ಪ್ರತಿಕ್ರಿಯೆ ಎಂದರೆ ಏನು ? ಮತ್ತು ಅದರ ಮೂಲ ಕಾರಣ

ದೇವದ ಆಶ್ರಮದಲ್ಲಿನ ಸಾಧಕರಾದ ಶ್ರೀ. ಅಶೋಕ ಲಿಮಕರ ಇವರ ‘ಪ್ರತಿಕ್ರಿಯೆಗಳು ಬರುವುದು’ ಈ ವಿಷಯದ ಕುರಿತು ಆಗಿರುವ ವಿಚಾರ ಮಂಥನ

          ೧. ಪ್ರತಿಕ್ರಿಯೆ ಎಂದರೆ ಏನು ? ಮತ್ತು ಅದರ ಮೂಲ ಕಾರಣ

ಶ್ರೀ ಅಶೋಕ ಲಿಮಕರ
ಶ್ರೀ. ಅಶೋಕ ಲಿಮಕರ

ಅ. ‘ಪ್ರತಿಕ್ರಿಯೆ ಎಂದರೆ ಪ್ರಸಂಗ ಮತ್ತು ವ್ಯಕ್ತಿಗಳ ಬಗ್ಗೆ ವ್ಯಕ್ತಪಡಿಸಿದ ಅಯೋಗ್ಯ ಹೇಳಿಕೆ.
ಆ. ಈ ಹೇಳಿಕೆಗಳು ವ್ಯಕ್ತ ಅಥವಾ ಅವ್ಯಕ್ತ ಸ್ವರೂಪದಲ್ಲಿರುತ್ತವೆ.
ಇ. ಪ್ರತಿಕ್ರಿಯೆಯು ತೀವ್ರ ಅಹಂನ ಪ್ರಕಟೀಕರಣವಾಗಿದೆ.
ಈ. ‘ಸಿಟ್ಟು ಬರುವುದು ಪ್ರತಿಕ್ರಿಯೆ ವ್ಯಕ್ತವಾಗುವುದರ ಹಿಂದಿನ ಮೂಲ ಕಾರಣವಾಗಿದೆ.

೨. ಪ್ರತಿಕ್ರಿಯೆ (ಸಿಟ್ಟು) ಬರುವುದರ ಪ್ರಕ್ರಿಯೆ

ಅ. ತಮ್ಮ ಮನಸ್ಸಿನ ವಿರುದ್ಧ ಏನಾದರೂ ಘಟಿಸುವುದು, ತಿಳಿಯುವುದು ಅಥವಾ ಕೇಳಿಸುವುದು.
ಆ. ಸಿಟ್ಟಿನ ಸಂಸ್ಕಾರ ಬಹಳ ದೃಢವಾಗಿರುತ್ತದೆ. ಅದು ಜನ್ಮ ಜನ್ಮಾಂತರದ್ದಾಗಿರುತ್ತದೆ. ಆದುದರಿಂದ ಮನಸ್ಸು ಸ್ವಲ್ಪವೂ ಹಿಂದಕ್ಕೆ ಸರಿಯುವುದಿಲ್ಲ.
ಇ. ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.
ಈ. ಇತರರು ಹೇಳುವುದನ್ನು ಕೇಳುವ ಸ್ಥಿತಿಯಿರುವುದಿಲ್ಲ.
ಉ. ಇತರ ಸಾಧಕರು ಮಾತನಾಡುವಾಗ ಅವರ ಸಂಪೂರ್ಣ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ಸಂಯಮವೂ ಇರುವುದಿಲ್ಲ.
ಊ. ಒಂದು ವಾಕ್ಯವನ್ನು ಕೇಳಿದ ಕೂಡಲೇ ‘ನನ್ನ ಮಾತುಗಳು ಹೇಗೆ ಸರಿಯಾಗಿವೆ ಎಂಬುದರ ಸ್ಪಷ್ಟೀಕರಣ ಪ್ರಾರಂಭವಾಗುತ್ತದೆ.
ಎ. ಯಾವುದಾದರೊಂದು ಸಂಗತಿ ಮನಸ್ಸಿಗೆ ಒಪ್ಪಿಗೆಯಾಗದಿದ್ದರೆ, ಮನಸ್ಸಿನಲ್ಲಿ ವಿವಿಧ ಪ್ರತಿಕ್ರಿಯೆಗಳು ಬರುತ್ತವೆ.

