ಸಂಕಲನ : ಪರಾತ್ಪರ ಗುರು ಡಾ. ಜಯಂತ ಆಠವಲೆ
ಆಪತ್ಕಾಲದ ಬಗ್ಗೆ ಈ ಲೇಖನ ಮಾಲಿಕೆಯಲ್ಲಿ ಇಷ್ಟರ ವರೆಗೆ ಆಹಾರ ಸಿಗದೇ ಉಪವಾಸ ಬೀಳದಿರಲು ಏನು ಮಾಡಬೇಕು, ಹಾಗೆಯೇ ಆಹಾರಧಾನ್ಯಗಳ ತೋಟಗಾರಿಕೆ, ಗೋಪಾಲನೆ ಮುಂತಾದ ವಿಷಯಗಳನ್ನು ನೋಡಿದೆವು. ಮನುಷ್ಯನು ನೀರಿಲ್ಲದೆ ಬದುಕಲು ಸಾಧ್ಯವಿಲ್ಲ ಮತ್ತು ವಿದ್ಯುತ್ ಇಲ್ಲದೆ ಜೀವನ ನಡೆಸುವುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಅದಕ್ಕಾಗಿ ನೀರಿಗಾಗಿ ಅನುಕೂಲವಾಗಲು ನೀರಿನ ಸಂಗ್ರಹ ಮತ್ತು ಶುದ್ಧೀಕರಿಸುವ ಪದ್ಧತಿ, ಹಾಗೆಯೇ ವಿದ್ಯುತ್ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
೬. ನೀರಿಲ್ಲದೇ ತತ್ತರಿಸಬಾರದು ಎಂದು ಇದನ್ನು ಮಾಡಬೇಕು !
೧. ಆಪತ್ಕಾಲದಲ್ಲಿ ನೀರಿನ ಕೊರತೆಯುಂಟಾಗಬಾರದು ಎಂದು ಬಾವಿ ಅಥವಾ ಕೆರೆಗಳನ್ನು ಈಗಲೇ ತೋಡಬೇಕು ಮತ್ತು ಅದು ಸಾಧ್ಯವಿಲ್ಲದಿದ್ದರೆ ಕೊಳವೆಬಾವಿ (ಬೋರ್‌ವೆಲ್) ತೋಡಿಕೊಳ್ಳಿ !
ಕೆಲವು ಊರು ಮತ್ತು ಬಾಹುತೇಕ ಎಲ್ಲ ನಗರ ಮತ್ತು ಮಹಾನಗರಗಳಿಗೆ ಅಲ್ಲಿನ ಪಂಚಾಯತ್, ನಗರಪಾಲಿಕೆಗಳು ಅಣೆಕಟ್ಟು ಅಥವಾ ಕೆರೆಯ ನೀರನ್ನು ನಳ್ಳಿಗಳ ಮೂಲಕ ಪೂರೈಸುತ್ತವೆ. ಆಪತ್ಕಾಲದಲ್ಲಿ ಅನೇಕ ದಿನಗಳ ವರೆಗೆ ವಿದ್ಯುತ್ ಇಲ್ಲದಿರುವುದು, ಅತಿವೃಷ್ಟಿಯಿಂದ ಅಣೆಕಟ್ಟು ಒಡೆಯುವುದು, ಕೆರೆಗಳಿರುವಲ್ಲಿ ಬೇಕಾದಷ್ಟು ಮಳೆ ಬರದಿರುವುದು ಮುಂತಾದ ಕಾರಣಗಳಿಂದ ನಳ್ಳಿ ನೀರಿನ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರವು ಕೆಲವೊಮ್ಮೆ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸುತ್ತದೆ; ಆದರೆ ಆಪತ್ಕಾಲದಲ್ಲಿ ಇಂಧನದ ಅಭಾವದಿಂದ ಟ್ಯಾಂಕರ್‌ಗಳ ಸಾಗಾಟವು ಸ್ಥಗಿತವಾಗಬಲ್ಲದು. ಬರಗಾಲದಲ್ಲಿ ಊರಿನಲ್ಲಿ ಹರಿಯುವ ನದಿಯು ಸಹ ಬತ್ತುವ ಸಾಧ್ಯತೆಯಿರುತ್ತದೆ. ಇಂತಹ ವಿವಿಧ ಸಮಸ್ಯೆಗಳನ್ನು ಗಮನದಲ್ಲಿರಿಸಿ ಎಲ್ಲಿ ನೀರಿನ ಝರಿ ಇದೆ ಅಲ್ಲಿ ಬಾವಿ ಅಥವಾ ಕೆರೆ ತೋಡುವುದು ಮತ್ತು ಇದು ಸಾಧ್ಯವಿಲ್ಲದಿದ್ದಲ್ಲಿ ಕೊಳವೆಬಾವಿಯನ್ನು (ಬೋರ್‌ವೆಲ್) ಈಗಲೆ ಅಗೆಯಿಸಿಕೊಳ್ಳಬೇಕು; ಆದರೆ ಕೊಳವೆಬಾವಿಗಿಂತ ಕೆರೆ ತೋಡುವುದು ಹೆಚ್ಚು ಯೋಗ್ಯವಾಗಿದೆ; ಏಕೆಂದರೆ ಆಪತ್ಕಾಲದಲ್ಲಿ ಕೊಳವೆಬಾವಿಯ ದುರುಸ್ತಿಗಾಗಿ ತಗಲುವ ಬಿಡಿಭಾಗಗಳು, ಮೆಕಾನಿಕ್ ಇವೆಲ್ಲ ಸಿಗಲು ಕಠಿಣವಾಗುತ್ತದೆ. ಬಾವಿ ತೋಡುವ ಅಥವಾ ಕೊಳವೆಬಾವಿ ಕೊರೆಯುವ ಮೊದಲು ಭೂಮಿಯಲ್ಲಿ ನೀರಿನ ಝರಿ ಇರುವ ಬಗ್ಗೆ ತಜ್ಞರಲ್ಲಿ ವಿಚಾರಿಸಿಕೊಳ್ಳಬೇಕು. ಭೂಮಿಯಲ್ಲಿ ನೀರಿನ ಒಸರು ಇದ್ದಲ್ಲಿ ಮಾತ್ರ ಅಗೆಯಲು ಖರ್ಚು ಮಾಡಬೇಕು. ಬಾವಿ ಅಥವಾ ಕೊಳವೆಬಾವಿ (ಬೋರ್‌ವೆಲ್)ಯಲ್ಲಿ ತುಂಬಾ ನೀರು ಸಿಕ್ಕಿದ್ದಲ್ಲಿ ಕೃಷಿ, ತೋಟಗಾರಿಕೆಗಾಗಿ ಉಪಯೋಗಿಸಬಹುದು.
