ಹಬ್ಬ-ಸಮಾರಂಭಗಳ ಪ್ರಸಂಗಗಳಲ್ಲಿ ಅಥವಾ ಬಿಡುವಿನ ಸಮಯದಲ್ಲಿ ಹುಡುಗಿಯರು ಹಾಗೂ ಸ್ತ್ರೀಯರು ಮದರಂಗಿಯನ್ನು ಬಿಡಿಸಲು ಕುಳಿತುಕೊಳ್ಳುತ್ತಾರೆ. ಮದರಂಗಿಯ ಸಿದ್ಧ (ರೆಡಿ) ಕೋನುಗಳನ್ನು ತಂದು, ಪುಸ್ತಕದಿಂದ ಅಥವಾ ಪೂರ್ವಾನುಭವದಿಂದ ಪರಸ್ಪರರ ಕೈ-ಕಾಲುಗಳ ಮೇಲೆ ಮದರಂಗಿಯನ್ನು ಬಿಡಿಸುತ್ತಾರೆ. ಇತ್ತೀಚೆಗೆ ಮದುವೆ ಸಮಾರಂಭದ ಸಮಯದಲ್ಲಿ ಮದರಂಗಿ ಬಿಡಿಸುವ ವೃತ್ತಿಪರರನ್ನು ಕರೆದು ಮದರಂಗಿಯನ್ನು ಬಿಡಿಸಿಕೊಳ್ಳುತ್ತಾರೆ.
ಈ ಎಲ್ಲ ಪ್ರಸಂಗಗಳಲ್ಲಿ ಮದರಂಗಿಯನ್ನು ಕೇವಲ ಒಂದು ಮನರಂಜನೆಯ ಸಾಧನ ಅಥವಾ ಉಪಚಾರವೆಂದು ನೋಡಲಾಗುತ್ತದೆ. ವೃತ್ತಿಪರರು ಅದನ್ನು ಒಂದು ‘ಹಣ ಸಂಪಾದಿಸುವ ಸಾಧನ’ವೆಂದು ನೋಡುತ್ತಾರೆ; ಆದರೆ ಮದರಂಗಿಯ ಮಹತ್ವವು ಅದಕ್ಕಿಂತ ತುಂಬಾ ಹೆಚ್ಚಿದೆ. ಸಾವಿರಾರು ವರ್ಷಗಳಿಂದ ಹಿಂದೂ ಸಂಸ್ಕೃತಿಯ ಅವಿಭಾಜ್ಯ ಘಟಕವಾಗಿರುವ ಮದರಂಗಿಯು ವಾತಾವರಣದಲ್ಲಿನ ದೇವತೆಗಳ, ಹಾಗೆಯೇ ಇತರ ಸಾತ್ತ್ವಿಕ ಸ್ಪಂದನಗಳನ್ನು ಆಕರ್ಷಿಸಿ ಸ್ತ್ರೀಯರಿಗೆ ಅದರ ಲಾಭವನ್ನು ದೊರಕಿಸಿಕೊಡುತ್ತಾ ಬಂದಿದೆ. ಇದರ ಬಗೆಗಿನ ಮಾಹಿತಿ, ಹಾಗೆಯೇ ಮದರಂಗಿಯನ್ನು ಬಿಡಿಸುವ ಯೋಗ್ಯ- ಅಯೋಗ್ಯ ಪದ್ಧತಿಗಳು, ಪ್ರಸ್ತುತ ಕಾಲದಲ್ಲಿ ಮದರಂಗಿ ಕಲೆಯಲ್ಲಿ ಸೇರಿಕೊಂಡಿರುವ ತಪ್ಪು ಪ್ರಕಾರಗಳು ಮುಂತಾದವುಗಳ ಬಗೆಗಿನ ವಿವರಣೆಯನ್ನು ಇಲ್ಲಿ ಕೊಡಲಾಗಿದೆ.
ಸಾಮಾನ್ಯವಾಗಿ ಮದರಂಗಿಯ ಪುಸ್ತಕಗಳಲ್ಲಿ ಕೊಟ್ಟಿರುವ ಹೆಚ್ಚಿನ ವಿನ್ಯಾಸಗಳು ಅಸಾತ್ತ್ವಿಕವಾಗಿರುತ್ತವೆ. ಅವುಗಳನ್ನು ಬಿಡಿಸುವುದರಿಂದ ತ್ರಾಸದಾಯಕ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ತದ್ವಿರುದ್ಧವಾಗಿ ದೇವತೆಗಳ ತತ್ತ್ವಗಳಿಗೆ ಸಂಬಂಧಿಸಿದ ವಿನ್ಯಾಸಗಳನ್ನು ಬಿಡಿಸುವುದರಿಂದ, ಅವುಗಳನ್ನು ಬಿಡಿಸುವ ವ್ಯಕ್ತಿ ಮತ್ತು ಬಿಡಿಸಿಕೊಳ್ಳುವ ಸ್ತ್ರೀ ಇವರಿಬ್ಬರ ಮೇಲೆಯೂ ಆಧ್ಯಾತ್ಮಿಕ ಉಪಾಯಗಳಾಗುತ್ತವೆ ಮತ್ತು ಅವರಿಗೆ ಆಧ್ಯಾತ್ಮಿಕ ತೊಂದರೆಯಾಗುತ್ತಿದ್ದರೆ, ಅದು ಕಡಿಮೆಯಾಗುತ್ತದೆ.
