೧. ಪೃಥ್ವಿ : ಪೃಥ್ವಿಯಂತೆ ಸಹನಶೀಲ ಹಾಗೂ ತಾಳ್ಮೆಯುಳ್ಳವನಾಗಿರಬೇಕು.
೨. ವಾಯು : ವಾಯುವಿನಂತೆ ವಿರಕ್ತನಾಗಿರಬೇಕು. ಹೇಗೆ ವಾಯುವು ಶೀತೋಷ್ಣತೆಗಳಲ್ಲಿ ಸಂಚರಿಸುತ್ತಿರುವಾಗಲೂ ಅವುಗಳ ಗುಣ ದೋಷಗಳಲ್ಲಿ ಸಿಲುಕಿಕೊಳ್ಳುವುದಿಲ್ಲವೋ, ಹಾಗೆಯೇ ಮುಮುಕ್ಷುವು ಯಾರ ಗುಣದೋಷಗಳನ್ನೂ ನೋಡದೇ ಶ್ರುತಿ ಪ್ರತಿಪಾದಿತ ಮಾರ್ಗದಲ್ಲಿ ಬಹಳ ಶೀತೋಷ್ಣವಿರುವ ಪ್ರದೇಶದಲ್ಲಿ ಮಾರ್ಗಕ್ರಮಣ ಮಾಡಬೇಕು.
೩. ಆಕಾಶ : ಆತ್ಮವು ಆಕಾಶದಂತೆ ಎಲ್ಲ ಚರಾಚರ ವಸ್ತುಗಳನ್ನು ವ್ಯಾಪಿಸಿದೆ, ಆದರೂ ಅದು ನಿರ್ವಿಕಾರ, ಎಲ್ಲರೊಂದಿಗೆ ಸಮಾನತೆಯನ್ನಿಟ್ಟುಕೊಳ್ಳುವ, ನಿಃಸಂಗ, ಅಭೇದ, ನಿರ್ಮಲ, ನಿರ್ವೈರ, ಅಲಿಪ್ತ, ಅಚಲ ಮತ್ತು ಒಂದಾಗಿದೆ.
೪. ನೀರು : ಮನುಷ್ಯನು ನೀರಿನಂತೆ ಎಲ್ಲರೊಂದಿಗೆ ಸ್ನೇಹದಿಂದ, ಪಕ್ಷಪಾತ ಮಾಡದೆ ವರ್ತಿಸಬೇಕು.
೫. ಅಗ್ನಿ : ಮನುಷ್ಯನು ಅಗ್ನಿಯಂತೆ ತಪಸ್ಸನ್ನು ಮಾಡಿ ಪ್ರಕಾಶಿಸ ಬೇಕು ಮತ್ತು ಏನು ಸಿಗುತ್ತದೆಯೋ ಅದನ್ನು ಭಕ್ಷಿಸಿ, ಯಾವುದೇ ದೋಷಾಚರಣೆಯನ್ನು ಮಾಡದೇ ತನ್ನ ಒಳ್ಳೆಯ ಗುಣಗಳನ್ನು ಒಳ್ಳೆಯ ಪ್ರಸಂಗದಲ್ಲಿ ಮತ್ತು ಯೋಗ್ಯ ಸ್ಥಳದಲ್ಲಿ ಉಪಯೋಗಿಸಬೇಕು.
೬. ಚಂದ್ರ : ಅಮಾವಾಸ್ಯೆಯ ಸೂಕ್ಷ್ಮ ಕಲೆ ಮತ್ತು ಹದಿನೈದು ದಿನಗಳ ಹದಿನೈದು ಕಲೆಗಳನ್ನು ಸೇರಿಸಿ ಚಂದ್ರನ ಹದಿನಾರು ಕಲೆಗಳನ್ನು ಎಣಿಸಲಾಗುತ್ತದೆ. ಯಾವ ರೀತಿ ಚಂದ್ರನ ಕಲೆಗಳಲ್ಲಿ ಹೆಚ್ಚು-ಕಡಿಮೆ ಇರುವಾಗಲೂ ಅದರ ವಿಕಾರವು ಚಂದ್ರನನ್ನು ಬಾಧಿಸುವುದಿಲ್ಲವೋ, ಹಾಗೆಯೇ ದೇಹಕ್ಕೆ ಸಂಬಂಧಿಸಿದ ವಿಕಾರಗಳು ಆತ್ಮಕ್ಕೆ ಬಾಧಕವಾಗಿರುವುದಿಲ್ಲ. (ನಮ್ಮ ಆತ್ಮವು ಬೆಳೆಯುವುದಿಲ್ಲ ಮತ್ತು ಸಾಯುವುದೂ ಇಲ್ಲ, ಬೆಳೆಯುವುದು ಮತ್ತು ಸಾಯುವುದು ನಮ್ಮ ದೇಹ ಮಾತ್ರ.)
