ಶ್ರೀ ರಾಜರಾಜೇಶ್ವರಿ ದೇವಸ್ಥಾನ (ಪೊಳಲಿ, ದಕ್ಷಿಣ ಕನ್ನಡ ಜಿಲ್ಲೆ)

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ ಶ್ರೀರಾಜರಾಜೇಶ್ವರಿ ದೇವಸ್ಥಾನವಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸುತ್ತುವರಿದು ಪಾಲ್ಗುಣಿ ಹೊಳೆ ಹರಿದು ಹೋಗುತ್ತಾಳೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಪೊಳಲಿಯು ಪ್ರವಾಸಿಗರನ್ನು ತನ್ನ ನೈಸರ್ಗಿಕ ಸೌಂದರ್ಯ ಹಾಗು ದೃಷ್ಯ ಸಲಕರಣೆಯಿಂದ ಆಕರ್ಷಿಸುತ್ತಿದೆ. ಈ ದೇವಸ್ಥಾನದಲ್ಲಿ “ಪೊಳಲಿ ಚೆಂಡು” ಒಂದು ಮುಖ್ಯವಾದ ಹಬ್ಬವಾಗಿದ್ದು ಇದನ್ನು ದೇವಸ್ಥಾನದ ವಾರ್ಷಿಕ ಹಬ್ಬದಲ್ಲಿ ಆಚರಿಸುತ್ತಾರೆ.

ಇತಿಹಾಸ

ಶ್ರೀ ಕ್ಷೇತ್ರ ಬಹಳ ಪ್ರಾಚೀನವಾದದ್ದು ಸುರಥ ಮಹಾರಾಜ ಈ ದೇವಾಲಯವನ್ನು ಕಟ್ಟಿಸಿ ಮೂರ್ತಿಯನ್ನು ನಿರ್ಮಾಣ ಮಾಡಿಸಿ ತನ್ನ ಕೀರಿಟವನ್ನೆ ಶ್ರೀದೇವಿಯ ವಿಗ್ರಹಕ್ಕೆ ಇಟ್ಟನೆಂದು ಪ್ರತೀತಿ. ಕ್ರಿಶ ಪ್ರಾರಂಭದಿಂದಲೂ ಈ ದೇವಸ್ಥಾನದ ಹೆಸರು ಅಲ್ಲಲ್ಲಿ ಉಲ್ಲೇಖಿತವಾಗಿದೆ. ಆಶೋಕನ ಕಾಲದ ಶಾಸನಗಳಲ್ಲಿ ಕ್ರಿಶ ಪ್ರಾರಂಭದಲ್ಲಿ ಈ ದೇಶಕ್ಕೆ ವಿದೇಶದಿಂದ ಬಂದ ಪ್ರವಾಸಿಗಳ ವರದಿಗಳಲ್ಲಿ ಈ ಕ್ಷೆತ್ರದ ವಿಚಾರ ಕೊಟ್ಟಿದ್ದಾರೆ.

ಪುರಾಣ ಸಾಹಿತ್ಯ

ಒಮ್ಮೆ ಭಂಡಾಸುರ ಎಂಬ ದಾನವನು ಶಿವನನ್ನು ಒಲಿಸಿ ಶಕ್ತಿಶಾಲಿಯಾಗಿ ತ್ರಿಲೋಕಗಳನ್ನು ಬಾಧಿಸತೊಡಗಿದನು. ಹೀಗೆ ಅನೇಕ ವರುಷ ಕಳೆದಾಗ ಒಮ್ಮೆ ನಾರದ ಮಹರ್ಷಿಗಳು ಇಂದ್ರಾದಿಗಳ ಬಳಿಗೆ ಬಂದರು. ಭಂಡಾಸುರ ಮುಂತಾದವರ ನಾಶಕ್ಕೆ ಶ್ರೀ ಪರಾಶಕ್ತಿಯೇ ಸಮರ್ಥೆಯಾದುದರಿಂದ ಅವಳನ್ನು ಅವತರಿಸುವಂತೆ ಇಂದ್ರಾದಿ ಸಮಸ್ತ ದೇವತೆಗಳನ್ನು ಹಿಮಾಲಯಕ್ಕೆ ಗುಪ್ತವಾಗಿ ಕರೆದೊಯ್ದರು. ಅಲ್ಲಿ ಅವರಿಗೆಲ್ಲಾ ಮಂತ್ರೋಪದೇಶ ಮಾಡಿ ಶ್ರೀ ದೇವಿಯ ಧ್ಯಾನ ಪೂಜೆ ತಪಸ್ಸುಗಳಲ್ಲಿ ಅವರು ನಿರಂತರರಾಗುವಂತೆ ಮಾಡಿದರು. ಕೆಲವು ಕಾಲ ಕಳೆದಾಗ ಶುಕ್ರಚಾರ್ಯರು ಈ ತಪಸ್ಸುನ್ನರಿತು ವಿಘ್ನವನ್ನೆಸಗುವಂತೆ ದಾನವರನ್ನೆಚ್ಚರಿಸಿದರು. ಭಂಡಾಸುರನು ದಾನವರೊಡನೆ ದೇವತೆಗಳ ಮೇಲೆ ಶರ ಪ್ರಯೋಗ ಮುಂತಾದ ತೊಂದರೆಗಳನ್ನುಂಟು ಮಾಡತೊಡಗಿದರು. ಸಮಸ್ತ ದೇವತೆಗಳೂ ಶ್ರೀ ದೇವಿಗೆ ಅತ್ಮಾರ್ಪಣ ಮಾಡುವ ವಿಚಾರ ಮಾಡಿದರು. ‘ಬದುಕಿದರೆ ನಮಗೆ ಸ್ವರ್ಗ, ಇಲ್ಲವಾದರೆ ದೇವಿಲೋಕದ ಮೋಕ್ಷ’ ಶ್ರೀ ದೇವಿಯು ತನಗೆ ಮೆಚ್ಚಿದುದನ್ನು ನಮಗೆ ಕರುಣಿಸಲಿ ಎಂದು ನಿರ್ಧರಿಸಿ ತಮ್ಮ ದೇಹಗಳನ್ನು ಯಜ್ಞಕುಂಡದಲ್ಲಿ ಪೂರ್ಣಾಹುತಿಯಾಗಲು ಸಿದ್ಧರಾದರು. ಬಳಿಕ ಚಕ್ರದ ಮಧ್ಯದಲ್ಲಿ ಸಾವಿರಾರು ಸೂರ್ಯರಂತೆ ಪ್ರಕಾಶಿಸುತ್ತಾ ಸಾವಿರಾರು ಚಂದ್ರರಂತೆ ಶೀತಕಿರಣಗಳನ್ನು ಪಸರಿಸುತ್ತಲೂ ಇರುವ ಸೌಂದರ್ಯದ ಗಣಿಯೆನಿಸಿದ ಸ್ತ್ರೀ ಪಾಶಾಂಕುಶಶರಚಾಪಗಳೆಂಬ ಚತುರಾಯುಧಗಳನ್ನು ಚತುರ್ಭುಜಗಳಲ್ಲಿ ಧರಿಸಿಕೊಂಡು ಮಂದಹಾಸದಿಂದ ದೇವತೆಗಳನ್ನು ಆನಂದಗೊಳಿಸುತ್ತಾ ಪ್ರತ್ಯಕ್ಷವಾದಳು. ಇದುವೇ ಶ್ರೀ ಭವನೇಶ್ವರಿಯ ಲಲಿತಾವತಾರ. ಇಂದ್ರಾದಿಗಳು ಬೃಹಸ್ಪತಿ ಸಮೇತರಾಗಿ ಶ್ರೀ ದೇವಿ ದಿವ್ಯ ಮೂರ್ತಿಯನ್ನು ಕಣ್ತುಂಬ ಕಂಡರು, ದಂಡ ಪ್ರಣಾಮವನ್ನೆಸದರು. ದೇವಿಯ ಕರುಣಾ ಕಟಾಕ್ಷದ ಮಾತ್ರದಿಂದ ದೇವತೆಗಳ ಮನೋವ್ಯಥೆ ಮಾಯವಾಯಿತು. ಅವರ ದೇಹಗಳು ವಜ್ರದಂತೆ ದೃಢವಾಗಿ ಅವರು ಬಲಶಲಿಗಳಾದರು. ‘ಜಗಜ್ಜನನಿ ಅನಾಥರಾದ ನಮ್ಮನ್ನು ರಕ್ಷಿಸು ತಾಯಿ’ ಎಂದು ಮೊರೆಯಿಟ್ಟರು. ಲಲಿತಾದೇವಿಯು “ದೇವೇಂದ್ರ, ಪ್ರಚಂಡ ಪರಾಕ್ರಮಿಯಾದ ಆ ಭಂಡನನ್ನು ನಾನೇ ಶೀಘ್ರವಾಗಿ ಸಂಹರಿಸುವೆನು, ನಿವೇಲ್ಲರೂ ನಿರ್ಭಯರಾಗಿರಿ” ಎಂದು ಆಭಯವಿತ್ತಳು.

