ದಿನವಿಡೀ ಕಾರ್ಯನಿರತವಾಗಿರುವ ಶರೀರಕ್ಕೆ ವಿಶ್ರಾಂತಿ ಸಿಗಲೆಂದು ನಾವು ಮಲಗುತ್ತೇವೆ. ಆದುದರಿಂದ ‘ಯಾವ ರೀತಿಯಲ್ಲಿ ಅಥವಾ ಭಂಗಿಯಲ್ಲಿ ಮಲಗುವುದರಿಂದ ಶರೀರಕ್ಕೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆಯೋ, ಆ ಭಂಗಿಯು ಒಳ್ಳೆಯದು’ ಎಂಬುವುದು ಒಂದು ಸಾಮಾನ್ಯ ನಿಯಮ. ಪ್ರತಿಯೊಬ್ಬರ ಪ್ರಕೃತಿ ಮತ್ತು ಆ ಸಮಯದ ಸ್ಥಿತಿಗನುಗುಣವಾಗಿ ವಿಶ್ರಾಂತಿ ಸಿಗುವ ಭಂಗಿಯು ಬೇರೆ ಬೇರೆ ಆಗಿರಬಹುದು. ನಾವು ಯಾವ ಭಂಗಿಯಲ್ಲಿ ಮಲಗಬೇಕು ಎಂಬುವುದು ನಮಗೆ ನಿದ್ದೆ ಬರುವ ತನಕ ಮಾತ್ರ ನಾವು ನಿರ್ಧರಿಸಬಹುದು, ಏಕೆಂದರೆ ನಿದ್ದೆ ಬಂದ ನಂತರ ನಮ್ಮ ಶರೀರದ ಸ್ಥಿತಿಯು ನಮ್ಮ ನಿಯಂತ್ರಣದಲ್ಲಿರುವುದಿಲ್ಲ.
ಮಲಗುವ ವಿವಿಧ ವಿಧಾನಗಳ ವಿಶ್ಲೇಷಣೆ
ಸಾಮಾನ್ಯವಾಗಿ ಮಲಗುವ ವಿವಿಧ ವಿಧಾನಗಳು –
ಅ. ಮಗುಚಿ (ಕೆಳಮುಖವಾಗಿ) ಮಲಗುವುದು
ನವಜಾತ ಶಿಶುಗಳನ್ನು ಮತ್ತು ಚಿಕ್ಕ ಮಕ್ಕಳನ್ನು ಈ ರೀತಿ ಮಲಗಿಸಿದರೆ ಅವರಿಗೆ ಶ್ವಾಸ ತೆಗೆದುಕೊಳ್ಳಲು ಅಡಚಣೆಯಾಗಬಹುದು. ಆದುದರಿಂದ ಮಕ್ಕಳನ್ನು ಈ ರೀತಿ ಮಲಗಿಸಬಾರದು. ಹಾಗೆಯೇ ಮಗುಚಿ ಮಲಗುವುದರಿಂದ ಇತರ ವಿಧಾನಗಳ ತುಲನೆಯಲ್ಲಿ ಬೆನ್ನೆಲುಬಿನ ಮೇಲೆ ಹೆಚ್ಚಿನ ಒತ್ತಡ ಬರುತ್ತದೆ.
ಆ. ಅಂಗಾತ (ಬೆನ್ನಿನ ಮೇಲೆ) ಮಲಗುವುದು
ನಾವು ನಿಂತುಕೊಂಡಾಗ ನಮ್ಮ ಬೆನ್ನೆಲುಬಿನ ಮೇಲೆ ಶೇ. ೧೦೦ ರಷ್ಟು ಒತ್ತಡವಿರುತ್ತದೆ ಎಂದುಕೊಳ್ಳೋಣ, ನಾವು ಅಂಗಾತ ಮಲಗಿದಾಗ ಈ ಒತ್ತಡವು ಶೇ. ೭೫ ರಷ್ಟು ಕಡಿಮೆಯಾಗಿ ಕೇವಲ ಶೇ.೨೫ ರಷ್ಟೇ ಉಳಿಯುತ್ತದೆ. ಈ ರೀತಿ ಮಲಗಿದಾಗ ಬೆನ್ನಿನ ಎಲುಬುಗಳ ಮೇಲಿನ ಒತ್ತಡವು ಇತರ ಭಂಗಿಗಳ ತುಲನೆಯಲ್ಲಿ ಅತ್ಯಂತ ಕಡಿಮೆಯಾಗಿರುತ್ತದೆ. ಆದುದರಿಂದ ಬೆನ್ನೆಲುಬಿನ ತೊಂದರೆಗಳಿರುವವರು ಈ ರೀತಿ ಮಲಗಿದರೆ ಅವರಿಗೆ ಸುಖಕರ ನಿದ್ದೆ ಸಿಗುತ್ತದೆ. ಅಂಗಾತ ಮಲಗುವಾಗ ಮಂಡಿಗಳ ಕೆಳಗೆ ಒಂದು ಚಿಕ್ಕ ದಿಂಬನ್ನು ಇಟ್ಟುಕೊಂಡರೆ ಬೆನ್ನೆಲುಬಿನ ಒತ್ತಡ ಇನ್ನಷ್ಟು ಕಡಿಮೆಯಾಗುತ್ತದೆ.
