ಗಾಯತ್ರಿ ದೇವಿಯ ಆಧ್ಯಾತ್ಮಿಕ ಮಹತ್ವ ಮತ್ತು ಗುಣವೈಶಿಷ್ಟ್ಯಗಳು !

ನಮಗೆಲ್ಲರಿಗೂ ‘ಗಾಯತ್ರಿ ಮಂತ್ರ’ ತಿಳಿದಿದೆ. ಅನೇಕರು ಅದರ ನಿತ್ಯ ಜಪ ಮಾಡುತ್ತಾರೆ ಕೂಡ. ಗಾಯತ್ರಿ ಜಯಂತಿಯ ನಿಮಿತ್ತ ಗಾಯತ್ರಿ ದೇವಿಯ ಚರಣಗಳಲ್ಲಿ ವಂದಿಸಿ, ಗಾಯತ್ರಿ ದೇವಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

೧. ಉತ್ಪತ್ತಿಯ ಕಥೆ

ಶ್ರೀ ಗಣೇಶನಿಗೆ ಸಹಾಯವಾಗಲೆಂದು ಬ್ರಹ್ಮದೇವರು ಗಾಯತ್ರಿ ದೇವಿಯನ್ನು ನಿರ್ಮಿಸಿರುವುದು : ಸತ್ಯಯುಗದ ಆರಂಭವಾಗುವ ಮೊದಲು, ಬ್ರಹ್ಮದೇವರು ಎಲ್ಲ ದೇವತೆಗಳ ನಿರ್ಮಿತಿಯನ್ನು ಮಾಡಿದರು. ಸತ್ಯಯುಗ ಪ್ರಾರಂಭವಾದ ಮೇಲೆ ಆ ದೇವತೆಗಳ ತೇಜವು ಮನುಷ್ಯರಿಗೆ ದೊರೆಯುತ್ತಿರಲಿಲ್ಲ, ಏಕೆಂದರೆ ದೇವತೆಗಳು ಹೆಚ್ಚು ನಿರ್ಗುಣ ಸ್ತರದಲ್ಲಿರುತ್ತಿದ್ದರು. ದೇವತೆಗಳಲ್ಲಿ ಇರುವ ನಿರ್ಗುಣ ತತ್ತ್ವವನ್ನು ಸಗುಣ ತತ್ತ್ವಕ್ಕೆ ಪರಿವರ್ತಿಸಲು ಶ್ರೀ ಗಣೇಶನಿಗೆ ಒಂದು ಶಕ್ತಿಯ ಅವಶ್ಯಕತೆ ಇತ್ತು. ಆದುದರಿಂದ ಬ್ರಹ್ಮದೇವರು ಸರಸ್ವತಿ ಮತ್ತು ಸವಿತೃ ದೇವತೆಗಳ ಸಂಯುಕ್ತ ತತ್ತ್ವಗಳಿಂದ ಗಾಯತ್ರಿ ದೇವಿಯನ್ನು ನಿರ್ಮಿಸಿದರು. (- ಸೂಕ್ಷ್ಮದಲ್ಲಿ ದೊರೆತ ಜ್ಞಾನ)

೨. ಗಾಯತ್ರಿ ಶಬ್ದದ ಅರ್ಥ

ಗಾಯತ್ರಿ ಶಬ್ದದ ವ್ಯುತ್ಪತ್ತಿಯು –
ಗಾಯಂತಂ ತ್ರಾಯಾತೇ | ಅಂದರೆ ಹಾಡುವವರ (ಗಾಯನ – ಮಂತ್ರ ಹೇಳುವವರ) ರಕ್ಷಣೆ ಮಾಡುವವಳು, ಮತ್ತು
ಗಾಯಂತಂ ತ್ರಾಯಂತಂ ಇತಿ | – ಸತತವಾಗಿ ಗಾಯನ (ಮಂತ್ರ ಹೇಳುವುದರಿಂದ) ಮಾಡುವುದರಿಂದ ಶರೀರವೇ ಹಾಡುವಂತೆಯಾಗುತ್ತದೆಯೋ (ಅಂದರೆ ಶರೀರದಲ್ಲಿ ಆ ಮಂತ್ರದ ಸೂಕ್ಷ್ಮ ಸ್ಪಂದನಗಳು ನಿರ್ಮಾಣಗುತ್ತದೆಯೋ), ಮತ್ತು ಅದರಿಂದ ರಕ್ಷಿಸುವ ಶಕ್ತಿಯು ಉತ್ಪನ್ನವಾಗುತ್ತದೆಯೋ – ಅದುವೇ ಗಾಯತ್ರಿ ಎಂದರ್ಥ.

