ಆರೋಗ್ಯವಂತರಾಗಿರಲು ನಾವು ಏನು ಮತ್ತು ಎಷ್ಟು ತಿನ್ನುತ್ತೇವೆ ಎಂಬುವುದಕ್ಕಿಂತ ತಿಂದಿರುವುದನ್ನು ಅರಗಿಸಿಕೊಂಡಿದ್ದೇವೆಯೇ ಎಂಬುವುದು ಮಹತ್ವದ್ದಾಗಿದೆ. ಒಂದೇ ಸಮನೆ ಏನಾದರೂ ತಿನ್ನುತ್ತಾ ಇರುವುದು ಒಳ್ಳೆಯದಲ್ಲ. ತಿಂದಿರುವ ಆಹಾರ ಜೀರ್ಣವಾದ ಮೇಲೆಯೇ ಮುಂದಿನ ಆಹಾರ ಸೇವಿಸಬೇಕೆಂಬುವುದು ಒಂದು ಸರಳ ನಿಯಮ. ತಿಂದಿರುವುದು ಸರಿಯಾಗಿ ಅರಗಿಸಿಕೊಳ್ಳಲು ಊಟ-ತಿಂಡಿಯ ಸಮಯವೂ ಆಯುರ್ವೇದಕ್ಕನುಸಾರ ಇರಬೇಕು. ಇದರ ಬಗ್ಗೆ ತಿಳಿದುಕೊಳ್ಳಲು ಈ ಲೇಖನ ಓದಿ..
೧. ಊಟ-ತಿಂಡಿಯ ಸಮಯ ಹೇಗಿರಬೇಕು ?
೧ಅ. ಆಯುರ್ವೇದದ ಪ್ರಾಚೀನ ಗ್ರಂಥಗಳಲ್ಲಿರುವ ಉಲ್ಲೇಖ
ಆಯುರ್ವೇದದ ಎಲ್ಲ ಪ್ರಾಚೀನ ಗ್ರಂಥಗಳಲ್ಲಿ ಪ್ರಾತರಾಶ (ಬೆಳಗ್ಗಿನ ಊಟ) ಮತ್ತು ಸಾಯಮಾಶ (ಸಂಜೆಯ ಊಟ) ಎಂಬ ಶಬ್ದಗಳು ಬಳಕೆಯಲ್ಲಿ ಕಂಡುಬರುತ್ತವೆ. ಆದರೆ ಎಲ್ಲಿಯೂ ಮಾಧ್ಯಾಹ್ನಾಶ (ಮಧ್ಯಾಹ್ನದ ಊಟ) ಅಥವಾ ರಾತ್ರ್ಯಾಶ (ರಾತ್ರಿಯ ಊಟ) ಎಂಬ ಶಬ್ದಗಳು ಕಂಡು ಬರುವುದಿಲ್ಲ.
೧ಆ. ರಾತ್ರಿ ತಡವಾಗಿ ಊಟ ಮಾಡುವ ಮುಖ್ಯ ಕಾರಣಗಳು
ಮನೆಮನೆಗೂ ವಿದ್ಯುತ್ ಶಕ್ತಿ ತಲುಪಿದ ಮೇಲೆ ರಾತ್ರಿ ಊಟ ಮಾಡುವ ಪದ್ಧತಿಯು ಪ್ರಾರಂಭವಾಯಿತು. ನಂತರ ಬಂದ ದೂರದರ್ಶನದಲ್ಲಿ ಬರುವ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ತಡವಾಗಿ ಮಲಗುವುದು, ಮತ್ತು ಹಸಿವಾಗಬಾರದೆಂದು ತಡವಾಗಿ ಊಟ ಮಾಡುವುದು ರೂಢಿಯಾದವು. ಇದರಿಂದ ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಲ್ಲಿಯೂ ಹೆಚ್ಚಳವಾಯಿತು.
