ಇತಿಹಾಸ
ಪಶ್ಚಿಮ ಸಮುದ್ರ ತೀರದಲ್ಲಿರುವ ತುಳು ರಾಜ್ಯವನ್ನು ಸೂರ್ಯವಂಶದ ವೀರಬಾಹು ಎಂಬ ರಾಜನು ಆಳುತ್ತಿದ್ದನು. ವೃದ್ದನಾಗಲು ರಾಜನು ತನ್ನ ರಾಜ್ಯವನ್ನು ಬಂಗರಾಜನಿಗೆ ಒಪ್ಪಿಸಿ ತಾನು ಪತ್ನಿ ಸಮೇತನಾಗಿ ವಾನಪ್ರಸ್ಥಕ್ಕೆ ಹೊರಟು ಹೋದ ನಂತರ ಬಂಗರಾಜನು ಈ ತುಳು ನಾಡನ್ನು ವೈಭವದಿಂದ ಆಳ ತೊಡಗಿದ. ಒಮ್ಮೆ ಬಂಗರಾಜನು ತನ್ನ ಅರಮನೆಯಲ್ಲಿ ಮಲಗಿರಲು, ಬೆಳಗಿನ ಜಾವದಲ್ಲಿ ಶ್ರೀ ಮಂಗಳಾದೇವಿಯು ಸ್ವಪ್ನದಲ್ಲಿ ದರ್ಶನವನ್ನಿತ್ತು ‘ರಾಜ ನಿನ್ನನ್ನು ಅನುಗ್ರಹಿಸಲಿಕ್ಕಾಗಿ ಪ್ರಸನ್ನಳಾಗಿರುವೆನು ನಾನು ಮಂಗಳಾದೇವಿ, ನೇತ್ರಾವತಿ ಮತ್ತು ಪಾಲ್ಗುಣಿ ನದಿಗಳು ಸಂಗಮವಾಗಿ ಸಮುದ್ರ ಸೇರುವ ಸನಿಹದಲ್ಲಿ ನನ್ನ ಲಿಂಗ ರೂಪದ ಬಿಂಬದಲ್ಲಿ ಚೈತನ್ಯವನ್ನು ಹೊಂದಿರುವೆನು. ಇದೀಗ ಆಲಯವು ಕುಸಿದು ಬಿದ್ದು ಒಂದು ದಿಣ್ಣೆಯಂತೆ ಕಾಣುತ್ತದೆ. ನೀನು ಆ ದಿಣ್ಣೆಯನ್ನು ಸರಿಸಿದಾಗ ನನ್ನ ಬಿಂಬ ನಿನಗೆ ಕಾಣಿಸುವುದು ನೀನು ಅದೇ ಸ್ಥಳದಲ್ಲಿ ನನಗೊಂದು ಆಲಯವನ್ನು ನಿರ್ಮಿಸಿ ಬಿಂಬರೂಪದ ಲಿಂಗವನ್ನು ಪುನರ್ ಪ್ರತಿಷ್ಟಾಪಿಸು ಮತ್ತು ನನಗೆ ಧಾರಾಪಾತ್ರೆಯನ್ನಿಟ್ಟು ಹಾಗೆಯೇ ನನ್ನನ್ನು ಆರಾಧಿಸುತ್ತಿರು, ನಿನಗೆ ಮಂಗಳವಾಗಲಿ. ಈ ಪುಣ್ಯ ಕಾರ್ಯದಿಂದ ನೀನು ಲೊಕೊತ್ತರವಾದ ಕಿರ್ತಿಯನ್ನು ಪಡೆಯುವಿ’ ಎಂದು ಹರಸಿ ಮಾಯವಾದಳು. ಬಂಗರಾಜ ಅಂತೆಯೇ ಮಾಡಿ, ಭಾರದ್ವಜ ಮುನಿಗಳಲ್ಲಿ ಕ್ಷೇತ್ರದ ಮಹಿಮೆಯನ್ನು ತಿಳಿಸಲು ಪ್ರಾರ್ಥಿಸಿದನು.
