ಇಂದು ಹಾಲಿನಲ್ಲಿ ಬಾಳೆಹಣ್ಣು, ಮಾವಿನಹಣ್ಣು, ಸೇಬಿನಂತಹ ಹಣ್ಣುಗಳನ್ನು ಬೆರೆಸಿ ‘ಮಿಲ್ಕ್ ಶೇಕ್’ ತಯಾರಿಸಿ ಸೇವಿಸುವ ಪದ್ಧತಿಯು ಜನಪ್ರಿಯವಾಗಿದೆ. ಇಂತಹ ಮಿಲ್ಕ್ ಶೇಕ್ ಬಗ್ಗೆ ಆಯುರ್ವೇದದಲ್ಲಿ ಏನು ಹೇಳಲಾಗಿದೆ, ಆಧ್ಯಾತ್ಮಿಕ ದೃಷ್ಟಿಯಿಂದ ಮಿಲ್ಕ್ ಶೇಕ್ ಸೇವಿಸುವ ಪರಿಣಾಮವೇನು ಎಂದು ತಿಳಿದುಕೊಳ್ಳಲು ಈ ಲೇಖನ ಓದಿ..
ಹಾಲು ಹಾಗೂ ಬಾಳೆಹಣ್ಣು, ಹಾಗೆಯೇ ಹಣ್ಣಿನಂತಹ ಇತರ ಘಟಕಗಳನ್ನು ಹಾಲಿನೊಂದಿಗೆ ಬೆರೆಸುವುದು ಅಯೋಗ್ಯವೆಂದು ಪರಿಗಣಿಸಲಾಗಿದೆ. ಅದರ ಕಾರಣಗಳು ಮುಂದಿನಂತಿವೆ…
೧. ಆಯುರ್ವೇದದ ದೃಷ್ಟಿಕೋನ
ಅ. ಹಾಲು ಹಾಗೂ ಬಾಳೆಹಣ್ಣನ್ನು ಒಟ್ಟಿಗೆ ಸೇವಿಸುವುದು ಅಥವಾ ಅದರ ಸೀಕರಣೆ ಮಾಡಿ ತಿನ್ನುವುದು ಆಯುರ್ವೇದ ದೃಷ್ಟಿಯಿಂದ ಅಯೋಗ್ಯವಾಗಿದೆ. ಇದನ್ನು ಆಯುರ್ವೇದದಲ್ಲಿ ವಿಷಮ ಅಂದರೆ ವಿರುದ್ಧ ಆಹಾರವೆಂದು ಕರೆಯಲಾಗಿದೆ.
ಆ. ಅದಕ್ಕೆ ಉಪಾಯವೆಂದು ಸೀಕರಣೆ ಮಾಡಲು ತೆಂಗಿನಕಾಯಿಯ ಹಾಲನ್ನು ಬಳಸಬಹುದು.
ಇ. ಉಪವಾಸ ಸಹಿತ ಇತರ ಸಮಯದಲ್ಲಿಯೂ ಬಾಳೆಹಣ್ಣನ್ನು ತಿಂದ ಮೇಲೆ ಹಾಲು ಕುಡಿಯಲು ೨ ತಾಸುಗಳ ಅಂತರವಿರಬೇಕು.
೨. ಆಧ್ಯಾತ್ಮಿಕ ದೃಷ್ಟಿಕೋನ
೨ ಅ. ಹಾಲಿನ ಸತ್ತ್ವಗುಣದ ಕಾರ್ಯಕ್ಕೆ ಅಡ್ಡಿಯಾಗುವುದು : ಹಾಲು ಹಾಗೂ ಬಾಳೆಹಣ್ಣನ್ನು ಸೇರಿಸಬಾರದು, ಅದೇ ರೀತಿ ಹಾಲಿನೊಳಗೆ ಇತರ ಹಣ್ಣುಗಳನ್ನು ಹಾಕುವುದೂ ಅಯೋಗ್ಯವಾಗಿದೆ; ಏಕೆಂದರೆ ಹಾಲು ನಮ್ಮ ಆಹಾರದಲ್ಲಿನ ಒಂದು ಸತ್ತ್ವಗುಣಸಂಪನ್ನ ಮೂಲಸ್ಥಾನವಾಗಿದೆ. ಹಾಲಿಗೆ ಬಾಳೆಹಣ್ಣು ಅಥವಾ ಹಣ್ಣುಗಳಂತಹ ಇತರ ಘಟಕಗಳನ್ನು ಹಾಕಿದರೆ ಅದರಲ್ಲಿನ ರಸಮಯವಾದ ಮಧುರೂಪೀ ರಜೋಗುಣದ ಸಂಪರ್ಕದಿಂದ ಹಾಲಿನ ಸತ್ತ್ವ ಗುಣದ ಕಾರ್ಯಕ್ಕೆ ಅಡ್ಡಿಯಾಗಬಹುದು.
೨ ಆ. ಪಾನೀಯದಲ್ಲಿ ತೊಂದರೆದಾಯಕ ಘರ್ಷಣಾತ್ಮಕ ಸ್ಪಂದನಗಳು ನಿರ್ಮಾಣವಾಗುವುದು : ಹಾಲಿನಲ್ಲಿನ ಸತ್ತ್ವ ಹಾಗೂ ಹಣ್ಣುಗಳಲ್ಲಿನ ರಜ-ಸತ್ತ್ವ ಅಥವಾ ಅದರಲ್ಲಿ ಪ್ರಧಾನವಾಗಿರುವ ರಜದ ಅಯೋಗ್ಯ ಮಿಶ್ರಣದಿಂದ ತೊಂದರೆದಾಯಕ ಘರ್ಷಣಾತ್ಮಕ ಸ್ಪಂದನಗಳ ಸಂಚಾರ ಪ್ರಾರಂಭವಾಗಿ ಆ ಪಾನೀಯವು ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ.
೨ ಇ. ಜಠರಾಗ್ನಿಯು ಪ್ರಜ್ವಲಿತವಾಗುವ ಪ್ರಕ್ರಿಯೆಯಲ್ಲಿ ಅಡಚಣೆಯುಂಟಾಗಿ ಜೀರ್ಣ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಜೀವಕೋಶಗಳ ಮೇಲೆ ಒತ್ತಡ ಬರುವುದು : ಇಂತಹ ಮಿಶ್ರಣದ ಸೇವನೆಯಿಂದ ದೇಹದ ಟೊಳ್ಳಿನಲ್ಲಿ ಜಠರಾಗ್ನಿಯು ಪ್ರಜ್ವಲಿತವಾಗುವ ಪ್ರಕ್ರಿಯೆಯಲ್ಲಿ ಅಡಚಣೆಗಳು ನಿರ್ಮಾಣವಾಗುವುದರಿಂದ ಪಚನಕ್ರಿಯೆಯಲ್ಲಿ ಪಾಲ್ಗೊಳ್ಳುವ ಜೀವಕೋಶಗಳ ಮೇಲೆ ಹೆಚ್ಚುವರಿ ಒತ್ತಡ ಬರಬಹುದು. ಈ ಪ್ರಕ್ರಿಯೆಯಿಂದ ಅನೇಕ ರೀತಿಗಳ ನಿರುಪಯುಕ್ತ ವಾಯುವು ನಿರ್ಮಾಣವಾಗುವುದರಿಂದ ಪಿಂಡದ ಟೊಳ್ಳು ಕಲುಷಿತಗೊಂಡು ಅನೇಕ ರೋಗಗಳು ಬರಬಹುದು.
೨ ಈ. ಉಪವಾಸದ ಸಮಯದಲ್ಲಿ ಹಾಲು ಹಾಗೂ ಬಾಳೆಹಣ್ಣಿನ ಪ್ರತ್ಯೇಕ ಸೇವನೆ ಆರೋಗ್ಯಕ್ಕೆ ಯೋಗ್ಯ : ಉಪವಾಸದ ಸಮಯದಲ್ಲಿ ಹಾಲು ಹಾಗೂ ಬಾಳೆಹಣ್ಣಿನ ಮಿಶ್ರಣವನ್ನು ಯೋಗ್ಯವೆಂದು ತಿಳಿಯದೇ ಅವುಗಳನ್ನು ಪ್ರತ್ಯೇಕವಾಗಿ ಸೇವಿಸುವುದಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ, ಈ ಅರ್ಥದಲ್ಲಿ ಉಪವಾಸಕ್ಕೆ ಇವೆರಡೂ ಒಳ್ಳೆಯದೆಂದು ಹೇಳಲಾಗಿದೆ.
೨ ಉ. ಆಹಾರಶಾಸ್ತ್ರದಲ್ಲಿ ಹಾಲಿನ ಸತ್ತ್ವಗುಣೀ ಕಾರ್ಯ : ಹಾಲಿನ ಸೇವನೆಯಿಂದ ಪಿಂಡದ ಟೊಳ್ಳಿನಲ್ಲಿನ ನಿರುಪಯುಕ್ತ ವಾಯುವಿನ ಶಮನವಾಗಿ ಅದು ಶುದ್ಧವಾಗುತ್ತದೆ.
