ನದಿ ಮತ್ತು ಜಲಾಶಯಗಳಲ್ಲಿ ಮಾಡಿದ ಸ್ನಾನವು ಉತ್ತಮ, ಬಾವಿಯಲ್ಲಿ ಮಾಡಿದ ಸ್ನಾನವು ಮಧ್ಯಮ ಮತ್ತು ಮನೆಯಲ್ಲಿ ಮಾಡಿದ ಸ್ನಾನವು ನಿಕೃಷ್ಟವಾಗಿದೆ.
ನದಿ ಮತ್ತು ಸರೋವರಗಳಲ್ಲಿ ಮಾಡಿದ ಸ್ನಾನವನ್ನು ಉತ್ತಮವೆಂದು ತಿಳಿದುಕೊಳ್ಳುವುದರ ಕಾರಣಗಳು : ನದಿ ಮತ್ತು ಜಲಾಶಯಗಳಲ್ಲಿನ ನೀರು ಹರಿಯುತ್ತಿರುತ್ತದೆ. ಈ ನೀರಿನಲ್ಲಿ, ಹರಿಯುವ ನೀರಿನ ನಾದದಿಂದ ಸುಪ್ತ ಸ್ತರದಲ್ಲಿ ತೇಜ ದಾಯಕ ಇಂಧನವನ್ನು ನಿರ್ಮಾಣ ಮಾಡುವ, ಹಾಗೆಯೇ ಅದನ್ನು ಘನೀಕೃತಗೊಳಿಸುವ ಕ್ಷಮತೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಸ್ನಾನ ಮಾಡುವುದರಿಂದ ನೀರಿನ ತೇಜ ದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವು ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತದೆ.
ಈ ರೀತಿಯಲ್ಲಿ ಈ ರಜ-ತಮಾತ್ಮಕ ಇಂಧನವು ನೀರಿನಲ್ಲಿ ವಿಸರ್ಜನೆಯಾಗಿ ನೀರಿನಲ್ಲಿನ ತೇಜದಲ್ಲಿಯೇ ವಿಘಟನೆಯಾಗುತ್ತದೆ. ಇದರಿಂದ ದೇಹವು ಸ್ಥೂಲದೊಂದಿಗೆ ಸೂಕ್ಷ್ಮದಲ್ಲಿಯೂ ಶುದ್ಧ ಮತ್ತು ಪವಿತ್ರವಾಗುತ್ತದೆ. ಆದುದರಿಂದ ಈ ಸ್ನಾನವನ್ನು ಉತ್ತಮವೆಂದು ತಿಳಿದುಕೊಳ್ಳಲಾಗುತ್ತದೆ. ನೀರು ಎಷ್ಟು ಹರಿಯುತ್ತಿರುತ್ತದೆಯೋ ಅದು ಅಷ್ಟೇ ಪ್ರಮಾಣದಲ್ಲಿ ತೇಜತತ್ತ್ವದ ಸ್ತರದಲ್ಲಿ ರಜ-ತಮಾತ್ಮಕ ಕಣಗಳನ್ನು ವಿಘಟಿಸುವಂತಹದ್ದಾಗಿರುತ್ತದೆ.
ನದಿ, ಕೆರೆ, ಸರೋವರ ಮುಂತಾದ ಸ್ಥಳಗಳಲ್ಲಿ ಸ್ನಾನವನ್ನು ಮಾಡುವುದರಿಂದ ಜೀವಕ್ಕೆ ಪಂಚತತ್ತ್ವಗಳ ಸಹಾಯದಿಂದ ದೇಹದ ಶುದ್ಧಿಯನ್ನು ಮಾಡಿಕೊಳ್ಳಲು ಆಗುತ್ತದೆ : ಸಾಧ್ಯವಿದ್ದಲ್ಲಿ ನದಿ, ಕೆರೆ, ಸರೋವರ ಮುಂತಾದ ಸ್ಥಳಗಳಲ್ಲಿ ಸ್ನಾನವನ್ನು ಮಾಡಬೇಕು. ಪ್ರಕೃತಿಯ ವಾತಾವರಣದಲ್ಲಿ ಸ್ನಾನವನ್ನು ಮಾಡುವುದರಿಂದ ಜೀವಕ್ಕೆ ಪಂಚತತ್ತ್ವಗಳ ಸಹಾಯದಿಂದ ದೇಹದ ಶುದ್ಧಿಯನ್ನು ಮಾಡಿಕೊಳ್ಳಲು ಬರುತ್ತದೆ. ಇದರಿಂದ ದೇಹದಲ್ಲಿರುವ ರಜ-ತಮಕಣಗಳು ದೊಡ್ಡ ಪ್ರಮಾಣದಲ್ಲಿ ವಿಘಟನೆಯಾಗುತ್ತವೆ. ಜೀವದ ಪ್ರಾಣದೇಹ, ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹಗಳ ಶುದ್ಧಿಯಾಗಿ ಎಲ್ಲ ದೇಹಗಳು ಸಾತ್ತ್ವಿಕತೆಯನ್ನು ಗ್ರಹಿಸಲು ಸಜ್ಜಾಗುತ್ತವೆ ಮತ್ತು ಜೀವವು ಸ್ವಲ್ಪ ಪ್ರಮಾಣದಲ್ಲಿ ನಿರ್ಗುಣ ಇಂಧನವನ್ನು ಮತ್ತು ಉಚ್ಚ ದೇವತೆಗಳ ತತ್ತ್ವವನ್ನು ಗ್ರಹಿಸಬಲ್ಲದು. ಅದೇ ರೀತಿ ಜೀವದ ಬಾಹ್ಯ ವಾಯುಮಂಡಲವು ಬ್ರಹ್ಮಾಂಡದ ವಾಯುಮಂಡಲದ ಸಂಪರ್ಕಕ್ಕೆ ಬರುವುದರಿಂದ ಜೀವವು ಬ್ರಹ್ಮಾಂಡದಲ್ಲಿನ ತತ್ತ್ವಗಳನ್ನೂ ಸ್ವಲ್ಪ ಪ್ರಮಾಣದಲ್ಲಿ ಪಿಂಡದ ಮಾಧ್ಯಮದಿಂದ ಗ್ರಹಣ ಮಾಡಿಕೊಂಡು ಪ್ರಕ್ಷೇಪಿಸಬಹುದು. – ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರು ಓರ್ವ ಜ್ಞಾನಿ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೧೬.೪.೨೦೦೭, ಸಾಯಂಕಾಲ ೬.೧೩)
(ಇದೇ ಕಾರಣಕ್ಕಾಗಿ ಯಾವುದಾದರೂ ತೀರ್ಥ ಕ್ಷೇತ್ರದಲ್ಲಿ ಧಾರ್ಮಿಕ ವಿಧಿಗಳನ್ನು ಮಾಡಲು ಹೋದಾಗ ಪುರೋಹಿತರು ಪವಿತ್ರ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಲು ಹೇಳುತ್ತಾರೆ. – ಶ್ರೀ. ನಿಷಾದ ದೇಶಮುಖ)
(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ’)