ಧರ್ಮದಲ್ಲಿ ಸಿದ್ದಾಂತಗಳಿವೆ, ನಿಯಮಗಳಿಲ್ಲ. ನಿಯಮಗಳಿಗೆ ಅಪವಾದ ಇರಬಹುದು, ಆದರೆ ಸಿದ್ದಾಂತಗಳಿಗೆ ಅಪವಾದ ಇರುವುದಿಲ್ಲ. ಸಿದ್ದಾಂತಗಳು ಬದಲಾಗುವುದಿಲ್ಲ. ಅಂದರೆ ಅವು ತ್ರಿಕಾಲಾಬಾಧಿತವಾಗಿರುತ್ತವೆ. ಹಾಗೆಯೇ ಈಶ್ವರನಲ್ಲಿ ಅನಾದಿಕಾಲದಿಂದ ಬದಲಾವಣೆಯಾಗಿಲ್ಲ ಆದುದರಿಂದ, ಈಶ್ವರಪ್ರಾಪ್ತಿಯ ಸಿದ್ದಾಂತಗಳು ಅನಾದಿಕಾಲದಿಂದ ಬದಲಾಗಿಲ್ಲ. ಅಂದರೆ ಈ ಸಿದ್ಧಾಂತಗಳಲ್ಲಿ ಬದಲಾವಣೆಯಾಗುವುದಿಲ್ಲ, ಆದುದರಿಂದ ಧರ್ಮದಲ್ಲಿ ಬದಲಾವಣೆಯಾಗುವುದಿಲ್ಲ. ‘2 + 2=4’ ಎನ್ನುವುದರಲ್ಲಿ ಹೇಗೆ ಕಾಲಾನುಸಾರ ಎಂದಿಗೂ ಬದಲಾವಣೆಯಾಗುವುದಿಲ್ಲವೋ, ಹಾಗೆಯೇ ಇದೂ ಸಹ ಆಗಿದೆ.
ಕಾಲಪ್ರವಾಹದಲ್ಲಿ ಐತಿಹಾಸಿಕ ಆಗುಹೋಗುಗಳಿಂದ ಧರ್ಮಾಚರಣೆಯ ಕ್ರಮವು ಬದಲಾಗುತ್ತಿರುತ್ತದೆ. ಆದರೆ ಆ ಬದಲಾಗಿರುವ (ಬದಲಾಯಿಸಲ್ಪಟ್ಟಿರುವ) ಕ್ರಮವು ಇಂದಲ್ಲ ನಾಳೆ ಸಿದ್ದಾಂತದೊಂದಿಗೆ ಸಂಬಂಧ ತರುವಂತಹದ್ದಾಗಿರಬೇಕು, ಸಮಾಜಕ್ಕೆ ಈ ವಿಷಯವು ವಿಸ್ಮರಣೆ ಆಗಬಾರದು, ಹೀಗೆ ಸಮಾಜದ ಆಂತರಿಕ ಧಾರಣೆ ಇರಬೇಕು.
-ಪ.ಪೂ.ಕಾಣೆ ಮಹಾರಾಜರು, ನಾರಾಯಣಗಾಂವ್, ಪುಣೆ ಜಿಲ್ಲೆ, ಮಹಾರಾಷ್ಟ್ರ.
ಧರ್ಮದ ಕೆಲವು ಸಿದ್ಧಾಂತಗಳು
ಅ. ಈಶ್ವರನ ಅಸ್ತಿತ್ವ
ಧರ್ಮವು ಈಶ್ವರನ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತದೆ. ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ಲಯ ಇವು ಈಶ್ವರನ ಆಧೀನವಾಗಿವೆ.
