ಹಿಂದೂ ಧರ್ಮದಲ್ಲಿ ದೀಪಕ್ಕೆ ಬಹಳ ಮಹತ್ವವನ್ನು ಕೊಡಲಾಗಿದೆ.
ದೀಪ ಪ್ರಜ್ವಲನದ ಭಾವಾರ್ಥ
೧. ದೀಪಪ್ರಜ್ವಲನ (ದೀಪ ಬೆಳಗಿಸುವುದು) ಮಾಡುವುದು ಎಂದರೆ ನಮ್ಮಲ್ಲಿನ ಆತ್ಮಶಕ್ತಿಯನ್ನು ಜಾಗೃತ ಮಾಡುವುದು.
೨. ದೀಪದ ಸುತ್ತಲಿರುವ ಶಾಂತ ಪ್ರಭಾವಳಿಯು ನಮ್ಮ ಆತ್ಮಪ್ರಕಾಶದ ಪ್ರತೀಕವಾಗಿದೆ ಮತ್ತು ದೀಪದ ರಜೋಗುಣಿ ಪ್ರಕಾಶವು ನಮ್ಮ ಆತ್ಮತೇಜದ ಪ್ರತೀಕವಾಗಿದೆ. ಆತ್ಮತೇಜವು ಈಶ್ವರನ ಪ್ರತ್ಯಕ್ಷ ಕಾರ್ಯನಿರತ ಸಗುಣ ಶಕ್ತಿಯ ಪ್ರತೀಕವಾಗಿದೆ ಮತ್ತು ಆತ್ಮಪ್ರಕಾಶವು ತೇಜದ ಹಿಂದೆ ಕಾರ್ಯನಿರತವಾಗಿರುವ ಈಶ್ವರನ ಸಂಕಲ್ಪಶಕ್ತಿಯ ಪ್ರತೀಕವಾಗಿದೆ.
ದೀಪ ಪ್ರಜ್ವಲನದ ಮಹತ್ವ
೧. ಈಶ್ವರನ ಸಂಕಲ್ಪಶಕ್ತಿಯು ಕಾರ್ಯನಿರತವಾಗುವುದು: ಯಾವಾಗ ನಾವು ದೀಪ ಪ್ರಜ್ವಲನವನ್ನು ಮಾಡಿ ಕಾರ್ಯವನ್ನು ಪ್ರಾರಂಭಿಸುತ್ತೇವೆಯೋ, ಆಗ ಆತ್ಮಜ್ಯೋತಿಯ ಬಲದಿಂದ ಮಾಡಿದ ಪೂಜೆಯಿಂದ ನಾವು ಬ್ರಹ್ಮಾಂಡದಲ್ಲಿನ ಆಯಾ ದೇವತೆಗಳ ತತ್ತ್ವಗಳನ್ನು ಆವಾಹನೆ ಮಾಡುತ್ತೇವೆ ಮತ್ತು ದೇವತೆಗಳ ಲಹರಿಗಳಿಗೆ ಕಾರ್ಯಸ್ಥಳದಲ್ಲಿ ಆಸೀನರಾಗಲು ಪ್ರಾರ್ಥನೆಯನ್ನು ಮಾಡುತ್ತೇವೆ. ಇದರಿಂದ ನಾವು ಮಾಡುತ್ತಿರುವ ಕಾರ್ಯದ ಹಿಂದೆ ಈಶ್ವರನ ಸಂಕಲ್ಪಶಕ್ತಿಯು ಕಾರ್ಯನಿರತವಾಗುತ್ತದೆ ಮತ್ತು ನಾವು ಇಚ್ಛಿಸಿದ ಕಾರ್ಯವು ಪೂರ್ಣಗೊಳ್ಳುತ್ತದೆ.
