ಅ. ಮಹತ್ವ
ಗರ್ಭಾಧಾನ ಸಂಸ್ಕಾರದಲ್ಲಿ ವಿಶಿಷ್ಟ ಮಂತ್ರ ಮತ್ತು ಹೋಮಹವನಗಳ ಮೂಲಕ ದೇಹಶುದ್ಧಿಯನ್ನು ಮಾಡಿಕೊಂಡು ಶಾಸ್ತ್ರೀಯ ದೃಷ್ಟಿಯಿಂದ ಮತ್ತು ಆರೋಗ್ಯದ ದೃಷ್ಟಿಯಿಂದ ಸಮಾಗಮ ಮಾಡಬೇಕು ಎಂದು ಮಂತ್ರದ ಮೂಲಕ ಕಲಿಸಲಾಗುತ್ತದೆ. ಇದರಿಂದ ಸುಪ್ರಜಾ ಜನನ, ಕಾಮಶಕ್ತಿಯ ಯೋಗ್ಯ ಉಪಯೋಗ ಮತ್ತು ಕಾಮವಾಸನೆಗೆ ಯೋಗ್ಯ ಕಡಿವಾಣ, ರಜೋಕಾಲದಲ್ಲಿ ಸಮಾಗಮ ಮಾಡದಿರುವುದು, ಸಮಾಗಮದ ಸಮಯದಲ್ಲಿನ ಆಸನಗಳು ಮತ್ತು ಉಚ್ಚ ಆನಂದದ ಮಾರ್ಗದರ್ಶನವನ್ನೂ ಮಾಡಲಾಗುತ್ತದೆ.
ಭಗವಂತನ ಸೃಷ್ಟಿಚಕ್ರಕ್ಕೆ ಸಹಾಯವನ್ನು ನೀಡಿ, ಸತತವಾಗಿ ಪ್ರಸೂತಿಯ ಕಾರ್ಯವನ್ನು ಮಾಡಿ, ಸೃಷ್ಟಿಯ ಕಾರ್ಯವನ್ನು ಮುಂದುವರಿಸುವುದು ಪ್ರಕೃತಿಯ ಕಾರ್ಯವಾಗಿದೆ. ಅದರಲ್ಲಿ ಹೆಣ್ಣಿನ ರೂಪದಲ್ಲಿನ ಕಾರ್ಯವು ಸೃಜನಶಕ್ತಿಯ ಕೊಡುಗೆಯಾಗಿದೆ. ಮಾನವಪ್ರಾಣಿಯಲ್ಲಿ ಸ್ತ್ರೀಯು ಪ್ರಜಾನಿರ್ಮಿತಿಯ ಕಾರ್ಯವನ್ನು ಮಾಡುತ್ತಾಳೆ. ಉತ್ತಮ ಪ್ರಜೆಗಳ ನಿರ್ಮಿತಿ ಮತ್ತು ಅವರ ಪಾಲನೆ-ಪೋಷಣೆಯಾಗುವುದು ಆವಶ್ಯಕವಾಗಿದೆ. ಈ ದೃಷ್ಟಿಯಿಂದ ಹದಿನಾರು ಸಂಸ್ಕಾರಗಳಲ್ಲಿನ ಗರ್ಭಾಧಾನಕ್ಕೆ ಬಹಳ ಮಹತ್ವವಿದೆ. ಸುಪ್ರಜಾ ಸಿದ್ಧಾಂತದಂತೆ ಯೋಗ್ಯ ಗರ್ಭಧಾರಣೆಯ ದೃಷ್ಟಿಯಿಂದ ಗರ್ಭಧಾರಣೆಯ ಮೊದಲು ಪಿಂಡದ ಶುದ್ಧಿಯಾಗುವುದು ಅವಶ್ಯಕವಾಗಿದೆ. ಏಕೆಂದರೆ ಒಳ್ಳೆಯ ಬೀಜಶಕ್ತಿಯಿಂದಲೇ ಒಳ್ಳೆಯ ಸಂತತಿಯ ನಿರ್ಮಿತಿಯಾಗುತ್ತದೆ.
