ವ್ರತಾಚರಣೆ

ಇಷ್ಟಾರ್ಥ ಸಿದ್ಧಿಗಾಗಿ ನಾವು ಅನೇಕ ವ್ರತಗಳನ್ನಾಚರಿಸುತ್ತೇವೆ. ಸಾಮಾನ್ಯವಾಗಿ ವ್ರತಗಳನ್ನು ಆಚರಿಸುವಾಗ ಪಾಲಿಸಬೇಕಾದ ಕೆಲವು ವಿಷಯಗಳನ್ನು ಇಲ್ಲಿ ನೀಡಿದ್ದೇವೆ.

ವ್ರತದ ಪೂರ್ವಸಿದ್ಧತೆ

ವ್ರತನಿಯಮಗಳ ಅಧ್ಯಯನ : ಒಮ್ಮೆ ವ್ರತ ಮಾಡಬೇಕೆಂದು ನಿಶ್ಚಯಿಸಿದ ಮೇಲೆ ವ್ರತವನ್ನು ಪ್ರಾರಂಭಿಸುವ ಮೊದಲು, ವ್ರತ ಕಾಲದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು.

ಶುಭದಿನವನ್ನು ನೋಡುವುದು : ಸಾಮಾನ್ಯವಾಗಿ ಎಲ್ಲ ವ್ರತಗಳನ್ನೂ ದಿನ ಶುದ್ಧಿ ಮತ್ತು ಗ್ರಹಗಳ ವಿಶಿಷ್ಟ ಸ್ಥಿತಿಯನ್ನು ನೋಡಿಯೇ ಪ್ರಾರಂಭಿಸಬೇಕಾಗುತ್ತದೆ. ಅಧಿಕ ಮಾಸದಲ್ಲಿ ಯಾವ ವ್ರತವನ್ನೂ ಮಾಡಬಾರದು, ಯಾವ ವ್ರತದ ಪರಿಹಾರವನ್ನೂ ಮಾಡಬಾರದು. ಅಶೌಚವಿರುವಾಗ ಮತ್ತು ವಾರ, ನಕ್ಷತ್ರ, ಯೋಗ ಇವು ಪ್ರತಿಕೂಲವಾಗಿರುವಾಗ ವ್ರತಾರಂಭ ಮಾಡಬಾರದು.

ವ್ರತದ ಬ್ರಾಹ್ಮಣನು ಹೇಗಿರಬೇಕು ? : ಬ್ರಾಹ್ಮಣನನ್ನು ವ್ರತಾಚರಣೆಯಲ್ಲಿನ ಒಂದು ಪ್ರಮುಖ ಸಾಧನವೆಂದು ಪರಿಗಣಿಸಲಾಗಿದೆ. ಈ ಬ್ರಾಹ್ಮಣನು ಶಾಂತ, ಸುಶೀಲ, ಸಮಾಧಾನಿ, ಸತ್ಯವಂತ, ವೇದಗಳ ಪರಿಪಾಲಕ, ಕೋಪಿಸಿಕೊಳ್ಳದವನೂ, ಭೂತದಯೆಯುಳ್ಳವನೂ ಆಗಿರಬೇಕು ಅಲ್ಲದೇ ಸಬ್ರಹ್ಮ ಕರ್ಮ, ಜಪತಪವನ್ನು ಮಾಡುವವನೂ ಮತ್ತು ನಿತ್ಯವೂ ಊಟಕ್ಕೆ ಮೊದಲು ದೇವತೆಗಳಿಗೆ ಹವಿಸ್ಸು (ಯಜ್ಞದಲ್ಲಿ ಅಗ್ನಿಗೆ ಆಹುತಿ) ಕೊಡುವವನಾಗಿರಬೇಕು.

ವ್ರತಾರಂಭದ ಹಿಂದಿನ ದಿನ : ಶೌಚಸ್ನಾನಾದಿ ನಿತ್ಯಕರ್ಮಗಳಾದ ನಂತರ ಮರುದಿನದ ವ್ರತದ ಸಿದ್ಧತೆ ಮಾಡಬೇಕು. ಹಗಲು ಹೊತ್ತು ಒಂದು ಬಾರಿ ಊಟ ಮಾಡಿ ರಾತ್ರಿ ಉತ್ಸಾಹದಿಂದ ನಿದ್ರಾಧೀನರಾಗಬೇಕು.