೩. ಇತರ ಹೆಸರುಗಳು

ಅಥರ್ವವೇದದಲ್ಲಿ ಗಾಯತ್ರಿಯನ್ನು ‘ವೇದಮಾತಾ’ ಎಂದು ಸಂಬೋಧಿಸಲಾಗಿದೆ. ಗಾಯತ್ರಿ ದೇವಿಯ ಉತ್ಪತ್ತಿಯು ಸರಸ್ವತಿಯಿಂದ ಆಗಿರುವುದರಿಂದ ಕೆಲವು ಸ್ಥಳಗಳಲ್ಲಿ ಅವಳನ್ನು ಸಾವಿತ್ರಿ ಎಂದು ಕೂಡ ಸಂಬೋಧಿಸಲಾಗಿದೆ. ಗಣೇಶ ಗಾಯತ್ರಿ, ಸೂರ್ಯ ಗಾಯತ್ರಿ, ವಿಷ್ಣು ಗಾಯತ್ರಿ ಮುಂತಾದ ಗಾಯತ್ರಿಮಂತ್ರಗಳಿಂದ ಕೂಡ ಗಾಯತ್ರಿಯನ್ನು ಸಂಬೋಧಿಸಲಾಗುತ್ತದೆ.

೪. ನಿವಾಸ

ಬ್ರಹ್ಮಲೋಕದಿಂದ ಸೂರ್ಯಲೋಕದತ್ತ ಕ್ರಮಿಸುವ ಮಾರ್ಗದಲ್ಲಿ, ಬ್ರಹ್ಮಲೋಕದ ಒಂದು ಉಪಲೋಕವಿದ್ದು ಅದಕ್ಕೆ ‘ಗಾಯತ್ರಿಲೋಕ’ವೆಂದು ಹೆಸರಿದೆ. ಆ ಲೋಕದಲ್ಲಿ ನಿರಂತರವಾಗಿ ವೇದಮಂತ್ರಗಳ ಉದ್ಘೋಷ ನಡೆಯುತ್ತಿರುತ್ತದೆ, ಅಲ್ಲದೆ ಸಂಪೂರ್ಣ ಲೋಕದಲ್ಲಿ ಬಂಗಾರದ ಬಣ್ಣದ ಪ್ರಕಾಶವು ಎಲ್ಲೆಡೆ ಹಬ್ಬಿರುತ್ತದೆ. ಆ ಲೋಕದಲ್ಲಿ ಇರುಳೆಂಬುವುದಿಲ್ಲ. ಗಾಯತ್ರಿಲೋಕದ ವಾತಾವರಣವು ಆಹ್ಲಾದಕರವಾಗಿದ್ದು, ಉತ್ಸಾಹವನ್ನು ಹೆಚ್ಚಿಸುತ್ತದೆ. ಗಾಯತ್ರಿ ಉಪಾಸಕರು ಮರಣ ಹೊಂದಿದೆ ಮೇಲೆ ಅವರಿಗೆ ಗಾಯತ್ರಿಲೋಕದಲ್ಲಿ ಸ್ಥಾನ ಲಭಿಸುತ್ತದೆ. ಕೆಲವು ಸೂರ್ಯ ಉಪಾಸಕರಿಗೂ ಈ ಲೋಕದಲ್ಲಿ ಸ್ಥಾನ ಲಭಿಸುತ್ತದೆ.

೫. ತ್ರಿಗುಣಗಳ ಪ್ರಮಾಣ (ಶೇಕಡಾವಾರು)

ಸತ್ವ – 70
ರಜ – 20
ತಮ – 10

೬. ಕ್ಷಮತೆಯ ಪ್ರಮಾಣ (ಶೇಕಡಾವಾರು)

ಉತ್ಪತ್ತಿ – 60
ಸ್ಥಿತಿ – 30
ಲಯ – 10

೭. ಶಕ್ತಿ

ಪ್ರಕಟ ಶಕ್ತಿಯ ಪ್ರಮಾಣ – ಶೇ. 70

ಶಕ್ತಿಯ ಪ್ರಕಾರ
ತಾರಕ ಶಕ್ತಿಯ ಪ್ರಮಾಣ – ಶೇ. 70
ಮಾರಕ ಶಕ್ತಿಯ ಪ್ರಮಾಣ – ಶೇ. 30

ಸಗುಣ ಶಕ್ತಿಯ ಪ್ರಮಾಣ – ಶೇ. 50
ನಿರ್ಗುಣ ಶಕ್ತಿಯ ಪ್ರಮಾಣ – ಶೇ. 50

೮. ಮೂರ್ತಿವಿಜ್ಞಾನ

ಗಾಯತ್ರಿದೇವಿಯನ್ನು ಎರಡು ರೀತಿಯಲ್ಲಿ ಚಿತ್ರಿಸಲಾಗುತ್ತದೆ.