ಭಂಡಾಸುರನ ನಗರವು ಶ್ರೀ ದೇವಿಯ ಸೇನೆಯ ಕೋಲಾಹಲದಿಂದ ಎಚ್ಚರಗೊಂಡಿತು. ದಾನವರೆಲ್ಲ ದಿಗಿಲುಗೊಂಡರು. ಭಂಡಾಸುರನು ವೀರರನ್ನು ಯುದ್ದಕ್ಕೆ ಹೊರಡಿಸಿದನು. ನಾಲ್ಕು ದಿವಸಗಳ ಯುದ್ದದಲ್ಲಿ ಭಂಡಾಸುರನ ತಮ್ಮಂದಿರು, ಅಳಿಯಂದಿರು, ಮಕ್ಕಳು, ಸೇನಾದಿಪತಿಗಳು ಎಲ್ಲರೂ ಮಹಾದೇವಿಯ ಮಂತ್ರಿಣಿ ಮುಂತಾದ ಸೈನಿಕೆಯರಿಂದ ನಾಶ ಹೊಂದಿದರು. ಐದನೇಯ ದಿನ ಬೆಳಗಿನಿಂದ ಶ್ರೀ ದೇವಿ ಹಾಗು ಭಂಡಾಸುರರೊಳಗೆ ಭಯಂಕರವಾದ ಮಹಾಯುದ್ಧವು ನಡೆದು ಸಾಯಂಕಾಲ ಮಹಾದೇವಿಯು ಭಂಡಾಸುರನನ್ನು ಅವನ ಕುಟುಂಬ ಸಮೇತವಾಗಿ ಶೂನ್ಯಕ ನಗರವನ್ನೂ ಸಂಪೂರ್ಣ ನಾಶಗೊಳಿಸಿದಳು. ಮೂರು ಲೋಕವು ಶಾಂತಿ ಸುಖಗಳಲ್ಲಿ ಮುಳುಗಿತು. ಆಮೇಲೆ ತ್ರಿಮೂರ್ತಿಗಳು ವಿಶ್ವಕರ್ಮ ಮಯಾಸುರರ ಮೂಲಕವಾಗಿ ಶ್ರೀ ರಾಜರಾಜೇಶ್ವರಿ ದೇವಿಯ ನಿತ್ಯ ನಿವಾಸಕ್ಕಾಗಿ ಮಣಿ ದ್ವೀಪದ ಭುವನೇಶ್ವರೀ ಭವನದಂತೆ ಸಕಲ ಸೌಭಾಗ್ಯ ವೈಭವಗಳಿಂದ ಶೋಭಿಸುತ್ತಿರುವ ಶ್ರೀನಗರವೆಂಬ ಹೆಸರಿನ ಪಟ್ಟಣಗಳನ್ನು ಹಿಮಾಲಯ ಮೊದಲಾದ ಹದಿನಾರು ಕ್ಷೇತ್ರಗಳಲ್ಲಿ ನಿರ್ಮಾಣ ಮಾಡಿಸಿದರು.

