ವನವಾಸದಲ್ಲಿದ್ದಾಗ ಸೀತೆ, ರಾಮ ಮತ್ತು ಲಕ್ಷ್ಮಣ ಪ್ರಯಾಣ ಮಾಡುತ್ತಿದ್ದರು, ಆಗ ಸೀತೆಗೆ ಬಾಯಾರಿಕೆ ಆಯಿತು…
ಒಮ್ಮೆ ರಾಮ ವನವಾಸದಲ್ಲಿದ್ದಾಗ ಲಕ್ಷ್ಮಣನೊಂದಿಗೆ ಹೊರಟನು. ಆಗ ಸೀತಾಮಾತೆ ರಾಮನನ್ನು ಉದ್ದೇಶಿಸಿ, “ನಾನು ಕೂಡ ಬರುತ್ತಿದ್ದೇನೆ” ಎಂದು ಹೇಳಿದಳು. ರಾಮನು ಸೀತಾಳಿಗೆ, “ಕಲ್ಲು-ಮುಳ್ಳಿನ ದಾರಿಯಲ್ಲಿ ಹಾದು ಹೋಗಬೇಕು. ನಿನ್ನ ಕೋಮಲ ಚರಣಗಳಿಗೆ ಅದನ್ನು ಸಹಿಸಲಾಗುವುದಿಲ್ಲ, ನೀನು ಬರಬೇಡ ಸೀತಾ” ಎಂದು ಹೇಳಿದನು. ಸೀತೆ “ಇಲ್ಲ, ಪ್ರಾಣನಾಥ! ರಾಘವ್ ಎಲ್ಲಿಯೋ, ಅಲ್ಲಿ ಸೀತಾ! ” ಎಂದು ಹೇಳಿದಳು. ಅವರು ಮೂವರೂ ಹೊರಟುಹೋದರು. ಬಿರುಬಿಸಿಲು ಮತ್ತು ಕಲ್ಲು ಮುಳ್ಳುಗಳ ದಾರಿಯಿಂದ ಸೀತೆಗೆ ದಣಿವಾಯಿತು. ಅವಳು ರಾಮನಿಗೆ, “ಎಲ್ಲಿಯಾದರೂ ನೀರು ಇದೆಯೇ ಎಂದು ನೋಡಿ. ನನಗೆ ತುಂಬಾ ಬಾಯಾರಿಕೆಯಾಗಿದೆ” ಎಂದು ಕೇಳಿ ಒಂದು ಮರದ ಕೆಳಗೆ ಕುಳಿತಳು. ರಾಮ ಮತ್ತು ಲಕ್ಷ್ಮಣ ನೀರು ಎಲ್ಲಿ ಸಿಗುತ್ತದೆ? ಎಂದು ಹುಡುಕಲು ಹೊರಟರು. ತುಂಬಾ ದೂರದವರೆಗೆ ಹುಡುಕಿದರೂ ಎಲ್ಲಿಯೂ ನದಿ-ಕೆರೆಗಳು ಕಾಣಿಸಲಿಲ್ಲ. ಅವರು ಮತ್ತೆ ಸೀತೆ ಇರುವಲ್ಲಿ ಹಿಂತಿರುಗಿದರು.
ನವಿಲು ತೋರಿಸಿದ ನದಿ
ಸ್ವಲ್ಪ ಸಮಯದ ನಂತರ, ಒಂದು ದೊಡ್ಡ ನವಿಲು ಒಂದು ಮರದಿಂದ ಜಿಗಿದು ಸೀತೆಯ ಮುಂದೆ ಬಂದು ನಿಂತಿತು. ಸೀತೆ ಇಷ್ಟು ದೊಡ್ಡ ನವಿಲನ್ನು ನೋಡಿರಲಿಲ್ಲ, ಹಾಗಾಗಿ ಅವಳಿಗೆ ಹೆದರಿಕೆಯಾಯಿತು. “ಕಾಡಿನಲ್ಲಿ ತುಂಬಾ ದೊಡ್ಡ ದೊಡ್ಡ ನವಿಲುಗಳಿವೆ” ಎಂದು ರಾಮ ಹೇಳಿದನು. ಆಗ ಚೈತ್ರ ಮಾಸ ನಡೆಯುತ್ತಿತ್ತು. ನವಿಲು ಸಂತೋಷದಿಂದ, ಗರಿ ಬಿಚ್ಚಿ ನೃತ್ಯ ಮಾಡತೊಡಗಿತು. ನವಿಲು ಬಹಳ ಸಮಯ ನೃತ್ಯ ಮಾಡಿತು. ಸೀತೆ ನರ್ತಿಸುವ ನವಿಲವನ್ನು ಬಹಳ ಮೆಚ್ಚುಗೆಯಿಂದ ನೋಡುತ್ತಿದ್ದಳು. ಕುಣಿದು ಕುಣಿದು ದಣಿದ ನವಿಲು ನೃತ್ಯ ಮಾಡುವುದನ್ನು ನಿಲ್ಲಿಸಿತು. ಸೀತೆಯು ರಾಮನಿಗೆ, “ನವಿಲಿಗೆ ಮತ್ತೆ ನೃತ್ಯ ಮಾಡಲು ಹೇಳಿ!” ಎಂದು ಬೇಡಿದಳು. ಆಗ ರಾಮನು “ಇಲ್ಲ ಸೀತೆ, ಆ ಅಧಿಕಾರ ನಮಗಿಲ್ಲ” ಎಂದನು. ಆ ನವಿಲು ಬಂದ ಹಾಗೆಯೇ ಹೊರಟು ಹೋಯಿತು. ಸೀತೆಯು ನವಿಲು ಹೋದ ದಿಕ್ಕಿನಲ್ಲಿ ನವಿಲನ್ನು ಹಿಂಬಾಲಿಸಲು ಪ್ರಾರಂಭಿದಳು. ನವಿಲು ಒಂದೊಂದು ಗರಿಯನ್ನು ಬೀಳಿಸುತ್ತ ಮುನ್ನಡೆಯಿತು. ರಾಮನಿಗೆ ‘ನವಿಲಿನ ರೂಪ ಧರಿಸಿ ಸೀತೆಯನ್ನು ಯಾರಾದರೂ ಮೋಸ ಮಾಡುತ್ತಿದ್ದಾರೆಯೇ?’ ಎಂಬ ವಿಚಾರ ಬಂದು, ರಾಮ ಮತ್ತು ಲಕ್ಷ್ಮಣ ಇಬ್ಬರೂ ಸೀತೆಯನ್ನು ಹಿಂಬಾಲಿಸಿದರು. ಅಷ್ಟರಲ್ಲಿ ಅವರು ಒಂದು ಕೆರೆಯ ಹತ್ತಿರ ಬಂದರು. ಅಲ್ಲಿನ ನೀರನ್ನು ನೋಡಿ ಸೀತೆಗೆ ಮತ್ತೆ ತನಗೆ ಬಾಯಾರಿಕೆಯಾಗಿರುವ ಬಗ್ಗೆ ನೆನಪಾಯಿತು. ಸೀತೆ ರಾಮನಿಗೆ, “ನನಗೆ ಈಗ ನೀರು ತಂದುಕೊಡಿ. ನನಗೆ ತುಂಬಾ ಬಾಯಾರಿಕೆಯಾಗಿದೆ” ಎಂದು ಹೇಳಿದಳು. ಆಗ ರಾಮನು “ಸೀತೆ, ನಮಗೆ ಎಲ್ಲಿಯೂ ನೀರು ಸಿಕ್ಕಿರಲಿಲ್ಲ; ಆದರೆ ಈ ನವಿಲು ನಮ್ಮನ್ನು ಕೆರೆಗೆ ಕರೆತಂದಿತು. ಮೊದಲು ಅದಕ್ಕೆ ಧನ್ಯವಾದಗಳನ್ನು ಸಲ್ಲಿಸುವ”. ಸೀತೆ ಆ ನವಿಲಿಗೆ ಧನ್ಯವಾದವೆಂದು ಹೇಳಿದಳು.
ರಾಮನು ನವಿಲಿಗೆ ನೀಡಿದ ವರ
ರಾಮನು ಆ ನವಿಲಿಗೆ ಮಾನವ ವಾಣಿಯನ್ನು ಕೊಟ್ಟನು. ರಾಮ ನವಿಲಿಗೆ, “ನೀನಿಂದು ನಮ್ಮ ಮೇಲೆ ದೊಡ್ಡ ಉಪಕಾರ ಮಾಡಿದ್ದೀಯ. ಏನು ಬೇಕು ಕೇಳು” ಎಂದು ಹೇಳಿದಾಗ ಆ ನವಿಲು, “ರಾಮಾ, ನಾನು ಇನ್ನೇನನ್ನೂ ಬಯಸುವುದಿಲ್ಲ. ನನ್ನನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ” ಎಂದು ಬೇಡಿಕೊಂಡಿತು. ರಾಮಚಂದ್ರನು ಆಗ “ಇದು ಈ ಜೀವನದಲ್ಲಿ ಸಾಧ್ಯವಿಲ್ಲ. ನನ್ನ ಮುಂದಿನ ಜನ್ಮ ಶ್ರೀಕೃಷ್ಣನಾಗಿ ಇರುವುದು. ನನ್ನ ತಲೆಯ ಮೇಲೆ ಆಗ ಕಿರೀಟವನ್ನು ಹೊಂದಿದ್ದರೂ ಸಹ, ನಾನು ಯಾವಾಗಲೂ ಅದರ ಮೇಲೆ ನವಿಲುಗರಿಯನ್ನು ಧರಿಸುವೆ, ಅಂದರೆ, ನಾನು ಯಾವಾಗಲೂ ನಿನ್ನೊಂದಿಗಿರುವೆ. ನಾನು ಅದನ್ನು ಎಂದಿಗೂ ಮರೆಯುವುದಿಲ್ಲ”. ನವಿಲು ಅದನ್ನು ಒಪ್ಪಿಕೊಂಡಿತು ಮತ್ತು ‘ಧನ್ಯನಾದೆ ರಾಮ ! ಈಗ ನನ್ನ ಈ ಮಾನವ ವಾಣಿಯನ್ನು ಹಿಂಪಡೆಯಿರಿ’ ಎಂದು ಹೇಳಿತು.
ಈ ಕಥೆಯಿಂದ ಶ್ರೀಕೃಷ್ಣನು ನವಿಲುಗರಿಯನ್ನು ಏಕೆ ಧರಿಸುತ್ತಾನೆ ಎಂದು ತಿಳಿಯುತ್ತದೆ.
– ಸೌ. ಅರುಣಾ ಜೋಶಿ (ಕೃಪೆ: ‘ಮಾಸಿಕ್ ಲಾಲಾನಾ’, ಸೆಪ್ಟೆಂಬರ್ 2017)
ತುಂಬಾ ಸಂತೋಷವಾಯಿತು ಚೆನ್ನಾಗಿದೆ ಸನಾತನ ಸ೦ಸ್ಥೆಯ ವಿಚಾರ ಸಂದೇಶ ನೀಡಿದರು ನಮಸ್ಕಾರ