೧೬೯೯ರ ವೈಶಾಖ ಪಾಡ್ಯದ ದಿನ. ಆನಂದಪುರದಲ್ಲಿ ದೂರದೂರದಿಂದ ಶಿಷ್ಯರು ಗುರು ಗೋವಿಂದ ಸಿಂಹನ ದರ್ಶನಕ್ಕಾಗಿ ಬಂದಿದ್ದರು. ಇದ್ದಕ್ಕಿದ್ದಂತೆ ಗುರು ರುದ್ರರೂಪ ತಾಳಿ ನಿಂತ. ಕತ್ತಿಯನ್ನು ಝಳಪಿಸುತ್ತಾ, “ಧರ್ಮಕ್ಕಾಗಿ ತಲೆಯನ್ನು ಕೊಡಲು ನಿಮ್ಮ ಪೈಕಿ ಯಾರು ಸಿದ್ಧರಿದ್ದೀರಿ? ನನ್ನ ಕತ್ತಿ ತವಕಿಸುತ್ತಿದೆ” ಎಂದು ಗರ್ಜಿಸಿದ.
ಕ್ಷಣಕಾಲ ಇಡೀ ಸಭೆಯಲ್ಲಿ ಸಿಡಿಲು ಬಿದ್ದಂತಾಯಿತು. ಅನಂತರ ಲಾಹೋರಿನ ದಯಾರಾಮ ಎಂಬ ಸಿಖ್ಖನು ಮುಂದೆ ಬಂದು ಕೈಜೋಡಿಸಿ, ತಲೆಬಾಗಿ ನಿಂತ. “ನನ್ನ ಈ ತಲೆ ಎಂದೆಂದಿಗೂ ನಿಮ್ಮದೇ. ತಾವು ಅದನ್ನು ಸ್ವೀಕರಿಸಿದಲ್ಲಿ ನನ್ನ ಬದುಕು ಬಂಗಾರವಾದಂತೆ” ಎಂದ.
ಗುರು ಅವನನ್ನು ತನ್ನ ಡೇರೆಯೊಳಕ್ಕೆ ಕರೆದೊಯ್ದ. ’ಕಚ್’ ಎಂದು ಕತ್ತರಿಸಿದ ಸದ್ದಾಯಿತು. ಡೇರೆಯಿಂದ ರಕ್ತದ ಕೋಡಿ ಹರಕ್ಕೆ ಹರಿಯಿತು. ರಕ್ತ ತೊಟ್ಟಿಕ್ಕುತ್ತಿದ್ದ ಕತ್ತಿ ಮೇಲೆತ್ತಿ ಮುಂಚಿಗಿಂತ ಉಗ್ರರೂಪದಲ್ಲಿ ಗುರು ಹೊರಗೆ ಬಂದ. “ನನಗೆ ಇನ್ನೊಂದು ತಲೆ ಬೇಕಾಗಿದೆ” ಎಂದು ಕೂಗಿದ. ಆಗ ದೆಹಲಿಯ ಧರ್ಮದಾಸನೆಂಬ ಇನ್ನೊಬ್ಬ ಶಿಷ್ಯ ಮುಂದೆ ಬಂದ. ಅವನನ್ನೂ ಅದೇ ರೀತಿ ಗುರು ಕರೆದೊಯ್ದ. ಒಳಗಿನಿಂದ ಪುನಃ ಕತ್ತರಿಸಿದ ಸದ್ದು: ರಕ್ತದ ಕೋಡಿ. ಹೊರಗೆ ಬಂದ ಗುರುವಿನಿಂದ ಅದೇ ರೀತಿಯ ಕರೆ.
ಈ ಭಯಂಕರ ದೃಶ್ಯವನ್ನು ನೋಡಲಾರದೆ ಕೆಲವರು ಎದೆ ನಡುಗಿ ಓಡಿದರು. ಗುರುವಿನ ತಲೆಕೆಟ್ಟಿದೆಯೆಂದು ಕೆಲವರು ಹೋಗಿ ಗುರುವಿನ ತಾಯಿಗೆ ದೂರು ಕೊಟ್ಟರು. ಆದರೆ ಗುರು ಆದಾವುದನ್ನೂ ಲೆಕ್ಕಿಸಲಿಲ್ಲ. ಅದೇ ರೀತಿ ಇನ್ನೂ ಮೂರು ಸಲ ಕರೆಕೊಟ್ಟ. ಆಗಲೂ ಪ್ರತಿಬಾರಿಗೂ ಒಬ್ಬೊಬ್ಬ ಮುಂದೆ ಬಂದ. ದ್ವಾರಕೆಯ ಮೊಹಕಂಚಂದ್, ಬಿದರೆಯ ಸಾಹಿಬ್‌ಚಂದ್, ಜಗನ್ನಾಥ ಪುರಿಯ ಹಿಮ್ಮತ್ ಇವರೇ ಆ ಮೂವರು.
