‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’ ಶರನ್ನವರಾತ್ರಿಯು ಹೆಚ್ಚು ಪ್ರಚಲಿತವಿರುವುದರಿಂದ ಇಲ್ಲಿ ಅದರ ಬಗ್ಗೆ ಮಾತ್ರ ವಿವೇಚನೆ ಮಾಡಲಾಗಿದೆ.
ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮೀಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.
ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ?
‘ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ-ವೈಕಲ್ಯಗಳನ್ನು ಮಾಡುತ್ತಾರೆ.
ನವರಾತ್ರಿಯ ಇತಿಹಾಸ
ಅ. ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ಕೊಂದನು.
ಆ. ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.
ನವರಾತ್ರಿಯ ಆಚರಣೆಯ ಮಹತ್ವ
೧. ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.
೨. ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ|‘ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.
ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ
ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯಕ್ಕೆ ಈ ವ್ರತವು ಪ್ರಾರಂಭವಾಗುತ್ತದೆ.
೧. ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ವೇದಿಕೆಯನ್ನು (ಪೀಠವನ್ನು) ತಯಾರಿಸಿ ಅದರ ಮೇಲೆ ಸಿಂಹಾಸನದ ಮೇಲೆ ಕುಳಿತಿರುವ ಅಷ್ಟಭುಜದೇವಿಯನ್ನು ಹಾಗೂ ನವಾರ್ಣವಯಂತ್ರ ವನ್ನು ಸ್ಥಾಪಿಸುತ್ತಾರೆ. ಯಂತ್ರದ ಪಕ್ಕದಲ್ಲಿ ಘಟಸ್ಥಾಪನೆ ಮಾಡಿ ಅದಕ್ಕೂ ದೇವಿಗೂ ವಿಧಿಪೂರ್ವಕ ಪೂಜೆಯನ್ನು ಮಾಡುತ್ತಾರೆ.
೨. ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಘಟಸ್ಥಾಪನೆ ಮತ್ತು ಮಾಲಾಬಂಧನ ಮಾಡಬೇಕು. ಹೊಲದಲ್ಲಿನ ಮಣ್ಣನ್ನು ತಂದು ಅದರಿಂದ ಎರಡು ಬೆರಳುಗಳ ಗಾತ್ರದಷ್ಟು ಚೌಕಾಕಾರ ಮಾಡಿ ಅದರಲ್ಲಿ (ಐದು ಅಥವಾ) ಏಳು ಧಾನ್ಯಗಳನ್ನು ಹಾಕಬೇಕು. ಜೋಳ, ಗೋಧಿ, ಎಳ್ಳು, ಹೆಸರು, ನವಣೆ, ಸಾವಿಕಾಳು (ತೃಣ ಧಾನ್ಯ) ಮತ್ತು ಕಡಲೆ ಇವು ಸಪ್ತಧಾನ್ಯಗಳಾಗಿವೆ.
೩. ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಿಕೆ, ಪಂಚಪಲ್ಲವ, ಪಂಚರತ್ನ ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು.
೪. ಸಪ್ತಧಾನ್ಯ ಮತ್ತು ಕಲಶ ಸ್ಥ್ಥಾಪನೆಯ ವೈದಿಕ ಮಂತ್ರಗಳು ಗೊತ್ತಿಲ್ಲದಿದ್ದರೆ, ಪುರಾಣೋಕ್ತ ಮಂತ್ರಗಳನ್ನು ಹೇಳಬೇಕು. ಅವೂ ಬರದಿದ್ದರೆ ಆಯಾ ವಸ್ತುಗಳ ಹೆಸರು ಹೇಳಿ ‘ಸಮರ್ಪಯಾಮಿ’ ಎಂದು ನಾಮಮಂತ್ರದ ಉಪಯೋಗವನ್ನು ಮಾಡಬೇಕು. ಕಲಶದೊಳಗೆ ತಲುಪುವಂತೆ ಮಾಲೆಯನ್ನು ಕಟ್ಟಬೇಕು.
೫. ಒಂಭತ್ತು ದಿನಗಳವರೆಗೆ ಪ್ರತಿದಿನ ಕುಮಾರಿಯ ಪೂಜೆಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.
೬. ‘ಅಖಂಡ ದೀಪಪ್ರಜ್ವಲನೆ, ಆ ದೇವತೆಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತ ಶತಿಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.