೧ ಅ. ಭೂಗರ್ಭದ ನೀರಿನ ಮಟ್ಟವನ್ನು ಹೆಚ್ಚಿಸಲು ವಿವಿಧ ಪರಿಹಾರೋಪಾಯಗಳನ್ನು ಮಾಡುವುದು : ಮಳೆ ಬೀಳದಿರುವುದು, ನೀರು ಇಂಗದಿರುವುದು ಮುಂತಾದ ಕಾರಣಗಳಿಂದಾಗಿ ಭೂಗರ್ಭದ ನೀರಿನ ಮಟ್ಟವು ಕುಸಿಯುತ್ತದೆ. ಮುಂದೆ ನೀಡಿರುವ ಪ್ರಯತ್ನಗಳನ್ನು ಮಾಡಿ ಈ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದರೆ ಮಾತ್ರ ಪರಿಸರದ ಬಾವಿಗಳು, ಕೊಳವೆಬಾವಿ (ಬೊರವೆಲ್) ಗಳಲ್ಲಿ ನೀರಿನ ಮಟ್ಟ ಹೆಚ್ಚಗಬಲ್ಲದು. ಹಳ್ಳಗಳಿಗೆ ಕಟ್ಟೆ ಕಟ್ಟುವುದು ಮತ್ತು ನದಿತೀರಗಳನ್ನು ಅಗೆಯುವುದು (ಉಳುವುದು) ಮುಂತಾ ಕೃತಿಗಳನ್ನು ಊರಿನವರೆಲ್ಲರೂ ಸೇರಿ ಸಂಘಟಿತವಾಗಿ ಮಾಡಬೇಕು ಹಾಗೂ ಅದನ್ನು ಮಾಡುವ ಮೊದಲು ಸರಕಾರದಿಂದ ಕಾನೂನುರೀತ್ಯಾ ಅನುಮತಿ ಪಡೆಯಬೇಕು.
೧ ಅ ೧. ಸರಕಾರಿ ಯೋಜನೆಗಳ ಲಾಭ ಪಡೆಯುವುದು : ಊರಿನ ಜನರು ವೈಯಕ್ತಿಕವಾಗಿ ಅಥವಾ ಒಟ್ಟಾಗಿ ಇಂತಹ ಯೋಜನೆಗಳ ಲಾಭ ಪಡೆಯಲು ಪ್ರಯತ್ನಿಸಬೇಕು. ಉದಾ. ಮಹಾರಾಷ್ಟ್ರ ಸರಕಾರವು ರಾಜ್ಯದಲ್ಲಿ ನಡೆಸುತ್ತಿರುವ ‘ನೀರು ಇಂಗಿಸಿ’ ಯೋಜನೆ
ಅ ೧ ಅ ೨. ಅಲ್ಲಲ್ಲಿ ಚಿಕ್ಕ ಚಿಕ್ಕ ಅಣೆಕಟ್ಟು ಕಟ್ಟಬೇಕು !
ಚಿಕ್ಕ ಅಣೆಕಟ್ಟು
ಅ ೧ ಅ ೩. ಊರಿನ ಬಳಿ ಹರಿಯುವ ನೀರಿನ ದಂಡೆಗಳನ್ನು ಉಳುವುದು : ಪ್ರತಿವರ್ಷ ಮಳೆಗಾಲದಲ್ಲಿ ನದಿಯಲ್ಲಿ ಬರುವ ಕಲುಷಿತ ನೀರಿನಲ್ಲಿರುವ ಸೂಕ್ಷ್ಮ ಕಣಗಳು (ಫೈನ್ ಪಾರ್ಟಿಕಲ್ಸ್) ನದಿಯ ದಂಡೆಯಲ್ಲಿರುವ ಮರಳಿನಲ್ಲಿ ಸೇರಿಕೊಳ್ಳುತ್ತವೆ. ಹೀಗೆ ವರ್ಷಗಟ್ಟಲೆ ಆಗುತ್ತಿರುವುದರಿಂದ ಅವುಗಳ ಪದರಗಳು ಒಂದರಮೇಲೆ ಒಂದು ಬಂದು ಬಿಡುತ್ತವೆ ಮತ್ತು ಅದರಿಂದ ನದಿಯಲ್ಲಿ ಹರಿಯುವ ನೀರು ಮರಳಿನ ಮೂಲಕ ನದಿಯ ದಂಡೆಯಲ್ಲಿ (ಭೂಮಿಯಲ್ಲಿ) ಸರಿಯಾಗಿ ಇಂಗುವುದಿಲ್ಲ. ನದಿಯ ನೀರು ದಂಡೆಯಲ್ಲಿ ಇಂಗದ ಕಾರಣ ಪರಿಸರದ ಭೂಗರ್ಭದಲ್ಲಿರುವ ನೀರಿನ ಮಟ್ಟವು ಪ್ರತಿವರ್ಷ ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಪರಿಹಾರೋಪಾಯವೆಂದು ನದಿಯ ದಂಡೆಗಳನ್ನು ಅಗೆಯುವ ಒಂದು ಯಶಸ್ವಿ ಪ್ರಯೋಗವನ್ನು ಅನೇಕ ಊರುಗಳಲ್ಲಿ ಮಾಡಲಾಗಿತ್ತು. ಇದರ ಬಗ್ಗೆ ಮಾಹಿತಿಯನ್ನು ಮುಂದೆ ಕೊಡಲಾಗಿದೆ.
ಅ. ನದಿದಂಡೆಗಳನ್ನು ಅಗೆದು ನೀರನ್ನು ಭೂಮಿಯಲ್ಲಿ ಇಂಗಿಸಿ ಭೂಗರ್ಭದ ನೀರಿನ ಮಟ್ಟವನ್ನು ಹೆಚ್ಚಿಸಿದ ಗೋಮಯಿ ನದಿ ತೀರದ ಊರಿನ ಜನರು ! : ಮೇಲಿನಂತೆ ಪರಿಸ್ಥಿತಿಯು ಮಹಾರಾಷ್ಟ್ರದ ಡಾಂಬರಖೆಡಾ ಎಂಬ ಊರಿನಲ್ಲಿಯೂ ಆಗಿತ್ತು. ಈ ಊರು ಗೋಮಯಿ ನದಿ ದಡದಲ್ಲಿದೆ. ಈ ನದಿಯಲ್ಲಿ ೪ ರಿಂದ ೬ ತಿಂಗಳು ನೀರು ಇರುತ್ತದೆ. ಹೀಗಿದ್ದರೂ ಡಾಂಬರಖೇಡಾದ ಬಾವಿಗಳಲ್ಲಿ ಮತ್ತು ಕೊಳವೆಬಾವಿಗಳಲ್ಲಿರುವ ನೀರಿನ ಮಟ್ಟವು ೫೦೦ ರಿಂದ ೭೦೦ ಅಡಿ ಕೆಳಗೆ ಹೋಗಿತ್ತು. ಇದನ್ನು ತಡೆಗಟ್ಟಲು ಅಲ್ಲಿನ ಊರಿನವರು ಬೇಸಿಗೆಯಲ್ಲಿ ಒಣಗಿ ಹೋಗಿದ್ದ ಗೋಮಯಿ ನದಿಯನ್ನು ಟ್ರಾಕ್ಟರ್, ಮರದ ನೇಗಿಲು, ಕಬ್ಬಿಣದ ನೇಗಿಲುಗಳಂತಹ ಉಪಕರಣಗಳಿಂದ ಸುಮಾರು ಒಂದು ಕಿಲೋ ಮೀಟರ್ ಉದ್ದಗಲ ಅಗೆದು ತೆಗೆದರು. ಇದರಿಂದ ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಿದುಹೋಗುತ್ತಿದ್ದ ನದಿಯ ನೀರು ನದಿದಂಡೆಯಲ್ಲಿಯೇ ಇಂಗಿತು. ಮತ್ತು ಒಟ್ಟು ೨೪ ಗಂಟೆಗಳಲ್ಲಿ ಪರಿಸರದಲ್ಲಿನ ಬಾವಿಗಳು ಮತ್ತು ಕೊಳವೆಬಾವಿಗಳ ಜಲಸ್ತರವು ೫೦೦ ರಿಂದ ೭೦೦ ಅಡಿಗಳಷ್ಟು ಕೆಳಗಿನಿಂದ ೯೦ ಅಡಿಗೆ ಬಂದಿತು !
ಮಧ್ಯಪ್ರದೇಶದ ಖೆತಿಯಾ ಎಂಬ ನಗರದ ಹತ್ತಿರ ಇರುವ ಅನೇಕ ಊರುಗಳ ಜನರೂ ನಂತರ ತಮ್ಮ ತಮ್ಮ ಊರುಗಳ ಹತ್ತಿರ ಹರಿಯುವ ಗೋಮಯಿ ನದಿಯನ್ನು ಅಗೆದರು ಮತ್ತು ಮಳೆಗಾಲದಲ್ಲಿ ಹರಿದು ಹೋಗುತ್ತಿದ್ದ ನದಿಯ ನೀರನ್ನು ದಂಡೆಯಲ್ಲಿಯೇ ಇಂಗಿಸಿದರು. (ಆಧಾರ : ವಾಟ್ಸ್ ಆಪ್ ನಿಂದ ಸಿಕ್ಕಿದ ಮಾಹಿತಿ)
೧ ಆ. ಕೆಲವು ಸೂಚನೆಗಳು
೧. ಬಾವಿ ಅಥವಾ ಕೊಳಿವೆಬಾವಿಯನ್ನು ಅಗೆಯುವ ಒಂದು ಕುಟುಂಬದ ಆರ್ಥಿಕ ಕ್ಷಮತೆಯಿಲ್ಲದಿದ್ದರೆ ಕೆಲವು ಕುಟುಂಬಗಳು ಸೇರಿ ಇದನ್ನು ಮಾಡಬಹುದು.
೨. ಬಾವಿಗೆ ರಾಟೆಯನ್ನು ಸಹ ಹಾಕಿಸಿಕೊಳ್ಳಬೇಕು. ರಾಟೆಯಿಂದ ನೀರು ತೆಗೆಯುವ ಅಭ್ಯಾಸ ಮಾಡಬೇಕು. ರಾಟೆಯ ಹಗ್ಗವು ಸವೆದಿದ್ದಲ್ಲಿ ಅದನ್ನು ಬದಲಾಯಿಸಬೇಕು ಇದನ್ನು ಸಹ ಗಮನದಲ್ಲಿರಿಸಿ ರಾಟೆಗಾಗಿ ಒಂದು ಹೆಚ್ಚುವರಿ ಹಗ್ಗವನ್ನು ಖರೀದಿಸಿಡಬೇಕು. ಸಾಧ್ಯವಿದ್ದಲ್ಲಿ ಬಾವಿಗೆ ಸೌರಶಕ್ತಿಯಿಂದ ನಡೆಯುವ ಪಂಪ್ ಹಾಕಿಸಬೇಕು. ಸೌರಪಂಪ್ ಹಾಕಿಸಿದರೂ ರಾಟೆಯ ಅಭ್ಯಾಸ ಮಾಡಿಕೊಳ್ಳುವುದನ್ನು ನಿಲ್ಲಿಸಬಾರದು. ಏಕೆಂದರೆ ದಿನವಿಡೀ ಮೋಡದ ವಾತಾವರಣ ಇದ್ದಲ್ಲಿ ಸೌರಪಂಪ್ ನಿರುಪಯುಕ್ತವಾಗುವುದು.
೩. ಈಗಾಗಲೇ ಅಗೆದಿರುವ ಬಾವಿಯ ನೀರು ಮಳೆಗಾಲ ಪ್ರಾರಂಭ ವಾಗುವ ತನಕ ಸಾಕಾಗದೇ ಇದ್ದಲ್ಲಿ ಗೊತ್ತಿದ್ದವರಲ್ಲಿ ವಿಚಾರಿಸಿ ಬಾವಿಯನ್ನು ಇನ್ನೂ ಸ್ವಲ್ಪ ಆಳಕ್ಕೆ ಇಳಿಸಬೇಕು. ಇದರಿಂದ ಮಳೆ ಬರುವ ತನಕ ನೀರು ಸಾಕಾಗಬಹುದು.
೪. ಯಾರಾದರೊಬ್ಬರಲ್ಲಿ ಮೊದಲಿನಿಂದಲೇ ಕೊಳವೆಬಾವಿ ಇದೆ ಎಂದಾದಲ್ಲಿ ಅವರು ಕೊಳವೆಬಾವಿಗೆ ವಿದ್ಯುತ್ ಪಂಪ್ ಜೊತೆಗೆ ಸೌರಪಂಪ್ ಮತ್ತು ಕೈಪಂಪ್ ಸಹ ಹಾಕಿಸಬೇಕು ಹೊಸದಾಗಿ ಅಗೆದ ಕೊಳವೆಬಾವಿಗೆ ಅಗೆಯುವಾಗಲೇ ಈ ವ್ಯವಸ್ಥೆ ಮಾಡಿಕೊಳ್ಳಬೇಕು.
೫. ಮಾನವನ ತಪ್ಪುಗಳಿಂದ ಬಾವಿ ಮತ್ತು ಕೊಳವೆಬಾವಿಗಳಲ್ಲಿರುವ ನೀರಿನ ದಾಸ್ತಾನು ಕಲುಷಿತವಾಗದಂತೆ ದಕ್ಷತೆ ವಹಿಸಬೇಕು.