ಅನಂತರ ಗುರು ಗೋವಿಂದಸಿಂಹನು ಶಾಂತನಾದ. ಡೇರೆಯೊಳಕ್ಕೆ ಹೋಗಿ ಆ ಐದು ಶಿಷ್ಯರನ್ನು ಸೈನಿಕ ಸಮವಸ್ತ್ರದಲ್ಲಿ ಹೊರತಂದ ! ಒಬ್ಬೊಬ್ಬನನ್ನು ಒಳಗಡೆ ಕರೆದೊಯ್ದಾಗಲೂ ಅವರು ಬಲಿಕೊಟ್ಟದ್ದು ಒಂದೊಂದು ಮೇಕೆಯನ್ನು! ಆ ಐದು ಜನರನ್ನು ’ಪಂಚ ಪ್ಯಾರೇ’ (ಐವರು ಪ್ರಾಣಪ್ರಿಯರು) ಎಂದು ಕರೆದು, ಅವರನ್ನು ತನ್ನ ಸೇನಾಪತಿಗಳನ್ನಾಗಿ ನೇಮಿಸಿದ. ಎಲ್ಲರೂ ಕೂಡಿ ಆಕಾಶ ಬಿರಿಯುವಂತೆ ’ಸತ್ ಶ್ರೀ ಆಕಾಲ್’ ಎಂದು ದೇವರ ಜಯಘೋಷ ಮಾಡಿದರು.
ಅನಂತರ ಆ ಐವರನ್ನು ಗುರುವು ತನ್ನ ಬಳಿ ಕರೆದು ಅವರಿಗೆ ತೀರ್ಥ ಕೊಟ್ಟ. ಕೊನೆಯಲ್ಲಿ ತಾನೂ ಅವರ ಮುಂದೆ ಕೈಜೋಡಿಸಿ ನಿಂತುಕೊಂಡು ಆ ’ಅಮೃತ’ವನ್ನು ತನಗೂ ನೀಡುವಂತೆ ಶಿಷ್ಯರನ್ನು ಕೇಳಿಕೊಂಡ. ಈ ವಿಚಿತ್ರ ವರ್ತನೆ ನೋಡಿ ಶಿಷ್ಯರು, “ಇದೇನು, ಗುರುವಿಗೆ ನಾವು ತೀರ್ಥ ಕೊಡುವುದೆ?” ಎಂದು ಆಶ್ಚರ್ಯದಿಂದ ಕೇಳಿದರು. ಆಗ ಗುರುವು, “ನಾನು ಈಗ ಹೊಸದೊಂದು ವೀರ ಪಂಥವನ್ನು ಸ್ಥಾಪಿಸುತ್ತಿದ್ದೇನೆ. ಇದರಲ್ಲಿ ಮೇಲು – ಕೀಳು ಯಾರೂ ಇಲ್ಲ. ಇನ್ನು ನಮ್ಮಲ್ಲಿ ಜಾತಿ-ಮತಗಳ ಭೇದವಿಲ್ಲ. ನಾವೆಲ್ಲರೂ ಸೋದರರು. ಭಗವಂತನೊಬ್ಬನೇ ನಮ್ಮ ಒಡೆಯ” ಎಂದು ಸಂದೇಶ ನೀಡಿದ ಅದನ್ನು ಕೇಳಿ ಶಿಷ್ಯರ ಸ್ಫೂರ್ತಿ ಉಕ್ಕಿ ಹರಿಯಿತು.
ಇದೇ ಸಮಯದಲ್ಲಿ ತನ್ನ ಶಿಷ್ಯರು ಸಮರ್ಪಣೆ, ಶುಚಿತ್ವ, ದೈವಭಕ್ತಿ, ಶೀಲ, ಶೌರ್ಯ ಈ ಐದು ಗುಣಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಐದು ಚಿಹ್ನೆಗಳನ್ನು ಅವರಿಗೆ ಕೊಟ್ಟ. ಪ್ರತಿಯೊಬ್ಬ ಸಿಖ್ಖನಿಗೂ ’ಸಿಂಹ’ ಎಂದು ಹೆಸರಿಟ್ಟ.
ಅದೇ ದಿನವೇ ಗುರುವಿನಿಂದ ೨೦ ಸಾವಿರ ಸ್ತ್ರೀ- ಪುರುಷರು ಈ ಹೊಸ ವೀರ ಪಂಥದ ದೀಕ್ಷೆಯನ್ನು ಪಡೆದರು. ಅವರೆಲ್ಲರನ್ನು ಉದ್ದೇಶಿಸಿ ಅವನು, “ಗುಬ್ಬಿಗಳಿಂದ ಗಿಡುಗಗಳನ್ನು ಸೋಲಿಸುವೆ; ನನ್ನ ಒಬ್ಬೊಬ್ಬ ಸೈನಿಕನು ಶತ್ರುವಿನ ಲಕ್ಷ ಸೈನಿಕರೊಡನೆ ಕಾದಾಡುವಂತೆ ಮಾಡುವೆ; ಆಗಲೇ ನನ್ನ ಹೆಸರು ಗುರು ಗೋವಿಂದಸಿಂಹ ಎಂಬುದು ನಿಜ” ಎಂದು ಸಾರಿದ.
ಲೇಖಕರು: ಹೊ.ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿ ರಾವ್