‘ವ್ಯಷ್ಟಿ ಸಾಧನೆ’ ಮತ್ತು ‘ಸಮಷ್ಟಿ ಸಾಧನೆ’ ಇವು ಗುರುಕೃಪಾಯೋಗಾನುಸಾರ ಸಾಧನೆಯ ಎರಡು ವಿಧಗಳಾಗಿವೆ. ವ್ಯಷ್ಟಿ ಸಾಧನೆಯೆಂದರೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ. ಸಮಷ್ಟಿ ಸಾಧನೆಯೆಂದರೆ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ.
ವ್ಯಷ್ಟಿ ಸಾಧನೆ
(ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ)
ಸಾಧನೆಯ ಸಂಪತ್ಕಾಲವೆಂದರೆ, ಸಾಧನೆಯು ನಿರ್ವಿಘ್ನವಾಗಿ ನಡೆಯಬಹುದಾದ ಅನುಕೂಲಕರ ಕಾಲ. ಸತ್ಯಯುಗದ ಕಾಲವು ಹೀಗಿತ್ತು. ಸಂಪತ್ಕಾಲದಲ್ಲಿ ಕೇವಲ ವ್ಯಷ್ಟಿ ಸಾಧನೆ ಮಾಡಿದರೂ ಈಶ್ವರಪ್ರಾಪ್ತಿಯಾಗುತ್ತದೆ. ವ್ಯಷ್ಟಿ ಸಾಧನೆಯ ಅಂಗಗಳು ಮುಂದಿನಂತಿವೆ.
ಕುಲಾಚಾರ, ಹಬ್ಬ-ವ್ರತಗಳು, ವಿವಿಧ ಧಾರ್ಮಿಕ ಕೃತಿ ಇತ್ಯಾದಿಗಳ ಆಚರಣೆ
ಮುಂದಿನಂತಹ ವಿಷಯಗಳು ಧರ್ಮಪಾಲನೆಯಲ್ಲಿ ಬರುತ್ತವೆ.
ಅ. ರೂಢಿಪರಂಪರೆಗಳಿಂದ ನಡೆದು ಬಂದಿರುವ ಕುಲಾಚಾರಗಳ ಪಾಲನೆ, ಕುಲದೇವತೆಯ ಪೂಜಾರ್ಚನೆ, ಅವಳ ಸ್ತೋತ್ರಪಠಣ, ಅವಳ ದರ್ಶನಕ್ಕೆ ಹೆಚ್ಚೆಚ್ಚು ಸಲ ಹೋಗುವುದು ಇತ್ಯಾದಿ ಕುಲದೇವಿಯ ಉಪಾಸನೆ ಮಾಡುವುದು.
ಆ. ನಮಸ್ಕಾರ, ಆರತಿ, ಹುಟ್ಟುಹಬ್ಬ, ಉಪನಯನ ಮುಂತಾದ ಧಾರ್ಮಿಕ ಕೃತಿಗಳನ್ನು ಮಾಡುವುದು
ಇ. ಯುಗಾದಿ, ಗಣೇಶ ಚತುರ್ಥಿ, ದಸರಾ ಮುಂತಾದ ಹಬ್ಬ, ಉತ್ಸವ ಮತ್ತು ವ್ರತಗಳನ್ನು ಶಾಸ್ತ್ರಕ್ಕನುಸಾರ ಆಚರಿಸುವುದು
ಸ್ವಭಾವದೋಷಗಳ ನಿರ್ಮೂಲನೆಗಾಗಿ ಪ್ರಯತ್ನಿಸುವುದು
ಪ್ರತಿಯೊಬ್ಬರಲ್ಲಿಯೂ ಸಿಟ್ಟು, ಕಿರಿಕಿರಿ, ಆಲಸ್ಯ, ಮರೆವು ಮುಂತಾದ ಸ್ವಭಾವದೋಷಗಳು ಹೆಚ್ಚು-ಕಡಿಮೆ ಪ್ರಮಾಣದಲ್ಲಿರುತ್ತವೆ. ಸ್ವಭಾವದೋಷಗಳಿಂದಾಗಿ ತಮ್ಮ ಹಾಗೆಯೇ ಇತರರ ಸಾಧನೆಯ ಹಾನಿ ಹೇಗಾಗುತ್ತದೆ, ಎಂಬುದು ತಿಳಿಯಲು ಒಂದು ಉದಾಹರಣೆಯನ್ನು ನೋಡೋಣ. ಒಬ್ಬನ ಸ್ವಭಾವವು ಕೋಪಿಷ್ಠವಾಗಿದೆ ಮತ್ತು ಚಿಕ್ಕಚಿಕ್ಕ ವಿಷಯಗಳಿಗೆ ಅವನು ಇತರರ ಮೇಲೆ ಕೋಪಗೊಳ್ಳುತ್ತಾನೆ ಎಂದು ತಿಳಿದುಕೊಳ್ಳೋಣ. ಇದರಿಂದ ಅವನ ಮನಃಸ್ಥಿತಿಯು ಹಾಳಾಗಿ ಅವನಿಗೆ ಸೇವೆ ಮಾಡುವಾಗ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಆಗುವುದಿಲ್ಲ ಮತ್ತು ಇದರಿಂದಾಗಿ ಅವನಿಂದ ತಪ್ಪುಗಳಾಗಿ ಅವನ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಹಾಗೆಯೇ ಕೋಪಿಸಿಕೊಳ್ಳುವುದರಿಂದ ಅವನಿಗೆ ಸಾಧನೆಯಿಂದ ಸಿಗುವ ಸಮಾಧಾನವು ಹೆಚ್ಚು ಕಾಲ ಉಳಿಯುವುದಿಲ್ಲ. ಯಾವಾಗ ಇಂತಹ ವ್ಯಕ್ತಿಯು ಇತರರೊಂದಿಗೆ ಕೋಪದಿಂದ ಮಾತನಾಡುತ್ತಾನೆಯೋ, ಆಗ ಇತರರಿಗೆ ಕೆಟ್ಟದೆನಿಸುತ್ತದೆ ಮತ್ತು ಅವರು ದುಃಖಿತರಾಗುತ್ತಾರೆ. ಇದರ ಪರಿಣಾಮದಿಂದ ಇತರರ ಮನಃಸ್ಥಿತಿಯೂ ಹಾಳಾಗುತ್ತದೆ. ಹಾಗೆಯೇ ಆತನೊಂದಿಗೆ ಮಾತನಾಡುವಾಗ ಇತರರಿಗೆ ಒಂದು ರೀತಿಯ ಒತ್ತಡವೆನಿಸುತ್ತದೆ. ಅಂದರೆ ಇತರರಿಗೆ ಅವನೊಂದಿಗೆ ಒಳ್ಳೆಯ ರೀತಿಯಿಂದ ಮಾತನಾಡಲು ಆಗುವುದಿಲ್ಲ. ಇದರ ಒಟ್ಟು ಪರಿಣಾಮವು ಸಮಷ್ಟಿಯ ಕಾರ್ಯದ ಮೇಲಾಗುತ್ತದೆ.
