ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಪ್ರಗತಿ ಮಾಡಿಕೊಳ್ಳಲು ಪ.ಪೂ. ಬಾಬಾ ಇವರು ಎಷ್ಟು ತಳಮಳದಿಂದ ಗುರುಸೇವೆ ಮಾಡಿರ ಬಹುದು, ಅದಕ್ಕೆ ಸರಿಸಾಟಿ ಇಲ್ಲ ! ಸಂತರ ಸಗುಣ ಸೇವೆ ಮಾಡುವುದು ಕಠಿಣವಿರುತ್ತದೆ. ಅದರಲ್ಲಿ ಸಾಧು ಸಂತರ ಸೇವೆ ಮಾಡುವುದು ಅದಕ್ಕಿಂತಲೂ ಕಠಿಣವಿರುತ್ತದೆ. ಕ್ಷಣಕ್ಷಣಕ್ಕೂ ಸಾಧನೆಯ ಮತ್ತು ಶಿಷ್ಯನ ನಿಷ್ಠೆಯ ಪರೀಕ್ಷೆಯೇ ಆಗಿರುತ್ತದೆ. ಪ.ಪೂ. ಬಾಬಾ ಇವರು ಅಕ್ಷರಶಃ ದೇಹಬುದ್ಧಿಯನ್ನು ಮರೆತು ಗುರುಸೇವೆ ಮಾಡಿದರು.
ಟಿಪ್ಪಣಿ : ಇದು ಪ.ಪೂ. ಭಕ್ತರಾಜ ಮಹಾರಾಜರ ಶಿಷ್ಯಾವಸ್ಥೆಯಲ್ಲಿನ ಲೇಖನವಾಗಿರುವುದರಿಂದ ‘ದಿನಕರ’ ಎಂಬ ಉಲ್ಲೇಖವನ್ನು ಹಾಗೆಯೇ ಇಡಲಾಗಿದೆ. – ಸಂಪಾದಕರು
ಗುರುಗಳ ಮೇಲಿನ ಭಕ್ತಿ ಮತ್ತು ಶ್ರದ್ಧೆಯನ್ನು ತೋರಿಸುವ ಪ್ರಸಂಗ !
ಅ. ಗುರುಗಳ ಭೋಜನವಾದ ನಂತರವೇ ದಿನಕರನು ಅವರ ಎಂಜಲನ್ನು ಪ್ರಸಾದವೆಂದು ಸೇವಿಸುತ್ತಿದ್ದನು. ದಿನಕರನು ಪ್ರತಿದಿನ ಬೆಳಗ್ಗೆ ಗುರುಗಳ ಚರಣಗಳನ್ನು ತೊಳೆದು ಆ ನೀರನ್ನು ‘ತೀರ್ಥವೆಂದು’ ಪ್ರಾಶನ ಮಾಡುತ್ತಿದ್ದನು. ಗುರುಗಳ ಬಟ್ಟೆಗಳನ್ನು ತೊಳೆದ ನಂತರ ಉಳಿದ ಸಾಬೂನಿನ ಸ್ವಲ್ಪ ನೀರನ್ನು ದಿನಕರನು ತೀರ್ಥವೆಂದು ಕುಡಿಯುತ್ತಿದ್ದನು. ಇಂತಹ ವಿಷಯಗಳ ಬಗ್ಗೆ ಒಬ್ಬ ಸಾಧಕ ಕಲ್ಪನೆಯನ್ನೂ ಮಾಡಲಾರನು.