೩. ಪ್ರತಿಕ್ರಿಯೆಗಳ ಸ್ತರಗಳು

ಪ್ರತಿಕ್ರಿಯೆಗಳ ಸ್ತರವು ವಿಷಯ, ವ್ಯಕ್ತಿ ಮತ್ತು ಸ್ಥಳ ಇವುಗಳಿಗನುಸಾರ ಹೆಚ್ಚು-ಕಡಿಮೆಯಿರುತ್ತದೆ.

೪. ಪ್ರತಿಕ್ರಿಯೆಗಳು ಎಲ್ಲಿ ವ್ಯಕ್ತವಾಗುತ್ತವೆ ಎಂಬುದರ ಅಧ್ಯಯನ ಮಾಡಿದರೆ ಪ್ರತಿಕ್ರಿಯೆ ವ್ಯಕ್ತಪಡಿಸುವವನಿಗೆ ಸ್ಥಳ, ಕಾಲ ಮತ್ತು ವ್ಯಕ್ತಿಗಳ ಕುರಿತು ಯಾವುದೇ ನಿರ್ಬಂಧ ಇರುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ.

೫. ಪ್ರತಿಕ್ರಿಯೆಗಳಿಂದ ಆಗುವ ಪರಿಣಾಮ

೫. ಅ. ಪ್ರತಿಕ್ರಿಯೆಯಲ್ಲಿನ ಸ್ಪಂದನಗಳ ಸೂಕ್ಷ್ಮ-ದೇಹದ ಮೇಲಾಗಿರುವ ಪರಿಣಾಮಗಳನ್ನು ನಾಶಗೊಳಿಸಲು ಸಂಬಂಧಿತ ವ್ಯಕ್ತಿಯ ಸಾಧನೆ ವ್ಯಯವಾಗುತ್ತದೆ : ಪ್ರತಿಕ್ರಿಯೆ ಕೆಲವೊಮ್ಮೆ ವ್ಯಕ್ತವಾಗುತ್ತದೆ ಮತ್ತು ಇನ್ನು ಕೆಲವೊಮ್ಮೆ ಮನಸ್ಸಿನಲ್ಲಿಯೇ ಉಳಿಯುತ್ತದೆ; ಆದರೆ ವ್ಯಕ್ತ ಅಥವಾ ಅವ್ಯಕ್ತ ಹೀಗೆ ಎರಡೂ ಪ್ರಕ್ರಿಯೆಗಳ ಪರಿಣಾಮವು ಕಡಿಮೆಯೆಂದರೂ ಮೂರು ಜನರ ಮೇಲಾಗುತ್ತದೆ. ಪ್ರತಿಕ್ರಿಯೆ ವ್ಯಕ್ತಪಡಿಸುವವನು, ಪ್ರತಿಕ್ರಿಯೆಯನ್ನು ಕೇಳುವವನು ಹಾಗೂ ಯಾರ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಲಾಗುತ್ತದೆಯೋ ಆ ವ್ಯಕ್ತಿ. ಮೂವರ ಲಿಂಗದೇಹಗಳ ಮೇಲೆ ಪ್ರತಿಕ್ರಿಯೆಯ ಸ್ಪಂದನಗಳಿಂದಾಗುವ ದುಷ್ಪರಿಣಾಮವನ್ನು ತೊಳೆದು ಹಾಕಲು ಮೂವರಿಗೂ ಸಾಧನೆಯನ್ನು ವ್ಯಯಿಸಬೇಕಾಗುತ್ತದೆ. ಪ್ರತಿಕ್ರಿಯೆ ವ್ಯಕ್ತಪಡಿಸುವವನಿಗೆ ಮಾತ್ರ ಹೆಚ್ಚು ಪಾಪ ತಗಲುತ್ತದೆ.