೭. ಭಕ್ತನಿಗೆ ಉಪವಾಸವಿದ್ದರೂ ದೇವತೆಗೆ ಎಂದಿನಂತೆ ಅನ್ನದ ನೈವೇದ್ಯವನ್ನು ಮಾಡಬೇಕು.
೮. ಈ ಕಾಲದಲ್ಲಿನ ಆಚಾರದ ಒಂದು ಉತ್ಕೃಷ್ಟ ಅಂಗವೆಂದು ಶ್ಮಶ್ರೂ ಮಾಡದಿರುವುದು (ಗಡ್ಡ-ಮೀಸೆಗಳ ಕೂದಲು ಮತ್ತು ತಲೆಯ ಕೂದಲನ್ನು ಕತ್ತರಿಸದಿರುವುದು), ಕಠೋರ ಬ್ರಹ್ಮಚರ್ಯ, ಮಂಚ ಮತ್ತು ಹಾಸಿಗೆಯ ಮೇಲೆ ಮಲಗದಿರುವುದು, ಗಡಿಯನ್ನು ಉಲ್ಲಂಘಿಸದಿರುವುದು, ಪಾದರಕ್ಷೆಗಳನ್ನು ಉಪಯೋಗಿಸದಿರುವುದು ಮುಂತಾದ ನಿಯಮಗಳ ಪಾಲನೆಯನ್ನು ಮಾಡುತ್ತಾರೆ.
೯. ನವರಾತ್ರಿಯ ಸಂಖ್ಯೆಗೆ ಒತ್ತುಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ; ಆದರೆ ಶಾಸ್ತ್ರಕ್ಕನುಸಾರ ಕೊನೆಯ ದಿನ ನವರಾತ್ರಿಯ ವಿಸರ್ಜನೆಯಾಗುವುದು ಆವಶ್ಯಕವಾಗಿದೆ. ಆ ದಿನ ಸಮಾರಾಧನೆ (ಭೋಜನಪ್ರಸಾದ) ಆದ ನಂತರ ಸಮಯವಿದ್ದರೆ ಅದೇ ದಿನ ಎಲ್ಲ ದೇವರನ್ನು ತೆಗೆದು ಅಭಿಷೇಕ ಮತ್ತು ಷೋಡಶೋಪಚಾರ ಪೂಜೆಯನ್ನು ಮಾಡಬೆಕು, ಸಮಯವಿಲ್ಲದಿದ್ದರೆ ಮರುದಿನ ಎಲ್ಲ ದೇವರಿಗೂ ಪೂಜಾಭಿಷೇಕಗಳನ್ನು ಮಾಡಬೇಕು.
೧೦. ದೇವಿಯ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಬಿತ್ತಿದ ಸಪ್ತಧಾನ್ಯಗಳ ಸಸಿಗಳನ್ನು ದೇವರಿಗೆ ಅರ್ಪಿಸುತ್ತಾರೆ ಹಾಗೂ ‘ಶಾಕಂಭರಿದೇವಿ’ ಎಂದು ತಿಳಿದು ಸ್ತ್ರೀಯರು ಅವುಗಳನ್ನು ತಲೆಯಲ್ಲಿ ಧರಿಸಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಾರೆ.
೧೧. ನವರಾತ್ರಿಯನ್ನು ಪ್ರಾರಂಭಿಸುವಾಗ ಅಥವಾ ಸಮಾಪ್ತಿ ಮಾಡುವಾಗ ದೇವರ ಉದ್ವಾರ್ಜನೆಯನ್ನು (ಸುಗಂಧಿತ ದ್ರವ್ಯಗಳಿಂದ ಸ್ವಚ್ಛಗೊಳಿಸುವುದು ಮತ್ತು ಲೇಪವನ್ನು ಹಚ್ಚುವುದು) ಅವಶ್ಯ ಮಾಡಬೇಕು. ಉದ್ವಾರ್ಜನೆ ಮಾಡಲು ನಿತ್ಯದಂತೆ ನಿಂಬೆಕಾಯಿ, ಭಸ್ಮ ಮುಂತಾದವುಗಳನ್ನು ಉಪಯೋಗಿಸಬೇಕು. ರಂಗೋಲಿ ಅಥವಾ ಪಾತ್ರೆ ತಿಕ್ಕುವ ಚೂರ್ಣವನ್ನು ಉಪಯೋಗಿಸಬಾರದು.
೧೨. ಕೊನೆಗೆ, ಸ್ಥಾಪಿಸಿದ ಘಟ ಮತ್ತು ದೇವಿಯನ್ನು ವಿಸರ್ಜಿಸಬೇಕು.