ಸ್ವಭಾವದೋಷಗಳಿರುವುದರ ಇನ್ನೊಂದು ಹಾನಿಯೆಂದರೆ ಕೆಟ್ಟ ಶಕ್ತಿಗಳಿಗೆ ಸ್ವಭಾವದೋಷಗಳ ಲಾಭ ಪಡೆದು ಮನುಷ್ಯನ ಶರೀರವನ್ನು ಪ್ರವೇಶಿಸಿ ಅಲ್ಲಿ ದೀರ್ಘಕಾಲ ವಾಸಿಸುವುದು ಸುಲಭವಾಗುತ್ತದೆ; ಆದ್ದರಿಂದ ಪ್ರತಿಯೊಬ್ಬರೂ ಸ್ವಭಾವದೋಷಗಳನ್ನು ದೂರಗೊಳಿಸಲು ಪ್ರಯತ್ನಿಸುವುದು ಆವಶ್ಯಕವಾಗಿರುತ್ತದೆ.
(ಸ್ವಭಾವದೋಷಗಳೆಂದರೆ ಏನು, ಅವುಗಳಿಂದ ಯಾವ ಹಾನಿಗಳಾಗುತ್ತವೆ, ಅವುಗಳನ್ನು ಹೇಗೆ ದೂರಗೊಳಿಸಬೇಕು ಇತ್ಯಾದಿಗಳ ಬಗೆಗಿನ ಸಮಗ್ರ ವಿವೇಚನೆಯನ್ನು ಸನಾತನ ನಿರ್ಮಿತ ಗ್ರಂಥಮಾಲಿಕೆ ‘ಸುಖೀ ಜೀವನ ಮತ್ತು ಉತ್ತಮ ಸಾಧನೆಗಾಗಿ ಸ್ವಭಾವದೋಷ ನಿರ್ಮೂಲನೆ ಮತ್ತು ಗುಣ ಸಂವರ್ಧನೆ’ ಇದರಲ್ಲಿ ಕೊಡಲಾಗಿದೆ. ಹಾಗೆಯೇ ಸನಾತನದ ಸತ್ಸಂಗಗಳಲ್ಲಿಯೂ ಇವುಗಳ ಬಗೆಗಿನ ಮಾರ್ಗದರ್ಶನ ಸಿಗುತ್ತದೆ.)
ಅಹಂ-ನಿರ್ಮೂಲನೆಗಾಗಿ ಪ್ರಯತ್ನಿಸುವುದು
ಸಾಮಾನ್ಯ ವ್ಯಕ್ತಿಯಲ್ಲಿ ಮಾತ್ರವಲ್ಲಾ, ಸಾಧಕರಲ್ಲಿಯೂ ಒಂದಲ್ಲಾ ಒಂದು ರೀತಿಯ ಅಹಂ ಇದ್ದೇ ಇರುತ್ತದೆ. ಈಶ್ವರನೆಂದರೆ ಶೂನ್ಯ ಅಹಂ. ನಮ್ಮಲ್ಲಿ ಸ್ವಲ್ಪ ಅಹಂ ಇದ್ದರೂ, ನಾವು ಈಶ್ವರನೊಂದಿಗೆ ಎಂದಿಗೂ ಏಕರೂಪವಾಗಲು ಸಾಧ್ಯವಿಲ್ಲ. ಆದುದರಿಂದ ಸಾಧನೆಯನ್ನು ಮಾಡುವಾಗ ಅಹಂ-ನಿರ್ಮೂಲನೆಗಾಗಿ ಉದ್ದೇಶಪೂರ್ವಕವಾಗಿ ಪ್ರಯತ್ನಿಸುವುದು ಆವಶ್ಯಕವಾಗಿರುತ್ತದೆ.
ನಾಮಜಪ
ಪೂಜೆ, ಆರತಿ, ಭಜನೆ, ಗ್ರಂಥವಾಚನ ಇತ್ಯಾದಿ ಉಪಾಸನೆಗಳಿಂದ ದೇವತೆಯ ಕೃಪೆಯಾಗುತ್ತದೆ ಮತ್ತು ದೇವತೆಯ ತತ್ತ್ವದ ಲಾಭ ಸಿಗುತ್ತದೆ; ಆದರೆ ಈ ಎಲ್ಲಾ ಉಪಾಸನೆಗಳನ್ನು ಮಾಡಲು ಮಿತಿಯಿರುವುದರಿಂದ ಲಾಭವೂ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ದೇವತೆಯ ತತ್ತ್ವದ ಲಾಭವನ್ನು ಸತತವಾಗಿ ಪಡೆಯಲು ದೇವತೆಯ ಉಪಾಸನೆಯೂ ಸತತವಾಗಿ ಆಗಬೇಕಾಗುತ್ತದೆ. ಹೀಗೆ ಸತತವಾಗಿ ಆಗುವ ಉಪಾಸನೆ ಎಂದರೆ ‘ನಾಮಜಪ’. ನಾಮಜಪವೆಂದರೆ ಈಶ್ವರನ ಹೆಸರನ್ನು (ನಾಮವನ್ನು) ಸತತವಾಗಿ ಸ್ಮರಿಸುವುದು. ಕಲಿಯುಗದಲ್ಲಿ ನಾಮಜಪವು ಸುಲಭ ಮತ್ತು ಸರ್ವೋತ್ತಮ ಉಪಾಸನೆಯಾಗಿದೆ. ನಾಮಜಪವು ಗುರುಕೃಪಾಯೋಗಾನುಸಾರ ಮಾಡಬೇಕಾದ ಸಾಧನೆಯ ತಳಹದಿಯಾಗಿದೆ.
