ಬಾದಾಮಿಯ ಶಕ್ತಿದೇವತೆ ಶ್ರೀ ಬನಶಂಕರಿ ದೇವಿ

ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಬಾದಾಮಿಯ ಶ್ರೀ ಶಾಕಾಂಭರಿ ಶಕ್ತಿ ಪೀಠವೂ ಒಂದಾಗಿದೆ. ಇವಳಿಗೆ ಬನಸಿರಿದೇವಿ, ಬನಶಂಕರಿ ಎಂದೂ ಕರೆಯುತ್ತಾರೆ. ಶ್ರೀ ಶಾಕಾಂಭರಿ ದೇವಿಯ ವಿವರವು ಸ್ಕಂದಪುರಾಣದಲ್ಲಿ ಬರುತ್ತದೆ. ಪದ್ಮಪುರಾಣದಲ್ಲಿಯೂ ಇದರ ವಿವರಣೆ ಇದೆ. ಬಾದಾಮಿ ಬನಶಂಕರಿ ದೇವತೆಯು ನಾಡಿನ ಜನತೆಯ ಆರಾಧ್ಯದೇವಿಯಾಗಿ, ಶಕ್ತಿದೇವತೆಯಾಗಿ, ವನದೇವತೆಯಾಗಿ ಭಕ್ತರ ಕಾಮಧೇನುವಾಗಿ ಅವರ ಕಷ್ಟಗಳನ್ನು ದೂರ ಮಾಡುವವಳಾಗಿದ್ದಾಳೆ. ಬನಶಂಕರಿ ಜಾತ್ರೆಯ ಪ್ರಯುಕ್ತ ದೇವಿಯ ಮಾಹಿತಿ ನೀಡುತ್ತಿದ್ದೇವೆ.

ಚರಿತ್ರೆ

ಪೂರ್ವಕಾಲದಲ್ಲಿ ನೂರಾರು ವರ್ಷಗಳ ವರೆಗೆ ಮಳೆಯಾಗದೇ ಘೋರ ದುರ್ಭೀಕ್ಷ ಉಂಟಾಗಲು ಭೂಮಿಯಲ್ಲಿ ಎಲ್ಲ ಕರ್ಮಗಳು ಲೋಪವಾದಾಗ ಜೀವ ರಾಶಿಗಳು ತತ್ತರಿಸಿ ಹೋದವು. ಆಗ ಎಲ್ಲ ದೇವತೆಗಳು ಶಿವನನ್ನು ಪ್ರಾರ್ಥಿಸಿದರು. ಶಿವ ಬ್ರಹ್ಮಾದಿ ದೇವತೆಗಳೆಲ್ಲ ಸೇರಿ ತ್ರಿಗುಣಾತ್ಮಿಕಾ ಸ್ವರೂಪಳಾದ ಬನಶಂಕರಿ ದೇವಿಯನ್ನು ಪ್ರಾರ್ಥಿಸಿದರು. ಪ್ರಾರ್ಥನೆಗೆ ಒಲಿದ ಶ್ರೀದೇವಿ ತನ್ನ ಶರೀರದಿಂದ ಉತ್ಪನ್ನವಾದ ಶಾಕಾಹಾರದಿಂದ ಸಕಲ ಜಗತ್ತನ್ನು ಕಾಪಾಡಿ ದಳು. ಅವಳ ಕೃಪೆಯಿಂದ ಬರ ನೀಗಿತು, ದಾಹ ತೀರಿತು, ಹಸಿವು ಇಂಗಿತು, ಜಲ ಸಂಪತ್ತಿನಿಂದ ಭೂದೇವಿ ಹಸಿರು ವರ್ಣ ತಾಳಿದಳು. ಎಲ್ಲ ಬನಗಳು ಹಸಿರು ವರ್ಣ ದಿಂದ ನಲಿದವು ಶ್ರೀ ದೇವಿ ಶಾಕಾಂಭರಿ ಎಂದು ಪ್ರಸಿದ್ಧಳಾದಳು.

ಬನಶಂಕರಿ ದೇವಿಯ ಜಾತ್ರೆ

ಪ್ರತೀವರ್ಷ ಶ್ರೀ ದೇವಿಯ ನವರಾತ್ರಿ ಉತ್ಸವವು ಪುಷ್ಯ ಮಾಸದ ಅಷ್ಟಮಿಯಂದು ಆರಂಭವಾಗಿ ಪೂರ್ಣಿಮೆಯಂದು(ಬನದ ಹುಣ್ಣಿಮೆಯಂದು) ರಥೋತ್ಸವದೊಂದಿಗೆ ಮುಕ್ತಾಯವಾಗುತ್ತದೆ.