ವ್ರತವಿಧಾನ

ವ್ರತಾರಂಭ : ವ್ರತದ ದಿನದಂದು ಸೂರ್ಯೋದಯಕ್ಕೂ ಎರಡು ಘಟಿಕೆಗಳಷ್ಟು ಮುಂಚೆ ಎದ್ದು ಪ್ರಾತಃವಿಧಿ ಮತ್ತು ಸ್ನಾನಾದಿಗಳನ್ನು ಮಾಡಬೇಕು. ಬೆಳಗ್ಗೆ ಆಹಾರವನ್ನು ಸೇವಿಸದೆ ಸೂರ್ಯದೇವನಿಗೂ, ವ್ರತದೇವನಿಗೂ ತನ್ನ ಮನೋಕಾಮನೆಯನ್ನು ತಿಳಿಸಿ ವ್ರತ ಮಾಡಲು ಉದ್ಯುಕ್ತನಾಗಬೇಕು.

ಪೂಜೆ ಮತ್ತು ಹೋಮ : ಗಣಪತಿ, ಮಾತೃದೇವತೆ ಮತ್ತು ಪಂಚ ದೇವತೆಗಳನ್ನು ಸ್ಮರಿಸಿ ಪೂಜಿಸಬೇಕು. ವ್ರತದೇವತೆಯ ಬಂಗಾರದ ಪ್ರತಿಮೆಯನ್ನು ಮಾಡಿ ಅದನ್ನು ಯಥಾಶಕ್ತಿ ಪಂಚೋಪಚಾರ, ದಶೋಪಚಾರ ಅಥವಾ ಷೋಡಶೋಪಚಾರಗಳಿಂದ ಪೂಜಿಸಬೇಕು. ಮಾಸ, ಪಕ್ಷ, ತಿಥಿ, ವಾರ ಮತ್ತು ನಕ್ಷತ್ರ ಇವುಗಳ ಪೈಕಿ ಯಾವುದರ ವ್ರತವಿದೆಯೋ ಅದು ಅದರ ಅಧಿದೇವತೆಯಾಗಿರುತ್ತದೆ. ಉದಾ.ಪಾಡ್ಯ-ಅಗ್ನಿ, ದ್ವಿತೀಯಾ-ಬ್ರಹ್ಮ, ತೃತೀಯಾ-ಗೌರಿ ಇತ್ಯಾದಿ; ಅಶ್ವಿನಿ – ಅಶ್ವಿನಿ ಕುಮಾರರು, ಭರಣಿ- ಯಮ, ಕೃತ್ತಿಕಾ-ಅಗ್ನಿ ಇತ್ಯಾದಿ; ಹಾಗೆಯೇ ವಾರಗಳಲ್ಲಿ ಸೂರ್ಯ, ಸೋಮ ಮತ್ತು ಭೌಮ ಇತ್ಯಾದಿ ದೇವತೆಗಳು ವ್ರತದ ಅಧಿದೇವತೆಗಳಾಗುತ್ತಾರೆ. ವ್ರತದ ಅಧಿದೇವತೆಯ ಸಂಕಲ್ಪಪೂರ್ವಕ ಪೂಜೆಯು ಕ್ರಮಬದ್ಧವಾಗಿದೆ.

ಪಾರಣೆ (ಉಪವಾಸ ಬಿಡುವುದು) : ವ್ರತವನ್ನು ಪೂರ್ಣಗೊಳಿಸಿದ ನಂತರ ಉಪವಾಸ ಬಿಟ್ಟು ಅನ್ನ ಗ್ರಹಿಸುವುದನ್ನು ಪಾರಣೆ ಎನ್ನುತ್ತಾರೆ. ಈ ಭೋಜನವು ರುಚಿಕರವಾಗಿರಬೇಕು. ಅದನ್ನು ದೇವರಿಗೆ ಮಹಾನೈವೇದ್ಯವೆಂದು ಸಮರ್ಪಿಸಿ ಸೇವಿಸಬೇಕು. ಉದಾಹರಣೆಗೆ ಏಕಾದಶಿಯಂದು ಉಪವಾಸ ಮಾಡಿದ ನಂತರ ದ್ವಾದಶಿಯಂದು ಪಾರಣೆ ಮಾಡಲೇಬೇಕು. ಅಂದು ಉಪವಾಸ ಮಾಡಿದರೆ ಪಾಪ ತಗಲುತ್ತದೆ.