ಭಾರದ್ವಜ ಮುನಿಗಳು ಶ್ರೀ ಹರಿಯು ವರಹಾ ಮತ್ತು ನರಸಿಂಹ ಅವತಾರದ ಕತೆಯನ್ನು ಹೇಳಿ, ವರಹಾ ಅವತಾರವೆತ್ತಿ ವಧಿಸಿದ ಹಿರಣ್ಯಾಕ್ಷನ ಮಗಳಾದ ವಿಖಾಸಿನಿಯು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ವರ ಪಡೆದುದನ್ನು ವಿವರಿಸಿ ಆಕೆಗೆ ಶಿವನ ಕೃಪೆಯಿಂದ ಪಡೆದ ಮಗನಿಂದಾಗಿ ದೇವತೆಗಳೆಲ್ಲ ಸ್ವರ್ಗ ಬಿಡಬೇಕಾಗಿ ಬಂದುದನ್ನೂ ಹೇಳಿ ಆ ದುಷ್ಟದಾನವನ್ನು ವಧಿಸುವರೇ ತ್ರಿಲೋಕ ಪೂಜ್ಯಳಾದ ಮಹಾದೇವಿಯನ್ನು ಬ್ರಹ್ಮ ವಿಷ್ಣು ಶಿವರೊಂದಿಗೆ ದೇವತೆಗಳು ಒಂದಾಗಿ ಪ್ರಾರ್ಥಿಸಿದಾಗ ಶ್ರೀ ಮಂಗಳಾದೇವಿಯು ಪ್ರತ್ಯಕ್ಷಳಾಗಿ ದೇವತೆಗಳಿಗೆ ಅಭಯನೀಡಿ ಆ ದಾನವನನ್ನು ವಧಿಸುವ ಕತೆಯನ್ನು ಹೇಳಿದರು.
ಭಾರಧ್ವಜರು ಮುಂದುವರಿದು ‘ರಾಜ ನಮ್ಮ ಆಶ್ರಮದ ಸನಿಹದಲ್ಲೇ ಭಾರ್ಗವರಾಮನು ತಪವನ್ನಾಚರಿಸಿ ಶಿವ ಶಕ್ತಿಯರನ್ನು ಒಲಿಸಿಕೊಂಡಿದ್ದಾಗ ಶ್ರೀ ಮಂಗಳಾದೇವಿಯು ‘ನನ್ನ ಲಿಂಗ ರೂಪದ ಬಿಂಬವು ನಿನಗೆ ಕಾಣಸಿಗುವುದು. ಅದಕ್ಕೊಂದು ಆಲಯವನ್ನು ನಿರ್ಮಿಸಿ ಅದರಲ್ಲಿ ಪ್ರತಿಷ್ಟಾಪಿಸು. ಈ ಬಿಂಬವನ್ನು ಶಿವನ ಶಕ್ತಿಯೂ ನನ್ನೊಂದಿಗಿರುವುದರಿಂದ ಧಾರಾ ಪತ್ರೆಯನ್ನಿಡು’ ಎಂದು ಅಪ್ಪಣೆ ಕೊಡಿಸುವಂತೆ ಆ ಧಾರಾಪಾತ್ರೆ ಇದೆ.
ಅನಂತರ ಶಿಥಿಲಗೊಂಡ ಈ ಸ್ಥಳವನ್ನು ಮಹಿಮಾ ಪುರುಷರಾದ ಮಚ್ಛಿಂದ್ರನಾಥರ ಆದೇಶದಂತೆ ತುಳುನಾಡಿನ ದೊರೆಯಾದ ಕುಂದಮರ್ಮನು ಮಂದಿರವನ್ನು ನಿರ್ಮಿಸಿ ಶ್ರೀ ಮಂಗಳಾದೇವಿಯನ್ನು ಪುನರ್ ಪ್ರತಿಷ್ಠಾಪಿಸಿದ. ಶ್ರೀ ಮಂಗಳಾದೇವಿ ಇಲ್ಲಿ ನೆಲಸಿರುವುದರಿಂದಲೇ ಇಲ್ಲಿಗೆ ಮಂಗಳಾಪುರ ಎಂಬ ಹೆಸರು ಬಂದಿದೆ. ಶ್ರೀ ಮಂಗಳದೇವಿಯನ್ನು ಅನುದಿನವೂ ಆರಾಧಿಸಿಕೊಂಡು ಬಂದಲ್ಲಿ ಸಕಲ ಸೌಭಾಗ್ಯವನ್ನು ಕರುಣಿಸುವಂತೆ ಮೋಕ್ಷವು ಪ್ರಾಪ್ತಿಯಾಗುವುದು.