ಶ್ರೀದೇವಿ ಮೂರ್ತಿ ಪ್ರತಿಷ್ಠೆ

ಇಂತಹ ಶ್ರೀ ರಾಜರಾಜೇಶ್ವರಿ ದೇವಿಯ ಮೃಣ್ಮಯ ಮೂರ್ತಿಯನ್ನು ಆದಿಯಲ್ಲಿ ಪರಿವಾರದೊಂದಿಗೆ ನಿರ್ಮಿಸಿ ಪ್ರತಿಷ್ಠಾಪಿಸಿ ಪೂಜಿಸಿದ ಮಹಾಪುರುಷನು ಧನ್ಯರಲ್ಲಿ ಧನ್ಯನು. ಈ ಮೂರ್ತಿಯನ್ನು ಸುರಥ ಮಹಾರಾಜನು ಪ್ರತಿಷ್ಠಾಪಿಸಿ ಪೂಜಿಸಿರುವನು ಎಂದು ಜನಜನಿತವಾಗಿದೆ.

ಒಂದಾನೊಂದು ದಿನ ರಾಜನು ಸುಮೇಧ ಮಹರ್ಷಿಯ‌‌ ತಪೋವನದಲ್ಲಿ ಸಂಚರಿಸುತ್ತಾ ತನ್ನ ರಾಜ್ಯಕೋಶ, ಆನೆ, ಕುದುರೆ, ಸೈನ್ಯ, ಹೆಂಡತಿ ಮಕ್ಕಳು ಮುಂತಾದವರನ್ನು ಸ್ಮರಿಸುತ್ತಾ ದುಃಖಿಸುತ್ತಿದ್ದನು. ಅಷ್ಟರಲ್ಲೇ ಒಬ್ಬ ಮನುಷ್ಯನು ಅಲ್ಲಿಗೆ ಬಂದು ಆತನನ್ನು ವಂದಿಸಿದನು. ರಾಜನು ಅವನ ಸ್ಥಿತಿಗತಿಗಳ ಕುರಿತು ಪ್ರಶ್ನಿಸಿದನು. “ಮಹಾರಾಜ, ನಾನು ವೈಶ್ಯನು. ಸಮಾಧಿ ಎಂದು ನನ್ನ ಹೆಸರು. ನಾನು ಬಹಳ ಧನಿಕನಾಗಿದ್ದೆನು. ಆದರೆ ನನ್ನ ಹೆಂಡತಿ ಮಕ್ಕಳು ಹಣದಾಸೆಯಿಂದ ನನ್ನನ್ನು ತೊಲಗಿಸಿರುವರು. ನಾನೀಗ ಧನ, ಕುಟುಂಬಹೀನನಾಗಿ ದುಃಖಿಸುತ್ತಾ ವನ ಪ್ರವೇಶ ಮಾಡಿರುವೆನು. ಆದರೆ ನನಗೆ ನನ್ನ ಹೆಂಡತಿ ಮಕ್ಕಳು ನಾಡಿನಲ್ಲಿ ಸುಖಿಗಳಾಗಿರುವರೋ, ದುಃಖಿಗಳಾಗಿರುವರೋ? ನನ್ನ ಮಕ್ಕಳು ಉತ್ತಮ ನಡೆತೆಯಿಂದಿರುವರೋ, ದುರ್ನಡತೆಯಿಂದಿರುವರೋ ಎಂಬ ವಾರ್ತೆಯನ್ನು ತಿಳಿಯಲಾರದೆ ಮನ ಮರುಗುತ್ತಿದೆ” ಎಂದನು. ಇದನ್ನು ಕೇಳಿ ಸುಮೇಧ ಮಹರ್ಷಿಯು ಇಬ್ಬರಿಗೂ ದೇವಿಯನ್ನು ಆರಾಧಿಸುವ ವಿಧಿವಿಧಾನಗಳನ್ನು ದೇವಿಸೂಕ್ತವೆಂಬ ಮಹಾಮಂತ್ರವನ್ನು ಉಪದೇಶಿಸಿದನು. ಇಬ್ಬರೂ ದೇವಿದರ್ಶನಾಪೇಕ್ಷೆಯಿಂದ ಮೃಣ್ಮಯದ ದೇವಿ ಮೂರ್ತಿಯನ್ನು ಸಪರಿವಾರವಾಗಿ ತಂತ್ರಶಾಸ್ತ್ರ ಶಿಲ್ಪಶಾಸ್ತ್ರಗಳಿಗನುಗುಣವಾಗಿ ನಿರ್ಮಾಣ ಮಾಡಿಕೊಂಡರು. ಸುಮೇಧ ಮಹರ್ಷಿ ಉಪದೇಶಿಸಿದ ಉತ್ತಮತರವಾದ “ನಮೋದೇವ್ಯೈ ಮಹಾದೇವ್ಯೈ” ಎಂದು ಪ್ರಾರಂಭವಾಗುವ ದೇವಿ ಸೂಕ್ತವನ್ನು ಪಠಿಸುತ್ತಾ ಆ ಮೂರ್ತಿಯಲ್ಲಿ ಮಹಾಕಾಳೀ, ಮಹಾಲಕ್ಷ್ಮೀ, ಮಹಾಸರಸ್ವತೀ ದೇವಿಯರ ಸಮಷ್ಟಿ ಶಕ್ತಿ ರೂಪಿಣಿಯಾದ ಚಂಡಿಕಾದೇವಿಯನ್ನು ಆರಾಧಿಸತೊಡಗಿದರು.