೧. ‘ಮದರಂಗಿ’ (ಮೇಂದಿ) ಶಬ್ದದ ಉತ್ಪತ್ತಿ ಮತ್ತು ಅರ್ಥ
‘ಮೇಂದಿ’ ಶಬ್ದವು ‘ಮೆಂಧೀ’ ಎಂಬ ಸಂಸ್ಕೃತ ಶಬ್ದದಿಂದ ಬಂದಿದೆ. ಸಂಸ್ಕೃತದಲ್ಲಿ ಮೇಂದಿಗೆ ‘ಮೇಂಧಿಕಾ’ ಎಂದೂ ಹೇಳುತ್ತಾರೆ. ‘ಮೇಂದಿ’ ಅಥವಾ ಮದರಂಗಿ ಶಬ್ದದ ಅರ್ಥವೆಂದರೆ ‘ಹುಡುಗಿಯರ ಕೈ-ಕಾಲುಗಳಿಗೆ ಬಣ್ಣ ಕೊಡುವ ಒಂದು ವನಸ್ಪತಿ’. (ಸಮಾನಾರ್ಥಕ ಶಬ್ದ – ಮೆಹೆಂದಿ, ಮೇಂದಿ)
೨. ಮದರಂಗಿಯನ್ನು ಬಿಡಿಸುವ ಭಾರತದ ಇತಿಹಾಸ
೨ ಅ. ತ್ರೇತಾಯುಗ : ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ ಣ, ಭರತ ಮತ್ತು ಶತ್ರುಘ್ನರ ವಿವಾಹದ ಸಮಯದಲ್ಲಿ ಅವರನ್ನು ಸಿಂಗರಿಸಲು ಅವರ ಕೈ, ಕಾಲು, ಹಾಗೆಯೇ ಮುಖದ ಮೇಲೆ ಪಾಷಾಣಬಣ್ಣ (ವಿವಿಧ ಬಣ್ಣದ ಕಲ್ಲುಗಳಿಂದ ತಯಾರಿಸಿದ ಬಣ್ಣ) ಮತ್ತು ಪುಷ್ಪಬಣ್ಣ (ವಿವಿಧ ಬಣ್ಣದ ಹೂವುಗಳಿಂದ ತಯಾರಿಸಿದ ಬಣ್ಣ) ಗಳ ಸಹಾಯದಿಂದ ಎಲೆ-ಹೂವು ಮುಂತಾದ ಆಕಾರಗಳನ್ನು ಬಿಡಿಸಲಾಗಿತ್ತು. ಈ ಬಣ್ಣಗಳಲ್ಲಿ ವಿವಿಧ ದಿವ್ಯ ಔಷಧೀಯ ವನಸ್ಪತಿಗಳ ರಸಗಳನ್ನು ಬೆರೆಸಲಾಗಿತ್ತು. ಈ ಸುಗಂಧಿ ಮಿಶ್ರಣಕ್ಕೆ ‘ಪತ್ರಾವಲೀ’ ಎಂದು ಹೇಳುತ್ತಿದ್ದರು. (ಆಧಾರ : ‘ಭುಶುಂಡೀ ರಾಮಾಯಣ’ ಮತ್ತು ‘ಶ್ರೀನಾಥಮುನಿ ರಾಮಾಯಣ’)
೨ ಆ. ದ್ವಾಪರಯುಗ : ದ್ವಾಪರಯುಗದಲ್ಲಿಯೂ ಸಿಂಗಾರಕ್ಕಾಗಿ ‘ಪತ್ರಾವಲೀ’ಯನ್ನು ಉಪಯೋಗಿಸಲಾಗುತ್ತಿತ್ತು. ‘ತೋಕ’ ಎಂಬ ಹೆಸರಿನ ಶ್ರೀಕೃಷ್ಣನ ಮಿತ್ರನು ‘ಪತ್ರಾವಲೀ’ಯಿಂದ ಶ್ರೀಕೃಷ್ಣ ನನ್ನು ಸಿಂಗರಿಸುತ್ತಿದ್ದನು’ ಎಂದು ‘ಗರ್ಗಸಂಹಿತೆ’, ‘ಶ್ರೀಮದ್ಭಾಗವತ’, ‘ಶ್ರೀಕೃಷ್ಣಕರ್ಣಾಮೃತ’ ಮುಂತಾದ ಶ್ರೀಕೃಷ್ಣನ ಬಗೆಗಿನ ಪ್ರಮುಖ ಗ್ರಂಥಗಳಲ್ಲಿ ಉಲ್ಲೇಖಿಸಿರುವುದು ಕಂಡುಬರುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣನ ಗೋವುಗಳನ್ನೂ ‘ಪತ್ರಾವಲಿ’ಯಿಂದ ಸಿಂಗರಿಸಲಾಗುತ್ತಿತ್ತು.
