ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ, ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ.
ಪುರಾತನವಾದ ಹಿಂದಿನ ಒಂದು ಕಾಲದಲ್ಲಿ ಗೋಕಲವೆಂಬ ನಗರದಲ್ಲಿ ವಾಸವಾಗಿದ್ದ ವೈಖಾನಸನೆಂಬ ರಾಜರ್ಷಿಗೆ ಒಂದು ದಿನ ಇದ್ದಕ್ಕಿದ್ದಂತೆ ತನ್ನ ತಂದೆ ಸತ್ತ ಬಳಿಕ ಪ್ರೇತತ್ವ ನಿವಾರಣೆ ಹೊಂದದೇ ನರಕವನ್ನು ಅನುಭವಿಸುತ್ತಿರುವುದಾಗಿ ಅವನ ದಿವ್ಯ ದೃಷ್ಟಿಗೆ ಗೋಚರವಾಗುವುದಾಯಿತು. ಖಿನ್ನನಾದ ರಾಜನು ಪಂಡಿತರನ್ನು ಕುರಿತು ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಕೇಳಿದನು. ಅದಕ್ಕೆ ಉತ್ತರವಾಗಿ ಅವರು ಅಂತಹ ನಿವಾರಣೆಯು ಕೇವಲ ಯಜ್ಞ ದಾನಗಳಿಂದ ಮಾತ್ರ ಆಗುವುದಲ್ಲ, ಜತೆಗೆ ಮಾರ್ಗಶಿರ್ಷ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವನೆಂದರು. ಅವನು ಹಾಗೆಯೇ ಏಕಾದಶಿ ವ್ರತಾಚರಣೆಯನ್ನು ಒಂದಾದರ ಮೇಲೊಂದರಂತೆ ಆಚರಿಸಿ ಕೊನೆಗೆ ಮಾರ್ಗಶೀರ್ಷ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವ್ರತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಬಿಡಲ್ಪಟ್ಟು, ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದನು ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ತಮ್ಮ ಹೃದಯದಲ್ಲಿ ಸಂದರ್ಶಿಸುವವರಿಗೆ ಅವರ ಹಿಂದಿನ ಘೋರ ಪಾಪಗಳು ನೀಗುತ್ತದೆ; ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪ್ರಾಪ್ತವಾಗುತ್ತದೆ ಎಂದು ನಂಬಿಕೆಯಿದೆ.
ಲೇಖಕರು – ವಿಶ್ವಂಭರ ಗಣಪತಿ ವಿಠಲ ದಾಸರು
ಪುತ್ರದಾ ಏಕಾದಶಿ ಎಂದು ಕರೆಯಲು ಕಾರಣವೇನು ?
ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪುತ್ರದಾ ಏಕಾದಶಿ ಅನ್ನುತ್ತಾರೆ. ಪುತ್ರದಾ ಏಕಾದಶಿಯ ಮಹಿಮೆಯ ಬಗ್ಗೆ ಧರ್ಮರಾಜನು ಶ್ರೀ ಕೃಷ್ಣನನ್ನು ಪ್ರಶ್ನೆ ಮಾಡುತ್ತಾನೆ. ಶುಕ್ಲ ಪಕ್ಷದ ಏಕಾದಶಿ ದಿನದಂದು ಬರುವುದೇ “ಪುತ್ರದಾ” ಏಕಾದಶಿ. ಈ ಏಕಾದಶಿ ಮಾಡುವವರು ಸರ್ವಸಂಪತ್ತನ್ನು, ಕೀರ್ತಿಯನ್ನು, ಸತ್ಸಂತಾನವನ್ನು ಹೊಂದುತ್ತಾರೆ.
ಆಗ ಶ್ರೀ ಕೃಷ್ಣನು, ಧರ್ಮರಾಜನನ್ನು ಕುರಿತು ಹೀಗೆ ಹೇಳುತ್ತಾನೆ. ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪುತ್ರದಾ ಏಕಾದಶಿ ಅನ್ನುತ್ತಾರೆ. ಈ ವಿಷಯವಾಗಿ ಒಂದು ಪುರಾತನ ಇತಿಹಾಸವನ್ನು ಹೇಳುತ್ತೇನೆ ಕೇಳು.
