ಮಗುವಿನ ಜನ್ಮದ ನಂತರ ಯಾವ ಸಂಸ್ಕಾರಗಳನ್ನು ಮಾಡಬೇಕು? (ನಾಲ್ಕನೇ, ಐದನೇ, ಆರನೇ ಮತ್ತು ಏಳನೇ ಸಂಸ್ಕಾರಗಳು)
ನಾಲ್ಕನೇ ಸಂಸ್ಕಾರ – ಜಾತಕರ್ಮ (ಜನ್ಮವಿಧಿ)
ಅ. ಉದ್ದೇಶ
ಗರ್ಭಾಶಯದಲ್ಲಿರುವಾಗ ಗರ್ಭಾಶಯದಲ್ಲಿನ ನೀರು, ಬಾಯಿಯ ಮೂಲಕ ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಹೋಗುತ್ತದೆ. ಅದು ಅಭಕ್ಷ್ಯವಾಗಿದ್ದು ಅದನ್ನು ಭಕ್ಷಿಸಿರುವುದರಿಂದ ಅದನ್ನು ‘ಉದಕಪ್ರಾಶನಾದಿ ದೋಷ’ವೆಂದು ಪರಿಗಣಿಸಲಾಗಿದೆ. ಗರ್ಭಾಶಯದಲ್ಲಿರುವಾಗ ಉದಕಪ್ರಾಶನಾದಿಗಳಿಂದ ಘಟಿಸಿರುವ ದೋಷಗಳು ದೂರವಾಗಬೇಕು ಮತ್ತು ಮಗುವಿನ ಮುಖವನ್ನು ನೋಡುವುದರಿಂದ ತಂದೆಯು ಋಣತ್ರಯದಿಂದ (ಪಿತೃಋಣ, ಋಷಿಋಣ, ದೇವಋಣದಿಂದ) ಹಾಗೂ ಸಮಾಜಋಣದಿಂದ ಮುಕ್ತನಾಗಬೇಕು, ಇದು ಜಾತಕರ್ಮ ವಿಧಿಯ ಉದ್ದೇಶವಾಗಿದೆ.
ಆ. ಪೂರ್ವಸಿದ್ಧತೆ
ಮಗುವಿನ ಜನ್ಮವಾದ ಕೂಡಲೆ ತಂದೆಯು ಮಗುವಿನ ಮುಖವನ್ನು ನೋಡಬೇಕು ನಂತರ ಉತ್ತರ ದಿಕ್ಕಿಗೆ ಮುಖ ಮಾಡಿ ಸ್ನಾನ ಮಾಡಿ ಶುಚಿಯಾದ ವಸ್ತ್ರವನ್ನು ಧರಿಸಿ ಗಂಧ ಹಚ್ಚಿಕೊಳ್ಳಬೇಕು. ಅನಂತರ ಹೊಕ್ಕಳಬಳ್ಳಿಯನ್ನು ತುಂಡರಿಸುವ ಮೊದಲು, ದಾದಿ ಇತ್ಯಾದಿ ಕೆಲಸ ಮಾಡುವ ವ್ಯಕ್ತಿಗಳಲ್ಲದೆ ಇತರ ಯಾರು ಸ್ಪರ್ಶಿಸಿರದ, ತಾಯಿಯ ಹಾಲನ್ನು ಕುಡಿದಿಲ್ಲದಂತಹ ಮತ್ತು ಸ್ನಾನವನ್ನು ಮಾಡಿಸಿದ ಮಗುವನ್ನು ತಾಯಿಯ ತೊಡೆಯ ಮೇಲೆ ಪೂರ್ವದಿಕ್ಕಿಗೆ ಮುಖ ಮಾಡಿ ಮಲಗಿಸಬೇಕು.