೨ ಇ. ಕಲಿಯುಗ
೨ ಇ ೧. ಗುಪ್ತರ ಕಾಲ : ‘ಮದರಂಗಿಯನ್ನು ಹಚ್ಚುವ ರೂಢಿಯನ್ನು ಮುಸಲ್ಮಾನರು ಭಾರತಕ್ಕೆ ತಂದರು ಎಂದು ಕೆಲವರು ತಿಳಿದುಕೊಂಡಿದ್ದಾರೆ; ಆದರೆ ಭಾರತದಲ್ಲಿ ಮುಸಲ್ಮಾನರು ಬರುವ ಮೊದಲೇ ಗುಪ್ತರ ಕಾಲದಲ್ಲಿ ಮದರಂಗಿಯನ್ನು ಹಚ್ಚುವ ರೂಢಿಯಿತ್ತು.’ (ಆಧಾರ : ಭಾರತೀಯ ಸಂಸ್ಕೃತಿಕೋಶ, ಏಳನೇ ಖಂಡ, ಪುಟ ಸಂ. ೪೮೧, ಪ್ರಕಾಶಕರು : ಪಂ. ಮಹದೇವಶಾಸ್ತ್ರಿ ಜೋಶಿ, ಪುಣೆ)
೨ ಇ ೨. ‘ಭಾರತದಲ್ಲಿನ ಅಜಂತಾದ ಗುಹೆಗಳಲ್ಲಿ ಕೈ-ಕಾಲುಗಳ ಮೇಲೆ ಮದರಂಗಿಯನ್ನು ಬಿಡಿಸಿರುವುದನ್ನು ತೋರಿಸುವ ಅನೇಕ ಶಿಲ್ಪಗಳಿವೆ. ಎಲ್ಲೋರಾದ ಗುಹೆಗಳಲ್ಲಿ ಪಾಟಲೀಪುತ್ರದ ರಾಜಕನ್ಯೆಯ ಶಿಲ್ಪವಿದೆ. ಅವಳ ಕೈ-ಕಾಲುಗಳ ಮೇಲೆ ಮದರಂಗಿಯಿಂದ ಹೂವುಗಳನ್ನು ಬಿಡಿಸಿರುವುದು ತೋರಿಸಲಾಗಿದೆ.
೨ ಇ ೩. ಹನ್ನೆರಡನೇ ಶತಮಾನದಲ್ಲಿ ಬರೆದ ‘ರಸರತ್ನಾಕರ’ ಗ್ರಂಥದಲ್ಲಿ ‘ಮಹಿಂದಿ’ ಎಂಬ ಶಬ್ದ ಸಿಗುತ್ತದೆ.’ (ಆಧಾರ : ಮಾಸಿಕ ‘ಶ್ರೀ ವ ಸೌ’, ಪುಟ ೨೪, ಆಗಸ್ಟ್ ೨೦೦೨)
೨ ಇ ೪. ಅಯೋಧ್ಯಾ, ವೃಂದಾವನ ಮುಂತಾದೆಡೆಗಳಲ್ಲಿ ಇಂದಿಗೂ ಶ್ರೀರಾಮ-ಸೀತೆ, ರಾಧಾ-ಕೃಷ್ಣರ ಕೆಲವು ದೇವಸ್ಥಾನಗಳಲ್ಲಿ ಅವರ ಮೂರ್ತಿಗಳ ಸಿಂಗಾರವನ್ನು ನೈಸರ್ಗಿಕ ಬಣ್ಣ ಮತ್ತು ಸುಗಂಧ ದ್ಯವ್ಯಗಳಿಂದ ತಯಾರಿಸಿದ ‘ಪತ್ರಾವಲೀ’ಯಿಂದ ಮಾಡಲಾಗುತ್ತದೆ. ಇಲ್ಲಿ ಗೋವುಗಳನ್ನೂ ‘ಪತ್ರಾವಲೀ’ಯಿಂದ ಸಿಂಗರಿಸುವ ರೂಢಿಯಿದೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸಾತ್ತ್ವಿಕ ಮದರಂಗಿಗಳು (ಅಯೋಗ್ಯ ಮದರಂಗಿಗಳ ದುಷ್ಪರಿಣಾಮಗಳ ಸಹಿತ)’, ‘ಮದರಂಗಿಯ ಸಾತ್ತ್ವಿಕ ವಿನ್ಯಾಸಗಳ ವಿಧಗಳು (ವಿನ್ಯಾಸಗಳ ಸಾತ್ತ್ವಿಕತೆಯ ಹಿಂದಿನ ಕಾರಣಮೀಮಾಂಸೆಗಳೊಂದಿಗೆ)’ ಗ್ರಂಥಗಳು)