೨. ಆಪತ್ಕಾಲದಲ್ಲಿ ಕುಟುಂಬಕ್ಕೆ ಕಡಿಮೆಪಕ್ಷ ೧೦ ರಿಂದ ೧೫ ದಿನಕ್ಕಾಗುವಷ್ಟು ನೀರು ಶೇಖರಿಸಿಡುವ ಸೌಕರ್ಯ ಮಾಡುವುದು
ಆಪತ್ಕಾಲದಲ್ಲಿ ಸರಕಾರದ ಅನಿಯಮಿತ ನೀರಿನ ಪೂರೈಕೆ, ಬಾವಿ ಮತ್ತು ಕೊಳವೆಬಾವಿಗಳ ವಿದ್ಯುತ್ ಪಂಪ್ ಹಾಳಾಗುವುದು ಮುಂತಾದ ಸಾಧ್ಯತೆಗಳ ವಿಚಾರ ಮಾಡಿ ಕುಟುಂಬಕ್ಕೆ ಕಡಿಮೆಪಕ್ಷ ೧೫ ದಿನಗಳಿಗಾಗುವಷ್ಟು ನೀರು ಶೇಖರಿಸಿಡುವ ಸೌಕರ್ಯ ಮಾಡಬೇಕು, ಉದಾ. ನೀರಿನ ಟಾಂಕಿ ಹಾಕಿಸಿಕೊಳ್ಳುವುದು.
೩. ವಿದ್ಯುತ್ ಅಭಾವದಿಂದ ಮನೆಯಲ್ಲಿರುವ ಜಲಶುದ್ಧೀಕರಣಯಂತ್ರ (ವಾಟರ್ ಫಿಲ್ಟರ್) ನಿಷ್ಕ್ರಿಯ ಆಗುವ ಸಾಧ್ಯತೆಯನ್ನು ಗಮನದಲ್ಲಿರಿಸಿ ಮುಂದಿನ ಪರ್ಯಾಯಗಳ ವಿಚಾರ ಮಾಡಬೇಕು
ಪಟಕಾರ (ಅ್ಯಲಮ್)
೩ ಅ. ಕ್ಯಾಂಡಲ್ ಫಿಲ್ಟರ್ ಖರೀದಿಸಿಡುವುದು
೩ ಆ. ನೀರನ್ನು ಸ್ವಚ್ಛಗೊಳಿಸಲು ಪಟಕಾರ (ಅ್ಯಲಮ್) ವನ್ನು ಉಪಯೋಗಿಸುವುದು : ಹಂಡೆಯಲ್ಲಿರುವ ಅಥವಾ ಮಧ್ಯಮ ಗಾತ್ರದ ಪೀಪಾಯಿಯಲ್ಲಿರುವ ಕೊಳಕು ಅಥವಾ ಮಣ್ಣು ಮಿಶ್ರಿತ ನೀರನ್ನು ಕುಡಿಯಲು ಅಥವಾ ಅಡುಗೆಗಾಗಿ ಉಪಯೋಗಿಸುವ ಸಮಯ ಬಂದಲ್ಲಿ, ಇಲ್ಲಿ ಕೊಟ್ಟಿರುವ ಪದ್ಧತಿಯಲ್ಲಿ ಪಟಕಾರವನ್ನು ಉಪಯೋಗಿಸಬೇಕು. ೩-೪ ಸೆಂ.ಮೀ. ಉದ್ದಗಲದ ಪಟಕಾರದ ತುಂಡನ್ನು (ಲಿಂಬೆ ಗಾತ್ರದ) ಸ್ವಚ್ಛವಾಗಿ ತೊಳೆದ ಕೈಯಿಂದ ಹಂಡೆಯಲ್ಲಿ ಅಥವಾ ಪೀಪಾಯಿ (ಪಾತ್ರೆ)ಯ ಮೇಲಿನ ಭಾಗದಲ್ಲಿ ಗಡಿಯಾರದ ಮುಳ್ಳು ತಿರುಗುವ ದಿಕ್ಕಿನಲ್ಲಿ ೨-೩ ಬಾರಿ ಮತ್ತು ಅನಂತರ ಅದರ ವಿರುದ್ಧ ದಿಕ್ಕಿನಲ್ಲಿ ೨-೩ ಬಾರಿ ತಿರುಗಿಸಬೇಕು. ಹೀಗೆ ಮಾಡುವುದರಿಂದ ನೀರಿನಲ್ಲಿರುವ ಮಣ್ಣು ಸಾಮಾನ್ಯವಾಗಿ ೩-೪ ಗಂಟೆಯೊಳಗೆ ತಳಕ್ಕೆ ಹೋಗಿಬಿಡುತ್ತದೆ. ನೀರು ಸಂಪೂರ್ಣ ಸ್ವಚ್ಛವಾಗಲು ಒಂದು ದಿನ ತಗಲುತ್ತದೆ. ನೀರು ಸ್ವಚ್ಛವಾಗುವ ತನಕ ಅದನ್ನು ಅಲುಗಾಡಿಸಬಾರದು. ನೀರನ್ನು ಮಧ್ಯಮಧ್ಯ ಅಲುಗಾಡಿಸಿದರೆ ತಳಕ್ಕೆ ಹೋದ ಮಣ್ಣು ಪುನಃ ಮೇಲೆ ಬರುತ್ತದೆ. ಹಂಡೆ ಅಥವಾ ಪೀಪಾಯಿಯ ನೀರನ್ನು ಉಪಯೋಗಿಸುವ ಸಮಯ ಬಂದಲ್ಲಿ ಮೇಲಿನ ಸ್ವಚ್ಛ ನೀರನ್ನು ನಿಧಾನವಾಗಿ ಇನ್ನೊಂದು ಪಾತ್ರೆಯಲ್ಲಿ ತೆಗೆದುಕೊಳ್ಳಬೇಕು. ಪೀಪಾಯಿಯ ಅಥವಾ ಹಂಡೆಯ ತಳದಲ್ಲಿರುವ ಕೊಳಕು ನೀರನ್ನು ಗಿಡಗಳಿಗೆ ಹಾಕಬೇಕು.