ಹಿಂದೆ ಭದ್ರಾವತಿ ಎಂಬ ಪಟ್ಟಣದಲ್ಲಿ “ಸುಕೇತಮಾನ್” ಎಂಬ ರಾಜನಿದ್ದನು. ಅವನ ಹೆಂಡತಿ ಶೈಭ್ಯಾ ಎಂಬುವಳು ಇದ್ದಳು. ಅವರಿಗೆ ಸಂತಾನ ಯೋಗ ಇಲ್ಲದವರಾಗಿ ತುಂಬಾ ದುಃಖಿತರಾಗಿ ಕಾಲಕಳೆಯುತ್ತಾ ಇದ್ದರು. ಅವರು ಎಲ್ಲ ವಿಧವಾದ ವ್ರತ ನಿಯಮಗಳನ್ನು ಮಾಡಿದ್ದರು. ಆದರೂ ಪುತ್ರಸಂತಾನ ಆಗಿರಲಿಲ್ಲ. ಆದ್ದರಿಂದ ಅವನು ತುಂಬ ದುಃಖವನ್ನು ಮನದಲ್ಲಿಟ್ಟುಕೊಂಡು ಅವನು, ಅವನ ಹೆಂಡತಿ ಸರ್ವರಾಜ್ಯವನ್ನು ತ್ಯಾಜ್ಯಮಾಡಿ ಕಾಡಿಗೆ ಹೊರಟರು. ಆ ಕಾಡಿನಲ್ಲಿ, ರಾಜನಿಗೆ ಒಂದು ಆಶ್ರಮ ಕಂಡಿತು. ಆ ಆಶ್ರಮವನ್ನು ನೋಡಿದ ಕೂಡಲೆ ರಾಜನು ಆಶ್ರಮದತ್ತ ಹೊರಟನು.
ಅಲ್ಲಿ ೧೧ ಜನ ಋಷಿಗಳನ್ನು ಕಂಡರು. ಆಗ ಆರಾಜನು ಆ ಋಷಿಗಳಿಗೆಲ್ಲ ನಮಸ್ಕಾರ ಸಲ್ಲಿಸಿ ನೀವೆಲ್ಲ ಯಾರು ಈ ಕಾಡಿಗೆ ಯಾತಕ್ಕಾಗಿ ಬಂದಿರಿ ಎಂದು ವಿಚಾರಿಸಿದಾಗ ಆ ಋಷಿಗಳು ನಾವೆಲ್ಲ ವಿಶ್ವೇ ದೇವತೆಗಳು. ಪುಷ್ಯಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಭೂಲೋಕದಲ್ಲಿ ಆಚರಿಸುವುದರಿಂದ ಒಳ್ಳೆಯ ಸಂತಾನವನ್ನು ಆ ಭಗವಂತ ದಯಪಾಲಿಸುತ್ತಾನೆ ಅಂತ ಆಚರಿಸುವ ಉದ್ದೇಶವನ್ನು ರಾಜನಿಗೆ ತಿಳಿಸಿದರು.
ಆಗ ಆ ರಾಜನು ನಾನು ಸಹ ಪುತ್ರದಾ ಏಕಾದಶಿಯ ಆಚರಣೆ ನಿಮ್ಮ ಸನ್ನಿಧಾನದಲ್ಲಿ ಮಾಡುತ್ತೇನೆ ಎಂದು ಆ ಋಷಿ ಮುನಿಗಳನ್ನು ಪ್ರಾರ್ಥಿಸುತ್ತಾನೆ. ವಿಶ್ವೇ ದೇವತೆಗಳು ಆಗಲಿ ಎಂದು ಹೇಳಿದಾಗ ರಾಜನು ಅವರ ಸನ್ನಿಧಾನದಲ್ಲಿ ಏಕಾದಶಿಯನ್ನು ಆಚರಣೆ ಮಾಡಿ ಋಷಿಮುನಿಗಳ ಅನುಗ್ರಹ ಪಡೆದುಕೊಂಡು ರಾಜ್ಯಕ್ಕೆ ಹೊರಡುತ್ತಾನೆ. ಪುತ್ರದಾ ಏಕಾದಶಿಯ ಫಲದಿಂದ ರಾಜನು ಅತಿ ಶೀಘ್ರದಲ್ಲಿ ಉತ್ತಮವಾದ “ಮಗನನ್ನು” ಪಡೆದನು. ಆ ಮಗನು ಮುಂದೆ ತಾಯಿ, ತಂದೆಯಲ್ಲಿ ಭಗವಂತನಲ್ಲಿ ಗೌರವ, ಭಕ್ತಿಯಿಂದ ಕೂಡಿಕೊಂಡು ರಾಜ್ಯವನ್ನು, ಸಮರ್ಥವಾಗಿ ನಿರ್ವಹಿಸುತ್ತಿದ್ದನು.
ಈ ರೀತಿಯಾಗಿ ಶ್ರೀ ಕೃಷ್ಣನು ಧರ್ಮರಾಜನಿಗೆ ಭವಿಷ್ಯೋತ್ತರ ಪುರಾಣದಲ್ಲಿ “ಪುತ್ರದಾ” ಏಕಾದಶಿಯ ಮಹಾತ್ಮೆಯನ್ನು ತಿಳಿಸಿದನು.
ಆಧಾರ : ಅಂತರಜಾಲ