೭. ಸೂರ್ಯ : ಸೂರ್ಯನು ಭವಿಷ್ಯತ್ಕಾಲದ ಬಗ್ಗೆ ವಿಚಾರ ಮಾಡಿ ನೀರನ್ನು ಸಂಗ್ರಹಿಸಿಡುತ್ತಾನೆ ಮತ್ತು ಯೋಗ್ಯ ಸಮಯ ಬಂದಾಗ ಅದನ್ನು ಪರೋಪಕಾರಕ್ಕಾಗಿ ಭೂಮಿಯ ಮೇಲೆ ಸುರಿಸುತ್ತಾನೆ. ಹಾಗೆಯೇ ಮನುಷ್ಯನು ಉಪಯುಕ್ತವಾದ ವಸ್ತುಗಳನ್ನು ಸಂಗ್ರಹಿಸಿ ದೇಶ, ಕಾಲ ಮತ್ತು ವರ್ತಮಾನ ಸ್ಥಿತಿಗಳ ವಿಚಾರ ಮಾಡಿ ಪಕ್ಷಪಾತ ಮಾಡದೇ ಎಲ್ಲ ಪ್ರಾಣಿಗಳಿಗೂ ಅವುಗಳ ಲಾಭವಾಗುವಂತೆ ಮಾಡಬೇಕು; ಆದರೆ ಅದರ ಅಭಿಮಾನವನ್ನಿಟ್ಟುಕೊಳ್ಳಬಾರದು.
೮. ಪಾರಿವಾಳ : ಯಾವ ರೀತಿ ಹದ್ದು ಪಾರಿವಾಳವನ್ನು ಪರಿವಾರ ಸಮೇತ ಭಕ್ಷಿಸುತ್ತದೆಯೋ, ಅದೇ ರೀತಿ ಯಾವ ಮನುಷ್ಯನು ಪತ್ನಿ-ಪುತ್ರರಲ್ಲಿ ಆಸಕ್ತಿಯನ್ನಿಟ್ಟು ಸಂಸಾರ ಸುಖಮಯವೆಂದು ಭಾವಿಸಿ ವರ್ತಿಸುತ್ತಾನೆಯೋ, ಅವನನ್ನು ಕಾಲವು ಭಕ್ಷಿಸುತ್ತದೆ. ಆದುದರಿಂದ ಮುಮುಕ್ಷುವು ಇವೆಲ್ಲವುಗಳಿಂದ ಮನಸ್ಸಿನಿಂದ ಅಲಿಪ್ತನಾಗಿರಬೇಕು.
೯. ಹೆಬ್ಬಾವು : ಹೆಬ್ಬಾವು ಭಯ ಪಡದೆ ಪ್ರಾರಬ್ಧದ ಮೇಲೆ ವಿಶ್ವಾಸವನ್ನಿಟ್ಟು ಒಂದೇ ಜಾಗದಲ್ಲಿ ಬಿದ್ದುಕೊಂಡಿರುತ್ತದೆ, ಯಾವಾಗ ಏನು ಸಿಗುತ್ತದೆಯೋ, ಅದನ್ನು ತಿಂದು ಸಂತೋಷ ಪಡುತ್ತದೆ. ಅದಕ್ಕೆ ದೊರಕಿದ ಆಹಾರವನ್ನು ಹೆಚ್ಚು-ಕಡಿಮೆ ಅಥವಾ ಸಿಹಿ-ಕಹಿ ಎಂದು ವಿಚಾರ ಮಾಡುವುದಿಲ್ಲ. ಕೆಲವು ಸಮಯ ತಿನ್ನುವುದಕ್ಕೆ ಏನೂ ಸಿಗದಿದ್ದರೂ ಹೆದರುವುದಿಲ್ಲ ಮತ್ತು ದೇಹದಲ್ಲಿ ಶಕ್ತಿ ಇದ್ದರೂ ಅದನ್ನು ಉಪಯೋಗಿಸುವುದಿಲ್ಲ. ಹಾಗೆಯೇ ಮುಮುಕ್ಷುವು ಪ್ರಾರಬ್ಧದ ಮೇಲೆ ನಂಬಿಕೆಯನ್ನಿಟ್ಟು ಏನು ಅಲ್ಪಸ್ವಲ್ಪ ಸಿಗುತ್ತದೆಯೋ, ಅದನ್ನು ಸೇವಿಸಬೇಕು ಮತ್ತು ಕೆಲವೊಮ್ಮೆ ಏನೂ ಸಿಗದಿದ್ದರೂ ಸ್ವಸ್ವರೂಪದ ಅನುಸಂಧಾನದಲ್ಲಿರಬೇಕು.