೩ ಇ. ನೀರನ್ನು ಸೋಸಿ ಮತ್ತು ಕುದಿಸುವುದು :
ಕುಡಿಯುವ ನೀರನ್ನು ಪೀಪಾಯಿಯಲ್ಲಿ ತುಂಬಿಸುವ ಮೊದಲು ಒಂದು ದಪ್ಪವಾದ ಮತ್ತು ಸ್ವಚ್ಛವಾದ ಬಟ್ಟೆಯನ್ನು ಪೀಪಾಯಿಯ ಬಾಯಿಗೆ ಕಟ್ಟಬೇಕು ಮತ್ತು ಅದರಿಂದ ನೀರನ್ನು ಸೋಸಬೇಕು. ಆ ನೀರನ್ನು ಅಡುಗೆಗಾಗಿ ಉಪಯೋಗಿಸಬಹುದು. ನೀರನ್ನು ಸೋಸಲು ಉಪಯೋಗಿಸಿದ ಬಟ್ಟೆಯನ್ನು ಸ್ವಚ್ಛವಾಗಿ ತೊಳೆದು ಒಣಗಿಸಿಡಬೇಕು. ಆ ಬಟ್ಟೆಯನ್ನು ಕೇವಲ ನೀರನ್ನು ಸೋಸಲು ಮಾತ್ರ ಉಪಯೋಗಿಸಬೇಕು. ಸೋಸಿದ ನೀರಿನಲ್ಲಿ ಕುಡಿಯಲು ತಗಲುವಷ್ಟು ನೀರನ್ನು ಕುದಿಸಿ ಮತ್ತೆ ಉಪಯೋಗಿಸಬೇಕು.
ಅ ೩ ಈ. ನೀರನ್ನು ಶುದ್ಧಗೊಳಿಸುವ ಸೌಕರ್ಯವಿರುವ ಬಾಟಲಿಯನ್ನು ಉಪಯೋಗಿಸುವುದು :
ಈ ಬಾಟಲಿಯಲ್ಲಿ ಅಶುದ್ಧ ನೀರನ್ನು ತುಂಬಿಸಿದರೆ ಅದು ಸ್ವಲ್ಪ ಹೊತ್ತಿನಲ್ಲಿ ಶುದ್ಧಗೊಂಡು ಕುಡಿಯಲು ಯೋಗ್ಯವಾಗುತ್ತದೆ. ಈ ಬಾಟಲಿಯನ್ನು ಆಪತ್ಕಾಲದಲ್ಲಿ ಅಕಸ್ಮಾತ್ ಪಯಾಣವನ್ನು ಮಾಡಬೇಕಾಗಿ ಬಂದಾಗ ಅಥವಾ ಪರವೂರಿನಲ್ಲಿ ಇರಬೇಕಾದಾಗ ಹೆಚ್ಚು ಉಪಯೋಗಿಸಬಹುದು. ಇದರ ಕಾರಣವೇನೆಂದರೆ, ಅಂತಹ ಸಮಯದಲ್ಲಿ ಪ್ರತಿಬಾರಿ ನಮಗೆ ಕುಡಿಯಲು ಶುದ್ಧ ನೀರು ಸಿಗುತ್ತದೆ ಎಂದೇನಿಲ್ಲ. ನೀರನ್ನು ಶುದ್ಧಗೊಳಿಸುವ ಇಂತಹ ಬಾಟಲಿಗೆ ಸುಮಾರು ೫೦೦ ರೂಪಾಯಿಯಷ್ಟು ಅಥವಾ ಅದಕ್ಕಿಂತಹ ಹೆಚ್ಚು ಬೆಲೆ ಇರುತ್ತದೆ. ಈ ಬಾಟಲಿಗಳನ್ನು ಆನ್ ಲೈನ್ ಖರೀದಿಸಬಹುದು.
೪. ವಿದ್ಯುತ್ ಅಭಾವದಿಂದ ನೀರನ್ನು ತಂಪಾಗಿಸುವ ಯಂತ್ರವು ಸ್ಥಗಿತವಾಗುವ ಸಾಧ್ಯತೆಯನ್ನು ಗಮನದಲ್ಲಿರಿಸಿ ನೀರನ್ನು ತಂಪಾಗಿಸುವ ಇತರ ಸುಲಭ ಪರ್ಯಾಯಗಳ ವಿಚಾರ ಮಾಡುವುದು
೪ ಅ. ಮಣ್ಣಿನ ಬಿಂದಿಗೆ ಅಥವಾ ಮಡಕೆಯನ್ನು ಉಪಯೋಗಿಸುವುದು : ಹಳ್ಳಿಗಳಲ್ಲಿ ಕೆಲವು ಮನೆಗಳಲ್ಲಿ ನೀರನ್ನು ತಂಪಾಗಿರಿಸಲು ಮಣ್ಣಿನ ಬಿಂದಿಗೆಗಳನ್ನು ಉಪಯೋಗಿಸುತ್ತಾರೆ. ಬಿಂದಿಗೆಯನ್ನು ಹುಗಿಯಲು ಮನೆಯಲ್ಲಿ ಒಂದು ಗುಂಡಿಯನ್ನು ತೋಡಿ ಅದರಲ್ಲಿ ಬಿಂದಿಗೆಯನ್ನು ಸ್ವಲ್ಪ ಓರೆಯಾಗಿ ಹುದುಗಿಡಬೇಕು. ಬಿಂದಿಗೆಯ ಕುತ್ತಿಗೆ ಭೂಮಿಯ ಮೇಲೆ ಸುಮಾರು ಒಂದು ಅಡಿ ಮೇಲಿರುವಂತೆ ನೋಡಬೇಕು. ಬಿಂದಿಗೆಯನ್ನು ಒರೆಯಾಗಿ ಹುಗಿಯುವುದರಿಂದ ಒಳಗಿನ ನೀರನ್ನು ತೆಗೆಯಲು ಮತ್ತು ಬಿಂದಿಗೆಯನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತದೆ. ನೀರನ್ನು ತಂಪಾಗಿಸಲು ಮಡಕೆಯನ್ನು ಸಹ ಉಪಯೋಗಿಸಬಹುದು.
೪ ಆ. ಗಾಜಿನ ಬಾಟಲಿ, ಕೊಡ ಅಥವಾ ಪೀಪಾಯಿಯ ಸುತ್ತಲೂ ಒದ್ದೆ ಬಟ್ಟೆಯನ್ನು ಗಟ್ಟಿಯಾಗಿ ಸುತ್ತಿಡುವುದು : ಗಾಜಿನ ಬಾಟಲಿ, ಕೊಡ ಅಥವಾ ಪೀಪಾಯಿಯಲ್ಲಿ ನೀರನ್ನು ತುಂಬಿಸಿ ಅದರ ಸುತ್ತಲೂ ಒದ್ದೆ ಮಾಡಿದ ಬಟ್ಟೆಯನ್ನು ಗಟ್ಟಿಯಾಗಿ ಸುತ್ತಿಡಬೇಕು. ಹಾಗಾಗಿ ಸಾಮಾನ್ಯವಾಗಿ ೩-೪ ಗಂಟೆಯೊಳಗೆ ಒಳಗಿರುವ ನೀರು ತಂಪಾಗುತ್ತದೆ. ಬಟ್ಟೆಯು ಒಣಗಿದ ನಂತರ ಪುನಃ ಅದನ್ನು ಒದ್ದೆ ಮಾಡಬೇಕು. ನಮಗೆ ಎಷ್ಟು ಹೊತ್ತು ನೀರು ತಂಪಾಗಿರಬೇಕಾಗಿದೆಯೋ, ಅಷ್ಟು ಹೊತ್ತು ಬಟ್ಟೆಯನ್ನು ಮಧ್ಯಮಧ್ಯದಲ್ಲಿ ಒದ್ದೆ ಮಾಡುತ್ತಿರಬೇಕು.
