ಗುರುಮಂತ್ರ

ಅ. ಅರ್ಥ

ಗುರುಮಂತ್ರದಲ್ಲಿ ಮಂತ್ರ ಎಂಬ ಶಬ್ದವಿದ್ದರೂ, ಹೆಚ್ಚಾಗಿ ಶಿಷ್ಯನು ಯಾವ ನಾಮಜಪವನ್ನು ಮಾಡಬೇಕು ಎಂಬುದನ್ನು ಗುರುಗಳು ಹೇಳಿರುತ್ತಾರೆ.

ಗುರುಮಂತ್ರ ಯಾರಿಗೆ ಸಿಗುತ್ತದೆ ? ತೀವ್ರ ಮುಮುಕ್ಷುತ್ವ ಅಥವಾ ಗುರು ಪ್ರಾಪ್ತಿಯ ಹಾಗೂ ಗುರುಕೃಪೆಯ ತೀವ್ರ ತಳಮಳ ಇದ್ದವರಿಗೆ ಮಾತ್ರ ಗುರುಮಂತ್ರ ಸಿಗುತ್ತದೆ.

ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. ೨೦ ರಷ್ಟು ಮತ್ತು ಮೋಕ್ಷ ಪ್ರಾಪ್ತವಾಗಿರುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. ೧೦೦ ರಷ್ಟಿದೆ ಎಂದು ತಿಳಿದುಕೊಂಡರೆ, ಸಾಮಾನ್ಯ ವ್ಯಕ್ತಿಯಲ್ಲಿ ಅಧ್ಯಾತ್ಮದ ಬಗ್ಗೆ ಆಸಕ್ತಿಯೇ ಇರುವುದಿಲ್ಲ. ಶೇ. ೩೦ ರ ಮಟ್ಟದ ವ್ಯಕ್ತಿಗಳು ದೇವರ ಪೂಜೆ, ಗ್ರಂಥವಾಚನ, ದೇವಸ್ಥಾನಕ್ಕೆ ಹೋಗುವುದು ಇಷ್ಟನ್ನು ಮಾತ್ರ ಮಾಡುತ್ತಾರೆ. ಶೇ. ೪೦ ರ ಮಟ್ಟದ ವ್ಯಕ್ತಿಯು ನಾಮಸ್ಮರಣೆ ಮಾಡಬಲ್ಲನು. ಶೇ. ೫೦ ರ ಮಟ್ಟದ ವ್ಯಕ್ತಿಯು ಸೇವೆ ಮತ್ತು ಶೇ. ೬೦ ರ ಮಟ್ಟದಲ್ಲಿ ನಿಜವಾದ ತ್ಯಾಗವು ಪ್ರಾರಂಭವಾಗುತ್ತದೆ. ಇದರಲ್ಲಿ ಶೇ. ೫೫ ರ ಮಟ್ಟದಲ್ಲಿ ಗುರುಪ್ರಾಪ್ತಿಯಾಗಿ ಗುರುಮಂತ್ರವು ಸಿಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಅಧ್ಯಾತ್ಮದ ಒಲವು ಶೇ. ೫೦ ಕ್ಕಿಂತಲೂ ಹೆಚ್ಚಾದಾಗ ಯಾರಾದರೊಬ್ಬ ಸಂತರು ‘ಗುರು’ಗಳಾಗಿ ಆ ಸಾಧಕನಿಗಾಗಿ ಕಾರ್ಯ ಮಾಡುತ್ತಾರೆ. ತನು, ಮನ ಮತ್ತು ಧನ ಇವುಗಳ ಶೇ. ೫೦ ಕ್ಕಿಂತಲೂ ಹೆಚ್ಚಿನ ಭಾಗವನ್ನು ಅಧ್ಯಾತ್ಮಕ್ಕೆ ಅರ್ಪಿಸಿದಾಗ ಗುರುಮಂತ್ರವು ಸಿಗುತ್ತದೆ. ಆದುದರಿಂದಲೇ ಬಹಳಷ್ಟು ವರ್ಷಗಳ ಕಾಲ ಗುರುಗಳ ಸಹವಾಸದಲ್ಲಿದ್ದವರ ಆಧ್ಯಾತ್ಮಿಕ ಮಟ್ಟವು ಅಷ್ಟಾಗದಿದ್ದರೆ ಗುರುಗಳು ಅವರಿಗೆ ಗುರುಮಂತ್ರವನ್ನು ಕೊಡುವುದಿಲ್ಲ.