೧೦. ಸಮುದ್ರ : ಹೇಗೆ ಸಮುದ್ರವು ಮಳೆಗಾಲದಲ್ಲಿ ಅನೇಕ ನದಿಗಳು ಬಹಳಷ್ಟು ನೀರನ್ನು ತಂದರೂ ಸುಖ ಪಡುವುದಿಲ್ಲವೋ ಅಥವಾ ನೀರನ್ನು ತರದಿದ್ದರೆ ದುಃಖಪಡುವುದಿಲ್ಲವೋ ಮತ್ತು ಅದರಿಂದ ಉಬ್ಬುವುದೂ ಇಲ್ಲ ಅಥವಾ ಕ್ಷೀಣಿಸುವುದೂ ಇಲ್ಲವೋ, ಹಾಗೆಯೇ ಪ್ರತಿಯೊಬ್ಬ ಮನುಷ್ಯನು ಸ್ವಧರ್ಮ ಪಾಲನೆ ಮಾಡಿ ಸುಖೋಪಭೋಗಗಳು ಲಭಿಸಿದಾಗ ಸುಖಿಯಾಗಬಾರದು ಅಥವಾ ದುಃಖಗಳು ಬಂದಾಗ ದುಃಖಿತನೂ ಆಗಬಾರದು; ಯಾವಾಗಲೂ ಆನಂದದಲ್ಲಿಯೇ ಇರಬೇಕು.
೧೧. ದೀಪದ ಹುಳ (ಪತಂಗ) : ಉರಿಯುತ್ತಿರುವ ದೀಪದಿಂದ ಹರಡಿದ ಮೋಹಕ ತೇಜವನ್ನು ನೋಡಿ ದೀಪದ ಹುಳವು ಮೋಹಿತವಾಗುತ್ತದೆ ಮತ್ತು ಅದರ ಮೇಲೆ ಎರಗಿ ಸುಟ್ಟು ಸಾಯುತ್ತದೆ. ಹಾಗೆಯೇ ಯಾವ ಮನುಷ್ಯನು ಸ್ತ್ರೀವಿಲಾಸಕ್ಕಾಗಿ, ಸ್ತ್ರೀಯರ ಲಾವಣ್ಯ ಮತ್ತು ಯೌವನವನ್ನು ನೋಡಿ ಮೋಹಿತನಾಗುತ್ತಾನೆಯೋ, ಅವನು ಪತಂಗದಂತೆ ನಾಶವಾಗುತ್ತಾನೆ.
೧೨. ಜೇನುನೊಣ ಮತ್ತು ಜೇನು ಸಂಗ್ರಾಹಕ
ಅ. ಜೇನುನೊಣ : ಜೇನುನೊಣವು ಬಹಳ ಕಷ್ಟಪಟ್ಟು ಇಕ್ಕಟ್ಟಿನ ಜಾಗದಲ್ಲಿ, ಎತ್ತರದ ಮರದ ಮೇಲೆ ಜೇನುಗೂಡನ್ನು ಕಟ್ಟಿ ಅದರಲ್ಲಿ ಜೇನುತುಪ್ಪವನ್ನು ಶೇಖರಿಸುತ್ತದೆ. ಅದನ್ನು ತಾನೂ ತಿನ್ನುವುದಿಲ್ಲ ಮತ್ತು ಬೇರೆ ಯಾರಿಗೂ ತಿನ್ನಲು ಬಿಡುವುದಿಲ್ಲ. ಕೊನೆಗೆ ಜೇನುತುಪ್ಪವನ್ನು ಸಂಗ್ರಹ ಮಾಡುವವನು ಹಠಾತ್ತಾಗಿ ಬಂದು, ಜೇನುನೊಣಗಳನ್ನು ಸಾಯಿಸಿ ಜೇನುತುಪ್ಪವನ್ನು ಗೂಡು ಸಮೇತವಾಗಿ ತೆಗೆದುಕೊಂಡು ಹೋಗುತ್ತಾನೆ. ಹಾಗೆಯೇ ಯಾವ ಜಿಪುಣನು ಬಹಳ ಪ್ರಯತ್ನಪಟ್ಟು