ಇಲ್ಲಿಯ ಇನ್ನೊಂದು ವೈಶಿಷ್ಟ್ಯವೆಂದರೆ ಯಾವ ಕುಮಾರಿಗೆ ಕಂಕಣ ಬಲ ಕೂಡಿಬರುವುದಿಲ್ಲವೋ ಆಕೆ ಶುದ್ದದಲ್ಲಿದ್ದು ದೇವಿಯ ಸನಿಹದಲ್ಲೇ ಸ್ವಯಂವರ ಪಾರ್ವತಿ ವೃತವನ್ನಾಚರಿಸಿದರೆ ಆಕೆಗೆ ಯೋಗ್ಯ ವರನು ದೊರೆತು ಅವರ ಸಂಸಾರವು ಸುಖಕರವಾಗಿ ಪರಿಣಮಿಸುವುದು. ಯಾರು ಈ ದೇವಿಯ ಸನ್ನಿಧಿಯಲ್ಲಿ ವಿವಾಹ ಆಗುವರೋ ಅವರು ಕೂಡ ತಮ್ಮ ಜೀವನದುದ್ದಕೂ ಸುಖ, ಸಂಪತ್ತನ್ನು ಹೊಂದಿ ಸಂತೃಪ್ತಿ ಜೀವನ ನಡೆಸುವರು. ಈ ದೇವಿಯನ್ನು ಶ್ರದ್ದಾಭಕ್ತಿಯಿಂದ ಆರಾಧಿಸುತ್ತಿದ್ದರೆ, ಆತನಿಗೆ ಬಂದಿರುವ ಕಷ್ಟ ಕಾರ್ಪಣ್ಯಗಳು ಮಂಜಿನಂತೆ ಕರಗಿ ಹೋಗವುದು.
ಹಬ್ಬಗಳು ಮತ್ತು ಉತ್ಸವಗಳು
ನವರಾತ್ರಿ
ನವರಾತ್ರಿ ಹಬ್ಬವು ಅಶ್ವಿಜ ಶುಕ್ಲ ಪಾಡ್ಯದ ದಿನ ಶುರುವಾಗುತ್ತದೆ ಹಾಗು ಅಂದು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ನವಕಳಶ ಪೂಜೆಯೊಂದಿಗೆ ಪೂಜಾಕಾರ್ಯಕ್ರಮಗಳು ಶುರುವಾಗುತ್ತವೆ. ನವರಾತ್ರಿಯ ಕಾಲದಲ್ಲಿ ಮುಖ್ಯ ದೇವತೆಗೆ ನಿತ್ಯ ಅಲಂಕಾರ ಮಾಡಲಾಗುತ್ತದೆ ಮತ್ತು ದೇವತೆಯನ್ನು ದುರ್ಗಾ ಆರ್ಯ ಭಗವತಿ, ಕೌಮಾರಿ, ಅಂಬಿಕಾ, ಮಹಿಷಿ ಮರ್ದಿನಿ, ಚಂಡಿಕಾ, ಸರಸ್ವತಿ, ವಾಗೇಶ್ವರಿ ಪೂಜಿಸಲಾಗುತ್ತದೆ. ನವರಾತ್ರಿ ದಿನಗಳಲ್ಲಿ ಭಂಡಾರ ಅಧಿಕಾರಿಗಳ ಪರವಾಗಿ ಚಂಡಿಕಾ ಹೋಮ ಮಾಡಲಾಗುತ್ತದೆ. ವಿಜಯದಶಮಿಯ ದಿನ ನಿತ್ಯ ಪೂಜೆ, ಬಲಿ ಪೂಜೆ ಮತ್ತು ರಥೋತ್ಸವವನ್ನು ಮಾಡಲಾಗುತ್ತದೆ.
ಜಾತ್ರೆ ಮತ್ತು ರಥೋತ್ಸವ
ಫಾಲ್ಗುಣ ಮಾಸದ ಬಹುಳ ಮೂಲಾನಕ್ಷತ್ರದಂದು ರಥೋತ್ಸವ ಇದಕ್ಕೆ ಅನುಗುಣವಾಗಿ ಪೂರ್ವಾಭಿಮುಖವಾಗಿ ೩ ದಿನದ ಮೊದಲು ಧ್ವಜಾರೋಹಣ ಆಗುವ ಮಂಚಿನ ದಿನ ಗಣಪತಿ ಪ್ರಾರ್ಥನೆ ಹಾಗೂ ದೇವಿಯ ಹತ್ತಿರ ಮತ್ತು ದೇವರ ಹತ್ತಿರ ಪ್ರಾರ್ಥನೆ ಮಾಡಿ ವಾಸ್ತು ಹೋಮ ರಕ್ಷಾಜ್ಞ ಹೋಮ, ವಾಸ್ತು ಪೂಜೆಯಾಗಿ ದೇವಿಗೆ ಸಣ್ಣ ರಂಗಪೂಜೆ ಜರುಗುವುದು. ಧ್ವಜ ಏರುವ ಪ್ರಾರ್ಥಕಾಲ ಪೂಜೆ, ಬಿಂಬ ಶುದ್ದಿ, ಅಭಿಷೇಕ ಅಮೇಲೆ ವಸ್ತ್ರಾಭರಣ ಅಲಂಕಾರವಾಗಿ ಮಹಾಪೂಜೆ, ನಂತರ ಬಲಿ ಹೊರಟು, ಧ್ವಜಾರೋಹಣ, ಸಾಯಂಕಾಲ ಬಿರುದುವಳಿ ಉತ್ಸವ, ಬಲಿ ರಾತ್ರಿ ಪೂಜೆ ನಡೆದು ಭೂತಬಲಿ ನಡೆಯುತ್ತದೆ.