೧ಇ. ಆಯುರ್ವೇದಕ್ಕನುಗುಣವಾದ ಊಟದ ಸಮಯ
ಆಯುರ್ವೇದಕ್ಕನುಗುಣವಾಗಿ ಊಟ ಮಾಡುವ ಆದರ್ಶ ಸಮಯಗಳೆಂದರೆ ಬೆಳಗ್ಗೆ ೯ ರಿಂದ ೧೦ ಮತ್ತು ಸಂಜೆ ೫ ರಿಂದ ೬ (ಅಂದರೆ ಸೂರ್ಯಾಸ್ತದ ಮೊದಲು). ಈ ಸಮಯದಲ್ಲಿ ಊಟ ಮಾಡುತ್ತಿದ್ದ ನಮ್ಮ ಪೂರ್ವಜರು ಆರೋಗ್ಯಪೂರ್ಣ ಜೀವನವನ್ನು ಬಾಳುತ್ತಿದ್ದರು. ಹೆಚ್ಚು ಶ್ರಮವಹಿಸಿ ಕೆಲಸ ಮಾಡುವವರು (ಕೂಲಿ ಕೆಲಸ ಮಾಡುವವರು) ಇಂದಿಗೂ ಇಂತಹ ಸಮಯದಲ್ಲೇ ಊಟ ಮಾಡುವುದನ್ನು ನಾವು ಕಾಣಬಹುದು. ಯಾರು ಮೇಲೆ ನೀಡಿರುವ ಸಮಯದಲ್ಲಿ ಊಟ ಮಾಡಬಹುದೋ, ಅವರು ಆ ಸಮಯದಲ್ಲೇ ಊಟ ಮಾಡಲು ಪ್ರಯತ್ನಿಸಬೇಕು. ಆದರೆ ನಮ್ಮ ಜೀವನವು ಸಮಷ್ಟಿಯೊಂದಿಗೆ ಅಂದರೆ ಸಮಾಜದೊಂದಿಗೆ ಹೊಂದಿಕೊಂಡಿದ್ದರೆ ಮುಂದೆ ನೀಡಿರುವ ಪರ್ಯಾಯಗಳನ್ನೂ ಅಂಗೀಕರಿಸಬಹುದು.
೧ಈ. ಊಟದ ಆದರ್ಶ ಸಮಯಕ್ಕೆ ಪರ್ಯಾಯ
ಊಟದ ಸಮಯವನ್ನು ಬೆಳಗ್ಗೆ ೧೧೩೦ ಮತ್ತು ಸಂಜೆ ೭ ಗಂಟೆ ಎಂದು ಇಟ್ಟುಕೊಳ್ಳಬಹುದು. ಏಕೆಂದರೆ ಈ ಸಮಯವೂ ಇಂದಿನ ಬದಲಾದ ಜೀವನಶೈಲಿಗೆ ಹೆಚ್ಚು ಪೂರಕವಾಗಿದೆ.
೨. ಊಟದ ಸಮಯವನ್ನು ನಿರ್ಧರಿಸುವ ಹಿಂದಿನ ಸಿದ್ಧಾಂತ
೨ಅ. ಜೀರ್ಣಿಸುವ ಶಕ್ತಿಯು ಸೂರ್ಯನ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ
ನಾವು ತಿನ್ನುವ ಅನ್ನವನ್ನು ಜೀರ್ಣಿಸುವ ಜವಾಬ್ದಾರಿಯು ನಮ್ಮಲ್ಲಿರುವ ಜಠರಾಗ್ನಿಗಿರುತ್ತದೆ. ಈ ಜಠರಾಗ್ನಿ, ಅಂದರೆ ನಮ್ಮ ಜೀರ್ಣಿಸುವ ಶಕ್ತಿಯು, ಸೂರ್ಯನ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಆಕಾಶದಲ್ಲಿ ಸೂರ್ಯನಿರುವಾಗ ನಾವು ತಿಂದ ಅನ್ನವನ್ನು ಒಳ್ಳೆಯ ರೀತಿಯಲ್ಲಿ ಜೀರ್ಣಿಸಬಹುದು. ಆಯುರ್ವೇದದಲ್ಲಿ ‘ಮಳೆಗಾಲದ ಋತುಚರ್ಯೆ’ಯ ನಿಯಮಗಳನ್ನು ತಿಳಿಸುವಾಗ ‘ಯಾವ ದಿನ ಸೂರ್ಯನು ಹೆಚ್ಚಿನ ಸಮಯ ಮೋಡಗಳ ಮರೆಯಲ್ಲಿರುತ್ತಾನೆಯೋ, ಆ ದಿನ ಆದಷ್ಟು ಕಡಿಮೆ ಊಟ ಮಾಡಬೇಕು ಅಥವಾ ಸಾಧ್ಯವಿದ್ದರೆ ಉಪವಾಸವನ್ನು ಮಾಡಬೇಕು’ ಎಂದು ಹೇಳಲಾಗಿದೆ. ಇದರಿಂದ ನಮ್ಮ ಪಚನ ಶಕ್ತಿ ಮತ್ತು ಸೂರ್ಯನ ಸಂಬಂಧವು ಎಷ್ಟು ಆಳವಾಗಿದೆ ಎಂದು ತಿಳಿದುಬರುತ್ತದೆ.