ಆ. ಒಂದು ಬಾರಿ ದಿನಕರನು ಗುರುಗಳೊಂದಿಗೆ ಮೆಹತಾಖೇಡಿಗೆ ಕಾಲುದಾರಿಯಿಂದ ಹೊರಟಿದ್ದನು. ಗುರುಗಳು ಮುಂದೆ ಮತ್ತು ದಿನಕರನು ಹಿಂದೆ. ಮಧ್ಯಾಹ್ನದ ಪ್ರಖರ ಬಿಸಿಲಿನ ಸಮಯ. ನಡೆಯುತ್ತಾ ನಡೆಯುತ್ತಾ ದಿನಕರನಿಗೆ ಒಮ್ಮಿಂದೊಮ್ಮೆ ದಾರಿಯಲ್ಲಿ ಎರಡರಿಂದ ಎರಡೂವರೆ ಅಡಿ ಎತ್ತರದ ಹೆಡೆ ಬಿಚ್ಚಿ ನಿಂತಿರುವ ಒಂದು ನಾಗ ಕಾಣಿಸಿತು. ಗುರುಗಳು ಎಲ್ಲಿಯೂ ಕಾಣಿಸಲಿಲ್ಲ. ಸಾಯಬೇಕೋ ಅಥವಾ ಜೀವಂತವಿರಬೇಕೋ, ಅದು ಆ ನಾಗನ ಇಚ್ಛೆಯ ಮೇಲಿತ್ತು. ಗುರುಗಳು ನಡೆಯುತ್ತಾ ಹೋದ ಕಾಲುದಾರಿಯ ಮೇಲೆ ನಾಗ ಕಾಣಿಸಿದ್ದರಿಂದ ದಿನಕರನು ಭೂಮಿಯ ಮೇಲೆ ತಲೆಯಿಟ್ಟು ಆ ನಾಗನಿಗೆ ನಮಸ್ಕರಿಸಿದರು. ತಲೆ ಎತ್ತಿ ನೋಡುತ್ತಾರೆ, ಆ ನಾಗನ ಸ್ಥಳದಲ್ಲಿ ಗುರುಗಳು ನಿಂತಿದ್ದರು. ಅವರು ಅವನಿಗೆ, ‘ನಡೆ, ಎದ್ದೇಳು’ ಎಂದು ಹೇಳಿದರು. ಕೆಲವು ಸಮಯದ ನಂತರ ದಿನಕರನ ಮೊದಲ ಭೇಟಿಯಲ್ಲಿ ಪೀರಬಾಬಾ ಇವರು, ‘ಅವರು ಹಾವು ಆಗುವರು, ಚೇಳು ಆಗುವರು, ಆದರೂ ಹೆದರಬೇಡ !’ ಎಂದು ಹೇಳಿದ್ದು ಅವನಿಗೆ ನೆನಪಾಯಿತು.
(ಬಾಬಾರವರು ೧೯೯೪ ರಲ್ಲಿ ಧುಳೆಯಲ್ಲಿ ನಡೆದ ಗುರುಪೂರ್ಣಿಮೆಯ ಮರುದಿನ ಡಾ. ಜಯಂತ ಆಠವಲೆಯವರಿಗೆ ಹೇಳಿದ ಪ್ರಸಂಗ.)
ನಮ್ರತೆ
ಅ. ದಿನಕರನು ಗುರುಗಳೆದುರು ಎಂದೂ ಕುಳಿತುಕೊಳ್ಳಲಿಲ್ಲ.
ಆ. ಗುರುಗಳೊಂದಿಗಿರುವಾಗ ದಿನಕರನು ಒಂದು ಮೂಲೆಯಲ್ಲಿ ನಿಂತು ಗುರ್ವಾಜ್ಞೆಗಾಗಿ ದಾರಿ ಕಾಯುತ್ತಿದ್ದನು. (ಗುರುಗಳ ಎದುರು ಹೋಗುವ ಪ್ರಯತ್ನ ಮಾಡುತ್ತಿರಲಿಲ್ಲ !)
ಇ. ದಿನಕರನ ದೃಷ್ಟಿ ಯಾವಾಗಲೂ ಗುರುಚರಣಗಳ ಕಡೆಗೆ ಅಥವಾ ನೆಲದ ಕಡೆಗೆ ಇರುತ್ತಿತ್ತು. ಈ ಬಗ್ಗೆ ಹೇಳುವಾಗ ಪ.ಪೂ. ಬಾಬಾ ಇವರು, ‘ಸೇವಕನು ಗುರುಗಳ ದೃಷ್ಟಿಗೆ ದೃಷ್ಟಿಯನ್ನು ಸೇರಿಸಬಾರದೆಂದು ನಾನು ಚರಣಗಳ ಕಡೆಗೆ ನೋಡುತ್ತಿದ್ದೆನು. ಹಾಗೆ ಮಾಡುವಾಗಲೂ ನನಗೆ ಶ್ರೀ ಸಾಯೀಶರ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು’, ಎಂದು ಹೇಳುತ್ತಿದ್ದರು.
ಈ. ದಿನಕರನು ಗುರುಗಳಿಗೆ ಎಂದೂ ಏನೂ ಕೇಲಿಲ್ಲ. ‘ಗುರುಗಳು ಹೇಳುತ್ತಿದ್ದರು ಮತ್ತು ನಾವು ಕೇಳುತ್ತಿದ್ದೆವು’, ಇಷ್ಟೇ ಅವನಿಗೆ ಗೊತ್ತಿತ್ತು.