ಸತ್ಸಂಗ
ಸತ್ಸಂಗವೆಂದರೆ ಸತ್‌ನ ಸಂಗ, ಸಾತ್ತ್ವಿಕ ವಾತಾವರಣ. ಸತ್ಸಂಗವು ಸಾಧಕರ ಅಥವಾ ಸಂತರದ್ದಾಗಿರುತ್ತದೆ.
ಅ. ಮಹತ್ವ: ಒಮ್ಮೆ ವಸಿಷ್ಠಋಷಿ ಮತ್ತು ವಿಶ್ವಾಮಿತ್ರಋಷಿಗಳಲ್ಲಿ ಸತ್ಸಂಗ ಶ್ರೇಷ್ಠವೋ ಅಥವಾ ತಪಶ್ಚರ್ಯ ಶ್ರೇಷ್ಠವೋ? ಎಂಬ ವಿಷಯದಲ್ಲಿ ವಾದವಾಯಿತು. ವಸಿಷ್ಠ ಋಷಿಗಳು ‘ಸತ್ಸಂಗ’ ಎಂದು ಹೇಳಿದರೆ ವಿಶ್ವಾಮಿತ್ರಋಷಿಗಳು ‘ತಪಶ್ಚರ್ಯ’ ಎಂದು ಹೇಳಿದರು. ವಾದದ ತೀರ್ಪಿಗಾಗಿ ಅವರು ದೇವರ ಬಳಿಗೆ ಹೋದರು. ದೇವರು, ‘ಶೇಷನೇ ನಿಮ್ಮ ಪ್ರಶ್ನೆಗೆ ಉತ್ತರವನ್ನು ಕೊಡಬಲ್ಲಾನು’ ಎಂದು ಹೇಳಿದರು. ಅಗ ಇಬ್ಬರೂ ಶೇಷನಾಗನೆಡೆಗೆ ಹೋದರು. ಅವರು ಪ್ರಶ್ನೆಯನ್ನು ಕೇಳಿದ ಮೇಲೆ ಶೇಷನು, ‘ನನ್ನ ತಲೆಯ ಮೇಲಿನ ಪೃಥ್ವಿಯ ಭಾರವನ್ನು ಸ್ವಲ್ಪ ಹಗುರಗೊಳಿಸಿರಿ. ನಂತರ ನಾನು ವಿಚಾರ ಮಾಡಿ ಉತ್ತರ ಕೊಡುತ್ತೇನೆ’ ಎಂದು ಹೇಳಿದನು. ಅದಕ್ಕೆ ವಿಶ್ವಾಮಿತ್ರರು, ‘ನನ್ನ ಸಹಸ್ರ ವರ್ಷಗಳ ತಪಶ್ಚರ್ಯದ ಫಲವನ್ನು ನಾನು ಅರ್ಪಿಸುತ್ತೇನೆ; ಪೃಥ್ವಿಯು ಶೇಷನಾಗನ ತಲೆಯ ಮೇಲಿಂದ ಸ್ವಲ್ಪ ಮೇಲೆ ಹೋಗಲಿ’ ಎಂದು ಸಂಕಲ್ಪ ಮಾಡಿದರು. ಆದರೆ ಪೃಥ್ವಿಯು ಸ್ವಲ್ಪವೂ ಅಲುಗಾಡಲಿಲ್ಲಾ. ನಂತರ ವಸಿಷ್ಠಋಷಿಗಳು, ‘ನಾನು ಅರ್ಧ ಘಟಿಕೆಯಷ್ಟು (ಹನ್ನೆರಡು ನಿಮಿಷ) ಸತ್ಸಂಗದ ಫಲವನ್ನು ಅರ್ಪಿಸುತ್ತೇನೆ. ಪೃಥ್ವಿಯು ಭಾರವನ್ನು ಹಗುರಗೊಳಿಸಲಿ’ ಎಂದು ಸಂಕಲ್ಪ ಮಾಡಿದರು. ಕೂಡಲೇ ಪೃಥ್ವಿಯು ಮೇಲೆ ಹೋಯಿತು.