ಆ. ಅನೇಕ ದೇವರು ಮತ್ತು ಅನೇಕ ಸಾಧನಾಮಾರ್ಗಗಳು
ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳ ಉಲ್ಲೇಖವನ್ನು ಬಹಳಷ್ಟು ಬಾರಿ ಮಾಡಲಾಗುತ್ತದೆ. ಹಾಗೆಯೇ ಹಿಂದೂ ಧರ್ಮದಲ್ಲಿ ಅನೇಕ ಸಾಧನಾಮಾರ್ಗಗಳನ್ನೂ ಹೇಳಲಾಗಿದೆ. ನಿಜವಾಗಿ ನೋಡಿದರೆ ಈಶ್ವರನು ಒಬ್ಬನೇ ಇದ್ದಾನೆ, ಹೀಗಿರುವಾಗ ಈಶ್ವರನ ಉಪಾಸನೆಗೆ 33 ಕೋಟಿ ದೇವತೆಗಳ Aವಶ್ಯಕತೆ ಏನಿದೆ ಅಥವಾ ಅವನ ವರೆಗೆ ತಲುಪಲು ಇಷ್ಟೊಂದು ಸಾಧನಾಮಾರ್ಗಗಳ ಆವಶ್ಯಕತೆ ಏನಿದೆ, ಎಂಬ ಪ್ರಶ್ನೆ ಯಾರಿಗಾದರೂ ಬರಬಹುದು.
ಈಶ್ವರನು ವಿವಿಧ ಕಾರ್ಯಗಳ ಪೂರ್ತಿಗಾಗಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟನಾಗುತ್ತಾನೆ. ಈಶ್ವರನ ಈ ರೂಪಗಳೆಂದರೆ ಅನೇಕ ದೇವತೆಗಳು. ಹಾಗೆಯೇ ಅಧ್ಯಾತ್ಮದಲ್ಲಿ ‘ಎಷ್ಟು ವ್ಯಕ್ತಿಗಳೋ, ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ತತ್ತ್ವವಿದೆ. ಪೃಥ್ವಿಯ ಮೇಲಿನ ಜನಸಂಖ್ಯೆಯು ಕೋಟಿಗಟ್ಟಲೆ ಇದೆ. ಅಷ್ಟೂ ಕೋಟಿಗಳಲ್ಲಿ ಯಾರೇ ಇಬ್ಬರು ಒಂದೇ ರೀತಿ ಇಲ್ಲ. ಪ್ರತಿಯೊಬ್ಬರ ಶರೀರ, ಮನಸ್ಸು, ಇಷ್ಟಾನಿಷ್ಟಗಳು, ಗುಣ-ದೋಷ, ಆಸೆ-ಆಕಾಂಕ್ಷೆಗಳು, ವಾಸನೆ ಇತ್ಯಾದಿ ಎಲ್ಲವೂ ಭಿನ್ನವಾಗಿವೆ; ಪ್ರತಿಯೊಬ್ಬರ ಬುದ್ಧಿಯೂ ಭಿನ್ನವಾಗಿದೆ; ಸಂಚಿತ ಮತ್ತು ಪ್ರಾರಬ್ಧ ಭಿನ್ನವಾಗಿವೆ; ಸತ್ತ್ವ, ರಜ ಮತ್ತು ತಮ ತ್ರಿಗುಣಗಳ ಪ್ರಮಾಣವೂ ಭಿನ್ನವಾಗಿದೆ. ಆದುದರಿಂದ ಪ್ರತಿಯೊಬ್ಬರೂ ಯಾವ ದೇವತೆಯ (ದೇವ ಅಥವಾ ದೇವಿ) ಉಪಾಸನೆಯನ್ನು ಮಾಡಿದರೆ ಆ ಪರಮೇಶ್ವರನ ವರೆಗೆ ತಲುಪಬಹುದು ಎಂಬುದೂ ಭಿನ್ನವಾಗಿದೆ. ಪ್ರಾಣಿಮಾತ್ರರೇ ಏಕೆ, ನಿರ್ಜೀವ ವಸ್ತುಗಳಲ್ಲಿಯೂ ಪರಮೇಶ್ವರನ ಅಸ್ತಿತ್ವವಿರುವುದರಿಂದ ಧರ್ಮದಲ್ಲಿ ದೇವತೆಗಳ ಸಂಖ್ಯೆಯು ಬಹಳಷ್ಟಿದೆ.