ಉದ್ಯಾಪನೆ : ವ್ರತವು ಪೂರ್ಣವಾದ ನಂತರ ಅದರ ಸಮಾಪ್ತಿಗಾಗಿ ಜಪ, ಹೋಮ, ಪೂಜೆ ಇತ್ಯಾದಿ ಕಾರ್ಯಗಳನ್ನು ಮಾಡಲಾಗುತ್ತದೆ. ಇವುಗಳನ್ನೆಲ್ಲ ಸೇರಿಸಿ ಉದ್ಯಾಪನೆ ಎನ್ನುತ್ತಾರೆ. ವ್ರತವು(ಬಹುಶಃ) ಕಾಮ್ಯವಾಗಿ ಇರುತ್ತದೆ ಅಂದರೆ ಯಾವುದಾದರೊಂದು ಉದ್ದೇಶದಿಂದ ಅದನ್ನು ಆಚರಿಸಲಾಗುತ್ತದೆ. ಮನಸ್ಸಿನಂತೆ ವ್ರತಾಚರಣೆಯಾದರೆ ಅವನಿಗೆ ಅತ್ಯಂತ ಸಮಾಧಾನವು ಸಿಗುತ್ತದೆ. ಆ ಅತ್ಯಂತ ಸಮಾಧಾನದ ಪ್ರತೀಕವೇ ವ್ರತದ ಉದ್ಯಾಪನೆ, ಅಂದರೆ ವ್ರತದ ಸಮಾಪ್ತಿಯಾಗಿದೆ. ವ್ರತವು ನೆರವೇರಿದ ಮೇಲೆ ಯಥಾಶಕ್ತಿ ಉದ್ಯಾಪನೆ ಮಾಡಬೇಕು. ಉದ್ಯಾಪನೆ ಮಾಡದೆ ವ್ರತದ ಸಮಾಪ್ತಿಯಾಗುವುದಿಲ್ಲ. ವ್ರತದ ನಂತರ ಉದ್ಯಾಪನೆ ಮಾಡದಿದ್ದರೆ ವ್ರತವು ನಿಷ್ಫಲವಾಗುತ್ತದೆ. ಉದ್ಯಾಪನೆಯನ್ನು ಹೇಗೆ ಮಾಡಬೇಕು ಎನ್ನುವುದನ್ನು ಆಯಾಯ ವ್ರತದಲ್ಲಿ ಹೇಳಲಾಗಿರುತ್ತದೆ.

ವ್ರತ ಮಾಡುವವರಲ್ಲಿರಬೇಕಾದ ಗುಣಗಳು

ವರ್ಣಾಶ್ರಮಧರ್ಮದ ಆಚಾರ ವಿಚಾರಗಳು, ಸಾತ್ತ್ವಿಕತೆ, ಶ್ರದ್ಧೆ

ವ್ರತದಲ್ಲಿ ಸಂಕಲ್ಪ ಮಾಡುವುದರ ಮಹತ್ವವೇನು?

ಪ್ರಾರಂಭದಲ್ಲಿ ಉತ್ತರಕ್ಕೆ ಮುಖಮಾಡಿ ಕೈಯಲ್ಲಿ ನೀರು ತುಂಬಿದ ತಾಮ್ರದ ಪಾತ್ರೆಯನ್ನು ಹಿಡಿದುಕೊಂಡು ವ್ರತದ ಸಂಕಲ್ಪ ಮಾಡಬೇಕು. ಉತ್ತರ ದಿಕ್ಕು ಆಧ್ಯಾತ್ಮಿಕ ಉನ್ನತಿಗೆ ಪೋಷಕವಾದ ದಿಕ್ಕಾಗಿದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣ ದಿಕ್ಕಿನಲ್ಲಿ ಯಮಲೋಕವಿದೆ.