ಪ.ಪೂ. ಬಾಬಾ ಇವರು ಮಾಡಿದ ಗುರುಸೇವೆ
ಅ. ಗುರುಗಳು ಬೆಳಗ್ಗೆ ಎದ್ದ ನಂತರ ಅವರಿಗೆ ಶೌಚ ಮುಖಮಾರ್ಜನೆಗಾಗಿ ಬಿಸಿ ನೀರು ಬೇಕಾಗುವುದೆಂದು ಬೆಳಗ್ಗೆ ನಾಲ್ಕು-ನಾಲ್ಕೂವರೆ ಗಂಟೆಗೆ ಎದ್ದು ದಿನಕರನು ನೀರು ಕಾಯಿಸಿ ಗುರುಗಳು ಏಳುವುದನ್ನೇ ಎದುರು ನೋಡುತ್ತಿದ್ದನು. ಗುರುಗಳು ಎದ್ದನಂತರ ದಿನಕರನು ಅವರಿಗೆ ಚಹಾ ಮಾಡಿ ಕೊಡುತ್ತಿದ್ದನು. ದಿನವಿಡೀ ಸೇವೆ ಮಾಡಿ ರಾತ್ರಿ ಒಂದೂವರೆ-ಎರಡು ಗಂಟೆಗೆ ಗುರುಗಳು ಹೇಳಿದ ನಂತರವೇ ಮನೆಗೆ ಹೋಗುತ್ತಿದ್ದನು. ಈ ರೀತಿ ದಿನದಲ್ಲಿ ಕೇವಲ ಎರಡು-ಮೂರು ಗಂಟೆಗಳಷ್ಟೇ ನಿದ್ರಿಸುತ್ತಿದ್ದನು.
ಆ. ಸೇವೆ ಮಾಡುವಾಗ ನಿದ್ದೆ ಬಂದು ಸೇವೆಯಲ್ಲಿ ವ್ಯತ್ಯಯವಾಗಬಾರದೆಂದು ದಿನಕರನು ಮುಂಗಾಲುಗಳ ಮೇಲೆ ನಿಲ್ಲುತ್ತಿದ್ದನು. ಸೇವೆ ಮಾಡಿದ ನಂತರ ಅವನು ಒಂದು ಮೂಲೆಯಲ್ಲಿ ನಿಂತುಕೊಳ್ಳುತ್ತಿದ್ದನು.
ಇ. ಗುರುಗಳ ಬಟ್ಟೆಗಳನ್ನು ಅಗಸನಿಗೆ ಕೊಡದೇ ತಾನೇ ತೊಳೆಯುತ್ತಿದ್ದನು.
ಈ. ಶ್ರೀ ಅನಂತಾನಂದ ಸಾಯೀಶರ ಪ್ರಥಮ ದರ್ಶನವಾದ ನಂತರ ಕೆಲವೇ ದಿನಗಳಲ್ಲಿ ಅವರು ಶ್ರೀ ಹರಿಭಾವೂ ಲಾಂಭಾತೇಯವರ ಮನೆಯಲ್ಲಿ ತಂಗಲು ಬಂದರು. ಅಲ್ಲಿ ಅವರು ಕೆಲವು ದಿನ ಉಳಿದರು. ಆ ದಿನಗಳಲ್ಲಿ ‘ಗುರುಗಳು ಮನೆಯಲ್ಲಿರುತ್ತಾರೆಂದರೆ, ಇಡೀ ಮನೆಯು ಸ್ವಚ್ಛವಾಗಿರಬೇಕು’, ಎಂಬ ವಿಚಾರದಿಂದ ದಿನಕರನು ರಾತ್ರಿ ಎದ್ದು ಅಡುಗೆಮನೆಯಲ್ಲಿನ ಡಬ್ಬಗಳಲ್ಲಿನ ಸಕ್ಕರೆ, ಅಕ್ಕಿ, ಬೇಳೆ, ಇತ್ಯಾದಿ ಧಾನ್ಯಗಳನ್ನು ಹಾಗೂ ವಸ್ತುಗಳನ್ನು ಸದ್ದು