ಸ್ವಭಾವದೋಷ (ಷಡ್ವೈರಿಗಳ) ನಿರ್ಮೂಲನ ಪ್ರಕ್ರಿಯೆ

ವ್ಯಾಖ್ಯೆ

ಸ್ವಭಾವದೋಷಗಳಿಂದ ವ್ಯಕ್ತಿಯ ಶಾರೀರಿಕ, ಮಾನಸಿಕ, ಬೌದ್ಧಿಕ, ಕೌಟುಂಬಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಿ ಅವನಿಗೆ ಸುಖಕರ ಮತ್ತು ಯಶಸ್ವೀ ಜೀವನವನ್ನು ಸಾಗಿಸಲು ಸಾಧ್ಯವಾಗಬೇಕೆಂದು, ಅವನಲ್ಲಿರುವ ಸ್ವಭಾವದೋಷಗಳನ್ನು ದೂರಗೊಳಿಸಿ ಅವನ ಚಿತ್ತದಲ್ಲಿ ಒಳ್ಳೆಯ ಗುಣಗಳ ಸಂಸ್ಕಾರಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆಗೆ ‘ಸ್ವಭಾವದೋಷ (ಷಡ್ವೈರಿ) ನಿರ್ಮೂಲನ ಪ್ರಕ್ರಿಯೆ’ ಎನ್ನುತ್ತಾರೆ.

ಎಲ್ಲರಲ್ಲಿಯೂ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಸ್ವಭಾವದೋಷಗಳಿರುತ್ತವೆ. ಸ್ವಭಾವ ದೋಷಗಳಿಂದಾಗಿ ನಮ್ಮಿಂದ ಅಯೋಗ್ಯ ವರ್ತನೆಗಳಾಗಿ ಇತರರಿಗೆ ತೊಂದರೆಯಾಗುತ್ತದೆ. ಸ್ವಭಾವದೋಷಗಳನ್ನು ದೂರಗೊಳಿಸಲು ಪ್ರಯತ್ನಿಸಿದರೆ ಇತರರಿಗಾಗುವ ತೊಂದರೆಗಳು ಕಡಿಮೆಯಾಗಿ ಇತರರೊಂದಿಗಿನ ಸಂಬಂಧವು ಸುಧಾರಿಸಲು ಸಹಾಯವಾಗುತ್ತದೆ.

ಪ್ರಕ್ರಿಯೆಯಲ್ಲಿನ ಕೃತಿಗಳ ಹಂತಗಳು

ಅ. ನಮ್ಮಲ್ಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?

ಹಂತ ೧. ಇಡೀ ದಿನದಲ್ಲಿ ಘಟಿಸಿದ ಬೇರೆ ಬೇರೆ ಪ್ರಸಂಗಗಳಲ್ಲಿ ನಮ್ಮಿಂದಾದ ಅಯೋಗ್ಯ ಕೃತಿ ಅಥವಾ ವ್ಯಕ್ತವಾದ ಮತ್ತು ಮನಸ್ಸಿನಲ್ಲಿ ಮೂಡಿದ ಅಯೋಗ್ಯ ಪ್ರತಿಕ್ರಿಯೆಗಳನ್ನು ಬರೆದಿಡಬೇಕು, ಅಂದರೆ ‘ಸ್ವಭಾವದೋಷ ನಿರ್ಮೂಲನ ತಖ್ತೆಯನ್ನು’ ಬರೆಯಬೇಕು.

ಹಂತ ೨. ಪ್ರಸಂಗಗಳು, ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನವನ್ನು ಮಾಡಬೇಕು ಮತ್ತು ಪ್ರಸಂಗಗಳಿಗನುಸಾರ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಧರಿಸಬೇಕು.

ಹಂತ ೩. ಮನಸ್ಸಿಗೆ ಯೋಗ್ಯ ಪ್ರಶ್ನೆಗಳನ್ನು ಕೇಳಿ ಪ್ರಸಂಗಗಳಿಗನುಸಾರ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಬೇಕು ಮತ್ತು ಅವುಗಳ ಹಿಂದಿನ ಮೂಲ ಸ್ವಭಾವದೋಷವನ್ನು ಕಂಡುಹಿಡಿಯಬೇಕು.