ದ್ರವ್ಯವನ್ನು ಸಂಪಾದನೆ ಮಾಡಿ ಶೇಖರಿಸಿಟ್ಟುಕೊಳ್ಳುತ್ತಾನೆಯೋ, ಅವನು ಅಗ್ನಿ, ಕಳ್ಳರು ಅಥವಾ ರಾಜರು ಹಠಾತ್ತಾಗಿ ಬಂದು ಆ ದ್ರವ್ಯವನ್ನು ಅಪಹರಿಸುವುದರಿಂದ ಕೊನೆಗೆ ದುಃಖಿತನಾಗುತ್ತಾನೆ; ಅಥವಾ ಅವನಿಗೆ ಅನೀತಿವಂತ ಸಂತತಿಯು ಪ್ರಾಪ್ತವಾಗಿ ಆ ಸಂತತಿಯಿಂದ ದ್ರವ್ಯದ ಅಪವ್ಯಯವಾಗುತ್ತದೆ ಅಥವಾ ಅವನು ಸಂತತಿರಹಿತನಾಗಿ ಮರಣ ಹೊಂದುತ್ತಾನೆ. ಹೀಗೆ ಅವನ ಮರಣದ ನಂತರ ಆ ದ್ರವ್ಯವು ಎಲ್ಲಿರುತ್ತದೆಯೋ ಅಲ್ಲಿಯೇ ಉಳಿಯುತ್ತದೆ ಅಥವಾ ಅಪರಿಚಿತರಿಗೆ ಸಿಗುತ್ತದೆ. ಅವನಿಗೆ ಮರಣದ ಸಮಯದಲ್ಲಿ ಆ ದ್ರವ್ಯದ ಮೇಲೆ ಆಸಕ್ತಿಯಿದ್ದರೆ ಅವನು ಪಿಶಾಚಿ ಅಥವಾ ಸರ್ಪನಾಗಿ ಆ ದ್ರವ್ಯವನ್ನು ಉಪಯೋಗಿಸುವವರಿಗೆ ತೊಂದರೆಗಳನ್ನು ನೀಡುತ್ತಾನೆ. ಈ ರೀತಿ ಜೇನುನೊಣದಂತೆ ಧನವನ್ನು ಸಂಗ್ರಹಿಸುವುದರಿಂದ ಹಠಾತ್ತಾಗಿ ಮರಣ ಬರುತ್ತದೆ ಎಂಬ ಉಪದೇಶವನ್ನು ಪಡೆದುಕೊಂಡು ದ್ರವ್ಯ ಸಂಗ್ರಹ ಮಾಡಬಾರದು.
ಆ. ಜೇನು ಸಂಗ್ರಾಹಕ : ಯಾವ ರೀತಿಯಲ್ಲಿ ಜೇನು ಸಂಗ್ರಾಹಕನು ಏನೂ ಕೆಲಸ ಮಾಡದೇ ಜೇನು ತುಪ್ಪವನ್ನು ಪಡೆದುಕೊಳ್ಳುತ್ತಾನೆಯೋ, ಹಾಗೆಯೇ ಸಾಧಕರು ಒಲೆ, ಪಾತ್ರೆ, ಅಗ್ನಿ, ಸೌದೆ ಇತ್ಯಾದಿಗಳನ್ನು ಸಂಗ್ರಹಿಸದೇ, ಗೃಹಸ್ಥಾಶ್ರಮಿಗಳ ಮನೆಯಲ್ಲಿ ತಯಾರಿಸಿದ ಅನ್ನವನ್ನು ಪಡೆದುಕೊಂಡು ಸೇವಿಸಬೇಕು ಮತ್ತು ತಮ್ಮ ಎಲ್ಲ ಸಮಯವನ್ನೂ ಈಶ್ವರಪ್ರಾಪ್ತಿಗಾಗಿ ಉಪಯೋಗಿಸಬೇಕು. ಇಂತಹ ಮುಮುಕ್ಷುಗಳು ಗೃಹಸ್ಥಾಶ್ರಮಿಗಳ ಮನೆಯಲ್ಲಿನ ಅನ್ನವನ್ನು ಸೇವಿಸಿ ಅವರ ಕಲ್ಯಾಣವನ್ನೇ ಮಾಡುತ್ತಾರೆ.