ಇ. ಸಂಕಲ್ಪ
‘ನನ್ನ ಮಗುವು ಗರ್ಭದಲ್ಲಿನ ನೀರನ್ನು ಕುಡಿದಿದ್ದಲ್ಲಿ ಎಲ್ಲ ದೋಷಗಳ ಪರಿಹಾರಕ್ಕಾಗಿ ಬೀಜಗರ್ಭದಿಂದ ನಡೆದಿರುವ ದೋಷಗಳ ನಿವಾರಣೆ, ಮಗುವಿನ ಆಯುಷ್ಯ ಮತ್ತು ಮೇಧಾಶಕ್ತಿ (ಬುದ್ಧಿಶಕ್ತಿ) ಇವುಗಳ ಬೆಳವಣಿಗೆಗಾಗಿ ಮತ್ತು ಶ್ರೀ ಪರಮೇಶ್ವರನ ಪ್ರೀತಿಗಾಗಿ ಜಾತಕರ್ಮ ಸಂಸ್ಕಾರವನ್ನು ಮಾಡುತ್ತೇನೆ. ಅದರ ಅಂಗವೆಂದು ಶ್ರೀ ಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕಾಪೂಜೆ ಮತ್ತು ನಾಂದೀಶ್ರಾದ್ಧವನ್ನು ಮಾಡುತ್ತೇನೆ.’
ಈ. ವಿಧಿ
ಈ ಸಂಸ್ಕಾರದ ಮಟ್ಟಿಗೆ ಜನನಶೌಚವು ಅನ್ವಯವಾಗುವುದಿಲ್ಲ.
ಶ್ರೀ ಗಣಪತಿ ಪೂಜೆಯಿಂದ ನಾಂದೀಶ್ರಾದ್ಧವಾದ ನಂತರ ಮುಂದಿನ ಮಂತ್ರವನ್ನು ಹೇಳುತ್ತಾರೆ : ‘ಹೇ ಪ್ರಿಯ ಪುತ್ರನೇ ! ನಿನಗೆ ಜೇನುತುಪ್ಪ ಮತ್ತು ತುಪ್ಪವನ್ನು ಮೊದಲು ಕುಡಿಸುತ್ತೇನೆ. ವಿಶ್ವೋತ್ಪಾದಕ ಪರಮೇಶ್ವರನ ದಯೆಯಿಂದ ನಿನಗೆ ಜ್ಞಾನ ಮತ್ತು ಧನಧಾನ್ಯಾದಿಗಳ ಸಮೃದ್ಧಿ ದೊರಕಲಿ. ಪರಮೇಶ್ವರನು ಸದಾಕಾಲ ನಿನ್ನ ರಕ್ಷಣೆ ಮಾಡಲಿ ಮತ್ತು ನಿನಗೆ ನೂರು ವರ್ಷಗಳಷ್ಟು ಆಯುಷ್ಯವನ್ನು ದಯಪಾಲಿಸಲಿ.’
ನಂತರ ಸುವರ್ಣ ಚಮಚದಿಂದ ಜೇನುತುಪ್ಪ ಮತ್ತು ತುಪ್ಪಗಳ ಮಿಶ್ರಣವನ್ನು ಬಾಲಕನಿಗೆ ಕುಡಿಸಬೇಕು. ತರುವಾಯ ಆ ಸುವರ್ಣವನ್ನು ನೀರಿನಿಂದ ತೊಳೆದು ಬಾಲಕನ ಬಲಗಿವಿಯಲ್ಲಿ ಇಡಬೇಕು. ಅನಂತರ ತನ್ನ ಮುಖವನ್ನು ಪುತ್ರನ ಮುಖದ ಸಮೀಪದಲ್ಲಿಟ್ಟು ‘ಓಂ ಮೇಧಾಂ ತೇ ದೇವಃ |’ ಎನ್ನುವ ವೇದಋಚೆಯನ್ನು ಹೇಳಬೇಕು. ಇದರ ಅರ್ಥವು ಹೀಗಿದೆ – ‘ಎಲೈ ಪ್ರಿಯ ಕುಮಾರನೇ ! ಪರಮೇಶ್ವರನು ನಿನಗೆ ವೇದಾಭ್ಯಾಸಕ್ಕಾಗಿ ತೀಕ್ಷ್ಣ ಹಾಗೂ ಒಳ್ಳೆಯ ಬುದ್ಧಿಯನ್ನು ಪ್ರದಾನಿಸಲಿ. ಪ್ರಾಣ ಅಪಾನಗಳನ್ನು ಹಾಗೂ ಅಖಿಲ ಸೋಮಾದಿಕರನ್ನು ಮಾಲಾಸಮಾನವಾಗಿ ಧರಿಸಿರುವ ಎರಡು ವಾಯುಗಳಾಗಿರುವ ಅಶ್ವಿನಿ ದೇವರು ನಿನಗೆ ಒಳ್ಳೆಯ ಬುದ್ಧಿ ಕೊಡಲಿ.’
