ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗೀತೆಗಿರುವ ಸ್ಥಾನವೇ ಗಂಗೆಗೆ ಧಾರ್ಮಿಕ ಕ್ಷೇತ್ರದಲ್ಲಿದೆ
ಪುಣ್ಯಸಲಿಲಾ ಗಂಗಾ ನದಿಯ ಮಹತ್ವವು ಅದ್ವಿತೀಯವಾಗಿದೆ ! ಭೌಗೋಳಿಕ ದೃಷ್ಟಿಯಿಂದ ಗಂಗಾ ನದಿಯು ಭಾರತವರ್ಷದ ಹೃದಯರೇಖೆ ! ಇತಿಹಾಸದ ದೃಷ್ಟಿಯಿಂದ ಪ್ರಾಚೀನ ಕಾಲದಿಂದ ಆಧುನಿಕ ಕಾಲದ ವರೆಗೆ ಮತ್ತು ಗಂಗೋತ್ರಿಯಿಂದ ಗಂಗಾಸಾಗರದ ವರೆಗಿನ ಗಂಗೆಯ ಕಥೆ ಎಂದರೆ ಹಿಂದೂಗಳ ಸಭ್ಯತೆ ಮತ್ತು ಸಂಸ್ಕೃತಿಯ ಅಮೃತಗಾಥೆಯಾಗಿದೆ. ರಾಷ್ಟ್ರದ ದೃಷ್ಟಿಯಿಂದ ಆಚಾರ-ವಿಚಾರ, ವೇಷಭೂಷಣ, ಜೀವನಪದ್ಧತಿ ಮತ್ತು ವಿಭಿನ್ನ ಜಾತಿಯವರನ್ನು ಒಂದಾಗಿಸುವ ಗಂಗಾ ನದಿಯು ಹಿಂದೂ ಸ್ಥಾನದ ರಾಷ್ಟ್ರ-ಪ್ರತೀಕವೇ ಆಗಿದೆ. ಧಾರ್ಮಿಕ ದೃಷ್ಟಿಯಿಂದ ಇತಿಹಾಸದ ಉಷಃಕಾಲದಿಂದ ಕೋಟಿಕೋಟಿ ಹಿಂದೂ ಭಕ್ತರಿಗೆ ಮೋಕ್ಷವನ್ನು ಪ್ರದಾನಿಸುವ ಗಂಗಾ ವಿಶ್ವದ ಸರ್ವಶ್ರೇಷ್ಠ ತೀರ್ಥವಾಗಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗೀತೆಗಿರುವ ಸ್ಥಾನವೇ ಗಂಗೆಗೆ ಧಾರ್ಮಿಕ ಕ್ಷೇತ್ರದಲ್ಲಿದೆ.
ಗಂಗಾ ಸರ್ವದೇವಮಯಿ, ಸರ್ವತೀರ್ಥಮಯಿ, ಸರಿತ್‌ಶ್ರೇಷ್ಠಾ ಮತ್ತು ಮಹಾನದಿಯಂತೂ ಆಗಿದ್ದಾಳೆ; ಆದರೆ ‘ಸರ್ವಪಾತಕನಾಶಿನಿ’ (ಎಲ್ಲ ಪಾಪಗಳನ್ನು ನಾಶ ಮಾಡುವವಳು) ಯು ಅವಳ ಮುಖ್ಯ ಪರಿಚಯವಾಗಿದೆ. ಜಗನ್ನಾಥ ಪಂಡಿತರು ಗಂಗೆಗೆ ಪ್ರಾರ್ಥನೆ ಮಾಡುವಾಗ ಹೀಗೆ ಹೇಳುತ್ತಾರೆ, ‘ಜಲಂ ತೆ ಜಂಬಾಲಂ ಮಮ ಜನನಜಾಲಂ ಜರ- ಯತು |’ ಅಂದರೆ ‘ಗಂಗಾಮಾತೆ ! ಪಾಚಿ ಮತ್ತು ಕೆಸರಿರುವ ನಿನ್ನ ನೀರು ನನ್ನ ಪಾಪಗಳನ್ನು ದೂರಗೊಳಿಸಲಿ ! (ಗಂಗಾಲಹರಿ, ಶ್ಲೋಕ ೨೦). ಪ್ರತಿಯೊಬ್ಬ ಹಿಂದೂವೂ ಆಯುಷ್ಯದಲ್ಲಿ ಒಮ್ಮೆಯಾದರೂ ಪತಿತಪಾವನ ಗಂಗೆಯಲ್ಲಿ ಸ್ನಾನ ಮಾಡುವ ಅಭಿಲಾಷೆಯನ್ನಿಡುತ್ತಾನೆ. ಹಿಂದೂ ಧರ್ಮವು ‘ಗಂಗಾಸ್ನಾನ’ವನ್ನು ಒಂದು ಧಾರ್ಮಿಕ ವಿಧಿ ಎಂದು ಪರಿಗಣಿಸಿದೆ.