ಇ. ಮೂರ್ತಿ ಪೂಜೆ
ಸಾಮಾನ್ಯ ಮನುಷ್ಯನಿಗೆ ರೂಪವಿಲ್ಲದ, ನಿರ್ಗುಣ ಪರಮೇಶ್ವರನ ಉಪಾಸನೆ ಮಾಡುವುದು ಕಠಿಣವೆನಿಸುತ್ತದೆ. ಆದ್ದರಿಂದ ಸಗುಣೋಪಾಸಕರಿಗೆ ಮೂರ್ತಿಯ ಆವಶ್ಯಕತೆ ಉಂಟಾಯಿತು ಮತ್ತು ಅವರು ಮೂರ್ತಿಪೂಜೆಯ ಮಾರ್ಗವನ್ನು ಅನುಸರಿಸಿದರು.
ಈ. ಋಣಕಲ್ಪನೆ
ಈ 1. ನಾಲ್ಕು ಋಣಗಳು
ದೇವತೆಗಳ ಋಣ : ‘ಈಶ್ವರನು ನಿರ್ಮಿಸಿರುವ ವಸ್ತುಗಳ ಉಪಯೋಗವು ಮನುಷ್ಯನಿಗೆ ಸಹಜವಾಗಿ ಸಿಗುತ್ತದೆ, ಅದಕ್ಕಾಗಿ ಅವನು ದೇವತೆಗಳ ಋಣವನ್ನು ತೀರಿಸಬೇಕಾಗುತ್ತದೆ.
ಋಷಿಋಣ : ಪ್ರಾಚೀನ ಮಹರ್ಷಿಗಳು ನಿರ್ಮಿಸಿರುವ ಜ್ಞಾನ-ವಿಜ್ಞಾನಗಳನ್ನು ಮನುಷ್ಯನು ಪಡೆಯುತ್ತಿರುವುದರಿಂದ ಅವನು ಋಷಿಗಳ ಋಣವನ್ನು ತೀರಿಸಬೇಕಾಗುತ್ತದೆ.
ಪಿತೃಋಣ : ನಮಗೆ ಜನ್ಮ ಕೊಟ್ಟು ಪಿತೃಗಳು ಕುಲಪರಂಪರೆಯನ್ನು ಅಖಂಡವಾಗಿ ಕಾಪಾಡಿರುವುದರಿಂದ ನಾವು ಪಿತೃಗಳ ಋಣವನ್ನು ತೀರಿಸಬೇಕಾಗುತ್ತದೆ.
ಸಮಾಜಋಣ : ಇಷ್ಟೇ ಅಲ್ಲದೇ ಯಾವ ಯಾವ ಮಾನವರೊಂದಿಗೆ ನಮ್ಮ ಸಂಪರ್ಕ ಬಂದಿರುತ್ತದೆಯೋ, ಅವರೆಲ್ಲರೂ ಪರೋಕ್ಷವಾಗಿ (ಅಪ್ರಕಟ) ಅಥವಾ ಪ್ರತ್ಯಕ್ಷವಾಗಿ ನಮಗೆ ಏನನ್ನಾದರೂ ಕೊಟ್ಟಿರುತ್ತಾರೆ, ಇದು ಸಮಾಜಋಣವಾಗಿದೆ.
ಪ್ರತಿಯೊಬ್ಬ ಮನುಷ್ಯನು ಈ ನಾಲ್ಕು ಋಣಗಳನ್ನು ತೀರಿಸಲೇಬೇಕಾಗುತ್ತದೆ.’