೮ಅ. ಮೊದಲನೇ ರೂಪ

ಧನಸಂಪತ್ತು ಮತ್ತು ಐಶ್ವರ್ಯದ ಪ್ರತೀಕವಾಗಿರುವ ಕೆಂಪು ಕಮಲದ ಮೇಲೆ ವಿರಾಜಮಾನಳಾಗಿರುವ ರೂಪ ಮೊದಲನೆಯದು. ಈ ಪಂಚಮುಖಿ ಗಾಯತ್ರಿಯ (೫ ಮುಖಗಳಿರುವ) ಪ್ರತಿಯೊಂದು ಮುಖಕ್ಕೆ ಕ್ರಮವಾಗಿ ‘ಮುಕ್ತಾ, ವಿದ್ರುಮಾ, ಹೇಮಾ, ನೀಲಾ ಮತ್ತು ಧವಲಾ’ ಎಂಬ ಹೆಸರುಗಳಿವೆ. ಅವಳು ಹತ್ತು ಕಣ್ಣುಗಳಿಂದ ಹತ್ತು ದಿಕ್ಕುಗಳನ್ನು ಅವಲೋಕಿಸುತ್ತಾಳೆ. ಅವಳ ಎಂಟು ಕೈಗಳಲ್ಲಿ ಕ್ರಮವಾಗಿ ಶಂಖ, ಸುದರ್ಶನಚಕ್ರ, ಪರಶು, ಪಾಶ, ಜಪಮಾಲೆ, ಗದೆ, ಕಮಲ ಮತ್ತು ಪಾಯಸಪಾತ್ರ (ದೇವಿಗೆ ನೈವೇದ್ಯವೆಂದು ಪಾಯಸ ಅರ್ಪಿಸುವ ಪಾತ್ರೆ) ಇವೆ. ಒಂಬತ್ತನೆಯ ಕೈ ಆಶೀರ್ವಾದ ಮುದ್ರೆಯಲ್ಲಿಯೂ, ಹತ್ತನೆಯ ಕೈ ಅಭಯಮುದ್ರೆಯಲ್ಲಿಯೂ ಇದೆ.

೮ಆ. ಎರಡನೇ ರೂಪ

ಹಂಸಾರೂಢ ಗಾಯತ್ರಿ ದೇವಿ – ದ್ವಿಭುಜ (ಎರಡು ಕೈಗಳಿರುವ) ಗಾಯತ್ರಿ ದೇವಿಯ ಒಂದು ಕೈಯಲ್ಲಿ ಜ್ಞಾನದ ಪ್ರತೀಕವಾಗಿರುವ ವೇದಗಳಿದ್ದು, ಇನ್ನೊಂದು ಕೈಯು ಆಶೀರ್ವಾದ ಮುದ್ರೆಯಲ್ಲಿದೆ.

೯. ಕಾರ್ಯ ಮತ್ತು ವೈಶಿಷ್ಟ್ಯಗಳು

ಆದಿಶಕ್ತಿಸ್ವರೂಪ – ಸರಸ್ವತಿ, ಮಹಾಲಕ್ಷ್ಮಿ ಮತ್ತು ಪಾರ್ವತಿಯ ರೂಪವೆಂದರೆ ಗಾಯತ್ರಿದೇವಿ

ಬ್ರಹ್ಮದೇವರ ಕಾರ್ಯನಿರತ ಶಕ್ತಿ – ಗಾಯತ್ರಿದೇವಿಯ ಶಕ್ತಿಯಿಲ್ಲದೆ ಬ್ರಹಮದೇವರು ನಿಷ್ಕ್ರಿಯರಾಗುತ್ತಾರೆ.