ಹಂತ ೪. ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಸ್ವಭಾವದೋಷ ಗಳನ್ನು ವರ್ಗೀಕರಿಸಿ ಅವುಗಳಲ್ಲಿ ಪ್ರಬಲವಾಗಿರುವ ೩ ಸ್ವಭಾವದೋಷಗಳನ್ನು ಪ್ರಾಧಾನ್ಯಕ್ರಮಕ್ಕನುಸಾರ ಪ್ರಕ್ರಿಯೆಗಾಗಿ ಆರಿಸಬೇಕು.

 ಆ. ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ ನಿರ್ಮೂಲನೆ ಹೇಗೆ ಮಾಡಬೇಕು ?

ಹಂತ ೧. ಪ್ರಕ್ರಿಯೆಗಾಗಿ ಆರಿಸಿದ ಪ್ರತಿಯೊಂದು ಸ್ವಭಾವದೋಷಕ್ಕಾಗಿ ಸ್ವಯಂಸೂಚನೆಯ ಉಪಾಯ ಪದ್ಧತಿಯನ್ನು ನಿರ್ಧರಿಸಬೇಕು ಮತ್ತು ಪ್ರತಿಯೊಂದು ಸ್ವಭಾವದೋಷಕ್ಕೆ ಸ್ವಯಂಸೂಚನೆಯನ್ನು ತಯಾರಿಸಬೇಕು.

ಹಂತ ೨. ಸ್ವಭಾವದೋಷಗಳ ತೀವ್ರತೆಗನುಸಾರ ಸ್ವಯಂಸೂಚನೆಗಳ ಸೂಚನಾಸತ್ರಗಳ ಸಂಖ್ಯೆಯನ್ನು ನಿರ್ಧರಿಸಬೇಕು ಮತ್ತು ಆ ಸ್ವಯಂಸೂಚನೆಗಳ ಸೂಚನಾಸತ್ರಗಳನ್ನು ಒಂದು ವಾರ ನಿಯಮಿತವಾಗಿ ಮಾಡಬೇಕು.

ಹಂತ ೩. ಸ್ವತಃ ಅಂತರ್ನಿರೀಕ್ಷಣೆ ಮಾಡಿ ಹಾಗೂ ಇತರರಿಂದ ನಮ್ಮ ಸ್ವಭಾವದೋಷಗಳಲ್ಲಾಗಿರುವ ಪ್ರಗತಿಯ ಬಗ್ಗೆ ಕೇಳಿಕೊಂಡು, ಅವುಗಳ ಅಧ್ಯಯನವನ್ನು ಮಾಡಿ ಪ್ರಗತಿಯ ಸೂಚನೆಯನ್ನು ತಯಾರಿಸಬೇಕು.

ಹಂತ ೪. ಪ್ರಗತಿಯ ಆಧಾರದಲ್ಲಿ ಮುಂದಿನ ವಾರದ ಪ್ರಕ್ರಿಯೆಗಾಗಿ ಸ್ವಭಾವ ದೋಷದ ಪಟ್ಟಿಯಿಂದ ಪ್ರಾಧಾನ್ಯಕ್ರಮಕ್ಕನುಸಾರ ಇತರ ೩ ಸ್ವಭಾವದೋಷಗಳನ್ನು ಆರಿಸಬೇಕು.

ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಗಮನದಲ್ಲಿಡಬೇಕಾದ ಉಪಯುಕ್ತ ಸೂಚನೆಗಳು

ಅ.  ಪ್ರಕ್ರಿಯೆಯಲ್ಲಿನ ಎಲ್ಲ ಹಂತಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಾರ್ಯ ರೂಪಕ್ಕೆ ತರಬೇಕು. ಈ ಪ್ರಕ್ರಿಯೆಯಲ್ಲಿ ನಮ್ಮ ಮನಸ್ಸಿಗೆ ಬಂದಂತೆ ಬದಲಾವಣೆಗಳನ್ನು ಮಾಡಬಾರದು.