ಆ. ಲಾಭಗಳು
1.ಸತ್ಸಂಗಕ್ಕೆ ಬರುವ ಎಲ್ಲಾ ಸಾಧಕರ ಒಟ್ಟು ಸಾತ್ತ್ವಿಕತೆಯು ಹೆಚ್ಚಿರುವುದರಿಂದ ಅಲ್ಲಿಗೆ ಬರುವ ಪ್ರತಿಯೊಬ್ಬನಿಗೂ ಅದರ ಲಾಭವಾಗುತ್ತದೆ, ಅಂದರೆ ಪ್ರತಿಯೊಬ್ಬನ ರಜ-ತಮಗಳು ನಿಧಾನವಾಗಿ ಕಡಿಮೆಯಾಗತೊಡಗುತ್ತವೆ. ನಾಮಜಪದಿಂದ ಸಿಗುವ ಆನಂದವು ಸತ್ಸಂಗಕ್ಕೆ ಹೋದ ಮೇಲೆ ನಾಮಜಪವನ್ನು ಮಾಡದೆ ತಾನಾಗಿಯೇ ಸಿಗತೊಡಗುತ್ತದೆ, ಇಂತಹ ಅನುಭೂತಿಯು ಶೇ.50ರ ಮಟ್ಟಕ್ಕೆ ಬರುತ್ತದೆ. ನಾಮಜಪದಿಂದ ತನ್ನ ಸಾತ್ತ್ವಿಕತೆಯನ್ನು ಹೆಚ್ಚಿಸಿ ಆನಂದದ ಅನುಭೂತಿಯನ್ನು ಪಡೆಯುವುದಕ್ಕಿಂತ, ಕೇವಲ ಸತ್ಸಂಗಕ್ಕೆ ಹೋಗಿ ಆ ಅನುಭೂತಿಯನ್ನು ಪಡೆಯುವುದು ಬಹಳ ಸುಲಭವಾಗಿರುತ್ತದೆ. ಇದರಿಂದಾಗಿ ಸಾಧಕನು ಸತ್ಸಂಗಕ್ಕೆ ಹೆಚ್ಚು ಸಮಯ ಮನಃಪೂರ್ವಕವಾಗಿ ಹೋಗತೊಡಗುತ್ತಾನೆ. ಯಾವುದಾದರೊಂದು ಸತ್ಸಂಗವನ್ನು ಸಂತರೇ ತೆಗೆದುಕೊಳ್ಳುತ್ತಿದ್ದರೆ, ಅಲ್ಲಿ ಹೋಗುವುದರಿಂದ ಹೆಚ್ಚು ಲಾಭವಾಗುತ್ತದೆ. ಸಂತರಲ್ಲಿ ಸಾತ್ತ್ವಿಕತೆ ಹೆಚ್ಚಿರುವುದರಿಂದ, ಹಾಗೆಯೇ ಅವರಿಂದ ಬರುವ ಆನಂದಲಹರಿಗಳ ಪ್ರಮಾಣವು ಹೆಚ್ಚಿರುವುದರಿಂದ, ಸಾಧಕನಿಗೆ ಹೆಚ್ಚು ಸಾತ್ತ್ವಿಕತೆಯು ಸಿಗುತ್ತದೆ ಮತ್ತು ಆನಂದದ ಅನುಭೂತಿ ಬರುತ್ತದೆ.
2.ಸತ್ಸಂಗಕ್ಕೆ ಬರುವ ಇತರ ಸಾಧಕರು ನಮ್ಮವರೇ ಆಗಿದ್ದಾರೆ, ಎಂಬ ಭಾವ ನಿರ್ಮಾಣ ವಾಗುತ್ತದೆ. ಇದರಿಂದ ತರುಣರು ಮೂರು-ಮೂರು ಪೀಳಿಗೆಗಳಿಂದ ನಡೆಯುತ್ತಾ ಬಂದ ಜಗಳಗಳನ್ನು ಮರೆತು ಪರಸ್ಪರ ಕುಟುಂಬಿಯರಂತೆ ವರ್ತಿಸತೊಡಗುತ್ತಾರೆ. ಅದರಿಂದಲೇ ಮುಂದೆ ‘ಈ ವಿಶ್ವವೇ ನನ್ನ ಮನೆ’ ಎಂಬ ಭಾವ ನಿರ್ಮಾಣವಾಗುತ್ತದೆ. ಕುಸಂಗದ ಪರಿಣಾಮವು ಸತ್ಸಂಗಕ್ಕಿಂತ ತೀರಾ ವಿರುದ್ಧವಾಗಿರುತ್ತದೆ; ಆದುದರಿಂದ ಅದನ್ನು ತಪ್ಪಿಸಬೇಕು.
ಸತ್ಸೇವೆ
ದೇವಸ್ಥಾನಗಳ ಸ್ವಚ್ಛತೆ, ಸಂತಸೇವೆ ಇತ್ಯಾದಿಗಳು ಸತ್ಸೇವೆಗಳಾಗಿವೆ. ಸಮಷ್ಟಿ ಸತ್ಸೇವೆಯ ಬಗೆಗಿನ ಮಾಹಿತಿಯನ್ನು ಅಂಶ ‘ಅಧ್ಯಾತ್ಮಪ್ರಸಾರ: ಸರ್ವೋತ್ತಮ ಸತ್ಸೇವೆ’ ಇದರಲ್ಲಿ ಕೊಡಲಾಗಿದೆ. ಸತ್ಸೇವೆಯ ಸಂದರ್ಭದಲ್ಲಿ ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು.
ಅ. ಸೇವೆಯು ಸತ್ಸೇವೆಯೇ ಆಗಿರಬೇಕು. ಆಧ್ಯಾತ್ಮಿಕ ಮಟ್ಟವು ಶೇ.60ರ ವರೆಗೆ ಆಗದೇ ಸೇವೆಯು ಮನಃಪೂರ್ವಕವಾಗಿ ಆಗುವುದಿಲ್ಲಾ. ಅಲ್ಲಿಯವರೆಗೆ ಅದನ್ನು ಬುದ್ಧಿಯಿಂದ ಸಾಧನೆ ಎಂದು ಮಾಡಲಾಗಿರುತ್ತದೆ.
ಆ. ಇನ್ನೊಬ್ಬರ ಮನಸ್ಸನ್ನು ಸಂತುಷ್ಟಗೊಳಿಸಲು ಪ್ರಾಧಾನ್ಯತೆಯನ್ನು ಕೊಡುವುದರಿಂದ ತನ್ನ ಆವಶ್ಯಕತೆಗಳು ನಿಧಾನವಾಗಿ ಕಡಿಮೆಯಾಗಿ ಸಾಧಕನು ನಿವೃತ್ತಿಪರಾಯಣನಾಗುತ್ತಾನೆ.