– ಪೂಜ್ಯ ವೈದ್ಯ ವಿನಯ ಭಾವೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೨.೨೦೧೯)
೫. ನೀರನ್ನು ಉಪಯೋಗಿಸುವ ಬಗ್ಗೆ ಕೆಲವು ಸೂಚನೆಗಳು
೫ ಅ. ನೀರಿನ ಮಿತವ್ಯಯ
೧. ಮುಖ ತೊಳೆಯಲು, ಸ್ನಾನಕ್ಕಾಗಿ, ಬಟ್ಟೆ ಒಗೆಯಲು, ವಾಹನಗಳನ್ನು ತೊಳೆಯಲು ಮುಂತಾದ ಕೆಲಸಗಳಿಗಾಗಿ ಅಗತ್ಯವಿರುವಷ್ಟೇ ನೀರನ್ನು ಉಪಯೋಗಿಸುವ ರೂಢಿಯನ್ನು ಹಿರಿಯರು ಕಿರಿಯರೆಲ್ಲ ಮಾಡಿಕೊಳ್ಳಬೇಕು.
೨. ಮನೆಯ ಸುತ್ತಲಿನ ತೋಟಕ್ಕಾಗಿ ಹನಿ ನೀರಾವರಿ ಅಥವಾ ಸಿಂಪಡಿಸುವ ನೀರಾವರಿ ಪದ್ಧತಿಯನ್ನು ಅವಲಂಬಿಸಬೇಕು.
೩. ಬೇಸಿಗೆಯ ದಿನಗಳಲ್ಲಿ ತೋಟದಲ್ಲಿರುವ ಗಿಡಗಳ ಬೇರಿನ ಸುತ್ತಲೂ ಎಲೆಗಳ ಅಥವಾ ಹುಲ್ಲಿನ ಹೊದಿಕೆಯನ್ನು ಮಾಡಬೇಕು. ಅದು ಗಿಡಗಳಿಗೆ ಹಾಕಿದ ನೀರು ಬೇಗನೇ ಆವಿಯಾಗುವುದನ್ನು ತಡೆಗಟ್ಟುತ್ತದೆ. ಅಲ್ಲದೇ ನೀರಿನ ಉಳಿತಾಯವಾಗುತ್ತದೆ.
೫ ಆ. ಮಳೆಯ ನೀರನ್ನು ಪೀಪಾಯಿಯಲ್ಲಿ ಶೇಖರಿಸಿಡುವುದು
ಮಳೆಗಾಲದಲ್ಲಿ ಮನೆಯ ಛಾವಣಿಯಿಂದ ಬೀಳುವ ನೀರಿನ ಅಡಿಯಲ್ಲಿ ಪೀಪಾಯಿಗಳನ್ನಿಟ್ಟು ಅದರಲ್ಲಿ ನೀರನ್ನು ಶೇಖರಿಸಿಡಬೇಕು. ಈ ನೀರನ್ನು ಮನೆಯ ಅನೇಕ ಕೆಲಸಗಳಿಗಾಗಿ ಉಪಯೋಗಿಸಬಹುದು.
೭. ವಿದ್ಯುತ್ ಪೂರೈಕೆ ಸ್ಥಗಿತಗೊಂಡರೆ ಪರ್ಯಾಯ ವಿಚಾರವನ್ನು ಮಾಡಬೇಕು !
ಆಪತ್ಕಾಲದಲ್ಲಿ ವಿದ್ಯುತ್ ನಿಗಮದಿಂದಾಗುವ ವಿದ್ಯುತ್ ಪೂರೈಕೆ ಸ್ಥಗಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬಿರುಗಾಳಿಯಂತಹ ಪ್ರಸಂಗಗಳಲ್ಲಿ ಅನೇಕ ದಿನಗಳ ಕಾಲ ವಿದ್ಯುತ್ ಪೂರೈಕೆಯು ಸ್ಥಗಿತಗೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ವಿದ್ಯುತ್ ಅಭಾವದಿಂದ ದೀಪಗಳು, ಪಂಖಗಳು ಮುಂತಾದ ವಿದ್ಯುತ್ ಉಪಕರಣಗಳು ಬಂದಾಗಿ ಅಡಚಣೆಯಾಗಬಾರದು ಹಾಗೂ ನಮ್ಮ ಕೆಲಸಗಳು ಸಹ ನಿಲ್ಲಬಾರದು, ಇದಕ್ಕಾಗಿ ಮುಂದೆ ನೀಡಿರುವ ಪರ್ಯಾಯಗಳ ಬಗ್ಗೆ ಈಗಲೇ ವಿಚಾರ ಮಾಡಬೇಕು. ಪರ್ಯಾಯವನ್ನು ಆರಿಸುವಾಗ, ಯಾವುದರಿಂದ ನಮಗೆ ಹೆಚ್ಚುಕಾಲ ವಿದ್ಯುತ್ ಲಭ್ಯವಾಗಬಲ್ಲದು, ಎಂಬ ಪರ್ಯಾಯದ ಆಯ್ಕೆಯು ಹಿತಕರವಾಗಿದೆ. ಈ ಪರ್ಯಾಯಗಳಿಂದ ನಮಗೆ ಆಪತ್ಕಾಲದ ನಂತರವೂ ಅಂದರೆ ಶಾಶ್ವತವಾಗಿ ಲಾಭವಾಗಲಿದೆ.