೨. ಕಾರ್ಯಸ್ಥಳದ ಸುತ್ತಲೂ ಸಂರಕ್ಷಣಾ ಕವಚವು ನಿರ್ಮಾಣವಾಗುವುದು: ಬ್ರಹ್ಮಾಂಡದಲ್ಲಿನ ಈಶ್ವರನ ಕ್ರಿಯಾಶಕ್ತಿಯ ಬಲದಲ್ಲಿ ಕಾರ್ಯಸ್ಥಳದ ಸುತ್ತಲೂ ಸಂರಕ್ಷಣಾ ಕವಚವನ್ನು ನಿರ್ಮಾಣ ಮಾಡುತ್ತವೆ. ಅಂದರೆ ಒಂದು ರೀತಿಯಲ್ಲಿ ನಾವು ದೀಪಪ್ರಜ್ವಲನವನ್ನು ಮಾಡಿ ಕಾರ್ಯಸ್ಥಳದ ಶುದ್ಧಿಯನ್ನು ಮಾಡುತ್ತಿರುತ್ತೇವೆ. ಸಂರಕ್ಷಣಾ ಕವಚದಿಂದ ಕಿರಣಗಳ ರೂಪದಲ್ಲಿ ಪ್ರಕ್ಷೇಪಿತವಾಗುವ ಗತಿಮಾನ ಮತ್ತು ವಲಯಾಂಕಿತ ತೇಜೋಲಹರಿಗಳಿಂದಾಗಿ ವರಿಷ್ಠ ಕೆಟ್ಟ ಶಕ್ತಿಗಳಿಗೆ (ಹೆಚ್ಚು ಕ್ಷಮತೆಯಿರುವ ಕೆಟ್ಟ ಶಕ್ತಿ) ಕಾರ್ಯಸ್ಥಳದಲ್ಲಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ನಮ್ಮ ಕಾರ್ಯವು ದೇವತೆಗಳ ಆಶೀರ್ವಾದದಿಂದ ಒಳ್ಳೆಯ ರೀತಿಯಿಂದ ನೆರವೇರುತ್ತದೆ.
ಮೇಣದ ಬತ್ತಿಯಿಂದ ದೀಪಪ್ರಜ್ವಲನ ಮಾಡುವುದು ಮತ್ತು ಕೈದೀಪದಿಂದ ದೀಪ ಪ್ರಜ್ವಲನ ಮಾಡುವುದು ಇವುಗಳಲ್ಲಿನ ವ್ಯತ್ಯಾಸ.
ದೀಪಪ್ರಜ್ವಲನಕ್ಕಾಗಿ ಇಟ್ಟಿರುವ ಕಾಲುದೀಪದಲ್ಲಿ ಎಣ್ಣೆಯಿರುವುದರಿಂದ ಪ್ರಜ್ವಲಿತವಾದ ದೀಪದಿಂದ ರಜ-ಸತ್ತ್ವಗುಣಿ ಸ್ಪಂದನಗಳು ಕಾರ್ಯನಿರತವಾಗಿರುತ್ತವೆ. ಇಂತಹ ದೀಪವನ್ನು ಮೇಣದ ಬತ್ತಿಯಂತಹ ತಮೋಗುಣಿ ಘಟಕದಿಂದ ಪ್ರಜ್ವಲಿತಗೊಳಿಸುವುದೆಂದರೆ ರಜ-ಸತ್ತ್ವ ಸ್ಪಂದನಗಳಲ್ಲಿ ತಮೋಗುಣಿ ಸ್ಪಂದನಗಳನ್ನು ಸೇರಿಸುವಂತಾಗಿದೆ. ತದ್ವಿರುದ್ಧ ಕೈದೀಪದಲ್ಲಿ ಎಣ್ಣೆಯಿರುವುದರಿಂದ ಅದರಿಂದ ದೀಪಪ್ರಜ್ವಲನ ಮಾಡುವುದರಿಂದ ಅದರಲ್ಲಿರುವ ರಜ-ಸತ್ತ್ವಗುಣಿ ಸ್ಪಂದನಗಳು ಇನ್ನೊಂದು ದೀಪದಲ್ಲಿ ಪ್ರಕ್ಷೇಪಿಸಿ, ಸಮಾನ ಸ್ಪಂದನಗಳು ಕಾರ್ಯನಿರತವಾಗಿರುತ್ತವೆ. ಇದರಿಂದ ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಕೃತಿಯ ಹಿಂದೆ ಏನಾದರೊಂದು ಶಾಸ್ತ್ರವಿರುವುದು ಗಮನಕ್ಕೆ ಬರುತ್ತದೆ.