ಇ. ಅಸತ್‌ನ ಸೇವೆ, ಉದಾ.ರೋಗಿಗಳ ಸೇವೆ ಮಾಡುವಾಗ ಅದನ್ನು ಮಿಥ್ಯಾ ವಿಷಯವನ್ನು ಸತ್ಯವೆಂದು ತಿಳಿದು ಮಾಡಲಾಗುತ್ತದೆ. ಅಸತ್ ಸೇವೆಯಿಂದ ಕೊಡುಕೊಳ್ಳುವಿಕೆಯ ಸಂಬಂಧವೂ ನಿರ್ಮಾಣವಾಗುತ್ತದೆ. ಹಾಗೆಯೇ ಅದರಲ್ಲಿ ‘ನಾನು ಸೇವೆ ಮಾಡುತ್ತೇನೆ’ ಎಂಬ ಅಹಂಭಾವವೂ ಇರುತ್ತದೆ; ಆದ್ದರಿಂದ ಸಾಧನೆ ಎಂದು ಅದರಿಂದ ವಿಶೇಷ ಉಪಯೋಗವೇನೂ ಆಗುವುದಿಲ್ಲಾ. ತದ್ವಿರುದ್ಧವಾಗಿ ಸತ್ಸೇವೆಯಿಂದ ಅಹಂ-ನಿರ್ಮೂಲನೆಯಾಗಲು ಸಹಾಯವಾಗುತ್ತದೆ. ಗುರುಸೇವೆಯನ್ನು ‘ಅಹಂ’ನ್ನು ಮರೆಯಲು ಮಾಡಲಾಗುತ್ತದೆ.
ಸತ್ಸೇವೆಯನ್ನು ಮಾಡುತ್ತಾ ಸಾಧಕನ ಮಟ್ಟವು ಶೇ.55ರ ಮಟ್ಟದವರೆಗೆ ಹೆಚ್ಚಾದ ಕೂಡಲೇ ಯಾರಾದರೊಬ್ಬ ಸಂತರು ಅವನನ್ನು ಶಿಷ್ಯನೆಂದು ಸ್ವೀಕರಿಸುತ್ತಾರೆ. ನಂತರ ಅವನು ಗುರುಸೇವೆಯನ್ನು ಹೇಗೆ ಮಾಡತೊಡಗುತ್ತಾನೆ ಎಂದು ತಿಳಿದುಕೊಳ್ಳಲು ಸನಾತನದ ‘ಶಿಷ್ಯ’ ಎಂಬ ಗ್ರಂಥದ ಅಧ್ಯಯನ ಮಾಡಿ.
ಸತ್‌ಗಾಗಿ ತ್ಯಾಗ
ಆಧ್ಯಾತ್ಮಿಕ ಉನ್ನತಿಗಾಗಿ ತನು, ಮನ ಮತ್ತು ಧನ ಇವೆಲ್ಲಾವುಗಳ ತ್ಯಾಗ ಮಾಡಬೇಕಾಗುತ್ತದೆ. ಅವುಗಳಲ್ಲಿ ಧನದ ತ್ಯಾಗ ಮಾಡುವುದು ಭೌತಿಕವಾಗಿ ಎಲ್ಲಾಕ್ಕಿಂತ ಸುಲಭವಾಗಿದೆ; ಏಕೆಂದರೆ ನಮ್ಮ ಎಲ್ಲಾ ಧನವನ್ನು ನಾವು ಇತರರಿಗೆ ಕೊಡಬಹುದು. ತನು ಮತ್ತು ಮನಸ್ಸನ್ನು ಹಾಗೆ ಕೊಡಲು ಆಗುವುದಿಲ್ಲಾ. ಆದರೂ ವ್ಯಕ್ತಿಯು ಮೊದಲು ಅವುಗಳ ತ್ಯಾಗವನ್ನು ಮಾಡಬಹುದು, ಅಂದರೆ ತನುವಿನಿಂದ ಶಾರೀರಿಕ ಸೇವೆ ಮತ್ತು ಮನಸ್ಸಿನಿಂದ ನಾಮಜಪ ಮಾಡಬಹುದು. ಮುಂದೆ ಸಾಧಕನು ಅಲ್ಪಸ್ವಲ್ಪ ಧನದ ತ್ಯಾಗವನ್ನೂ ಮಾಡಬಹುದು. ಸರ್ಕಸ್‌ನಲ್ಲಿ ಎತ್ತರವಾದ ಜೋಕಾಲಿಯ ಮೇಲಿನ ಹುಡುಗಿಯು ಅವಳ ಕೈಯಲ್ಲಿ ಹಿಡಿದ ಜೋಕಾಲಿಯ ಕೋಲನ್ನು ಬಿಡದೇ ಇನ್ನೊಂದು ಜೋಕಾಲಿಯ ಕೋಲಿಗೆ ಕೆಳಮುಖವಾಗಿ ಜೋತಾಡುವ ಮನುಷ್ಯನು ಅವಳನ್ನು ಹಿಡಿಯಲು ಸಾಧ್ಯವಿಲ್ಲಾ. ಅದರಂತೆ ಸಾಧಕನು ಸರ್ವಸ್ವವನ್ನು ತ್ಯಾಗ ಮಾಡದೇ ಈಶ್ವರನು ಅವನಿಗೆ ಆಧಾರ ಕೊಡಲಾರನು.
ತ್ಯಾಗ ಮಾಡುವುದೆಂದರೆ ವಸ್ತುಗಳನ್ನು ತ್ಯಜಿಸುವುದಲ್ಲಾ, ‘ಆ ವಸ್ತುಗಳ ಬಗೆಗಿನ ಆಸಕ್ತಿಯನ್ನು ಬಿಡುವುದು’. ಪ್ರಾರಂಭದಲ್ಲಿ ಗುರುಗಳು ಶಿಷ್ಯನಿಗೆ ಅವನಲ್ಲಿರುವ ವಸ್ತುಗಳನ್ನು ತ್ಯಾಗ ಮಾಡಲು ಹೇಳುತ್ತಾರೆ. ಕೊನೆಗೆ ಅವನ ಆಸಕ್ತಿ ಕಡಿಮೆಯಾದ ಮೇಲೆ, ಅವನಿಗೆ ಯಥೇಚ್ಛವಾಗಿ ಕೊಡುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ಆಸಕ್ತಿಯಿರಲಿಲ್ಲ; ಆದ್ದರಿಂದಲೇ ಸಮರ್ಥ ರಾಮದಾಸಸ್ವಾಮಿಗಳು ಅವರಿಗೆ ಅರ್ಪಿಸಿದ ರಾಜ್ಯವನ್ನು ಶಿವಾಜಿ ಮಹಾರಾಜರಿಗೆ ಹಿಂದಿರುಗಿಸಿದರು.