ಮಾಡದೇ ಮೆಲ್ಲನೆ ಹೊರಗೆ ತೆಗೆದು, ಸದ್ದು ಮಾಡದೇ ಡಬ್ಬಗಳನ್ನು ತಿಕ್ಕಿ, ತೊಳೆದು ನಂತರ ಅವುಗಳಲ್ಲಿ ಎಲ್ಲ ವಸ್ತುಗಳನ್ನು ತುಂಬಿಸಿ ಆಯಾ ಜಾಗದಲ್ಲಿಯೇ ಇಡುತ್ತಿದ್ದನು. ಬೆಳಗ್ಗೆ ಈ ವಿಷಯವು ಮನೆಯವರ ಗಮನಕ್ಕೆ ಬರುತ್ತಿತ್ತು. ಹೀಗೆ ದಿನಕರನು ಎಷ್ಟೋ ರಾತ್ರಿಗಳನ್ನು ಎಚ್ಚರವಾಗಿದ್ದೇ ಕಳೆಯುತ್ತಿದ್ದನು. ಹಗಲಿನಲ್ಲಿ ಸೇವೆ ಇರುತ್ತಿತ್ತು. ಒಮ್ಮೆ ಮಡಕೆಯನ್ನು ತಿಕ್ಕಲು ಬೂದಿಯನ್ನು ಹಚ್ಚಿದ್ದಾಗ ದಿನಕರನಿಗೆ ಬೂದಿಯಲ್ಲಿ ಶಂಕರನ ದರ್ಶನವಾಯಿತು.
ಉ. ಗುರುಗಳಿಗೆ ಭೋಜನ ಬಡಿಸಿದಾಗ ಅವರ ಭೋಜನ ಮುಗಿಯುವವರೆಗೆ ದಿನಕರನು ಭಜನೆಗಳನ್ನು ಹಾಡುತ್ತಿದ್ದನು.
ಊ. ಗುರುಗಳು ‘ಕಾಲುಗಳನ್ನು ಒತ್ತು’, ‘ಭಜನೆ ಹಾಡು’, ಎಂದು ಹೇಳಿದ ಕೂಡಲೆ ಅವರು ‘ನಿಲ್ಲಿಸು’ ಎಂದು ಹೇಳುವವರೆಗೂ ದಿನಕರನು ಗಂಟೆಗಟ್ಟಲೆ, ಕೆಲವೊಮ್ಮೆ ರಾತ್ರಿಯೆಲ್ಲಾ ಕಾಲುಗಳನ್ನು ಒತ್ತುತ್ತಿದ್ದನು ಅಥವಾ ಭಜನೆಗಳನ್ನು ಹಾಡುತ್ತಿದ್ದನು. ಚಪ್ಪಾಳೆ ತಟ್ಟುತ್ತಾ ಭಜನೆ ಹಾಡುವಾಗ ದಿನಕರನ ಕೈಗಳ ಬೆರಳುಗಳಿಗೆ ಗಾಯವಾಗಿ ಕೆಲವೊಮ್ಮೆ ರಕ್ತವೂ ಬರುತ್ತಿತ್ತು.
ಎ. ತಾನು ಪವಿತ್ರ ಇರದಿದ್ದರೆ, ಗುರುಗಳನ್ನು ಹೇಗೆ ಸ್ಪರ್ಶಿಸಬೇಕು, ಎಂಬ ಭಾವದಿಂದ ದಿನಕರನು ನಾಮಸ್ಮರಣೆ ಮಾಡುತ್ತಾ ಗುರುಗಳಿಗೆ ಎಲ್ಲವನ್ನೂ ಮಾಡುತ್ತಿದ್ದನು. (ದಿನಕರ ಪ.ಪೂ. ಭಕ್ತರಾಜ ಮಹಾರಾಜರಾದ ನಂತರ ಸೇವೆ ಮಾಡುವಾಗ ಶಿಷ್ಯರು ನಾಮಸ್ಮರಣೆ ಮಾಡದಿದ್ದರೆ ಮಹಾರಾಜರು ಅವರ ಮೇಲೆ ಕೂಗಾಡುತ್ತಿದ್ದರು.)
