ಅ. ಗಂಗಾತೀರದ ವೈಶಿಷ್ಟ್ಯಗಳು
ಅ ೧. ಎಲ್ಲ ಕಾಲದಲ್ಲಿಯೂ ಶುಭ ಸ್ಥಾನಗಳಾಗಿರುತ್ತವೆ : ‘ಗಂಗೆಯ ತೀರವು ಯಾವಾಗಲೂ ಎಲ್ಲ ಕಾಲದಲ್ಲಿಯೂ ಶುಭವಾಗಿದೆ, ತೀರದ ಮೇಲಿನ ದೇಶವೂ ಶುಭವಾಗಿದೆ ಮತ್ತು ತೀರದ ಮೇಲಿನ ಎಲ್ಲ ಜನರು ದಾನವನ್ನು ಗ್ರಹಿಸಲು ಯೋಗ್ಯರಾಗಿದ್ದಾರೆ.’ (ಸ್ಕಂದಪುರಾಣ, ಕಾಶಿಖಂಡ, ಅಧ್ಯಾಯ ೨೭, ಶ್ಲೋಕ ೬೯)
ಅ ೨. ಪಿತೃಗಳ ಮುಕ್ತಿಸ್ಥಾನ : ಗಂಗೆಯ ದಡದ ಮೇಲೆ ಪಿಂಡದಾನ ಮಾಡುವುದರಿಂದ ಪಿತೃಗಳಿಗೆ ಮುಕ್ತಿ ಸಿಗುತ್ತದೆ. ಗಂಗೆಯಿಂದಾಗುವ ಮೂಲ ಪ್ರಯೋಜನವೇ ‘ಪಿತೃಗಳಿಗೆ ಮುಕ್ತಿ ಕೊಡುವುದಾಗಿದೆ’; ಆದುದರಿಂದ ಭಕ್ತಾದಿಗಳಿಗೆ ‘ತಮ್ಮ ಮೃತ್ಯು ಮತ್ತು ಅಂತ್ಯಸಂಸ್ಕಾರವು ಗಂಗಾತೀರದಲ್ಲಿ ಆಗಬೇಕು’ ಎಂದೆನಿಸುತ್ತದೆ.
ಯಜ್ಞಾದಿ ಕೃತಿಗಳಿಂದ ಉತ್ಪನ್ನವಾಗುವ ಪುಣ್ಯಫಲವು ನೈಸರ್ಗಿಕವಾಗಿದೆ; ಆದರೆ ಎಳ್ಳಿನೊಂದಿಗೆ ಗಂಗಾಜಲದ ಪಿತೃತರ್ಪಣ ಅತ್ಯಂತ ದುರ್ಲಭವಾಗಿದೆ. (ಭವಿಷ್ಯಪುರಾಣ)
ಅ ೩. ಸಾಧನೆಗಾಗಿ ಉಪಯುಕ್ತ : ದೇವತೆಗಳ ಪೂಜೆ, ಜಪ, ತಪ, ಯಜ್ಞ, ದಾನ, ಶ್ರಾದ್ಧ ಮುಂತಾದ ಕೃತಿಗಳನ್ನು ಗಂಗಾತೀರದಲ್ಲಿ ಮಾಡಿದರೆ ಅದಕ್ಕೆ ಕೋಟಿ ಪಟ್ಟು ಹೆಚ್ಚು ಫಲಪ್ರಾಪ್ತಿಯಾಗುತ್ತದೆ. (ಸ್ಕಂದಪುರಾಣ)
‘ಗಂಗಾ ನದಿಯ ದಡದಲ್ಲಿ ಅನೇಕ ಋಷಿಮುನಿಗಳು ತಪಸ್ಸು ಮಾಡಿದ್ದಾರೆ. ಇಂದಿಗೂ ಅನೇಕ ಋಷಿಗಳ ಆಶ್ರಮಗಳು ಈ ನದಿಯ ದಡದಲ್ಲಿವೆ.’ – ವೈದ್ಯಾಚಾರ್ಯ ಸದ್ಗುರು (ಡಾ.) ವಸಂತ ಬಾಳಾಜಿ ಆಠವಲೆ.
