ರಾಮಾಯಣದಲ್ಲಿ ಶ್ರೀರಾಮನ ಅವತಾರದ ಕಾಲದಲ್ಲಿ ನಡೆದ ಕೆಲವು ಪ್ರಸಂಗಗಳ ಭಾವಾರ್ಥಗಳಲ್ಲಿ ಇಲ್ಲಿ ನೀಡುತ್ತಿದ್ದೇವೆ. ಇದರಿಂದ ಅವತಾರಿ ಕಾರ್ಯದಲ್ಲಿ ಎಲ್ಲ ಘಟನೆಗಳು ಯಾವ ರೀತಿ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಯಿಂದ ನಡೆಯುತ್ತಿದೆ ಅದರ ಹಿಂದಿನ ಭಾವಾರ್ಥವೇನು ಎಂಬುದು ಗಮನಕ್ಕೆ ಬರುತ್ತದೆ.
ಅ. ಭೂಕನ್ಯೆ ಸೀತೆ
ಪ್ರಸಂಗ : ನೆಲ ಉಳುತ್ತಿರುವಾಗ ಸೀತೆ ದೊರಕುವುದು
ಭಾವಾರ್ಥ : ಬಾಲಸೀತೆಯು ಪೃಥ್ವಿಯ ಗರ್ಭದಿಂದ ಬರುವ ಹಿರಣ್ಯಗರ್ಭ ಲಹರಿಗಳ ಸಾಕಾರರೂಪವಾಗಿದ್ದಳು. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಇವು ಯಾವಾಗಲೂ ಒಟ್ಟಿಗೆ ಇರುವಂತೆ ಮತ್ತು ಅದರಲ್ಲಿನ ಒಂದೊಂದು ಘಟಕ ಬಂದಾಗಲೂ ಇತರ ಎಲ್ಲ ಘಟಕಗಳೂ ಬರುವಂತೆ (ಉದಾ. ಚಂದನದ ಹೆಸರು ಹೇಳಿದಾಗ ರೂಪ, ಗಂಧ ಇತ್ಯಾದಿಗಳೂ ಬರುತ್ತವೆ), ಬಾಲಸೀತೆಯು ವಿಶಿಷ್ಟ ಶಕ್ತಿಯ, ಹಿರಣ್ಯಗರ್ಭ ಶಕ್ತಿಯ ರೂಪವಾಗಿದ್ದಳು ಮತ್ತು ರಾಮಪತ್ನಿ ಸೀತೆಯು ರಾಮನ ಶಕ್ತಿಯ ರೂಪವಾಗಿದ್ದಳು.
ಆ. ಕೈಕೇಯಿಯು ವರ ಕೇಳುವುದು
ಪ್ರಸಂಗ : ಕೈಕೇಯಿಯು ಮೊದಲನೇ ವರದಿಂದ ರಾಮನಿಗೆ ಹದಿನಾಲ್ಕು ವರ್ಷ ವನವಾಸ ಮತ್ತು ಎರಡನೇ ವರದಿಂದ ಭರತನಿಗೆ ರಾಜ್ಯ ಕೇಳಿಕೊಂಡಳು.
ಭಾವಾರ್ಥ : ಶ್ರವಣಕುಮಾರ ಧೌಮ್ಯಋಷಿಗಳ ಮೊಮ್ಮಗನಾಗಿದ್ದ ಮತ್ತು ರತ್ನಾವಲಿ-ರತ್ನಋಷಿ ಇವರು ಅವನ ತಂದೆ-ತಾಯಿಯಾಗಿದ್ದರು. ರತ್ನಋಷಿಗಳು ನಂದಿಗ್ರಾಮದಲ್ಲಿ ಅಶ್ವಪತಿ ರಾಜನ ಆಸ್ಥಾನ ಪಂಡಿತ (ರಾಜಪುರೋಹಿತ)ರಾಗಿದ್ದರು. ಅಶ್ವಪತಿ ರಾಜನ ಮಗಳೇ ಕೈಕೇಯಿ. ರತ್ನಋಷಿಗಳು ಕೈಕೇಯಿಗೆ ಎಲ್ಲ ಶಾಸ್ತ್ರಗಳನ್ನೂ ಕಲಿಸಿಕೊಟ್ಟಿದ್ದರು ಮತ್ತು ದಶರಥನಿಗೆ ಮಕ್ಕಳಾದರೆ ಅವರು ರಾಜ್ಯಭಾರ ಮಾಡಲಾರರು ಅಥವಾ ದಶರಥನ ನಂತರ ಹದಿನಾಲ್ಕು ವರ್ಷಗಳ ಕಾಲ ಯಾರಾದರೂ ರಾಜಸಿಂಹಾಸನದ ಮೇಲೆ ಕುಳಿತರೆ ರಘುವಂಶವು ನಾಶವಾಗುವುದೆಂದೂ ನುಡಿದಿದ್ದರು. ಹಾಗಾಗಬಾರದೆಂದು ಮುಂದೆ ವಸಿಷ್ಠಋಷಿಗಳು ಕೈಕೇಯಿಗೆ ದಶರಥನಿಂದ ಪಡೆಯಲು ಹೇಳಿದ ವರಗಳಲ್ಲಿ ಒಂದು ವರದಿಂದ ಅವಳು ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳುಹಿಸಿದಳು ಮತ್ತು ಇನ್ನೊಂದು ವರದಿಂದ ರಾಜ್ಯವನ್ನು ಭರತನಿಗೆ ಕೊಡಲು ಹೇಳಿದಳು; ಏಕೆಂದರೆ ರಾಮನಿರುವಾಗ ಭರತನು ರಾಜನಾಗುವುದಿಲ್ಲ, ಅಂದರೆ ರಾಜಸಿಂಹಾಸನದಲ್ಲಿಯೂ ಕುಳಿತುಕೊಳ್ಳುವುದಿಲ್ಲ ಎಂಬುದೂ ಅವಳಿಗೆ ತಿಳಿದಿತ್ತು. ವಸಿಷ್ಠ ಮುನಿಗಳ ಹೇಳಿಕೆಯಂತೆಯೇ ಭರತನು, ರಾಮನ ಚಿತ್ರವನ್ನು ಸಿಂಹಾಸನದ ಮೇಲೆ ಸ್ಥಾಪಿಸುವುದರ ಬದಲು ಅವನ ಪಾದುಕೆಗಳನ್ನು ತಂದು ಸಿಂಹಾಸನದಲ್ಲಿ ಸ್ಥಾಪಿಸಿದನು. ಪಾದುಕೆಗಳ ಬದಲು ಚಿತ್ರವನ್ನು ಸ್ಥಾಪಿಸಿದ್ದರೆ, ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಒಟ್ಟಿಗೇ ಇರುವ ನಿಯಮದಂತೆ ರಾಮನು ಸ್ವತಃ ಸಿಂಹಾಸನಾರೂಢನಾದಾಗ ಯಾವ ಪರಿಣಾಮ ಉಂಟಾಗುತ್ತಿತ್ತೋ ಅದೇ ಪರಿಣಾಮವಾಗುತ್ತಿತ್ತು.
ಇ. ಸೀತಾಪಹರಣ
ಪ್ರಸಂಗ : ರಾವಣನು ಸೀತೆಯನ್ನು ಅಪಹರಿಸಿ ತನ್ನ ಬಳಿ ಇಟ್ಟುಕೊಂಡ.
ಭಾವಾರ್ಥ : ನಿಜವಾದ ಸೀತೆಯು ರಾವಣನಲ್ಲಿಗೆ ಹೋಗಲೇ ಇಲ್ಲ. ಅವಳು ಅಗ್ನಿಪ್ರವೇಶ ಮಾಡುತ್ತಾಳೆ ಮತ್ತು ಸೀತೆಯ ಛಾಯೆಯು ರಾವಣನ ಬಳಿ ಹೋಯಿತು. ಇಲ್ಲೇ ನಿಜವಾದ ಅರ್ಥದಲ್ಲಿ ರಾಮಲೀಲೆಯು ಪ್ರಾರಂಭವಾಯಿತು. ನಂತರ ರಾವಣನಿಂದ ಹಿಂತಿರುಗುವಾಗ ಅಗ್ನಿಶುದ್ಧಿಯ ನಿಮಿತ್ತದಿಂದ ಆ ಛಾಯೆಯು ಮತ್ತೆ ಅಗ್ನಿಪ್ರವೇಶ ಮಾಡಿತು ಮತ್ತು ನಿಜವಾದ ಸೀತೆಯು ಹೊರಬಂದಳು.
ಈ. ರಾವಣವಧೆ
ರಾವಣ ಮಹಾನ್ ಶಿವಭಕ್ತನಾಗಿದ್ದ. ಅವನು ಸಹಸ್ರಾರಚಕ್ರದಲ್ಲಿ ಸಿಲುಕಿಕೊಂಡಿದ್ದ. ರಾಮ ರಾವಣನನ್ನು ವಧಿಸಲಿಲ್ಲ, ಅವನ ಸಹಸ್ರಾರವನ್ನು ಭೇದಿಸಿ ಅವನಿಗೆ ಸದ್ಗತಿ ಒದಗಿಸಿದ.
ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ ‘ಶ್ರೀರಾಮ’