ಭಾವಜಾಗೃತಿಗಾಗಿ ಪ್ರಯತ್ನಿಸುವುದು
ನಾಥಾ ತುಝ್ಯಾ ಪಾಯೀ ಜೈಸಾ ಜ್ಯಾಚಾ ಭಾವ ತೈಸಾ ತ್ಯಾಸೀ ಠಾವ ಚರಣೀ ತುಝ್ಯಾ॥ (ನಾಥಾ, ನಿನ್ನಲ್ಲಿ ಯಾರ ಭಾವ ಹೇಗಿದೆಯೋ ಹಾಗೆ ನಿನ್ನ ಚರಣಗಳಲ್ಲಿ ಅವನಿಗೆ ಸ್ಥಾನ॥) ಎಂದು ಪ.ಪೂ.ಭಕ್ತರಾಜ ಮಹಾರಾಜರು ಹೇಳಿದ್ದಾರೆ. ಇದರಿಂದ ಸಾಧಕರ ದೃಷ್ಟಿಯಿಂದ ಭಾವವು ಎಷ್ಟು ಮಹತ್ತ್ವದ್ದಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ನಮ್ಮ ಅಂತಃಕರಣದಲ್ಲಿ ಭಗವಂತನ ಬಗ್ಗೆ ಸೆಳೆತ ನಿರ್ಮಾಣವಾಗುವುದಕ್ಕೆ ‘ಭಗವಂತನ ಬಗ್ಗೆ ಭಾವವಿರುವುದು’ ಎಂದು ಹೇಳುತ್ತಾರೆ. ಎಷ್ಟು ಬೇಗ ನಮ್ಮಲ್ಲಿ ಭಾವ ನಿರ್ಮಾಣವಾಗುತ್ತದೆಯೋ, ಮತ್ತು ಅದು ಎಷ್ಟು ಹೆಚ್ಚು ಸಮಯ ಜಾಗೃತವಾಗಿರುತ್ತದೆಯೋ ಅಷ್ಟು ಬೇಗ ನಾವು ಈಶ್ವರನ ಬಳಿ ಹೋಗಬಲ್ಲೆವು. ಭಾವವನ್ನು ಹೆಚ್ಚಿಸಲು ಮನಸ್ಸು ಮತ್ತು ಬುದ್ಧಿಯ ಸ್ತರದಲ್ಲಿ ಸತತವಾಗಿ ಕೃತಿಗಳನ್ನು ಮಾಡುತ್ತಿದ್ದಲ್ಲಿ ಭಾವವು ನಿಶ್ಚಿತವಾಗಿಯೂ ಹೆಚ್ಚುತ್ತದೆ. ಭಾವವನ್ನು ಹೆಚ್ಚಿಸಲು ಮಾಡಬೇಕಾದ ಕೆಲವು ಸುಲಭ ಪ್ರಯತ್ನಗಳನ್ನು ಮುಂದೆ ಕೊಡಲಾಗಿದೆ.
ಅ. ಪ್ರಾರ್ಥನೆ: ಪ್ರಾರ್ಥನೆ ಎಂದರೆ ದೇವರು ಅಥವಾ ಗುರುಗಳಿಗೆ ಮನಃಪೂರ್ವಕವಾಗಿ ಶರಣಾಗಿ ಬೇಕಾದ ವಿಷಯವನ್ನು ಉತ್ಕಟವಾಗಿ ಬೇಡುವುದು. ತಳಮಳದಿಂದ ಮಾಡಿದ ಪ್ರಾರ್ಥನೆಯು ದೇವರಿಗೆ ತಲುಪುತ್ತದೆ ಮತ್ತು ದೇವರು ‘ತಥಾಸ್ತು’ ಎಂದು ಹೇಳುತ್ತಾನೆ.
ಆ. ಆರತಿ: ಈಶ್ವರನು ಪ್ರತ್ಯಕ್ಷ ನಮ್ಮೆದುರಿಗೆ ನಿಂತಿದ್ದಾನೆ ಮತ್ತು ನಾವು ಸಂಪೂರ್ಣ ಶರಣಾಗಿ ಆರ್ತತೆಯಿಂದ ಅವನನ್ನು ಕರೆಯುತ್ತಿದ್ದೇವೆ, ಎಂಬ ಭಾವದಿಂದ ಆರತಿಯನ್ನು ಹಾಡುವುದು, ಆರತಿಯ ಶಬ್ದಗಳ ಉಚ್ಚಾರವು ಆಧ್ಯಾತ್ಮಿಕ ದೃಷ್ಟಿಯಿಂದ ಯೋಗ್ಯವಾಗಿರುವುದು, ಆರತಿಯನ್ನು ಲಯಬದ್ಧವಾಗಿ ಹಾಡುವುದು, ಆರತಿಯ ಜೊತೆಗೆ ನಿಧಾನವಾಗಿ ಚಪ್ಪಾಳೆ ಮತ್ತು ಝುಲ್ಲಾರಿ ಮುಂತಾದ ವಾದ್ಯಗಳನ್ನು ನುಡಿಸುವುದು ಈ ಘಟಕಗಳ ಮೇಲೆ ಭಾವಜಾಗೃತಿಯು ಅವಲಂಬಿಸಿರುತ್ತದೆ.