ಅ ೪. ಸಿದ್ಧಿಕ್ಷೇತ್ರ : ಮಹಾಭಾರತದಲ್ಲಿ (ಪರ್ವ ೩, ಅಧ್ಯಾಯ ೮೩, ಶ್ಲೋಕ ೯೭ ರಲ್ಲಿ) ಪುಲಸ್ತ್ಯಋಷಿಗಳು ಭೀಷ್ಮನಿಗೆ ಹೇಳುತ್ತಾರೆ,
ಯತ್ರ ಗಂಗಾ ಮಹಾರಾಜ ಸ ದೇಶಸ್ತತ್ತಪೋವನಮ್ |
ಸಿದ್ಧಿಕ್ಷೇತ್ರಂ ಚ ತಂಜ್ಞೇಯಂ ಗಂಗಾತೀರಸಮಾಶ್ರಿತಮ್ ||
ಅರ್ಥ : ಹೇ ಮಹಾರಾಜಾ, ‘ಗಂಗೆ ಹರಿಯುವ ದೇಶ ಮತ್ತು ಗಂಗಾ ತೀರದಲ್ಲಿರುವ ತಪೋವನ ಸಿದ್ಧಿಕ್ಷೇತ್ರಗಳಾಗಿವೆ’ ಎಂದು ತಿಳಿಯಬೇಕು.
ಆ. ಗಂಗಾದಡದ ಮೇಲೆ ಪಾಲಿಸಬೇಕಾದ ವಿಧಿನಿಷೇಧಗಳು
ಆ ೧. ಗಂಗಾದಡದಲ್ಲಿ ಇತರ ತೀರ್ಥಗಳನ್ನು ಸ್ತುತಿಸಬೇಡಿರಿ ! : ‘ಯಾರು ಗಂಗೆಯ ದಡದಲ್ಲಿ (ಗಂಗೆಯನ್ನು ತುಚ್ಛವಾಗಿ ಕಂಡು) ಇತರ ತೀರ್ಥಗಳನ್ನು ಸ್ತುತಿಸುತ್ತಾರೆಯೋ ಮತ್ತು ಮನಸ್ಸಿನಲ್ಲಿ ಉಚ್ಚ ವಿಚಾರಗಳನ್ನು ಮಾಡುವುದಿಲ್ಲವೋ, ಅವರು ನರಕಕ್ಕೆ ಹೋಗುತ್ತಾರೆ.’ (ಸ್ಕಂದಪುರಾಣ, ಕಾಶೀಖಂಡ, ಅಧ್ಯಾಯ ೨೭, ಶ್ಲೋಕ ೮೦)
ಆ ೨. ಗಂಗಾತೀರದಲ್ಲಿ ವಾಸಿಸಬೇಡಿರಿ ! :
ತೀರಾದ್ಗವ್ಯೂತಿಮಾತ್ರಂ ತು ಪರಿತಃ ಕ್ಷೇತ್ರಮುಚ್ಯತೇ ||
ತೀರಂ ತ್ಯಕ್ತ್ವಾ ವಸೇತ್ಕ್ಷೇತ್ರೇ ತೀರೇ ವಾಸೋ ನ ಚೇಷ್ಯತೇ |
– ನಾರದಪುರಾಣ, ಉತ್ತರಖಂಡ, ಅಧ್ಯಾಯ ೪೩, ಶ್ಲೋಕ ೧೧೯, ೧೨೦
ಅರ್ಥ : ಗಂಗಾತೀರದಿಂದ ಒಂದು ಗವ್ಯೂತಿ ವರೆಗಿನ ಭಾಗವನ್ನು ‘ಕ್ಷೇತ್ರ’ ಎನ್ನುತ್ತಾರೆ.
(೧ ಗವ್ಯೂತಿ = ೨ ಕೋಸ = ೬ ಕಿ.ಮೀ.) ಗಂಗೆಯ ತೀರವನ್ನು ಬಿಟ್ಟು ಈ ಕ್ಷೇತ್ರದಲ್ಲಿ ವಾಸಿಸಬೇಕು. ಗಂಗಾತೀರದಲ್ಲಿ ವಾಸಿಸುವುದು ಯೋಗ್ಯವಲ್ಲ.
ಇ. ಮಹತ್ವದ ತೀರ್ಥಕ್ಷೇತ್ರಗಳು
ಇ ೧. ಗಂಗೋತ್ರಿ : ಇಲ್ಲಿ ಬ್ರಹ್ಮ, ವಿಷ್ಣು, ಸೂರ್ಯ ಮುಂತಾದ ದೇವತೆಗಳ ಕುಂಡಗಳಿವೆ. ಗಂಗೆಯು ಉಗಮದಿಂದ ‘ಭಾಗೀರಥೀ’ ಎಂಬ ಹೆಸರಿನಿಂದ ಪಶ್ಚಿಮದ ಕಡೆಗೆ ಮತ್ತು ದಕ್ಷಿಣದ ಕಡೆಗೆ ದೇವಪ್ರಯಾಗದವರೆಗೆ ಹರಿಯುತ್ತದೆ. ವೈಶಾಖ ಮಾಸದಲ್ಲಿ ಅಕ್ಷಯ ತೃತೀಯಾದಿಂದ ಆರು ತಿಂಗಳುಗಳ ಕಾಲ ಗಂಗೋತ್ರಿಯಲ್ಲಿ ಯಾತ್ರೆ ನಡೆಯುತ್ತದೆ. ಕಾರ್ತಿಕದಲ್ಲಿ ಅಲ್ಲಿ ಹಿಮ ಬೀಳತೊಡಗುವುದರಿಂದ ಕಾರ್ತಿಕ ಹುಣ್ಣಿಮೆಗೆ ಗಂಗಾದ್ವಾರವು ಮುಚ್ಚುತ್ತದೆ.
