೧. ಅಹಂಭಾವದಿಂದ ದುಃಖವಾಗುವುದು
ನಾನು ಮಾಡುತ್ತೇನೆ ಎಂದಾಗ ದುಃಖಿತನಾಗುವೆ ನೀನು |
ರಾಮನು ಮಾಡುತ್ತಾನೆ ಎಂದಾಗ ಹೊಂದುವೆ | ಯಶಸ್ಸು ಕೀರ್ತಿ ಪ್ರತಾಪವನ್ನು |
– ದಾಸಬೋಧೆ, ದಶಕ ೬, ಸಮಾಸ ೭, ದ್ವಿಪದಿ ೩೬
ಅಹಂ ಎಷ್ಟು ಹೆಚ್ಚಿರುತ್ತದೆಯೋ, ವ್ಯಕ್ತಿ ಅಷ್ಟೇ ಹೆಚ್ಚು ದುಃಖಿತನಾಗಿರುತ್ತಾನೆ. ಮನೋ ರೋಗಿಗಳಲ್ಲಿ ಸಾಮಾನ್ಯ ವ್ಯಕ್ತಿಗಿಂತ ಅಹಂಭಾವ ಹೆಚ್ಚಿರುತ್ತದೆ. ಆದುದರಿಂದ ಅವರು ಹೆಚ್ಚು ದುಃಖಿತರಾಗಿರುತ್ತಾರೆ. ನನ್ನ ಸಂಪತ್ತು, ನನ್ನ ಶರೀರ ಈ ವಿಧದ ವಿಚಾರಗಳಿದ್ದಲ್ಲಿ ಸಂಪತ್ತು ಕಡಿಮೆಯಾದಾಗ ಅಥವಾ ಶರೀರಕ್ಕೆ ಕಾಯಿಲೆ ಬಂದಾಗ ಆ ವ್ಯಕ್ತಿಯು ದುಃಖಿತನಾಗುತ್ತಾನೆ; ಆದರೆ ಇನ್ನೊಬ್ಬನ ಬಗ್ಗೆ ಹೀಗಾದರೆ ವ್ಯಕ್ತಿಯು ದುಃಖಿತನಾಗುವುದಿಲ್ಲ. ಅಹಂಭಾವದಿಂದ ಮನಸ್ಸಿಗೆ ಆಗುವ ದುಃಖವು ಶಾರೀರಿಕ ವೇದನೆಗಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಸಂತರು ಎಲ್ಲವೂ ಪರಮೇಶ್ವರನದ್ದೇ ಆಗಿದೆ, ತನ್ನದೇನೂ ಇಲ್ಲ ಎಂದು ತಿಳಿಯುತ್ತಾರೆ; ಆದ್ದರಿಂದ ಅವರು ಎಂದಿಗೂ ದುಃಖಿತರಾಗುವುದಿಲ್ಲ, ಯಾವಾಗಲೂ ಆನಂದದಲ್ಲಿಯೇ ಇರುತ್ತಾರೆ.
೨. ಅಹಂಕಾರವೇ ಎಲ್ಲ ದುಃಖಗಳಿಗೆ ಮೂಲ
ವಾಸನೆಯಿದ್ದುದರಿಂದಲೇ ಆಸಕ್ತಿಯಿದೆ, ಅಹಂಕಾರವಿದೆ. ಅಹಂಕಾರ ಎಂದರೆ ಸ್ವಾರ್ಥ, ಅಭಿಮಾನ, ದೇಹಬುದ್ಧಿ. ಅಹಂಕಾರವೇ ಗಾಯವಾಗಿದೆ, ಬೆಂಕಿಯಾಗಿದೆ. ಅಹಂಕಾರವೇ ದುಃಖ ಮತ್ತು ಪೀಡೆಯನ್ನು ನೀಡುತ್ತದೆ. ಅಹಂಕಾರವೇ ಪುನರ್ಜನ್ಮದ ಮೂಲವಾಗಿದೆ. ಅಹಂಕಾರವೊಂದು ನಾಶವಾದೊಡನೆ ಎಲ್ಲ ದುಃಖಗಳು ಆಮೂಲಾಗ್ರವಾಗಿ ನಾಶವಾಗುತ್ತವೆ. ಅಹಂಕಾರ ಹೋದರೆ ಪ್ರಸನ್ನತೆ, ಶಾಂತಿ, ವಿಶ್ರಾಂತಿ ಮತ್ತು ಆನಂದ ಲಭಿಸುತ್ತದೆ.
