ಕುಂಭಕ್ಷೇತ್ರದಲ್ಲಿ ಜಾಗೃತ ತೀರ್ಥಕ್ಷೇತ್ರಗಳಲ್ಲಿ ಪಂಡಾಗಳಿಂದ (ಅರ್ಚಕರಿಂದ) ಲೂಟಿ !
೧. ಪ್ರಯಾಗರಾಜದ ಅಕ್ಷಯವಟ ಕ್ಷೇತ್ರದಲ್ಲಿ ಭಕ್ತರನ್ನು ಲೂಟಿಗೈಯ್ಯುವುದು
ಅಲಾಹಾಬಾದ್ ಕೋಟೆಯೊಳಗೆ ಹಿಂದೂಗಳ ಪವಿತ್ರ ‘ಅಕ್ಷಯವಟ’ವೆಂಬ ಅತಿ ಪ್ರಾಚೀನ ವಟವೃಕ್ಷವಿದೆ (Immortal Banyan Tree). ಅಕ್ಷಯ ವಟದ ದರ್ಶನಕ್ಕೆಂದು ಪ್ರತಿದಿನ ಲಕ್ಷಗಟ್ಟಲೆ ಭಕ್ತರು ಬರುತ್ತಿರುತ್ತಾರೆ. ಅಕ್ಷಯವಟದ ದರ್ಶನವಾದ ಬಳಿಕ ಒಳಗೆ ೨೦೦-೩೦೦ ಮೀಟರ್ ದೂರದಲ್ಲಿರುವ ಕೋಟೆಯಲ್ಲಿರುವ ಅಕ್ಷಯವಟ ದೇವಾಲಯ, ಪಾತಾಳಪುರಿ ದೇವಾಲಯ ಇತ್ಯಾದಿ ದೇವಾಲಯಗಳ ದರ್ಶನ ಮಾಡಲು ಭಕ್ತರು ಹೋಗುತ್ತಿರುತ್ತಾರೆ; ಆದರೆ ಆ ಸ್ಥಳದಲ್ಲಿ ಪಂಡಾಗಳು (ಬ್ರಾಹ್ಮಣರು) ಭಕ್ತರಿಂದ ಅಲ್ಲಲ್ಲಿ ಹಣವನ್ನು ಕೇಳುತ್ತಾರೆ. ‘ನಿರ್ದಿಷ್ಠ ಸ್ಥಳದಲ್ಲಿ ಹಣವನ್ನು ದಾನ ಮಾಡಿದರೆ ಸಾವಿರಾರು ಪಟ್ಟು ಹೆಚ್ಚು ಹಣ ಸಿಗುತ್ತದೆ’, ‘ನಿಮ್ಮ ತಂದೆ-ತಾಯಿಯ ಹೆಸರಿನಲ್ಲಿ ದಾನ ಮಾಡಿದರೆ ಅವರಿಗೆ ಮುಕ್ತಿ ಸಿಗುತ್ತದೆ’, ‘ಯಮದೇವತೆಗೆ ಅರ್ಪಿಸಿದರೆ ಯಮಬಾಧೆ ದೂರವಾಗುವುದು’, ‘ಗಂಗಾಮಾತೆಯ ಮೂರ್ತಿಗೆ ದಾನ ಮಾಡಿರಿ’, ‘ಗೋರಕ್ಷನಾಥನ ಮೂರ್ತಿಗೆ ಅರ್ಪಿಸಿ’, ‘ಶಿವಲಿಂಗಕ್ಕೆ ದಾನ ಮಾಡಿರಿ’, ‘ಪ್ರಯಾಗರಾಜನ ಮೂರ್ತಿಗೆ ದಾನ ಮಾಡಿ’, ಹೀಗೆ ಹೇಳುವ ಪಂಡಾರು (ಬ್ರಾಹ್ಮಣರು) ಹೆಜ್ಜೆ ಹೆಜ್ಜೆಗೂ ಇರುತ್ತಾರೆ, ಪ್ರತ್ಯಕ್ಷದಲ್ಲಿ ವಂಚಿಸುತ್ತಿದ್ದಾರೆಂದು ಅಲ್ಲಿಗೆ ದರ್ಶನಕ್ಕಾಗಿ ಬಂದ ಓರ್ವ ಜಾಗೃತ ನಾಗರಿಕರು ಹೇಳಿದರು. “ಪ್ರತಿಯೊಂದು ಸ್ಥಳದಲ್ಲಿಯೂ ಹಣವನ್ನು ದಾನ ಮಾಡಲು ಹೇಳಿ ಲೂಟಿ ಮಾಡುತ್ತಾರೆ”, ಎಂದು ಅವರು ಹೇಳಿದರು. ಪಾತಾಳಪುರಿ ದೇವಸ್ಥಾನದ ಕೆಳಗೆ ಒಂದು ಸ್ಥಳದಲ್ಲಿ ಅಕ್ಷಯವಟದ ಬೇರುಗಳಿವೆ ಎಂದು ಹೇಳಿ ಅದರ ದರ್ಶನ ಪಡೆದುಕೊಳ್ಳಿ ಹಾಗೂ ಹಣವನ್ನು ದಾನ ಮಾಡಿ, ಎಂದು ಹೇಳಲಾಗುತ್ತದೆ; ಆದರೆ ಪ್ರತ್ಯಕ್ಷದಲ್ಲಿ ಮಾತ್ರ ಅದರ ಬೇರುಗಳು ಅಲ್ಲಿಂದ ೨೦೦-೩೦೦ ಮೀಟರ್ ದೂರದಲ್ಲಿರುವ ಯಮುನಾನದಿಯ ತೀರದಲ್ಲಿದೆ. ಅಂದರೆ ಸುಳ್ಳು ಮಾಹಿತಿ ನೀಡಿ ಕೇವಲ ಹಣವನ್ನು ದೋಚಲು ಪಂಡಾದವರ ಪ್ರಯತ್ನ ನಡೆಯುತ್ತಿರುತ್ತದೆ.
೨. ನಾಗವಾಸುಕೀ ದೇವಾಲಯದ ದುಃಸ್ಥಿತಿ ಹಾಗೂ ಪಂಡಾರ ಅದರ ನಿರ್ಲಕ್ಷ್ಯ !
ನಾಗವಾಸುಕೀ ದೇವಾಲಯದಲ್ಲಿ ದರ್ಶನಕ್ಕೆಂದು ಹೋದಾಗ ಅಲ್ಲಿ ಶ್ರೀ ನಾಗವಾಸುಕೀ ದೇವತೆಯು ಜಾಗೃತವಾಗಿದೆ ಎಂದು ತಿಳಿಯಿತು. ಅಲ್ಲಿ ಹೋದ ಮೇಲೆ ಮನಸ್ಸು ನಿರ್ವಿಚಾರವಾಗಿ ಏಕಾಗ್ರವಾಯಿತು. ನಾಮಸ್ಮರಣೆ ಒಳಗಿನಿಂದ ಆಗತೊಡಗಿತು. ಪ್ರತ್ಯಕ್ಷದಲ್ಲಿಯೂ ನಾಗವಾಸುಕಿಯ ಮೂರ್ತಿಯು ಸಜೀವವಾಗಿದೆ ಎಂದು ಅರಿವಾಗುತ್ತಿತ್ತು. ನಾಗವಾಸುಕಿಗೆ ಐದು ಹೆಡೆಯಿತ್ತು. ಅದರ ಪ್ರತಿಯೊಂದು ಹೆಡೆಯಲ್ಲಿನ ಕಣ್ಣುಗಳು ಸಜೀವವಾಗಿದ್ದು ನಾಗವಾಸುಕಿಯು ಏನೋ ಹೇಳುತ್ತಿದೆ, ಎಂದು ತೋರುತ್ತಿತ್ತು. ನಾಗವಾಸುಕೀ ದೇವಾಲಯದ ಪಕ್ಕದಲ್ಲಿ ಅಸಿ ಮಾಧವ್ ಎಂಬ ಶ್ರೀವಿಷ್ಣುವಿನ ದೇವಾಲಯವಿದೆ; ಆದರೆ ಆ ಸ್ಥಳಕ್ಕೆ ಹೋದಾಗ ಆ ದೇವಾಲಯದ ಮೇಲೆ ತುಂಬಾ ಎಲೆಗಳು, ಕಸ, ಪ್ಲಾಸ್ಟಿಕ್ ಚೀಲಗಳಲ್ಲಿ ಸಾಮಗ್ರಿಗಳಿದ್ದು, ಅಲ್ಲಿ ಪಕ್ಕದಲ್ಲಿ ತುಂಬಾ ಅಸ್ವಚ್ಛತೆಯಿತ್ತು. ದೇವಾಲಯದ ಒಳಗೆ ಕೂಡ ಸ್ವಚ್ಛತೆ ಮಾಡಿರಲಿಲ್ಲ. ಪ್ರತ್ಯಕ್ಷವಾಗಿ ಅಲ್ಲಿ ೮ ರಿಂದ ೧೦ ಪಂಡಾಗಳಿದ್ದರು; ಅವರು ಸಂಚಾರವಾಣಿಯಲ್ಲಿ ಏನೋ ನೋಡುವುದರಲ್ಲಿ ಕಾಲ ಕಳೆಯುತ್ತಿರುವುದಾಗಿ ಅರಿವಾಯಿತು, ಅಂದರೆ ಅಲ್ಲಿಗೆ ಬರುವ ಭಕ್ತರಿಗೆ ಆ ತೀರ್ಥಕ್ಷೇತ್ರದ ಮಹಿಮೆಯನ್ನು ಹೇಳಿ ಅವರಿಂದ ಆದಷ್ಟು ಹೆಚ್ಚು ಹಣವನ್ನು ಕೀಳುತ್ತಿದ್ದರು; ಆದರೆ ಆ ಸ್ಥಳದಲ್ಲಿ ಸೇವಾಭಾವದಿಂದ ಆ ದೇವತೆಯ ಪರಿಸರದ ಸ್ವಚ್ಛತೆ ಕೂಡ ಮಾಡುತ್ತಿರಲಿಲ್ಲ, ಇಂತಹ ದೌರ್ಭಾಗ್ಯದ ಘಟನೆ ಕಾಣಿಸಿತು.
೩. ರಾಜಕೀಯ ಮುಖಂಡರಿಗಾಗಿ ಲಕ್ಷಗಟ್ಟಲೆ ಭಕ್ತರಿಗೆ ದರ್ಶನದ ಅವಕಾಶ ಸಿಗದಿರುವುದು !