೧೩. ಗಜೇಂದ್ರ (ಆನೆ) : ಆನೆಯು ಬಲಾಢ್ಯವಾಗಿದ್ದರೂ ಅದನ್ನು ವಶಪಡಿಸಿಕೊಳ್ಳಲು ಜನರು ಒಂದು ಗುಂಡಿಯನ್ನು ತೋಡಿ ಅದರ ಮೇಲೆ ಹುಲ್ಲನ್ನು ಹಾಕುತ್ತಾರೆ ಮತ್ತು ಮರದ ಒಂದು ಹೆಣ್ಣು ಆನೆಯ ಪ್ರತಿಕೃತಿಯನ್ನು ಮಾಡಿ ಅದರ ಮೇಲೆ ಆನೆಯ ಚರ್ಮವನ್ನು ಹೊದಿಸಿ ಆ ಗುಂಡಿಯ ಮೇಲೆ ನಿಲ್ಲಿಸುತ್ತಾರೆ. ಅದನ್ನು ನೋಡಿ ಆನೆಯು ವಿಷಯ ಸುಖದ ಲಾಲಸೆಯಿಂದ ಮೋಹಗೊಂಡು ಆ ಮರದ ಆನೆಯತ್ತ ಬರುತ್ತದೆ ಮತ್ತು ಗುಂಡಿಯೊಳಗೆ ಬೀಳುತ್ತದೆ. ಇದರಿಂದ ಸುಲಭವಾಗಿ ಮನುಷ್ಯನ ಕೈಗೆ ಸಿಕ್ಕಿಕೊಳ್ಳುತ್ತದೆ. ಹಾಗೆಯೇ ಯಾವ ಪುರುಷನು ಸ್ತ್ರೀ ಸುಖಕ್ಕೆ ಮರುಳಾಗುತ್ತಾನೆಯೋ, ಅವನು ಕೂಡಲೇ ಬಂಧನದಲ್ಲಿ ಸಿಲುಕಿಕೊಳ್ಳುತ್ತಾನೆ.
೧೪. ಭ್ರಮರ : ಸೂರ್ಯವಿಕಾಸಿ ಕಮಲವು ಸೂರ್ಯಾಸ್ತದ ಸಮಯದಲ್ಲಿ ಮುಚ್ಚುತ್ತದೆ. ಇಂತಹ ಸಮಯದಲ್ಲಿ ಅದರ ಮೇಲೆ ಭ್ರಮರವು ಕುಳಿತಿದ್ದರೆ ಅದು ಕಮಲದೊಳಗೆ ಸಿಲುಕಿಕೊಳ್ಳುತ್ತದೆ. ಇದರಿಂದ ‘ವಿಷಯಾಸಕ್ತಿಯಲ್ಲಿ ಬಂಧನವಿರುತ್ತದೆ’ ಎಂಬುದನ್ನು ತಿಳಿದುಕೊಂಡು ವಿಷಯಾಸಕ್ತರಾಗಬಾರದು.
೧೫. ಕಸ್ತೂರಿಮೃಗ (ಜಿಂಕೆ) : ವಾಯುವಿನಂತೆ ವೇಗವಿರುವ ಕಸ್ತೂರಿ ಮೃಗವು ಯಾರ ಕೈಗೂ ಸಿಗುವುದಿಲ್ಲ; ಆದರೆ ಅದು ಮಧುರ ಗಾಯನಕ್ಕೆ ಮೋಹಪರವಶವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಮೋಹದಲ್ಲಿ ಸಿಲುಕಿಕೊಳ್ಳಬಾರದು.
೧೬. ಮತ್ಸ : ಕಬ್ಬಿಣದ ಗಾಳಕ್ಕೆ ಮಾಂಸವನ್ನು ಕಟ್ಟಿ ನೀರಿನೊಳಗೆ ಬಿಟ್ಟಾಗ ಆ ಮಾಂಸಕ್ಕೆ ಮೋಹಿತವಾಗಿ ಮೀನು ಆ ಗಾಳವನ್ನು ನುಂಗುತ್ತದೆ ಮತ್ತು ಆ ಗಾಳದಲ್ಲಿನ ಮುಳ್ಳು ಬಾಯಿಯಲ್ಲಿ ಸಿಕ್ಕಿಕೊಳ್ಳುವುದರಿಂದ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಮನುಷ್ಯನು ನಾಲಿಗೆಯ ರುಚಿಯಲ್ಲಿ ಬದ್ಧನಾದಲ್ಲಿ ಜನ್ಮಮರಣದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ.
೧೭. ಪಿಂಗಲಾ ವೇಶ್ಯೆ : ಒಂದು ರಾತ್ರಿ ಬಹಳ ಸಮಯ ಯಾವುದೇ ಪುರುಷನು ಪಿಂಗಲಾ ವೇಶ್ಯೆಯ ಬಳಿಗೆ ಬರಲಿಲ್ಲ. ಕಾಯುತ್ತಾ ಮತ್ತು ಆಸೆಯಿಂದ ಒಂದೇ ಸಮನೆ ಒಳಗೆ ಹೊರಗೆ ಓಡಾಡಿ ಕೊನೆಗೆ ಬೇಸರವಾಗಿ ಅವಳಿಗೆ ಹಠಾತ್ತಾಗಿ ವೈರಾಗ್ಯ ಬಂದಿತು. ಎಲ್ಲಿಯವರೆಗೆ ಮನುಷ್ಯನಲ್ಲಿ ಆಸೆಯು ಪ್ರಬಲವಾಗಿರುತ್ತದೆಯೋ ಅಲ್ಲಿಯವರೆಗೆ ಅವನಿಗೆ ಸುಖನಿದ್ರೆ ಬರುವುದಿಲ್ಲ. ಯಾವ ಪುರುಷನು ಆಸೆಯನ್ನು ತ್ಯಜಿಸಿದ್ದಾನೆಯೋ ಅವನಿಗೆ ಈ ಸಂಸಾರದ ದುಃಖಗಳು ಬಾಧಿಸುವುದಿಲ್ಲ.
೧೮. ಟಿಟ್ಟಿಭ (ಒಂದು ಜಾತಿಯ ಪಕ್ಷಿ) : ಒಮ್ಮೆ ಒಂದು ಟಿಟ್ಟಿಭವು ಕೊಕ್ಕಿನಲ್ಲಿ ಮೀನನ್ನು ಹಿಡಿದುಕೊಂಡು ಹೋಗುತ್ತಿತ್ತು. ಅದನ್ನು ನೋಡಿ ನೂರಾರು ಕಾಗೆಗಳು ಮತ್ತು ಹದ್ದುಗಳು ಅದರ ಹಿಂದೆ ಬಿದ್ದು ಅದನ್ನು ಕುಕ್ಕಿ, ಬಲಹೀನವನ್ನಾಗಿ ಮಾಡಿ, ಆ ಮೀನನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡತೊಡಗಿದವು. ಅದು ಎಲ್ಲಿ ಹೋದರೂ ಅವು ಅದನ್ನು ಹಿಂಬಾಲಿಸುತ್ತಿದ್ದವು. ಕೊನೆಗೆ ದಣಿದು ಹತಾಶವಾಗಿ, ಬೇರೆ ಏನೂ ತೋಚದೇ ಆ ಟಿಟ್ಟಿಭವು ಆ ಮೀನನ್ನು ಕೊಕ್ಕಿನಿಂದ ಬಿಟ್ಟಿತು. ಕೂಡಲೇ ಒಂದು ಹದ್ದು ಆ ಮೀನನ್ನು ಹಿಡಿದುಕೊಂಡಿತು. ಇದನ್ನು ನೋಡುವುದೇ ತಡ, ಆ ಟಿಟ್ಟಿಭವನ್ನು ಬಿಟ್ಟು ಎಲ್ಲ ಕಾಗೆಗಳು ಮತ್ತು ಹದ್ದುಗಳು ಮೀನನ್ನು ಹಿಡಿದಿದ್ದ ಹದ್ದನ್ನು ಹಿಂಬಾಲಿಸತೊಡಗಿದವು. ಇದರಿಂದ ಆ ಟಿಟ್ಟಿಭವು ನಿಶ್ಚಿಂತೆಯಿಂದ ಒಂದು ಗಿಡದ ಕೊಂಬೆಯ ಮೇಲೆ ಹೋಗಿ ಶಾಂತವಾಗಿ ಕುಳಿತಿತು. ಈ ಸಂಸಾರದಲ್ಲಿ ಮೋಹವನ್ನು ಬಿಡುವುದರಲ್ಲಿಯೇ ಶಾಂತಿ ಇದೆ, ಇಲ್ಲದಿದ್ದರೆ ಘೋರ ವಿಪತ್ತಿದೆ.
೧೯. ಬಾಲಕ : ಮಾನಾಪಮಾನಗಳ ಬಗ್ಗೆ ವಿಚಾರ ಮಾಡದೇ ಜಗತ್ತು ಪ್ರಾರಬ್ಧಾಧೀನವಾಗಿದೆ ಎಂದು ತಿಳಿದು ಎಲ್ಲ ಚಿಂತೆಗಳನ್ನು ಬಿಟ್ಟು ಬಾಲಕನಂತೆ ಇರಬೇಕು ಮತ್ತು ಆನಂದವನ್ನು ಉಪಭೋಗಿಸಬೇಕು.