ನಂತರ ಅದೇ ಸುವರ್ಣವನ್ನು ಬಾಲಕನ ಎಡಗಿವಿಯಲ್ಲಿಟ್ಟು ಮತ್ತೊಮ್ಮೆ ‘ಓಂ ಮೇಧಾಂ ತೇ ದೇವಃ |’ ಎನ್ನುವ ವೇದಋಚೆಯನ್ನು ಹೇಳಬೇಕು. ಬಂಗಾರದಲ್ಲಿ ಸಾತ್ತ್ವಿಕ ಲಹರಿಗಳನ್ನು ಗ್ರಹಿಸಿ ಪ್ರಕ್ಷೇಪಿಸುವ ಕ್ಷಮತೆಯು ಇತರ ಯಾವುದೇ ಧಾತುವಿಗಿಂತಲೂ ಹೆಚ್ಚಿಗೆ ಇರುತ್ತದೆ. ಆದುದರಿಂದಲೇ ಇಲ್ಲಿ ಬಂಗಾರವನ್ನು ಉಪಯೋಗಿಸುತ್ತಾರೆ.
ಅನಂತರ ಮಂತ್ರವನ್ನು ಹೇಳಿ ಮೂರು ಸಲ ಬಾಲಕನ ಮಸ್ತಕವನ್ನು ಮೂಸಬೇಕು ಮತ್ತು ಮುಂದೆ ಬಾಲಕನಿಗೆ ಇಡಬೇಕಾಗಿರುವ ಹೆಸರನ್ನು ಮನಸ್ಸಿನಲ್ಲಿ ನಿರ್ಧರಿಸಬೇಕು. ಗರ್ಭಾಶಯದಲ್ಲಿ ಇರುವಾಗ ಬಾಲಕನ ಬ್ರಹ್ಮರಂಧ್ರವು ಮುಚ್ಚಿರುತ್ತದೆ. ತಂದೆಯು ಮಸ್ತಕವನ್ನು ಮೂಸಿದಾಗ ಅದು ತೆರೆಯುತ್ತದೆ. ಕೆಲವೊಮ್ಮೆ ತಂದೆಯು ಮಸ್ತಕವನ್ನು ಮೂಸದೇ ಮೂರು ಬಾರಿ ಆ ಭಾಗದ ಮೇಲೆ ಉಸಿರು ಬಿಡುತ್ತಾನೆ. ಇದರಿಂದಲೂ ಮೂಸುವುದರಿಂದ ಆಗುವ ಲಾಭವೇ ಆಗುತ್ತದೆ. ತಂದೆಯು ಸಾತ್ತ್ವಿಕನಾಗಿದ್ದರೆ ಮಾತ್ರ ಹೀಗಾಗುತ್ತದೆ. ನಂತರ ಬಾಲಕನಿಗೆ ಸ್ನಾನ ಮಾಡಿಸಬೇಕು. ಅದರ ನಂತರ ಅವನ ಹೊಕ್ಕುಳಬಳ್ಳಿಯನ್ನು ಕತ್ತರಿಸುತ್ತಾರೆ. ನಂತರ ತಾಯಿಯು ಬಲಗಡೆಯ ಸ್ತನವನ್ನು (ಮೊಲೆಯನ್ನು) ತೊಳೆದು, ಮಂತ್ರವನ್ನು ಹೇಳಿ ಮಗುವಿಗೆ ಹಾಲನ್ನು ಕುಡಿಸಬೇಕು. ಬಲಗಡೆಯ ಸ್ತನವು ಪಿಂಗಳಾ ಅಥವಾ ಸೂರ್ಯನಾಡಿಗೆ ಸಂಬಂಧಪಟ್ಟಿರುವುದರಿಂದ ಬಾಲಕನ ಬಲನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಹಾಲನ್ನು ಜೀರ್ಣಿಸುವ ಕ್ರಿಯೆಯು ಸುಲಭವಾಗುತ್ತದೆ.