ಗುರುಮಂತ್ರವು ಶಿಷ್ಯನ ಜೀವನದಲ್ಲಿ ಹೇಗೆ ಕಾರ್ಯ ಮಾಡುತ್ತದೆ ? ಗುರುಮಂತ್ರವನ್ನು ಕೊಟ್ಟು ಗುರುಗಳು ಶಿಷ್ಯನನ್ನು ಮಾಯೆಯಿಂದ ಹೊರಗೆ ತೆಗೆಯುತ್ತಾರೆ. ಗುರುಮಂತ್ರದಲ್ಲಿ ಅಷ್ಟು ಶಕ್ತಿಯಿರುತ್ತದೆ. ಗುರುಮಂತ್ರವು ಗುರುಗಳ ಸಂಕಲ್ಪದ ರೂಪದಲ್ಲಿರುವುದರಿಂದ ಮತ್ತು ಒಮ್ಮೆ ಗುರುಗಳು ಗುರುಮಂತ್ರವನ್ನು ಕೊಟ್ಟರೆ, ಅವರು ನಮ್ಮೆಲ್ಲ ಜವಾಬ್ದಾರಿಯನ್ನು ತೆಗೆದುಕೊಂಡಂತೆ ಆಗುವುದರಿಂದ ಜೀವವು ತಾನಾಗಿಯೇ ಜನ್ಮ-ಮರಣದ ಚಕ್ರದಿಂದ ಮುಕ್ತವಾಗತೊಡಗುತ್ತದೆ; ಆದರೆ ಅವನು ಗುರುಮಂತ್ರದ ಸಹಾಯದಿಂದ ಉನ್ನತಿಯನ್ನು ಮಾಡಿಕೊಳ್ಳುವ ಕ್ರಿಯಮಾಣ ಕರ್ಮವನ್ನು ಮಾತ್ರ ಸರಿಯಾಗಿ ಮಾಡಬೇಕು, ಹೀಗಾದರೆ ಮಾತ್ರ ಅವನು ಗುರುಮಂತ್ರದ ಸಹಾಯದಿಂದ ಮುಂದೆ ನಿರ್ಗುಣದ ಏಣಿಯನ್ನು ಏರಬಲ್ಲನು. ಗುರುಮಂತ್ರವು ಸಗುಣ ಪ್ರವಾಸದಲ್ಲಿ ದೇಹಧಾರಿ ತತ್ತ್ವದಿಂದ ಮಾರ್ಗದರ್ಶಕವಾಗಿರುತ್ತದೆ; ಮುಂದೆ ಅದು ಪ್ರಕಾಶರೂಪಿ ತತ್ತ್ವದಿಂದ ಮಾರ್ಗದರ್ಶನ ಮಾಡುವಾಗ ಅಂತರ್ಯಾಮಿ ವಿಚಾರಗಳಿಂದ ಚೈತನ್ಯಮಯ ತತ್ತ್ವದ ಸಾಕ್ಷಿ ಮತ್ತು ಜೊತೆಯನ್ನು ನೀಡುತ್ತದೆ.’
– ಓರ್ವ ವಿದ್ವಾಂಸ [ಸದ್ಗುರು (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೪.೨೦೧೨, ಬೆಳಗ್ಗೆ ೮.೫೭]

ಆ. ಮಹತ್ವ

ಆ ೧. ತಂದೆ-ತಾಯಿ ಕೊಟ್ಟ ಹೆಸರು ಮತ್ತು ಗುರುಗಳು ಕೊಟ್ಟ ಹೆಸರು

ಅ. ತಂದೆ-ತಾಯಿಯರು ಕೊಟ್ಟ ಹೆಸರು ದೇಹದ, ಪಿಂಡಪ್ರಕೃತಿಯದ್ದಾಗಿದೆ ಮತ್ತು ಗುರುಗಳ ಕೊಟ್ಟ ಹೆಸರು (ನಾಮ) ತತ್ತ್ವವನ್ನು ಅನುಸರಿಸಿರುತ್ತದೆ.