ಅ. ಮನೆಯ ಛಾವಣಿಯ ಮೇಲೆ ಹಾಕಲಾಗುವ ಸೌರ ಊರ್ಜೆ ವ್ಯವಸ್ಥೆ (ರೂಫ್ ಟಾಪ್ ಸೊಲಾರ್ ಪ್ಯಾನಲ್ ಮೂಲಕ) ವಿದ್ಯುತ್ ಉತ್ಪಾದಿಸುವುದು : ಸ್ಥಳೀಯ ಮಾರಾಟಗಾರರು ಸೌರ ಊರ್ಜೆಯಿಂದ (ಸೋಲಾರ್ ಎನರ್ಜಿ) ವಿದ್ಯುತ್ ಉತ್ಪದಿಸುವ ಯಂತ್ರಣೆಯನ್ನು ಅಳವಡಿಸಿಕೊಡುತ್ತಾರೆ. ಇದಕ್ಕಾಗಿ ಯಾವುದೇ ಅಡಚಣೆಯಿಲ್ಲದೇ ಸೂರ್ಯ ಪ್ರಕಾಶ ಬೀಳುವಂತಹ ಕಡಿಮೆಪಕ್ಷ ೧೦೦ ಚದರಡಿಯಷ್ಟು ಜಾಗವು ಮನೆಯ ಛಾವಣಿಯ ಮೇಲಿರುವುದು ಅವಶ್ಯವಾಗಿದೆ. ಈ ಜಾಗದಲ್ಲಿ ಸೊಲಾರ್ ಪಾನಲ್ಸ್ ಅಳವಡಿಸಿದ್ದಲ್ಲಿ ದಿನವಿಡೀ ವಿದ್ಯುತ್ ಉತ್ಪಾದನೆಯಾಗುತ್ತಿರುತ್ತದೆ ಮತ್ತು ಅದರ ಮೂಲಕ ವಿದ್ಯುತ್ ಘಟಕವು ಉದ್ದೀಪನವಾಗುತ್ತದೆ. ವಿದ್ಯುತ್ ನಿಗಮದಿಂದ ವಿದ್ಯುತ್ ಪೂರೈಕೆ ಸ್ಥಗಿತವಾದಲ್ಲಿ ಈ ಸೌರ ಊರಜೆಯಿಂದ ಮನೆಯಲ್ಲಿರುವ ದೀಪಗಳು, ಪಂಖಗಳು, ಶೀತಕ (ಫ್ರಿಜ್) ಮುಂತಾದ ಉಪಕರಣಗಳನ್ನು ಉಪಯೋಗಿಸಬಹುದು. ಯೋಗ್ಯ ಕ್ಷಮತೆಯ ಸೌರ ಇಂಧನದ ವ್ಯವಸ್ಥೆ ಇದ್ದಲ್ಲಿ, ಎಲ್‌ಇಡಿ ಬಲ್ಬ್, ವಿದ್ಯುತ್ ಕೋಶದ ದೀಪ (ಚಾರ್ಜೆಬಲ್ ಟಾರ್ಚ್), ವಿದ್ಯುತ್ ಘಟಕದ ಸಹಾಯದಿಂದ (ಬ್ಯಾಟರಿಯಿಂದ) ನಡೆಯುವ ಸೈಕಲ್, ವಿದ್ಯುತ್ನಿಂದ ನಡೆಯುವ ಚತುಷ್ಚಕ್ರ ವಾಹನ ಮುಂತಾದವುಗಳನ್ನು ಬಳಸಬಹುದು.
ಹಂಚಿನ ಅಥವಾ ಸಿಮೆಂಟ್ ಸ್ಲಾಬಿನ ಮನೆ ಇರುವವರು ಸೌರ ಇಂಧನ ಸೌಕರ್ಯವನ್ನು ಮಾಡಿಸಿಕೊಳ್ಳಬಹುದು. ವಸತಿ ಸಮುಚ್ಛಯ (ಫ್ಲಾಟ್) ದಲ್ಲಿರುವವರು ಒಟ್ಟಾಗಿ ಕಟ್ಟಡದ ಮೇಲಿನ ಛಾವಣಿ (ಟೆರೆಸ್)ಯಲ್ಲಿ ಇಂತಹ ಸೌಕರ್ಯ ಮಾಡಿಸಿಕೊಳ್ಳಬಹುದು.
ಸೌರ ಊರ್ಜೆಯ ಮೂಲಕ ಆವಶ್ಯಕತೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದ್ದಲ್ಲಿ, ಅದನ್ನು ‘ವಿದ್ಯುತ್ ವಿತರಣಾ ಕಂಪನಿಯು ಖರೀದಿಸುತ್ತದೆ. ಸೌರ ಇಂಧನದಿಂದ ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸರಕಾರವು ಅನುದಾನ (ಸಬ್ಸಿಡಿ)ಯನ್ನು ಸಹ ನೀಡುತ್ತದೆ. (ಈ ಸೌಲಭ್ಯವನ್ನು ಪಡೆಯುವ ಮೊದಲು ವಿದ್ಯುತ್ ಪೂರೈಕೆ ಇಲ್ಲದಿದ್ದಾಗ ಸೌರ ವಿದ್ಯುತ ಉತ್ಪಾದನೆಯಾಗುತ್ತದೆಯೇ ಎಂದು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.)
ಸೌರ ಇಂಧನ ವ್ಯವಸ್ಥೆಗಾಗಿ ಅನುದಾನ ಮತ್ತು ರಿಯಾಯಿತಿ ಸಿಗುವ ಯೋಜನೆಯು ಮನೆ, ಅಂಗಡಿಗಳಿಗೆ ಲಭ್ಯವಿದೆ. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಸಂಬಂಧಿತ ಮಾರಾಟಗಾರರಿಂದ ಪಡೆದುಕೊಳ್ಳಬಹುದು.
ಆ. ಜನರೇಟರ ಉಪಯೋಗಿಸುವುದು : ಈ ಜನರೆಟರ್‌ಗಳು ಪೆಟ್ರೋಲ್, ಡಿಸೆಲ್ ಅಥವಾ ಗ್ಯಾಸ್‌ನಿಂದ ನಡೆಯುತ್ತವೆ. ಅವುಗಳ ಕ್ಷಮತೆಯು ಕೆಲವು ಕಿಲೋ ವಾಟ್ (೧ ಕಿಲೋ ವಾಟ್ = ೧೦೦೦ ವಾಟ್) ವಿದ್ಯುತ್ ಉತ್ಪಾದನೆಯಷ್ಟು ಇರುತ್ತದೆ.
ಇ. ಕೈಯ ಸಹಾಯದಿಂದ ನಡೆಸಲಾಗುವ ಜನರೆಟರ್ (ಹ್ಯಾಂಡ್ ಜನರೆಟರ್) ಉಪಯೋಗಿಸುವುದು : ಸಂಚಾರಿ ದೂರವಾಣಿಯ ಚಾರ್ಜರ್ ಅನ್ನು ಉದ್ದೀಪನಗೊಳಿಸುವಷ್ಟು ಕ್ಷಮತೆ ಇದರಲ್ಲಿರುತ್ತದೆ.