ಈ 2. ಋಣಗಳನ್ನು ತೀರಿಸುವುದು
ಅ. ತೈತ್ತಿರೀಯ ಸಂಹಿತೆಯಲ್ಲಿ (ಕಾಂಡ 6, ಪ್ರಪಾಠಕ 3, ಖಂಡ 10, ಅನುವಾಕ 5) ಜನ್ಮಕ್ಕೆ ಬರುವ ಬ್ರಾಹ್ಮಣನು ಮೂರು ಋಣಗಳೊಂದಿಗೆ ಜನಿಸುತ್ತಾನೆ ಎಂದು ಹೇಳಲಾಗಿದೆ. (ಈ ಮೂರು ಋಣಗಳನ್ನು ಅವನು ಆಯುಷ್ಯದಲ್ಲಿ ತೀರಿಸಬೇಕು.) ಋಷಿಗಳ (ಸ್ವಾಧ್ಯಾಯದ) ಋಣವನ್ನು ಅಧ್ಯಯನದಿಂದ (ಸಾಧ್ಯವಾದರೆ ಜ್ಞಾನವನ್ನು ಇನ್ನೂ ವೃದ್ಧಿಸಿ), ದೇವರ (ದೇವತೆಗಳ) ಋಣವನ್ನು ಯಜ್ಞ-ಪೂಜನಗಳಿಂದ ಮತ್ತು ಪಿತೃಗಳ ಋಣವನ್ನು (ಧರ್ಮಯುಕ್ತವಾದ) ಪ್ರಜೋತ್ಪಾದನೆಯಿಂದ ತೀರಿಸಬಹುದು.
ಉ. ವರ್ಣಾಶ್ರಮಕಲ್ಪನೆ
ಬ್ರಹ್ಮಚರ್ಯಾಶ್ರಮ, ಗೃಹಸ್ಥಾಶ್ರಮ, ವಾನಪ್ರಸ್ಥಾಶ್ರಮ ಮತ್ತು ಸಂನ್ಯಾಸಾಶ್ರಮ ಇವು ನಾಲ್ಕು ಅಶ್ರಮಗಳಾಗಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇವು ನಾಲ್ಕು ವರ್ಣಗಳಾಗಿವೆ. ಆಶ್ರಮ ವ್ಯವಸ್ಥೆಯ ಮೂಲಕ ವೈಯಕ್ತಿಕ ಜೀವನವನ್ನು ಉನ್ನತಗೊಳಿಸುವುದು ಮತ್ತು ವರ್ಣವ್ಯವಸ್ಥೆಯ ಮೂಲಕ ಸಾಮಾಜಿಕ ಜೀವನದ ವಿಕಾಸ ಮಾಡಿಕೊಳ್ಳುವುದು, ಎಂಬ ಧ್ಯೇಯಕಲ್ಪನೆಗೆ ವರ್ಣಾಶ್ರಮಕಲ್ಪನೆ ಎನ್ನುತ್ತಾರೆ. (‘ವರ್ಣಾಶ್ರಮ ಕಲ್ಪನೆಯ ಬಗೆಗಿನ ಸವಿಸ್ತಾರ ವಿವೇಚನೆಯನ್ನು ‘ವರ್ಣಾಶ್ರಮ ವ್ಯವಸ್ಥೆ’ ಎಂಬ ಗ್ರಂಥದಲ್ಲಿ ಮಾಡಲಾಗಿದೆ)
ಊ. ಪುರುಷಾರ್ಥಕಲ್ಪನೆ
‘ಪುರುಷ’ ಶಬ್ದವು ‘ಪುರಸ್’ (ಎಂದರೆ ಮುಂದೆ ಮುಂದೆ ಹೋಗುವವನು) ಎಂಬ ಪದದಿಂದ ನಿರ್ಮಾಣವಾಗಿದೆ. ಇದರ ಅರ್ಥವು ‘ಪುರುಷಾರ್ಥದ ಕ್ಷಮತೆಯುಳ್ಳವನು’, ಎಂಬುದಾಗಿದೆ. ಆದ್ದರಿಂದಲೇ ಪುರುಷ ಶಬ್ದವು ಲಿಂಗವಾಚಕವಾಗಿರದೆ ಗುಣವಾಚಕವಾಗಿದೆ. ಶಾಸ್ತ್ರಗಳಲ್ಲಿ ನಾಲ್ಕು ಪುರುಷಾರ್ಥಗಳನ್ನು ಹೇಳಲಾಗಿದೆ. ಶುದ್ಧ ಆಚರಣೆ ಅಂದರೆ ಧರ್ಮ, ಅರ್ಥ (ಒಳ್ಳೆಯ ಮಾರ್ಗದಿಂದ ದ್ರವ್ಯವನ್ನು ಸಂಪಾದಿಸುವುದು), ಕಾಮ ಅಂದರೆ ಶಾರೀರಿಕ ಹಾಗೂ ಮಾನಸಿಕ ಸುಖಪ್ರಾಪ್ತಿ ಮತ್ತು ಭವಸಾಗರದಿಂದ ಜೀವದ ಮುಕ್ತಿ ಅಂದರೆ ಮೋಕ್ಷ.