ಫೆಬ್ರವರಿ ೧೩ ರಂದು ತ್ರಿವೇಣಿ ಸಂಗಮ, ಅಕ್ಷಯವಟ, ಬಡೆ ಹನುಮಾನ್‌ನ ದರ್ಶನ ಮಾಡಲು ಹೋಗುವವರಿದ್ದೆವು; ಆದರೆ ದಾರಿಯಲ್ಲಿ ಅಲ್ಲಲ್ಲಿ ವಾಹನಗಳನ್ನು ಅಡ್ಡಗಟ್ಟಲಾಗಿತ್ತು; ಯಾವುದೇ ರೀತಿಯ ಕಾರಣವನ್ನು ಹೇಳುತ್ತಿರಲಿಲ್ಲ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಸಾರಿಗೆಯ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಜನರು ಪೊಲೀಸರಿಗೆ ಮುಂದೆ ಹೋಗಲು ಅವಕಾಶ ನೀಡುವಂತೆ ವಿನಂತಿಸುತ್ತಿದ್ದರು; ಆದರೆ ಪೊಲೀಸರು ಬಿಡುತ್ತಿರಲಿಲ್ಲ. ಒಂದುವರೆ ಗಂಟೆಯ ಬಳಿಕ, ಓರ್ವ ರಾಜಕೀಯ ಮುಖಂಡ ಗಂಗಾಸ್ನಾನಕ್ಕೆಂದು ಬರಲಿರುವುದಾಗಿ ತಿಳಿಯಿತು. ಆದ್ದರಿಂದ ಅಲ್ಲಲ್ಲಿ ಸಾರಿಗೆಯನ್ನು ಅಡ್ಡಗಟ್ಟಲಾಗಿತ್ತು. ಪ್ರತ್ಯಕ್ಷವಾಗಿ ಅವರು ಬರುವ ೪ ತಾಸಿನ ಮುನ್ನವೇ ಸಾರಿಗೆಯನ್ನು ಅಡ್ಡಗಟ್ಟಿದ್ದರಿಂದ ಜನರಿಗೆ ತುಂಬಾ ತೊಂದರೆಯಾಯಿತು. ಕುಂಭಮೇಳ ಆಗಿರುವುದರಿಂದ ಅಲ್ಲಿ ಲಕ್ಷಗಟ್ಟಲೆ ಭಕ್ತರು ಬಂದಿದ್ದರು. ಅವರಿಗಾಗಿ ಸಾಮಾನ್ಯ ಭಕ್ತರಿಗೆ ಅಕ್ಷಯವಟ ಹಾಗೂ ಬಡೆ ಹನುಮಾನ್‌ನ ದರ್ಶನವನ್ನು ನಿಲ್ಲಿಸಲಾಯಿತು. ಒಂದು ದಿನದಲ್ಲಿ ನಾಲ್ಕು-ಐದು ಲಕ್ಷ ಜನರು ಅಲ್ಲಿಗೆ ದರ್ಶನಕ್ಕೆಂದು ಬರುತ್ತಾರೆ. ಆ ಲಕ್ಷಗಟ್ಟಲೆ ಜನರಿಗೆ ತೀರ್ಥಕ್ಷೇತ್ರದಲ್ಲಿ ದರ್ಶನವು ಆಗಲಿಲ್ಲ. ದಾರಿಯಲ್ಲಿದ್ದ ನೂರಾರು ಅಂಗಡಿಗಳನ್ನು ಅಲ್ಲಿಂದ ತೆಗೆಯಲಾಗಿತ್ತು. ಒಬ್ಬ ವ್ಯಕ್ತಿಯು ಹೊರಗಿನಿಂದ ಬರುವ-ಹೋಗುವ, ಊಟ-ತಿಂಡಿಯ ಹಾಗೂ ಇರಲು ಕಡಿಮೆಪಕ್ಷ ೧ ರಿಂದ ೨ ಸಾವಿರ ರೂಪಾಯಿಗಳಷ್ಟು ಖರ್ಚಾಗುತ್ತದೆ. ಈ ರೀತಿ ಲಕ್ಷಗಟ್ಟಲೆ ಜನರ ಖರ್ಚನ್ನು ಕೂಡಿಸಿದರೆ ಒಬ್ಬ ಮುಖಂಡನಿಗೋಸ್ಕರ ೮೦ ರಿಂದ ೧೦೦ ಕೋಟಿ ದುಂದುವೆಚ್ಚವಾಯಿತು. ಜನರಿಗೆ ತೊಂದರೆಯಾಗಿದ್ದು ಬೇರೆ. ತೊಂದರೆಗೊಳಗಾದ ಜನರು ಮಾತ್ರ ಸಂಬಂಧಪಟ್ಟ ಮುಖಂಡರಿಗೆ ಹಾಗೂ ಆಡಳಿತವರ್ಗದವರಿಗೆ ಬೈಯ್ಯುತ್ತಿದ್ದರು. ಎಲ್ಲಿ ಪ್ರಜೆಗೋಸ್ಕರ ತಮ್ಮ ಸರ್ವಸ್ವವನ್ನೂ ದಾನ ಮಾಡುವ ಹಿಂದಿನ ರಾಜ-ಮಹಾರಾಜರು ಮತ್ತು ಎಲ್ಲಿ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಜನತೆಯ ಕೋಟಿಗಟ್ಟಲೆ ದುಂದುವೆಚ್ಚ ಮಾಡುವ ಸ್ವಾತಂತ್ರ್ಯದಿಂದಾಗಿನಿಂದ ಇಂದಿನವರೆಗಿನ ಆಡಳಿತಗಾರರು !