ಈ. ವಿದ್ಯುತ್ ಪೂರೈಕೆ ಅಖಂಡವಾಗಿರಲು ಉಪಯೋಗಿಸುವ ವ್ಯವಸ್ಥೆ (ಯುಪಿಎಸ್) (ಅನ್‌ಇಂಟರ‍್ಪಟೆಡ್ ಪವರ್ ಸಪ್ಲೈ) ಅಳವಡಿಸುವುದು :
ವಿದ್ಯುತ್ ನಿಗಮದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡರೆ ಈ ಸೌಕರ್ಯವು ತಕ್ಷಣ ಕಾರ್ಯಾನ್ವಿತವಾಗುತ್ತದೆ. ಮತ್ತು ಈ ಸೌಕರ್ಯದಲ್ಲಿರುವ ವಿದ್ಯುತ್‌ಘಟಗಳ ಮೂಲಕ ವಿದ್ಯುತ್ ಅಬಾಧಿತವಾಗಿ ಪೂರೈಕೆಯಾಗುತ್ತದೆ. ವಿದ್ಯುತ್ ನಿಗಮದಿಂದಾಗುವ ವಿದ್ಯುತ್ ಪೂರೈಕೆ ಪುನಃ ಪ್ರಾರಂಭವಾದಾಗ ಈ ವಿದ್ಯುತ್ ಘಟವು ವಿದ್ಯುತ್ ಪೂರೈಸುವ ಕಾರ್ಯವನ್ನು ನಿಲ್ಲಿಸಿ ಮಧ್ಯದ ಕಾಲದಲ್ಲಿ ಖಾಲಿಯಾದ ವಿದ್ಯುತ್‌ಅನ್ನು ರಿಚಾರ್ಜ ಮಾಡುವ ಕಾರ್ಯವನ್ನು ಮಾಡುತ್ತದೆ. ವಿದ್ಯುತ್ ನಿಗಮದಿಂದಾಗುವ ವಿದ್ಯುತ್ ಪೂರೈಕೆಯು ಕೆಲವು ಗಂಟೆಗಳಿಗಾಗಿ ಸ್ಥಗಿತವಾದಾಗ ಈ ವ್ಯವಸ್ಥೆಯು ಉಪಯುಕ್ತವಾಗುತ್ತದೆ.
ಊ. ಗಾಳಿಗಿರಣಿ ಅಳವಡಿಸಿ ಅದರಿಂದ ಉತ್ಪಾದಿಸುವ ವಿದ್ಯುತ್ ಅನ್ನು ವಿದ್ಯುತ್ಕೋಶ (ಬ್ಯಾಟರಿ)ದಲ್ಲಿ ಸಂಗ್ರಹಿಸಿಡಬಹುದು. ಆ ವಿದ್ಯುತ್‌ಅನ್ನು ಆವಶ್ಯಕತೆಗನುಸಾರ ಉಪಯೋಗಿಸಬಹುದು. ದೊಡ್ಡ ಪ್ರಮಾಣದ ವಿದ್ಯುತ್ ಉತ್ಪಾದನೆಗಾಗಿ ಗುಡ್ಡಗಳಲ್ಲಿ ಅಥವಾ ತಪ್ಪಲು ಪ್ರದೇಶಗಳಲ್ಲಿ ಗಾಳಿಯ ಗಾಳಿಗಿರಣಿಯನ್ನು ಅಳವಡಿಸಲಾಗುತ್ತದೆ. ಸೌರ ಊರ್ಜೆಯ ತುಲನೆಯಲ್ಲಿ ಗಾಳಿಗಿರಣಿಯಿಂದ ವಿದ್ಯುತ್ ಉತ್ಪಾದಿಸಲು ಬಹಳ ಮಿತಿಯುಂಟಾಗುತ್ತದೆ. ಹಾಗಾಗಿ ಗಾಳಿಗಿರಣಿಯಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆ ಪರಿಣಿತರಿಂದ ಸಲಹೆ ಪಡೆಯಬೇಕು.
ಉ. ವಿದ್ಯುತ್‌ನಿಂದ ಉದ್ದೀಪನವಾಗುವ ಎಲ್‌ಈಡಿ ಬಲ್ಬ್, ವಿದ್ಯುತ್ಕೋಶ (ಬ್ಯಾಟರಿ) ಇತ್ಯಾದಿ ಉಪಕರಣಗಳನ್ನು ಉಪಯೋಗಿಸುವುದು :
ಸಂಪೂರ್ಣ ಉದ್ದೀಪನವಾದ ಒಂದು ಎಲ್‌ಈಡಿ ಬಲ್ಬ್, ವಿದ್ಯುತ್ಕೋಶ (ಬ್ಯಾಟರಿ), ದೀಪ(ಬಲ್ಬ್) ದಂಡದೀಪ (ಟ್ಯೂಬ್ ಲೈಟ್) ಮುಂತಾದ ವಸ್ತುಗಳು ಕೆಲವು ಗಂಟೆಗಳ ಕಾಲ ಪ್ರಕಾಶ ನೀಡಬಲ್ಲವು.
ಊ. ಇತರ ಕೆಲವು ಪಾರಂಪಾರಿಕ ಪರ್ಯಾಯಗಳು :
ಮೇಲೆ ಉಲ್ಲೇಖಿಸಿದ ಪರ್ಯಾಯಗಳಿಗೆ ಮಿತಿಯಿದೆ. ಉದಾ. ಮೋಡಭರಿತ ವಾತಾವರಣವಿದ್ದಲ್ಲಿ, ಸೌರ ಊರ್ಜೆಯಿಂದ ವಿದ್ಯುತ್ ಉತ್ಪಾದಿಸಲು ಅಡಚಣೆ ಬರುತ್ತದೆ. ಆಪತ್ಕಾಲದಲ್ಲಿ ಜನರೆಟರ್‌ಗೆ ಬೇಕಾಗುವ ಇಂಧನದ ಕೊರತೆ ಉಂಟಾಗಬಲ್ಲದು ಮತ್ತು ಜನರೆಟರ್ ಕೆಲಸ ಮಾಡಲಾರದು. ಇಂತಹ ಸಮಯದಲ್ಲಿ ಚಿಮಿಣಿ (ಚಿಕ್ಕ ಆಕಾರದ ಗೂಡಿನಂತಹ ದೀಪ) ಕಂದೀಲು, ದಿವಟಿಗೆ (ಚಿಕ್ಕ ಪಂಜು) ಮುಂತಾದ ಪಾರಂಪಾರಿಕ ಪರ್ಯಾಯ (ವಸ್ತು)ಗಳು ನಮ್ಮ ಬಳಿಯಿರಬೇಕು. ಇದರಿಂದ ರಾತ್ರಿಯ ಸಮಯದಲ್ಲಿ ಸ್ವಲ್ಪವಾದರೂ ಪ್ರಕಾಶ ಸಿಗುವುದು.
© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.