ಪೊಳಲಿಯಲ್ಲಿ ಈಗಲೂ ಹರಿಯುತ್ತಿರುವ ಫಲ್ಗುನೀ ನದಿಯ ಪುಳಿನದಲ್ಲೇ ತಪಸ್ಸನ್ನಾಚರಿಸಿದ್ದೆಂತಲೂ ಅವರು ನಿರ್ಮಿಸಿದ ಸಪರಿವಾರದ ಮೃಣ್ಮಯ ಮೂರ್ತಿಯೇ ಪೊಳಲಿ ದೇವಾಲಯದಲ್ಲಿರುವ ಶ್ರೀ ರಾಜರಾಜೇಶ್ವರಿಯ ಮೂರ್ತಿಯೆಂತಲೂ ಬಹಳ ಹಿಂದಿನ ಕಾಲದಿಂದಾರಭ್ಯ ಹೇಳುತ್ತಾ ಬಂದಿದ್ದಾರೆ. ಆದುದರಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ಮೂರ್ತಿಯು ಮಾರ್ಕಂಡೇಯ ಪುರಾಣ ಪ್ರಸಿದ್ಧವಾದುದು. ಆದುದರಿಂದಲೇ ಅದು ಬಹಳ ಪುರಾತನವೆಂಬುದರಲ್ಲಿ ಅನುಮಾನವಿಲ್ಲ.

ಹಬ್ಬಗಳು ಮತ್ತು ಉತ್ಸವಗಳು

ಈ ದೇವಾಲಯದ ನಿತ್ಯ ನೈಮಿತ್ತಿಕ ವಿಧಿ ವಿಧಾನಗಳು ದುರ್ಗಾಗಮ ಮತ್ತು ಸ್ಕಂದಾಗಮ ಪ್ರಕಾರವಾಗಿ ನಡೆಯಿಸಲ್ಪಡುವುದು.

ಸಿಂಹ ಸಂಕ್ರಮಣ

ಈ ದಿವಸ ಪೊಳಲಿ ಸಾವಿರ ಸೀಮೆಯ ಗುತ್ತಿನವರು ಬೆಳಗ್ಗೆ ದೇವಾಲಯಕ್ಕೆ ಜೋಡುತೆಂಗಿನ ಕಾಯಿಯನ್ನು ತರಬೇಕು, ಆಮೇಲೆ ಉಳಿದವರು ಹಣ್ಣುಕಾಯಿಗಳನ್ನು ಸಮರ್ಪಿಸುವ ಪದ್ದತಿಯಾಗಿದೆ. ಆ ದಿನ ಉಳಿಪಾಡಿಗುತ್ತಿನ ಭೂತ ಸ್ಥಾನಕ್ಕೆ ಕೊಡಮಣಿತ್ತಾಯ ದೈವದ ಭಂಡಾರವನ್ನು ಕೊಂಡು ಹೋಗಿ ಅಲ್ಲಿ ಸಂಕ್ರಾಂತಿ ಹಬ್ಬವಾಗಿ ಮರುದಿನ ಭಂಡಾರವನ್ನು ದೇವಾಲಯಕ್ಕೆ ತಿರುಗಿ ತರುವ ಪದ್ದತಿಯಾಗಿದೆ.

ನವರಾತ್ರಿ

ಇದು ಆಶ್ಚಯುಜ ಪಾಡ್ಯದಿಂದ ನವಮಿಯವರೆಗೆ ಒಂಭತ್ತು ದಿವಸಗಳ ಕಾಲ ರಾತ್ರಿ ಹೊತ್ತು ನಡೆಯುವ ಉತ್ಸವ ಆದುದರಿಂದ ಇದಕ್ಕೆ “ನವರಾತ್ರ”ವೆಂದು ಹೆಸರು. ರಾತ್ರಿಗೆ ಪಾಡ್ಯವಿರುವ ಆಶ್ವಿಜ ದಿನ ಮೊದಲುಗೊಂಡು ನವಮಿಯವರೆಗೆ ಶ್ರೀ ದೇವಿಗೆ ನಿತ್ಯ ಪೂಜೆಯಲ್ಲದೆ ನವರಾತ್ರಿಯ ಬಗ್ಗೆ ಪ್ರತ್ಯೇಕ ವಿಶೇಷ ಪೂಜೆ ನಡೆಯುವುದು. ಪಾಡ್ಯದಂದು ಅಮುಂಜೆಗುತ್ತ ಹಾಗೂ ಮೂಲಾ ನಕ್ಷತ್ರದಂದು ಉಳಿಪಾಡಿಗುತ್ತಿನವರ ರಂಗಪೂಜೆಯಿದೆ. ನವರಾತ್ರಿ ಒಂಭತ್ತು ದಿನಗಳಲ್ಲಿ ವೇದ ಪಾರಾಯಣ, ಚಂಡಿಕಾಯಾಗ, ಕುಂಕುಮಾರ್ಚನೆ, ಸಂತರ್ಪಣೆಗಳು ವಿಧಿವತ್ತಾಗಿ ನಡೆಯುತ್ತದೆ. ಇದರಲ್ಲಿ ಮಹಾನವಮಿಯ ದಿವಸ (ಉತ್ಥಾನ) ವಿಶೇಷ ಪೂಜೆ, ಸುವಾಸಿನ್ನರ್ಚನೆ ಮುಂತಾದವುಗಳು ನಡೆಯಿಸಲ್ಪಟ್ಟು ಹಬ್ಬವು ಸಮಾಪ್ತಿಗೊಳ್ಳುವುದು.