ಎ. ಅಧರ್ಮಾಚರಣೆ ಮಾಡುವವರ ಪ್ರತಿಬಂಧ (ದಂಡನೆ) ಮತ್ತು ಅಹಿಂಸೆ
ಎ 1. ಅಧರ್ಮಾಚರಣೆ ಮಾಡುವವರನ್ನು ಪ್ರತಿಬಂಧಿಸಿದಿದ್ದರೆ, ಅಧರ್ಮಾಚರಣಿ ವ್ಯಕ್ತಿಗಳ ಅಧರ್ಮಾಚರಣೆಯ ಪಾಪವು ನಮಗೆ ತಗಲುತ್ತದೆ
ಎ 2. ಅಧರ್ಮಿ ವ್ಯಕ್ತಿಗೆ ದಂಡವನ್ನು ವಿಧಿಸುವುದು ಹಿಂಸೆಯಲ್ಲ ! ಅಧರ್ಮಾಚರಣೆಯ ಪ್ರತಿಬಂಧವನ್ನು ಸಾಧ್ಯವಿದ್ದಷ್ಟು ಸಾಮದಿಂದ (ಶಾಂತ ರೀತಿಯಿಂದ ತಿಳಿಸಿ ಹೇಳಿ) ಮಾಡುವುದು ಯೋಗ್ಯವಾಗಿದೆ; ಆದರೆ ಸಾಮವು ನಿರುಪಯೋಗಿ ಆಗುತ್ತಿದ್ದರೆ ದಂಡವನ್ನೂ ಕೊಡಬೇಕು ಎಂದು ಹೇಳಲಾಗಿದೆ. ಈ ರೀತಿ ಅಧರ್ಮಿ ಮನುಷ್ಯನನ್ನು ದಂಡಿಸುವುದು ‘ಹಿಂಸೆ’ ಯಾಗುವುದಿಲ್ಲ. ಹಿಂಸೆಯ ಅರ್ಥವನ್ನು ದುಃಖವೆಂದು ತೆಗೆದುಕೊಳ್ಳದೇ, ಅಹಿತವನ್ನು ದೂರುಗೊಳಿಸುವುದು ಎಂದು ತೆಗೆದುಕೊಳ್ಳಬೇಕು. ಅಧರ್ಮಿ ಮನುಷ್ಯನಿಗೆ ದಂಡನೆ ಮಾಡುವುದರಲ್ಲಿ ಅವನಿಗೆ ದುಃಖವನ್ನು ಕೊಡುವ ಉದ್ದೇಶವಿರದೇ, ಅವನ ಅಹಿತವನ್ನು ತಪ್ಪಿಸುವ ಮತ್ತು ಅವನಿಗೆ ಧರ್ಮಾಚರಣೆಯಿಂದ ಸಿಗುವ ಉಚ್ಚ ಸುಖವನ್ನು ಪ್ರಾಪ್ತಮಾಡಿಕೊಡುವ ಉದ್ದೇಶವಿರುತ್ತದೆ. ಅಹಿಂಸೆಯ, ಸರಿಯಾದ ಅರ್ಥವನ್ನು ತಿಳಿದುಕೊಂಡರೆ ಹಿಂಸೆ-ಅಹಿಂಸೆಗಳ ಗೊಂದಲವಾಗಲಾರದು.
ಎ 3. ಜಗತ್ತಿನಲ್ಲಿ ಅಹಿಂಸಕರೆಂದು ಯಾರೂ ಇಲ್ಲ !
‘ಕೇ ನ ಹಿಂಸಂತಿ ಜೀವಾನ್ವೈ ಲೋಕೇಸ್ಮಿನ್ದ್ವಿಜಸತ್ತಮ |
ಬಹು ಸಂಚಿಂತ್ಯ ಇಹ ವೈ ನಾಸ್ತಿ ಕಶಿಚದಹಿಂಸಕಃ ||
ಅಹಿಂಸಾಯಾಂ ತೂ ನಿರತಾ ಯತಯೋ ದ್ವಿಜಸತ್ತಮ್ |
ಕುರ್ವಂತ್ಯೇವ ಹಿ ಹಿಂಸಾಂ ತೇ ಯತ್ನಾದಲ್ಪತರಾ ಭವೇತ್ ||
– ಮಹಾಭಾರತ, ವನಪರ್ವ, ಅಧ್ಯಾಯ 199, ಶ್ಲೋಕ 28,29
ಅರ್ಥ : ಹೇ ದ್ವಿಜಶ್ರೇಷ್ಠಾ, ಈ ಲೋಕದಲ್ಲಿ ಯಾವ ಜೀವಗಳು ಹಿಂಸೆಯನ್ನು ಮಾಡುವುದಿಲ್ಲ? ಬಹಳಷ್ಟು ವಿಚಾರ ಮಾಡಿದರೆ (ಈ ಜಗತ್ತಿನಲ್ಲಿ) ಯಾರೂ ಅಹಿಂಸಕರಿಲ್ಲ ಎನ್ನುವುದು ಕಂಡು ಬರುತ್ತದೆ. ಅಹಿಂಸೆಗಾಗಿ ಪ್ರಯತ್ನ ಪಡುವ ಯತಿಗಳ ಕೈಯಿಂದಲೂ ಹಿಂಸೆಯು ನಡೆದೇ ನಡೆಯುತ್ತದೆ. ಆದರೆ ಅವರು ಅದನ್ನು ತಪ್ಪಿಸಲು ಪ್ರಯತ್ನಿಸುವುದರಿಂದ ಅದು ಬಹಳ ಕಡಿಮೆ ಪ್ರಮಾಣದಲ್ಲಿ ನಡೆಯುತ್ತದೆ.
ಅಹಿಂಸೆಯು ಧರ್ಮತತ್ತ್ವವಾಗಿರದೆ ‘ಅಲ್ಪ, ಅತ್ಯಲ್ಪ ಹಿಂಸೆ’ಯು, ಧರ್ಮತತ್ತ್ವವಾಗಿದೆ. ಸರಕಾರಿ ಕಾರ್ಯದಲ್ಲಿ ಯಾರನ್ನು ಹಿಂಸೆಗಾಗಿಯೇ ನೇಮಿಸಲಾಗಿರುತ್ತದೆಯೋ, ಅವರಿಗೆ ಹಿಂಸೆಯನ್ನು ಮಾಡುವುದು ಕರ್ತವ್ಯವಾಗಿರುತ್ತದೆ. ಸಾಗುವಳಿಯಲ್ಲಿ (ಕೃಷಿಯಲ್ಲಿ) ಹಿಂಸೆಯು ನಡೆದೇ ನಡೆಯುತ್ತದೆ ಮತ್ತು ಮಾನವನ ಜೀವನವು ಮುಂದುವರೆಯುವ ದೃಷ್ಟಿಯಿಂದ ಈ ಹಿಂಸೆಯು ಅನಿವಾರ್ಯವಾಗಿದೆ.’
ಏ. ಪುನರ್ಜನ್ಮ
ಮನುಷ್ಯ ಜೀವವು ಅದರ ಕರ್ಮಗಳಿಗನುಸಾರವಾಗಿ ವಿವಿಧ ಯೋನಿಗಳಲ್ಲಿ ಜನ್ಮ ತಾಳುತ್ತದೆ. ‘ಈ ಜನ್ಮದಲ್ಲಿ ಮಾಡಿರುವ ಕೆಲವು ಪಾಪ-ಪುಣ್ಯಗಳ ಫಲವು ವರ್ತಮಾನ ಅಥವಾ ಮುಂದಿನ ಜನ್ಮದಲ್ಲಿ ಸಿಗುತ್ತದೆ’ ಎನ್ನುವ ಕರ್ಮಸಿದ್ಧಾಂತವಿದೆ. ಮನುಷ್ಯನು ಪೂರ್ವಸಂಚಿತಕ್ಕನುಸಾರ, ಅಂದರೆ ಪೂರ್ವಜನ್ಮಗಳಲ್ಲಿನ ಕರ್ಮಗಳಿಗನುಸಾರ ಈ ಜನ್ಮದಲ್ಲಿ ಸುಖ-ದುಃಖಗಳನ್ನು ಭೋಗಿಸುತ್ತಾನೆ. ಕರ್ಮಗಳ ಫಲವನ್ನು ಭೋಗಿಸಲೇ ಬೇಕಾಗುತ್ತದೆ. ಜೀವದ ಸಂಸರಣ (ಸುತ್ತಾಟ) ವನ್ನು ಹಿಂದೂ ಧರ್ಮದ ಎಲ್ಲ ಪಂಥಗಳೂ ಒಪ್ಪಿಕೊಂಡಿವೆ. ‘ಈ ಸಂಸರಣದಿಂದ (ಸುತ್ತಾಟದಿಂದ) ಮುಕ್ತವಾಗುವುದನ್ನೇ’, ಜನ್ಮಮೃತ್ಯುವಿನ ಮತ್ತು ಪುನರ್ಜನ್ಮದ ಚಕ್ರದಿಂದ ಬಿಡುಗಡೆ ಆಗುವುದನ್ನೇ, ಮುಕ್ತಿ ಎನ್ನುತ್ತಾರೆ. ಮನುಷ್ಯನು ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಅಥವಾ ಗುರುಕೃಪಾಯೋಗದ ಮೂಲಕ ಮುಕ್ತಿಯನ್ನು ಪಡೆಯಬಹುದು.’
(ತಮಗೂ ಜನ್ಮಮೃತ್ಯು ಚಕ್ರದಿಂದ ಹೇಗೆ ಬಿಡುಗಡೆ ಹೊಂದಬೇಕು ಎಂದು ತಿಳಿಯುವ ಉತ್ಸುಕತೆಯಿದ್ದರೆ ಸನಾತನದ ಉಚಿತ ಸತ್ಸಂಗಕ್ಕೆ ಬನ್ನಿ – ಕ್ಲಿಕ್ ಮಾಡಿ)
ಐ. ಸ್ವರ್ಗ ಮತ್ತು ನರಕ
ಕರ್ಮಫಲ ನ್ಯಾಯಕ್ಕನುಸಾರ ಮನುಷ್ಯನು ವರ್ತಮಾನ ಜನ್ಮದಲ್ಲಿ ಮಾಡಿದ ಕರ್ಮಗಳ ಫಲಗಳನ್ನು ಅವನಿಗೆ ವರ್ತಮಾನ ಅಥವಾ ಮುಂದಿನ ಜನ್ಮಗಳಲ್ಲಿ ಭೋಗಿಸಲೇ ಬೇಕಾಗುತ್ತದೆ. ದೊಡ್ಡ ಪಾಪ ಮತ್ತು ದೊಡ್ಡ ಪುಣ್ಯದ ಫಲವು ವರ್ತಮಾನ ಜನ್ಮದಲ್ಲಿಯೇ ದೊರೆಯುತ್ತದೆ. ಮನುಷ್ಯನು ಒಂದು ಜನ್ಮದಲ್ಲಿ ಪಾಪ ಮತ್ತು ಪುಣ್ಯಗಳನ್ನು ನಿರ್ಮಿಸುವ ಎಷ್ಟೊಂದು ಕೃತಿಗಳನ್ನು ಮಾಡುತ್ತಾನೆಂದರೆ ಅವುಗಳ ಫಲವನ್ನು ಇದೇ ಜನ್ಮದಲ್ಲಿ ಭೋಗಿಸಲು ಅವನಿಗೆ ಸಾಧ್ಯವಾಗುವುದಿಲ್ಲ.