ಮೇಣದ ಬತ್ತಿಯ ತುಲನೆಯಲ್ಲಿ ಎಣ್ಣೆಯ ದೀಪದಿಂದ (ಕೈದೀಪದಿಂದ) ದೀಪ ಪ್ರಜ್ವಲನ ಮಾಡುವ ಹಿಂದಿನ ಶಾಸ್ತ್ರ.
ಮೇಣದ ಬತ್ತಿಯಿಂದ ಪ್ರಕ್ಷೇಪಿತವಾಗುವ ಲಹರಿಗಳು ತಮ-ರಜಯುಕ್ತ (ತ್ರಾಸದಾಯಕ) ವಾಗಿರುತ್ತವೆ. ಈ ಲಹರಿಗಳಿಂದ ವಾತಾವರಣವು ತಾಮಸಿಕ (ಕೆಟ್ಟ ಶಕ್ತಿಗಳಿಂದ ಕೂಡಿ) ವಾಗುತ್ತದೆ. ಹಾಗೆಯೇ ಈ ಲಹರಿಗಳ ಗತಿಯು ಅನಿಯಮಿತ ಮತ್ತು ವೇಗವಾಗಿರುವುದರಿಂದ ಇದರಲ್ಲಿನ ತಮ-ರಜಕಣಗಳ ಘರ್ಷಣೆಯಾಗಿ ಅದರಿಂದ ಉತ್ಪನ್ನವಾಗುವ ಉಷ್ಣ ವಾಯುವಿನಿಂದಾಗಿ ವಾತಾವರಣದಲ್ಲಿನ ಸತ್ತ್ವಕಣಗಳ ವಿಘಟನೆಯಾಗುತ್ತದೆ. ಆದುದರಿಂದ ವಾತಾವರಣದಲ್ಲಿನ ಸಾತ್ತ್ವಿಕತೆಯು ನಾಶವಾಗುತ್ತದೆ. ಮೇಣದ ಬತ್ತಿಯಿಂದ ದೀಪಪ್ರಜ್ವಲನವನ್ನು ಮಾಡುವುದರಿಂದ ಕಾಲುದೀಪದ ಸುತ್ತಲೂ ತಮೋಕಣಗಳ ಮಂಡಲವು ತಯಾರಾಗುತ್ತದೆ. ಆದುದರಿಂದ ಕಾಲುದೀಪದ ಜ್ಯೋತಿಯ ಕಡೆಗೆ ಆಕರ್ಷಿತವಾಗುವ ಬ್ರಹ್ಮಾಂಡದಲ್ಲಿನ ದೇವತೆಗಳ ಕ್ರಿಯಾಲಹರಿಗಳಿಗೆ ಅಡ್ಡಿಯುಂಟಾಗುತ್ತದೆ. ತದ್ವಿರುದ್ಧವಾಗಿ ಎಣ್ಣೆಯು ರಜೋಗುಣದ ಪ್ರತೀಕವಾಗಿದೆ. ಎಣ್ಣೆಯ ಜ್ಯೋತಿಯು ಬ್ರಹ್ಮಾಂಡದಲ್ಲಿನ ದೇವತೆಗಳ ಕ್ರಿಯಾಲಹರಿಗಳನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ; ಆದುದರಿಂದ ದೀಪಪ್ರಜ್ವಲನಕ್ಕಾಗಿ ಎಣ್ಣೆಯ ದೀಪವನ್ನು (ಕೈದೀಪ) ಉಪಯೋಗಿಸುವುದು ಯೋಗ್ಯವಾಗಿದೆ.
(ಮೇಲಿನ ಮಾಹಿತಿಗಳೊಂದಿಗೆ ಇನ್ನೂ ವಿವರವಾದ ಮಾಹಿತಿಯನ್ನು ಗ್ರಂಥದಲ್ಲಿ ಓದಿ.)
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ.’)