ಅಂಗಾತ (ಬೆನ್ನಿನ ಮೇಲೆ) ಮಲಗುವುದು ಮತ್ತು ಗೊರಕೆ ಹೊಡೆಯುವುದರ ಸಂಬಂಧವೇನು?
ಯಾರಿಗಾದರೂ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ, ಅವರು ಅಂಗಾತ ಮಲಗಿದರೆ ಅದು ಹೆಚ್ಚಾಗುತ್ತದೆ. ನಿದ್ದೆಯಲ್ಲಿದ್ದಾಗ ಅನೇಕ ಕಾರಣಗಳಿಂದ ಉಸಿರಾಟಕ್ಕೆ ತೊಂದರೆಯಾದಾಗ ಜನರು ಗೊರಕೆ ಹೊಡೆಯುತ್ತಾರೆ. ಅಂಗಾತ ಮಲಗಿದಾಗ ಶ್ವಾಸನಳಿಕೆಯಲ್ಲಿ ಅಡಚಣೆಗಳು ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದಾದರೊಂದು ಮಗ್ಗುಲಿನಲ್ಲಿ ಮಲಗುವುದರಿಂದ ಶ್ವಾಸನಳಿಕೆಯಲ್ಲಿ ಅಡಚಣೆಯು (ಉದಾಹರಣೆಗೆ ಶಿಥಿಲವಾದ ಸ್ನಾಯುಗಳಿಂದಾಗಿ ಶ್ವಾಸ ನಳಿಕೆಯಲ್ಲಿ ಅಡ್ಡಿ ಬಂದು ಶ್ವಾಸೋಚ್ಛ್ವಾಸಕ್ಕೆ ಆಗುವ ತೊಂದರೆ) ದೂರವಾಗಿ ಗೊರಕೆ ಹೊಡೆಯುವುದನ್ನು ತಡೆಯಬಹುದು. ಈ ರೀತಿ ಮಗ್ಗುಲಿನಲ್ಲಿ ಮಲಗುವ ಅನೇಕರಿಗೆ ಶಾಂತ ನಿದ್ರೆಯ ಅನುಭವವು ಸಿಕ್ಕಿದೆ.
ಇ. ಒಂದು ಮಗ್ಗುಲಿನಲ್ಲಿ ಮಲಗುವುದು
ಮಗ್ಗುಲಿನಲ್ಲಿ ಮಲಗುವುದರಿಂದ ಬೆನ್ನೆಲುಬಿನ ಮೇಲೆ ನಿಂತಿಕೊಂಡಿರುವ ಸ್ಥಿತಿಯ ಶೇ.೭೫ ರಷ್ಟು ಒತ್ತಡವಿರುತ್ತದೆ. ಬಲ ಮಗ್ಗುಲಿನಲ್ಲಿ ಮಲಗುವುದರಿಂದ ಚಂದ್ರನಾಡಿಯು, ಎಡ ಮಗ್ಗುಲಿನಲ್ಲಿ ಮಲಗುವುದರಿಂದ ಸೂರ್ಯನಾಡಿಯು ಸಕ್ರಿಯವಾಗಲು ಸಹಾಯವಾಗುತ್ತದೆ.
ಪ್ರಾಕ್ಶಿರಾ ದಕ್ಷಿಣಾನನೋ ದಕ್ಷಿಣಶಿರಾಃ ಪ್ರಾಗಾನನೋ ವಾ ಸ್ವಪೇತ್ |
– ಆಚಾರೇಂದು, ಶಯನವಿಧಿಪ್ರಯೋಗ
ಅರ್ಥ : ಮಲಗುವಾಗ ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ತಲೆ ಮಾಡಿ, ಒಂದು ಮಗ್ಗುಲಿನಲ್ಲಿ ಮಲಗಬೇಕು.