೧೩. ನವರಾತ್ರಿ ಅಥವಾ ಇತರ ಧಾರ್ಮಿಕ ವಿಧಿಗಳಲ್ಲಿ ದೀಪವು ಯಾವಾಗಲೂ ಉರಿಯುತ್ತಿರಬೇಕು. ಇದು ಪೂಜಾವಿಧಿಯ ಅಂಗವಾಗಿದೆ. ಆದುದರಿಂದ ದೀಪವು ಗಾಳಿ, ಎಣ್ಣೆ ಕಡಿಮೆಯಾಗುವುದು, ಉರಿದು ಕಪ್ಪಾಗುವುದು ಮುಂತಾದ ಕಾರಣಗಳಿಂದಾಗಿ ನಂದಿದರೆ ಆ ಕಾರಣವನ್ನು ದೂರಗೊಳಿಸಿ ದೀಪವನ್ನು ಪುನಃ ಉರಿಸಬೇಕು ಮತ್ತು ಪ್ರಾಯಶ್ಚಿತ್ತವೆಂದು ಅಧಿಷ್ಠಾನದೇವತೆಯ ೧೦೮ ಅಥವಾ ೧೦೦೮ ರಷ್ಟು ಜಪ ಮಾಡಬೇಕು.
೧೪. ದೇವಿಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು – ‘ಹೇ ದೇವಿ, ನಾವು ಶಕ್ತಿಹೀನರಾಗಿದ್ದೇವೆ, ಅಪರಿಮಿತ ಭೋಗವನ್ನು ಭೋಗಿಸಿ ಮಾಯಾಸಕ್ತರಾಗಿದ್ದೇವೆ. ಹೇ ಮಾತೆ, ನೀನು ನಮಗೆ ಬಲವನ್ನು ನೀಡುವವಳಾಗು, ನಿನ್ನ ಶಕ್ತಿಯಿಂದ ನಾವು ಅಸುರೀ ಪ್ರವೃತ್ತಿಯನ್ನು ನಾಶ ಮಾಡುವಂತಾಗಲಿ.’
ಕೊಡ ಊದುವುದು
ಅಷ್ಟಮಿಗೆ ಸ್ತ್ರೀಯರು ಶ್ರೀಮಹಾಲಕ್ಷ್ಮೀದೇವಿಯನ್ನು ಪೂಜಿಸುತ್ತಾರೆ ಮತ್ತು ಕೊಡ ಊದುತ್ತಾರೆ.
ಪ್ರಾಂತಭೇದ: ಗುಜರಾತಿನಲ್ಲಿ ಮಾತೃಶಕ್ತಿಯ ಪ್ರತೀಕವೆಂದು ನವರಾತ್ರಿಯಲ್ಲಿ ಅನೇಕ ರಂಧ್ರಗಳಿರುವ ಮಡಕೆಯಲ್ಲಿ ದೀಪವನ್ನಿಟ್ಟು ಪೂಜಿಸುತ್ತಾರೆ. ಸ್ತ್ರೀಯ ಸೃಜನಾತ್ಮಕತೆಯ ಪ್ರತೀಕವೆಂದು ಒಂಭತ್ತು ದಿನಗಳ ಕಾಲ ಪೂಜಿಸಲ್ಪಡುವ ‘ದೀಪ ಗರ್ಭ’ದಲ್ಲಿನ ‘ದೀಪ’ ಎನ್ನುವ ಶಬ್ದವು ಲೋಪವಾಗಿ ಗರ್ಭ-ಗರಭೋ-ಗರಬೋ ಅಥವಾ ಗರಬಾ ಎನ್ನುವ ಶಬ್ದವು ಪ್ರಚಲಿತವಾಯಿತು.
ಗರಬಾ ಆಡುವುದು ಎಂದರೇನು ? : ಗರಬಾ ಆಡುವುದಕ್ಕೆ ಹಿಂದೂ ಧರ್ಮದಲ್ಲಿ ಚಪ್ಪಾಳೆಯ ಲಯಬದ್ಧ ನಾದದಲ್ಲಿ ದೇವಿಯ ಭಕ್ತಿರಸಪೂರ್ಣ ಗುಣಗಾನಾತ್ಮಕ ಭಜನೆಯನ್ನು ಮಾಡುವುದು ಎಂದು ಹೇಳುತ್ತಾರೆ.