ಆದಿತ್ಯ ಮತ್ತು ಸೂರ್ಯನಿಗೆ ತೇಜಸ್ಸು ನೀಡುವವಳು – ಸವಿತೃವಿನಿಂದ ಗಾಯತ್ರಿಗೆ, ಮತ್ತು ಗಾಯತ್ರಿಯಿಂದ ೧೨ ಆದಿತ್ಯರಿಗೆ ತೇಜಸ್ಸು ಪ್ರಾಪ್ತವಾಗುತ್ತದೆ. ಸ್ಥೂಲದಲ್ಲಿ ಕಾಣಿಸುವ ಸೂರ್ಯನಿಗೂ ತೇಜಸ್ಸು ಪ್ರಧಾನಿಸುವ ಶಕ್ತಿಯೆಂದರೆ ಈ ಗಾಯತ್ರಿ. ಸೂರ್ಯನಿಗಿಂತ ೧೬ ಪಟ್ಟು ಹೆಚ್ಚು ಶಕ್ತಿ ಗಾಯತ್ರಿಯಲ್ಲಿದೆ.

ದೇವತೆಗಳ ಅಪ್ರಕಟ ಅವಸ್ಥೆಯಲ್ಲಿರುವ ಶಕ್ತಿ ಮತ್ತು ಚೈತನ್ಯ ಪ್ರಕಟವಾಗುವುದು – ಗಾಯತ್ರೀಮಂತ್ರಗಳ ಉಚ್ಚಾರದಿಂದ ವಿವಿಧ ದೇವತೆಗಳ ಅಪ್ರಕಟ ಶಕ್ತಿ ಮತ್ತು ಚೈತನ್ಯವು ಪ್ರಕಟವಾಗಿ ಕಾರ್ಯನಿರತವಾಗುತ್ತದೆ. ಆದುದರಿಂದ ಉಪಾಸಕನಿಗೆ ಆ ದೇವತೆಯ ಕೃಪೆಯನ್ನು ಸಂಪಾದಿಸಲು ಸುಲಭವಾಗುತ್ತದೆ.

೧೦. ಉಪಾಸನೆಯ ಶಾಸ್ತ್ರ

ಅ. ದೇವಿಯ ಪ್ರತಿಮೆಯನ್ನು ಪೂಜಿಸುವುದು
ಆ. ಗಾಯತ್ರಿಮಂತ್ರಗಳನ್ನು ಜಪಿಸುವುದು : ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ವೇದಗಳನ್ನು ಪಠಿಸಿದಷ್ಟು ಫಲವು ಲಭಿಸುತ್ತದೆ.
ಇ. ಗಾಯತ್ರಿಯಾಗ : ಸವಿತೃ ಮತ್ತು ಗಾಯತ್ರಿ ದೇವತೆಗಳನ್ನು ಪ್ರಸನ್ನಗೊಳಿಸಲು ಕ್ರಮವಾಗಿ ಸವಿತೃಕಾಠ್ಯಯಾಗ ಮತ್ತು ಗಾಯತ್ರಿಯಾಗಗಳನ್ನು ಮಾಡುತ್ತಾರೆ.

೧೧. ಗಾಯತ್ರಿಮಂತ್ರ ಜಪಿಸುವುದರಿಂದ ಆಗುವ ಲಾಭ

೧೧ ಅ. ಉಚ್ಚಾರ ಸ್ಪಷ್ಟವಾಗುತ್ತದೆ : ಗಾಯತ್ರಿಮಂತ್ರವನ್ನು ಜಪಿಸುವುದರಿಂದ ಉಚ್ಚಾರವು ಸ್ಪಷ್ಟವಾಗುತ್ತದೆ. ವೇದಮಂತ್ರಗಳನ್ನು ಸ್ಪಷ್ಟ ಶುದ್ಧ ಉಚ್ಚಾರದಿಂದ ಪಠಿಸಬೇಕಾಗುತ್ತದೆ. ಆದುದರಿಂದ ಉಪನಯನದ ಸಮಯದಲ್ಲಿ ವಟುವಿಗೆ ಗಾಯತ್ರಿಮಂತ್ರದ ದೀಕ್ಷೆಯನ್ನು ನೀಡುತ್ತಾರೆ.

೧೧ ಆ. ಪಿಂಡದ ಶುದ್ಧಿಯಾಗುತ್ತದೆ : ಗಾಯತ್ರಿಮಂತ್ರ ಜಪಿಸುವುದರಿಂದ ಪಿಂಡದ ಶುದ್ಧಿಯಾಗುತ್ತದೆ. ವೇದಮಂತ್ರಗಳನ್ನು ಪಠಿಸುವುದರಿಂದ ನಿರ್ಮಾಣವಾಗುವ ದೈವೀ ಶಕ್ತಿಯನ್ನು ಗ್ರಹಿಸುವ ಕ್ಷಮತೆಯು ಆ ಜೀವಕ್ಕೆ ಲಭಿಸುತ್ತದೆ.