೨ಆ. ಸೂರ್ಯಾಸ್ತವಾದ ಒಂದುವರೆಯಿಂದ ಎರಡು ಗಂಟೆಗಳ ವರೆಗೆ ಜೀರ್ಣಿಸಿಕೊಳ್ಳುವ ಶಕ್ತಿಯು ಒಳ್ಳೆಯದಾಗಿ ಕಾರ್ಯನಿರತವಾಗಿರುತ್ತದೆ
ಊಟದ ಆದರ್ಶ ಸಮಯವೆಂದರೆ ಸೂರ್ಯೋದಯವಾದ ೩ ರಿಂದ ೩.೩೦ ಗಂಟೆಗಳ ಒಳಗೆ ಮತ್ತು ಸೂರ್ಯಾಸ್ತವಾಗುವ ಅರ್ಧ ಗಂಟೆ ಮುಂಚೆ; ಮೇಲೆ ನೀಡಿರುವ ಕಾರಣವೇ ಈ ಆದರ್ಶ ಸಮಯದ ಹಿಂದಿರುವ ತತ್ತ್ವ. ಈ ಸಮಯವನ್ನು ಪಾಲಿಸಲು ಸಾಧ್ಯವಿಲ್ಲದಿದ್ದರೆ ಇನ್ನೂ ೨ ರಿಂದ ೨.೩೦ ಗಂಟೆಗಳ ಸಮಯ ಮುಂದೂಡಿ ಊಟ ಮಾಡಬಹುದು, ಏಕೆಂದರೆ ಅಷ್ಟು ಸಮಯದವರೆಗೆ ಜೀರ್ಣಿಸಿಕೊಳ್ಳುವ ಶಕ್ತಿಯು ಒಳ್ಳೆಯದಾಗಿಯೇ ಕಾರ್ಯನಿರ್ವಹಿಸುತ್ತದೆ.
೨ಇ. ರಾತ್ರಿಯ ಊಟವು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತಗಲುತ್ತದೆ
ನಿದ್ದೆ ಮಾಡುವಾಗ ಶರೀರವು ವಿಶ್ರಾಂತಿಯನ್ನು ಪಡೆಯುತ್ತದೆ. ಆದುದರಿಂದ ಜೀರ್ಣಕ್ರಿಯೆ ಸೇರಿ ಶರೀರದ ಎಲ್ಲ ಕ್ರಿಯೆಗಳು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಮಂದವಾಗುತ್ತವೆ. ಹಾಗಾಗಿ ರಾತ್ರಿ ಮಾಡಿದ ಊಟ ಜೀರ್ಣವಾಗಲು ೧೨ ರಿಂದ ೧೪ ಗಂಟೆಗಳ ಸಮಯ ಬೇಕಾಗುತ್ತದೆ. ಅದೇ ಬೆಳಗ್ಗೆ ಮಾಡಿದ ಊಟ ಜೀರ್ಣವಾಗಲು ೮ ಗಂಟೆಗಳು ಬೇಕಾಗುತ್ತದೆ (ಇದಕ್ಕೆ ಇನ್ನೊಂದು ಕಾರಣವೆಂದರೆ ಸೂರ್ಯ ಆ ಸಮಯದಲ್ಲಿ ಆಕಾಶದಲ್ಲಿರುವುದು). ಆದುದರಿಂದ ಬೆಳಗ್ಗಿನ ಊಟ ಆದ ಸಾಧಾರಣ ೮ ಗಂಟೆಗಳ ನಂತರ ರಾತ್ರಿಯ ಊಟ ಮತ್ತು ರಾತ್ರಿಯ ಊಟ ಆದ ಸಾಧಾರಣ ೧೨ ರಿಂದ ೧೪ ಗಂಟೆಗಳ ನಂತರ ಬೆಳಗ್ಗಿನ ಊಟ ಮಾಡಬೇಕು.