ಆ. ತಂದೆ-ತಾಯಿಯರು ನಮಗೆ ಕೊಟ್ಟಿರುವ ಹೆಸರನ್ನು ಸಂಸ್ಕಾರಗಳಿಂದಾಗಿ ನಾವು ನಮ್ಮದೆನ್ನುತ್ತೇವೆ. ಹಾಗೆಯೇ ಗುರುಗಳು ಕೊಟ್ಟಿರುವ ದೇವರ ಹೆಸರು ಸಂಸ್ಕಾರದಿಂದ (ನಾಮಜಪದಿಂದ) ನಮ್ಮದೆನಿಸಬೇಕು.

ಇ. ಗುರುಗಳು ಕೊಟ್ಟಿರುವ ಹೆಸರು ‘ನಾವು ಯಾರದಾದ್ದರೂ (ಗುರುತತ್ತ್ವದ) ಇದ್ದೇವೆ’, ಎಂಬುದನ್ನು ತೋರಿಸುತ್ತದೆ. ತಂದೆ-ತಾಯಿಯರು ಇಟ್ಟಿರುವ ನಮ್ಮ ಹೆಸರನ್ನು ಮರೆತು ದೇವರ ಹೆಸರೇ ನಮ್ಮದಾಗಿದೆ ಎಂದು ಅನಿಸಬೇಕು.

ಈ. ತಂದೆ-ತಾಯಿಯರು ಕೊಟ್ಟಿರುವ ಹೆಸರನ್ನು ಮುಂದೆ ಮಗ ನಡೆಸುತ್ತಾನೆ ಮತ್ತು ಗುರುಗಳು ಕೊಟ್ಟಿರುವ ಹೆಸರನ್ನು ಮುಂದೆ ಶಿಷ್ಯನು ನಡೆಸುತ್ತಾನೆ.

ಆ ೨. ಇಷ್ಟದೇವತೆಯ ನಾಮಜಪ ಮತ್ತು ಗುರುಗಳು ಕೊಟ್ಟಿರುವ ನಾಮಜಪ

ನಮ್ಮ ಇಷ್ಟದೇವರ ನಾಮದ ಜಪವನ್ನು ಮಾಡುವುದರ ಬದಲು ಮುಂದಿನ ಕಾರಣಗಳಿಗಾಗಿ ಗುರುಗಳು ಕೊಟ್ಟಿರುವ ನಾಮದ ಜಪವನ್ನೇ ಮಾಡಬೇಕು.

ಆ ೨ ಅ. ನಮ್ಮ ಉನ್ನತಿಗಾಗಿ ಯಾವ ನಾಮಜಪವನ್ನು ಮಾಡಬೇಕು ಎಂಬುದು ನಮಗೆ ತಿಳಿಯುವುದಿಲ್ಲ; ಗುರುಗಳೇ ಅದನ್ನು ಹೇಳಬಲ್ಲರು.

ಆ ೨ ಆ. ನಮ್ಮ ಇಷ್ಟದೇವರ ಮಂತ್ರದಿಂದ ಕೇವಲ ಸಾತ್ತ್ವಿಕತೆ ಹೆಚ್ಚಾಗಲು ಸಹಾಯವಾಗುತ್ತದೆ ಮತ್ತು ಗುರುಮಂತ್ರದಿಂದ ನಿರ್ಗುಣದವರೆಗೆ ಹೋಗಲು ಸಾಧ್ಯವಾಗುತ್ತದೆ.

ಆ ೨ ಇ. ಗುರುಮಂತ್ರದಲ್ಲಿ ಕೇವಲ ಅಕ್ಷರಗಳಿರುವುದಿಲ್ಲ, ಅದರಲ್ಲಿ ಜ್ಞಾನ, ಚೈತನ್ಯ ಮತ್ತು ಆಶೀರ್ವಾದವೂ ಇರುವುದರಿಂದ ನಮ್ಮ ಉನ್ನತಿಯು ಬೇಗನೇ ಆಗುತ್ತದೆ. ಈ ಚೈತನ್ಯಯುಕ್ತ ನಾಮಕ್ಕೆ ‘ಬೀಜಮಂತ್ರ’ ಅಥವಾ ‘ದಿವ್ಯಮಂತ್ರ’ ಎನ್ನುತ್ತಾರೆ. ಈ ಬೀಜದಿಂದ ಫಲಪ್ರಾಪ್ತಿಯಾಗಲು ಸಾಧನೆಯನ್ನು ಮಾಡಬೇಕಾಗುತ್ತದೆ.