ಗರಬಾ ನೃತ್ಯವನ್ನು ಎರಡು ಸಲ ಚಪ್ಪಾಳೆಗಳನ್ನು ತಟ್ಟಿ ಆಡಬೇಕೋ ಅಥವಾ ಮೂರು ಸಲ ಚಪ್ಪಾಳೆಗಳನ್ನು ತಟ್ಟಿ ಆಡಬೇಕೋ ? : ಮೂರು ಸಲ ಲಯಬದ್ಧ ಚಪ್ಪಾಳೆಗಳನ್ನು ಬಾರಿಸುತ್ತಾ ದೇವಿಯ ಗುಣಗಾನ ಮಾಡುವುದು ಹೆಚ್ಚು ಸೂಕ್ತವಾಗಿದೆ ಅಲ್ಲದೇ ಇದು ಫಲದಾಯಕ ಸಹ ಆಗಿರುತ್ತದೆ.
ನವರಾತ್ರಿಯ ದಿನಗಳಲ್ಲಿ ಬಿಡಿಸಬೇಕಾದ ರಂಗೋಲಿಗಳು (12 ಚುಕ್ಕೆ, 12 ಸಾಲು)
ಈ ರಂಗೋಲಿಗಳು ದೇವಿಯ ತತ್ತ್ವವನ್ನು ಆಕರ್ಷಿಸುತ್ತವೆ ಮತ್ತು ಪ್ರಕ್ಷೇಪಿಸುತ್ತವೆ.
ದಸರಾ ಹಬ್ಬದ ಮಹತ್ವ
ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.
ನವರಾತ್ರೋತ್ಸವದಲ್ಲಿನ ಅಯೋಗ್ಯ ಪದ್ಧತಿಗಳನ್ನು ತಡೆಗಟ್ಟಿ ಉತ್ಸವದ ಪಾವಿತ್ರ್ಯ ಕಾಪಾಡಿರಿ!
ಹಿಂದೆ ‘ಗರಬಾ’ ನೃತ್ಯದ ಸಮಯದಲ್ಲಿ ದೇವಿಯ, ಕೃಷ್ಣಲೀಲೆಯ ಮತ್ತು ಸಂತರು ರಚಿಸಿದ ಗೀತೆಗಳನ್ನು ಹೇಳಲಾಗುತ್ತಿತ್ತು. ಇಂದು ಭಗವಂತನ ಈ ಸಾಮೂಹಿಕ ನೃತ್ಯೋಪಾಸನೆಗೆ ವಿಕೃತ ಸ್ವರೂಪವು ಬಂದಿದೆ. ಚಲನಚಿತ್ರಗಳಲ್ಲಿನ ಹಾಡುಗಳ ತಾಳದಲ್ಲಿ ಅಶ್ಲೀಲ ಅಂಗವಿಕ್ಷೇಪ ಮಾಡಿ ಗರಬಾವನ್ನು ಆಡಲಾಗುತ್ತದೆ. ಗರಬಾದ ನಿಮಿತ್ತದಿಂದ ವ್ಯಭಿಚಾರವೂ ನಡೆಯುತ್ತದೆ. ಪೂಜಾಸ್ಥಳದಲ್ಲಿ ತಂಬಾಕುಸೇವನೆ, ಮದ್ಯಪಾನ, ಧ್ವನಿಪ್ರದೂಷಣೆ ಮುಂತಾದ ಪದ್ಧತಿಗಳು ನಡೆಯುತ್ತವೆ. ಈ ಅಯೋಗ್ಯಪದ್ಧತಿಗಳೆಂದರೆ ಧರ್ಮ ಮತ್ತು ಸಂಸ್ಕೃತಿಯ ಹಾನಿಯಾಗಿದೆ. ಈ ಅಯೋಗ್ಯಪದ್ಧತಿಗಳನ್ನು ನಿಲ್ಲಿಸುವುದೆಂದರೆ ಕಾಲಾನುಸಾರ ಆವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ. ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿಯು ಕೆಲವು ವರ್ಷಗಳಿಂದ ಈ ಅಯೋಗ್ಯ ಪದ್ಧತಿಗಳ ವಿರುದ್ಧ ಜನಜಾಗೃತಿ ಚಳುವಳಿಯನ್ನು ನಡೆಸುತ್ತಿದೆ. ಇದರಲ್ಲಿ ನೀವೂ ಸಹಭಾಗಿಯಾಗಿರಿ!
(ಆಧಾರ: ಸನಾತನ ನಿರ್ಮಿಸಿದ “ಶಕ್ತಿ” ಗ್ರಂಥ)