ರಾಜಾ ಪರೀಕ್ಷಿತ: ಪ್ರಾಯಶ್ಚಿತ್ತ, ರಾಜದಂಡ ಮತ್ತು ನರಕಕ್ಕೆ ಹೋಗಿಯೂ ಜನರು ಪುನಃ ಪುನಃ ಪಾಪ ಕೃತ್ಯಗಳನ್ನೇಕೆ ಮಾಡುತ್ತಾರೆ?
ಶುಕದೇವ: ಕರ್ಮಗಳ ಮೂಲಕ ಕರ್ಮಗಳ ಮೂಲ ಬೀಜವು ನಾಶವಾಗುವುದಿಲ್ಲ, ಏಕೆಂದರೆ ಕರ್ಮಗಳ ಮೂಲವು ಅಜ್ಞಾನದಲ್ಲಿ ಇರುತ್ತದೆ. ಅಜ್ಞಾನವಿರುವವರೆಗೆ ಪಾಪವಾಸನೆಯು ಸಂಪೂರ್ಣ ನಾಶವಾಗುವುದಿಲ್ಲ; ಆದುದರಿಂದ ಜ್ಞಾನವೇ ನಿಜವಾದ ಪ್ರಾಯಶ್ಚಿತ್ತವಾಗಿದೆ.
ಅಂಗೀರಸನು ಪ್ರಾಯಶ್ಚಿತ್ತದ ಯೌಗಿಕ ಅರ್ಥವನ್ನು ಮುಂದಿನಂತೆ ಹೇಳಿದ್ದಾನೆ.
ಪ್ರಾಯೋ ನಾಮ ತಪಃ ಪ್ರೋಕ್ತಂ ಚಿತ್ತಂ ನಿಶ್ಚಯ ಉಚ್ಯತೆ |
ತಪೋನಿಶ್ಚಯಸಂಯುಕ್ತಂ ಪ್ರಾಯಶ್ಚಿತ್ತಮಿತಿ ಸ್ಮೃತಮ್ ||
ಅರ್ಥ: ಪ್ರಾಯಃ ಅಂದರೆ ತಪಸ್ಸು ಮತ್ತು ಚಿತ್ತ ಅಂದರೆ ನಿಶ್ಚಯ. ತಪಸ್ಸು ಮತ್ತು ನಿಶ್ಚಯಗಳಿಂದ ಕೂಡಿದ ಕರ್ಮಗಳಿಗೆ ಪ್ರಾಯಶ್ಚಿತ್ತ ಎನ್ನಬೇಕು.
ಪಶ್ಚಾತ್ತಾಪ
ಪಶ್ಚಾತ್ತಾಪವಾಗಬೇಕು, ಏಕೆಂದರೆ ಪಶ್ಚಾತ್ತಾಪವಾದರೆ ಮನುಷ್ಯನು ಮತ್ತೊಮ್ಮೆ ಪಾಪಕರ್ಮಗಳನ್ನು ಮಾಡುವುದಿಲ್ಲ. ಪಶ್ಚಾತ್ತಾಪವು ಪ್ರಾಯಶ್ಚಿತ್ತದ ಒಂದು ಅಂಗವೇ ಆಗಿದೆ. ಯಾವುದಾದರೊಂದು ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳದಿದ್ದರೆ ಪಾಪದ ಕ್ಷಾಲನೆಯಾಗುವುದಿಲ್ಲ ಎಂದು ಧರ್ಮಶಾಸ್ತ್ರಕಾರರು ಹೇಳುತ್ತಾರೆ. ಜ್ಞಾನದಿಂದ (ತಿಳಿದು) ಮತ್ತು ಅಜ್ಞಾನದಿಂದ (ತಿಳಿಯದೆ) ಎಂಬ ಎರಡು ರೀತಿಯ ಪಾಪಗಳನ್ನು ಮನುವು (೧೧.೪೬) ಹೇಳಿದ್ದಾನೆ. ಅಜ್ಞಾನದಿಂದ ಮಾಡಿದ ಪಾಪಗಳ ಕ್ಷಾಲನವು ಪಶ್ಚಾತ್ತಾಪದಿಂದ ಅಥವಾ ಆ ಪಾಪವನ್ನು ಬಹಿರಂಗವಾಗಿ ಹೇಳುವುದರಿಂದ ಆಗಬಹುದು, ಆದರೆ ‘ಜ್ಞಾನದಿಂದ (ತಿಳಿದೂ) ಮಾಡಿದ ಪಾಪಗಳಿಗೆ ಮಾತ್ರ ಕಠಿಣ ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳಬೇಕು’ ಎಂದು ಮನುವು ಹೇಳಿದ್ದಾನೆ.