೨ಈ. ಮಲಗುವ ಮುಂಚೆಯೇ ಜೀರ್ಣಕ್ರಿಯೆಯ ಹೆಚ್ಚಿನಾಂಶವು ಪೂರ್ಣಗಳಿಸುವುದು ಅವಶ್ಯಕ
ನಮ್ಮಲ್ಲಿ ಅನೇಕರು ರಾತ್ರಿ ಹೊಟ್ಟೆ ತುಂಬಾ ಊಟ ಮಾಡಿ ಮತ್ತೆ ಸ್ವಲ್ಪ ಸ್ವಮಯದ ನಂತರ ಮಲಗುತ್ತೇವೆ. ಆದರೆ ರಾತ್ರಿ ಮಲಗುವ ಮುಂಚೆಯೇ ಜೀರ್ಣಕ್ರಿಯೆಯ ಹೆಚ್ಚಿನಂಶವು ಪೂರ್ಣಗೊಂಡಿರಬೇಕು. ಅದಕ್ಕೋಸ್ಕರ ಸೂರ್ಯಾಸ್ತವಾದ ಒಂದುವರೆಯಿಂದ ಎರಡು ಗಂಟೆಗಳ ಒಳಗೆ ಊಟ ಮುಗಿಸಿರಬೇಕು.
೩. ಅಲ್ಪಾಹಾರದ (ತಿಂಡಿ ತಿನ್ನುವ) ಸಮಯ
ಧರ್ಮಶಾಸ್ತ್ರಗಳಲ್ಲಿ, ಮತ್ತು ಆಯುರ್ವೇದದಲ್ಲಿ ದಿನದಲ್ಲಿ ಎರಡು ಸಲ ಹೊಟ್ಟೆ ತುಂಬಾ ಊಟ ಮಾಡಬೇಕು ಎಂದು ಹೇಳಲಾಗಿದೆ, ಮತ್ತು ಮಧ್ಯ-ಮಧ್ಯದಲ್ಲಿ ಏನೂ ತಿನ್ನಬಾರದು ಎಂದು ಹೇಳಲಾಗಿದೆ. ಆದರೆ ಇದು ಎಲ್ಲರಿಗೂ ಪಾಲಿಸಲು ಆಗುವುದಿಲ್ಲ. ಹಸಿದಿರುವಾಗ ಹಸಿವನ್ನು ತಡೆಯಬಾರದು. ಹೀಗೆ ಮಾಡಿದರೆ ಮೈ-ಕೈ ನೋವಾಗುವುದು, ಬಾಯಿ ಸಪ್ಪಗಾಗುವುದು, ಏನು ತೋಚದೆ ಇರುವುದು, ತಲೆ ತಿರುಗುವುದು, ತೆಳ್ಳಗಾಗುವುದು, ಹೊಟ್ಟೆ ನೋವಾಗುವುದು ಮುಂತಾದ ತೊಂದರೆಗಳು ಉದ್ಭವಿಸುತ್ತವೆ. ಆದುದರಿಂದ ಎರಡೂ ಸಲ ಊಟ ಮಾಡುವ ೩ ರಿಂದ ೩.೩೦ ಗಂಟೆಗಳ ಮುಂಚೆ ತಿಂಡಿಯನ್ನು ತಿನ್ನಬಹುದು. ಬೆಳಗ್ಗೆ ೯ ಗಂಟೆಗೆ ಊಟ ಮಾಡುವವರು ತಿಂಡಿಯನ್ನ ತಿನ್ನಬಾರದು. ಅಂತಹವರು ನೇರವಾಗಿ ೯ ಗಂಟೆಗೆ ಊಟ ಮಾಡಿ ನಂತರ ೨ ಗಂಟೆಗೆ ಅಲ್ಪಾಹಾರವನ್ನು ತೆಗೆದುಕೊಳ್ಳಬೇಕು. ಮೇಲೆ ತಿಳಿಸಿರುವಂತೆ ಪರ್ಯಾಯ ಸಮಯದಂತೆ ಊಟ ಮಾಡುವವರು ಬೆಳಗ್ಗೆ ೮ ಅಥವಾ ೮.೩೦ಕ್ಕೆ ಮತ್ತು ಸಂಜೆ ೪ ಗಂಟೆಗೆ ಅಲ್ಪಾಹಾರ ಮಾಡಬಹುದು.