೫. ಆ. ನಿಷ್ಕರ್ಷವನ್ನು ತೆಗೆದು ಪ್ರತಿಕ್ರಿಯೆ ವ್ಯಕ್ತಪಡಿಸುವುದೆಂದರೆ ಆತ್ಮಘಾತ ಮಾಡಿಕೊಂಡಂತೆ : ಯಾವುದಾದರೊಂದು ವಿಷಯ ಮತ್ತು ವ್ಯಕ್ತಿಗೆ ಸಂಬಂಧವಿಲ್ಲದಿರುವಾಗ ವ್ಯಕ್ತಪಡಿಸಿದ ಪ್ರತಿಕ್ರಿಯೆಯು ಅಧಿಕ ಅಪಾಯಕಾರಿಯಾಗಿರುತ್ತದೆ. ಕಾರಣ ಈ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುವುದೆಂದರೆ ನಾವಾಗಿಯೇ ಕಲ್ಲೆಸೆದು ನಮ್ಮ ಮೈಮೇಲೆ ಕೆಸರೆರಚಿಕೊಂಡಂತಾಗುತ್ತದೆ.

೫. ಇ. ವ್ಯಾವಹಾರಿಕ, ಮಾನಸಿಕ, ಹಾಗೆಯೇ ಇತರ ಅಭಿಪ್ರಾಯ ಭೇದಗಳಿಂದ ಪ್ರತಿಕ್ರಿಯೆಯ ಪ್ರಮಾಣ ವೃದ್ಧಿಸುತ್ತದೆ : ಎಲ್ಲಿಯ ವರೆಗೆ ಒಂದೇ ಸ್ತರದಲ್ಲಿನ ಇಬ್ಬರು ವ್ಯಕ್ತಿಗಳಲ್ಲಿ ಆಧ್ಯಾತ್ಮಿಕ ಸುಸಂವಾದ ವಾಗುತ್ತಿರುತ್ತದೆಯೋ, ಆಗ ಪ್ರತಿಕ್ರಿಯೆಗಳ ಪ್ರಮಾಣ ಅಲ್ಪವಿರುತ್ತದೆ. ವ್ಯಾವಹಾರಿಕ ಮತ್ತು ಮಾನಸಿಕ ಸ್ತರದ ಸಂವಾದದಲ್ಲಿ ಪ್ರತಿಕ್ರಿಯೆಗಳು ಅಧಿಕ ಪ್ರಮಾಣದಲ್ಲಿ ವ್ಯಕ್ತವಾಗುತ್ತವೆ. ಯಾವಾಗ ಇಬ್ಬರು ಒಂದೇ ಹಂತದಲ್ಲಿ (ಅಂದರೆ ವಯಸ್ಸು ಮತ್ತು ಜ್ಞಾನದ ಸ್ತರದಲ್ಲಿ) ಮಾತ ನಾಡುತ್ತಿರುತ್ತಾರೆಯೋ, ಆಗ ಒಬ್ಬರಿಗೊಬ್ಬರ ವಿಷಯದಲ್ಲಿ ಮತ್ತು ಇತರ ವ್ಯಕ್ತಿಗಳ ವಿಷಯದಲ್ಲಿನ ಪ್ರತಿಕ್ರಿಯೆಗಳು ಕಡಿಮೆ ಪ್ರಮಾಣದಲ್ಲಿ ವ್ಯಕ್ತವಾಗುತ್ತವೆ. ಮಾತನಾಡುವ ಮತ್ತು ಕೇಳುವ ವ್ಯಕ್ತಿ ಬೇರೆ ಬೇರೆ ಸ್ತರದಲ್ಲಿದ್ದರೆ, ಒಬ್ಬರಿಗೊಬ್ಬರು ವ್ಯಕ್ತಪಡಿಸುವ ಪ್ರತಿಕ್ರಿಯೆಗಳ ಪ್ರಮಾಣ ಬಹಳ ಹೆಚ್ಚಿರುತ್ತದೆ. ಈ ಇಬ್ಬರು ವ್ಯಕ್ತಿಗಳು ಮೂರನೇ ವ್ಯಕ್ತಿಯ ವಿಷಯದಲ್ಲಿಯೂ ಅಷ್ಟೇ ತೀವ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾರೆ.

