ಶರಶಯ್ಯೆಯಲ್ಲಿ ಭೀಷ್ಮಾಚಾರ್ಯರು

ಕೌರವ ಮತ್ತು ಪಾಂಡವರ ಮಹಾ ಭಯಂಕರ ಯುದ್ಧ ನಡೆಯುತ್ತಿತ್ತು. ೯-೧೦ ದಿನಗಳ ಯುದ್ಧವಾದರೂ ಪಾಂಡವರ ಚಿಕ್ಕ ಸೈನ್ಯವನ್ನು ಸೋಲುಣಿಸುವಲ್ಲಿ ವಿಫಲರಾಗಿದ್ದೇವೆ ಎಂದು ಕುಪಿತಗೊಂಡ ದುರ್ಯೋಧನನು ತನ್ನ ಆಪ್ತ ಮಿತ್ರನಾದ ಕರ್ಣನನ್ನು ಸೇನಾಪತಿಯನ್ನಾಗಿ ನೇಮಿಸಲು ಮುಂದಾಗುತ್ತಾನೆ. ಆಗ ಭೀಷ್ಮಾಚಾರ್ಯರು ಒಂದು ಕಠೋರ ಪ್ರತಿಜ್ಞೆಯನ್ನು ಮಾಡುತ್ತಾರೆ. ‘ನಾಳೆ ನಾನು ಅಥವಾ ಆ ಪಾಂಡವರು ಉಳಿಯಬೇಕು! ನಾಳೆಯ ಯುದ್ಧವನ್ನು ಮುಂಬರುವ ಸಾವಿರಾರು ವರ್ಷಗಳ ಕಾಲ ಜನರು ನೆನಪಿಟ್ಟುಕೊಳ್ಳುತ್ತಾರೆ!’ ಮುಂದಿನ ದಿನ ಬೆಳಗಾದಂತೆ ಯುದ್ಧ ಪ್ರಾರಂಭವಾಗುತ್ತದೆ. ಭೀಷ್ಮಾಚಾರ್ಯರು ವೀರಾವೇಶದಿಂದ ಹೋರಾಡುತ್ತ ಕೌರವ ಸೈನ್ಯವನ್ನು ಹಿಂದಿಕ್ಕಿ ಪಾಂಡವರ ಸೈನ್ಯವನ್ನು ನಾಶ ಮಾಡುತ್ತಾ ಮುನ್ನುಗ್ಗುತ್ತಾರೆ. ಅವರ ಸುತ್ತಲೂ ಕೌರವರ ರಕ್ಷಣಾ ಪಡೆ ಇಲ್ಲದಿರುವುದನ್ನು ಕಂಡು ಭಗವಾನ ಶ್ರೀಕೃಷ್ಣನ ಸಲಹೆಯಂತೆ ಅರ್ಜುನನು ಶಿಖಂಡಿಯ ರಥವನ್ನು ಮುಂದಿಟ್ಟು ಭೀಷ್ಮಾಚಾರ್ಯರ ಮೇಲೆ ಬಾಣಗಳ ಮಳೆಯನ್ನೇ ಸುರಿಸುತ್ತಾನೆ. ‘ಶಿಖಂಡಿಯ ವಿರುದ್ಧ ಶಸ್ತ್ರಗಳನ್ನು ಉಪಯೋಗಿಸುವುದಿಲ್ಲ’ ಎಂದು ಭೀಷ್ಮಾಚಾರ್ಯರು ಪ್ರತಿಜ್ಞೆಯನ್ನು ಮಾಡಿದ್ದರು, ಆದುದರಿಂದ ಅವರು ತನ್ನ ಬಿಲ್ಲನ್ನು ಕೆಳಗೆ ಇಡುತ್ತಾರೆ. ಅರ್ಜುನನ ಬಾಣಗಳು ಭೀಷ್ಮಾಚಾರ್ಯರ ಕವಚವನ್ನು ಭೇದಿಸುತ್ತಿರಲು, ಅವರು ಪುನಃ ಬಿಲ್ಲನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಾರೆ, ಆದರೆ ಅರ್ಜುನನು ಅದನ್ನೂ ನಾಶಮಾಡುತ್ತಾನೆ. ಕೊನೆಗೆ ಸೂರ್ಯಾಸ್ತದ ಸಮಯದಲ್ಲಿ ಅಸಂಖ್ಯ ಬಾಣಗಳಿಂದ ಹಲ್ಲೆಗೊಳಗಾದ ಆ ಶರೀರವು ಇನ್ನು ನಿಂತುಕೊಳ್ಳಲು ಅಸಮರ್ಥವಾದಾಗ, ಭೀಷ್ಮಾಚಾರ್ಯರು ಪೂರ್ವದಿಕ್ಕಿಗೆ ತಲೆ ಮಾಡಿ ರಥದಿಂದ ಕೆಳಗೆ ಬೀಳುತ್ತಾರೆ. ಆ ಅಸಂಖ್ಯ ಬಾಣಗಳು ಅವರ ದೇಹಕ್ಕೆ ಒಂದು ಶರಶಯ್ಯೆಯನ್ನೇ ಆಗಿರುತ್ತವೆ!

ಕೌರವರು ಮತ್ತು ಪಾಂಡವರು ಎಲ್ಲರೂ ಸೇರಿ ಆ ವೀರನನ್ನು ನಮಿಸಲು ಬಂದರು. ಅವರ ತಲೆಗೆ ಆಧಾರ ಇಲ್ಲದಿರುವುದನ್ನು ಕಂಡ ಕೆಲವರು ಮೆದುವಾದ ದಿಂಬು ತಂದುಕೊಟ್ಟರು, ಆದರೆ ಭೀಷ್ಮಾಚಾರ್ಯರು ಅದನ್ನು ತಿರಸ್ಕರಿಸಿದರು. ಆಗ ಅರ್ಜುನನು ೩ ಬಾಣಗಳನ್ನು ಬಿಟ್ಟು ಭೀಷ್ಮಾಚಾರ್ಯರಿಗೆ ಒಂದು ಶರ-ದಿಂಬನ್ನು ಮಾಡಿದನು. ಭೀಷ್ಮಾಚಾರ್ಯರು ತೃಪ್ತರಾಗಿ ‘ನನ್ನ ದೇಹ ಹೀಗೆಯೇ ಇರಲಿ. ಉತ್ತರಾಯಣ ಪ್ರಾರಂಭವಾಗುವ ತನಕ ನಾನು ಹೀಗೆಯೇ ಇದ್ದು ಮತ್ತೆ ಪ್ರಾಣ ತ್ಯಜಿಸುತ್ತೇನೆ.’

ಹೀಗೆ ಮುಂದಿನ ೫೮ ದಿನಗಳ ಸಮಯ ಶರಶಯ್ಯೆಯಲ್ಲೇ ಮಲಗಿದ್ದು, ಯುದ್ಧ ಮುಗಿದ ಮೇಲೆ ಪಾಂಡವರಿಗೆ ಆದರ್ಶ ರಾಜ್ಯವನ್ನು ಆಳುವ ಬಗ್ಗೆ, ಧರ್ಮದ ಬಗ್ಗೆ ಮಾರ್ಗದರ್ಶನವನ್ನು ಮಾಡಿ ಉತ್ತರಾಯಣದ ಮೊದಲನೇ ದಿನ ಆ ಇಚ್ಛಾಮರಣಿ ಭೀಷ್ಮಾಚಾರ್ಯರು ತನ್ನ ಪ್ರಾಣವನ್ನು ತ್ಯಜಿಸಿದರು.

Leave a Comment