೧. ಮಂಗಳಗೌರಿ ವ್ರತ
ಶ್ರಾವಣ ಮಾಸದಲ್ಲಿ ಸ್ತ್ರೀಯರು ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ನವವಧುಗಳು ಈ ವ್ರತವನ್ನು ಸೌಭಾಗ್ಯ ಮತ್ತು ಪತಿಗೆ ಒಳ್ಳೆಯ ಆಯಸ್ಸು ಲಭಿಸಲು ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಮಂಗಳವಾರದಂದು ಈ ವ್ರತವನ್ನು ಆಚರಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಸಭಾಗೃಹದಲ್ಲಿ ಸಾಮೂಹಿಕವಾಗಿ ಮಂಗಳಗೌರಿ ವ್ರತ ಆಚರಿಸುವ ಪದ್ಧತಿಯೂ ಇದೆ. ೫ ಅಥವಾ ೮ ವರ್ಷಗಳ ಕಾಲ ಈ ವ್ರತವನ್ನಾಚರಿಸುತ್ತಾರೆ. ಈಗ ಹೆಚ್ಚಿನ ಮಹಿಳೆಯರು ಈ ವ್ರತವನ್ನು ೫ ವರ್ಷಗಳ ಕಾಲ ಆಚರಿಸುತ್ತಾರೆ.
೨. ಕೊರೋನಾದಿಂದ ಉದ್ಭವಿಸಿರುವ ಆಪತ್ಕಾಲದಲ್ಲಿ ಮಂಗಳಗೌರಿ ವ್ರತವನ್ನು ಹೇಗೆ ಆಚರಿಸಬೇಕು ?
ಎಲ್ಲರೊಂದಿಗೆ ಸೇರಿ ವ್ರತವನ್ನು ಆಚರಿಸಲು ಈಗ ಸಾಧ್ಯವಿಲ್ಲ, ಆದುದರಿಂದ ಮನೆಯಲ್ಲಿಯೇ ಮುಂದಿನ ರೀತಿಯಲ್ಲಿ ದೇವಿಯ ಭಾವಪೂರ್ಣ ಪೂಜೆಯನ್ನು ಮಾಡಬಹುದು.
೨ ಅ. ದೇವಿಯ ಪೂಜೆ
೨ ಅ ೧. ಷೋಡಶೋಪಚಾರ ಪೂಜೆ : ಯಾರಿಗೆ ದೇವಿಯ ‘ಷೋಡಶೋಪಚಾರ ಪೂಜೆ‘ಯನ್ನು ಮಾಡಲು ಸಾಧ್ಯವಿದೆಯೋ, ಅವರು ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ‘ಶ್ರೀ ಶಿವಮಂಗಲಾಗೌರ್ಯೈ ನಮಃ |’ ಎಂಬ ಮಂತ್ರವನ್ನು ಉಚ್ಚಾರ ಮಾಡುತ್ತ ದೇವಿಗೆ ಉಪಚಾರಗಳನ್ನು ಅರ್ಪಿಸಬೇಕು.
೨ ಅ ೨. ಪಂಚೋಪಚಾರ ಪೂಜೆ : ಯಾರಿಗೆ ದೇವಿಯ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು ‘ಪಂಚೋಪಚಾರ ಪೂಜೆ‘ಯನ್ನು ಮಾಡಬೇಕು. ಇದರಲ್ಲಿ ಗಂಧ, ಅರಿಶಿಣ-ಕುಂಕುಮ, ಹೂವು, ಧೂಪ, ದೀಪ ಮತ್ತು ನೈವೇದ್ಯಗಳನ್ನು ಈ ಕ್ರಮದಿಂದ ದೇವಿಗೆ ಅರ್ಪಿಸುವಾಗ ‘ಶ್ರೀ ಶಿವಮಂಗಲಾಗೌರ್ಯೈ ನಮಃ |’ ಎಂಬ ಮಂತ್ರವನ್ನು ಉಚ್ಚರಿಸಬೇಕು. ಪೂಜೆ ಆದ ನಂತರ ಶ್ರೀ ಶಿವಮಂಗಲಾಗೌರಿ ದೇವಿಯ ಆರತಿಯನ್ನು ಬೆಳಗಬೇಕು. ಆರತಿ ಬೆಳಗುವಾಗ ದೇವಿಯ ಆರತಿಯ ಹಾಡು ಹಾಡಬೇಕು.