ದೇವಿಯ ಮೂರ್ತಿ

ಶ್ರೀ ದೇವಿಯ ಮೂರ್ತಿಯು ಎಂಟು ಭುಜಗಳಿಂದ ಕೂಡಿದೆ, ಕೈಗಳಲ್ಲಿ ಹಿಡಿದ ಖಡ್ಗ, ಘಂಟೆ, ತ್ರಿಶೂಲ, ಲಿಪಿ ಮತ್ತು ಢಮರುಘ, ಢಾಲು, ರುಂಡ ಮತ್ತು ಅಮೃತಪಾತ್ರೆ ಇವು ದೇವಿಯ ಲೀಲೆಯನ್ನು ಸಾರುತ್ತವೆ. ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮಿ, ಶ್ರೀ ಮಹಾಸರಸ್ವತಿಯೆಂದು ಅವಳನ್ನು ಪೂಜಿಸುತ್ತಾರೆ.

ದೇವಿಯ ವಿವಿಧ ಪೂಜೆಗಳು

ಶ್ರೀದೇವಿ ದರ್ಶನ ಮಾಡಿಕೊಂಡು ಜ್ಞಾನ, ಶೌರ್ಯ ಹಾಗೂ ಐಶ್ವರ್ಯ ಪ್ರಾಪ್ತಿಗೆ ಅವಳ ಆರಾಧನೆ ಮಾಡಿ ಭಕ್ತರು ತಮ್ಮ ಜೀವನ ಸಾರ್ಥಕಮಾಡಿಕೊಳ್ಳುತ್ತಾರೆ. ಶ್ರಾವಣ ಮಾಸದ ಬಿಲ್ವಾರ್ಚನೆ, ಕಾರ್ತಿಕ ಮಾಸದ ದೀಪಾರಾಧನೆ ಮತ್ತು ನವರಾತ್ರಿ ದಸರಾ ಉತ್ಸವದಲ್ಲಿ ದೇವಿಗೆ ವಿಶೇಷ ಉತ್ಸವವು ನಡೆಯುತ್ತದೆ. ಪ್ರತಿ ಹುಣ್ಣಿಮೆಯ ದಿನ ದೇವಿಗೆ ಅಭ್ಯಂಜನ, ಪಂಚಾಮೃ ತಾಭಿಷೇಕ, ಸಕೃತಾವರ್ತನ, ರುದ್ರಾಭಿಷೇಕಗಳು ವಿಶೇಷವಾಗಿ ನಡೆಯುತ್ತವೆ.

ರಥೋತ್ಸವ

ಶ್ರೀ ದೇವಿಯ ರಥೋತ್ಸವವು ಪುಷ್ಯ ಮಾಸದ ಬನದ ಹುಣ್ಣಿಮೆಯಂದು ವಿಜೃಂಭಣೆಯಿಂದ ನಡೆಯುತ್ತದೆ. ಶಾಕಾಂಭರಿಗೆ (ಶುದ್ಧ) ಚತುರ್ದಶಿಯಂದು ಪಲ್ಲೇದ ಹಬ್ಬ ಅಚರಿಸುತ್ತಾರೆ. ದೇವಿಗೆ ಹಬ್ಬದಲ್ಲಿ ೧೦೮ ಪಲ್ಲೇದ ನೈವೇದ್ಯ ಮಾಡುತ್ತಾರೆ. ವಿವಿಧ ಜನಾಂಗದವರು ಸೇರಿ ಅದ್ಧೂರಿಯಿಂದ ಜಾತ್ರೆ ಮಾಡುತ್ತಾರೆ.
– ಶ್ರೀ. ಗದಾಧರ ಪೂಜಾರ, ಚೊಳಚಗುಡ್ಡ

ಆಧಾರ – ಸಾಪ್ತಾಹಿಕ ಸನಾತನ ಪ್ರಭಾತ

1 thought on “ಬಾದಾಮಿಯ ಶಕ್ತಿದೇವತೆ ಶ್ರೀ ಬನಶಂಕರಿ ದೇವಿ”

Leave a Comment