ವಸಂತ ಪಂಚಮಿ (ಮಾಘ ಶುಕ್ಲ ಪಂಚಮಿ)

ಮಾಘ ಶುಕ್ಲ ಪಂಚಮಿಯನ್ನು ವಸಂತ ಪಂಚಮಿ ಎಂದು ಕರೆಯುತ್ತಾರೆ. ಈ ದಿನದಿಂದ ಪ್ರಾರಂಭವಾಗುವ ವಸಂತೋತ್ಸವ, ನಿಸರ್ಗದ ಉತ್ಸವವೇ ಆಗಿದೆ. ಯಾವಾಗಲೂ ಸುಂದರವಾಗಿ ಕಾಣಿಸುವ ನಿಸರ್ಗವು ವಸಂತ ಋತುವಿನಲ್ಲಿ ಬಣ್ಣಬಣ್ಣದ ಹೂವುಗಳಿಂದ ಇನ್ನಷ್ಟು ರಮಣೀಯವಾಗಿ ಕಾಣಿಸುತ್ತದೆ. ಮಹರ್ಷಿ ವಾಲ್ಮೀಕಿಯವರು ರಾಮಾಯಣದಲ್ಲಿ ವಸಂತ ಋತುವಿನ ಅತೀ ಸುಂದರವಾದ ವರ್ಣನೆಯನ್ನು ನೀಡಿದ್ದಾರೆ. ಭಗವಾನ್ ಶ್ರೀಕೃಷ್ಣನು ‘ಋತುನಾಂ ಕುಸುಮಾಕರ’ ಎಂದು ವಸಂತ ಋತುವಿಗೆ ‘ಋತುರಾಜ’ ಎಂದು ಬಿರುದನ್ನಿತ್ತಿದ್ದಾನೆ.

ಯಾವಾಗಲೂ ಮನೋಹರವಾಗಿರುವ ನಿಸರ್ಗವು ವಸಂತ ಋತುವಿನಲ್ಲಿ ಮನಸ್ಸಿಗೆ ಇನ್ನಷ್ಟು ಮುದ ನೀಡುತ್ತದೆ. ಅತುಲನೀಯ ಸೌಂದರ್ಯದಿಂದ ನಿಸರ್ಗವು ನಮ್ಮೆಲ್ಲರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಮನುಷ್ಯರಲ್ಲಿ ಈ ಸೌಂದರ್ಯವನ್ನು ಅವಲೋಕಿಸುವ ಸಮಯ ಇರಬೇಕು! ಮನುಷ್ಯನ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ಮರೆಸುವ ಅಪೂರ್ವ ಗಾರುಡಿಗ ನಿಸರ್ಗ. ಇಂತಹ ನಿಸರ್ಗದ ಮಡಿಲಲ್ಲಿ ನಾವು ಹೋದರೆ ನಮಗೆ ಈಶ್ವರನ ಸಾಮೀಪ್ಯದ ಅನುಭವವಾಗುತ್ತದೆ.

ಉತ್ತರ ಭಾರತದಲ್ಲಿ ವಸಂತ ಪಂಚಮಿಯಂದು ಗಾಳಿಪಟಗಳನ್ನು ಹಾರಿಸುತ್ತಾರೆ. ಪಂಜಾಬಿನಲ್ಲಿ ಒಂದು ವಿಶ್ವ ಪ್ರಸಿದ್ಧ ಗಾಳಿಪಟ ಉತ್ಸವ ನಡೆಯುತ್ತದೆ. ಇದರಲ್ಲಿ ದೊಡ್ಡವರು ಚಿಕ್ಕವರೆಲ್ಲರೂ ಸೇರಿ ಗಾಳಿಪಟಗಳನ್ನು ಖರೀದಿಸಿ ಹಾರಿಸುತ್ತ ಆನಂದ ಪಡೆಯುತ್ತಾರೆ.

ವಸಂತ ಪಂಚಮಿಯಂದು ಸರಸ್ವತೀದೇವಿಯ ಪೂಜೆಯ ಶಾಸ್ತ್ರೀಯ ಆಧಾರ

ಸರಸ್ವತೀದೇವಿಯು ವಿದ್ಯೆ, ಬುದ್ಧಿ, ಜ್ಞಾನ ಮತ್ತು ವಿವೇಕದ ಅಧಿದೇವತೆಯಾಗಿದ್ದಾಳೆ. ಬುದ್ಧಿ ಮತ್ತು ವಿವೇಕವೂ ಪ್ರಖರವಾಗಲು, ವಾಣಿಯು ಮಧುರ ಮತ್ತು ನಿರರ್ಗಳವಾಗಲು, ಜ್ಞಾನ ಸಾಧನೆಯಲ್ಲಿ ಉನ್ನತಿಯನ್ನು ಸಾಧಿಸಲು ನಾವು ಸರಸ್ವತೀದೇವಿಯ ಉಪಾಸನೆಯನ್ನು ಮಾಡುತ್ತೇವೆ.

ವಸಂತ ಪಂಚಮಿಯ ದಿನ ಬ್ರಹ್ಮದೇವರ ಮುಖದಿಂದ ಸರಸ್ವತೀದೇವಿಯು ಅವತರಿಸಿದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದರಿಂದ ಜಡ ಮತ್ತು ಚೇತನಕ್ಕೆ ವಾಣಿಯ ಸಾಮರ್ಥ್ಯ ದೊರೆಯಿತು. ಆದುದರಿಂದ ವಸಂತ ಪಂಚಮಿಯನ್ನು ‘ವಿದ್ಯಾ ಜಯಂತಿ’ಯೆಂದೂ ಕರೆಯುತ್ತಾರೆ ಮತ್ತು ಈ ದಿನದಂದು ಶ್ರೀ ಸರಸ್ವತೀ ದೇವಿಯ ಉಪಾಸನೆಯನ್ನು ಮಾಡುವ ಸಂಪ್ರದಾಯವಿದೆ. ಭಗವದ್ಗೀತೆಯ ೧೦ನೇ ಅಧ್ಯಾಯದ ೩೫ನೇ ಶ್ಲೋಕದಲ್ಲಿ ಶ್ರೀಕೃಷ್ಣನು ವಸಂತ ಋತುವನ್ನು ‘ತನ್ನ ವಿಭೂತಿ’ ಎಂದು ಹೇಳುತ್ತಾನೆ. ‘ವಸಂತ ಋತು ಎಂದರೆ ನಾನೇ’ ಎಂದೂ ಹೇಳುತ್ತಾನೆ.

ಕೃಪೆ : ಬಾಲಸಂಸ್ಕಾರ ಜಾಲತಾಣ

Leave a Comment