೫ ಈ. ವ್ಯಕ್ತ ಪ್ರತಿಕ್ರಿಯೆಯಿಂದ ಎದುರಿಗಿನ ವ್ಯಕ್ತಿಯ ಮನಸ್ಸಿನ ಮೇಲೆ, ಮತ್ತು ಅವ್ಯಕ್ತ ಪ್ರತಿಕ್ರಿಯೆಯಿಂದ ಸಂಬಂಧಪಟ್ಟವನ ಮೇಲೆ ಸೂಕ್ಷ್ಮದಿಂದ ಪ್ರತಿಕ್ರಿಯೆಯ ಸ್ಪಂದನಗಳ ಪರಿಣಾಮವಾಗುತ್ತದೆ : ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ (ಮಾತಿನಿಂದ, ಬರವಣಿಗೆಯಿಂದ, ಶರೀರದ ಚಲನವಲನದಿಂದ, ಹಾವಭಾವ ಇತ್ಯಾದಿ ಮಾಧ್ಯಮಗಳಿಂದ) ಎದುರಿಗಿರುವ ಅಥವಾ ಇತರ ವ್ಯಕ್ತಿಗೆ ತಿಳಿಯುತ್ತದೆ. ಇದರಿಂದ ಎದುರಿಗಿರುವವನ ಮನಸ್ಸಿನ ಮೇಲೆ ಆ ಪ್ರತಿಕ್ರಿಯೆಯ ಪರಿಣಾಮವಾಗುತ್ತದೆ. ಅವ್ಯಕ್ತ ಪ್ರತಿಕ್ರಿಯೆಯು ಎದುರಿಗಿರುವವನಿಗೆ ತಿಳಿಯದಿದ್ದರೂ, ಅದರ ಸೂಕ್ಷ್ಮ ಪರಿಣಾಮವು ಎದುರಿಗಿನ ವ್ಯಕ್ತಿಯ ಮೇಲೆ ಮತ್ತು ಯಾರ ಕುರಿತು ಪ್ರತಿಕ್ರಿಯೆ ನೀಡಲಾಗಿರುತ್ತದೆಯೋ ಆ ವ್ಯಕ್ತಿಯ ಮೇಲೆಯೂ ಆಗುತ್ತದೆ.

೫.ಉ ಪೂರ್ವಾಗ್ರಹದಿಂದ ವ್ಯಕ್ತಪಡಿಸಿದ ಪ್ರತಿಕ್ರಿಯೆಯಿಂದ ಪರಸ್ಪರ ಸಂಬಂಧ ಹಾಳಾಗುತ್ತದೆ : ಯಾವುದಾದರೊಬ್ಬ ವ್ಯಕ್ತಿಯ ಕುರಿತು ಪೂರ್ವಾಗ್ರಹವಿದ್ದರೆ, ಪೂರ್ವಾಗ್ರಹದ ಸ್ತರಕ್ಕನುಸಾರ ಹೆಚ್ಚು-ಕಡಿಮೆ ತೀವ್ರತೆಯ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಲಾಗುತ್ತದೆ. ಇದರಿಂದ ಆ ಇಬ್ಬರು ವ್ಯಕ್ತಿಗಳಲ್ಲಿರುವ ಸಂಬಂಧವು ಸುಧಾರಿಸುವ ಬದಲು ಇನ್ನಷ್ಟು ದೂರವಾಗುತ್ತದೆ. ಇಂತಹ ವ್ಯಕ್ತಿಗಳಲ್ಲಿ ಪರಸ್ಪರರತ್ತ ನೋಡುವ ದೃಷ್ಟಿಕೋನ ಸಕಾರಾತ್ಮಕವಾಗಿರದೇ ನಕಾರಾತ್ಮಕವಾಗಿರುತ್ತದೆ.

೫. ಊ. ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ವೃದ್ಧಿಸುವುದು: ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವುದರಿಂದ ‘ ಪರಸ್ಪರರಲ್ಲಿರುವ ಕೊಡು-ಕೊಳ್ಳುವಿಕೆಯ ಪ್ರಮಾಣ ವೃದ್ಧಿಸುತ್ತದೆ ಎಂದು ಅನಿಸುತ್ತದೆ ಎಲ್ಲಿಯ ವರೆಗೆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೊಬ್ಬರ ಬಗ್ಗೆ ಪ್ರೀತಿ, ಸ್ನೇಹ, ಸಾಮೀಪ್ಯತೆ ಅನಿಸುವುದಿಲ್ಲವೋ, ಅಲ್ಲಿಯವರೆಗೆ ಪರಸ್ಪರರಲ್ಲಿ ಕೊಡು-ಕೊಳ್ಳುವಿಕೆಯನ್ನು ನ್ಯೂನಗೊಳಿಸುವ ಅವಕಾಶ ಬಹಳ ಕಡಿಮೆಯಿರುತ್ತದೆ.