೪ನೇ ದಿವಸ ದೇವಿಗೆ ಚಂಡಿಕಾಯಾಗ. ಸಾಯಂಕಾಲದ ಬಯನ ಬಲಿಯಾಗಿ ಸಣ್ಣ ರಥವನ್ನು ಎಳೆಯುತ್ತಾರೆ. ರಥೋತ್ಸವದಂದು ಎಲ್ಲ ಪೂಜೆಯಾಗಿ ಮಧ್ಯಾಹ್ನದ ಮಹಾಪೂಜೆ ನಂತರ ದೇವರು ಹೊರಟು ರಥರೋಹಣ ಆಗುವುದು. ಸಾಯಂಕಾಲ ೭ ಕ್ಕೆ ರಥೋತ್ಸವ ಮಹಾನವಮಿ ತನಕ ಹೋಗಿ ಹಿಂದಕ್ಕೆ ಬರುತ್ತದೆ. ನಂತರ ಬಲಿ ಉತ್ಸವ, ರಾತ್ರಿ ಮಹಾಪೂಜೆ ಅನಂತರ ಶ್ರೀ ಭೂತ ಬಲಿಯಾಗಿ ದೇವರ ಶಯನ ನಡೆಯುವುದು. ಶಯನಕ್ಕೆ ಹೂವಿನ ಅಲಂಕಾರ ಆಭರಣಗಳನ್ನು ತೊಡಿಸುವುದು.
ದೀಪಾವಳಿ
ಬಲಿಪಾಡ್ಯಮಿಯಂದು ದೇವಿಗೆ ಸಣ್ಣರಂಗಪೂಜೆಯಾಗಿ ಬಲೀಂದ್ರ ಪೂಜೆ ಅದಕ್ಕೆ ಬಾಳೆಗಿಡವನ್ನು ಇಟ್ಟು ಹಣತಿಯಲ್ಲಿ ದೀಪ ಇಟ್ಟು ಬಲೀಂದ್ರ ಪೂಜೆ ಮತ್ತು ಪ್ರಸಾದ ವಿತರಣೆ ಇರುತ್ತದೆ.
ಕಾರ್ತಿಕ ಮಾಸ ಪೂಜೆ
ಉತ್ತಾನ ದ್ವಾದಶಿಯಂದು ತುಳಸಿ ಪೂಜೆ ವಿಶೇಷ ಪೂಜೆ ಕಾರ್ತಿಕ ಮಾಸದಲ್ಲಿ ದೇವಿಯ ಮಹಾಪೂಜೆ ನಂತರ ೩೦ ದಿನವೂ ತುಳಸಿ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸದ ಬಹುಳ ನವಮಿಯಂದು ಶ್ರೀದೇವಿಗೆ ಲಕ್ಷದೀಪೋತ್ಸವ ಜರುಗುವುದು.
ಪ್ರತಿಷ್ಠಾಮಹೋತ್ಸವ
ಮೇ ೧೭ ರಂದು ಪ್ರತಿಷ್ಠಾಮಹೋತ್ಸವ ಜರುಗುವುದು. ಬೆಳಿಗ್ಗೆ ಕಲಾಶಭಿಷೇಕ ಗಣಯಾಗ ಮಧ್ಯಾಹ್ನ ಮಹಾಪೂಜೆಯಾಗಿ ರಾತ್ರಿ ಶ್ರೀದೇವಿಗೆ ಸಣ್ಣ ರಂಗಪೂಜೆ ಬಲಿ ಉತ್ಸವ ಸಣ್ಣ ರಥೋತ್ಸವ ಆಗಿ ಪ್ರಸಾದ ವಿತರಣೆ.
ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮಶನ್ ಸಿಸ್ಟಮ್