ಸೂಚನೆ : ಇಲ್ಲಿ ನೀಡಿರುವ ಮಾಹಿತಿಯು ಲೇಖನ ಪ್ರಕಟಿಸಿದ ದಿನಾಂಕಕ್ಕೆ ಸರಿಯಾಗಿದೆಯೆಂದು ಪರಿಗಣಿಸಿ, ಕಾಲಾನುಸಾರ ಆಗುವ ಬದಲಾವಣೆಗಳನ್ನು ಸರಕಾರ ಮತ್ತು ತಜ್ಞರಿಂದ ತಿಳಿದುಕೊಂಡೆ ಮುಂದುವರಿಸಬೇಕೆಂದು ತಿಳಿಸುತ್ತೇವೆ.
ಇಂದು ಕೋವಿಡ್-೧೯ (ಕೊರೋನಾ) ರೋಗಾಣುವಿನ ಭಯದಿಂದ ಸಮಾಜದಲ್ಲಿ ಮಾಸ್ಕ್ ಉಪಯೋಗಿಸುವ ವಿಷಯದಲ್ಲಿ ಅನೇಕ ಗೊಂದಲಗಳಿವೆ. ಪ್ರತಿಯೊಬ್ಬರಿಗೂ ‘ಈ ರೋಗಾಣುವಿನಿಂದ ತಮ್ಮ ರಕ್ಷಣೆಯಾಗಬೇಕೆಂದು ತಾವು ಮಾಸ್ಕ್ ಉಪಯೋಗಿಸಬೇಕು’, ಎಂದು ಅನಿಸುತ್ತದೆ. ಆದರೆ ನಿಜವಾಗಿಯೂ ಮಾಸ್ಕ್ ಆವಶ್ಯಕವಿದೆಯೇ ? ಅದನ್ನು ಉಪಯೋಗಿಸುವ ವಿಶಿಷ್ಟ ಪದ್ಧತಿ ಏನಾದರೂ ಇದೆಯೇ ? ಅದು ಎಷ್ಟರ ಮಟ್ಟಿಗೆ ಸೀಮಿತವಾಗಿದೆ ?, ಎಂಬುದರ ವಿಷಯದಲ್ಲಿ ಮಹತ್ವದ ಮಾಹಿತಿಯನ್ನು ಇಂದು ನಾವು ತಿಳಿದುಕೊಳ್ಳೋಣ.
೧. ಆರೋಗ್ಯವಂತ ವ್ಯಕ್ತಿ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ !
ಕೋವಿಡ್-೧೯ (ಕೊರೋನಾ) ರೋಗಾಣುವಿನ ಸೋಂಕು ಆಗಬಾರದೆಂದು ಸಾಮಾನ್ಯ ವ್ಯಕ್ತಿ, ಅಂದರೆ ಯಾರಿಗೆ ಶ್ವಾಸಕ್ಕೆ ಸಂಬಂಧಿಸಿದ ತೊಂದರೆಗಳು (ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಇತ್ಯಾದಿ) ಲಕ್ಷಣಗಳಿಲ್ಲವೋ ಅವರು ಮಾಸ್ಕ್ ಉಪಯೋಗಿಸುವ ಆವಶ್ಯಕತೆಯಿಲ್ಲ.
ಅ. ಆರೋಗ್ಯವಂತ ವ್ಯಕ್ತಿ ಮೆಡಿಕಲ್ (ಸರ್ಜಿಕಲ್) ಮಾಸ್ಕ್ (ಅಂದರೆ ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಮಾಸ್ಕ್) ಧರಿಸುವ ಆವಶ್ಯಕತೆಯಿಲ್ಲ. ತಾನು ಉಪಯೋಗಿಸುವ ಮಾಸ್ಕ್‌ನಿಂದ ‘ರೋಗಾಣುವಿನಿಂದ ತನ್ನ ರಕ್ಷಣೆಯಾಗುತ್ತಿದೆ’, ಎನ್ನುವ ಭ್ರಮೆ ನಿರ್ಮಾಣವಾಗಿ ಅವರು ಅತ್ಯಾವಶ್ಯಕವಾದ ವಿಷಯಗಳ ಬಗ್ಗೆ ದುರ್ಲಕ್ಷ ಮಾಡಬಹುದು, ಉದಾ. ಸಾಬೂನಿನಿಂದ ಪದೇ ಪದೇ ಕೈ ತೊಳೆಯುವುದು, ಮುಖ ಮುಟ್ಟಿಕೊಳ್ಳದಿರುವುದು ಇತ್ಯಾದಿ.
ಆ. ಸಮಾಜದಲ್ಲಿನ ಆರೋಗ್ಯವಂತ ವ್ಯಕ್ತಿಗಳು ಮಾಸ್ಕ್ ಧರಿಸುವುದರಿಂದ ಲಾಭವಾಗಿರುವ ಬಗ್ಗೆ ವೈಜ್ಞಾನಿಕ ಪುರಾವೆಗಳಿಲ್ಲ.
