೇವಸ್ಥಾನಗಳಿಗೆ ದಾನ ಮಾಡಬೇಕು.
೨ ಇ. ಗೋಗ್ರಾಸವನ್ನು ನೀಡುವುದು : ಯಾರಿಗೆ ಆಮಶ್ರಾದ್ಧ ಮಾಡಲು ಸಾಧ್ಯವಿಲ್ಲವೋ, ಅವರು ಗೋಗ್ರಾಸವನ್ನು ನೀಡಬೇಕು. ಗೋಗ್ರಾಸವನ್ನು ಸಹ ಕೊಡಲು ಸಾಧ್ಯವಿಲ್ಲದವರು ಸಮೀಪದ ಗೋಶಾಲೆಯನ್ನು ಸಂಪರ್ಕಿಸಿ ಗೋಗ್ರಾಸಕ್ಕಾಗಿ ಸ್ವಲ್ಪ ಹಣವನ್ನು ಅರ್ಪಣೆ ಮಾಡಬೇಕು.
ಈ ಮೇಲಿನವುಗಳಲ್ಲಿ ಆಮಶ್ರಾದ್ಧ, ಹಿರಣ್ಯಶ್ರಾದ್ಧ ಅಥವಾ ಗೋಗ್ರಾಸವನ್ನು ಸಮರ್ಪಿಸಿದ ನಂತರ ಎಳ್ಳುತರ್ಪಣೆ ಮಾಡಬೇಕು. ಪಂಚಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕಪ್ಪು ಎಳ್ಳು ಹಾಕಬೇಕು. ಈ ರೀತಿ ‘ತಿಲೋದಕ’ವನ್ನು ಸಿದ್ಧಪಡಿಸಬೇಕು. ಅನಂತರ ಪಿತೃಗಳ ಹೆಸರನ್ನು ಸ್ಮರಿಸಿಕೊಂಡು ಬಲಗೈಯ ಹೆಬ್ಬೆರಳು ಮತ್ತು ತರ್ಜನಿಯಿಂದ ತಿಲೋದಕವನ್ನು ಅರ್ಪಿಸಬೇಕು. ವ್ಯಕ್ತಿಯ ಹೆಸರು ನೆನಪಿಲ್ಲದಿದ್ದರೆ, ಆ ವ್ಯಕ್ತಿಯನ್ನು ಸ್ಮರಿಸಿ ತಿಲೋದಕವನ್ನು ನೀಡಬೇಕು. ಸಾಮಾನ್ಯವಾಗಿ ಇವೆಲ್ಲ ವಿಧಿಗಳನ್ನು ಮಾಡುವಾಗ ಪುರೋಹಿತರು ಮಂತ್ರಪಠಣ ಮಾಡುತ್ತಾರೆ ಹಾಗೂ ನಾವು ಕೃತಿ ಮಾಡುತ್ತೇವೆ. ಪುರೋಹಿತರು ಸಿಗದಿದ್ದರೆ, ಈ ಲೇಖನದಲ್ಲಿ ಹೇಳಿದಂತೆ ಭಾವವನ್ನಿಟ್ಟು ವಿಧಿ ಮಾಡಬೇಕು. ಯಾವುದೇ ವಿಧಿಯನ್ನು ಮಾಡಲು ಸಾಧ್ಯವಿಲ್ಲದವರು ಕೇವಲ ಎಳ್ಳು ತರ್ಪಣೆಯನ್ನಾದರೂ ಮಾಡಬೇಕು.
೨ ಉ. ಯಾರಿಗೆ ಇಲ್ಲಿ ಉಲ್ಲೇಖಿಸಿದಂತಹ ಯಾವುದೇ ಕೃತಿಯನ್ನು ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಅವರು ಧರ್ಮಕಾರ್ಯಕ್ಕಾಗಿ ಸಮರ್ಪಿಸಿಕೊಂಡಿರುವ ಯಾವುದಾದರೊಂದು ಆಧ್ಯಾತ್ಮಿಕ ಸಂಸ್ಥೆಗೆ ಅರ್ಪಣೆ ಮಾಡಬೇಕು.
೩. ಶ್ರಾದ್ಧವಿಧಿಯಲ್ಲಿ ಮಾಡುವಂತಹ ಪ್ರಾರ್ಥನೆ !
ಶಾಸ್ತ್ರಕ್ಕನುಸಾರ ಇದ್ದ ಪರಿಸ್ಥಿತಿಯಲ್ಲಿ ಆಮಶ್ರಾದ್ಧ, ಹಿರಣ್ಯಶ್ರಾದ್ಧ ಅಥವಾ ತರ್ಪಣವಿಧಿ (ಮೇಲೆ ತಿಳಿಸಿದಂತೆ ಯಾವುದನ್ನು ಮಾಡಿದ್ದೇವೆ ಆ ವಿಧಿಯನ್ನು ಉಲ್ಲೇಖಿಸಿ) ಇದನ್ನು ಮಾಡಲಾಗಿದೆ. ಇದರಿಂದ ಪಿತೃಗಳಿಗೆ ಅನ್ನ ಮತ್ತು ನೀರು ಸಿಗಲಿ. ಈ ದಾನದಿಂದ ಎಲ್ಲ ಪಿತೃಗಳು ತೃಪ್ತರಾಗಲಿ. ಅವರ ಕೃಪಾಶೀರ್ವಾದ ನಮ್ಮ ಮೇಲಿರಲಿ. ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅವರ ಆಶೀರ್ವಾದ ಸಿಗಲಿ. ದತ್ತಗುರುಗಳ ಕೃಪೆಯಿಂದ ಅವರಿಗೆ ಮುಂದಿನ ಗತಿ ಪ್ರಾಪ್ತಿಯಾಗಲಿ, ಎಂದು ಶ್ರೀ ದತ್ತಗುರುಗಳ ಚರಣಗಳಲ್ಲಿ ಪ್ರಾರ್ಥನೆ ಮಾಡಬೇಕು.
ಪಿತೃಪಕ್ಷದ ನಂತರ ಅಧಿಕ ಮಾಸ ಬರುವುದರಿಂದ ಆ ಅವಧಿಯಲ್ಲಿ ಎಂದರೆ 18.9.2020 ರಿಂದ 16.10.2020 ಈ ಅವಧಿಯಲ್ಲಿ ಶ್ರಾದ್ಧ ಮಾಡಬಾರದು. ಮಹಾಲಯ ಸಮಾಪ್ತಿಯ ನಂತರ ಅಂದರೆ 17.10.2020 ರಿಂದ 15.11.2020 ಈ ಅವಧಿಯಲ್ಲಿ ಶ್ರಾದ್ಧ ಮಾಡಬಹುದು. ಕೊರೋನಾದ ಮಹಾಮಾರಿಯಿಂದ ಉದ್ಭವಿಸಿದ ಸ್ಥಿತಿ ಮೊದಲಿದ್ದಂತೆ ಸಹಜ ಸ್ಥಿತಿಗೆ ಬಂದಲ್ಲಿ ವಿಧಿಪೂರ್ವಕ ಪಿಂಡದಾನ ಮಾಡಿ ಶ್ರಾದ್ಧ ಮಾಡಬೇಕು.
– ಶ್ರೀ. ದಾಮೋದರ ವಝೆ, ಸಂಚಾಲಕರು, ಸನಾತನ ಸಾಧಕ-ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೭.೮.೨೦೨೦)