ಇ ೧ ಅ. ಗಂಗೆಯ ಉಗಮಸ್ಥಾನ – ಗಂಗೋದ್‌ಭೇದತೀರ್ಥ: ಉತ್ತರಾಖಂಡದ ಟೆಹರೀ-ಗಢವಾಲ ಜಿಲ್ಲೆಯಲ್ಲಿ ಹಿಮಾಲಯದ ಒಂದು ಎತ್ತರ ಪರ್ವತದ ಮೇಲೆ ‘ಗಂಗೋತ್ರಿ’ ಹೆಸರಿನ ಸ್ಥಾನವಿದೆ. ಗಂಗೋತ್ರಿಯನ್ನು ಗಂಗೆಯ ಉಗಮಸ್ಥಾನವೆಂದು ಪರಿಗಣಿಸಲಾಗಿದ್ದರೂ, ಈ ಸ್ಥಾನದಿಂದ ೨೯ ಕಿ.ಮೀ. ದೂರದಲ್ಲಿನ ‘ಶ್ರೀಮುಖ’ ಹೆಸರಿನ ಒಂದು ಹಿಮಪರ್ವತದ ಗುಹೆಯಲ್ಲಿ ಗೋಮುಖ ಆಕಾರದ ಒಂದು ದೊಡ್ಡ ಕಲ್ಲಿದೆ. ಅದರಿಂದ ಗಂಗಾನದಿಯು ಅವತರಿಸುತ್ತದೆ. ಪುರಾಣದಲ್ಲಿ ಈ ಗುಹೆಗೆ ‘ಗೋಮುಖಿ’ ಎನ್ನಲಾಗಿದೆ. ಈ ಗೋಮುಖ ಸ್ಥಾನಕ್ಕೆ ‘ಗಂಗೋದ್‌ಭೇದತೀರ್ಥ’ ಎನ್ನುತ್ತಾರೆ.
ಇ ೨. ಪಂಚಪ್ರಯಾಗ : ಪ್ರಯಾಗವೆಂದರೆ ಸಂಗಮ. ಉತ್ತರಾಂಚಲದ ವಿಷ್ಣುಪ್ರಯಾಗ, ನಂದಪ್ರಯಾಗ, ಕರ್ಣಪ್ರಯಾಗ, ರುದ್ರಪ್ರಯಾಗ ಮತ್ತು ದೇವಪ್ರಯಾಗಗಳಿಗೆ ‘ಪಂಚಪ್ರಯಾಗ’ ಎನ್ನುತ್ತಾರೆ. ಈ ಪಂಚಪ್ರಯಾಗ ಮತ್ತು ಪ್ರಯಾಗರಾಜ ಇವುಗಳನ್ನು ಧಾರ್ಮಿಕದೃಷ್ಟಿಯಿಂದ ಪೂಜನೀಯವೆಂದು ಪರಿಗಣಿಸಲಾಗುತ್ತದೆ.
ಇ ೩. ಗಂಗಾದ್ವಾರ (ಹರದ್ವಾರ ಅಥವಾ ಹರಿದ್ವಾರ) : ಇದು ಉತ್ತರಾಂಚಲ ರಾಜ್ಯದ ಗಂಗೆಯ ತೀರದಲ್ಲಿರುವ ಪ್ರಾಚೀನ ತೀರ್ಥಕ್ಷೇತ್ರ ಸಪ್ತಮೋಕ್ಷದಾಯಿನಿ ನಗರಗಳ ಪೈಕಿ ಒಂದಾಗಿದೆ. ಹಿಮಾಲಯದ ಕಣಿವೆಗಳಿಂದ ವೇಗವಾಗಿ ಹರಿಯುವ ಗಂಗೆಯ ಪ್ರವಾಹವು ಇಲ್ಲಿ ಸಮಭೂಮಿಯ ಮೇಲೆ ಬಂದು ನಿಧಾನವಾಗಿ ಹರಿಯತೊಡಗುತ್ತದೆ. ಈ ಸ್ಥಾನಕ್ಕೆ ‘ಹರದ್ವಾರ ಅಥವಾ ಹರಿದ್ವಾರ’ ಎಂದೂ ಹೇಳುತ್ತಾರೆ. ಇಲ್ಲಿ ಶ್ರಾದ್ಧ ಮತ್ತು ಪಿಂಡದಾನವನ್ನು ಮಾಡದೇ ಕೇದಾರನಾಥ, ಬದ್ರೀನಾರಾಯಣ ಮುಂತಾದ ತೀರ್ಥಸ್ಥಾನಗಳ ಯಾತ್ರೆಯನ್ನು ಮಾಡಲು ಆಗುವುದಿಲ್ಲ. ಮಕರ ಸಂಕ್ರಾಂತಿಯ ದಿನ ಇಲ್ಲಿ ಭಕ್ತರ ಜನಸಂದಣಿಯಿರುತ್ತದೆ.