ಯಾರಾದಾದರೊಬ್ಬ ವ್ಯಕ್ತಿಯು ಮೃತನಾದ ನಂತರ ಆ ವ್ಯಕ್ತಿಯ ಇತರ ಜೀವಗಳೊಂದಿಗೆ ಕೊಡುಕೊಳ್ಳುವಿಕೆಗಳು ಉಳಿದುಕೊಂಡಿದ್ದರೆ ಮತ್ತು ಆ ಜೀವಗಳ ಭೂಲೋಕದಲ್ಲಿ ಜನ್ಮ ತೆಗೆದುಕೊಳ್ಳುವ ಸಮಯ ಬಂದಿದ್ದರೆ ಆ ಕೊಡುಕೊಳ್ಳುವಿಕೆಯ ಲೆಕ್ಕ ಪೂರ್ಣವಾಗಲು ಭೂಲೋಕದಲ್ಲಿ ಆ ವ್ಯಕ್ತಿಯೂ ಜನ್ಮಕ್ಕೆ ಬರುತ್ತಾನೆ ಮತ್ತು ಆ ಪಾಪ-ಪುಣ್ಯಗಳ ಫಲವನ್ನು ಭೋಗಿಸುತ್ತಾನೆ. ಇತರ ಜೀವಗಳ ಭೂಲೋಕದಲ್ಲಿ ಜನ್ಮಕ್ಕೆ ಬರುವ ಸಮಯ ಆಗಿರದಿದ್ದರೆ, ಅಂದರೆ ಇನ್ನೂ ಕೆಲವು ಸಮಯ ಉಳಿದಿದ್ದರೆ ಆ ವ್ಯಕ್ತಿಗೆ ಅವನ ಕರ್ಮಕ್ಕನುಗುಣವಾಗಿ ಸ್ವರ್ಗ ಅಥವಾ ನರಕ ಪ್ರಾಪ್ತಿಯಾಗುತ್ತದೆ. ಪಾಪಗಳ ಫಲವನ್ನು ಭೋಗಿಸಲು ಆ ವ್ಯಕ್ತಿಯು ನರಕಕ್ಕೆ ಹೋದರೆ ಪುಣ್ಯಗಳ ಫಲವನ್ನು ಭೋಗಿಸಲು ಸ್ವರ್ಗಕ್ಕೆ ಹೋಗುತ್ತಾನೆ. ಅಲ್ಲಿ ಫಲಗಳನ್ನು ಭೋಗಿಸಿದ ನಂತರ ಭೂಲೋಕದಲ್ಲಿ ಜನ್ಮಕ್ಕೆ ಬರುತ್ತಾನೆ.
(ಈ ಸಂದರ್ಭದಲ್ಲಿನ ಹೆಚ್ಚಿನ ಜ್ಞಾನವನ್ನು ಸನಾತನದ ಗ್ರಂಥ ‘ಕರ್ಮಯೋಗ’ದಲ್ಲಿ ನೀಡಲಾಗಿದೆ. ಹಾಗೆಯೇ ಸ್ವರ್ಗ ಮತ್ತು ನರಕಗಳ ಸವಿಸ್ತಾರ ವರ್ಣನೆಯನ್ನು ವಿವಿಧ ಗ್ರಂಥಗಳಲ್ಲಿ ನೀಡಲಾಗಿದೆ.)
ಒ. ಸದೇಹ ಮುಕ್ತಿ
ದೇಹದಲ್ಲಿರುವಾಗಲೇ ವ್ಯಕ್ತಿಯು ಪರಮೇಶ್ವರನೊಂದಿಗೆ ಸಂಪೂರ್ಣ ಏಕರೂಪವಾಗಬಲ್ಲನು, ಇದರ ಅನುಭವವನ್ನು ಕೊಡುವ ಅತ್ಯುಚ್ಚ ಮಟ್ಟದ ಹಲವಾರು ಋಷಿಮುನಿಗಳು, ಸಾಧು-ಸಂತರು, ಮಹಾತ್ಮರು ಆಗಿ ಹೋಗಿದ್ದಾರೆ ಮತ್ತು ಇಂದಿಗೂ ಇದ್ದಾರೆ.