ಸಮಷ್ಟಿ ಸಾಧನೆ
(ಸಂಪೂರ್ಣ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ)
ಸಾಧನೆಗೆ ಆಪತ್ಕಾಲವೆಂದರೆ, ಸಾಧನೆಯಲ್ಲಿ ಬರುವ ಅಡಚಣೆಗಳಿಂದ ಕೂಡಿದ, ಸಾಧನೆಯ ಪ್ರತಿಕೂಲ ಕಾಲ. ಪ್ರಸ್ತುತ ಹೆಚ್ಚುತ್ತಿರುವ ರಜ-ತಮದ ಪ್ರದೂಷಣೆ ಮತ್ತು ಧರ್ಮಹಾನಿ, ಅರಾಜಕತೆಯೆಡೆಗೆ ರಾಷ್ಟ್ರದ ಮಾರ್ಗಕ್ರಮಣ ಇತ್ಯಾದಿಗಳಿಂದಾಗಿ ಸದ್ಯದ ಕಾಲವು ಆಪತ್ಕಾಲವಾಗಿದೆ. ಆಪತ್ಕಾಲದಲ್ಲಿ ಕೇವಲ ವ್ಯಷ್ಟಿ ಸಾಧನೆಯಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಬಹಳ ಕಠಿಣವಾಗಿದೆ. ಆದುದರಿಂದ ವ್ಯಷ್ಟಿ ಸಾಧನೆಗೆ ಸಮಷ್ಟಿ ಸಾಧನೆಯ ಜೊತೆ ಇರುವುದು ಆವಶ್ಯಕವಾಗಿದೆ.
ಅಧ್ಯಾತ್ಮಪ್ರಸಾರ: ಸರ್ವೋತ್ತಮ ಸತ್ಸೇವೆ
ಯಾವುದಾದರೊಂದು ಕಾರ್ಯಕ್ರಮದ ಸಿದ್ಧತೆಗಾಗಿ ಕೆಲವರು ಸ್ವಚ್ಛತೆ ಮಾಡುತ್ತಿರುತ್ತಾರೆ, ಕೆಲವರು ಅಡುಗೆ ಮಾಡುತ್ತಿರುತ್ತಾರೆ, ಕೆಲವರು ಪಾತ್ರೆಗಳನ್ನು ತೊಳೆಯುತ್ತಿರುತ್ತಾರೆ, ಕೆಲವರು ಅಲಂಕಾರ ಮಾಡುತ್ತಿರುತ್ತಾರೆ. ನಾವು ಸ್ವಚ್ಛತೆಯ ಕೆಲಸದಲ್ಲಿದ್ದೇವೆ ಎಂದು ತಿಳಿದುಕೊಳ್ಳೋಣ. ಇಂತಹ ಸಮಯದಲ್ಲಿ ಇನ್ನೊಬ್ಬನು ಬಂದು ಅಡುಗೆ ಮಾಡುವವರೊಂದಿಗೆ ಕೆಲಸ ಮಾಡತೊಡಗಿದರೆ, ನಮಗೆ ಅವನ ಬಗ್ಗೆ ಏನೂ ಅನಿಸುವುದಿಲ್ಲ. ಆದರೆ ಅವನೇ ಒಂದು ವೇಳೆ ನಮಗೆ ಸ್ವಚ್ಛತೆಯ ಕೆಲಸದಲ್ಲಿ ಸಹಾಯ ಮಾಡಿದರೆ, ಅವನು ನಮ್ಮವನೆನಿಸುತ್ತಾನೆ. ಗುರುಗಳ ಬಗ್ಗೆಯೂ ಹಾಗೇ ಆಗಿರುತ್ತದೆ. ಗುರುಗಳ ಮತ್ತು ಸಂತರ ಏಕೈಕ ಕಾರ್ಯವೆಂದರೆ ಸಮಾಜದಲ್ಲಿ ಧರ್ಮದ ಬಗ್ಗೆ ಮತ್ತು ಸಾಧನೆಯ ಬಗ್ಗೆ ಸೆಳೆತವನ್ನು ನಿರ್ಮಿಸಿ ಎಲ್ಲರಿಗೂ ಸಾಧನೆ ಮಾಡಲು ಪ್ರವೃತ್ತಗೊಳಿಸುವುದು ಮತ್ತು ಅಧ್ಯಾತ್ಮಪ್ರಸಾರ ಮಾಡುವುದು. ಅದನ್ನೇ ನಾವು ನಮ್ಮ ಕ್ಷಮತೆಗನುಸಾರ ಮಾಡತೊಡಗಿದರೆ, ಗುರುಗಳಿಗೆ ‘ಇವನು ನನ್ನವನಾಗಿದ್ದಾನೆ’ ಎಂದೆನಿಸುತ್ತದೆ. ಅವರಿಗೆ ಹೀಗೆನಿಸುವುದೇ ಗುರುಕೃಪೆಯ ಆರಂಭವಾಗಿದೆ.
ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ
ಸದ್ಯ ಭಯೋತ್ಪಾದಕರ ಮತ್ತು ನಕ್ಸಲವಾದಿಗಳ ಅಟ್ಟಹಾಸವು ದೇಶದಲ್ಲಿ ಮೆರೆದಿದೆ. ಬಡತನ, ಮತಾಂಧತೆ, ಸಾಮಾಜಿಕ ವೈಷಮ್ಯ, ಭ್ರಷ್ಟಾಚಾರ, ಮೀಸಲಾತಿಗಳಂತಹ ಅನೇಕ ಸಮಸ್ಯೆಗಳು ದೇಶವನ್ನು ಸುತ್ತುವರಿದಿವೆ. ಆದುದರಿಂದ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಸಮಾಜವನ್ನು ಜಾಗೃತಗೊಳಿಸುವುದು ಮಹತ್ವದ್ದಾಗಿದೆ.
ಹಿಂದೂಸಂಘಟನೆ
ಹಿಂದೂ ಧರ್ಮವನ್ನು ವಿರೋಧಿಸುವಾಗ ಹಿಂದೂ ವಿರೋಧಿಗಳು ಸಂಘಟಿತರಾಗುತ್ತಾರೆ. ಇದರ ತುಲನೆಯಲ್ಲಿ ಹಿಂದೂ ಧರ್ಮದ ಮತ್ತು ರಾಷ್ಟ್ರದ ಹೆಸರಿನಡಿಯಲ್ಲಿ ಹಿಂದೂಗಳು ಸಂಘಟಿತರಾಗುವ ಪ್ರಮಾಣವು ಬಹಳ ಕಡಿಮೆಯಿದೆ. ಹಿಂದುಗಳು ಸಂಘಟಿತರಾದರೆ, ಹಿಂದೂ ಧರ್ಮ ಮತ್ತು ರಾಷ್ಟ್ರದ ರಕ್ಷಣೆಯೂ ಆಗುವುದು. ಇದಕ್ಕಾಗಿ ಹಿಂದೂಸಂಘಟನೆಗಾಗಿ ಪ್ರಯತ್ನಿಸುವುದೂ ಸಮಷ್ಟಿ ಸಾಧನೆಯ ಮಹತ್ವದ ಭಾಗವಾಗಿದೆ.