ಇ ೪. ಕಾಶಿ (ವಾರಾಣಸಿ) : ಇಲ್ಲಿನ ವಿಶ್ವೇಶ್ವರ ದೇವಸ್ಥಾನವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ಪವಿತ್ರ ದೇವಸ್ಥಾನ ಮತ್ತು ಗಂಗಾ ನದಿಯ ಸಾನ್ನಿಧ್ಯದಿಂದಾಗಿ ಈ ತೀರ್ಥಕ್ಷೇತ್ರ ವನ್ನು ‘ಮೋಕ್ಷದಾಯಿನಿ’ ಎಂದು ಗುರುತಿಸುತ್ತಾರೆ. ಈ ಸ್ಥಾನವು ತೀರ್ಥಕ್ಷೇತ್ರಗಳಲ್ಲಿಯೇ ಸರ್ವಶ್ರೇಷ್ಠವಾಗಿದೆ. ಕಾಶಿಯಲ್ಲಿ ಗಂಗೆಯ ಮಹಾತೀರ್ಥವಿರುವುದರಿಂದ ಅಲ್ಲಿ ಗಂಗಾಸ್ನಾನ, ಶ್ರಾದ್ಧ ಇತ್ಯಾದಿ ತೀರ್ಥವಿಧಿಗಳನ್ನು ಮಾಡುತ್ತಾರೆ. ಅಲ್ಲಿನ ಅಸ್ಸೀ, ದಶಾಶ್ವಮೇಧ, ಮಣಿಕರ್ಣಿಕಾ, ಪಂಚಗಂಗಾ ಮತ್ತು ಆದಿಕೇಶವ ಘಟ್ಟಗಳಿಗೆ ‘ಪಂಚತೀರ್ಥ’ ಎನ್ನಲಾಗುತ್ತದೆ.
ಇ ೫. ಪ್ರಯಾಗ : ಇದು ಉತ್ತರಪ್ರದೇಶದಲ್ಲಿನ ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ‘ತ್ರಿವೇಣಿ ಸಂಗಮ’ದಲ್ಲಿ ನೆಲೆಸಿರುವ ತೀರ್ಥಸ್ಥಾನವಾಗಿದೆ. ಇದು ತ್ರಿಲೋಕದಲ್ಲಿನ ಸರ್ವೋತ್ತಮ ತೀರ್ಥಸ್ಥಾನವಾಗಿರುವುದರಿಂದ ಇದಕ್ಕೆ ‘ಪ್ರಯಾಗರಾಜ’ ಅಥವಾ ‘ತೀರ್ಥರಾಜ’ ಎಂದೂ ಹೇಳಲಾಗುತ್ತದೆ.
‘ಗಂಗಾ-ಯಮುನಾ ಇವೆರಡು ನದಿಗಳು ಜೊತೆಗೂಡುವಲ್ಲಿ ಸ್ನಾನ ಮಾಡುವವರಿಗೆ ಸ್ವರ್ಗ ಸಿಗುತ್ತದೆ’, ಎಂದು ಋಗ್ವೇದದ ಖಿಲಸೂಕ್ತದಲ್ಲಿ ಹೇಳಲಾಗಿದೆ.
ಇ ೬. ಗಂಗಾಸಾಗರ (ಕಪಿಲತೀರ್ಥ) : ಈ ಬಂಗಾಲದಲ್ಲಿನ ತೀರ್ಥಕ್ಷೇತ್ರವನ್ನು ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ನಾಲ್ಕು ಧಾಮಗಳ ಪೈಕಿ ಒಂದಾಗಿದೆ ಎಂದು ಪರಿಗಣಿಸಲಾಗುತ್ತದೆ. ಯಾತ್ರಿಕರು ಇಲ್ಲಿ ಸಮುದ್ರಸ್ನಾನ, ಕ್ಷೌರ ಮತ್ತು ಶ್ರಾದ್ಧಕರ್ಮಗಳನ್ನು ಮಾಡುತ್ತಾರೆ. ಇಲ್ಲಿ ಮಕರ ಸಂಕ್ರಾಂತಿಗೆ ೩ ದಿನ ಸ್ನಾನಯಾತ್ರೆ ನಡೆಯುತ್ತದೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)
Good information🙏