ದೀಪಾವಳಿ

ಈ ದಿನ ಕೊಡಮಣಿತಾಯನ ಭಂಡಾರ ಉಳಿಪಾಡಿಗೆ ಹೋಗಿ ಅಲ್ಲಿ ಸ್ಥಾನದಲ್ಲಿ ದೀಪೋತ್ಸವ (ತುಡರ ಬಲಿ) ಆಗಿ ರಾತ್ರಿ ಹಿಂತಿರುಗಿ ದೇವಾಯಲಕ್ಕೆ ಭಂಡಾರ ಬಂದ ಬಳಿಕ ಆ ದಿನ ರಾತ್ರಿ ದೊಡ್ಡ ರಂಗಪೂಜೆ ನಡೆಯುವುದು. ಬಳಿಕ ನಟ್ಟೋಜರು ಹೊಸ ಮಡುಕೆಯಲ್ಲಿ ಹೊಸ ಅವಲಕ್ಕಿಯನ್ನು ನೈವೇದ್ಯಕ್ಕಿಡುವರು. ಬಳಿಕ ಎಲ್ಲ ಉರುಳಿಗಳಲ್ಲಿಯೂ ಅವಲಕ್ಕಿ ಹಾಕಿ ಎಲ್ಲ ದೇವರಿಗೆ ನೈವೇದ್ಯಕ್ಕಿಡುವರು. ನೈವೇದ್ಯವಾದ ಬಳಿಕ ಮಹಾಪೂಜೆಯಾಗಿ ದೇವರ ಬಲಿ ಹೊರಟು ಜಾತ್ರೆ ನಡೆಯುವುದು. ಬಳಿಕ ದೇವಾಲಯಕ್ಕೆ ಸಂಬಂಧಪಟ್ಟ ಭಟ್ರು ಮೊದಲುಗೊಂಡು ಗುತ್ತಿನವರೆಗೆ ಎಲ್ಲರಿಗೂ ಅವಲಕ್ಕಿ ಹಂಚುತ್ತಾರೆ. ಇದಕ್ಕೆ ಬಳ್ಳಬಜಿಲು ಎನ್ನುತ್ತಾರೆ. ಈ ದಿನ ಮೊದಲ್ಗೊಂಡು ಹತ್ತನೇದ್ಯದವರೆಗೆ ಪ್ರತಿ ನಿತ್ಯದಲ್ಲೂ ಮೂರು ವೇಳೆ ಪೂಜೆಯಾದ ಕೂಡಲೆ ನಿತ್ಯ ಬಲಿ ನಡೆಯುವುದು.

ಲಕ್ಷದೀಪೋತ್ಸವ

ಇದು ಕಾರ್ತಿಕ ಬಹುಳ ಅಮವಾಸ್ಯೆಯ ದಿನ ನಡೆಯುವುದು. ಆ ದಿನ ರಾತ್ರಿ ರಂಗ ಪೂಜೆಯಾಗಿ ಬಲಿಹೊರಟು ಜಾತ್ರೆ ನಡೆಯುವುದು. ಅದೇ ವೇಳೆಗೆ ಲಕ್ಷದೀಪಗಳನ್ನು ದೇವಾಯಲದ ಸುತ್ತಲೂ ಇರಿಸುವುದರಿಂದ ಲಕ್ಷದೀಪವೆಂದು ಈ ಜಾತ್ರೆಗೆ ಹೆಸರಾಗಿದೆ.

ವಾರ್ಷಿಕ ಜಾತ್ರೆ

ಇದು ಮೀನಾ ಮೊದಲನೆ ದಿನ ಮಧ್ಯಾಹ್ನದ ಪೂಜೆಯ ವೇಳೇ ನಟ್ಟೋಜರು ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿ ಕಾಣಿಕೆ ಇಡುವ ಹಣವನ್ನು ಕ್ಷೇತ್ರದಿಂದ ಪಡೆದುಕೊಂಡು ನೇರವಾಗಿ ಪುತ್ತಿಗೆ ಅರಸುಮನೆತನದ ಜೋಯಿಸರ ಮನೆಗೆ ಹೋಗಿ ಅಲ್ಲಿ ತಂಗುವರು. ಮರುದಿನ ಬೆಳಿಗ್ಗೆ ಸ್ನಾನಾದಿಗಳನ್ನು ಪೂರೈಸಿ ಜೋಯಿಸರು ರಾಶಿ ಇಟ್ಟಲ್ಲಿ ಕಾಣಿಕೆ ಮೌಲ್ಯವನ್ನು ನಟ್ಟೋಜರು ಇರಿಸಿ ದಿನ ನಿಶ್ಚಯಕ್ಕೆ ಮುಂದಾಗುವರು. ಕಾಣಿಕೆ ಇಟ್ಟ ರಾಶಿಯ ಆಧಾರದ ಮೇಲೆ ಜೋಯಿಸರು ಆ ವರ್ಷದ ಅವಭೃತದ ದಿನವನ್ನು ನಿಶ್ಚಯಿಸುತ್ತಾರೆ. ಈ ದಿನವನ್ನು ಹಿಂಗಾರದ ಹಾಳೆಯೊಂದಿಗೆ ನಟ್ಟೋಜರು ಕಿವಿಯಲ್ಲಿ ಗೌಪ್ಯವಾಗಿ ಜೋಯಿಸರು ಸೂಚಿಸುತ್ತಾರೆ ನಟ್ಟೋಜರು ಹಿಂಗಾರದ ಹಾಳೆಯೊಂದಿಗೆ ಸುಮಾರು ರಾತ್ರಿ ೮ಗಂಟೆಯ ಮುಂಚಿತವಾಗಿ ದೇವಸ್ಥಾನವನ್ನು ಬಂದು ಸೇರುತ್ತಾರೆ. ಆ ದಿವಸ ನಟ್ಟೋಜರು ಬಂದು ಹಿಂಗಾರದ ಹಾಳೆಯನ್ನು ಭಟ್ಟರಿಗೆ ಒಪ್ಪಿಸಿ ಕಾಣಿಕೆ ಕೊಟ್ಟು ಪ್ರಸಾದ ಸ್ವೀಕರಿಸುವವರೆಗೆ ಯಾರಿಗೂ ಪ್ರಸಾದ ಕೊಡುವ ಪದ್ದತಿಯಿಲ್ಲ.

