ಆನೆಗುಡ್ಡೆ ಶ್ರೀ ವಿನಾಯಕ

ಇತಿಹಾಸ

ದ್ವಾಪರ ಯುಗದ ಸಮಯವದು. ಕರ್ನಾಟಕ ಸಮುದ್ರ ತೀರದಲ್ಲಿರುವ ಕಾಡಿನೊಳಗೆ ನಾಗಚಲಂ ಎಂಬ ಒಂದು ಗುಡ್ಡದ ಸಮೀಪ ಗೌತಮ ಮಹರ್ಷಿಯ ಆಶ್ರಮವಿತ್ತು. ಅವರು ಯಾಗವನ್ನು ಮಾಡಿ ಲೋಕದಲ್ಲಿ ನ್ಯಾಯಧರ್ಮಗಳನ್ನು ನೆಲೆನಿಲ್ಲಿಸಿಕೊಂಡಿದ್ದರು. ಅವರೊಂದಿಗೆ ಅಗಸ್ತ್ಯ ಋಷಿಗಳೂ, ಇನ್ನು ಹಲವಾರು ಋಷಿಗಳು ಅಲ್ಲಿ ವಾಸವಾಗಿದ್ದು ತಪಸ್ಸು ಮಾಡಿಕೊಂಡಿದ್ದರು.

ವರವನ್ನು ಪಡೆದ ಕುಂಭಾ ಎಂಬ ರಾಕ್ಷಸ

ಕುಂಭಾ ಎನ್ನುವ ಒಬ್ಬ ರಾಕ್ಷಸ, ಶಿವಭಕ್ತನು ಕೂಡ. ಕಠಿಣ ತಪಸ್ಸುಗಳನ್ನಾಚರಿಸಿ ಕೈಲಾಸನಾಥನಿಂದ ಹಲವು ವರಗಳನ್ನು ಪಡೆದುಕೊಂಡನು. ಆ ರಾಕ್ಷಸನು ಧಾರ್ಮಿಕವಾಗಿ ನಡೆಸುವ ಯಾಗಗಳನ್ನೆಲ್ಲಾ ಕೆಡಿಸಿ ಅವರಿಗೆ ತುಂಬಾ ತೊಂದರೆ ಕೊಡುತ್ತಿದ್ದನು. ಋಷಿಗಳಿಂದ ಅವನನ್ನು ಏನೂ ಮಾಡಲು ಆಗಲಿಲ್ಲ. ಆ ರಾಕ್ಷಸನನ್ನು ಅಳಿಸುವ ಯಾವ ಉಪಾಯವೂ ಹೊಳೆಯಲಿಲ್ಲ. ಆ ಸಮಯದಲ್ಲಿ ವನವಾಸದಲ್ಲಿದ್ದ ಪಂಚಪಾಂಡವರು ಗೌತಮರ ಆಶ್ರಮಕ್ಕೆ ಬಂದರು. ಗೌತಮರು ಅತಿಥಿಗಳಿಗೆ ಆಹಾರ ಮಾತ್ರವಲ್ಲ ಆಶೀರ್ವಾದವನ್ನೂ ನೀಡಿದರು. ನಂತರ ಗೌತಮರು ಕುಂಭಾ ಕೊಡುವ ತೊಂದರೆಗಳು ಕುರಿತು ಧರ್ಮರಾಜನ ಹತ್ತಿರ ಹೇಳಿದರು. ಅವನ ಆರ್ಭಟವನ್ನು ನಿಲ್ಲಿಸಬೇಕೆಂದು ಕೇಳಿಕೊಂಡರು.

ರಾಕ್ಷಸರೊಂದಿಗೆ ಯುದ್ಧ ಮಾಡುವುದೆಂದರೆ ಭೀಮನಿಗೆ ತುಂಬ ಪ್ರಿಯವಾದ ವಿಷಯ, ಅದ್ದರಿಂದ ಧರ್ಮರಾಯನು ಭೀಮನನ್ನು ಕರೆದು ಆ ರಾಕ್ಷಸನನ್ನು ವಧಿಸಿ ಬಾ ಎಂದು ಆಜ್ಞೆ ಇಟ್ಟ ಕ್ಷಣ ಕುಂಭಾ ಇರುವ ಜಾಗಕ್ಕೆ ಹೋಗಿ ಆ ರಾಕ್ಷಸನನ್ನು ಯುದ್ಧಕ್ಕೆ ಆಹ್ವಾನಿಸಿದನು. ವೀರಾವೇಷದಿಂದ ಕುಂಭಾ ಯುದ್ಧಕ್ಕೆ ಬಂದ. ಕುಂಭನಿಗೂ ಭೀಮನಿಗೂ ಮಹಾಭಯಂಕರ ಯುದ್ಧ ನಡೆಯಿತು. ಆದರೆ ಹಲವಾರು ವರಗಳನ್ನು ಪಡೆದು ಶಕ್ತಿಶಾಲಿಯಾದ ಕುಂಭಾನಿಗೆ ದಿನಪೂರ್ತಿ ಯುದ್ಧ ಮಾಡಿಯೂ ಗೆಲ್ಲಲಾಗಲಿಲ್ಲ.