ಗಂಗಾ ನದಿಯ ತೀರವು ತೀರ್ಥಕ್ಷೇತ್ರವಾಗಿದ್ದು ಅದು ಹಿಂದೂಗಳಿಗೆ ಅತಿ ವಂದನೀಯ ಮತ್ತು ಉಪಾಸನೆಗಾಗಿ ಪವಿತ್ರ ಸಿದ್ಧಿಕ್ಷೇತ್ರವೇ ಆಗಿದೆ. ಗಂಗಾದರ್ಶನ, ಗಂಗಾಸ್ನಾನ ಮತ್ತು ಪಿತೃ ತರ್ಪಣ ಈ ಮಾರ್ಗಗಳಿಂದ ಮೋಕ್ಷವನ್ನು ಸಾಧ್ಯಗೊಳಿಸಬಹುದು ಎಂಬ ಸತ್ಯವನ್ನು ಧರ್ಮಾಧಿಕಾರಿಗಳು ಒಪ್ಪಿಕೊಂಡಿದ್ದಾರೆ.
೧. ‘ಗಂಗಾ’ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ
ಅ. ಗಮಯತಿ ಭಗವತ್ಪದಮ್ ಇತಿ ಗಂಗಾ |
ಅರ್ಥ : (ಸ್ನಾನ ಮಾಡುವ ಜೀವಕ್ಕೆ) ಭಗವಂತನ ಚರಣಗಳವರೆಗೆ ತಲುಪಿಸುವವಳೇ ಗಂಗಾ.
ಆ. ಗಮ್ಯತೇ ಪ್ರಾಪ್ಯತೇ ಮೋಕ್ಷಾರ್ಥಿಭಿಃ ಇತಿ ಗಂಗಾ |
ಅರ್ಥ : ಮೋಕ್ಷಾರ್ಥಿಗಳು, ಅಂದರೆ ಮುಮುಕ್ಷುಗಳು ಯಾರ ಕಡೆಗೆ ಹೋಗುತ್ತಾರೆಯೋ, ಅವಳೇ ಗಂಗಾ.
೨. ಬ್ರಹ್ಮಾಂಡದಲ್ಲಿ ಗಂಗಾ ನದಿಯ ಉತ್ಪತ್ತಿ ಮತ್ತು ಭೂಲೋಕದಲ್ಲಿ ಅವಳ ಅವತರಣ
೨ ಅ. ಬ್ರಹ್ಮಾಂಡದಲ್ಲಿನ ಉತ್ಪತ್ತಿ : ವಾಮನ ಅವತಾರದಲ್ಲಿ ವಿಷ್ಣುವು ದಾನಶೂರ ಬಲಿರಾಜನಲ್ಲಿ ಭಿಕ್ಷೆ ಎಂದು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಬೇಡಿದನು. ವಾಮನನೆಂದರೆ ವಿಷ್ಣುವೆಂಬುದನ್ನು ತಿಳಿಯದ ಕಾರಣ ಬಲಿರಾಜನು ಆ ಕ್ಷಣವೇ ವಾಮನನಿಗೆ ಮೂರು ಹೆಜ್ಜೆ ಭೂಮಿಯನ್ನು ದಾನ ಮಾಡಿದನು. ವಾಮನನು ವಿರಾಟ ರೂಪವನ್ನು ಧರಿಸಿ ಒಂದು ಹೆಜ್ಜೆಯಿಂದ ಸಂಪೂರ್ಣ ಪೃಥ್ವಿ ಮತ್ತು ಇನ್ನೊಂದು ಹೆಜ್ಜೆಯಿಂದ ಅಂತರಿಕ್ಷವನ್ನು ವ್ಯಾಪಿಸಿದನು. ಅವುಗಳ ಪೈಕಿ ಎರಡನೇ ಹೆಜ್ಜೆಯನ್ನು ಎತ್ತುವಾಗ ವಾಮನನ (ವಿಷ್ಣುವಿನ) ಎಡಗಾಲಿನ ಹೆಬ್ಬೆರಳು ತಾಗಿ ಬ್ರಹ್ಮಾಂಡದ ಸೂಕ್ಷ -ಜಲದ ಕವಚ (ಟಿಪ್ಪಣಿ ೧) ಒಡೆಯಿತು. ಅದರಿಂದ ಗರ್ಭೋದಕದಂತೆ ಬ್ರಹ್ಮಾಂಡದ ಹೊರಗಿನ ಸೂಕ್ಷ -ಜಲವು ಬ್ರಹ್ಮಾಂಡದೊಳಗೆ ನುಗ್ಗಿತು. ಈ ಸೂಕ್ಷ -ಜಲವೆಂದರೆ ಗಂಗಾ !