ಉತ್ಸವಾಲಂಕಾರಕ್ಕಾಗಿ ಪ್ರಾರ್ಥಿಸಿ ಉತ್ಸವದ ಮೂರ್ತಿಯನ್ನು ಕೇಪಳ ಹೂವಿನ ದಂಡೆಯಿಂದ ಅಲಂಕರಿಸಿ “ಬಯ್ಯಮಬಲಿ” ಹೊರಡುವುದು. ಇದರ ಉಡಿಕೆ ಸುತ್ತಿನ ವೇಳೆಗೆ ಹರಿಕೆ ಪುಷ್ಪ ಪೂಜೆ ಇತ್ಯಾದಿ ಸೇವೆಗಳು ನಡೆಯುತ್ತವೆ. ಈ ಬಳಿಕ ನಿತ್ಯ ರಾತ್ರಿ ಪೂಜೆ ಬಲಿ ನಡೆಯಲಿದೆ. ಭೂತದ ಬಲಿಯಾಗಿ ಪ್ರಾತಃಕಾಲದಲ್ಲಿ ದೀಪದ ಬಲಿ ಜರುಗುತ್ತದೆ. ಹೊತ್ತಿಗೆ ಹರಕೆ ಹೇಳಿದ ಮಕ್ಕಳ ಕಂಚಿಲು ಸೇವೆ ನಡೆಯುತ್ತದೆ. ಆ ಬಳಿಕ ನಿಯಮದಂತೆ ನಿರ್ದಿಷ್ಠ ವ್ಯಕ್ತಿಗಳಿಗೆ ಪ್ರಸಾದ ವಿತರಣೆಯಾಗಿ ಚಿಕ್ಕರಥೋತ್ಸವದೊಂದಿಗೆ ಒಳಗೆ ಬರುವುದು. ಪೀಠಪೂಜೆಯಾದೊಡನೆ ನಟ್ಟೋಜರು ಹಿಂದಿನ ದಿನ ನೀಡಿದ ಹಿಂಗಾರವನ್ನು ಭಟ್ಟರು ನಟ್ಟೋಜರ ಕೈಗೆ ಕೊಡುವರು. ಈ ಸಂದರ್ಭದಲ್ಲಿ ಸ್ಥಾನದವರು ಗುತ್ತಿನವರು ಅವರವರ ಸ್ಥಾನದಲ್ಲಿ ಕುಳಿತ ಬಳಿಕ ಉಗ್ರಾಣಿ ಮುಖಾಂತರ ಸೋಮಕಾಸುರ, ರಂಜಕಾಸುರ ವೇಷಧಾರಿಗಳಾದ ಪಂಬದರಿಗೆ ಗೋಪುರಕ್ಕೆ ಬರುವಂತೆ ಹೇಳಿ ಕಳುಹಿಸುವರು. ಅವರು ಬಂದು ಸಾವಿರ ಸೀಮೆಯವರಿಂದ ಅನುಜ್ಞೆಪಡೆದು “ನಂದ್ಯದ ಬೆಳ್ಚಡ” ಮನೆಯಿಂದ ತಂದಿರಿಸಿದ ಮೂರ್ತಿಯನ್ನು ತಲೆಯಲ್ಲಿ ಹೊತ್ತುಕೊಳ್ಳುವರು. ಆಗ ನಂದ್ಯದ ಬೆಳ್ಚಡ ಮನೆತನದವರು ಮೂರ್ತಿಯನ್ನು ಸಂಪ್ರದಾಯದಂತೆ ಮೂರು ಸುತ್ತು ತಿರುಗಿಸುವರು. ಆಮೇಲೆ ಮೂರ್ತಿಯನ್ನು ಕೆಳಗಿಳಿಸಿ ಮಂಜೆಬಾವಿ (ಪ್ರಮಾಣಬಾವಿ) ಗೆ ಒಂದು ಸುತ್ತು ಬಂದು ಗೋಪುರದ ಬಾಗಿಲಿನ ಬಳಿ ನರ್ತಿಸುವರು. ಆಗ ನಟ್ಟೋಜರು ದೇವಸ್ಥಾನದಿಂದ ಹಿಡಿದುಕೊಂಡು ಬಂದ ಹಿಂಗಾರದೊಂದಿಗೆ ದುರ್ಗಾ ದೇವಸ್ಥಾನದ ಹಿಂಬದಿಯಲ್ಲಿ ನಿಂತಿರುತ್ತಾರೆ. ಅಲ್ಲಿಗೆ ವಾಲಗದ ಶೇರಿಗಾರನು ಹೋಗುತ್ತಾನೆ. ಅವನ ಕೈಗೆ ಹಿಂಗಾರದ ಹಾಳೆಯನ್ನು ನಟ್ಟೋಜರು ಕೊಟ್ಟು ಆವಭೃಥದ ದಿನವನ್ನು ಗುಟ್ಟಾಗಿ ಕಿವಿಯಲ್ಲಿ ತಿಳಿಸುತ್ತಾರೆ. ಹಿಂಗಾರದೊಂದಿಗೆ ಶೇರಿಗಾರನು ಗೋಪುರದ ಎದುರಿಗೆ ಬಂದು ‘ಸಾದಗ” (ನರ್ತನ) ಮಾಡುತ್ತಿರುವ ಪಂಬದರ ಕೈಗೆ ಹಿಂಗಾರವನ್ನು ಕೊಟ್ಟು ಕಿವಿಯಲ್ಲಿ ರಹಸ್ಯವಾಗಿ ಆವಭೃಥದ ದಿನವನ್ನು ಹೇಳುತ್ತಾನೆ. ಆ ಬಳಿಕ ಪಂಬದರು ಗಂಟೆ ಬಾರಿಸಿ ನೆರೆದ ಸಾವಿರ ಸೀಮೆಯವರಿಗೆ ಮನದಟ್ಟಾಗುವಂತೆ ಆವಭೃಥದ ದಿನವನ್ನು ಗಟ್ಟಿಯಾಗಿ ಹೇಳುತ್ತಾರೆ. ಅಲ್ಲಿಂದ ಪಂಬದರು ನೇರವಾಗಿ ಅಖಿಲೇಶ್ವವರ ದೇವಸ್ಥಾನಕ್ಕೆ ಹೋಗಿ ಆವಭೃಥದ ದಿನವನ್ನು ಗಂಟೆಬಾರಿಸಿ ಡಂಗುರ ಸಾರುವರು. ತನ್ಮಧ್ಯೆ ಸ್ಥಾನದವರಿದ್ದು ಗುತ್ತಿನವರಿಂದ ಧ್ವಜ ಸ್ಥಂಭಕ್ಕೆ ತೆಂಗಿನಕಾಯಿ ಒಡೆಯುವ ಕರ‍್ಯಕ್ರಮ ಜರುಗುತ್ತದೆ. ಇದಕ್ಕೆ ‘ತಪ್ಪಂಗಾಯಿ’ ಎನ್ನುತ್ತಾರೆ. ಮರುದಿನ ರಾತ್ರೆ “ಬಯ್ಯನಬಲಿ” ಹೊರಟು, ರಾತ್ರಿ ಮಹಾಪೂಜೆಯಾಗಿ ನಿತ್ಯಬಲಿ, ಭೂತಬಲಿ, ದೀಪಬಲಿಯಾಗಿ ಹಿಂದಿನ ದಿನದಂತೆ ವೇಷಧರಿಸಿದ ಪಂಬದರು ಗೋಪುರದ ಬಾಗಿಲಿನ ಬಳಿ ಆವಭೃಥದ ದಿನವನ್ನು ಗಂಟೆ ಬಾರಿಸಿ ಗಟ್ಟಿಯಾಗಿ ಹೇಳಿ ತೆಂಕು ದಿಕ್ಕಿಗೆ ಹೋಗಿ “ಸೂಲಕಿ ಪಡ್ಪು” ಎಂಬಲ್ಲಿ ಗಂಟೆ ಬಡಿದು ಮೂರು ಬಾರಿ ಆವಭೃಥದ ದಿನವನ್ನು ಗಟ್ಟಿಯಾಗಿ ಹೇಳುವರು. ಅಲ್ಲಿಂದ ಪಂಬದರು ನಂದ್ಯದ ಬೆಳ್ಚಡರ ಮನೆಗೆ ಹೋಗುವರು, ಅಲ್ಲಿ ಅವರಿಗೆ ಊಟೋಪಚಾರ ರ‍್ಯಾದೆ ನಡೆಯುತ್ತದೆ. ಪಂಬದರು ದೇವಸ್ಥಾನದಿಂದ ಹೋದ ಬಳಿಕ ಗುತ್ತಿನವರಿದ್ದು ಸ್ಥಾನದವರಿಂದ ಧ್ವಜಸ್ಥಂಭಕ್ಕೆ ತೆಂಗಿನಕಾಯಿ ಒಡೆಯುವ ಸೇವೆ (ತಪ್ಪಂಗಾಯಿ) ನಡೆಯುತ್ತವೆ.