ಭೀಮನು ವಿಘ್ನನಿವಾರಕ ವಿನಾಯಕನಿಂದ ಖಡ್ಗವನ್ನು ಪಡೆಯುವುದು

ಆ ಸಮಯದಲ್ಲಿ ಆಕಾಶದಿಂದ ಒಂದು ಅಶರೀರವಾಣಿ ಭೀಮನಿಗೆ ಕೇಳಿಸಿತು. ‘ವಿಜಯವನ್ನು ಕೊಡುವ ವಿನಾಯಕನನ್ನು ಪೂಜಿಸಿದರೆ ಅವನು ಪ್ರತ್ಯಕ್ಷವಾಗಿ ಒಂದು ಖಡ್ಗ ಕೊಡುವನು, ಅದರಿಂದಲೇ ಆ ರಾಕ್ಷಸನನ್ನು ಕೊಲ್ಲಲು ಸಾಧ್ಯ’ವೆಂದು ಆ ವಾಣಿ ತಿಳಿಸಿತು. ಭೀಮ ಗಣಗಳ ನಾಯಕ ಗಣಪತಿಯನ್ನು ಪೂಜಿಸಿದ. ವಿಧವಿಧವಾದ ಹೂಗಳಿಂದ ಗಜಾನನನನ್ನು ಆರಾಧಿಸಿದ. ಪಕ್ಕದಲ್ಲಿರುವ ಪರ್ವತದ ಮೇಲೆ ಗಣಪತಿಯು ಆನೆ ರೂಪದಲ್ಲಿ ಪ್ರತ್ಯಕ್ಷನಾಗಿ ಕರುಣೆ ತುಂಬಿದ ಕಣ್ಣುಗಳಿಂದ ಭೀಮನನ್ನು ತನ್ನ ಬಳಿ ಕರೆದು ಕೈಯಲ್ಲಿ ಒಂದು ಖಡ್ಗವನ್ನು ಇಟ್ಟು ಆಶಿರ್ವದಿಸಿದ. ಆ ಖಡ್ಗವನ್ನು ಕೈಯಲ್ಲಿ ಹಿಡಿದುಕೊಂಡು ಕುಂಭಾನೊಡನೆ ಯುದ್ಧಕ್ಕೆ ಹೋದ ಭೀಮ. ಈಗಲೂ ಇಬ್ಬರಲ್ಲಿ ಭಯಂಕರವಾದ ಯುದ್ಧ ನಡೆಯಿತು. ಆದರೆ ಭೀಮನ ಶೌರ್ಯದ ಮುಂದೆ ಆ ಕುಂಭಾರಾಕ್ಷಸನೂ ಅವನೊಂದಿಗೆ ಇದ್ದವರೂ ಸೋತು ಒಬ್ಬಬ್ಬರಾಗಿ ಹತರಾದರು.

ಗಣಪತಿ ಕೊಟ್ಟ ಖಡ್ಗದಿಂದ ಕುಂಭಾನನ್ನು ವಧಿಸಿದ ಜಾಗಕ್ಕೆ ಕುಂಭಾಸಿ ಎಂದೂ, ಗಣಪತಿ ಪ್ರತ್ಯಕ್ಷವಾದ ಆನೆಪರ್ವತ ಎಂದು ಹೇಳಲ್ಪಡುವ ಆ ಸ್ಥಳ ಆನೆಗುಡ್ಡ ಎಂದು ಹೆಸರುವಾಸಿಯಾಗಿದೆ.