ಈ ಗಂಗೆಯ ಪ್ರವಾಹವು ಮೊದಲು ಸತ್ಯಲೋಕಕ್ಕೆ ಹೋಯಿತು. ಬ್ರಹ್ಮದೇವನು ಅವಳನ್ನು ತನ್ನ ಕಮಂಡಲುವಿನಲ್ಲಿ ಧರಿಸಿದನು. ನಂತರ ಅವನು ತನ್ನ ಕಮಂಡಲುವಿನಲ್ಲಿನ ನೀರಿನಿಂದ ಶ್ರೀವಿಷ್ಣುವಿನ ಚರಣಗಳನ್ನು ತೊಳೆದನು. ಆ ಜಲದಿಂದ ಗಂಗೆ ಉತ್ಪನ್ನಳಾದಳು. ನಂತರ ಅವಳು ಸತ್ಯಲೋಕದಿಂದ ಕ್ರಮವಾಗಿ ತಪೋಲೋಕ, ಜನಲೋಕ, ಮಹರ್ಲೋಕ ಈ ಮಾರ್ಗದಿಂದ ಸ್ವರ್ಗಲೋಕಕ್ಕೆ ಬಂದಳು.
ಟಿಪ್ಪಣಿ ೧ – ಹಿಂದೂ ಧರ್ಮಶಾಸ್ತ್ರಕ್ಕನುಸಾರ ಬ್ರಹ್ಮಾಂಡವು ಭೂಲೋಕಾದಿ ಸಪ್ತಲೋಕ ಮತ್ತು ಸಪ್ತಪಾತಾಳ ಎಂಬ ೧೪ ಭುವನಗಳಿಂದ ನಿರ್ಮಾಣವಾಗಿದೆ. ಬ್ರಹ್ಮಾಂಡವು ಲಂಬವರ್ತುಲಾ ಕಾರವಾಗಿದ್ದು ಅದರ ಹೊರಗೆ ನಾಲ್ಕೂ ದಿಕ್ಕುಗಳಲ್ಲಿ ಕ್ರಮವಾಗಿ ಸೂಕ್ಷ -ಪೃಥ್ವಿಯ, ಸೂಕ್ಷ – ಜಲದ, ಸೂಕ್ಷ -ತೇಜ, ಸೂಕ್ಷ -ವಾಯು, ಸೂಕ್ಷ -ಆಕಾಶ, ಅಹಂತತ್ತ್ವ, ಮಹತ್ತತತ್ತ್ವ ಮತ್ತು ಪ್ರಕೃತಿ ಎಂಬ ೮ ಕವಚಗಳಿರುತ್ತವೆ. ಈ ಕವಚದಲ್ಲಿನ ‘ಸೂಕ್ಷ -ಜಲದ ಕವಚ’ವೆಂದರೆ ಗಂಗಾ. ಆದುದರಿಂದಲೇ ಆಯುರ್ವೇದದಲ್ಲಿ ಗಂಗಾಜಲಕ್ಕೆ ‘ಅಂತರಿಕ್ಷಜಲ’ ಎಂದು ಹೇಳಲಾಗಿದೆ. (೧)
೩. ಗಂಗೆಯು ಭೂಲೋಕದಲ್ಲಿ ಅವತರಿಸಿದ ದಿನ !
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠೇ ಮಾಸಿ ಕುಜೇಹನಿ |
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ || – ವರಾಹಪುರಾಣ
ಅರ್ಥ : ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಭೌಮವಾರ (ಮಂಗಳವಾರ) ಮತ್ತು ಹಸ್ತ ನಕ್ಷತ್ರ ಎಂಬ ಯೋಗದಲ್ಲಿ ಗಂಗೆಯು ಸ್ವರ್ಗದಿಂದ ಧರಣಿಯ ಮೇಲೆ ಅವತರಿಸಿದಳು.
ಗಂಗಾವತರಣದ ತಿಥಿಯನ್ನು ಕೆಲವು ಪುರಾಣಗಳಲ್ಲಿ ವೈಶಾಖ ಶುಕ್ಲ ಪಕ್ಷ ತೃತೀಯವಾದರೆ, ಕೆಲವು ಪುರಾಣಗಳಲ್ಲಿ ಕಾರ್ತಿಕ ಹುಣ್ಣಿಮೆಯೆಂದು ಹೇಳಲಾಗಿದ್ದರೂ, ಹೆಚ್ಚಿನ ಪುರಾಣಗಳಲ್ಲಿ ‘ಜ್ಯೇಷ್ಠ ಶುಕ್ಲ ಪಕ್ಷ ದಶಮಿ’ಯನ್ನೇ ಗಂಗಾವತರಣದ ತಿಥಿ ಎಂದು ಹೇಳಲಾಗಿದೆ ಮತ್ತು ಅದೇ ಸರ್ವಮಾನ್ಯವಾಗಿದೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)
Thanks for the information very helpful
Good information🙏