೧೧ ಇ. ಅಂತರ್ಬಾಹ್ಯ ಶುದ್ಧಿಯಾಗುತ್ತದೆ : ಗಾಯತ್ರಿಮಂತ್ರವನ್ನು ಪಠಿಸುವುದರಿಂದ ಪ್ರಾಣಶಕ್ತಿ ವಹನದಲ್ಲಿ ಬರುವ ಅಡಚಣೆಗಳು ದೂರವಾಗಿ ದೇಹದ ರಕ್ತನಾಳಗಳ, ೭೨೦೦೦ ನಾಡಿಗಳ ಮತ್ತು ಮಾಂಸಖಂಡಗಳ ಅಂತರ್ಬಾಹ್ಯ ಶುದ್ಧಿಯಾಗುತ್ತದೆ.

೧೧ ಈ. ವೇದಾಧ್ಯಯನಕ್ಕೆ ಸಹಾಯವಾಗುತ್ತದೆ

೧೧ ಉ.ಕರ್ಮಕಾಂಡದಂತೆ ಉಪಾಸನೆಯನ್ನು ಮಾಡಲು ಸಹಾಯವಾಗುತ್ತದೆ : ಗಾಯತ್ರಿಮಂತ್ರದ ಉಚ್ಚಾರದಿಂದ ದೇವತೆಗಳ ತತ್ತ್ವ ಮತ್ತು ತೇಜ ಜಾಗೃತವಾಗಿ ಕಾರ್ಯನಿರತವಾಗುತ್ತವೆ. ಆದುದರಿಂದ ಕರ್ಮಕಾಂಡದಂತೆ ಉಪಾಸನೆಯನ್ನು ಮಾಡುವಾಗ ಅಥವಾ ಧಾರ್ಮಿಕ ವಿಧಿಗಳನ್ನು, ಯಜ್ಞ ಯಾಗಗಳನ್ನು ಮಾಡುವಾಗ ಗಾಯತ್ರಿ ಮಂತ್ರ ಅಥವಾ ಆಯಾ ದೇವತೆಯ ಗಾಯತ್ರಿ ಮಂತ್ರಗಳನ್ನು ಪಠಿಸುತ್ತಾರೆ.

೧೧ ಊ. ಗಾಯತ್ರಿಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಆಗುವ ಐಹಿಕ ಲಾಭಗಳು : ಪ್ರತಿದಿವಸ ನಿಯಮಿತವಾಗಿ ೧೦೦೦ ಬಾರಿ ಗಾಯತ್ರಿ ಮಂತ್ರವನ್ನು ಪಠಿಸುವ ವ್ಯಕ್ತಿಯು ಪಾಪಮುಕ್ತನಾಗುತ್ತಾನೆ, ಅವನಿಗೆ ಧನಪ್ರಾಪ್ತಿ ಮತ್ತು ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

೧೧ ಋ. ಗಾಯತ್ರಿಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಆಗುವ ಪಾರಮಾರ್ಥಿಕ ಲಾಭಗಳು : ಆಯುಷ್ಯಪೂರ್ತಿ ಗಾಯತ್ರಿಮಂತ್ರವನ್ನು ಭಾವಪೂರ್ಣವಾಗಿ, ನಿಯಮಿತವಾಗಿ ಮತ್ತು ಶ್ರದ್ಧೆಯಿಂದ ಪುರಶ್ಚರಣ ಮಾಡುವುದರಿಂದ ಗಾಯತ್ರಿದೇವಿಯು ಪ್ರಸನ್ನಳಾಗಿ ಆ ವ್ಯಕ್ತಿಗೆ ಮುಕ್ತಿ ಮತ್ತು ಮೋಕ್ಷವನ್ನೂ ಪ್ರದಾನಿಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

1 thought on “ಗಾಯತ್ರಿ ದೇವಿಯ ಆಧ್ಯಾತ್ಮಿಕ ಮಹತ್ವ ಮತ್ತು ಗುಣವೈಶಿಷ್ಟ್ಯಗಳು !”

  1. ಸನಾತನ ಪಂಚಾಂಗ ಕೇಬಲ ಪಂಚಾಂಗವಲ್ಲ ಇದು ಮಾನವ ಸದ್ಗುಣಗಳನ್ನು ನಿರ್ಮಿಸುವ ಒಂದು ಗ್ರಂಥವೇ ಎನ್ನಬಹುದು.
    ಓಂ ಶಕ್ತಿ ಮಾತೆ

    Reply

Leave a Comment