೪. ಅಲ್ಪಾಹಾರ (ತಿಂಡಿ) ಎಂದು ಎಷ್ಟು ತಿನ್ನಬೇಕು ?
ಅಲ್ಪಾಹಾರ ಎಂಬ ಶಬ್ದದಲ್ಲಿಯೇ ಈ ಪ್ರಶ್ನೆಯ ಉತ್ತರ ಅಡಗಿದೆ. ಅಲ್ಪಾಹಾರ ಎಂಬುವುದು ‘ಅಲ್ಪ’ವಾಗಿಯೇ ಇರಬೇಕು. ಏಕೆಂದರೆ ಅಲ್ಪಾಹಾರವಾದ ನಂತರ ಸಾಧಾರಣ ೩ ಗಂಟೆಗಳ ನಂತರ ನಾವು ಊಟ ಮಾಡಬೇಕಾದ ಸಮಯಕ್ಕೆ ನಮಗೆ ಹಸಿವಾಗಿರಬೇಕು. ಪ್ರತಿಯೊಬ್ಬರ ಕ್ಷಮತೆ ಹೆಚ್ಚು ಕಡಿಮೆ ಇರುವುದರಿಂದ ತಮ್ಮ ಜೀರ್ಣ ಕ್ರಿಯೆಯ ಕ್ಷಮತೆಗನುಸಾರ ಸ್ವಲ್ಪ ಹಸಿವು ಇಟ್ಟುಕೊಂಡೆ ಅಲ್ಪಾಹಾರ ಸೇವಿಸಬೇಕು. ಅಲ್ಪಾಹಾರ ಜಾಸ್ತಿ ಸೇವಿಸಿದರೆ ಊಟದ ಸಮಯದಲ್ಲಿ ಹಸಿವಾಗದೇ ಇರಬಹುದು. ಆಗ ಹಸಿವಿಲ್ಲದಿದ್ದರೂ ಊಟದ ಸಮಯ ಆಗಿದೆ ಎಂದು ಊಟ ಮಾಡುತ್ತೇವೆ. ಹೀಗೆ ಮಾಡುವುದರಿಂದ ಅನ್ನವು ಜೀರ್ಣವಾಗುವುದಿಲ್ಲ. ತಿಂದ ಅನ್ನವು ಯಾವಾಗ ಜೀರ್ಣವಾಗುವುದಿಲ್ಲವೋ, ಆಗ ಅದು ಶರೀರಕ್ಕೆ ಪೂರಕವಾಗಿರದೆ, ಮಾರಕವಾಗುತ್ತದೆ, ಅಂದರೆ ವಿವಿಧ ವಿಕಾರಗಳ ಮೂಲವಾಗುತ್ತದೆ.
೫. ಊಟದ ಸಮಯ
ಮೇಲೆ ನೀಡಿರುವ ನಿಯಮಗಳಿಗನುಸಾರ ಯಾವ ಸಮಯದಲ್ಲಿ ಊಟ-ತಿಂಡಿ ಸೇವಿಸಬೇಕು ಎಂದು ತಿಳಿಯಲು ಒಂದು ತಖ್ತೆಯನ್ನು ನೀಡಿದ್ದೇವೆ.
ಆದರ್ಶ ಸಮಯ | ಪರ್ಯಾಯ ಸಮಯ | |
ತಿಂಡಿ (ಬೆಳಗ್ಗೆ) | – | 8 ಅಥವಾ 8.30 |
ಊಟ (ಬೆಳಗ್ಗೆ) | 9.00 | 11.30 |
ತಿಂಡಿ (ಮಧ್ಯಾಹ್ನ) | 2 | 4 |
ಊಟ (ಸಂಜೆ) | 5 | 7 |
೬. ಆರೋಗ್ಯವನ್ನು ನಿರ್ಲಕ್ಷಿಸಬೇಡಿ !
‘ಶರೀರಮಾಧ್ಯಂ ಖಲು ಧರ್ಮಸಾಧನಮ್ |’ ಅಂದರೆ, (ನಿರೋಗಿ) ಶರೀರವು (ಸಾಧಿಸುವುದೇ) ಮೊದಲನೇ ಸಾಧನೆ ಎಂದರ್ಥ. ಈಶ್ವರನು ಈ ಶರೀರವನ್ನು ಸಾಧನೆ ಮಾಡಲೆಂದು ನಮಗೆ ಕರುಣಿಸಿದ್ದಾನೆ. ಈ ಶರೀರರಿಂದ ಆದಷ್ಟು ಹೆಚ್ಚು ಸಾಧನೆಯಾಗಬೇಕಾದರೆ ಇದರ ಆರೋಗ್ಯವನ್ನು ಕಪಾಡುವುದು ನಮ್ಮ ಮೊದಲನೇ ಜವಾಬ್ದಾರಿಯಾಗುತ್ತದೆ. ಅರೋಗ್ಯ ಕಾಪಾಡಲು ಊಟ-ತಿಂಡಿಯ ಸಮಯವನ್ನು ಆದಷ್ಟು ಪಾಲಿಸಲು ಪ್ರಯತ್ನಿಸಬೇಕು. ಶಿಕ್ಷಣ, ಕೆಲಸ, ಸೇವೆ ಮುಂತಾದ ಕಾರಣಗಳಿಂದ ಮೇಲೆ ನೀಡಿರುವಂತೆ ಸಮಯ ಪಾಲಿಸಲು ಸಾಧ್ಯವಿಲ್ಲದಿದ್ದರೆ ಅಂತಹವರು ಜೊತೆಗೆ ಬುತ್ತಿಯನ್ನು ತೆಗೆದುಕೊಂಡು ಹೋಗುವ ಅಥವಾ ನಿಯಮಗಳಿಗನುಸಾರ ಸಮಯದ ನಿಯೋಜನೆಯ ಪರ್ಯಾಯವನ್ನು ಆರಿಸಬಹುದು.
– ವೈದ್ಯ ಮೇಘರಾಜ್ ಪರಾಡ್ಕರ್, ಸನಾತನ ಆಶ್ರಮ, ಗೋವಾ.
ಆಧಾರ : ದೈನಿಕ ಸನಾತನ ಪ್ರಭಾತ
ತುಂಬಾ ಚೆನ್ನಾಗಿದೆ ನಿಮ್ಮ ಮಾಹಿತಿ ನನಗೆ ತುಂಬಾ ಇಷ್ಟವಾದ ಮಾಹಿತಿ ದನೃವಾದಗಳು ಈರಿತಿಯ ಮಾಹಿತಿ ಆದಷ್ಟು ಎಲ್ರಿಗೂ ತಲುಪಿ ಸುವ ಪ್ರಯತ್ನ ಆಗಬೇಕು
Good information🙏
ಆಯುರ್ವೇದದ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ಧನ್ಯವಾದಗಳು…
Good message🙏