ಏ. ಗುರುಗಳು ಹೊರಗಡೆ ಎಲ್ಲಿಯಾದರೂ ಹೊರಟರೆ ದಿನಕರನು ನೆರಳಿನಂತೆ ಅವರೊಂದಿಗೆ ಇರುತ್ತಿದ್ದನು. ಗುರುಗಳು ರತಲಾಮದಲ್ಲಿ ಶ್ರೀ. ದಾದಾ ಮುಜುಮದಾರರ ಮನೆಯಲ್ಲಿ, ತರಾಣಾದಲ್ಲಿ ಶ್ರೀ. ಹರಿಭಾವೂ ಲಾಂಭಾತೇಯವರ ಮನೆಯಲ್ಲಿ, ಬಢವಾಹದಲ್ಲಿ ತಿಳಭಾಂಡೇಶ್ವರ ದೇವಸ್ಥಾನದಲ್ಲಿನ ಕೋಣೆಯಲ್ಲಿ ಮತ್ತು ಕೆಲವೊಮ್ಮೆ ಮೆಹತಾಖೇಡಿಯಲ್ಲಿ ಕುಟೀರದಲ್ಲಿ ಇರುತ್ತಿದ್ದರು. ದಿನಕರನು ಎಲ್ಲೆಡೆಯೂ ಅವರ ಜೊತೆಯಲ್ಲಿಯೇ ಇರುತ್ತಿದ್ದನು.
ಐ. ಗುರುಗಳು ಹೊರಗೆ ಹೋದಾಗ, ಎಲ್ಲಿಯಾದರೂ ಪಾದುಕೆಗಳನ್ನು ತೆಗೆದರೆ, ದಿನಕರನು ಅವುಗಳನ್ನು ಕಂಕುಳದಲ್ಲಿ ಹಿಡಿದು ನಿಲ್ಲುತ್ತಿದ್ದನು. ಅವರು ಹಿಂದಿರುಗುವ ಸಮಯವಾದ ಕೂಡಲೆ ಅವುಗಳನ್ನು ಅವರ ಕಾಲುಗಳಿಗೆ ಹಾಕುತ್ತಿದ್ದನು.
ಒ. ಗುರುಗಳು ಎಲ್ಲಿಗಾದರೂ ಟಾಂಗಾದಲ್ಲಿ ಹೊರಟರೆ, ದಿನಕರನನ್ನು ಉದ್ದೇಶಿಸಿ ‘ಟಾಂಗಾದಲ್ಲಿ ಕುಳಿತುಕೋ’, ಎಂದು ಹೇಳಿದರೆ ‘ಗುರುಗಳ ಪಕ್ಕದಲ್ಲಿ ಹೇಗೆ ಕುಳಿತುಕೊಳ್ಳುವುದು’, ಎಂದೆನಿಸಿ ಅವನು ಕುಳಿತುಕೊಳ್ಳುತ್ತಿರಲಿಲ್ಲ. ಆಗ ಅವರು ‘ಹಿಂಬಾಲಿಸು’ ಎನ್ನುತ್ತಿದ್ದರು. ಆಗ ‘ತನಗಿಂತ ಮೊದಲೇ ಗುರುಗಳು ಆ ನಿರ್ಧರಿತ ಜಾಗಕ್ಕೆ ತಲುಪಿದರೆ ಗುರುಸೇವೆಯಲ್ಲಿ ವ್ಯತ್ಯಯವಾಗಬಾರದೆಂದು’ ದಿನಕರನು ಟಾಂಗಾದ ಹಿಂದೆಯೇ ಓಡುತ್ತಿದ್ದನು. ತಮಗೊಂದು ಸ್ಥಾನ ಮಾನ ಇದ್ದ ಊರಿನ ರಸ್ತೆಯಲ್ಲಿ ಟಾಂಗಾದ ಹಿಂದೆ ಓಡುವುದು ಎಷ್ಟು ಕಠಿಣವಿರುತ್ತದೆ ? ಆದರೂ ದಿನಕರನು ಇವೆಲ್ಲವನ್ನೂ ಆಲೋಚನೆ ಮಾಡದೇ ಮಾಡುತ್ತಿದ್ದನು.