೨೦. ಕಂಕಣ (ಕೈಬಳೆ) : ಎರಡು ಬಳೆಗಳಿದ್ದರೆ ಒಂದಕ್ಕೊಂದು ತಗಲಿ ಶಬ್ದವಾಗುತ್ತದೆ. ಹೆಚ್ಚು ಬಳೆಗಳಿದ್ದರೆ ಹೆಚ್ಚು ಶಬ್ದವಾಗುತ್ತದೆ. ಹಾಗೆಯೇ ಇಬ್ಬರು ವ್ಯಕ್ತಿಗಳಿದ್ದರೆ ಮಾತುಕತೆಗಳಾಗುತ್ತವೆ ಮತ್ತು ಬಹಳ ಜನರು ಒಟ್ಟಿಗೆ ಇದ್ದರೆ ಅಲ್ಲಿ ಕಲಹವಾಗುತ್ತದೆ. ಇವೆರಡರಿಂದಲೂ ಮನಸ್ಸು ಶಾಂತವಿರಲಾರದು. ಆದುದರಿಂದ ಧ್ಯಾನ ಯೋಗಾದಿ ಸಾಧನೆಯನ್ನು ಮಾಡುವ ಸಾಧಕನು ಒಂಟಿಯಾಗಿ ನಿರ್ಜನ ಪ್ರದೇಶದಲ್ಲಿರಬೇಕು.
೨೧. ಶಸ್ತ್ರಕಾರ (ಶಸ್ತ್ರಗಳನ್ನು ತಯಾರಿಸುವವನು) : ಒಮ್ಮೆ ಓರ್ವ ಶಸ್ತ್ರಕಾರನು ಏಕಾಗ್ರಚಿತ್ತದಿಂದ ಬಾಣದ ಅಲಗುಗಳನ್ನು ತಯಾರಿಸುತ್ತಿದ್ದನು. ಆಗ ಅವನ ಸಮೀಪದಿಂದ ರಾಜನ ಸವಾರಿಯು ಸಡಗರದಿಂದ ಸರಂಜಾಮುಗಳೊಂದಿಗೆ ಹೋಯಿತು. ನಂತರ ಒಬ್ಬ ಮನುಷ್ಯನು ಬಂದು ‘ಈ ಮಾರ್ಗದಿಂದ ರಾಜನ ಮೆರವಣಿಗೆಯು ಹೋದದ್ದನ್ನು ನೀವು ನೋಡಿದಿರಾ ? ಎಂದು ಕೇಳಿದನು. ಆಗ ಆ ಶಸ್ತ್ರಕಾರನು ‘ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದರಿಂದ ನನಗೇನೂ ಕಾಣಿಸಲಿಲ್ಲ ಎಂದನು. ಈ ಶಸ್ತ್ರಕಾರನಂತೆ ಮುಮುಕ್ಷುವು ಎಲ್ಲ ಇಂದ್ರಿಯಗಳನ್ನೂ ಈಶ್ವರನಲ್ಲಿ ಲೀನಗೊಳಿಸಿ ಧ್ಯಾನವನ್ನು (ಸಾಧನೆಯನ್ನು) ಮಾಡಬೇಕು.
೨೨. ಸರ್ಪ : ಎರಡು ಸರ್ಪಗಳು ಎಂದಿಗೂ ಒಟ್ಟಿಗೆ ಇರುವುದಿಲ್ಲ ಅಥವಾ ಒಟ್ಟಿಗೆ ತಿರುಗಾಡುವುದಿಲ್ಲ. ಅವು ಶಬ್ದವನ್ನು ಮಾಡದೇ ಜಾಗ್ರತೆಯಿಂದ ತಿರುಗಾಡುತ್ತವೆ. ತಮಗಾಗಿ ಮನೆಯನ್ನು ನಿರ್ಮಿಸದೆ ಯಾರದಾದರೂ ಮನೆಯಲ್ಲಿ ಹೋಗಿ ಇರುತ್ತವೆ. ಅವು ಬಹಿರಂಗವಾಗಿ ತಿರುಗಾಡುವುದಿಲ್ಲ, ಪ್ರಮಾದವಿಲ್ಲದೆ ನಿಂದನೆಯನ್ನೂ ಮಾಡುವುದಿಲ್ಲ ಮತ್ತು ಅಪಕಾರ ಮಾಡದ ಹೊರತು ಯಾರ ಮೇಲೆಯೂ ಕೋಪಿಸಿಕೊಳ್ಳುವುದಿಲ್ಲ. ಹಾಗೆಯೇ ಯಾವಾಗಲೂ ಇಬ್ಬರು ಬುದ್ಧಿವಂತರು ಒಟ್ಟಿಗೆ ತಿರುಗಾಡಬಾರದು, ಮಿತವಾಗಿ ಮಾತನಾಡಬೇಕು. ಯಾರೊಂದಿಗೂ ಜಗಳ ಮಾಡಬಾರದು, ವಿವೇಕದಿಂದ ವರ್ತಿಸಬೇಕು, ಸಭೆ ಕರೆದು ಭಾಷಣ ಮಾಡಬಾರದು ಮತ್ತು ಇರುವುದಕ್ಕಾಗಿ ಮನೆಯನ್ನು ಕಟ್ಟದೇ ಎಲ್ಲಿಯಾದರೂ ಇದ್ದು ಆಯುಷ್ಯವನ್ನು ಕಳೆಯಬೇಕು. ಇರುವುದಕ್ಕೆ ಮನೆಯನ್ನು ಕಟ್ಟಿದರೆ ಅದರ ಅಭಿಮಾನ ಉಂಟಾಗುತ್ತದೆ ಮತ್ತು ಅದರ ಲೋಭವೂ ಉಂಟಾಗುತ್ತದೆ.