೨ ಊ. ಫಲಾದಿ ಆಹಾರದ ಮಹತ್ವ : ಹಣ್ಣಿನಂತಹ ಆಹಾರವನ್ನು ಸೇವಿಸುವುದರಿಂದ ಜೀರ್ಣಪ್ರಕ್ರಿಯೆಗೆ ರಜೋಗುಣದ ಸಹಾಯದಿಂದ ವೇಗವು ದೊರಕಿ ಈ ಪ್ರಕ್ರಿಯೆಯು ಸುಲಭವಾಗಿ ಆಗುತ್ತದೆ. ಹಣ್ಣಿನಂತಹ ಆಹಾರದಲ್ಲಿರುವ ರಜೋಗುಣವು ದೇಹದ ಚೇತನವನ್ನು ಜಾಗೃತಗೊಳಿಸುತ್ತದೆ. ಚೇತನದ ಜಾಗೃತಿಯಿಂದ ಸತ್ತ್ವ ಮುಂತಾದ ಘಟಕಗಳಿಂದ ದೊರಕುವ ಪೋಷಕ ಹಾಗೂ ಪೂರಕವಾದ ಚೈತನ್ಯರೂಪಿ ರಸಗಳ ಸಾನಿಧ್ಯದಿಂದ ದೇಹವು ಆಧ್ಯಾತ್ಮಿಕ ದೃಷ್ಟಿಯಿಂದಲೂ ಬಲಶಾಲಿಯಾಗುತ್ತದೆ.
– ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಎಂಬ ಅಂಕಿತನಾಮದಿಂದ ಬರೆಯುತ್ತಾರೆ)
ಈ ಮೇಲಿನ ಆಧ್ಯಾತ್ಮಿಕ ಕಾರಣಗಳನ್ನು ತಿಳಿದ ನಂತರ ಗಮನಕ್ಕೆ ಬರುವ ವಿಷಯಗಳು :
ಒಬ್ಬರಲ್ಲಿ ಜೀರ್ಣಿಸಿಕೊಳ್ಳುವ ಶಕ್ತಿಯು ಒಳ್ಳೆಯದಾಗಿದ್ದರೆ ಅವರು ವಿಷವನ್ನು ಕೂಡ ಅರಗಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ ಅನೇಕರ ಕರುಳಿನ ಅಥವಾ ಪಚನ ಶಕ್ತಿಯು ಕ್ಷೀಣವಾಗಿದ್ದು ಅವರು ಇಂತಹ ವಿಷಮ ಆಹಾರ ಸೇವಿಸುವುದರಿಂದ ಅವರಿಗೆ ಅನೇಕ ರೋಗಗಳುಂಟಾಗುವ ಸಾಧ್ಯತೆ ಇದೆ. ವಿಷಮ ಅಥವಾ ವಿರುದ್ಧ ಆಹಾರ ಸೇವಿಸುವುದರಿಂದ ಕೂಡಲೇ ಅದರ ದುಷ್ಪರಿಣಾಮಗಳು ಕಂಡುಬರುತ್ತವೆ ಎಂದೇನಿಲ್ಲ, ಅದಕ್ಕೆ ಕೆಲವು ದಿನಗಳ ಅಥವಾ ತಿಂಗಳುಗಳ ಕಾಲಾವಧಿಯೂ ಬೇಕಾಗಬಹುದು. ಇಂದಿನ ಆಧುನಿಕ ವೈದ್ಯಕೀಯ ಶಾಸ್ತ್ರಕ್ಕೆ ಹೊಟ್ಟೆಗೆ ಸಂಬಂಧಿಸಿರುವ ಅನೇಕ ರೋಗಗಳ ಮೂಲ ಕಾರಣವು ತಿಳಿಯದೇ ಇರುವುದರಿಂದ ಸರಿಯಾದ ಚಿಕಿತ್ಸೆ ಲಭಿಸದೆ ಜನರು ಬಳಲುತ್ತಾರೆ. ಆದುದರಿಂದ ಇಲ್ಲಿ ನೀಡಿರುವ ಕಾರಣಗಳನ್ನು ತಿಳಿದುಕೊಂಡು ಚಿಕಿತ್ಸೆಯನ್ನು ನೀಡಿದರೆ ಚಿಕಿತ್ಸೆ ಫಲಕಾರಿಯಾಗಲು ಸಹಾಯವಾಗುವುದು.