ಇತ್ತೀಚೆಗೆ ಬಾಲಕನ ಜನ್ಮವು ಪ್ರಸೂತಿಗೃಹ ದಲ್ಲಿ ಆಗುವುದರಿಂದ ಜಾತಕರ್ಮ ಸಂಸ್ಕಾರವನ್ನು ನಾಮಕರಣದ ಸಮಯದಲ್ಲಿಯೇ ಮಾಡುತ್ತಾರೆ.
ಐದನೇ ಸಂಸ್ಕಾರ – ನಾಮಕರಣ
ನಾಮಕರಣ ವಿಧಿಯ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ !
ಆರನೇ ಸಂಸ್ಕಾರ – ನಿರ್ಗಮನ (ಮನೆಯಿಂದಾಚೆ ಕರೆದುಕೊಂಡು ಹೋಗುವುದು)
ಅ. ಉದ್ದೇಶ
ಆಯುಷ್ಯ ಮತ್ತು ಸಂಪತ್ತುಗಳನ್ನು ವೃದ್ಧಿಸುವುದೇ ಈ ಸಂಸ್ಕಾರದ ಉದ್ದೇಶವಾಗಿದೆ.
ಆ. ಮುಹೂರ್ತ
ಮಗುವಿನ ಜನ್ಮದಿನದಿಂದ ಮೂರನೆಯ ತಿಂಗಳ ಜನ್ಮದಿನ ಅಥವಾ ಜನ್ಮನಕ್ಷತ್ರದ ದಿನ ಈ ವಿಧಿಯನ್ನು ಮಾಡಬೇಕು. ನಾಲ್ಕನೆಯ ತಿಂಗಳ ಶುಭಸಮಯದಲ್ಲಿ ಮಗುವಿಗೆ ಅಗ್ನಿ, ಹಸು, ಚಂದ್ರ ಇತ್ಯಾದಿಗಳ ದರ್ಶನ ಮಾಡಿಸಬೇಕು.
ಇ. ಸಂಕಲ್ಪ
‘ನನ್ನ ಮಗುವಿನ ಆಯುಷ್ಯ ಮತ್ತು ಶ್ರೀ ಎಂದರೆ ಲಕ್ಷಿ ಇವುಗಳ ವೃದ್ಧಿ, ಹಾಗೂ ಬೀಜಗರ್ಭದಿಂದ ನಿರ್ಮಾಣವಾಗಿರುವ ದೋಷಗಳನ್ನು ನಾಶ ಮಾಡಲು ಹಾಗೂ ಪರಮೇಶ್ವರನ ಪ್ರೀತಿಗಾಗಿ ನಾನು ನಿರ್ಗಮನ ವಿಧಿಯನ್ನು ಎಂದರೆ ಹೊರಗೆ ಕರೆದುಕೊಂಡು ಹೋಗುವ ವಿಧಿಯನ್ನು ಮಾಡುತ್ತೇನೆ’.
ಅನಂತರ ಮಹಾದೇವನ ಅಥವಾ ಶ್ರೀವಿಷ್ಣುವಿನ ದೇವಸ್ಥಾನದಲ್ಲಿ ಅಥವಾ ನೆಂಟರ ಮನೆಯಲ್ಲಿ ಮಹಾದೇವನ ಅಥವಾ ಶ್ರೀವಿಷ್ಣುವಿನ ಪೂಜೆ ಮಾಡಬೇಕು. ಸೆಗಣಿಯಿಂದ ಸಾರಿಸಿದ ನೆಲದ ಮೇಲೆ ಅಕ್ಕಿ ಮತ್ತು ಇತರ ಧಾನ್ಯಗಳನ್ನು ಇಟ್ಟು ಅದರ ಮೇಲೆ ಆ ಮಗುವನ್ನು ಕುಳಿತ ಭಂಗಿಯಲ್ಲಿ ಹಿಡಿಯಬೇಕು. ಮಂತ್ರವನ್ನು ಹೇಳಿ ಭಸ್ಮ ಅಥವಾ ಅಕ್ಷತೆಯಿಂದ ಆ ಮಗುವಿನ ತಲೆಯ ಮೇಲೆ ಮತ್ತು ಹಣೆಯ ಮೇಲೆ ಪ್ರೋಕ್ಷಣೆ ಮಾಡಿದ ಮೇಲೆ ಅನಾರಸ್ (ಒಂದು ಬಗೆಯ ಪಕ್ವಾನ್ನ) ಇತ್ಯಾದಿಗಳಿಂದ ಮಹಾದೇವ, ಶ್ರೀ ಗಣೇಶ ಮುಂತಾದ ದೇವರ ಪೂಜೆಯನ್ನು ಮಾಡಿ ಮಗುವಿಗೆ ತಿಂಡಿ ಕೊಟ್ಟು ದೇವರ ಎದುರು ಮಗುಚಿ ಮಲಗಿಸಬೇಕು. ನಂತರ ಅವನನ್ನು ಮನೆಗೆ ಕರೆದುಕೊಂಡು ಹೋಗಬೇಕು.