ಧರ್ಮಶಾಸ್ತ್ರಗಳಲ್ಲಿ ‘ಮಗ್ಗುಲಿನಲ್ಲಿ ಮಲಗಬೇಕು’ ಎಂದು ಹೇಳಿರುವುದರಿಂದ, ಬೇರೆ ಭಂಗಿಯಲ್ಲಿ ಮಲಗಲು ಯಾವುದೇ ವೈದ್ಯಕೀಯ ಕಾರಣವಿಲ್ಲದಿದ್ದರೆ, ಅಂತಹವರು ಮಗ್ಗುಲಿನಲ್ಲೇ ಮಲಗಲು ಪ್ರಯತ್ನಿಸಬೇಕು.
ಮಗ್ಗಲುನಲ್ಲಿ ಮಲಗುವುದರಿಂದ ಆಗುವ ಪ್ರಕ್ರಿಯೆ
ನಾವು ಯಾವುದಾದರೊಂದು ಮಗ್ಗುಲಿನಲ್ಲಿ ಮಲಗುವುದರಿಂದ ಕೆಳಗಿನ ದಿಕ್ಕಿನಲ್ಲಿ ಇರುವ ಮೂಗಿನ ಹೊಳ್ಳೆಯು ನಿಧಾನವಾಗಿ ಮುಚ್ಚಿಕೊಳ್ಳುತ್ತದೆ. ಅದು ಸಾಧ್ಯವಾದಷ್ಟು ಮುಚ್ಚಿಕೊಂಡ ಮೇಲೆ ನಾವು ನಿದ್ದೆಯಲ್ಲಿಯೇ ಮಗ್ಗುಲನ್ನು ಬದಲಿಸುತ್ತೇವೆ. ಆಗ ಮೂಗಿನ ಆ ಹೊಳ್ಳೆಯು ನಿಧಾನವಾಗಿ ತೆರೆದು ಇನ್ನೊಂದು ಹೊಳ್ಳೆಯು ಮುಚ್ಚಿಕೊಳ್ಳುತ್ತದೆ. ಈ ರೀತಿ ಅದಲು-ಬದಲಾಗಿ ಮೂಗಿನ ಹೊಳ್ಳೆಗಳು ಮುಚ್ಚಿಕೊಳ್ಳುವುದರಿಂದ ನಾವು ನಿದ್ದೆಯಲ್ಲಿಯೇ ಸ್ವಲ್ಪ-ಸ್ವಲ್ಪ ಸಮಯದ ನಂತರ ಮಗ್ಗುಲು ಬದಲಿಸುತ್ತೇವೆ.
ಈ. ನಿದ್ದೆಯಲ್ಲಿ ಭಂಗಿಗಳನ್ನು ಸತತವಾಗಿ ಬದಲಾಯಿಸುವುದು
ನಾವು ದಿನದ ಕಾಲು ಭಾಗದಷ್ಟು ಸಮಯ ನಿದ್ದೆಗೆಂದು ನೀಡುತ್ತೇವೆ. ಪ್ರತಿ ದಿವಸ ಇಷ್ಟು ಕಾಲಾವಧಿಯನ್ನು ಒಂದೇ ಸ್ಥಿತಿಯಲ್ಲಿ ಕಳೆದರೆ ಚರ್ಮದ ಮೇಲೆ ಸತತವಾಗಿ ಒತ್ತಡ ಬೀಳುವುದರಿಂದ ಹಾಸಿಗೆ ಹುಣ್ಣುಗಳು (ಬೆಡ್-ಸೋರ್) ಆಗುವ ಸಾಧಯತೆ ಇದೆ. ನಿದ್ದೆಯಲ್ಲಿ ನಮ್ಮ ಸ್ಥಿತಿಯನ್ನು ಮಧ್ಯ-ಮಧ್ಯದಲ್ಲಿ ಬಸಲಾಯಿಸಿದರೆ ಯಾವುದೇ ಒಂದು ಅವಯವದ ಮೇಲೆ ಹೆಚ್ಚಿನ ಒತ್ತಡ ಬರುವುದಿಲ್ಲ.
– ವೈದ್ಯ ಮೇಘರಾಜ್ ಪರಾಡ್ಕರ್, ಸನಾತನ ಆಶ್ರಮ, ರಾಮನಾಥಿ (೧೫.೧೨.೨೦೧೮)
ಸನಾತನ ಹಿಂದೂ ಧರ್ಮ ಮಾನವರ ಮೋಕ್ಷಕ್ಕೆ ಮಾರ್ಗ