೩. ಅಹಂಭಾವದಿಂದಾಗಿ ನಿಜವಾದ ಅರ್ಥದಲ್ಲಿ ಸುಖವನ್ನು ಭೋಗಿಸಲು ಸಾಧ್ಯವಾಗುವುದಿಲ್ಲ
ಅಹಂಭಾವದ ತ್ಯಾಗ ಮಾಡದೇ ಸಾಮಾನ್ಯ ಸುಖವನ್ನು ಸಹ ಉಪಭೋಗಿಸಲಾಗುವುದಿಲ್ಲ, ಉದಾ.ಲೈಂಗಿಕ ಸುಖವನ್ನು ಉಪಭೋಗಿಸುತ್ತಿರುವಾಗ ತಾನು ಒಬ್ಬ ದೊಡ್ಡ ಪ್ರಾಧ್ಯಾಪಕ, ಶ್ರೀಮಂತ ಮನುಷ್ಯ ಅಥವಾ ಯಾವುದಾದರೊಬ್ಬ ದೊಡ್ಡ ವ್ಯಕ್ತಿಯಾಗಿದ್ದೇನೆ ಎನ್ನುವುದರ ನೆನಪನ್ನು ಇಟ್ಟುಕೊಂಡರೆ ಲೈಂಗಿಕ ಸುಖವನ್ನು ಎಂದಿಗೂ ಉಪಭೋಗಿಸಲಾಗುವುದಿಲ್ಲ. ಅಥವಾ ಬೇರೆ ಯಾವುದೇ ಭೌತಿಕ ಸುಖವನ್ನು ಅನುಭವಿಸುತ್ತಿರುವಾಗ ನಮ್ಮ ಪದವಿ ಅಥವಾ ವಿದ್ವತ್ತನ್ನು ಮರೆತರೆ ಮಾತ್ರ ನಿಜವಾದ ಅರ್ಥದಲ್ಲಿ ಸುಖವನ್ನು ಅನುಭವಿಸಬಲ್ಲೆವು.
೪. ಅಹಂಯುಕ್ತ ಕಾರ್ಯವು ನಾಶವಾಗುತ್ತದೆ ಮತ್ತು ನಿಷ್ಕಾಮ ಭಾವದಿಂದ ಮಾಡಿದ ಕರ್ಮವು ಅಮರವಾಗುತ್ತದೆ
ಅಹಂಯುಕ್ತ ಕರ್ಮದ ಸಂದರ್ಭದಲ್ಲಿ ‘ಕಾಲಃ ಪಿಬತಿ ತದ್ ರಸಮ್ |’ ಎಂದರೆ ‘ಕಾಲವು ಅದರ ರಸವನ್ನು ಕುಡಿದು ಬಿಡುತ್ತದೆ’ ಎಂದು ಹೇಳಲಾಗಿದೆ. ಇದರ ಅರ್ಥ ಅಹಂಯುಕ್ತ ಕರ್ಮವು ಕಾಲದ ಪ್ರವಾಹದಲ್ಲಿ ನಾಶವಾಗುತ್ತದೆ. ನಮ್ಮ ಪ್ರಾಚೀನ ಋಷಿಮುನಿಗಳು ವೇದಗಳ ಮೇಲೆ ತಮ್ಮ ಹೆಸರುಗಳನ್ನು ಬರೆಯಲಿಲ್ಲ; ಏಕೆಂದರೆ ಅವರಿಗೆ ಹೆಸರಿನ ಮೇಲೆ ಆಸಕ್ತಿ ಅಥವಾ ಕೀರ್ತಿಯ ಬಯಕೆ ಇರಲಿಲ್ಲ. ನಮ್ಮ ಶಿಲ್ಪಿಗಳೂ ಸಹ ತಮ್ಮ ಶಿಲ್ಪಕೃತಿಗಳ ಮೇಲೆ ತಮ್ಮ ಹೆಸರನ್ನು ಕೆತ್ತಿಲ್ಲ. ಆದುದರಿಂದಲೇ ವೇದಗಳು ಅಮರವಾಗಿವೆ ಮತ್ತು ಶಿಲ್ಪಗಳು ಚಿರಂಜೀವಿಯಾಗಿವೆ.