– ಪರಾತ್ಪರ ಗುರು ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
ಪ್ರಶ್ನೆ : ಗರ್ಭಾಧಾನ ಸಂಸ್ಕಾರವನ್ನು ಮಾಡದಿದ್ದರೆ ರತಿಸುಖ ಸಿಗುವುದಿಲ್ಲವೋ ಅಥವಾ ಸಂತತಿಯೋ ?
ಉತ್ತರ : ಸಂತತಿಯಾಗುವುದು; ಆದರೆ ಅದು ಅತ್ಯಂತ ಹೀನ, ರೋಗಿ ಹಾಗೂ ನಿಕೃಷ್ಟವಾಗಿರುತ್ತದೆ.’ – ಗುರುದೇವ ಡಾ. ಕಾಟೇಸ್ವಾಮೀಜಿ
ಆ. ಮುಹೂರ್ತ
ಈ ಸಂಸ್ಕಾರವನ್ನು ವಿವಾಹದ ನಂತರ ಪ್ರಥಮ ರಜೋದರ್ಶನ ಆದಾಗಿನಿಂದ (ಮಾಸಿಕ ಸರದಿಯ ಮೊದಲ ದಿನದಿಂದ) ಮೊದಲನೆಯ ಹದಿನಾರು ರಾತ್ರಿಗಳಲ್ಲಿ ಎಂದರೆ ಋತುಕಾಲದಲ್ಲಿ ಮಾಡುತ್ತಾರೆ. ಈ ಕಾಲದಲ್ಲಿನ ಮೊದಲಿನ ನಾಲ್ಕು, ಹನ್ನೊಂದನೆಯ ಮತ್ತು ಹದಿಮೂರನೆಯ ರಾತ್ರಿಗಳನ್ನು ಬಿಟ್ಟು ಮಿಕ್ಕ ಹತ್ತು ರಾತ್ರಿಗಳನ್ನು ಈ ಸಂಸ್ಕಾರಕ್ಕೆ ಯೋಗ್ಯವೆಂದು ತಿಳಿದುಕೊಳ್ಳಬೇಕು. ಕೆಲವೊಮ್ಮೆ ನಾಲ್ಕನೆಯ ದಿನವೂ ಈ ಸಂಸ್ಕಾರವನ್ನು ಮಾಡಬಹುದು ಎಂದು ಹೇಳಲಾಗಿದೆ. ಪುತ್ರನು ಜನಿಸಬೇಕು ಎನ್ನುವ ಇಚ್ಛೆಯಿರುವವನು ಸಮದಿನಗಳಲ್ಲಿ (೪-೬-೮-೧೦-೧೨-೧೪-೧೬) ಮತ್ತು ಕನ್ಯೆಯು ಜನಿಸಬೇಕು ಎನ್ನುವ ಇಚ್ಛೆಯಿರುವವನು ಬೆಸರಾತ್ರಿಗಳಲ್ಲಿ (೫-೭-೯-೧೫) ಸ್ತ್ರೀ ಸಂಭೋಗ ಮಾಡಬೇಕು ಎನ್ನುತ್ತಾರೆ.
