ಸಾಗರದ ಮಾರಿಕಾಂಬೆ

ಪ್ರತಿ ಮೂರು ವರ್ಷಗಳಿಗೊಮ್ಮೆ ಸಾಗರ ಪಟ್ಟಣದ ಮಧ್ಯ ನೆಲೆಸಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಜಾತಿ, ಮತ, ಬಡವ ಬಲ್ಲಿದರೆಂಬ ಭೇಧವಿಲ್ಲದೆ ಊರಿಗೆ ಊರೇ ಸೇರಿ ಸಂಭ್ರಮಿಸುವ,  ಅತೀ ವಿಜೃಂಭಣೆಯಿಂದ, ವೈಭವಯುತವಾಗಿ ನಡೆಯುತ್ತದೆ.

ಸಾಗರ ಹಾಗೂ ಮಾರಿಕಾಂಬೆಯ ಹಿನ್ನೆಲೆ

ಶಿವಮೊಗ್ಗ ಜಿಲ್ಲೆಯ ಸಾಗರವು ಒಂದು ಐತಿಹಾಸಿಕ ಮಹತ್ವವಿರುವ ಪಟ್ಟಣವಾಗಿದೆ. ಇಲ್ಲಿನ ಸ್ಥಳ ಪುರಾಣ, ಇತಿಹಾಸಗಳ ಪ್ರಕಾರ ಶಿವಪ್ಪನಾಯಕ ಎಂಬ ಮೂಲ ಪುರುಷನು ಈ ಊರಿನ ಎಡ-ಬಲದಲ್ಲಿರುವ ಇಕ್ಕೇರಿ, ಕೆಳದಿಯಲ್ಲಿ ರಾಜ್ಯಾಡಳಿತ ಮಾಡಿದ್ದಾನೆ. ಸದಾಶಿವ ನಾಯಕನು ತನ್ನ ಆಡಳಿತದ ಅವಧಿಯಲ್ಲಿ ಸಾಗರದಲ್ಲಿ ಭವ್ಯವಾದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಗಣಪತಿ ಕೆರೆಯನ್ನು ನಿರ್ಮಿಸಿದನು.

ಅನಂತರ ಕೆಳದಿ, ಇಕ್ಕೇರಿ ಸಂಸ್ಥಾನದ ಅರಸರು ತಮ್ಮ ಯುದ್ಧ ಸಾಮಗ್ರಿಗಳನ್ನು ಈ ಊರಿನಲ್ಲಿ ಸಂಗ್ರಹಿಸಿ ಅವುಗಳ ರಕ್ಷಣೆಗಾಗಿ ಈ ದೇವತೆಯ ಪೂಜೆ ನಿರಂತರವಾಗಿ ನಡೆಯಲು ಜಾತ್ರೆ, ಉತ್ಸವಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟರಂತೆ. ಮಾರಿಕಾಂಬಾ ದೇವಿಯೇ ಕೆಳದಿ ಇಕ್ಕೇರಿ ಸಂಸ್ಥಾನದ ಗಡಿ ದೇವತೆ ಮತ್ತು ಶಕ್ತಿ ದೇವತೆಯೆಂದು ಊರಿನ ಹಿರಿಯರು ಅಭಿಪ್ರಾಯ ಪಡುತ್ತಾರೆ.

ಜಾತ್ರೆಯ ಹಿನ್ನೆಲೆ

ಬಹಳ ಕಾಲದ ಹಿಂದೆ ಸಾಗರ ಮತ್ತು ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮಾರಕ ರೋಗಗಳಾದ ಪ್ಲೇಗ್ ಮತ್ತು ಕಾಲರಾ ಜ್ವರಗಳಂತಹ ಸಾಂಕ್ರಾಮಿಕ ರೋಗಗಳು ಹರಡಿ ನೂರಾರು ಜನರನ್ನು ಬಲಿ ತೆಗೆದುಕೊಂಡಿದ್ದವು. ಆ ಸಮಯದಲ್ಲಿ ದೇವಿಗೆ ಪೂಜೆ ಉತ್ಸವ ಜಾತ್ರೆಯನ್ನು ಮಾಡುವುದಾಗಿ ಊರಿನ ಹಿರಿಯರು ಹರಕೆ ಹೇಳಿಕೊಂಡರು. ಆಗ ರೋಗವು ಸಂಪೂರ್ಣವಾಗಿ ನಿಂತು ಹೋಗಿ ಇವತ್ತಿನವರೆಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಈ ತಾಲೂಕಿನಲ್ಲಿ ಕಾಣಿಸಿಕೊಳ್ಳಲಿಲ್ಲ. ಮೊದಮೊದಲು ಸಣ್ಣದಾಗಿ ಪ್ರಾರಂಭವಾದ ಈ ಜಾತ್ರೆಯು ನಿರಂತರ ನಿತ್ಯ ಪೂಜೆ, ಶುಕ್ರವಾರ ಮತ್ತು ಮಂಗಳವಾರ ಕುಂಕುಮಾರ್ಚನೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸಿದೆ ಮತ್ತು ನವರಾತ್ರಿ ಸಮಯದಲ್ಲಿ ಕೂಡ ೯ ದಿನಗಳ ಕಾಲ ಉತ್ಸವವೂ ನಡೆಯುತ್ತದೆ.

ದೇವಸ್ಥಾನದ ವೈಶಿಷ್ಟ್ಯ

ಈಗಿನ ಮಾರಿಕಾಂಬಾ ಗಂಡನ ಮನೆ ದೇವಸ್ಥಾನವು ೨ ಸಿಂಹಗಳು ಎಳೆಯುವ ರಥದ ಮಾದರಿಯಲ್ಲಿ ಭವ್ಯವಾಗಿ ನಿರ್ಮಾಣವಾಗಿದೆ. ಇನ್ನೆಲ್ಲಿಯೂ ಕಾಣಸಿಗದಂತಹ ಈ ಅಪರೂಪದ ರಥದ ಮಾದರಿಯ ಗುಡಿಯ ಗೋಪುರವು ದೇವಿಯ ನಾನಾ ರೂಪ, ಮಹಾತ್ಮೆಯನ್ನು, ದೇವಿಯ ಮೂರ್ತಿ ರಚನೆಯ ಮೂಲಕ ಕಂಗೊಳಿಸುತ್ತದೆ. ಈ ಗುಡಿಯು ಪಟ್ಟಣದ ಮಧ್ಯದಲ್ಲಿ, ಅತಿ ಎತ್ತರದ ಗೋಪುರವನ್ನು ಹೊಂದಿರುವುದು ಒಂದು ವಿಶೇಷ ಆಕರ್ಷಣೆ.
– ಶ್ರೀ. ಟಿ.ಆರ್. ಸತ್ಯನಾರಾಯಣ (ಎಂ. ಎ.), ಸಾಗರ

Leave a Comment