೩. ಬಾಗಿನ ನೀಡುವುದು
ಪೂಜೆಯಾದ ನಂತರ ತಮ್ಮ ತಮ್ಮ ಕ್ಷಮತೆಗನುಸಾರ ಸೌಭಾಗ್ಯವತಿ ಸ್ತ್ರೀಯರು ಒಬ್ಬರಿಗೊಬ್ಬರು ಬಾಗಿನವನ್ನು ನೀಡಿ ಉಡಿ ತುಂಬುತ್ತಾರೆ. ಬಾಗಿನ ನೀಡುವಾಗ ಸಾತ್ತ್ವಿಕ ವಸ್ತುಗಳನ್ನು ನೀಡಬೇಕು.
೪. ದೇವಿಯ ಕಥೆಯನ್ನು ಓದುವುದು
ಪೂಜೆಯಾದ ನಂತರ ದೇವಿಯ ಕಥೆಯನ್ನು ಓದಬೇಕು. ಯಾರಿಗೆ ಇದು ಸಾಧ್ಯವಿಲ್ಲವೋ ಅವರು ಅಖಂಡ ಸೌಭಾಗ್ಯ ಲಭಿಸಲು ದೇವಿಯಲ್ಲಿ ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡಬೇಕು.
೫. ಜಾಗರಣೆ
ದೇವಿಯ ಉಪಾಸನೆಯ ಒಂದು ಅಂಶವೆಂದು ಮಹಿಳೆಯರು ಸಾಮೂಹಿಕವಾಗಿ ಜಾಗರಣೆಯನ್ನು ಮಾಡುತ್ತಾರೆ. ಕೊರೋನಾ ಸಂಕಟದ ಪರಿಸ್ಥಿತಿಯಲ್ಲಿ ಈ ರೀತಿ ಒಂದೆಡೆ ಸೇರಲು ಸಾಧ್ಯವಿಲ್ಲ. ಆದುದರಿಂದ ರಾತ್ರಿ ಜಾಗರಣೆ ಮಾಡುವಾಗ ಯಾವುದಾದರೊಂದು ಗ್ರಂಥವನ್ನು ಓದಬೇಕು, ಉದಾ : ದೇವಿಭಾಗವತ, ದೇವಿಪುರಾಣ. ಇದು ಜಾಗರಣೆ ಮಾಡಿದಂತೆಯೇ. ಯಾವುದಾದರೊಂದು ಕಾರಣದಿಂದ ಗ್ರಂಥ ಸಿಗದಿದ್ದರೆ ಅಥವಾ ಓದಲು ಆಗದಿದ್ದವರು ‘ಶ್ರೀ ಶಿವಮಂಗಲಾಗೌರ್ಯೈ ನಮಃ |’ ಎಂಬ ಜಪವನ್ನು ಜಪಿಸಬೇಕು. ಅದೂ ಆಗದಿದ್ದರೆ ತಮ್ಮ ಕುಲದೇವರ ನಾಮವನ್ನು ಜಪಿಸಬೇಕು. ಇದರಿಂದ ಕೂಡ ದೇವಿಯ ಉಪಾಸನೆಯ ‘ಜಾಗರಣೆಯ’ ಭಾಗ ಪೂರ್ಣವಾಗಿ ದೇವಿಯ ಆಶೀರ್ವಾದ ಲಭಿಸುತ್ತದೆ.
– ಶ್ರೀ. ದಾಮೋದರ ವಝೆ, ಸಂಚಾಲಕರು, ಪುರೋಹಿತ ಪಾಠಶಾಲೆ, ಸನಾತನ ಸಂಸ್ಥೆ.