ಓ. ಒಂದು ಬಾರಿ ಗುರುಗಳು ದಿನಕರನಿಗೆ ಒಂದು ರೂಪಾಯಿ ನೀಡಿ ಪುರಿ-ಪಲ್ಯ ತರಲು ಹೇಳಿದರು. ದಿನಕರನು ಪುರಿ-ಪಲ್ಯ ತಂದ ಮೇಲೆ ಗುರುಗಳು, ‘ದಿನೂ, ನಾನು ನಿನಗೆ ಐದು ರೂಪಾಯಿಗಳನ್ನು ಕೊಟ್ಟಿದ್ದೆನು. ಉಳಿದ ನಾಲ್ಕು ರೂಪಾಯಿಗಳು ಎಲ್ಲಿವೆ ? ಎಂದು ಕೇಳಿದರು. ದಿನಕರನಿಗೆ ಪೇಚಾಟವಾಯಿತು; ಏಕೆಂದರೆ ಗುರುಗಳು ಒಂದೇ ರೂಪಾಯಿ ನೀಡಿದ್ದರು; ಆದರೆ ಅದೇ ಸಮಯದಲ್ಲಿ ‘ಗುರುಗಳು ಸುಳ್ಳು ಹೇಳುವುದಿಲ್ಲ’, ಎಂದೂ ಖಾತ್ರಿ ಇತ್ತು. ಗುರುಗಳು ಒಂದು ರೂಪಾಯಿ ನೀಡಿದ್ದನ್ನು ಇತರ ಭಕ್ತರೂ ನೋಡಿದ್ದರು. ಅವರು ಗುರುಗಳಿಗೆ, ‘ಬಾಬಾ, ನೀವು ಒಂದೇ ರೂಪಾಯಿ ನೀಡಿದ್ದೀರಿ’ ಎಂದು ಹೇಳಿದರು. ಆಗ ಬಾಬಾ ಸಿಟ್ಟಿಗೆದ್ದು, ‘ನೀವು ಸುಮ್ಮನಿರಿ. ನಿಮಗೇನೂ ಗೊತ್ತಿಲ್ಲ. ನನಗೆ ಐದು ರೂಪಾಯಿಗಳ ಲೆಕ್ಕ ಬೇಕು. ನನಗೆ ಲೆಕ್ಕ ಸಿಗದಿದ್ದರೆ, ಚರ್ಮ ಸುಲಿದು ಬಿಡುತ್ತೇನೆ’ ಎಂದು ಹೇಳಿದರು. ಹೀಗೆ ಗುರುಗಳು ಮೇಲಿಂದ ಮೇಲೆ ಹೇಳುತ್ತಿದ್ದರು. ಹೀಗೆ ಮೂರು ದಿನಗಳು ಕಳೆದವು. ದಿನಕರನು ಗೊಂದಲದ ಅವಸ್ಥೆಯಲ್ಲಿದ್ದನು. ಕೊನೆಗೆ ರಸ್ತೆಯ ಮೇಲೆ ನಿರಾಶೆಯಿಂದ ತಿರುಗಾಡುವಾಗ ದಿನಕರನಿಗೆ ‘ದಯೆಚ್ಯಾ ಸಾಗರ ನಾಥಾ (ದಯೆಯ ಸಾಗರ ನಾಥಾ)’ ಈ ಭಜನೆ ಹೊಳೆಯಿತು. ಅವರು ಗುರುಗಳೆದುರು ಹಾಡಬೇಕು. ಗುರುಗಳು ಐದು ರೂಪಾಯಿಗಳ ಬಗ್ಗೆ ಕೂಗಾಡುವುದನ್ನು ಕೇಳಿಸಿಕೊಳ್ಳಬೇಕು, ಎಂಬ ವಿಚಾರದಿಂದ ದಿನಕರನು ಗುರುಗಳ ಕಡೆಗೆ ಬಂದನು. ಆ ಭಜನೆಯಲ್ಲಿನ ‘ಪಂಚತತ್ತ್ವ ದೇಹ ಚರಣಿ ಖರ್ಚಿಲಾ’ (ಪಂಚತತ್ತ್ವದ ಈ ದೇಹವನ್ನು ಚರಣಗಳಿಗೆ ಖರ್ಚು ಮಾಡಿದೆ) ಈ ಸಾಲನ್ನು ಕೇಳಿದ ತಕ್ಷಣ ಗುರುಗಳು, ‘ಹೋಗು, ನನ್ನ ಐದು ರೂಪಾಯಿಗಳ ಲೆಕ್ಕ ಸಿಕ್ಕಿತು !’ ಎಂದು ಹೇಳಿದರು.
(ಆಧಾರ : ಸನಾತನದ ಗ್ರಂಥ ‘ಸಂತ ಭಕ್ತರಾಜ ಮಹಾರಾಜರ ಬಾಲ್ಯಾವಸ್ಥೆಯಿಂದ ಶಿಷ್ಯಾವಸ್ಥೆ’)