ಪಾಪಿ ಮನುಷ್ಯರು ಪಶ್ಚಾತ್ತಾಪದಿಂದ ಬೆಂದು ಹೋದರೆ ಮುಕ್ತರಾಗಬಲ್ಲರು. ಇದಕ್ಕೆ ಕಾರಣವೇನೆಂದರೆ ಪಶ್ಚಾತ್ತಾಪವಾದ ಮನುಷ್ಯನಿಗೆ ತನ್ನ ಅಜ್ಞಾನ, ತನ್ನ ದೋಷಗಳು, ಮೋಹಮಾಯೆಯ ಜೀವನದ ದುಷ್ಪರಿಣಾಮ ಇತ್ಯಾದಿ ತಿಳಿಯುತ್ತದೆ. ಆದುದರಿಂದ ತನ್ನೆಡೆಗೆ ಮತ್ತು ಜಗತ್ತಿನ ಕಡೆಗೆ ನೋಡುವ ಅವನ ದೃಷ್ಟಿಕೋನವು ಬದಲಾಗಿರುತ್ತದೆ. ಇಂತಹ ಮನುಷ್ಯರು ಧರ್ಮಪರಾಯಣರಾಗುವ ಮತ್ತು ಸಾಧನೆಯತ್ತ ಹೊರಳುವ ಸಾಧ್ಯತೆಯು ಹೆಚ್ಚಿಗೆ ಇರುತ್ತದೆ. ಇದರ ಫಲವೆಂದು ಅವರಿಗೆ ಮರಣದ ನಂತರ ಸದ್ಗತಿಯು ಸಿಗುತ್ತದೆ. ಈ ಅರ್ಥದಲ್ಲಿ ಪಶ್ಚಾತ್ತಾಪದಿಂದ ಬೆಂದಿರುವವನು ಮುಕ್ತನಾಗುತ್ತಾನೆ ಎಂದು ಹೇಳಲಾಗಿದೆ.
ಪಾಪಮುಕ್ತಿಗಾಗಿ ಪ್ರಾಯಶ್ಚಿತ್ತಗಳಿವೆ
೧. ಪ್ರಾಯಶ್ಚಿತ್ತಗಳಿಂದ ಪಾಪ ಮಾಡುವ ವ್ಯಕ್ತಿಯು ವ್ರತಬದ್ಧನಾಗುತ್ತಾನೆ ಮತ್ತು ಕಠೋರ ವ್ರತಾಚರಣೆಗಳನ್ನು ಮಾಡಿ ಒಳ್ಳೆಯ ಮನುಷ್ಯನಾಗುತ್ತಾನೆ. ಅಲ್ಲದೇ ಇನ್ನು ಮುಂದೆ ಪಾಪಗಳನ್ನು ಮಾಡುವುದಿಲ್ಲವೆಂದು ನಿರ್ಧಾರ ಮಾಡುತ್ತಾನೆ. ಇದಕ್ಕೆ ವಿರುದ್ಧವಾಗಿ ಕೇವಲ ಅಪರಾಧಗಳನ್ನು ಒಪ್ಪಿಕೊಳ್ಳುವುದರಿಂದ ಅಥವಾ ಶಿಕ್ಷೆಗಳನ್ನು ಭೋಗಿಸುವುದರಿಂದ ತಪ್ಪುಗಳನ್ನು ತಡೆಯಲು ಆಗುವುದಿಲ್ಲ. ಅಪರಾಧಿಗಳು ತಮ್ಮ ಅಪರಾಧಗಳಿಗಾಗಿ ಶಿಕ್ಷೆಯನ್ನು ಭೋಗಿಸುತ್ತಾರೆ, ಆದರೆ ಅವರಲ್ಲಿ ಸುಧಾರಣೆ ಆಗುವುದಿಲ್ಲ; ಏಕೆಂದರೆ ಅವರಿಗೆ ಪಶ್ಚಾತ್ತಾಪವಾಗುವುದಿಲ್ಲ ಮತ್ತು ಅವರಿಗೆ ಅವರು ಮಾಡಿದ ಕೆಟ್ಟ ಕೃತಿಗಳ ಪರಿಣಾಮಗಳ ಅರಿವೂ ಇರುವುದಿಲ್ಲ.
