ಅ. ಪುಣ್ಯಕರ
ಪರ್ವಪ್ರಸಂಗಗಳಲ್ಲಿ ಗಂಗಾಸ್ನಾನವು ಅತ್ಯಂತ ಪುಣ್ಯಕಾರಕವಾಗಿರುತ್ತದೆ. ಆದ್ದರಿಂದ ಇಲ್ಲಿ ಸಂಕ್ರಾಂತಿ, ಗ್ರಹಣಕಾಲ, ಅರ್ಧೋದಯ ಯೋಗ, ಮಹೋದಯ ಯೋಗ ಇತ್ಯಾದಿ ಪರ್ವಕಾಲಗಳಲ್ಲಿ ಅನೇಕ ಭಕ್ತರು ಗಂಗಾಸ್ನಾನಕ್ಕಾಗಿ ತೀರ್ಥಯಾತ್ರೆ ಮಾಡುತ್ತಾರೆ.
ಆ. ಪಾಪಕ್ಷಾಲಕ
ಗಂಗಾಸ್ನಾನದಿಂದ ಶರೀರವಂತೂ ಶುದ್ಧವಾಗುತ್ತದೆ, ಹಾಗೆಯೇ ಶರೀರ, ಮನಸ್ಸು ಮತ್ತು ಬುದ್ಧಿಯ ಪಾತಕಗಳೂ ನಾಶವಾಗುತ್ತವೆ. ಆದುದರಿಂದಲೇ ಗಂಗಾಸ್ನಾನವನ್ನು ಮಾಡುವಾಗ ‘ಕಾಯಿಕ-ವಾಚಿಕ-ಮಾನಸಿಕ-ಸಕಲ-ಪಾಪಕ್ಷಯಾರ್ಥಂ ಗಂಗಾಸ್ನಾನಮ್ ಅಹಂ ಕರಿಷ್ಯೇ | (ಕಾಯಿಕ, ವಾಚಿಕ, ಮಾನಸಿಕ ಮತ್ತು ಸಕಲ ಪಾಪಕ್ಷಯಕ್ಕಾಗಿ ನಾನು ಗಂಗಾಸ್ನಾನವನ್ನು ಮಾಡುತ್ತೇನೆ.)’ ಎಂದು ಸಂಕಲ್ಪ ಮಾಡುತ್ತಾರೆ. – ಗುರುದೇವ ಡಾ. ಕಾಟೇಸ್ವಾಮೀಜಿ
ಇ. ಗಂಗಾಸ್ನಾನದಿಂದಾಗುವ ಶುದ್ಧಿ
ಇ ೧. ಗಂಗಾಸ್ನಾನದಿಂದಾಗುವ ದೇಹಶುದ್ಧಿ ಮತ್ತು ಕರ್ಮಶುದ್ಧಿ
ಇ ೧ ಅ. ಗಂಗಾಸ್ನಾನದಿಂದ ಚೈತನ್ಯಸ್ರೋತ ದೊರಕಿ ಜೀವದ ಸಾಧನೆಯ ಶಕ್ತಿಯು ವ್ಯಯವಾಗದಿರುವುದು : ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಹೋಗುವುದು ಬಹಳ ಕಠಿಣವಾಗಿರುತ್ತದೆ. ಇದರಲ್ಲಿ ಮನಸ್ಸು, ಚಿತ್ತ ಮತ್ತು ಬುದ್ಧಿ ಇವೆಲ್ಲವುಗಳ ಸಂಘರ್ಷವಾಗತೊಡಗುತ್ತದೆ. ಆದ್ದರಿಂದ ಸಾಧನೆ ಮಾಡಿ ಸಂಗ್ರಹವಾದ ಶಕ್ತಿಸ್ರೋತವು ಕಡಿಮೆಯಾಗಿ ಜೀವಕ್ಕೆ ಮುಂದಿನ ಅವಸ್ಥೆಗೆ ಹೋಗಲು ಸಾಧನೆಯನ್ನು ವ್ಯಯಗೊಳಿಸಬೇಕಾಗುತ್ತದೆ. ಚೈತನ್ಯದ ಸ್ರೋತದ ಮಾಧ್ಯಮದಿಂದ ಈ ಪ್ರವಾಸವನ್ನು ಮಾಡಿದರೆ ಜೀವದ ಸ್ವಇಂಧನವು ವ್ಯಯವಾಗದೇ ಜೀವವು ಈಶ್ವರೇಚ್ಛೆಯ ಬಲದಲ್ಲಿ ಮುಂದಿನ ಹಂತಕ್ಕೆ ಹೋಗುತ್ತದೆ. ಗಂಗಾಸ್ನಾನದ ಮಾಧ್ಯಮದಿಂದ ಜೀವಕ್ಕೆ ನಿರ್ದಿಷ್ಟವಾಗಿ ಇದೇ ಚೈತನ್ಯದ ಸ್ರೋತ ದೊರೆಯುತ್ತದೆ. ವಿಶಿಷ್ಟ ದಿನದಂದು ಗಂಗಾಸ್ನಾನ ಮಾಡುವುದರಿಂದ ಜೀವವು ತನ್ನ ಪ್ರಯಾಣವನ್ನು ಚೈತನ್ಯದ ಬಲದಲ್ಲಿ ಮಾಡಬಲ್ಲದು; ಆದುದರಿಂದಲೇ ಮಹಾನ್ ಸಂತರೂ ಗಂಗಾಸ್ನಾನದ ಮಹತ್ವವನ್ನು ಹೇಳುತ್ತಾರೆ ಮತ್ತು ತಾವೂ ಗಂಗಾಸ್ನಾನವನ್ನು ಮಾಡುತ್ತಾರೆ. – ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖರವರು ಈ ಅಂಕಿತ ನಾಮದಿಂದ ಬರೆಯುತ್ತಾರೆ), ನಿಜ ಭಾದ್ರಪದ ಅಮಾವಾಸ್ಯೆ, ಕಲಿಯುಗ ವರ್ಷ ೫೧೧೪ (೧೫.೧೦.೨೦೧೨) ರಾತ್ರಿ ೮.೫೬
ಇ ೧ ಆ. ಗಂಗಾಸ್ನಾನದಿಂದ ಜೀವದ ದೇಹವು ಕಡಿಮೆ ಶುದ್ಧವಾಗುತ್ತದೆ; ಆದರೆ ಕರ್ಮದ ಸ್ತರದಲ್ಲಿ ಹೆಚ್ಚು ಶುದ್ಧವಾಗುತ್ತದೆ : ಗಂಗಾಸ್ನಾನದಲ್ಲಿ ಜೀವವು ಮಾಡುವ ಸಂಕಲ್ಪದಲ್ಲಿ ಮೂಲತಃ ‘ನನ್ನಿಂದಾಗುವ ತಪ್ಪುಗಳ ಬಗ್ಗೆ ಕ್ಷಮೆಯಿರಬೇಕು ಮತ್ತು ಅದಕ್ಕಾಗಿ ಈಶ್ವರೀ ಶಕ್ತಿಯು ಸಹಾಯ ಮಾಡಬೇಕು’, ಎಂದು ಯಾಚಿಸಲಾಗಿರುತ್ತದೆ. ಈ ಯಾಚನೆಯಿಂದ ನಿರ್ಮಾಣವಾಗುವ ಸೂಕ್ಷ -ನಾದಕ್ಕೆ ಪ್ರತಿಕ್ರಿಯೆಯೆಂದು ಈಶ್ವರೀ ತತ್ತ್ವವು ಜೀವದ ಸಹಾಯಕ್ಕೆ ಓಡಿ ಬರುತ್ತದೆ ಮತ್ತು ತಪ್ಪುಗಳ ಪರಿಮಾರ್ಜನೆ ಮಾಡುತ್ತದೆ. ಆದ್ದರಿಂದ ಗಂಗಾಸ್ನಾನದಿಂದ ಕರ್ಮಶುದ್ಧಿಯು ಹೆಚ್ಚಿನ ಪ್ರಮಾಣದಲ್ಲಾಗಲು ಸಹಾಯವಾಗುತ್ತದೆ.
ಈ. ಗಂಗಾಸ್ನಾನ ಮಾಡುವ ಸಮಯ, ಅದರ ಹಿಂದಿನ ಕಾರ್ಯನಿರತ ತತ್ತ್ವ
ಸಮಯ | ಕಾರ್ಯನಿರತ ತತ್ತ್ವ | ಅನುಭೂತಿ |
೧. ಮುಂಜಾನೆ ೩.೩೦ ರಿಂದ ೫.೩೦ | ಬ್ರಹ್ಮತತ್ತ್ವ | ಶಾಂತಿ |
೨. ಮುಂಜಾನೆ ೫.೩೦ ರಿಂದ ಬೆಳಗ್ಗೆ ೮.೩೦ | ಶಿವತತ್ತ್ವ (ನಿರ್ಗುಣ ತತ್ತ್ವ) | ಶಾಂತಿ/ವೈರಾಗ್ಯ |
೩. ಬೆಳಗ್ಗೆ ೮.೩೦ ರಿಂದ ಮಧ್ಯಾಹ್ನ ೧೨.೩೦ | ಶಿವತತ್ತ್ವ (ಕಾರ್ಯನಿರತ ತತ್ತ್ವ) | ವೈರಾಗ್ಯ |
೪. ಮಧ್ಯಾಹ್ನ ೧೨.೩೦ ರಿಂದ ಸಾಯಂ ೫.೦೦ | ಶಕ್ತಿತತ್ತ್ವ (ಕಾರ್ಯನಿರತ ತತ್ತ್ವ) | ಶಕ್ತಿ |
೫. ಸಾಯಂ ೫.೦೦ ರಿಂದ ರಾತ್ರಿ ೮.೩೦ | ಶಕ್ತಿತತ್ತ್ವ (ಕಾರ್ಯನಿರತ ನಿರ್ಗುಣ ತತ್ತ್ವ) | ಶಕ್ತಿ/ಆನಂದ |
೬. ರಾತ್ರಿ ೮.೩೦ ರಿಂದ ರಾತ್ರಿ ೧೨.೦೦ | ಶಕ್ತಿತತ್ತ್ವ (ನಿರ್ಗುಣ ತತ್ತ್ವ) | ಆನಂದ |
೭. ರಾತ್ರಿ ೧೨.೦೦ ರಿಂದ ಮುಂಜಾನೆ ೩.೩೦ | ಶಿವತತ್ತ್ವ (ನಿರ್ಗುಣ ತತ್ತ್ವ) | ಶಾಂತಿ |
– ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖರವರು ಈ ಅಂಕಿತ ನಾಮದಿಂದ ಬರೆಯುತ್ತಾರೆ) ನಿಜ ಭಾದ್ರಪದ ಅಮಾವಾಸ್ಯೆ, ಕಲಿಯುಗ ವರ್ಷ ೫೧೧೪ (೧೫.೧೦.೨೦೧೨) ರಾತ್ರಿ ೮.೫೬
ಉ. ಗಂಗಾದ್ವಾರ, ಪ್ರಯಾಗ ಮತ್ತು ಗಂಗಾಸಾಗರಸಂಗಮದಲ್ಲಿನ ಗಂಗಾಸ್ನಾನದ ಮಹಾತ್ಮೆ
ಸರ್ವತ್ರ ಸುಲಭಾ ಗಂಗಾ ತ್ರಿಷು ಸ್ಥಾನೇಷು ದುರ್ಲಭಾ |
ಗಂಗಾದ್ವಾರೇ ಪ್ರಯಾಗೇ ಚ ಗಂಗಾಸಾಗರಸಂಗಮೇ ||
ತತ್ರ ಸ್ನಾತ್ವಾ ದಿವಂ ಯಾಂತಿ ಯೇ ಮೃತಾಸ್ತೇಪುನರ್ಭವಾಃ ||
(ಗರುಡಪುರಾಣ, ಅಂಶ ೧, ಅಧ್ಯಾಯ ೮೧, ಶ್ಲೋಕ ೧ ಮತ್ತು ೨)
ಅರ್ಥ : ಗಂಗೆಯು ಭೂಮಿಯ ಮೇಲೆ ಅವತರಿಸಿದಾಗಿನಿಂದ ಪೂರ್ವಸಾಗರವನ್ನು ಕೂಡಿಕೊಳ್ಳುವ ವರೆಗೆ ಎಲ್ಲೆಡೆಯೂ ಸುಲಭವಾಗಿದ್ದರೂ, ಗಂಗಾದ್ವಾರ, ಪ್ರಯಾಗ ಮತ್ತು ಗಂಗಾಸಾಗರಸಂಗಮ ಈ ಮೂರು ಸ್ಥಳಗಳಲ್ಲಿ ಅವಳು ದುರ್ಲಭಳಾಗಿದ್ದಾಳೆ. ಇಲ್ಲಿ ಸ್ನಾನ ಮಾಡುವವರು ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ದೇಹವನ್ನು ತ್ಯಜಿಸುವವರಿಗೆ ಪುನರ್ಜನ್ಮವಿರುವುದಿಲ್ಲ.
ಊ. ಗಂಗಾಸ್ನಾನದಿಂದ ಪಾವನರಾಗಲು ಯಾತ್ರಿಕರಲ್ಲಿ ನಿಜವಾದ ಭಾವವಿರುವುದು ಆವಶ್ಯಕವಾಗಿದೆ !
ಒಮ್ಮೆ ಕಾಶೀಯಲ್ಲಿನ ದೊಡ್ಡ ತಪಸ್ವಿಗಳಾದ ಶಾಂತಾಶ್ರಮಸ್ವಾಮಿಗಳು ಮತ್ತು ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರಲ್ಲಿ ಮುಂದಿನ ಸಂಭಾಷಣೆಯಾಯಿತು.
ಸ್ವಾಮಿಗಳು : ಮಹಾರಾಜರೇ, ಇಷ್ಟು ಜನರು ಕಾಶಿಯಲ್ಲಿ ಗಂಗಾಸ್ನಾನ ಮಾಡಿದರೂ ಅವರೇಕೆ ಪಾವನರಾಗುವುದಿಲ್ಲ ?
ಗೊಂದವಲೇಕರ ಮಹಾರಾಜರು : ಏಕೆಂದರೆ ಅವರಲ್ಲಿ ನಿಜವಾದ ಭಾವವಿರುವುದಿಲ್ಲ !
ಸ್ವಾಮಿಗಳು (ಉತ್ತರ ಮನವರಿಕೆಯಾಗದಿದ್ದರಿಂದ) : ಅವರಲ್ಲಿ ನಿಜವಾದ ಭಾವವಿಲ್ಲದೇ ಅವರು ಇಲ್ಲಿಗೆ ಹೇಗೆ ಬರುತ್ತಾರೆ ?
ಗೊಂದವಲೇಕರ ಮಹಾರಾಜರು : ನಾನು ನಿಮಗೆ ಅದನ್ನು ಬೇಗನೇ ತೋರಿಸುತ್ತೇನೆ.
ನಾಲ್ಕು ದಿನಗಳ ನಂತರ ಗೊಂದವಲೇಕರ ಮಹಾರಾಜರು ಶಾಂತಾಶ್ರಮಸ್ವಾಮಿಗಳ ಕೈಕಾಲುಗಳಿಗೆ ಚಿಂದಿ ಬಟ್ಟೆಗಳನ್ನು ಸುತ್ತಿ ಅವರಿಗೆ ಮಹಾರೋಗಿಯ ರೂಪವನ್ನು ಕೊಟ್ಟರು ಮತ್ತು ಎಲ್ಲಿ ಬಹಳಷ್ಟು ಜನರು ಗಂಗಾಸ್ನಾನಕ್ಕಾಗಿ ನದಿಯಲ್ಲಿ ಇಳಿಯುತ್ತಾರೆಯೋ, ಅಲ್ಲಿ ಅವರನ್ನು ಕೂರಿಸಿದರು. ಮಹಾರಾಜರು ಸ್ವತಃ ಬೈರಾಗಿಯ ವೇಷವನ್ನು ಧರಿಸಿ ಅವರ ಪಕ್ಕದಲ್ಲಿ ನಿಂತರು.
ಸ್ವಲ್ಪ ಸಮಯದ ನಂತರ ಬಹಳಷ್ಟು ಜನರು ಸೇರಿದರು. ಬೈರಾಗಿಯು ಉಪಸ್ಥಿತರಿಗೆ ಹೀಗೆ ಹೇಳಿದನು, ‘ಜನರೇ, ಕೇಳಿರಿ ! ಈ ಮಹಾರೋಗಿ ನನ್ನ ಸಹೋದರ. ಕಳೆದ ವರ್ಷ ನಾವಿಬ್ಬರೂ ವಿಶ್ವೇಶ್ವರನ ಸೇವೆಯನ್ನು ಅತ್ಯಂತ ಮನಃಪೂರ್ವಕವಾಗಿ ಮಾಡಿದೆವು. ಆಗ ವಿಶ್ವೇಶ್ವರ ಪ್ರಸನ್ನನಾಗಿ ನನ್ನ ಸಹೋದರನಿಗೆ, ‘ಗಂಗೆಯಲ್ಲಿ ಸ್ನಾನ ಮಾಡಿದ ನಂತರ ನನ್ನ ಪಾಪ ನಾಶವಾಗಿ ನಾನು ಶುದ್ಧನಾದೆನು’ ಎಂಬ ಭಾವವಿರುವ ಯಾವುದೇ ಯಾತ್ರಿಕನು ಒಮ್ಮೆ ನಿನ್ನನ್ನು ಆಲಂಗಿಸಿಕೊಂಡರೆ ನಿನ್ನ ರೋಗ ಹೋಗುತ್ತದೆ’ ಎಂದು ವರ ಕೊಟ್ಟನು.
ಇಲ್ಲಿ ಇಷ್ಟು ಜನ ಸೇರಿದ್ದೀರಿ, ಯಾರಾದರೊಬ್ಬರು ನನ್ನ ಸಹೋದರನಿಗೆ ಇಷ್ಟು ಉಪಕಾರ ಮಾಡಿರಿ !’ ಬೈರಾಗಿಯ ಮಾತನ್ನು ಕೇಳಿ ಜನಸಂದಣಿಯಲ್ಲಿನ ೮-೧೦ ಜನರು ಮುಂದೆ ಬಂದರು. ಆಗ ಬೈರಾಗಿಯು ಆ ಜನರನ್ನು ನಿಲ್ಲಿಸಿ ಹೀಗೆ ಹೇಳಿದನು, ‘ಒಂದು ಕ್ಷಣ ನಿಲ್ಲಿ ! ವಿಶ್ವೇಶ್ವರನು ಮುಂದೆ ಹೀಗೆಯೂ ಹೇಳಿದ್ದಾನೆ, ‘ಇವನನ್ನು ಆಲಂಗಿಸುವ ಯಾತ್ರಿಕನಿಗೆ ಈ ರೋಗ ತಗಲುತ್ತದೆ; ಆದರೆ ಅವನು ಪುನಃ ಗಂಗೆಯಲ್ಲಿ ಸ್ನಾನ ಮಾಡಿದರೆ ಅವನ ಭಾವ ಶುದ್ಧವಾಗಿರುವುದರಿಂದ ಅವನು ರೋಗಮುಕ್ತನಾಗುತ್ತಾನೆ.’
ಹೀಗೆ ಹೇಳಿದ ನಂತರ ಎಲ್ಲರೂ ಹೊರಟುಹೋದರು; ಆದರೆ ಅವರಲ್ಲಿನ ಒಬ್ಬ ತರುಣ ರೈತನು ಮಾತ್ರ ಹೆಚ್ಚಿಗೆ ವಿಚಾರ ಮಾಡದೇ ಬಹಳ ನಿಷ್ಠೆಯಿಂದ ಶಾಂತಾಶ್ರಮಸ್ವಾಮಿಗಳನ್ನು ಆಲಂಗಿಸಿಕೊಂಡನು. ಅನಂತರ ಕೂಡಲೇ ಗೊಂದವಲೇಕರ ಮಹಾರಾಜರು ತಾವಾಗಿಯೇ ಆ ರೈತನನ್ನು ಆಲಂಗಿಸಿಕೊಂಡರು ಮತ್ತು ‘ಮಗು, ನಿನ್ನ ಕಾಶೀಯಾತ್ರೆಯು ನಿಜವಾಗಿಯೂ ಫಲ ಗೊಂಡಿತು. ಖಂಡಿತವಾಗಿ ನಿನ್ನ ಜನ್ಮದ ಕಲ್ಯಾಣವಾಯಿತು ಎಂದು ತಿಳಿ !’ ಎಂದು ಹೇಳಿದರು.
ಶಾಂತಾಶ್ರಮಸ್ವಾಮಿಗಳಿಗೆ ಈ ಪ್ರಸಂಗದ ಅರ್ಥವು ತಾನಾಗಿಯೇ ತಿಳಿಯಿತು !’
(ಆಧಾರ : ಬೆಲಸರೆ ಲಿಖಿತ ‘ಶ್ರೀಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರ ಚರಿತ್ರೆ ಮತ್ತು ವಾಙ್ಮಯ’)
ಎ. ಕುಂಭಮೇಳದ ಸಮಯದಲ್ಲಿ ಸತ್ಪುರುಷರು ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಗಂಗೆ ಶುದ್ಧಳಾಗುತ್ತಾಳೆ
ಕುಂಭಮೇಳದ ಸಮಯದಲ್ಲಿ ಸತ್ಪುರುಷರು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ; ಏಕೆಂದರೆ ಇತರರ ಸ್ನಾನದಿಂದ ಅಶುದ್ಧವಾದ ಗಂಗೆಯು ಸತ್ಪುರುಷರ ಶಕ್ತಿಯಿಂದ ಶುದ್ಧಳಾಗುತ್ತಾಳೆ. ಆದುದರಿಂದಲೇ ಸಂತ ಏಕನಾಥ ಮಹಾರಾಜರು (ಏಕನಾಥೀ ಭಾಗವತ, ಅಧ್ಯಾಯ ೨, ದ್ವಿಪದಿ ೨೫೧ ರಲ್ಲಿ) ಹೇಳುತ್ತಾರೆ, ‘ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಜನರು ಪವಿತ್ರರಾಗುತ್ತಾರೆ; ಆದರೆ ಪಾಪಿ ಜನರ ಪಾಪವು ಗಂಗೆಯಲ್ಲಿ ಉಳಿಯುವುದರಿಂದ ಅಪವಿತ್ರಳಾದ ಗಂಗೆಯು ತನ್ನ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ಸಂತರ ಚರಣಸ್ಪರ್ಶವನ್ನು ಬಯಸುತ್ತಾಳೆ.’
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)