೫. ಅಹಂ ಎಲ್ಲವನ್ನೂ ನಾಶ ಮಾಡುತ್ತದೆ
ಜರಾ ರೂಪಂ ಹರತಿ ಧೈರ್ಯಮಾಶಾ ಮೃತ್ಯುಃ ಪ್ರಾಣಾನ್ ಧರ್ಮಚರ್ಯಾಮಸೂಯಾ |
ಕ್ರೋಧಃ ಶ್ರಿಯಂ ಶೀಲಮನಾರ್ಯಸೇವಾ ಹ್ರಿಯಂ ಕಾಮಃ ಸರ್ವಮೇವಾಭಿಮಾನಃ ||
– ಮಹಾಭಾರತ, ಉದ್ಯೋಗಪರ್ವ, ಅಧ್ಯಾಯ ೩೫, ಶ್ಲೋಕ ೪೩
ಅರ್ಥ : ವೃದ್ಧಾಪ್ಯವು ರೂಪವನ್ನು ಕಸಿಯುತ್ತದೆ, ಆಶೆಯು ಧೈರ್ಯವನ್ನು ನಶಿಸುತ್ತದೆ, ಮೃತ್ಯುವು ಪ್ರಾಣಹರಣ ಮಾಡುತ್ತದೆ, ದ್ವೇಷವು ಧರ್ಮಾಚರಣೆಯನ್ನು ನಾಶ ಮಾಡುತ್ತದೆ, ಕ್ರೋಧವು ಸಂಪತ್ತನ್ನು ನಾಶ ಮಾಡುತ್ತದೆ, ಅನಾರ್ಯ (ಅಸಂಸ್ಕೃತ) ಮನುಷ್ಯರ ಸೇವೆಯನ್ನು ಮಾಡುವುದರಿಂದ ಶೀಲ ಭ್ರಷ್ಟವಾಗುತ್ತದೆ. ಕಾಮವು ನಾಚಿಕೆಯನ್ನು ಇಲ್ಲವಾಗಿಸುತ್ತದೆ ಮತ್ತು ಅಭಿಮಾನವು (ಅಹಂ) ಎಲ್ಲವನ್ನೂ ನಾಶಗೊಳಿಸುತ್ತದೆ.
೬. ಪ್ರಮುಖರ ಅಹಂನಿಂದಾಗಿ ಸಮಷ್ಟಿ ಕಾರ್ಯದ ಮೇಲಾಗುವ ಪರಿಣಾಮಗಳು
ಸಮಷ್ಟಿ ಕಾರ್ಯದಲ್ಲಿ ಪ್ರಮುಖರ ಅಹಂಭಾವವು ಅಡ್ಡ ಬರುತ್ತಿದ್ದರೆ, ಯಾವುದಾದರೊಂದು ವಿಷಯದಲ್ಲಿ ಯೋಗ್ಯ ನಿರ್ಣಯವಾಗಲು ಮತ್ತು ಅದಕ್ಕನುಸಾರವಾಗಿ ಕಾರ್ಯಗಳಾಗುವಲ್ಲಿ ಅಡ್ಡಿಯುಂಟಾಗುತ್ತದೆ. ಇದರ ಪರಿಣಾಮದಿಂದ ಸಮಷ್ಟಿಯ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ.
(ಆಧಾರ : ಸನಾತನ ನಿರ್ಮಿತ ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಗ್ರಂಥ)