೬. ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವುದರಿಂದಾಗುವ ಹಾನಿ

ಅ. ಮನುಷ್ಯನು ದೇವರಿಂದ ದೂರಹೋಗುತ್ತಾನೆ.
ಆ. ಅವನಲ್ಲಿರುವ ಅಹಂಕಾರ ಮತ್ತಷ್ಟು ಬಲಗೊಳ್ಳುತ್ತದೆ.
ಇ. ಅವನ ಸುತ್ತಲೂ ರಜ-ತಮದ ಆವರಣ ವೃದ್ಧಿಸುತ್ತದೆ.
ಈ. ಅವನಿಗೆ ಯೋಗ್ಯ-ಅಯೋಗ್ಯ ತಿಳಿಯುವುದಿಲ್ಲ.
ಉ. ಯಾರಾದರೂ ಯೋಗ್ಯವಾದುದನ್ನು ಹೇಳಿದರೂ, ಅದನ್ನು ಕೇಳಿಸಿಕೊಳ್ಳದೇ ಹೇಳುವವನನ್ನೇ ದೂಷಿಸಲಾಗುತ್ತದೆ.
ಊ. ಪ್ರತಿಕ್ರಿಯೆ ವ್ಯಕ್ತ ಪಡಿಸುವವನು ಮತ್ತಷ್ಟು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸತೊಡಗಿದರೆ ಅವನ ಪಾಪದ ಬೆಟ್ಟ ಹೆಚ್ಚಾಗುತ್ತದೆ.
ಎ. ಅವನಿಂದ ಒಂದರ ಹಿಂದೆ ಒಂದರಂತೆ ತಪ್ಪುಗಳಾಗುತ್ತವೆ ಮತ್ತು ಅವನು ದೇವರಿಂದ ಬಹಳ ದೂರಹೋಗುತ್ತಾನೆ.
ಏ. ಪ್ರತಿಕ್ರಿಯೆ ವ್ಯಕ್ತಪಡಿಸುವ ವ್ಯಕ್ತಿ ದೇವರಿಂದ, ಹಾಗೆಯೇ ಸಾಧಕರು ಮತ್ತು ಕುಟುಂಬದವರಿಂದಲೂ ದೂರ ಹೋಗುತ್ತಾನೆ. ಅವನಿಗೆ ಯಾರ ಸಾಮಿಪ್ಯವೂ ದೊರೆಯುವುದಿಲ್ಲ.
ಐ. ಅವನಲ್ಲಿ ಪ್ರೇಮಭಾವ ಕಡಿಮೆಯಿರುತ್ತದೆ. ಇದರಿಂದ ಅವನ ಬಳಿ ಯಾರೂ ಬರುವುದಿಲ್ಲ.
ಒ. ‘ನನಗೆ ಯಾರೂ ಇಲ್ಲ ಈ ವಿಚಾರದಿಂದಲೇ ಅವನು ತೀವ್ರ ಚಿಂತೆಗೊಳಗಾಗುತ್ತಾನೆ.
ಓ. ಆ ವ್ಯಕ್ತಿಯು ಜೀವನಕ್ಕೆ ಬೇಸರಗೊಳ್ಳುತ್ತಾನೆ. ಇಂತಹ ವ್ಯಕ್ತಿಗೆ ‘ಜೀವನವೆಂದರೇನು ತಿಳಿದಿರುವುದಿಲ್ಲ.
ಔ. ‘ಪ್ರತಿಕ್ರಿಯೆಗಳು ಬರುವುದು ಈ ದೋಷದಿಂದ ಜೀವನದಲ್ಲಿನ ಆನಂದವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ಮತ್ತು ಸಂಬಂಧಿತ ವ್ಯಕ್ತಿ ಜನನ-ಮರಣದ ಚಕ್ರದಲ್ಲಿ ಸಿಲುಕುತ್ತಾನೆ : ಜೀವನವೆಂದರೆ ಝುಳು ಝುಳು ಹರಿಯುವ ಝರಿಯಾಗಿದೆ. ಈ ಝರಿಯು ತನ್ನ ದಡದ ಮೇಲಿರುವ ಗಿಡಮರಗಳಿಗೆ, ಜೀವಗಳಿಗೆ ನೀರುಣಿಸುತ್ತದೆ. ಅವುಗಳ ಜೀವನವನ್ನು ಅರಳಿಸುತ್ತದೆ. ಅವುಗಳಿಗೆ ಆನಂದವಾಗಿರುವುದನ್ನು ನೋಡಿ ತಾನೂ ಆನಂದಗೊಳ್ಳುತ್ತದೆ. ಇತರರಿಗಾಗಿ ಬದುಕುವುದರಲ್ಲಿ, ತ್ಯಾಗ ಮಾಡುವುದರಲ್ಲಿ, ಜೀವನವನ್ನು ಸಮರ್ಪಿಸುವುದರಲ್ಲಿ ಆನಂದವನ್ನು ನೀಡುವುದು ಮತ್ತು ಆನಂದವನ್ನು ಪಡೆಯುವುದು ಈ ವಿಷಯಗಳು ಪ್ರತಿಕ್ರಿಯೆ ವ್ಯಕ್ತಪಡಿಸುವ ವ್ಯಕ್ತಿಯ ತಲೆಯಲ್ಲಿ ಹೋಗುವುದಿಲ್ಲ. ಆದುದರಿಂದ ಆ ವ್ಯಕ್ತಿ ಜೀವನದ ನಿಜವಾದ ಆನಂದವನ್ನು ಅನುಭವಿಸಲು, ಅದರ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಮುಂದಿನ ಜನ್ಮ, ಅದರ ಮುಂದಿನ ಜನ್ಮ ಹೀಗೆ ಈ ಜನ್ಮ-ಮರಣದ ಚಕ್ರದಲ್ಲಿ ಸಿಲುಕಿಕೊಳ್ಳುತ್ತಾನೆ.

೭. ಪ್ರತಿಕ್ರಿಯೆಗಳು ಬರಬಾರದೆಂದು ಏನು ಮಾಡಬೇಕು ?

೭. ಅ. ಆಳವಾಗಿ ವಿಚಾರ ಮಾಡಬೇಕು
೧. ನಾನು ಯಾರು ?
೨. ದೇವರು ನನ್ನನ್ನೇಕೆ ಜನ್ಮಕ್ಕೆ ಹಾಕಿದ್ದಾನೆ ?
೩. ಇಲ್ಲಿ ನನ್ನ ಧರ್ಮ ಮತ್ತು ಕರ್ತವ್ಯ ಏನಿದೆ ?
೪. ದೇವರು ಸೃಷ್ಟಿ ನಿರ್ಮಾಣ ಮಾಡುವ ಉದ್ದೇಶವೇನು ?
೫. ಪ್ರತಿಯೊಂದು ಜೀವದ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ದೇವರು ಈ ಸೃಷ್ಟಿಯ ಮಾಧ್ಯಮದಿಂದ ಏಕೆ ತೆಗೆದುಕೊಂಡಿದ್ದಾನೆ ?
ಈ ಎಲ್ಲ ಪ್ರಶ್ನೆಗಳ ಅಧ್ಯಯನ ಮಾಡಲು ಎಲ್ಲ ಜೀವಗಳಲ್ಲಿ ಮನುಷ್ಯಜೀವಿಗೆ ಸ್ವಲ್ಪ ಅಧಿಕ ಬುದ್ಧಿಮತ್ತೆಯನ್ನು ನೀಡಿದ್ದಾನೆ. ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು, ಒಳ್ಳೆಯದನ್ನು ಮಾಡುವುದರಿಂದ ಮತ್ತು ಕೆಟ್ಟದ್ದು ಮಾಡುವುದರಿಂದ ಏನು ಪರಿಣಾಮವಾಗುತ್ತದೆ. ಎನ್ನುವುದನ್ನು ವಿಚಾರ ಮಾಡುವ ಬುದ್ಧಿ, ಕ್ಷಮತೆಯನ್ನು ಮನುಷ್ಯನಿಗೆ ನೀಡಿದ್ದಾನೆ. ಅದನ್ನು ಉಪಯೋಗಿಸಿ ಸ್ವಧರ್ಮದ, ಕರ್ತವ್ಯದ ಆಚರಣೆಯನ್ನು ಮಾಡಿ ದೇವರಿಗೆ ಅಪೇಕ್ಷೆಯಿರುವಂತೆ ನಡೆದುಕೊಳ್ಳುವುದರಿಂದ ದೇವರು ಅವನನ್ನು ತನ್ನ ಸಮೀಪಕ್ಕೆ ಕರೆದು ಕೊಳ್ಳುತ್ತಾನೆ. ತನ್ನ ಚರಣಗಳ ಬಳಿ ಇಟ್ಟುಕೊಳ್ಳುತ್ತಾನೆ. ಅವನನ್ನು ಜನ್ಮ-ಮರಣಗಳ ಚಕ್ರದಿಂದ ಮುಕ್ತಗೊಳಿಸುತ್ತಾನೆ.

೭. ಆ. ಯೋಗ್ಯ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು

೧. ನಾನು ಭಗವಂತನವನಾಗಿದ್ದೇನೆ. ಪ್ರತಿಯೊಂದು ಜೀವವೂ ಭಗವಂತನದ್ದೇ ಆಗಿದೆ. ಎಲ್ಲರಿಗೂ ಭಗವಂತನ ಬಳಿಗೆ ಹೋಗುವುದಿದೆ.
೨. ಒಬ್ಬರಿಗೊಬ್ಬರು ಸಹಕರಿಸುವ ನೀತಿಯನ್ನು ಅನುಸರಿಸಿದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವ ವಿಚಾರವೇ ಮನಸ್ಸಿನಲ್ಲಿ ಮೂಡಲಾರದು.
೩. ಪ್ರತಿಯೊಂದು ಜೀವವೂ ಭಗವಂತನ ರೂಪವೇ ಆಗಿದೆ ಮತ್ತು ನನ್ನ ಆ ಜೀವದೊಂದಿಗಿನ ಮಾತುಕತೆ, ನಡವಳಿಕೆ ಎಲ್ಲವೂ ಭಗವಂತನೊಂದಿಗಿನದ್ದೇ ಆಗಿದೆ.
೪. ಎಲ್ಲರೂ ನನ್ನ ಮನಸ್ಸಿನಂತೆ ನಡೆದುಕೊಳ್ಳಬೇಕು ಎನ್ನುವ ವಿಚಾರವನ್ನು ದೂರಗೊಳಿಸಬೇಕಾಗಿದೆ.
೫. ಸೃಷ್ಟಿ ಮತ್ತು ಸೃಷ್ಟಿಯಲ್ಲಿರುವ ವಸ್ತುಗಳನ್ನು, ಜೀವಗಳನ್ನು ನಾನು ನಿರ್ಮಾಣ ಮಾಡಿಲ್ಲ. ಅವನು ನನ್ನ ಅಪೇಕ್ಷೆಯಂತೆ ನಡೆದು ಕೊಳ್ಳಬೇಕು, ಕೃತಿಗಳನ್ನು ಮಾಡಬೇಕು ಎಂದು ವಿಚಾರ ಮಾಡುವ ಅಧಿಕಾರ ನನಗಿಲ್ಲ.
೬. ಪರಿಸ್ಥಿತಿಯನ್ನು ಸ್ವೀಕರಿಸಿ ಸಕಾರಾತ್ಮಕವಾಗಿರಲು ಪ್ರಯತ್ನಿಸಿದಲ್ಲಿ, ಅಲ್ಲಿ ಪ್ರತಿಕ್ರಿಯೆಗೆ ಅವಕಾಶವೇ ಇರಲಾರದು.
೭. ಸ್ವೀಕರಿಸುವ ಪ್ರವೃತ್ತಿಯನ್ನು ಹೆಚ್ಚಿಸಿದರೆ ಅಹಂ ಕಡಿಮೆಯಾಗುವುದು, ಹಾಗೆಯೇ ಪ್ರತಿಕ್ರಿಯೆಗಳೂ ಕಡಿಮೆಯಾಗುವವು.

– ಶ್ರೀ. ಅಶೋಕ ಲಿಮಕರ, ಸನಾತನ ಆಶ್ರಮ, ದೇವದ, ಪನವೇಲ.

 

Leave a Comment