ದೇಗುಲದ ನಿರ್ಮಿತಿ

ಕಲಿಯುಗದಲ್ಲಿ ವಿಶ್ವೇಶ್ವರ ಉಪಾಧ್ಯಾಯ ಎಂಬ ಒಬ್ಬ ಭಕ್ತರ ಕನಸಿನಲ್ಲಿ ಆನೆಗುಡ್ಡದಲ್ಲಿರುವಂತಹ ಗಣಪತಿ ಬಂಡೆ ರೂಪದಲ್ಲಿ ಕಾಣಿಸಿಕೊಂಡರು. ಆ ಭಕ್ತರು ಪರ್ವತವನ್ನು ಹತ್ತಿ ತನಗೆ ಕನಸಿನಲ್ಲಿ ಬಂದ ಬಂಡೆಯನ್ನು ಹುಡುಕಿದರು. ಗುಡ್ಡದ ಮೇಲೆ ಕನಸಿನಲ್ಲಿ ಬಂದ ಆ ಬಂಡೆಯನ್ನು, ಅದರ ಸಮೀಪದಲ್ಲಿರುವ ಒಂದು ಮರ ಅದರ ಮೇಲೆ ಹೂವನ್ನು ಉದುರಿಸಿ ಆರಾಧನೆ ಮಾಡುವುದನ್ನು ಕಂಡು ಆಶ್ಚರ್ಯಪಟ್ಟರು. ಆ ಕ್ಷಣವೇ ಅಲ್ಲಿ ಒಂದು ಗುಡಿಸಲನ್ನು ಕಟ್ಟಿ ಅದುವೇ ದೇವರ ಮೂಲಸ್ಥಾನವಾಗಿ ಶ್ರದ್ಧೆಯನ್ನಿಟ್ಟು ಪೂಜೆಗಳನ್ನು ಪ್ರಾರಂಭಿಸಿದರು. ನಂತರ ಅಲ್ಲಿ ಒಂದು ಸುಂದವಾದ ದೇವಸ್ಥಾನವನ್ನು ಸ್ಥಾಪಿಸಿದರು. (ಬೆಳಗ್ಗೆ ಪೂಜೆಯ ಸಮಯದಲ್ಲೂ ಮಹಾಪೂಜೆಯ ಸಮಯದಲ್ಲೂ ಈ ಮೂಲಬಿಂಬದ ದರ್ಶನ ಮಾಡಬಹುದು.)

ಕುಂಭಾಸಿ ಬಸ್ಸು ನಿಲ್ದಾಣದ ಸ್ವಲ್ಪ ದೂರದಲ್ಲಿ ಹರಿಲಿಂಗೇಶ್ವರ ಆಲಯ ಇದೆ. ಗೌತಮ ಋಷಿಗಳ ಆಶ್ರಮವಿದ್ದ ಜಾಗದಲ್ಲಿ ಗಣಪತಿ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳು ಇವೆ. ಈ ಮೆಟ್ಟಿಲು ಹತ್ತಿ ನಡೆದರೆ ಬೆನ್ನು ನೋವಿದ್ದವರಿಗೆ ಆ ನೋವು ಗುಣವಾಗುತ್ತದೆ ಎಂಬ ನಂಬಿಕೆಯಿದೆ.

ಗಣಪತಿಯ ದರ್ಶನದ ಭಾಗ್ಯ

ಬೆಳಗ್ಗೆ ಪೂಜೆಯ ವೇಳೆಗೆ ಹಿಂದಿನ ದಿನದ ಅಲಂಕಾರಗಳನ್ನು ಸರಿಸಿ ಕವಚಗಳನ್ನೂ ತೆಗೆಯಲಾಗುತ್ತದೆ. ನಂತರ ಕೆಳಗೆ ಹರಿಹರ ಆಲಯದ ಬಾವಿಯಿಂದ ನೀರು ತಂದು ಅಭಿಷೇಕ ಮಾಡಲಾಗುತ್ತದೆ. ಮೂಲಬಿಂಬಕ್ಕೆ ಅಭಿಷೇಕ ಎಂಬುವುದು ಒಂದು ಅದ್ಭುತವಾದ ಅನುಭವ. ಅಭಿಷೇಕದ ನಂತರ ಕವಚಗಳನ್ನು ಪುನಃ ಹೊಂದಿಸಲಾಗುವುದು. ಅಭಿಷೇಕದ ಮೊದಲು ಕುಳಿತಂತೆ ಇರುವ ರೂಪವೂ ಅಭಿಷೇಕದ ನಂತರ ನಿಂತಿರುವ ನೆಲೆಯಲ್ಲಿ ದೇವರನ್ನೂ ಕಾಣಬಹುದು. ನಿಂತ ರೂಪದಲ್ಲಿ ಗಣಪತಿ ಹಗಲು ಹನ್ನೊಂದುವರೆ ಗಂಟೆಯವರೆಗೆ ದರ್ಶನ ತರುವರು. ನಂತರ ಪುನಃ ಅಭಿಷೇಕ ಆರಂಭವಾಗುವುದು.