೪. ಸ್ನಾನ ಮಾಡುವ ಮಹಿಳೆಯರ ಛಾಯಾಚಿತ್ರವನ್ನು ತೆಗೆಯುವ ವಿದೇಶಿ ಛಾಯಾಚಿತ್ರಕಾರರು !
ಕುಂಭಕ್ಷೇತ್ರದಲ್ಲಿ ಸಂಗಮದ ಬಳಿ ಸರಕಾರದ ವತಿಯಿಂದ ಪತ್ರಕರ್ತರಿಗೆ ವಿಶೇಷ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಅನಂತರವೇ ಆ ಪತ್ರಕರ್ತರು ಎಲ್ಲಿಗೆ ಬೇಕಾದರೂ ಅಲ್ಲಿಗೆ ಹೋಗಬಹುದು; ಆದರೆ ಕುಂಭಪರ್ವದಲ್ಲಿ ಛಾಯಾಚಿತ್ರವನ್ನು ತೆಗೆಯಲು ಅಲ್ಲಿಗೆ ಬಂದಿದ್ದ ಅನೇಕ ವಿದೇಶಿ ಛಾಯಾಚಿತ್ರಕಾರರ ಬಳಿ ಗುರುತಿನ ಚೀಟಿಯೇ ಇರಲಿಲ್ಲ ಹಾಗೂ ಅವರು ಮಹಿಳೆಯರು ಸ್ನಾನ ಮಾಡುವ, ನಗ್ನ ಸಾಧುಗಳ ಛಾಯಾಚಿತ್ರವನ್ನು ತೆಗೆಯುತ್ತಿದ್ದರು. ಅದರಲ್ಲೂ ಮಹಿಳೆಯರು ಒದ್ದೆ ಬಟ್ಟೆಯನ್ನು ಬದಲಾಯಸಿಕೊಳ್ಳುತ್ತಿರುವ ಛಾಯಾಚಿತ್ರವನ್ನು ತೆಗೆಯುವ ಘಟನೆ ನಡೆಯುತ್ತಿತ್ತು. ಪ್ರತ್ಯಕ್ಷದಲ್ಲಿ ಉಚ್ಚನ್ಯಾಯಾಲಯದ ಆದೇಶದಂತೆ ೧೦೦ ಮೀಟರ್ ಪರಿಸರದಲ್ಲಿ ಛಾಯಾಚಿತ್ರವನ್ನು ತೆಗೆಯಲು ನಿಷೇಧಾಜ್ಞೆಯಿತ್ತು. ಆದರೂ ಈ ವಿಷಯದ ಮೇಲೆ ಪೊಲೀಸರಾಗಲಿ ಅಥವಾ ಆಡಳಿತವರ್ಗದವರಾಗಲಿ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆ ವಿಷಯದಲ್ಲಿ ಸರಕಾರವು ಕಾಳಜಿ ವಹಿಸಬೇಕು. ಈ ಕಾಳಜಿಯನ್ನು ಸರಕಾರವು ಯಾವಾಗ ವಹಿಸಲಿದೆ, ಎಂಬ ಬಗ್ಗೆ ಪ್ರಶ್ನೆಯು ಮೂಡಿ ಬಂದಿದೆ.