೨೩. ಜೇಡ : ಜೇಡವು ತನ್ನ ನಾಭಿಯಿಂದ ಎಳೆಗಳನ್ನು ತೆಗೆದು, ಅದರಿಂದ ಮನೆಯನ್ನು ನಿರ್ಮಿಸುತ್ತದೆ ಮತ್ತು ಹಗಲೂ ರಾತ್ರಿ ಅದರಲ್ಲಿ ಆಟವಾಡುತ್ತದೆ. ಮುಂದೆ ಮನಸ್ಸಿಗೆ ಬಂದಾಗ ಆ ಮನೆಯನ್ನು ನುಂಗಿ ಸ್ವತಂತ್ರವಾಗುತ್ತದೆ. ಹಾಗೆಯೇ ಈಶ್ವರನು ತನ್ನ ಇಚ್ಛೆಯಂತೆ ಜಗತ್ತನ್ನು ನಿರ್ಮಾಣ ಮಾಡಿ ಅದರೊಂದಿಗೆ ವಿವಿಧ ಆಟಗಳನ್ನು ಆಡುತ್ತಾನೆ. ಮುಂದೆ ಮನಸ್ಸಿಗೆ ಬಂದಾಗ ತನ್ನ ಇಚ್ಛೆಯಂತೆ ಅದನ್ನು ನಾಶ ಮಾಡಿ ಒಂಟಿಯಾಗಿರುತ್ತಾನೆ. ಹೇಗೆ ಜೇಡವು ಪುನಃ ಪುನಃ ಎಳೆಗಳನ್ನು ತೆಗೆದು ಮನೆಯನ್ನು ತಯಾರಿಸಬಲ್ಲದೋ, ಹಾಗೆಯೇ ಈಶ್ವರನು ಕೂಡ ತನ್ನ ಇಚ್ಛೆಯಂತೆ ಜಗತ್ತನ್ನು ಉತ್ಪನ್ನ ಮಾಡಿ ಅದನ್ನು ತನ್ನಲ್ಲಿಯೇ ಲಯ ಗೊಳಿಸಿ ಮತ್ತೆ ಮನಸ್ಸಿಗೆ ಬಂದಾಗ ಅದನ್ನು ಮೊದಲಿ ನಂತೆಯೇ ನಿರ್ಮಿಸಬಲ್ಲನು. ಆದುದರಿಂದ ಜಗತ್ತಿ ನಲ್ಲಿನ ಘಟನೆಗಳಿಗೆ ಮಹತ್ವ ಕೊಡಬಾರದು.
೨೪. ಕಣಜ : ಹೇಗೆ ಭ್ರಮರವನ್ನು ಧ್ಯಾನಿಸುವ ಕೀಟವು ತಾನೇ ಭ್ರಮರವಾಗುತ್ತದೆಯೋ, ಹಾಗೆಯೇ ಏಕನಿಷ್ಠತೆಯಿಂದ ಪರಮಾತ್ಮತತ್ತ್ವದ ಚಿಂತನೆ ಮಾಡುವ ಯೋಗಿಯು ಪರಮಾತ್ಮ ಸ್ವರೂಪನಾಗುತ್ತಾನೆ.
(ಆಧಾರ : ವಿವರವಾದ ಮಾಹಿತಿಗಾಗಿ ಓದಿ – ಸನಾತನ ನಿರ್ಮಿತ ಗ್ರಂಥ ‘ದತ್ತ)
Excellent information
ಬಹಳ ಆತ್ಮಆನಂದದ ವಿಚಾರ. ಉಪಕಾರ ಆಯ್ತು. ಧನ್ಯವಾದಗಳು. 🙏🌸🌹
I like it
🚩🙏🙏🙏🚩