ಗರ್ಭಾಧಾನ ಸಂಸ್ಕಾರವನ್ನು ಚತುರ್ಥಿ, ಷಷ್ಠಿ, ಅಷ್ಟಮಿ, ಚತುರ್ದಶಿ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ತಿಥಿಗಳನ್ನು ಬಿಟ್ಟು ಉಳಿದ ಯಾವುದೇ ತಿಥಿಗಳಂದು ಹಾಗೂ ಸೋಮವಾರ, ಗುರುವಾರ, ಶುಕ್ರವಾರ ಈ ವಾರಗಳಂದು ಶ್ರವಣ, ರೋಹಿಣಿ, ಹಸ್ತ, ಅನುರಾಧಾ, ಸ್ವಾತಿ, ರೇವತಿ, ಮೂರೂ ಉತ್ತರಾ ನಕ್ಷತ್ರಗಳು (ಉತ್ತರಫಾಲ್ಗುಣಿ, ಉತ್ತರಾಷಾಢ, ಉತ್ತರಾಭಾದ್ರ), ಶತಭಿಷಾ ಈ ನಕ್ಷತ್ರಗಳ ದಿನಗಳಲ್ಲಿ ಉತ್ತಮ ಚಂದ್ರಬಲವನ್ನು ನೋಡಿ ಗರ್ಭಾಧಾನವಿಧಿ ಮಾಡಬೇಕು.
ಪ್ರಕೃತಿಯಲ್ಲಿನ ಪ್ರತಿಯೊಂದು ವಿಷಯವು ಕಾಲಕ್ಕನುಸಾರ ಬದಲಾಗುತ್ತಿರುತ್ತದೆ. ಬ್ರಹ್ಮ ಮಾತ್ರ ಸ್ಥಿರವಾಗಿರುತ್ತದೆ. ಈ ನಿಯಮಕ್ಕನುಸಾರವಾಗಿ ಸ್ತ್ರೀ ಬೀಜವು ಫಲಿಸುವುದು, ಪುತ್ರ ಅಥವಾ ಪುತ್ರಿಯ ಜನನವಾಗುವುದು ಮುಂತಾದ ವಿಷಯಗಳು ಕೂಡ ಕಾಲಾನುಸಾರವಾಗಿ ಬದಲಾಗುತ್ತಿರುತ್ತವೆ. ಪುತ್ರ ಅಥವಾ ಪುತ್ರಿ ಜನಿಸಲು ಪೂರಕವಾಗಿರುವಂತಹ ತಿಥಿ, ವಾರ ಮತ್ತು ನಕ್ಷತ್ರಗಳನ್ನು ಸಹ ಈ ನಿಯಮಕ್ಕನುಸಾರವಾಗಿಯೇ ನಿಗದಿಪಡಿಸಲಾಗಿದೆ.
ಇ. ವಿಧಿ
೧. ಅಶ್ವಗಂಧಾ ಅಥವಾ ದೂರ್ವಾರಸ ಸೇವನೆ
೨. ಪ್ರಜಾಪತಿಪೂಜೆ
೩. ಮಡಿಲು ತುಂಬುವುದು
೪. ಸಂಭೋಗ ವಿಧಿ
ಅಶುಭಕಾಲದಲ್ಲಿ ರಜೋದರ್ಶನವಾದರೆ ಗರ್ಭಾಧಾನದ ಮೊದಲು ಮಾಡ ಬೇಕಾದ ಶಾಂತಿ : ಅಶುಭಕಾಲದಲ್ಲಿ ರಜಸ್ವಲೆಯಾದರೆ ಅದು ದೊಡ್ಡ ದೋಷವಾಗುತ್ತದೆ. ಈ ದೋಷ ನಿವಾರಣೆಗಾಗಿ ‘ಋತುಶಾಂತಿ’ ಎಂಬ ಹೆಸರಿನ ವಿಧಿಯನ್ನು ಮಾಡಬೇಕಾಗುತ್ತದೆ. (ಈ ವಿಧಿಗೆ ‘ಭುವನೇಶ್ವರಿ ಶಾಂತಿ’ ಎಂದು ಹೇಳುತ್ತಾರೆ.)
ಗರ್ಭಾಧಾನ ಸಂಸ್ಕಾರವನ್ನು ಪ್ರತಿಯೊಂದು ಗರ್ಭಧಾರಣೆಯಲ್ಲಿ ಮತ್ತೆ ಮಾಡುವ ಆವಶ್ಯಕತೆಯಿರುವುದಿಲ್ಲ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು’ ಗ್ರಂಥ)