೨. ‘ಪಶ್ಚಾತ್ತಾಪೇನ ಶುದ್ಧ್ಯತಿ’ ಅಂದರೆ ‘ಪಶ್ಚಾತ್ತಾಪದಿಂದ (ಮನುಷ್ಯನು) ಶುದ್ಧನಾಗುತ್ತಾನೆ’ ಎಂಬ ಒಂದು ವಚನವಿದೆ.
೩. ಇತರರಿಗೆ ಕೇಡು ಮಾಡುವುದರಿಂದ ಉಂಟಾದ ಪಾಪಗಳಿಗೆ ರಾಜನು ನೀಡಿದ ಶಿಕ್ಷೆಯಿಂದ ಮುಕ್ತಿ ಸಿಗುತ್ತದೆ. ತನಗೆ ಅಹಿತವಾಗುವ ಪಾಪಗಳಿಂದ (ಉದಾ.ವ್ಯಸನಾಧೀನತೆ) ಮನುಷ್ಯನು ಪ್ರಾಯಶ್ಚಿತ್ತ ಮತ್ತು ಸಾಧನೆಗಳಿಂದ ಮುಕ್ತನಾಗುತ್ತಾನೆ.
೪. ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುವುದರಿಂದ, ಭಾವನೆಯ ಭರದಲ್ಲಿ ಮಾಡಿದ ತಪ್ಪುಗಳಿಂದ ನಿರ್ಮಾಣವಾದ ಅಪರಾಧೀ ಭಾವನೆಯಿಂದ ವ್ಯಕ್ತಿಯು ಮುಕ್ತನಾಗುತ್ತಾನೆ.
೫. ಪಾಪಗಳ ಪರಿಣಾಮಗಳಿಂದ ನಿರ್ಮಾಣವಾಗುವ ಕರ್ಮವು ಪ್ರಾಯಶ್ಚಿತ್ತಗಳನ್ನು ತೆಗೆದು ಕೊಳ್ಳುವುದರಿಂದ ಸಂಚಿತದಲ್ಲಿ ಸಂಗ್ರಹವಾಗುವುದಿಲ್ಲ. ಆದುದರಿಂದ ಸಂಚಿತವು ಹೆಚ್ಚಾಗುವುದಿಲ್ಲ. ಇದರಿಂದ ಲೌಕಿಕ ಮತ್ತು ಆಧ್ಯಾತ್ಮಿಕ ಪ್ರಗತಿಯಲ್ಲಿ ಬರುವ ಅಡಚಣೆಗಳು ದೂರವಾಗುತ್ತವೆ.
೬. ಪ್ರಾಯಶ್ಚಿತ್ತದಿಂದ ಮನಸ್ಸಿಗೆ ಸಮಾಧಾನವು ಸಿಗುತ್ತದೆ.
೭. ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುವುದರಿಂದ ನಮಗೆ ನಿಜವಾಗಿಯೂ ಪಶ್ಚಾತ್ತಾಪವಾಗಿದೆ ಎಂಬುದರ ಬಗ್ಗೆ ಇತರರಲ್ಲಿ ವಿಶ್ವಾಸ ಮೂಡುತ್ತದೆ.
೮. ಅನ್ಯಾಯವನ್ನು ಮಾಡುವವನು ತನ್ನ ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಂಡರೆ, ಯಾರ ಮೇಲೆ ಅನ್ಯಾಯವಾಗಿದೆಯೋ, ಅವನ ಮನಸ್ಸಿನಲ್ಲಿನ ಕ್ರೋಧವು ಕಡಿಮೆಯಾಗುತ್ತದೆ ಅಥವಾ ನಾಶವಾಗುತ್ತದೆ.
(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಪುಣ್ಯ-ಪಾಪ ಮತ್ತು ಪಾಪದ ಪ್ರಾಯಶ್ಚಿತ್ತ’)