ಅ. ಉತ್ಪತ್ತಿ ಮತ್ತು ಉದ್ದೇಶ
೧. ಪುಂಸವನ ಶಬ್ದದ ಉತ್ಪತ್ತಿಯು ‘ಪುಂಸ್ಯ ಅವನಃ’ ಹೀಗಿದೆ. ಪುಂಸ್ಯ ಎಂದರೆ ಪುರುಷಾರ್ಥವು, ಅವನಿಯ ಮೇಲೆ ಅಂದರೆ ಪೃಥ್ವಿಯ ಮೇಲೆ ಅವತರಿಸುವಂತಹ ಅವಸ್ಥೆ ಹೀಗೆ ಇದರ ಅರ್ಥವಾಗಿದೆ. ಗರ್ಭಧಾರಣೆಯಾದ ನಂತರ ಪುತ್ರಪ್ರಾಪ್ತಿಗಾಗಿ ಈ ಸಂಸ್ಕಾರವನ್ನು ಮಾಡುತ್ತಾರೆ.
೨. ಸ್ತ್ರೀಯ ಗರ್ಭಾಶಯದಲ್ಲಿ ಪತಿ-ಪತ್ನಿಯ ವೀರ್ಯದ ಸಂಯೋಗದಿಂದ ಕಟ್ಟುವ ಗರ್ಭದಲ್ಲಿ ಬೀಜರೂಪದಲ್ಲಿ ಅನೇಕ ಸ್ತ್ರೀ-ಪುರುಷ ವೀರ್ಯಾಣುಗಳು ಇರುತ್ತವೆ. ಎರಡನೆಯ, ಮೂರನೆಯ ಅಥವಾ ನಾಲ್ಕನೆಯ ತಿಂಗಳಿನಲ್ಲಿ ಈ ಅನೇಕ ವೀರ್ಯಾಣುಗಳಲ್ಲಿನ ಒಂದು ವೀರ್ಯಾಣು (ಕೆಲವೊಮ್ಮೆ ಎರಡು) ಬೆಳೆಯತೊಡಗುತ್ತದೆ ಮತ್ತು ಇತರ ವೀರ್ಯಾಣುಗಳು ನಾಶವಾಗುತ್ತವೆ. ಬೆಳೆಯುತ್ತಿರುವ ವೀರ್ಯಾಣುವು ‘ಪುತ್ರ’ನಾಗಬೇಕೆಂದು ‘ಪುಂಸವನ’ ಈ ಸಂಸ್ಕಾರವಿದೆ.
– ಗುರುದೇವ ಡಾ. ಕಾಟೇಸ್ವಾಮೀಜಿ
ಆ. ಮುಹೂರ್ತ
ಗರ್ಭಧಾರಣೆಯಾಗಿದೆ ಎನ್ನುವುದು ಖಚಿತವಾದ ನಂತರ ಆದಷ್ಟು ಎರಡನೆಯ ತಿಂಗಳಿನಲ್ಲಿ ಈ ಸಂಸ್ಕಾರವನ್ನು ಮಾಡಬೇಕು. ಮಾತೆಯ ಉದರದಲ್ಲಿ ಗರ್ಭದ ಸ್ಪಂದನವು ಪ್ರಾರಂಭವಾಗುವ ಮೊದಲು ಹಾಗೂ ಅದರ ಲಿಂಗವು ವ್ಯಕ್ತವಾಗುವ ಮೊದಲೇ ಈ ಸಂಸ್ಕಾರವನ್ನು ಮಾಡಬೇಕು. ತಡವಾದಂತೆ ಅದರ ಪರಿಣಾಮದ ಪ್ರಮಾಣವು ಕಡಿಮೆಯಾಗುತ್ತದೆ.
ಲೇಖನದಿಂದ ವಾಚಕರು ಕನ್ಯಾರತ್ನದ ಬದಲು ಪುತ್ರಪ್ರಾಪ್ತಿಗಾಗಿ ಪ್ರಯತ್ನಿಸಬೇಕು ಅಥವಾ ಭ್ರೂಣಲಿಂಗ ಪತ್ತೆ ಮಾಡಬೇಕು ಎಂದು ಅರ್ಥೈಸಬಾರದು; ಏಕೆಂದರೆ ವಿವಾಹ ಮತ್ತು ಸಂತಾನಪ್ರಾಪ್ತಿಯು ಪ್ರಾರಬ್ಧದಂತೆಯೇ ಇರುತ್ತದೆ. ಹೆಣ್ಣುಶಿಶು ಮತ್ತು ಗಂಡುಶಿಶುಪ್ರಾಪ್ತಿಯ ಸಂದರ್ಭದಲ್ಲಿ ಹಿಂದೂ ಧರ್ಮಶಾಸ್ತ್ರ ಅಥವಾ ಆಯುರ್ವೇದದಲ್ಲಿರುವ ಉಪಾಯವನ್ನು ಗ್ರಂಥದಲ್ಲಿ ಕೊಡಲಾಗಿದ್ದರೂ ಈ ಮೂಲಕ ಲೇಖಕರು ಪುತ್ರಪ್ರಾಪ್ತಿಯನ್ನು ಬೆಂಬಲಿಸುತ್ತಿಲ್ಲ, ಅದು ಲೇಖಕರ ಇಚ್ಛೆಯೂ ಅಲ್ಲ. ಈ ಲೇಖನವನ್ನು ಕೇವಲ ಶಾಸ್ತ್ರವನ್ನು ತಿಳಿಸಿಹೇಳುವ ಉದ್ದೇಶದಿಂದ ಕೊಡಲಾಗಿದೆ. ಸಾಧಕರ ದೃಷ್ಟಿಯಲ್ಲಿ ಹೆಣ್ಣು ಅಥವಾ ಗಂಡು ಎಂದು ಭೇದಭಾವ ಮಾಡದೇ ಸಾಧನೆ ಮಾಡುತ್ತಾ ಪ್ರಾರಬ್ಧವನ್ನು ತೀರಿಸುವುದೇ ಶ್ರೇಯಸ್ಕರವಾಗಿದೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು’ ಗ್ರಂಥ)