ಒಂದು ವಿಚಾರಧಾರೆಗನುಸಾರ ಈ ದಿನದಂದು ತಂದೆಯು ಸಂಸ್ಕಾರ್ಯ ಮಗುವಿಗೆ ತನ್ನ ಪತ್ನಿಯೊಂದಿಗೆ ಮನೆಯ ಹೊರಗೆ ಕರೆದುಕೊಂಡು ಹೋಗಿ ‘ತಚ್ಚಕ್ಷುಃ’ ಎಂಬ ಮಂತ್ರದಿಂದ ಸೂರ್ಯಾವಲೋಕನ ಮಾಡಿಸಬೇಕು. ಈ ಮಂತ್ರದ ಅರ್ಥವು ಮುಂದಿನಂತಿದೆ – ‘ಸಂಪೂರ್ಣ ಜಗತ್ತಿನ ನೇತ್ರ ಹಾಗೂ ದೇವರಿಗೆ ಪ್ರಿಯವಾಗಿರುವ ಹಾಗೂ ಪೂರ್ವದಲ್ಲಿ ಉದಯಿಸುವ ಸೂರ್ಯನ ಪ್ರಸಾದದಿಂದ ನಮಗೆ ನೂರು ವರ್ಷ ಆಯುಷ್ಯ ಪ್ರಾಪ್ತವಾಗಲಿ.’
ಏಳನೇ ಸಂಸ್ಕಾರ – ಅನ್ನಪ್ರಾಶನ
ಅ. ಉದ್ದೇಶ
ಈ ಸಂಸ್ಕಾರದಿಂದ ತಾಯಿಯ ಗರ್ಭದಲ್ಲಿದ್ದಾಗ ಮಲಮೂತ್ರಾದಿಗಳ ಭಕ್ಷಣದಿಂದ ಉಂಟಾಗಿರುವ ದೋಷಗಳು ನಾಶವಾಗುತ್ತವೆ.
ಆ. ಮುಹೂರ್ತ
ಪುತ್ರನಿಗೆ ಅನ್ನಪ್ರಾಶನ ಮಾಡಲು ಆರನೆಯ ಅಥವಾ ಎಂಟನೆಯ ತಿಂಗಳು ಮತ್ತು ಕನ್ಯೆಗೆ ಅನ್ನಪ್ರಾಶನ ಮಾಡಲು ಐದನೆಯ ಅಥವಾ ಇತರ ಬೆಸಸಂಖ್ಯೆಯ ತಿಂಗಳು ಯೋಗ್ಯವಾಗಿದೆ. (ಸಮಸಂಖ್ಯೆಗಳು ಪುರುಷವಾಚಕ ಮತ್ತು ಬೆಸಸಂಖ್ಯೆಗಳು ಸ್ತ್ರೀವಾಚಕವಾಗಿರುತ್ತವೆ.)