ಹಬ್ಬಗಳು ಮತ್ತು ಉತ್ಸವಗಳು

ಶ್ರಾವಣ ಮಾಸ : ಗಣಪತಿಯ ಅಥರ್ವಶೀರ್ಶವನ್ನು ೧೦೦೮ ಸಾರಿ ೪೦ಜನ ಪುರೋಹಿತರು ಕಳಸ ಪೂಜೆಯೊಂದಿಗೆ ಪಠಿಸಿ ಶ್ರೀ ವಿನಾಯಕನಿಗೆ ಕಳಸಾಭಿಷೇಕ ಹಾಗು ಬ್ರಹ್ಮನ ಆರಾಧನೆ ಮಾಡುತ್ತಾರೆ.

ಬ್ರಾದಪದ ಮಾಸ : ಬಾದ್ರಪದ ಶುಕ್ಲ ಚೌತಿಯ ದಿನ ಗಣಹೋಮ, ೧೦೦೮ ತೆಂಗಿನಕಾಯಿ ಹೋಮವನ್ನು ಮಾಡಿ ಪಂಚಭಕ್ಷ ನೈವೇದ್ಯ, ಅನ್ನಸಂತರ್ಪಣೆಯನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ.

ಡೋಲೋತ್ಸವ : ಬೆಳ್ಳಿ ತೊಟ್ಟಿಲಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ಪೂಜಿಸಿ ನಂತರ ಪಲ್ಲಕ್ಕಿ ಉತ್ಸವ ಮಾಡಲಾಗುತ್ತದೆ.

ಪುರ ಮೆರವಣಿಗೆ : ದೇವರ ಪಲ್ಲಕ್ಕಿ ಉತ್ಸವವನ್ನು ಕೀಲು ಕುದುರೆ, ತಟ್ಟೆರಾಯ ಮೆರವಣಿಗೆಯೊಂದಿಗೆ ನಗರದ ಸುತ್ತಲು ಸುತ್ತಿ ಬಳ್ಳಿಕಟ್ಟೆಯ ಹತ್ತಿರ ಬರುತ್ತಾರೆ.

ಉಪನಿಷತ್ ಕಳಸಾಭಿಷೇಕ : ಗಣಪತಿ ಉಪನಿಷತ್ ಸ್ತೋತ್ರಗಳನ್ನು ೨೧ ಸಾರಿ ಪಠಿಸಿ, ಕಳಶೋಧಕವನ್ನು ಅಭಿಷೇಕಕ್ಕೆ ಉಪಯೋಗಿಸುತ್ತಾರೆ. ರಥೋತ್ಸವದ ದಿನ ೧೦೦೮ ತೆಂಗಿನಕಾಯಿಗಳನ್ನು ಗಣಹೋಮಕ್ಕೆ ಉಪಯೋಗಿಸುತ್ತಾರೆ. ಸಾಯಂಕಾಲ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ರಥೋತ್ಸವವನ್ನು ಮಾಡುತ್ತಾರೆ. ನಂತರ ಸಾಯಂಕಾಲ ೭ ಗಂಟೆಗೆ ರಥೋತ್ಸವವವು ದೇವಸ್ಥಾನಕ್ಕೆ ಹಿಂತಿರುಗುತ್ತದೆ.

ವಸ್ತ್ರಾರಾಧನೆ : ವಸ್ತ್ರಾರಾಧಾನೆಯನ್ನು ವೈಶಾಖ ಹುಣ್ಣಿಮೆಯ ದಿನದಂದು ಆಚರಿಸುತ್ತಾರೆ. ಅಂದು ಹಸಿರು ಬೇಳೆ, ಪಂಚಕಜ್ಜಾಯ, ಅಡುಕೆ, ಹಣ್ಣು ಪಾನಕವನ್ನ ದೇವರಿಗೆ ನೈವೇದ್ಯ ಮಾಡಿ ಪ್ರಸಾದ ವಿತರಣೆ ನಡೆಯುತ್ತದೆ.

ಗುಡೋದಕ : ಬೆಲ್ಲದ ಪಾನಕವನ್ನು ದೇವರಿಗೆ ಅರ್ಪಿಸುವುದರ ಮೂಲಕ ಗುಡೋದಕ ಸೇವೆ ಮಾಡುತ್ತಾರೆ.

ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮೇಶನ್ ಸಿಸ್ಟಮ್

1 thought on “ಆನೆಗುಡ್ಡೆ ಶ್ರೀ ವಿನಾಯಕ”

  1. 🙏🏻ಓಂ ಗಂ ಗಣಪತಯೇ ನಮಃ🙏🏻
    🙏🏻🙏🏻ಓಂ ನಮಃ ಶಿವಾಯ🙏🏻🙏🏻
    ಈ ಕ್ಷೇತ್ರದ ಪ್ರಧಾನ ದೇವತೆ ಶಿವನೇ ಆಗಿದ್ದಾನೆ.
    ಕುಂಭಕಾಶಿ(ಕುಂಭಾಶಿ)

    Reply

Leave a Comment