ದಂಡಮಾಲೆ ಉತ್ಸವ

ಪ್ರತಿ ಐದು ಹತ್ತು ಹದಿನೈದು ಇಪ್ಪತ್ತು ಇಪ್ಪತ್ತೈದನೆ ದಿವಸಗಳಲ್ಲಿ ಕೇಪಳ ಹೂವಿನ ಹಳೆದಂಡೆ ಮಾಲೆಯನ್ನು ಕಳಚಿ ಹೊಸ ದಂಡೆ ಮಾಲೆಯನ್ನು ಕಟ್ಟಿ ದಂಡೆಮಾಲೆ ಉತ್ಸವಗಳು ನಡೆಯುತ್ತವೆ.

ಕರ ಉತ್ಸವ

ರಥೋತ್ಸವದಂದು ಪೂರ್ವಾಹ್ನ ವಿಧಿವತ್ತಾಗಿ ಪ್ರಾರ್ಥಿಸಿ ಮಹಾಪೂಜೆ ನಡೆದು ರಥಾರೋಹಣವಾಗುವುದು. ತದನಂತರ ರಥವನ್ನು ಸಾಂಕೇತಿಕವಾಗಿ ಎಳೆಯುವರು. ಸಂಜೆ ರಥದಲ್ಲಿ ದೇವರಿಗೆ ಪೂಜೆಯಾದ ಬಳಿಕ ಗುತ್ತಿನವರಿಂದ ಹಾಗೂ ಭಕ್ತಾಭಿಮಾನಿಗಳಿಂದ ತೆಂಗಿನಕಾಯಿ ಒಡೆದು ದೇವಸ್ಥಾನದ ಹೊರವಲಯದಲ್ಲಿ ರಥ ನಿಲ್ಲಿಸಲಾಗುವುದು. ಆಮೇಲೆ ಮಂಗಳಾರತಿಯಾಗಿ ರಥವನ್ನು ಎಳೆದು ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಲಾಗುವುದು. ಇದಾದ ಬಳಿಕ ಸ್ಥಾನದವರಿಗೆ, ಗುತ್ತಿನವರಿಗೆ, ಭಕ್ತಾಭಿಮಾನಿಗಳಿಗೆ ಪ್ರಸಾದ ವಿತರಣೆ. ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಹೊರಗೆ ಹಾಗೂ ಒಳಗೆ ಒಂದೊಂದು ಸುತ್ತು ಬಲಿಯಾಗಿ ಗರ್ಭಗುಡಿಗೆ ಪ್ರವೇಶಿಸುವುದು. ತದನಂತರ ಪೀಠ ಪೂಜೆಯಾಗಿ ಮಂಗಳಾರತಿಯಾಗುವುದು. ರಾತ್ರೆ ಮಹಾಪೂಜೆ, ಪಲ್ಲವ ಪೂಜೆ, ಭೂತ ಬಲಿ, ಶಯನ, ಕವಾಟ ಬಂಧನ ನಡೆಯುತ್ತದೆ.

ಅವಭೃತ

ಅವಭೃತದಂದು ಸಂಬಂಧದವರಿದ್ದು ವಧಿವತ್ತಾಗಿ ಕವಾಟೋದ್ಘಾಟನೆ. ರಾತ್ರೆಯಲ್ಲಾದ ಹೂವಿನ ಪೂಜೆಯ ಪ್ರಸಾದ ವಿತರಣೆಯಾಗಿ ತುಲಾಭಾರ ಸೇವೆ ನಡೆಯುವುದು. ಬಲಿಹೊರಟು ಒಂದು ಸುತ್ತು ಒಳಗೆ ಒಂದು ಸುತ್ತು ಹೊರಗೆ ಬಲಿಯಾಗಿ ಒಂದು ಸುತ್ತು ಚಂಡೆಯೊಂದಿಗೆ ಆಗಿ ದೇವರನ್ನು ಹೊತ್ತುಕೊಂಡು ಚೆಂಡಿನ ಗದ್ದೆಯವರೆಗೆ ಹೋಗಿ ಪಲ್ಲಕ್ಕಿಯಲ್ಲಿ ಪಾಲ್ಗುಣಿ ನದಿಯ ಕರಿಯಂಗಳ ಎಂಬಲ್ಲಿ ಅವಭೃಥ ಸ್ನಾನವಾಗಿ, ಕಟ್ಟೆಪೂಜೆಯಾಗಿ, ದೇವಸ್ಥಾನಕ್ಕೆ ಬಂದ ಹಾಗೆ ಒಂದು ಸುತ್ತು ಬಲಿಯಾಗಿ ಸನ್ನಿಧಾನದಲ್ಲಿ ಬಲಿ ಮೂರ್ತಿಯೊಂದಿಗೆ ಧ್ವಜಅವರೋಹಣ.