ಇ. ಸಂಕಲ್ಪ
‘ನನ್ನ ಮಗುವಿಗೆ ಗರ್ಭದಲ್ಲಿನ ಮಲಪ್ರಾಶನದಿಂದ ಉಂಟಾಗಿರುವ ದೋಷಗಳ ನಾಶ, ಶುದ್ಧ ಅನ್ನಾದಿಗಳ ಪ್ರಾಪ್ತಿ, ಬ್ರಹ್ಮವರ್ಚಸ್ಸಿನ (ತೇಜಸ್ಸಿನ) ಲಾಭ, ಇಂದ್ರಿಯಗಳು ಹಾಗೂ ಆಯುಷ್ಯಗಳ ಸಿದ್ಧಿ, ಬೀಜಗರ್ಭದಿಂದಾಗಿರುವ ಪಾಪಗಳ ನಿವಾರಣೆ ಇವುಗಳ ಮೂಲಕ ಪರಮೇಶ್ವರನ ಪ್ರೀತಿಯುಂಟಾಗಬೇಕೆಂದು ‘ಅನ್ನಪ್ರಾಶನ’ ಸಂಸ್ಕಾರವನ್ನು ಮಾಡುತ್ತೇನೆ. ಅದಕ್ಕಾಗಿ ಶ್ರೀ ಗಣಪತಿ ಪೂಜೆ, ಸ್ವಸ್ತಿವಾಚನ, ಮಾತೃಕಾಪೂಜೆ ಮತ್ತು ನಾಂದೀಶ್ರಾದ್ಧವನ್ನು ಮಾಡುತ್ತೇನೆ’.
ಈ. ವಿಧಿ
ಸಂಕಲ್ಪವಾದ ನಂತರ ದೇವರೆದುರು ತನ್ನ ಬಲಗಡೆಗೆ ತಾಯಿಯ ತೊಡೆಯ ಮೇಲೆ ಶುಭ್ರವಸ್ತ್ರದ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡಿರುವ ಬಾಲಕನಿಗೆ ಮೊದಲನೆಯ ಅನ್ನವನ್ನು ತಿನ್ನಿಸಬೇಕು. ಮೊಸರು, ಜೇನುತುಪ್ಪ ಮತ್ತು ತುಪ್ಪಗಳಿರುವ ಅನ್ನವನ್ನು ಚಿನ್ನದ ಅಥವಾ ತಾಮ್ರದ ಪಾತ್ರೆಯಲ್ಲಿಟ್ಟು ‘ಹೇ ಅನ್ನಪತಿಯಾದ ಈಶ್ವರನೇ ! ನಮಗೆ ಆರೋಗ್ಯಕರ ಹಾಗೂ ಪುಷ್ಟಿದಾಯಕವಾದಂತಹ ಆಹಾರವನ್ನು ಕೊಡು’ ಎಂದು ಹೇಳಿ ಕೈಯಲ್ಲಿ ಚಿನ್ನವನ್ನು ತೆಗೆದುಕೊಂಡು ಅನ್ನದ ಮೊದಲನೆಯ ತುತ್ತನ್ನು ಮಗುವಿಗೆ ಕೊಡಬೇಕು. ನಂತರ ಹೊಟ್ಟೆ ತುಂಬ ಊಟ ಮಾಡಿಸಿ, ಬಳಿಕ ಮುಖವನ್ನು ತೊಳೆದು ಬಾಲಕನನ್ನು ನೆಲದ ಮೇಲೆ ಕುಳ್ಳಿರಿಸಬೇಕು.
ಉ. ಜೀವಿಕಾ ಪರೀಕ್ಷೆ
ಮಗುವಿನ ಉಪಜೀವಿಕೆಯನ್ನು ಪರೀಕ್ಷಿಸಲು ಮಗುವಿನೆದುರು ಪುಸ್ತಕಗಳು, ಶಸ್ತ್ರಗಳು, ವಸ್ತ್ರಗಳು ಇತ್ಯಾದಿ ವಸ್ತುಗಳನ್ನು ಇಡಬೇಕು. ಮಗುವು ಸ್ವೇಚ್ಛೆಯಿಂದ ಯಾವ ವಸ್ತುವನ್ನು ಪ್ರಥಮವಾಗಿ ಮುಟ್ಟುವುದೋ ಅದೇ ಅವನ ಉಪಜೀವಿಕೆಯ ಸಾಧನವಾಗುವುದು ಎಂದು ತಿಳಿದುಕೊಳ್ಳಬೇಕು.
Good information
Good message. 👌🙏