ವ್ರತದ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಸಂಕಲ್ಪ ಮಾಡಬೇಕು. ಇಲ್ಲದಿದ್ದರೆ ಆ ವ್ರತವು ನಿಷ್ಫಲವಾಗುತ್ತದೆ. ವ್ರತದ ಉದ್ದೇಶದ ಸಂಕಲ್ಪವನ್ನು ಉಚ್ಚರಿಸದೇ ಇದ್ದರೆ ಆ ವ್ರತಕ್ಕೆ ದೇವರು ತಾನೆ ಯಾವ ಫಲ ನೀಡಬಹುದು! ಉದಾಹರಣೆಗೆ ಹದಿನಾರು ಸೋಮವಾರಗಳ ವ್ರತವು ಮೋಕ್ಷಪ್ರಾಪ್ತಿ ಹಾಗೂ ಪುತ್ರಪ್ರಾಪ್ತಿ ಇವೆರಡನ್ನೂ ದೊರಕಿಸಿಕೊಡುವಂತಹದ್ದಾಗಿದೆ. ವ್ರತಕ್ಕೆ ಮೊದಲು ಸಂಕಲ್ಪ ಮಾಡದೆ ಇದ್ದರೆ ದೇವರು ಏನನ್ನು ಕೊಡಬೇಕು? ಸಂಕಲ್ಪ ಮಾಡಿದ ನಂತರ ವ್ರತಕರ್ತನ ಕೆಲಸವು ಪೂರ್ಣವಾಗುವುದಿಲ್ಲ; ವಿಧಿಯು ಪೂರ್ಣ ಆಗುವವರೆಗೆ ಅದು ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎನ್ನುವುದನ್ನು ನೋಡುವುದು ಅವನ ಕರ್ತವ್ಯವಾಗಿದೆ.

ಉನ್ನತರ ಆಜ್ಞೆಯ ಮೇರೆಗೆ ಸಂಕಲ್ಪವನ್ನು ಬಿಡುವುದು : ಒಮ್ಮೆ ಮೌನಿಸ್ವಾಮಿಯ ಆಜ್ಞೆಯಂತೆ ಶಿಷ್ಯರು, ಶಾಸ್ತ್ರಿಬುವಾ ಮುಂತಾದವರಿಗೆ ಸತತ ಧಾರೆಯನ್ನು ನಿಲ್ಲಿಸಲು ಹೇಳಿದರು. ಆದರೆ ಸಂಕಲ್ಪಪೂರ್ವಕವಾಗಿ ಪ್ರಾರಂಭಿಸಿದ ಸತತಧಾರೆಯನ್ನು ನಿಲ್ಲಿಸುವುದು ಹೇಗೆ? ಇದು ಸಾಧ್ಯವಿಲ್ಲ ಎಂದು ಅವರು ಅದನ್ನು ಹಾಗೆಯೇ ಮುಂದುವರಿಸಿದರು. ಆಗ ಮೌನಿಸ್ವಾಮಿಗಳು ಹೀಗೆ ಹೇಳಿದರು – ‘ದೇವರು ವ್ರತದ ಕಾರ್ಯಕ್ರಮದಲ್ಲಿ ಕುಳಿತಿರುವಾಗಲೂ ಜನರು ದೇವರಿಗೆ ಬೆರಳು ತೋರಿಸುತ್ತಿದ್ದಾರೆ, ಆದುದರಿಂದ ಮಳೆ ಬೀಳಲಾರದು’. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಉನ್ನತರ ಆಜ್ಞೆಯಾದರೆ ವ್ರತಕ್ಕೆ ಸಂಬಂಧಿಸಿದ ತನ್ನ ಸಂಕಲ್ಪವನ್ನು ಬಿಟ್ಟು ಬಿಡಬೇಕು. ಅದರಿಂದ ಪಾಪವು ತಗಲುವುದಿಲ್ಲ. ಮತ್ತೊಂದು ವಿಷಯವೇನೆಂದರೆ ಉನ್ನತರ ಸಂಕಲ್ಪದ ಮುಂದೆ ಸಾಮಾನ್ಯರ ಸಂಕಲ್ಪಕ್ಕೆ ಮಹತ್ವವಿರುವುದಿಲ್ಲ. ಉನ್ನತರ ವಚನವು ಯಾವಾಗಲೂ ಶಾಸ್ತ್ರಕ್ಕಿಂತಲೂ ಶ್ರೇಷ್ಠವಾಗಿರುತ್ತದೆ ಎನ್ನುವುದನ್ನು ಗಮನದಲ್ಲಿಡಬೇಕು.

Leave a Comment