ಇ. ಒಂದೇ ಮಾಸ್ಕನ್ನು ಪುನಃ ಪುನಃ ಉಪಯೋಗಿಸುವುದು, ಮಾಸ್ಕ್‌ನಿಂದಾಗಿ ಪದೇ ಪದೇ ಮುಖವನ್ನು ಸ್ಪರ್ಶ ಮಾಡುವುದು ಇತ್ಯಾದಿ ತಪ್ಪು ಕೃತಿಗಳಿಂದ ಕೊರೋನಾ ರೋಗಾಣುವಿನ ಸೋಂಕು ಆಗುವ ಸಾಧ್ಯತೆ ಹೆಚ್ಚಿದೆ.
೨. ಕೊರೋನಾ ರೋಗಾಣುವಿನ ಸೋಂಕು ಆಗಬಾರದೆಂದು ವಹಿಸಬೇಕಾದ ಜಾಗರೂಕತೆ
ಕೊರೋನಾ ರೋಗಾಣುವಿನ ಸೋಂಕು ಆಗಬಾರದೆಂದು, ಇತರ ಜಾಗರೂಕತೆಗಳು ಮಾಸ್ಕ್ ಉಪಯೋಗಿಸುವುದಕ್ಕಿಂತಲೂ ಹೆಚ್ಚು ಮಹತ್ವದ್ದಾಗಿದೆ. ಉದಾ.
ಅ. ಜನಸಂದಣಿ ಇರುವಲ್ಲಿ ಹೋಗದಿರುವುದು
ಆ. ಹಸ್ತಲಾಘವ ಮಾಡದಿರುವುದು
ಇ. ನೆಗಡಿ-ಕೆಮ್ಮು ಇರುವ ವ್ಯಕ್ತಿಗಳಿಂದ ಒಂದು ಮೀಟರ್‌ಗಿಂತ ಹೆಚ್ಚು ದೂರ ಇರುವುದು
ಈ. ಪದೇ ಪದೇ ಸಾಬೂನಿನಿಂದ ಯೋಗ್ಯರೀತಿಯಲ್ಲಿ ೪೦ ಸೆಕೆಂಡ್ ಕೈತೊಳೆಯುವುದು
ಉ. ಸೀನುವಾಗ ಅಥವಾ ಕೆಮ್ಮುವಾಗ ಬಾಯಿಗೆ ಕೈ ಇಡದೆ ತೋಳನ್ನು ಇಟ್ಟು ಸೀನುವುದು ಅಥವಾ ಟಿಶ್ಯೂಪೇಪರ್ ಹಿಡಿಯುವುದು, ಟಿಶ್ಯೂಪೇಪರ್ ಹಿಡಿದರೆ ಅದನ್ನು ಉಪಯೋಗಿಸಿದ ನಂತರ ಮುಚ್ಚಳವಿರುವ ಕಸದ ಬುಟ್ಟಿಗೆ ಹಾಕುವುದು, ಏನೂ ಇಲ್ಲದಿದ್ದರೆ, ಬಾಯಿಗೆ ಕರವಸ್ತ್ರ ಹಿಡಿಯುವುದು ಮತ್ತು ಅದನ್ನು ತೊಳೆದು ಒಣಗಿಸುವುದು.
೩. ಮಾಸ್ಕ್ ಯಾರು ಮತ್ತು ಯಾವಾಗ ಉಪಯೋಗಿಸಬೇಕು ?
ಅ. ಯಾರಿಗಾದರೂ ಜ್ವರ, ಕೆಮ್ಮು ಇತ್ಯಾದಿ ಲಕ್ಷಣಗಳು ಕಾಣಿಸಿದರೆ, ಅವರು ಮಾಸ್ಕ್ ಉಪಯೋಗಿಸಬೇಕು. ಅದರಿಂದ ಆ ವ್ಯಕ್ತಿಯಿಂದ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಯಬಹುದು.
ಆ. ಇಂತಹ ರೋಗಿಗಳಿಗೆ ಚಿಕಿತ್ಸೆ ಮಾಡುವ ವೈದ್ಯ, ಪರಿಚಾರಿಕೆ ಮತ್ತು ಆ ರೋಗಿಯ ಪ್ರತ್ಯಕ್ಷ ಸೇವೆ ಮಾಡುವ ಎಲ್ಲರೂ ರೋಗಿಯ ಸಂಪರ್ಕದಲ್ಲಿರುವಾಗ ಮಾಸ್ಕ್ ಧರಿಸುವ ಆವಶ್ಯಕತೆಯಿದೆ.
೪. ಉಪಯೋಗಿಸುತ್ತಿರುವ ಮಾಸ್ಕ್ ಎಷ್ಟು ಸಮಯ ಉಪಯೋಗಿಸಬಹುದು ?
ಮೆಡಿಕಲ್ ಮಾಸ್ಕ್‌ನಿಂದ ಸುಮಾರು ೬ ರಿಂದ ೮ ಗಂಟೆಯವರೆಗೆ ಮಾತ್ರ ಲಾಭವಾಗುತ್ತದೆ.
೫. ಮಾಸ್ಕ್ ಧರಿಸುವ ಯೋಗ್ಯ ಪದ್ಧತಿ
ಅ. ಮಾಸ್ಕ್ ಮೂಗು, ಬಾಯಿ ಮತ್ತು ಗದ್ದದವರೆಗೆ ಸಂಪೂರ್ಣ ಮುಚ್ಚುವಂತಿರಬೇಕು.
ಆ. ಮಾಸ್ಕ್ ಹಾಕುವಾಗ ಅಥವಾ ತೆಗೆಯುವಾಗ ಅದರ ಮುಂದಿನ ಭಾಗವನ್ನು ಸ್ಪರ್ಶಿಸಬಾರದು. ಕೈಯ ಸ್ಪರ್ಶದಿಂದ ಮಾಸ್ಕ್‌ನ ಮೇಲೆ ಜಂತುವಿನ ಸಂಕ್ರಮಣವಾಗಿ ಅದು ಹೆಚ್ಚು ಆಪಾಯಕಾರಿಯಾಗಬಹುದು.
ಇ. ಮಾಸ್ಕ್ ಹಿಂದಿನಿಂದ ಅದರ ದಾರವನ್ನು ಹಿಡಿದು ಹಾಕಬೇಕು ಅಥವಾ ತೆಗೆಯಬೇಕು.
೬. ಮಾಸ್ಕ್‌ನ ಯೋಗ್ಯ ವಿಲೇವಾರಿ
ಮಾಸ್ಕ್‌ನ ಉಪಯೋಗವಾದ ನಂತರ ಅದನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅದನ್ನು ಯೋಗ್ಯರೀತಿಯಲ್ಲಿ ವಿಲೇವಾರಿ ಮಾಡುವ ಅವಶ್ಯಕತೆಯಿದೆ.
೭. ಜನಸಂದಣಿಯಲ್ಲಿ ಹೋಗಬೇಕಾದರೆ ಆರೋಗ್ಯವಂತ ವ್ಯಕ್ತಿಗಳು ಪಾಲನೆ ಮಾಡಬೇಕಾದ ವ್ಯಾವಹಾರಿಕ ಸೂಚನೆಗಳು
ಅ. ಜನಸಂದಣಿಯಲ್ಲಿ ಹೋಗುವುದು ಆವಶ್ಯಕವಾಗಿದ್ದರೆ, ತಾವು ಸರ್ಜಿಕಲ್ ಮಾಸ್ಕ್ ಧರಿಸಬಹುದು. ಜನಸಂದಣಿಯಿಂದ ಹಿಂತಿರುಗಿ ಮನೆಗೆ ಬಂದನಂತರ ಮಾಸ್ಕ್ ಧರಿಸಬಾರದು.
ಆ. ಸರ್ಜಿಕಲ್ ಮಾಸ್ಕ್ ಪೇಟೆಯಲ್ಲಿ ಸಿಗದಿದ್ದರೆ ಅಂತಹ ಮಾಸ್ಕ್‌ಗಳನ್ನು ಹತ್ತಿಯ ಬಟ್ಟೆಯಿಂದ ತಯಾರಿಸಿಕೊಂಡು ಧರಿಸಬಹುದು. ಈ ಮಾಸ್ಕ್ ಪ್ರತಿದಿನ ಬಿಸಿನೀರಿನಿಂದ ಸಾಬೂನು ಹಾಕಿ ತೊಳೆದು ಉಪಯೋಗಿಸಬೇಕು.
ಇ. ಮಾಸ್ಕ್ ಸಿಗದಿದ್ದರೆ ಹತ್ತಿಯ ದೊಡ್ಡ ಕರವಸ್ತ್ರವನ್ನು ಮಡಚಿ ಅದನ್ನು ‘ಮೂಗು, ಮುಖ ಮತ್ತು ಗದ್ದ’ ಮುಚ್ಚುವಂತೆ ಕಟ್ಟಿಕೊಳ್ಳಬಹುದು. ಅದರ ಉಪಯೋಗವಾದ ನಂತರ ಅದನ್ನು ಬಿಸಿನೀರಿನಿಂದ ಸಾಬೂನು ಹಾಕಿ ತೊಳೆದು ಉಪಯೋಗಿಸಬಹುದು.
– ಆಧುನಿಕ ವೈದ್ಯ ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೩.೨೦೨೦)