ಆ. ಪ್ರಕ್ರಿಯೆಯನ್ನು ಪ್ರಾರಂಭಿಸಿ ‘ಮನಸ್ಸಿಗೆ ಸೂಚನೆಗಳನ್ನು ನೀಡಿದ ಕೂಡಲೆ ಕೃತಿಗಳಲ್ಲಿ ಸುಧಾರಣೆಯಾಗುತ್ತದೆ ಮತ್ತ್ತು ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳು ಬರುತ್ತವೆ’ ಎಂದೇನಿಲ್ಲ. ಆದುದರಿಂದ ಈ ಪ್ರಕ್ರಿಯೆಯಲ್ಲಿ ಸ್ವಭಾವದೋಷಗಳನ್ನು ದೂರಗೊಳಿಸಿ ನಮ್ಮನ್ನು ಬದಲಾಯಿಸಲು ನಾವೇ ಪ್ರಾಯೋಗಿಕವಾಗಿ ಜಿಗುಟುತನದಿಂದ ಪ್ರಯತ್ನಿಸಬೇಕು.

ಇ. ಪ್ರತಿದಿನ ನಮ್ಮಿಂದಾಗುವ ಎಲ್ಲ ತಪ್ಪುಗಳನ್ನು ನಿಯಮಿತವಾಗಿ ಮತ್ತು ಪ್ರಾಮಾಣಿಕವಾಗಿ ಸ್ವಭಾವದೋಷ ನಿರ್ಮೂಲನ ತಖ್ತೆಯಲ್ಲಿ ಬರೆದಿಡಬೇಕು. ಸ್ವಯಂಸೂಚನೆಗಳನ್ನು ಆರಿಸಿದ ಸ್ವಭಾವದೋಷಗಳ ಅಭಿವ್ಯಕ್ತಿಗಳಿಗೆ ಮಾತ್ರ ಕೊಡಬೇಕು.

ಈ. ಸ್ವಯಂಸೂಚನೆಗಳ ಸೂಚನಾಸತ್ರಗಳನ್ನು ಪ್ರತಿದಿನ ನಿಯಮಿತವಾಗಿ ಮತ್ತು ನಿಗದಿತ ಸಮಯದಲ್ಲಿ ಮಾಡಬೇಕು. ಇದು ಅನಿಯಮಿತವಾದರೆ ಸ್ವಭಾವದಲ್ಲಿ ಅಪೇಕ್ಷಿತ ಬದಲಾವಣೆಯಾಗುವುದಿಲ್ಲ.

ಉ. ಹೆಚ್ಚಿನ ಜನರು ಸ್ವಭಾವದೋಷಗಳಿಗೆ ಸೂಚನೆಗಳನ್ನು ಕೊಡುತ್ತಾರೆ; ಆದರೆ ಪ್ರತ್ಯಕ್ಷ ಪ್ರಸಂಗಗಳು ಘಟಿಸುವಾಗ ಸೂಚನೆಗನುಸಾರ ಕೃತಿಗಳಲ್ಲಿ ಬದಲಾವಣೆಗಳನ್ನು ಮಾಡಿ ಕೊಳ್ಳುವುದಿಲ್ಲ. ಸ್ವಯಂಸೂಚನೆಗಳನ್ನು ನೀಡುವುದರ ಜೊತೆಗೆ ಆಯಾಯ ಪ್ರಸಂಗಗಳಲ್ಲಿ ಸ್ವಯಂಸೂಚನೆಗಳಿಗನುಸಾರ ಕೃತಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಹ ಪ್ರಕ್ರಿಯೆಯ ಒಂದು ಭಾಗವಾಗಿದೆ. ಹೀಗೆ ಮಾಡಿದರೆ ಮಾತ್ರ ಪ್ರಕ್ರಿಯೆಯು ಕಡಿಮೆ ಕಾಲಾವಧಿಯಲ್ಲಿ ಯಶಸ್ವಿಯಾಗುತ್ತದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ನಮ್ಮಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?’ ಗ್ರಂಥ)

Leave a Comment