ಮರುದಿನ ಬೆಳಿಗಿನ ಪೂಜೆಯಾಗಿ ಮಧ್ಯಾಹ್ನದ ಪೂಜೆ ಬಲಿ ಇಲ್ಲದೆ ನಡೆಯುವುದು. ರಾತ್ರಿ ಗೋಪುರದಲ್ಲಿ ಕೊಡಮಣಿತಾಯನ ಭಂಡಾರ ಏರಿ ಒಳಗಿನಿಂದ ದೇವರ ಬಲಿ ಹೊರಟು ಕ್ರಮದಂತೆ ಬಲಿನಡೆದು ವಸಂತ ಮಂಟಪದಲ್ಲಿ ಮಂಗಳಸ್ನಾನ, ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ. ಅಮೇಲೆ ಮುಹೂರ್ತ ನೋಡಿ ಸಂಪ್ರೋಕ್ಷಣೆ ಬ್ರಹ್ಮಾರ್ಪಣೆ, ಮಂತ್ರಾಕ್ಷತೆ ಸಂಪ್ರೋಕ್ಷಣೆ ದಿವಸ ಬ್ರಾಹ್ಮಣ ಸಂತರ್ಪಣೆ ನಡೆದು ಮಂತ್ರಾಕ್ಷತೆಯಾಗಿ ಸೀಮೆಯ ಪರವಾಗಿ ಆಮುಂಚೆ ಗುತ್ತಿನವರಿಂದ ಬ್ರಹ್ಮಾರ್ಪಣ. ಉತ್ಸವ ಕೊನೆಗೊಳ್ಳುವುದು.

ಹತ್ತನೇದ್ಯ ಹಬ್ಬ

ತುಳುಭಾಷೆಯಲ್ಲಿ ಇದಕ್ಕೆ “ಪತ್ತನಾಜೆ” ಎನ್ನುತ್ತಾರೆ. ಬೇಸಗೆಯ ಹತ್ತನೆ ದಿನಕ್ಕೆ ಹತ್ತನೇದ್ಯ ಎಂದು ಹೆಸರು. ದ್ಯ ಎಂಬುದು ದ್ಯು ಎಂಬ ಸಂಸ್ಕೃತ ಶಬ್ದದ ಅಪಭ್ರಂಶ. ಇದಕ್ಕೆ ದಿನ ಎಂದರ್ಥ. ಆದರೆ ಬೇಸಗೆಯ ಹತ್ತನೆ ದಿನಕ್ಕೆ ಮಾತ್ರ ಶ್ರೀ ದೇವಿಗೆ ಪೂಜೆಯಾಗಿ ಬಲಿಹೊರಟು ಉಡುಕೆ ಸುತ್ತು, ಚಂಡೆ ಸುತ್ತು ಮುಂತಾದ ಜಾತ್ರೆ ನಡೆಯುವುದು. ಈ ಸಂಧರ್ಭದಲ್ಲಿ ಜೋಡು ತೆಂಗಿನ ಕಾಯಿ ಇಡುವುದು. ನಂತರ ಪ್ರಸಾದ ವಿತರಣೆಯಾಗುವುದು.

ಪೊಳಲಿ ಚೆಂಡು

ಆವಭೃಥದಿಂದ ಏಳು ದಿವಸಗಳ ಮುಂದೆ ಪ್ರಥಮ ಚೆಂಡು ಪ್ರಾರಂಭವಾಗಿ ೫ ದಿವಸಗಳ ಚೆಂಡಿನ ಉತ್ಸವ ನಡೆಯುತ್ತದೆ. ಶ್ರೀ ಕ್ಷೇತ್ರದ ಚೆಂಡಿನ ಉತ್ಸವ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುತ್ತದೆ.

ಪ್ರಥಮ ಚೆಂಡಿನ ಉತ್ಸವದಂದು ರಾತ್ರಿ ಕುಮಾರ ತೇರನ್ನೂ, ಎರಡನೇ ದಿವಸ ಹೂ ತೇರನ್ನೂ, ಮೂರನೇ ದಿನ ಸರ‍್ಯ ಮಂಡಲವೆಂಬ ರಥವನ್ನೂ, ನಾಲ್ಕನೇ ದಿನ ಚಂದ್ರಮಂಡಲವೆಂಬ ತೇರನ್ನೂ ಬಳಸಿ ಜಾತ್ರೆ ನಡೆದರೆ ೫ ನೇ ದಿನ ಆಳು ಪಲ್ಲಕ್ಕಿಯನ್ನು ಬಳಸಿ ಉತ್ಸವ ಜರಗುವುದು. ಜಾತ್ರೆಯು ಸಾವಿರಾರು ಜನರ ಕೂಡುವಿಕೆಯಿಂದ ವಿವಿಧ ವಾದ್ಯದವರೊಂದಿಗೆ ಗಂಭೀರತೆಯಿಂದ ಕೂಡಿ ಶಿಸ್ತು ಬದ್ಧವಾಗಿ ನಡೆಯುವುದು. ಪೊಳಲಿಯ “ಕಡೆ ಚೆಂಡು” ಉತ್ಸವ ಅತ್ಯಂತ ಪ್ರಸಿದ್ಧ.

ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮಶನ್ ಸಿಸ್ಟಮ್

Leave a Comment