ಆ ೨ ಈ. ಗುರುಗಳ ಮೇಲೆ ಶ್ರದ್ಧೆಯಿರುವುದರಿಂದ ನಾವು ಸ್ವತಃ ನಿರ್ಧರಿಸಿದ ಮಂತ್ರಕ್ಕಿಂತಲೂ ಗುರುಮಂತ್ರವನ್ನು ಹೆಚ್ಚು ಶ್ರದ್ಧೆಯಿಂದ ಜಪಿಸುತ್ತೇವೆ, ಹಾಗೆಯೇ ಗುರುಗಳ ನೆನಪಾದಾಗ ನಾಮಜಪಿಸುವ ನೆನಪಾಗುವುದರಿಂದ ಅದನ್ನು ಹೆಚ್ಚು ಜಪಿಸುತ್ತೇವೆ.

ಆ ೨ ಉ. ನಮಗೆ ಇಷ್ಟವಾಗುವ ದೇವರ ನಾಮಜಪವನ್ನು ಮಾಡುವಾಗ ಸ್ವಲ್ಪವಾದರೂ ಅಹಂಭಾವವಿರುತ್ತದೆ. ಇದಕ್ಕೆ ವಿರುದ್ಧವಾಗಿ ಗುರುಗಳು ಕೊಟ್ಟಿರುವ ನಾಮಜಪವನ್ನು ಮಾಡುವಾಗ ಅಹಂಭಾವವಿರುವುದಿಲ್ಲ.

ಇ. ಗುರುಮಂತ್ರದ ಬಗ್ಗೆ ತಪ್ಪು ತಿಳುವಳಿಕೆಗಳು

ಗುರುಮಂತ್ರದ ಬಗ್ಗೆ ಬಹಳಷ್ಟು ಜನರ ಮನಸ್ಸಿನಲ್ಲಿ ಮುಂದಿನಂತಹ ತಪ್ಪು ತಿಳುವಳಿಕೆಗಳಿರುತ್ತವೆ. ಆಧ್ಯಾತ್ಮಿಕ ಪರಿಭಾಷೆ ಗೊತ್ತಿಲ್ಲದ ಕಾರಣ ಈ ತಪ್ಪು ತಿಳುವಳಿಕೆಗಳು ಉಂಟಾಗಿವೆ.

ಇ ೧. ಗೋಂದವಲೇಕರ್ ಮಹಾರಾಜರು ಎಲ್ಲರಿಗೂ ರಾಮನಾಮವನ್ನು ಜಪಿಸಲು ಹೇಳುತ್ತಿದ್ದರು ಮತ್ತು ಅವರ ಪುಸ್ತಕದಲ್ಲಿಯೂ ಹಾಗೆಯೇ ಬರೆಯಲಾಗಿದೆ; ಅದು ನಾಮಸ್ಮರಣೆ ಮಾಡಿರಿ ಎಂಬ ಅರ್ಥದಲ್ಲಿಯೇ ಇದೆ. ಇದು ತಿಳಿಯದ ಕಾರಣ ಬಹಳಷ್ಟು ಜನರಿಗೆ, ತಮಗೆ ಗುರುಪ್ರಾಪ್ತಿಯಾಗಿದೆ ಎಂದೆನಿಸುತ್ತದೆ. ನಂತರ ಅವರ ಮನಸ್ಸಿನಲ್ಲಿ, ಗುರುಪ್ರಾಪ್ತಿಯಾಗಿರುವಾಗಲೂ ನನಗೇಕೆ ಅನುಭೂತಿಗಳು ಬರುವುದಿಲ್ಲ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಪ್ರತ್ಯಕ್ಷದಲ್ಲಿ ಅವರಿಗೆ ಗುರುಪ್ರಾಪ್ತಿಯು ಆಗಿರುವುದೇ ಇಲ್ಲ.