ಕಾಲಕ್ಕನುಸಾರ ಆವಶ್ಯಕವಿರುವ ಶ್ರೀಕೃಷ್ಣನ ನಾಮಜಪವನ್ನು ಮಾಡುವುದು
ಸದ್ಯ ಕಾಲಕ್ಕನುಸಾರ ಶ್ರೀಕೃಷ್ಣನ ತತ್ತ್ವವು ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿದೆ; ಇದಕ್ಕಾಗಿ ‘ನಾಮಜಪ’ ಈ ಒಂದು ಘಟಕದ ವಿಚಾರವನ್ನು ಮಾಡಿದರೆ ಸಮಷ್ಟಿ ಸಾಧನೆಯನ್ನು ಕನಿಷ್ಟಪಕ್ಷ 2 ವರ್ಷಗಳ ಕಾಲ ಮಾಡಿದ ಸಾಧಕರು ಕಾಲಾನುಸಾರ ಆವಶ್ಯಕವೆಂದು ಪ್ರತಿದಿನ ಕನಿಷ್ಟಕ್ಷ 2 ಗಂಟೆ || ಓಂ ನಮೋ ಭಗವತೇ ವಾಸುದೇವಾಯ || ಈ ನಾಮಜಪವನ್ನು ಮಾಡಬೇಕು.
ಇತರರ ಬಗ್ಗೆ ಪ್ರೀತಿ
ಪ್ರೀತಿ ಎಂದರೆ ನಿರಪೇಕ್ಷ ಪ್ರೇಮ. ವ್ಯವಹಾರದ ಪ್ರೇಮದಲ್ಲಿ ಅಪೇಕ್ಷೆಯಿರುತ್ತದೆ. ಸಾಧನೆ ಮಾಡುವುದರಿಂದ ಸಾತ್ತ್ವಿಕತೆ ಹೆಚ್ಚಾಗುವುದರಿಂದ ಸಾನ್ನಿಧ್ಯದಲ್ಲಿರುವ ಚರಾಚರ ಸೃಷ್ಟಿಯನ್ನು ಸಂತೋಷಪಡಿಸುವ ವೃತ್ತಿ ನಿರ್ಮಾಣವಾಗುತ್ತದೆ. ಪ್ರೇಮದಲ್ಲಿ ವೈಶಾಲ್ಯತೆ ಬಂದು ಇತರರ ಬಗ್ಗೆ ಪ್ರೀತಿ ನಿರ್ಮಾಣವಾಗುತ್ತದೆ. ಪ್ರತಿಯೊಂದು ವಸ್ತುವಿನಲ್ಲಿಯೂ ಪರಮೇಶ್ವರನ ರೂಪ ಕಾಣಿಸುತ್ತದೆ. ‘ವಸುಧೈವ ಕುಟುಂಬಕಮ್ |’ ಅಂದರೆ ವಿಶ್ವಕ್ಕೆ ಒಂದು ಪ್ರೇಮಮಯಿ ಕುಟುಂಬದ ಸ್ವರೂಪ ಬರುತ್ತದೆ. ಆರಂಭದಲ್ಲಿ ಸತ್ಸಂಗಕ್ಕೆ ಬರುವ ಸಾಧಕರ ಮೇಲೆ ಪ್ರೀತಿ ಉಂಟಾಗತ್ತದೆ, ನಂತರ ಇತರ ಸಂಪ್ರದಾಯದ ಸಾಧಕರ ಮೇಲೆ, ಮುಂದೆ ಸಾಧನೆ ಮಾಡದಿರುವವರ ಮೇಲೆ ಮತ್ತು ಕೊನೆಗೆ ಎಲ್ಲ ಪ್ರಾಣಿಮಾತ್ರರ ಮೇಲೆ ಪ್ರೀತಿ ಉಂಟಾಗತ್ತದೆ.
ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ
1. ಕಾಲಮಹಿಮೆಯಂತೆ ವ್ಯಷ್ಟಿ ಸಾಧನೆಗಿಂತ ಸಮಷ್ಟಿ ಸಾಧನೆ ಮಹತ್ವದ್ದಾಗಿದೆ: ಕಾಲಮಹಿಮೆಯಂತೆ ಕಲಿಯುಗದಲ್ಲಿ ಸಮಷ್ಟಿ ಸಾಧನೆಗೆ ಶೇ.70ರಷ್ಟು ಮತ್ತು ವ್ಯಷ್ಟಿ ಸಾಧನೆಗೆ ಶೇ.30ರಷ್ಟು ಮಹತ್ವವಿದೆ.
2. ಎರಡೂ ಸಾಧನೆಗಳು ಪರಸ್ಪರ ಪೂರಕವಾಗಿವೆ: ವ್ಯಷ್ಟಿ ಸಾಧನೆಯನ್ನು ಮಾಡುವವರು ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸಮಷ್ಟಿ ಸಾಧನೆಯನ್ನು ಮಾಡುವುದು ಆವಶ್ಯಕ ವಾಗಿದೆ, ಆದರೆ ಸಮಷ್ಟಿ ಸಾಧನೆಯು ವ್ಯಷ್ಟಿ ಸಾಧನೆಯ ಆಧಾರದ ಮೇಲಿರುವುದರಿಂದ ಸಮಷ್ಟಿ ಸಾಧನೆಯನ್ನು ಮಾಡುವವರು ವ್ಯಷ್ಟಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ.