ಬೆಂಕಿ ಚಿಕ್ಕದು ಮತ್ತು ಹತೋಟಿಯಲ್ಲಿರುವಾಗ ಅದನ್ನು ಆರಿಸುವುದು, ಅಗ್ನಿಶಮನದ ಸರ್ವೋತ್ತಮ ಉಪಾಯವಾಗಿದೆ. ಹೀಗಿದ್ದರೂ ಬೆಂಕಿಯಿಂದ ಅಪಘಾತಗಳು ಘಟಿಸುತ್ತಲೇ ಇರುತ್ತವೆ. ಬೆಂಕಿ ಎಂದ ಕೂಡಲೆ ನಮಗೆ ನೆನಪಾಗುವುದು ಅಗ್ನಿಶಾಮಕ ದಳ ಮತ್ತು ಗಂಟೆಯನ್ನು ಬಾರಿಸುತ್ತಾ ಬರುವ ಅಗ್ನಿಶಮನದ ವಾಹನ ! ಆದರೆ ನಮ್ಮಲ್ಲಿ (ಭಾರತದಲ್ಲಿ) ಅಗ್ನಿಶಾಮಕ ದಳಗಳು ನಗರದಲ್ಲಿ ಅಥವಾ ತಾಲೂಕಿನ ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತವೆ; ಗ್ರಾಮೀಣ ಭಾಗದಲ್ಲಿಲ್ಲ. ಎಷ್ಟೋ ಬಾರಿ ಅಗ್ನಿಶಾಮಕ ದಳದ ಸಹಾಯ ಸಿಗುವುದರೊಳಗೆ ಬೆಂಕಿಯು ತನ್ನ ಕಾರ್ಯವನ್ನು ಸಾಧಿಸಿರುತ್ತದೆ. ಯಾವುದೇ ಬೆಂಕಿಗೆ ಕೂಡಲೇ ಪರಿಹಾರೋಪಾಯ ಮಾಡಿದರೆ ಕೂಡಲೆ ಹತೋಟಿಗೆ ತರಬಹುದು. ಎಲ್ಲಿಯೂ ಬೆಂಕಿ ತಾಗಿರುವುದು ಕಂಡುಬಂದರೆ ಏನು ಮಾಡಬೇಕು ಎಂಬುದು ‘ಶಮನ’ ಶಬ್ದದಿಂದ ತಿಳಿಯುತ್ತದೆ.
ಶ – ಶೋಧಿಸಿರಿ
ಮ – ಮಾಹಿತಿ ನೀಡಿರಿ ಅಥವಾ ಮಿತಿಯಲ್ಲಿಡಿರಿ
ನ – ನಾಶಗೊಳಿಸಿರಿ
೧. ಶೋಧಿಸಿರಿ : ಬೆಂಕಿ ಎಷ್ಟು ದೊಡ್ಡದಾಗಿದೆ ಬೆಂಕಿಯು ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿ ತಗಲಿದೆ ಯಾವ ವಿಧದ ಪದಾರ್ಥಗಳು ಸುಡುತ್ತಿವೆ ಯಾರಾದರೂ ಬೆಂಕಿಯಲ್ಲಿ ಸಿಲುಕಿ ಕೊಂಡಿದ್ದಾರೇನು ಮುಂತಾದ ವಿಷಯಗಳನ್ನು ಶೋಧಿಸಿರಿ ಅಥವಾ ಮಾಹಿತಿ ಪಡೆಯಿರಿ.
೨. ಮಾಹಿತಿ ನೀಡಿರಿ : ಅಗ್ನಿಶಾಮಕ ದಳ, ಪೊಲೀಸರು, ನಗರಪಾಲಿಕೆ ಇವರಿಗೆ ಬೆಂಕಿಯ ಬಗ್ಗೆ ತಿಳಿಸಿರಿ. ‘ಬೆಂಕಿ-ಬೆಂಕಿ’ ಎಂದು ದೊಡ್ಡದಾಗಿ ಕೂಗಿ ಅಕ್ಕಪಕ್ಕದಲ್ಲಿರುವ ಜನರನ್ನು ಜಾಗರೂಕಗೊಳಿಸಿ.
ನಿಯಂತ್ರಣದಲ್ಲಿಡಿ : ಅಗ್ನಿಶಾಮಕ ದಳದ ಸಹಾಯ ಸಿಗುವವರೆಗೆ ಬೆಂಕಿಯನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿ. ಬಾಗಿಲು-ಕಿಟಕಿಗಳನ್ನು ಮುಚ್ಚಿರಿ. ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿರಿ. ಸುತ್ತಮುತ್ತಲಿನ ದಹನಶೀಲ ಪದಾರ್ಥಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರಿ. ಸಾಧ್ಯವಿದ್ದರೆ ಬೆಂಕಿಯ ಸುತ್ತಮುತ್ತಲಿನ ಪರಿಸರಕ್ಕೆ ನೀರನ್ನು ಸಿಂಪಡಿಸಿ ಒದ್ದೆಮಾಡಿರಿ.
ಅ. ಬಾಗಿಲು-ಕಿಟಕಿಗಳನ್ನು ಮುಚ್ಚುವುದರ ಮಹತ್ವ : ಯಾವುದೇ ಪದಾರ್ಥಗಳು ಸುಡುತ್ತಿರುವಾಗ ದಹನ ಕ್ರಿಯೆಯಿಂದ ನಿರ್ಮಾಣವಾಗುವ ವಾಯುವು ಹಗುರಾಗಿರುವುದರಿಂದ ಮೇಲೆ ಹೋಗುತ್ತಿರುತ್ತವೆ. ಹೀಗೆ ಮೇಲೆ ಹೋಗುವುದರಿಂದ ಹೊರಗಿನ ಗಾಳಿಯ ಒತ್ತಡಕ್ಕಿಂತ ಬೆಂಕಿಯಲ್ಲಿರುವ ವಾಯುವಿನ ಒತ್ತಡವು ಕಡಿಮೆಯಾಗುತ್ತದೆ. ಒತ್ತಡದ ಬದಲಾವಣೆಯಿಂದ ಗಾಳಿಯ ಪ್ರವಾಹವು ಹೊರಗಿನಿಂದ ಒಳಗೆ ಬರಲು ಪ್ರಾರಂಭವಾಗುತ್ತದೆ. ಈ ನೈಸರ್ಗಿಕ ಪ್ರವಾಹದಿಂದ ಬೆಂಕಿಗೆ ಗಾಳಿಯ (ಆಮ್ಲಜನಕದ) ಪೂರೈಕೆಯು ಅನಾಯಾಸವಾಗಿ ಆಗುತ್ತಿರುತ್ತದೆ. ಕಿಟಕಿ-ಬಾಗಿಲುಗಳನ್ನು ಮುಚ್ಚುವುದರಿಂದ ಈ ನೈಸರ್ಗಿಕ ಪ್ರವಾಹವು ನಿಂತು ಬೆಂಕಿ ಕಡಿಮೆಯಾಗಲು ಸಹಾಯವಾಗುತ್ತದೆ.
೩. ನಾಶಗೊಳಿಸಿರಿ : ಯೋಗ್ಯ ರೀತಿಯ ಅಗ್ನಿಶಮನದ ಮಾಧ್ಯಮವನ್ನು ಉಪಯೋಗಿಸಿ ಬೆಂಕಿಯನ್ನು ಆರಿಸಿರಿ.