ಇ ೨.  ಗುರುಮಂತ್ರವು ದೊರಕಿತೆಂದರೆ ಸಾಧಕನು ಶಿಷ್ಯನಾಗುತ್ತಾನೆ; ಆದರೆ ಎಲ್ಲಿ ಶಿಷ್ಯತ್ವವೇ ಮೇಲುಮೇಲಿನದ್ದಾಗಿರುತ್ತದೆಯೋ, ಅಲ್ಲಿ ಗುರುಮಂತ್ರ ನಿಜವಾಗಿರಲು ಹೇಗೆ ಸಾಧ್ಯ ? ಈ ಸಂದರ್ಭದಲ್ಲಿ ಬಾಬಾರವರು (ಪ.ಪೂ. ಭಕ್ತರಾಜ ಮಹಾರಾಜ) ‘ಯಥಾ ಶಿಷ್ಯ ತಥಾ ಗುರು !’ ಎಂದು ಹೇಳುತ್ತಾರೆ. ಆದರೆ ಇದು ತಿಳಿಯದೇ ಇದ್ದುದರಿಂದ ಹಲವಾರು ಮಂದಿ ತಮ್ಮನ್ನು ತಾವೇ ಬಾಬಾರವರ ಶಿಷ್ಯರೆಂದು ಭಾವಿಸತೊಡಗುತ್ತಾರೆ.

ಇ ೩. ದರ್ಶನಾರ್ಥಿ ಮತ್ತು ಸಾಧಕರೆಲ್ಲರನ್ನೂ ಬಾಬಾರವರು ಭಕ್ತ ಅಥವಾ ಶಿಷ್ಯರೆಂದು ಕರೆಯುವುದರಿಂದ ಬಹಳಷ್ಟು ಜನರ ಮನಸ್ಸಿನಲ್ಲಿ ‘ನಾವು ಬಾಬಾರವರ ಶಿಷ್ಯರಾಗಿದ್ದೇವೆ’ ಎಂಬ ವಿಚಾರ ದೃಢವಾಗುತ್ತದೆ. ಬಾಬಾರವರು ಎಲ್ಲರನ್ನೂ ಶಿಷ್ಯರೆಂದು ಕರೆಯಲು ಕಾರಣವೇನೆಂದರೆ ಅವರು ಎಲ್ಲೆಡೆಯೂ ಸಮಭಾವದಿಂದ ನೋಡುವುದರಿಂದ ‘ಈತ ನನ್ನ ಶಿಷ್ಯ’, ‘ಆತ ನನ್ನ ಶಿಷ್ಯನಲ್ಲ’ ಎಂಬ ವಿಚಾರಗಳೇ ಅವರ ಮನಸ್ಸಿನಲ್ಲಿ ಬರುವುದಿಲ್ಲ.

ಈ. ನಿಜವಾದ ಗುರುಮಂತ್ರ

ಯಾವಾಗ ಗುರುಗಳು ತಾವಾಗಿಯೇ ಉತ್ಸ್ಫೂರ್ತಿಯಿಂದ ಯಾವುದಾದರೊಂದು ನಾಮವನ್ನು ಜಪಿಸಲು ಹೇಳುತ್ತಾರೆಯೋ, ಆಗ ಮಾತ್ರ ಅದು ನಿಜವಾಗಿಯೂ ಗುರುಮಂತ್ರವಾಗಿರುತ್ತದೆ; ಆದರೆ ಒಂದು ಸಲ ಗುರುಮಂತ್ರ ಸಿಕ್ಕಿತೆಂದರೆ ಮುಗಿಯಿತು ಎಂದಲ್ಲ. ಆ ಜಪವನ್ನು ಸತತವಾಗಿ ಮಾಡುತ್ತಿರಬೇಕಾಗುತ್ತದೆ ಮತ್ತು ಅದಕ್ಕೆ ಸೇವೆ, ತ್ಯಾಗ ಮತ್ತು ಇತರರಲ್ಲಿ ಪ್ರೀತಿ ಇತ್ಯಾದಿಗಳನ್ನು ಜೋಡಿಸಬೇಕಾಗುತ್ತದೆ.

ಉದಾ. : ಗುರುಪೂರ್ಣಿಮೆಯ ಸಮಯದಲ್ಲಿ ಶಿಷ್ಯರ ಒತ್ತಾಯದ ಮೇರೆಗೆ ಕೆಲವೊಮ್ಮೆ ಬಾಬಾ ಗುರುಮಂತ್ರವನ್ನು ಕೊಡುತ್ತಿದ್ದರು. ಅದನ್ನು ಗುರುಮಂತ್ರವೆಂದು ಹೇಳುವುದಿಲ್ಲ.

(ಆಧಾರ : ಸನಾತನ ನಿರ್ಮಿತ ‘ಗುರುಗಳ ವಿಧಗಳು ಮತ್ತು ಗುರುಮಂತ್ರ’ ಗ್ರಂಥ)

2 thoughts on “ಗುರುಮಂತ್ರ”

Leave a Comment