೧. ವ್ಯಾಖ್ಯೆ ಮತ್ತು ಸಮಾನಾರ್ಥಕ ಶಬ್ದಗಳು
೧ ಅ. ಹಿಂದೂ ರಾಷ್ಟ್ರವೆಂದರೆ ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸತ್ತ್ವಗುಣಿ ಜನರ ರಾಷ್ಟ್ರ ! :
ಮೇರುತಂತ್ರ ಧರ್ಮಗ್ರಂಥದಲ್ಲಿ ‘ಹೀನಂ ದೂಷಯತಿ ಇತಿ ಹಿಂದುಃ |‘ ಅಂದರೆ ‘ಹೀನ ಅಥವಾ ಕನಿಷ್ಠ ರಜ–ತಮ ಗುಣಗಳನ್ನು ‘ದೂಷಯತಿ’, ಅಂದರೆ ನಾಶಪಡಿಸುವವನೇ ಹಿಂದೂ‘ ಎಂದು ಹಿಂದೂ ಶಬ್ದದ ವ್ಯುತ್ಪತ್ತಿಯನ್ನು ಕೊಡಲಾಗಿದೆ. ಯಾರು ರಜ–ತಮಾತ್ಮಕ ಹೀನ ಗುಣಗಳನ್ನು ಮತ್ತು ಅದರಿಂದಾಗಿ ಘಟಿಸುವ ಕಾಯಿಕ, ವಾಚಿಕ ಮತ್ತು ಮಾನಸಿಕ ಸ್ತರದಲ್ಲಿನ ಹೀನ ಕರ್ಮಗಳನ್ನು ತಿರಸ್ಕರಿಸುತ್ತಾನೆಯೋ; ಅಂದರೆ ಸಾತ್ತ್ವಿಕ ಆಚರಣೆಯನ್ನು ಮಾಡುತ್ತಾನೆಯೋ ಅವನೇ ‘ಹಿಂದೂ’. ಇಂತಹ ಸತ್ತ್ವಗುಣಿ ವ್ಯಕ್ತಿಯು ‘ನಾನು ಮತ್ತು ನನ್ನ’ ಎಂಬಂತಹ ಸಂಕುಚಿತ ವಿಚಾರಗಳನ್ನು ತ್ಯಜಿಸಿ ವಿಶ್ವಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಾನೆ. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ.
೧. ನಮ್ಮ ಪೂರ್ವಜ ಋಷಿಮುನಿಗಳ ಘೋಷಣೆಯು ‘ಕೃಣ್ವಂತೋ ವಿಶ್ವಮ್ ಆರ್ಯಮ್ |, (ಋಗ್ವೇದ, ಮಂಡಲ ೯, ಸೂಕ್ತ ೬೩,ಋಚಾ ೫) ಅಂದರೆ ‘ಇಡೀ ವಿಶ್ವವನ್ನು ಆರ್ಯ (ಸುಸಂಸ್ಕೃತ)ವನ್ನಾಗಿಸೋಣ !‘ ಎಂಬುದಾಗಿತ್ತು.
೨. ಉಪನಿಷತ್ತುಗಳ ಬೋಧನೆಗನುಸಾರ ‘ಅಯಂ ಬಂಧುರಯಂ ನೇತಿ ಗಣನಾ ಲಘುಚೇತಸಾಮ್ | ಉದಾರ ಚರಿತಾನಾಂ ತು ವಸುಧೈವ ಕುಟುಂಬಕಮ್ ||‘ (ಮಹೋಪನಿಷತ್ತು, ಅಧ್ಯಾಯ ೪, ಶ್ಲೋಕ ೭೧), ಅಂದರೆ ‘ಇದು ನನ್ನದು, ಇದು ನನ್ನದಲ್ಲ ಎಂದು ಕ್ಷುದ್ರ ಬುದ್ಧಿಯವರು ಯೋಚಿಸುತ್ತಾರೆ. ಉದಾರ ಚಾರಿತ್ರ್ಯದ ಜನರಿಗೆ ಸಂಪೂರ್ಣ ಪೃಥ್ವಿಯೇ ತಮ್ಮ ಕುಟುಂಬವಾಗಿದೆ‘ ಎಂದು ಅನಿಸುತ್ತದೆ.
೩. ಸಂತ ಜ್ಞಾನೇಶ್ವರರು ಭಾವಾರ್ಥ ದೀಪಿಕಾದಲ್ಲಿ ‘ಈ ವಿಶ್ವವೇ ನನ್ನ ಮನೆ’ ಎಂದು ಹೇಳಿದ್ದಾರೆ ಮತ್ತು ಅವರ ‘ಪಸಾಯದಾನ ಎಂಬ ಪ್ರಾರ್ಥನೆಯಲ್ಲಿ ವಿಶ್ವಕಲ್ಯಾಣಕ್ಕಾಗಿ ದಾನವನ್ನು ಕೇಳಿದ್ದಾರೆ.
೪. ಸಮರ್ಥ ರಾಮದಾಸಸ್ವಾಮಿಗಳು ‘ವಿಶ್ವದ ಬಗ್ಗೆ ಚಿಂತಿಸುತ್ತಿದ್ದೇನೆ ! ಎಂದು ಹೇಳಿದ್ದರು.
ಮೇಲಿನ ಧರ್ಮಧುರೀಣರಿಗೆ ಅಪೇಕ್ಷಿತವಿರುವ ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸತ್ತ್ವಗುಣಿ ಜನರ (ರಾಜಕಾರಣಿಗಳ ಮತ್ತು ಪ್ರಜೆಗಳ) ರಾಷ್ಟ್ರವೇ ‘ಹಿಂದೂ ರಾಷ್ಟ್ರ ಶಬ್ದದ ನಿಜವಾದ ವ್ಯಾಖ್ಯೆಯಾಗಿದೆ.
ಸನಾತನ ಧರ್ಮವೇ ನೀತಿಶಾಸ್ತ್ರ ಮತ್ತು ಸತ್ತ್ವಗುಣದ ಮೂಲಾಧಾರವಾಗಿದೆ. ಆದ್ದರಿಂದ ರಾಷ್ಟ್ರೀಯ ಜೀವನದಲ್ಲಿ ಸತ್ತ್ವಗುಣಿ ನೈತಿಕತೆಯ (ಸತ್ಯ, ಸದಾಚಾರ, ಪರೋಪಕಾರ, ಇಂದ್ರಿಯ ನಿಗ್ರಹ ಇತ್ಯಾದಿ) ಸಂವರ್ಧನೆಯನ್ನು ಮಾಡಲು ಸಂವಿಧಾನದಲ್ಲಿ
ಸನಾತನ (ಹಿಂದೂ) ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆ ಎಂದು ಸಂಬೋಧಿಸಲ್ಪಡುವುದು ಮತ್ತು ಅದಕ್ಕನುಸಾರ ರಾಷ್ಟ್ರರಚನೆಯಿರುವುದು ಅಪೇಕ್ಷಿತವಾಗಿದೆ. (೧೯.೧೦.೨೦೧೫)
೧ ಆ. ಸಮನಾರ್ಥಕ ಶಬ್ದಗಳು
೧ ಆ ೧. ಈಶ್ವರೀ ರಾಜ್ಯ : ಮಾನವ, ಪಶು, ಪಕ್ಷಿ, ಕೀಟ, ಇರುವೆ, ಗಿಡಮರ ಮತ್ತು ಬಳ್ಳಿಗಳಿಂದ ಹಿಡಿದು ಸೂಕ್ಷ್ಮಾತಿಸೂಕ್ಷ್ಮ ಜೀವಗಳ ಉದ್ಧಾರದ ವಿಚಾರವನ್ನಿಟ್ಟುಕೊಂಡ ಒಂದು ಈಶ್ವರ–ಸಂಕಲ್ಪಿತ ಸಾಮಾಜಿಕ ವ್ಯವಸ್ಥೆ ಎಂದರೆ ‘ಈಶ್ವರೀ ರಾಜ್ಯ !’ (೨೪.೫.೨೦೧೨)
೧ ಆ ೨. ರಾಮರಾಜ್ಯ : ರಾಮರಾಜ್ಯವೆಂದರೆ ರಾಮನ, ರಾಮನಿಂದ ನಡೆಸಲ್ಪಡುವಂತಹ ಮತ್ತು ರಾಮನಿಗಾಗಿ (ರಾಮಭಕ್ತರಿಗಾಗಿ, ಅಂದರೆ ಸತ್ತ್ವಗುಣಿ ಜನರಿಗಾಗಿ) ಇರುವ ರಾಜ್ಯ ! (೧೯.೧.೨೦೧೨)
೧ ಇ. ಹಿಂದೂ ರಾಷ್ಟ್ರದ ಸ್ಥಾಪನೆ ಎಂದರೆ ರಾಮರಾಜ್ಯದ ಸ್ಥಾಪನೆ ! : ಸಕ್ಕರೆ ಮತ್ತು ಅದರ ಸಿಹಿಗೆ ಕ್ರಮವಾಗಿ ಧರ್ಮಿ ಮತ್ತು ಧರ್ಮ ಎಂದು ಹೇಳುತ್ತಾರೆ. ಇವೆರಡರಲ್ಲಿ ಅದ್ವೈತವಿರುತ್ತದೆ. ಅದೇರೀತಿ ಈಶ್ವರ (ಧರ್ಮೀ) ಮತ್ತು ಅವನ (ಸನಾತನ) ಧರ್ಮ ಇವೆರಡರಲ್ಲಿ ಅದ್ವೈತವಿರುತ್ತದೆ; ಆದುದರಿಂದ ಹಿಂದೂ ರಾಷ್ಟ್ರ ವೆಂದರೆ ಧರ್ಮಸಂಸ್ಥಾಪನೆ, ಅಂದರೆ ಈಶ್ವರನ ಸಂಸ್ಥಾಪನೆ,ಅಂದರೆ ಈಶ್ವರೀ ರಾಜ್ಯದ ಸಂಸ್ಥಾಪನೆ, ಅಂದರೆ ರಾಮರಾಜ್ಯದ ಸ್ಥಾಪನೆ ! (೧೦.೯.೨೦೦೭)